spot_img
Thursday, September 19, 2024
spot_imgspot_img
spot_img
spot_img

ಉತ್ತರಣಿ ಸರ್ವ ರೋಗ ನಿವಾರಣಿ: ಉತ್ತರಣಿಯ ಕುರಿತು ಒಂದಿಷ್ಟು!

-ಸಂತೋಷ್ ರಾವ್ ಪೆರ್ಮುಡ

ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿದೆ. ಈ ಪ್ರಕೃತಿಯಲ್ಲಿ ಇರುವ ಒಂದೊಂದು ಸಸ್ಯವೂ ಮನುಷ್ಯನಿಗೆ ಅಗತ್ಯವಿರುವ ಔಷಧೀಯ ಗುಣಗಳನ್ನು ಹೊಂದಿದೆ. ಅಂತಹ ಗಿಡಗಳ ಪೈಕಿ ಸಾಮಾನ್ಯವಾಗಿ ಹೊಲಗಳಲ್ಲಿ ಕಳೆಯಂತೆ ಬೆಳೆಯುವ ಈ ಗಿಡವನ್ನ ಜನರು ಸದಾ ಶಪಿಸುತ್ತಲೇ ಇರುತ್ತಾರೆ. ಆದರೆ ಈ ಗಿಡದಲ್ಲಿರುವ ಔಷಧೀಯ ಗುಣಗಳಿಗೆ ಮಾತ್ರ ಸಾಟಿಯೇ ಇಲ್ಲ. ಈ ಗಿಡವನ್ನ ನಾವೆಲ್ಲರೂ ನೋಡಿರುತ್ತೇವೆ. ಇದು ಕಳೆ ಗಿಡದಂತೆ ಹೊಲಗದ್ದೆಗಳ ಬದಿಗಳಲ್ಲಿ ಬೆಳೆದು ನಿಂತಿರುತ್ತದೆ.

ಈ ಗಿಡಕ್ಕೆ ಬಂಜರು ಭೂಮಿ, ಬೆಟ್ಟ, ಕಣಿವೆ ಎನ್ನುವ ಭೇದವೇ ಇಲ್ಲ. ಇದು ಎಲ್ಲೆಂದರಲ್ಲಿ ಬೆಳೆಯುವ ಸಸ್ಯ. ಇದನ್ನ ಉತ್ತರಣೆ ಗಿಡ ಎನ್ನುತ್ತಾರೆ. ಇದರಲ್ಲಿ ಎರಡು ವಿಧಗಳಿದ್ದು, ಒಂದು ಕೆಂಪು ಬಣ್ಣದ ಕಾಂಡವನ್ನು ಹೊಂದಿದ್ದರೆ ಮತ್ತೊಂದು ಬಿಳಿ ಕಾಂಡವನ್ನು ಹೊಂದಿರುತ್ತದೆ. ಈ ಗಿಡದಲ್ಲಿ ಕಾಣಸಿಗುವ ಅಕ್ಕಿಯನ್ನು ಉತ್ತರಣೆ ಅಕ್ಕಿ ಎನ್ನುತ್ತಾರೆ.

ಉತ್ತರಣೆ ಇದರ ಶಾಸ್ತ್ರೀ ಹೆಸರು ‘ಅಕಿರಾಂಟಿಸ್ ಆಸ್ಪೆಲ್’. ಇದು ‘ಅಮರಾಂತಸಿಯಸ್’ ಸಸ್ಯ ವರ್ಗಕ್ಕೆ ಸೇರಿದ ಗಿಡವಾಗಿದೆ. ಸಂಸ್ಕೃತದಲ್ಲಿ ಇದನ್ನು ‘ಅಪಮಾರ್ಗ’ ‘ಖರಮಂಜರಿ’ ಎಂದು ಕರೆಯುತ್ತಾರೆ. ಇದನ್ನು ‘ಚಾಫ್ ಹೂವು’, ‘ಮುಳ್ಳುಗಟ್ಟಿ ಹೂ’ ‘ಉತ್ತರಾಣಿ’, ‘ಉತ್ತರೇಣಿ’, ‘ಉತ್ರಾಣಿ’, ‘ಬಿಳಿ ಉತ್ತರಾಣಿ’, ‘ಕೆಂಪು ಉತ್ತರಾಣಿ’, ‘ಕಡ್ಡಿಗಿಡ’, ‘ಲತ್ ಜೀರಾ’, ‘ಅಘತ’, ‘ಅಪಮಾರ್ಗಮು’ ಎಂದೂ ಕರೆಯುತ್ತಾರೆ.

ಇದನ್ನು ತಮಿಳಿನಲ್ಲಿ, ‘ನಾಯುವ್ರಿ’, ಮಲಯಾಳಂನಲ್ಲಿ ‘ಸಿರುಕಡಲಡಿ’, ತೆಲುಗಿನಲ್ಲಿ, ‘ಕಡಲರಿ ಕಾಟಲೇಟಿ’, ಹಿಂದಿಯಲ್ಲಿ, ‘ಅಂತಿಶ, ಚಿರ್ಚಿತಾ’, ‘ಅಪಂಗ’, ಹೀಗೆ ಹಲವು ಭಾಷೆಗಳಲ್ಲಿ ವಿವಿಧ ಹೆಸರುಗಳಿಂದ ಜನಪ್ರಿಯವಾಗಿದೆ. ಉತ್ತರಾಣಿ ಗಿಡವು ಸಪ್ತ ಧಾತುಗಳನ್ನು ತನ್ನಲ್ಲಿ ಇರುವ ದಿವ್ಯ ಶಕ್ತಿಯಿಂದ ಶುದ್ಧ ಮಾಡುವುದರಿಂದ ಉತ್ತರಾಣಿಗೆ ‘ಅಪಮಾರ್ಗ’ ಎಂದು ಋಷಿಮುನಿಗಳು ಕರೆದಿದ್ದಾರೆ.

ಈ ಗಿಡವು ಮಳೆಗಾಲ ಪ್ರಾರಂಭ ಆಗುತ್ತಿದ್ದಂತೆ ಹುಟ್ಟುತ್ತದೆ. ಇದರ ಎಲೆಗಳು ದುಂಡಗಿದ್ದು, ತೆನೆಯಲ್ಲಿ ಹೂವು ಮತ್ತು ಕಾಯಿಯಿರುತ್ತದೆ. ತೆನೆಯಲ್ಲಿನ ಕಾಳನ್ನು ಉತ್ತರಾಣಿ ಅಕ್ಕಿ ಎಂದು ಕರೆಯುತ್ತಾರೆ. ಇದು ಗಿಡಮೂಲಿಕೆ ಆಗಿದ್ದು, ವಾರ್ಷಿಕ ಬೆಳೆಯಾಗಿದೆ. ಇದರ ಹೂವಿನಲ್ಲಿ ಇರುವ ಬೀಜಗಳು ನಮ್ಮ ಬಟ್ಟೆಗಳಿಗೆ ತಾಗಿದರೆ ಅಂಟಿಕೊಳ್ಳುತ್ತದೆ. ಅದನ್ನು ಕಂಡು ನಾವು ಇದು ಯಾವುದೋ ಮುಳ್ಳಿನ ಗಿಡವೆಂದು ತಿಳಿದುಕೊಳ್ಳುತ್ತೇವೆ. ಇದು ಬಹುತೇಕ ಎಲ್ಲೆಡೆ ಬಯಲಿನಲ್ಲಿ ಹುಲುಸಾಗಿ ೧-೩ ಅಡಿಯವರೆಗೂ ಬೆಳೆಯುತ್ತದೆ. ಈ ಗಿಡದ ಕಾಂಡ, ಬೇರು, ಎಲೆ ಹಾಗೂ ಬೀಜಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಇದನ್ನು ಗರ್ಭಿಣಿಯರಿಗೆ ನೀಡುವ ಹಾಗಿಲ್ಲ. ಒಂದು ವೇಳೆ ಈ ಗಿಡದ ಸೊಪ್ಪನ್ನು ಗರ್ಭಿಣಿಯರು ಅತಿಯಾಗಿ ಸೇವಿಸಿದರೆ ಗರ್ಭಪಾತ ಆಗುವ ಸಾಧ್ಯತೆ ಇದೆ. ಹಾಗಾಗಿ ಮನೆಯಲ್ಲಿನ ಹಿರಿಯರು ಉತ್ತರಣೆ ಗಿಡದ ಎಲೆಗಳನ್ನು ಬಳಸಿ ತಯಾರಿಸಿದ ಯಾವುದೇ ಔಷಧ ಅಥವಾ ಅಡುಗೆಯನ್ನು ಗರ್ಭಿಣಿಯರಿಗೆ ನೀಡುವುದಿಲ್ಲ.

ಉಪಯೋಗಗಳು:
 ಉತ್ತರಾಣಿ ಎಲೆಯ ಕಷಾಯ, ಇಲ್ಲವೇ ರಸದ ಸೇವನೆಯಿಂದ ಮೂತ್ರ ವಿಸರ್ಜನೆಯ ಸಮಸ್ಯೆ ಬರುವುದಿಲ್ಲ. ಭೇದಿಯಿದ್ದರೆ ಈ ಎಲೆಯ ರಸವನ್ನು ಮೊಸರಿಗೆ ಬೆರೆಸಿಕೊಂಡು ಸೇವಿಸಿದರೆ ತಕ್ಷಣ ಭೇದಿ ನಿಲ್ಲುತ್ತದೆ.
 ಉತ್ತರಾಣಿ ರಸವು ಮೂಲವ್ಯಾಧಿ, ಹೊಟ್ಟೆ ನೋವು, ಸುಟ್ಟ ಗಾಯಗಳಿಗೆ ಹಾಗೂ ಚರ್ಮವ್ಯಾಧಿಗಳಿಗೆ ದಿವ್ಯ ಔಷಧ.
 ಉತ್ತರಾಣಿ ಬೇರನ್ನು ಕುಟ್ಟಿ ರಸತೆಗೆದು, ನೀರಿನಲ್ಲಿ ಕುದಿಸಿ ಕುಡಿದರೆ, ನಿದ್ರಾಹೀನತೆ ದೂರವಾಗುತ್ತದೆ.
 ಒಣಗಿದ ಉತ್ತರಾಣಿ ಕಡ್ಡಿಯ ಕಾಂಡವನ್ನು ಸುಟ್ಟು ಭಸ್ಮಮಾಡಿ, ಕಾಳುಮೆಣಸಿನ ಪುಡಿ ಮತ್ತು ಜೇನುತುಪ್ಪಕ್ಕೆ ೩-೪ ಚಿಟಿಕೆ ಈ ಭಸ್ಮವನ್ನು ಹಾಕಿಕೊಂಡು ಸೇವಿಸಿದರೆ ನೆಗಡಿ ಕೆಮ್ಮು, ರಕ್ತಹೀನತೆ, ಅಸ್ತಮಾ, ಹೃದಯ ಸಂಬAಧಿತ ಕಾಯಿಲೆಗಳು ದೂರವಾಗುತ್ತವೆ.
 ಚೇಳು, ಜೇನುಹುಳ ಮತ್ತಿತರ ಕೀಟಗಳು ಕಡಿದಾಗ ಉತ್ತರಾಣಿ ಎಲೆಯನ್ನು ಚೆನ್ನಾಗಿ ಅರೆದು ಲೇಪವನ್ನು ಗಾಯದ ಮೆಲೆ ಹಚ್ಚಿದರೆ ಉಪಶಮನ ಆವಾಗುತ್ತದೆ.

 ಬೆಲ್ಲಕ್ಕೆ ಒಂದು ಚಮಚೆ ಉತ್ತರಾಣಿ ರಸವನ್ನು ಸೇರಿಸಿ ಬೆಳಿಗ್ಯೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ.
 ಉತ್ತರಾಣಿಯ ಭಸ್ಮ, ಕ್ಷಾರೀಯ ಗುಣವನ್ನು ಹೊಂದಿರುವುದರಿAದ ಬಟ್ಟೆ ತೊಳೆಯಲು ಮಾರ್ಜಕ ಆಗಿಯೂ ಬಳಸಬಹುದು.
 ಉತ್ತರಾಣಿಯ ಭಸ್ಮ, ಉಪ್ಪು ಹಾಗೂ ಸಾಸಿವೆ ಎಣ್ಣೆಯ ಲೇಹ್ಯದಿಂದ ಹಲ್ಲು ಉಜ್ಜಿದರೆ, ಹಲ್ಲುನೋವು ನಿವಾರಣೆ ಆಗುತ್ತದೆ.
 ಆಯುರ್ವೇದದಲ್ಲಿ ಉತ್ತರಾಣಿಯ ಒಣಗಿದ ಕಡ್ಡಿಯಿಂದ ಹಲ್ಲುಜ್ಜುವುದು ಉತ್ತಮವೆಂದು ಹೇಳಲಾಗಿದೆ.

 ಉತ್ತರ ಕರ್ನಾಟಕದಲ್ಲಿ, ದೀಪಾವಳಿ ಹಬ್ಬದ ಸಮಯದಲ್ಲಿ ಸಗಣಿ, ಸುಣ್ಣ, ಕೆಮ್ಮಣ್ಣಿನಲ್ಲಿ ಪಾಂಡವ ಕೌರವರನ್ನು ಮಾಡಿ, ಅದಕ್ಕೆ ಉತ್ತರಾಣಿ ಕಡ್ಡಿಗಳನ್ನು ಸಿಕ್ಕಿಸಿ ಮನೆಯ ಮುಂದೆ ಬಾಗಿಲಿನಲ್ಲಿ ಇಡುತ್ತಾರೆ.
 ಉತ್ತರಾಣಿಯು ಸರ್ವರೋಗ ನಿವಾರಿಣಿ ಅಷ್ಟೇ ಅಲ್ಲದೇ ಔಷಧಿಗಳ ಖಣಜ ಈ ಗಿಡವು ಮನುಷ್ಯನ ದೇಹಕ್ಕೆ ವಜ್ರದಂತ ಶಕ್ತಿ ನೀಡುತ್ತದೆ.
 ಉತ್ತರಾಣಿ ಎಲೆಯನ್ನು ವಿನಾಯಕನಿಗೆ ಚತುರ್ಥಿಯ ದಿನದಂದು ಅರ್ಪಿಸಲಾಗುತ್ತದೆ.

 ಹಿಂದೂ ಪೂಜಾ ಕ್ರಮದಲ್ಲಿ ಉತ್ತರಾಣಿ ಎಲೆಗೆ ಆರನೇ ಸ್ಥಾನವಿದೆ.
 ಉತ್ತರಾಣಿ ರಸವು ಕಫ, ದೇಹ ಉಬ್ಬುವುದು, ನೋವು, ತುರಿಕೆ ಮತ್ತು ಕುಷ್ಠರೋಗವನ್ನು ತಡೆಯುತ್ತದೆ. ಉತ್ತರಾಣಿಯನ್ನು ವಯಸ್ಸಾದವರ ಆರೋಗ್ಯದ ಹಿತದೃಷ್ಟಿಯಿಂದ ಬಳಸಲಾಗುತ್ತದೆ.

 ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡರೆ ಪುಡಿ ಮಾಡಿದ ಉತ್ತರಾಣಿ ಬೀಜಗಳು ಉತ್ತಮ ಔಷಧ. ಹುಚ್ಚು ನಾಯಿ ಕಚ್ಚಿದಾಗ ಉಂಟಾಗುವ ಹೈಡ್ರೋಫೋಬಿಸಿಟಿ ಸಮಸ್ಯೆಯನ್ನು ಉತ್ತರಾಣಿ ಕಡಿಮೆ ಮಾಡುತ್ತದೆ.
 ಚೇಳು ಮತ್ತು ಹಾವು ಮುಂತಾದ ವಿಷಜಂತುಗಳು ಕಚ್ಚಿದಾಗ ಉತ್ತರಾಣಿ ಎಲೆಗಳನ್ನು ಕಚ್ಚಿದ ಸ್ಥಳಕ್ಕೆ ಹಚ್ಚಿದರೆ ನೋವು ಮತ್ತು ಉರಿಯೂತ ವಾಸಿಯಾಗಿ ವಿಷದ ಅಂಶ ಇಳಿಯುತ್ತದೆ.

 ಅಸ್ತಮಾದಿಂದ ಬಳಲುತ್ತಿರುವವರು ಉತ್ತರಾಣಿ ಬೇರಿನ ಪುಡಿಯನ್ನು ಜೇನುತುಪ್ಪದ ಜೊತೆಗೆ ಬೆರೆಸಿ ಕುಡಿದರೆ ಕಾಯಿಲೆ ವಾಸಿಯಾಗುತ್ತದೆ. ಸತತ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದರೆ ಉತ್ತರಾಣಿ ಎಲೆಯನ್ನು ಕಷಾಯ ಮಾಡಿ ಸೇವಿಸಿದರೆ ಶಮನವಾಗುತ್ತದೆ.
 ಇದು ದೇಹದಲ್ಲಿ ಹುಣ್ಣಿನ ಸಮಸ್ಯೆಯನ್ನು ಕಡಿಮೆ ಮಾಡತ್ತದೆ.
 ಪೆಟ್ಟು ಬಿದ್ದು ಗಾಯವಾಗಿ ಅತಿಯಾದ ರಕ್ತಸ್ರಾವ ಆಗುತ್ತಿದ್ದರೆ ಕೆಂಪು ಉತ್ತರಾಣಿ ಗಿಡದ ರಸವನ್ನು ಗಾಯದ ಮೇಲೆ ಹಿಂಡಿದರೆ ಗಾಯವು ಕಡಿಮೆಯಾಗಿ ರಕ್ತಸ್ರಾವ ನಿಲ್ಲುತ್ತದೆ.

 ಕೆಂಪು ಉತ್ತರಾಯಿಣಿ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದರ ರಸವನ್ನು ಕುಡಿದರೆ ದೇಹದಿಂದ ರಕ್ತಸ್ರಾವ ಆಗುವುದು ತಡೆಯುತ್ತದೆ.
 ಉತ್ತರಾಣಿ ಗಿಡದ ಎಲೆಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಚರ್ಮ ರೋಗವಿದ್ದರೆ ಕಡಿಮೆಯಾಗುತ್ತವೆ.
 ಈ ಗಿಡದ ಎಲೆಗಳನ್ನು ಬೆಲ್ಲದ ಜೊತೆಗೆ ತಿನ್ನುವುದರಿಂದ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ.
 ಸ್ವಚ್ಛವಾದ ಉತ್ತರಾಣಿಯ ಒಂದು ಎಲೆಯನ್ನು ನಿಧಾನವಾಗಿ ಜಗಿಯುವುದರಿಂದ ಬಾಯಿ ಹುಣ್ಣುಗಳು ನಿವಾರಣೆ ಆಗುತ್ತವೆ.
 ಉತ್ತರಾಣಿಯ ಎಲೆಯನ್ನು ಚೆನ್ನಾಗಿ ರುಬ್ಬಿ ರಸವನ್ನು ತೆಗೆದು, ಅದಕ್ಕೆ ತೆಂಗಿನೆಣ್ಣೆ ಸೇರಿಸಿ ಸಮಸ್ಯೆ ಇರುವಲ್ಲಿ ಹಚ್ಚಿದರೆ ಪರಿಹಾರ ದೊರೆಯುತ್ತದೆ.

 ಉತ್ತರಾಣಿಯು ತಲೆನೋವು ಸಮಸ್ಯೆಯನ್ನು ನಿವಾರಿಸುವ ಆಯುರ್ವೇದ ಔಷಧವಾಗಿದೆ.
 ಇದರ ಬೇರನ್ನು ಚೆನ್ನಾಗಿ ನೆರಳಿನಲ್ಲಿ ಒಣಗಿಸಿ ಪೌಡರ್ ಮಾಡಿಟ್ಟುಕೊಂಡು, ತಲೆನೋವಿದ್ದಾಗ ಅದರ ವಾಸನೆಯನ್ನು ಸೇವಿಸಿದರೆ ತಕ್ಷಣ ವಾಸಿಯಾಗುತ್ತದೆ.
 ಪಾರ್ಶ್ವವಾಯು ಸಮಸ್ಯೆ ಇರುವವರು ಉತ್ತರಾಣಿಗಿಡದ ಕಾಂಡವನ್ನು ಸುಟ್ಟು ಭಸ್ಮವನ್ನು ಮಾಡಿ ಅದನ್ನು ದೇಸಿ ಹಸುವಿನ ಹಾಲಿನಲ್ಲಿ ಸೇವಿಸಿದರೆ ಪರಿಹಾರ ದೊರೆಯುತ್ತದೆ.
 ಉತ್ತರಾಣಿ ಗಿಡದ ಎಲೆಯನ್ನ ಕಾಲಿನಲ್ಲಿ ಆಣಿ ಆಗಿದ್ದರೆ ಅಲ್ಲಿಗೆ ಕಟ್ಟಿದರೆ ಆಣಿ ವಾಸಿಯಾಗುತ್ತದೆ.
 ಉತ್ತರಾಣಿಯ ಬೀಜಗಳನ್ನು ಕುಟ್ಟಿ ಪುಡಿ ಮಾಡಿ ನಶ್ಯದಂತೆ ಬಳಸಬಹುದು.
 ಕೆಂಪು ಉತ್ತರಾಣಿ ಗಿಡದ ತಾಜಾ ಎಲೆಗಳನ್ನು ಜಜ್ಜಿ ಇದರ ೨-೩ ಹನಿ ರಸವನ್ನು ಮೂಗಿಗೆ ಬಿಡುವುದರಿಂದ ತಲೆನೋವು ಮತ್ತು ತಲೆಯಲ್ಲಿ ಮರಮರ ಶಬ್ಧ, ನಿವಾರಣೆಯಾಗುತ್ತದೆ.
 ಇದೇ ರಸವನ್ನು ತಲೆಗೆ ಲೇಪಿಸುವುದರಿಂದ ತಲೆಯಲ್ಲಿನ ಹುಣ್ಣು, ಗಾಯ, ನವೆ, ಸಿಬ್ಬು ವಾಸಿಯಾಗುತ್ತದೆ.

 ಉತ್ತರಾಣಿ ಬೇರನ್ನು ಸ್ವಚ್ಛಗೊಳಿಸಿ, ನೀರಲ್ಲಿ ತೇಯ್ದು ಸ್ತನಗಳಿಗೆ ಲೇಪನ ಮಾಡಿಕೊಂಡರೆ, ಹಾಲುಣಿಸುವ ತಾಯಂದರಲ್ಲಿ, ಹಾಲು ಉತ್ಪತ್ತಿಯಾಗುತ್ತದೆ. ಹಾಗೂ ಈ ಹಾಲಿನಲ್ಲಿ ವಿಷನಾಶಕ ಪ್ರಭಾವ ಇರುವುದರಿಂದ ಮಕ್ಕಳ ಆರೋಗ್ಯ ರಕ್ಷಣೆಯಲ್ಲೂ ನೆರವಾಗುತ್ತದೆ.
 ಇದರ ಬೇರಿಂದ ಕಷಾಯದಿಂದ ಬಾಯಿ ಮುಕ್ಕಳಿಸಿದರೆ, ದಂತ, ವಸಡುಗಳ ನೋವು, ಬಾಯಿ ದುರ್ವಾಸನೆ, ರಕ್ತಸ್ರಾವ ವಾಸಿಯಾಗುತ್ತದೆ.
 ಉತ್ತರಾಣಿ ಎಲೆಗಳನ್ನು ನುಣ್ಣಗೆ ಅರೆದು, ಅದಕ್ಕೆ ಚಿಟಿಕೆ ಅರಸಿಣ, ೧ ಚಮಚ ಶುದ್ಧ ಶ್ರೀಗಂಧದ ಚೂರ್ಣ, ೨ ಚಮಚ ಗಟ್ಟಿ ಮೊಸರು ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿ, ಅರ್ಧ ಗಂಟೆ ಬಿಟ್ಟು ಕಡಲೆಹಿಟ್ಟಿನಿಂದ ಮುಖ ತೊಳೆದರೆ ಮುಖದಲ್ಲಿನ ಮೊಡವೆ, ಗುಳ್ಳೆಗಳು, ಕಪ್ಪು ಮಚ್ಚೆಗಳು ಮಾಯವಾಗಿ, ಮುಖದ ಚರ್ಮ ಮೃದುವಾಗಿ ಕಾಂತಿಯುತವಾಗಿ ಹೊಳೆಯುತ್ತದೆ.

(ಉತ್ತರಾಣಿ ಗಿಡವನ್ನು ಉಪಯೋಗಿಸುವ ಮುನ್ನ ಆಯುರ್ವೇದ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ)

ಯಾವುದೇ ಬಾಹ್ಯ ಆರೈಕೆಯ ಅಗತ್ಯವಿಲ್ಲದೇ ಎಲ್ಲೆಡೆ ಬೆಳೆಯುವ ಗಿಡವಾಗಿರುವ ಉತ್ತರಾಣಿಯ ಪ್ರಸ್ತಾಪ ಯಜುರ್ವೇದದಲ್ಲಿ ಬರುತ್ತದೆ. ಭಾರತದಲ್ಲಿ ಈ ಉತ್ತರಾಣಿಯು ಕಳೆಯಂತೆ ಬೆಳೆಯುವ ಸಸ್ಯವಾಗಿದ್ದು, ನೀರಿನ ಅಂಶ ಹೆಚ್ಚಿದ್ದಲ್ಲಿ ಉತ್ತರಾಣಿಯದ್ದೇ ಸಾಮ್ರಾಜ್ಯ. ಶರೀರದಲ್ಲಿ ದೂಷಿತವಾಗಿರುವ ರಸಾದಿ ಧಾತುಗಳನ್ನು ಇದು ಶುದ್ಧೀಕರಿಸಬಲ್ಲದು. ಹೀಗಾಗಿಯೇ ಇದಕ್ಕೆ ಅಪಾಮಾರ್ಗ ಎಂಬ ಹೆಸರೂ ಇದೆ. ಉತ್ತರಾಣಿಯಲ್ಲಿ ವಿಷನಾಶಕ ಗುಣವಿರುವುದರಿಂದ ಎಲೆಗಳ ರಸವನ್ನು ಕೈಗಳಿಗೆ ಹಚ್ಚಿಕೊಂಡು ಚೇಳನ್ನು ಹಿಡಿಯಬಹುದು ಎಂದೂ ಹೇಳುತ್ತಾರೆ. ಇಷ್ಟು ವಿಶೇಷ ಔಷಧೀಯ ಗುಣಗಳಿರುವ ಉತ್ತರಾಣಿಯನ್ನು ಪ್ರತಿಯೊಂದು ಮನೆಯ ಹೂವೊನ ಕುಂಡದಲ್ಲೂ ಬೆಳೆಯುವ ಅನಿವಾರ್ಯತೆ ಇದ್ದು, ಮೂಲಿಕೆಗಳನ್ನು ಉಳಿಸಿ ಬೆಳೆಸುವ ಮನೋಭಾವವನ್ನು ನಾವೆಲ್ಲರೂ ತೋರಬೇಕಿದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group