-ಚಿತ್ರ- ಬರಹ: ಗಣಪತಿ ಹಾಸ್ಪುರ
ಸಾಮಾನ್ಯವಾಗಿ ಇಂದು “ತೋಟ”ವೆಂದರೆ ” ಅಡಿಕೆ ಕೃಷಿ “ಮಾತ್ರ ಅಂತ ಜನ ಭಾವಿಸಿದ್ದಾರೆ. ಆದ್ರೆ, ಈ ದುಬಾರಿಯ ಕಾಲದಲ್ಲಿ ಕೇವಲ ಅಡಿಕೆಯೊಂದನ್ನೆ ಬೆಳೆದರೇ ಜೀವನದ ನೌಕೆ ಸಾಕಿಸುವುದು ಕಷ್ಟ ಎಂಬುದನ್ನು ಅರಿತೇ, ಮಲೆನಾಡಿನ ಬಹುತೇಕ ತೋಟಪಟ್ಟಿ ಹೊಂದಿನ ಕೃಷಿಕರು ನಮ್ಮ ಭೂಮಿಯಲ್ಲಿ ಆಗಬಹುದಾದ ಉಪಬೆಳೆಗಳನ್ನು ಬಹಳ ಹಿಂದಿನಿಂದಲೂ ಮಾಡಲು ಆರಂಭಿಸಿದ್ದಾರೆ.ಪ್ರಮುಖ ಬೆಳೆಯಾದ ಅಡಿಕೆಯೊಂದಿಗೆ ಕಾಳುಮೆಣಸು, ಕಾಫಿ, ಜಾಯಿಕಾಯಿ, ಲವಂಗ,ವೆನಿಲ್ಲಾ, ಬಾಳೆ, ಏಲಕ್ಕಿ…ಹೀಗೆ ಬಗೆಬಗೆಯ ಬೆಳೆಗಳನ್ನು ತಮ್ಮಮ್ಮ ಸಾಮರ್ಥ್ಯದಷ್ಟು ಸಂಖ್ಯೆಯಲ್ಲಿ ಬೆಳಿತಾ ಇರುವುದನ್ನು ತಾವೆಲ್ಲ ನೋಡಿದ್ದಿರಿ. ಆದರೇ ಅಡಿಕೆ ತೋಟದಲ್ಲಿಯೂ ಬಗೆಬಗೆಯ ಹಣ್ಣು ಹಂಪಲಿನ ಗಿಡಗಳನ್ನು ಬೆಳೆದು, ಅದರಿಂದಲೂ ಆದಾಯ ಗಳಿಸಬಹುದು ಎಂಬುದನ್ನು ನಿರೀಕ್ಷೆ ಮಾಡಿರಿಲಿಕ್ಕಿಲ್ಲ. ಅಂಥಹ ಹೊಸ ಬಗೆಯ ಪ್ರಯತ್ನವನ್ನು ಮಾಡಿ ಯಶಸ್ವಿಯಾಗಿದ್ದಾರೆ ಭಾಗಿನಕಟ್ಟಾದ ಸುಬ್ಬಣ್ಣ.
ಉ.ಕ.ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಸಮೀಪ ಭಾಗಿನಕಟ್ಟಾ ಎಂಬ ಊರಿದ್ದು, ಅಲ್ಲಿನ ಪ್ರತಿಯೊಂದು ಕೃಷಿಕರ ಜೀವನ ಸಾಹಸವೇ.ಏಕೆಂದರೇ ಹೋಗುವ ಮಾರ್ಗ ನ್ಯಾಷನಲ್ ಹೈವೆ ಅಲ್ಲ, ಅಲ್ಲಿನ ಸಾಗುವಳಿ ಭೂಮಿ ಸಮತಟ್ಟು ಹೊಂದಿದ ಪ್ರದೇಶವಲ್ಲ, ಐಶಾರಾಮಿ ಮನೆ ಕಟ್ಟಲು ಸಹಾ ಜಾಗದ ಸಮಸ್ಯೆ!ಸ್ವಂತ ವಾಹನ ಇದ್ದರೂ ಅದ್ನ ಬೇರೆಯವರ ಮನೆ ಅಂಗಳದಲ್ಲಿ ಇಡುವ ಪರಿಸ್ಥಿತಿ ಅಲ್ಲಿನ ಹಲವು ಜನರದ್ದು.ಮಾತ್ರವಲ್ಲ ಅಲ್ಲಿನ ಕೃಷಿಕರು ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆ ಗೆ ಒಯ್ಯುವಾಗ ಎಲ್ಲರ ಮನೆವರೆಗೂ ವಾಹನ ಬರುವುದೇ ಕಷ್ಟ.ಬಹುತೇಕ ಕೃಷಿಕರು ತಲೆ ಮೇಲೆಯೇ ಹೊತ್ತು ಕೃಷಿ ಉತ್ಪನ್ನವನ್ನು ಸಾಗಿಸಬೇಕು. ಆರೋಗ್ಯ ಹದಗೆಟ್ಟರು ತೋಟ, ಹಳ್ಳ ದಾಟಿಕೊಂಡೆ ಮುಖ್ಯ ರಸ್ತೆಗೆ ಬರಬೇಕಾದ ಅನಿವಾರ್ಯತೆ ಆ ಊರಿನ ಹಲವು ಕೃಷಿಕರಿಗಿದೆ. ಇಂಥಹ ಅವ್ಯವಸ್ಥೆ,ಸಂಕಟ ನೋವನ್ನು ಅನುಭವಿಸುತ್ತಾ ಕೃಷಿ ಕಸುಬಿನಲ್ಲಿಯೇ ಖುಷಿಯಿಂದ ಜೀವನದ ಬಂಡಿ ಓಡಿಸುತ್ತಾ ಇರುವ ಕೃಷಿಕರಲ್ಲಿ ಸುಬ್ರಮಣ್ಯ ಶಿವರಾಮ ಗಾಂವ್ಕರ ಸಹಾ ಒಬ್ಬರು.”ಬಾಗಿನಕಟ್ಟಾ ಸುಬ್ಬಣ್ಣ” ಹೇಳಿಯೇ ಚಿರಪರಿಚಿತರಾದ ಇವರು ಒಂದು ಅವಧಿಗೆ ಗ್ರಾಮ ಪಂಚಾಯ್ತ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ವಜ್ರಳ್ಳಿಯ ರೈತ ಉತ್ಪಾದಕ ಕಂಪನಿಯ ಮುಖ್ಯಸ್ಥರಲ್ಲಿ ಒಬ್ಬರಾಗಿದ್ದಾರೆ.
ಅಡಿಕೆ ತೋಟದ ಸೊಬಗು!
ಬಾಗಿನಕಟ್ಟಾದ ಸುಬ್ಬಣ್ಣನವರಿಗೆ ಈಗ ಎರಡು ಕಡೆ ತೋಟವಿದೆ. ಅವರದ್ದು ಅಡಿಕೆ ತೋಟದೊಳಗೆ ಅವ್ರ ಮನೆಯಿದ್ದು, ಅಲ್ಲಿಯೇ ಒಂದು ಏಕರೆ,ಹಾಗೂ ಸ್ವಲ್ಪ ದೂರದಲ್ಲಿ ಮೂರು ಎಕರೆ ಅಡಿಕೆ ತೋಟವಿದೆ.ಮೊದಲು ಇವರದ್ದು ಅವಿಭಕ್ತ ಕುಟುಂಭವೇ ಆಗಿತ್ತು. ಅಲ್ಲಿಂದ ಹಿಸೆ ಪಡೆದ ಸಮಯದಲ್ಲಿ ಒಂದು ಎಕರೆ ಭಾಗಾಯ್ತ, ಮೂರು ಎಕರೆ ಕಲ್ಲುಗಳೆ ತುಂಬಿದ ಭತ್ತ ಬೆಳೆಯುವ ಭೂಮಿ ಇವರಿಗೆ ಲಭಿಸಿತ್ತು. ಅನೇಕರು ಈ ಕಲ್ಲು ಭೂಮಿಯಲ್ಲಿ ಭತ್ತದ ಕೃಷಿ ಮಾಡುವುದು ಕಷ್ಟ, ಅದ್ರಲ್ಲಿ ಉತ್ಪನ್ನ ತೆಗೆಯುವುದು ಅಸಾಧ್ಯ ಎಂದು ಹೇಳಿದವರೇ ಹೆಚ್ಚು. ಅದನ್ನು ಛಾಲೆಂಜ್ ಆಗಿ ಸ್ವಿಕರಿಸಿದ ಸುಬ್ಬಣ್ಣ ಒಂದಿಷ್ಟು ವರುಷಗಳ ಕಾಲ ಕೊಚ್ಚಿ ಕೊಚ್ಚಿಯೇ ಭತ್ತದ ಬೇಸಾಯವನ್ನು ಆಸಕ್ತಿಯಿಂದ ಮಾಡಿದರು.ಭತ್ತದ ಕೃಷಿ ಮಾಡಲು ನುರಿತ ಕಾರ್ಮಿಕರ ಸಮಸ್ಯೆ,ಕಾಡು ಪ್ರಾಣಿಗಳ ಉಪಟಳದಿಂದ ತಪ್ಪಿಸಿಕೊಳ್ಳಲು ಧೀರ್ಘ ಬೆಳೆ ಮಾಡುವೇ ಉತ್ತಮ ಎಂದುಕೊಂಡು,ಹಂತ ಹಂತವಾಗಿ ಅಡಿಕೆ ತೋಟವಾಗಿ ಪರಿವರ್ತನೆ ಮಾಡಲು ಆರಂಭಿಸಿದರು.
ಆ ದಿನದಲ್ಲಿ ಯೋಗ್ಯ ಅಡಿಕೆ ಸಸಿಯೂ ಸಿಗ್ತಾ ಇರಲಿಲ್ಲ.ಯಾರಿಗೂ ಬೇಡವಾದದ್ದೋ, ಬಿದ್ದು ಹುಟ್ಟಿದ್ದೊ ಅಡಿಕೆ ಸಸಿಗಳನ್ನು ತಂದು ಕಲ್ಲುಗಳ ರಾಶಿಯಾದ ಭತ್ತ ಬೆಳೆಯುತ್ತಿದ್ದ ಭೂಮಿಯಲ್ಲಿ ತಮಗೆ ತಿಳಿದ ವಿಧಾನದಲ್ಲಿ ಬರಣವನ್ನು ಮಾಡಿ ಸಸಿಗಳನ್ನು ನೆಟ್ಟರು. ಸುಧಾರಿತ ಪದ್ದತಿಯಲ್ಲಿ ಸಸಿ ನೆಡಲು ಆಗಲಿಲ್ಲ, ಬಸಿಗಾಲುವೆಯನ್ನು ತೀರ ಆಳವನ್ನು ಮಾಡಲು ಸಾಧ್ಯವಾಗದೇ, ಬಿದ್ದ ನೀರು ಹರಿದು ಹೋಗುವಷ್ಟು ಆಳದಲ್ಲಿ ಕಾಲುವೆ ಮಾಡಿ ಅಡಿಕೆ ಸಸಿಗಳನ್ನು ಬೆಳೆಸಿದರು.ಇಲ್ಲಿನ ನಾಲ್ಕು ಎಕರೆ ಪ್ರದೇಶದಲ್ಲಿ ಒಂದು ಭಾಗದಲ್ಲಿ ಮುಗಿಲೇತ್ತರದ ಗುಡ್ಡ, ಇನ್ನೊಂದು ಭಾಗದಲ್ಲಿ ಹೆದ್ದಾರಿಯಂತೆ ಇರುವ ದೊಡ್ಡ ನದಿ ಹರಿದಿದೆ.ಇವುಗಳ ಮಧ್ಯದಲ್ಲಿ ಸುಬ್ಬಣ್ಣನ ಅಡಿಕೆ ತೋಟವಿದೆ.ಹೊಸದಾಗಿ ಮಣ್ಣು ಕೊಡುವುದು ಕಷ್ಟ.ಪಕ್ಕದಲ್ಲಿರುವ ಗುಡ್ಡದ ಮಣ್ಣು ತೆಗೆದರೂ ಮಣ್ಣಿನಗಿಂತ ಕಲ್ಲುಗಳೆ ಹೆಚ್ಚು ಸಿಗುತ್ತದೆ.
ಹಿಂದೊಮ್ಮೆ ವಿಪರೀತ ಮಳೆ ಬಂದಾಗ ನದಿಯು ಉಕ್ಕಿ ಹರಿದಿತ್ತು. ಆ ಸಮಯದಲ್ಲಿ ಇವರ ತೋಟಕ್ಕು ನೀರು ನುಗ್ಗಿತ್ತು.ಜೊತೆಗೆ, ದೊಡ್ಡ ದೊಡ್ಡ ಕಲ್ಲುಗಳು ತೋಟದೊಳಗೆ ಬಂದಿದ್ದವು.ಬಹಳಷ್ಟು ಅಡಿಕೆ ಮರಗಳೇ ನಾಶವಾಗಿದ್ದು.ಇನ್ನುಷ್ಟು ಗಿಡಗಳು ಅಲ್ಲಿಯೇ ವಾಲಿಕೊಂಡಿದ್ದವು.ಅಷ್ಟೇಲ್ಲ ದುರಂತವಾದರೂ ಸುಬ್ಬಣ್ಣ ಉತ್ಸಾಹವನ್ನು ಕಳೆದುಕೊಳ್ಳಲಿಲ್ಲ. ಮರಳಿ ಪ್ರಯತ್ನವ ಮಾಡು….ಎಂಬಂತೆ ಪುನಃ ತೋಟವನ್ನು ದುರಸ್ತಿ ಮಾಡಲು ಅಣಿಯಾದರು. ನದಿ ಅಂಚಿನ ಭಾಗದಲ್ಲಿ ಹಳ್ಳದ ಕಲ್ಲುಗಳನ್ನು ಹಾಕಿ ತೋಟ ಕೊಚ್ಚಿಕೊಂಡು ಹೋಗದಂತೆ ವ್ಯವಸ್ಥೆ ಮಾಡಿದರು. ವಾಲಿ ನಿಂತ ಅಡಿಕೆ ಮರಗಳನ್ನು ಯಂತ್ರದ ಮೂಲಕವೇ ನೇರ ನಿಲ್ಲುವಂತೆ ಮಾಡಿದರು.
ಈ ಕೃಷಿಕರು ಪ್ರತಿ ವರುಷವೂ ಅಡಿಕೆ ಮರಕ್ಕೆ ಒಂದು ಬುಟ್ಟಿಯಷ್ಟು ಗೊಬ್ಬರವನ್ನು ಕೊಡುತ್ತಾರೆ.ಕೋಳಿ- ಕುರಿ- ಹಾಗೂ ಮನೆಯ ದನದ ಗೊಬ್ಬರವನ್ನು ಮಿಕ್ಸ ಮಾಡಿ ಕೊಡುತ್ತಾರೆ.ಅವಶ್ಯಕತೆ ಇದ್ದರೇ ಎನ್.ಪಿ.ಕೆ ಯನ್ನು ಸಹಾ ಕೊಡುತ್ತೇನೆ. ಮನೆಯಲ್ಲಿ ಹತ್ತು ಜನರಿದ್ದರೇ ಉಟಕ್ಕೆ ಒಂದೇ ಬಾಳೆ ಹೇಗೆ ಸಾಕಾಗುವುದಿಲ್ಲವೋ…ಹಾಗೇ ನಮ್ಮ ಅಡಿಕೆ ತೋಟದಲ್ಲಿ ಬಹು ವಿಧವಿಧವಾದ ಕೃಷಿ ಬೆಳೆಗಳಿದ್ದರೇ ಅದ್ಕೆ ಬೇಕಾಗುವಷ್ಟು ಬೇರೆ ಬೇರೆ ಗೊಬ್ಬರಗಳನನ್ನು ಕೊಟ್ಟು ಕೃಷಿ ಬೆಳೆಗಳನ್ನು ಸಂರಕ್ಷಣೆ ಮಾಡಿದರೇ ನಮ್ಮ ನಿರೀಕ್ಷೆಯಷ್ಟು ಫಲ ಸಿಗುತ್ತದೆ ಎಂದು ಸುಬ್ಬಣ್ಣ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಅವರು ತೋಟಕ್ಕೆ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.ಅಂತರ್ ಬಸಿಗಾಲುವೆ ಅವಶ್ಯಕತೆ ಇಲ್ಲದೇ ಇರುವ ಕಾರಣ ಪ್ರತಿ ತೋಟದಲ್ಲಿ ಒಪನ್ ಕಾಲುವೆಯನ್ನು ಇರಿಸಿಕೊಂಡಿದ್ದಾರೆ. ಕಲ್ಲುಗಳೆ ತುಂಬಿದ ಜಾಗದಲ್ಲಿ ಸಾಹಸ, ಅತೀ ಪರಿಶ್ರಮದಿಂದ ಅಡಿಕೆ ತೋಟವನ್ನು ಮಾಡಿ ವ್ಯವಸ್ಥಿತವಾಗಿ ಆರೈಕೆ ಮಾಡಿದ ತೋಟವಿಂದು ಚನ್ನಾಗಿ ಬಲಿತು ನಿಂತುಕೊಂಡಿದೆ. ವಿಪರೀತ ಅಲ್ಲದಿದ್ದರೂ ನನ್ನ ಮನಸ್ಸಿಗೆ ಖುಷಿಯಾಗುವಷ್ಟು ಫಲ ಬರುತ್ತಿದೆ.ಇವರು ಹಾಕಿರುವ ಎಲ್ಲ ಅಡಿಕೆ ತೋಟವು ಇನ್ನು ಫಲ ಬಂದಿಲ್ಲ. ಇನ್ನಷ್ಟು ಜಾಗದಲ್ಲಿ ಫಸಲು ಬರುವುದು ಉಂಟು.ಸದ್ಯ ಇವರ ಜಾಗದಲ್ಲಿ ಏಕರೆಗೆ ಸರಾಸರಿ ಹನ್ನೇರಡು ಕ್ವಿಂಟಲ್ ಇಳುವರಿ ಸಿಕ್ತಾಯಿದೆ ಎಂದು ಸುಬ್ಬಣ್ಣ ಹೆಮ್ಮೆಯಿಂದ ಹೇಳುತ್ತಾರೆ.ನಾನು ರೈತಾಬಿ ಕೆಲಸ ಆರಂಭ ಮಾಡಿದಾಗ ನಲವತ್ತು ಕೆ.ಜಿ ಅಡಿಕೆ ಫಸಲು ಆಗ್ತಿತ್ತು…ಈಗ ನಲವತ್ತು ಕ್ವಿಂಟಲ್ ಮಾಡ್ತಾ ಇದ್ದೇನೆ. ಕೃಷಿಯಲ್ಲಿ ಆಸಕ್ತಿಯಿಂದ ದುಡಿದರೇ ಯೋಗ್ಯ ಫಲ ಪಡೆಯಲು ಸಾಧ್ಯವಿದೆ ಎನ್ನುತ್ತಾರೆ ಸುಬ್ಬಣ್ಣ.
ಉಪ ಬೆಳೆಗಳು ಉಂಟು
ಕೃಷಿ ಪ್ರವಾಸ, ಸಮಾಜಸೇವೆ, ಕೃಷಿ ಚಟುವಟಿಕೆಯಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಬಾಗಿನಕಟ್ಟಾದ ಸುಬ್ಬಣ್ಣ ಕೇವಲ ಏಕ ಪ್ರಕಾರದ ಬೆಳೆಯನ್ನು ಮಾತ್ರ ಕೃಷಿ ಮಾಡುತ್ತಿಲ್ಲ.ಅವರ ತೋಟದಲ್ಲಿ ಬಾಳೆ, ಕಾಳುಮೆಣಸು, ಏಲಕ್ಕಿ, ವೆನಿಲ್ಲಾ… ಹೀಗೆ ಹಲವಾರು ಬಗೆಯ ಉಪಬೆಳೆಗಳು ಇವೆ.ತಮ್ಮ ಸಾಮರ್ಥ್ಯದಲ್ಲಿ ನಿರ್ವಹಣೆ ಮಾಡುವಷ್ಟು ಉಪ ಬೆಳೆಗಳಿದ್ದರೇ ಅಡಿಕೆ ತೋಟ ನೋಡುವುದಕ್ಕು ಖುಷಿ; ವೈವಿಧ್ಯಮಯ ಗಿಡಗಳ ಹಸಿರಿನ ಸೊಬಗು ತೋಟಕ್ಕು ವಿಶೇಷವಾದ ಕಳೆ ಕೊಡುತ್ತದೆ. ಒಂದಿಷ್ಟು ಆದಾಯವೂ ಅದರಿಂದ ಸಿಗುವುದರಿಂದ ಕೃಷಿ ಭೂಮಿಯ ನಿರ್ವಹಣೆ ಮಾಡಲು ಸಹಕಾರಿ ಆಗುತ್ತದೆ ಎಂದು ಸುಬ್ಬಣ್ಣ ತಮ್ಮ ಅನುಭವ ಬುತ್ತಿಯನ್ನು ತೆರೆದಿಡುತ್ತಾರೆ. ತೋಟದ ಕಾಲುವೆಗೆ ಸಾರಿಯನ್ನು ಮುಚ್ಚಿದರೇ ಹಾಕಿದ ಗೊಬ್ಬರವು ಕೊಚ್ಚಿಕೊಂಡು ಹೊಗುವುದನ್ನು ತಡೆಯುತ್ತದೆ, ಹಾಗೂ ನಿರುಪಯುಕ್ತ ಕಳೆ ಕಂಟ್ರೋಲಿಗೂ ಇದು ಸಹಾಯಕ ಎನ್ನುತ್ತಾರೆ ಸುಬ್ಬಣ್ಣ.ಇವರ ತೋಟದಲ್ಲಿ 180 ಕ್ಕೆ ಹೆಚ್ಚು ಚಂದ್ರಗಿರಿ ತಳಿಯ ಕಾಫಿ, 60 ವೆನಿಲ್ಲಾ, 400 ಏಲಕ್ಕಿ( ಇದ್ರಲ್ಲಿ ಐದು ತಳಿ) ಸಸಿಗಳು ನಳನಳಿಸುತ್ತಾ ಫಲ ನೀಡುತ್ತಿವೆ.
ಕಪ್ಪುಬಂಗಾರವೂ ಉಂಟು!
ಬಾಗಿನಕಟ್ಟಾದ ಸುಬ್ಬಣ್ಣ ಪರಿಶ್ರಮಿಕ ಕೃಷಿಕ. ತನ್ನಲ್ಲಿ ಯಾವ ಕೆಲಸವನ್ನು ಮಾಡಲಾಗದು ಅಂತ ಕೈಕಟ್ಟಿ ಕುರುವವರಲ್ಲ.ಕೃಷಿ ಪ್ರವಾಸ ಮಾಡಿದಾಗೆಲ್ಲ ಬೇರೆಯವರ ತೋಟವನ್ನು ಗಮನಿಸಿದ್ದ ಇವರು, ಅಲ್ಲಿನ ಅಡಿಕೆ ತೋಟಕ್ಕೆ ಕಾಳುಮೆಣಸು ಬೆಳೆಯನ್ನು ಇರುವುದನ್ನು ಗಮನಿಸಿದ್ದರು.ತಮ್ಮ ತೋಟದಲ್ಲಿಯೂ ಕಪ್ಪುಬಂಗಾರ ಕೃಷಿ ಮಾಡಬೇಕು ಅಂತ ಒಂದಿಷ್ಟು ಮೆಣಸಿನ ಸಸಿ ತಂದು ಹೂಳಿ, ವ್ಯವಸ್ಥಿತವಾಗಿ ಆರೈಕೆ ಮಾಡಿದರು. ಕಳೆದ ಸೀಜನ್ನಿನಲ್ಲಿ ಈ ಕೃಷಿಯಿಂದ ನಾಲ್ಕು ಕ್ವಿಂಟಲ್ ಇಳುವರಿಯನ್ನು ಪಡೆದುಕೊಂಡಿದ್ದರು. ಆದರೇ, ಈ ವರುಷ ವಿಪರೀಪ ಮಳೆ ಸುರಿಯಿತು. ಔಷಧ ಉಪಚಾರ ಮಾಡಿದರೂ ಮೆಣಸಿನ ಬಳ್ಳಿಗಳನ್ನು ಉಳಿಸಿಕೊಳ್ಳಲು ಆಗ್ಲೆಯಿಲ್ಲ. ಹಾಗಂತ ಕಾಳುಮೆಣಸು ಬೆಳಿಯಬೇಕೆಂಬ ಉತ್ಸಾಹ ,ಉಮೇದಿ ಕಳೆದುಕೊಳ್ಳದೆ ಪುನಃ ಹಿಪ್ಲಿಗೆ ಕಸೆ ಕಟ್ಟಿದ ಸುಮಾರು ಐದನೂರು ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ.
ತೋಟದಲ್ಲಿ ಡ್ರಾಗನ್ ಪುಟ್
ಬಾಗಿನಕಟ್ಟಾದ ಸುಬ್ರಹ್ಮಣ್ಯ ಗಾಂವ್ಕರ್ ಸಾಮಾನ್ಯ ಕೃಷಿಕರೇನು ಅಲ್ಲ.ಅವರು,ನಮ್ಮ ತೋಟದಲ್ಲಿ ನಿತ್ಯವೂ ಬೇವರು ಹರಿಸುವ ಪರಿಶ್ರಮಿ ,ಸಾಹಸಿ ಕೃಷಿಕರು. ಯಾವ ಕೆಲಸವನ್ನು ಮಾಡುವುದಾದರೂ ವ್ಯವಸ್ಥಿತವಾಗಿಯೇ ಮಾಡುತ್ತಾರೆ. ಮಾಡುವ ಕೆಲಸದಲ್ಲಿಯೂ ತಮ್ಮದೇ ಆದ ವಿಧಾನ, ಸರಳವಾದ ಕ್ರಮವನ್ನು ಅನುಸರಿಸುತ್ತಾರೆ.ನಮ್ಮ ನೆಲದಲ್ಲಿ ವಿದೇಶಿಯ ಹಣ್ಣಿನ ಗಿಡ ಆಗುತ್ತೋ ಇಲ್ವೋ ಎಂಬುದನ್ನು ತಿಳಿಯಲು ಬಯಸದೇ; ಅದ್ನ ಮಾಡಲೇ ಬೇಕು, ಆ ಹಣ್ಣಿನ ಸವಿಯನ್ನು ಮನೆಯವರೊಂದಿಗೆ ಸವಿಯಲೇ ಬೇಕೆಂಬ ಉತ್ಸಾಹ ಅವರ ಮನದೊಳಗೆ ಹೆಪ್ಪುಗಟ್ಟಿತ್ತು. ನಾಲ್ಕು ವರುಷದ ಹಿಂದೆ ಹಾವೇರಿಯಿಂದ ಅರವತ್ತು ಡ್ರಾಗನ್ ಪ್ರುಟ್ ಗಿಡವನ್ನು ತಂದು , ಅಡಿಕೆ ತೋಟದ ಅಂಚು ಹಾಗೂ ಬರಣದ ಮದ್ಯ ನೆಟ್ಟು ಬೆಳೆಸಿದರು. ಕೇವಲ ಎರಡು ಬರಣದಲ್ಲಿ ಬೆಳೆದ ಈ ಹಣ್ಣಿನ ಗಿಡ ಚನ್ನಾಗಿ ಬಲಿತು ಫಲ ನೀಡಿತು.ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾದೆ ಅನಿಸಿದಾಗ, ಆ ಬೆಳೆಯನ್ನು ವಿಸ್ತರಿಸಬೇಕು ಅಂದುಕೊಂಡೆ.ನಮ್ಗೆ ಮನಸ್ಸು, ಛಲವಿದ್ದರೇ ಡ್ರಾಗನ್ ಪುಡ್ ಒಂದೇ ಅಲ್ಲ ಅನಾನಸ್ ಹಣ್ಣನ್ನು ಸಹಾ ಅಡಿಕೆ ತೋಟದ ಮದ್ಯ ಬೆಳೆಯಬಹುದು ಎನ್ನುತ್ತಾರೆ ಬಾಗಿನಕಟ್ಟಾದ ಸುಬ್ರಹ್ಮಣ್ಯ ಗಾಂವ್ಕರ್.
ಈ ಕೃಷಿಕರು 2023 ರಲ್ಲಿ ಒಂದು ಕಾಲ್ ಕ್ವಿಂಟಲ್ ಹಾಗೂ 2024 ರಲ್ಲಿ ಸುಮಾರು ಒಂದು ಕ್ವಿಂಟಲ್ ಅರವತ್ಮೂರು ಕೆ.ಜಿ ಯಷ್ಟು ಡ್ರಾಗನ್ ಫಲವನ್ನು ಪಡೆದಿದ್ದಾರೆ. ಸ್ಥಳಿಯ ಮಾರುಕಟ್ಟೆ ಯಲ್ಲಿಯೇ ಮಾರಾಟ ಮಾಡಿರುವ ಇವರು ಈ ಹಣ್ಣಿನ ಫಲದಿಂದಲೂ ಉತ್ತಮ ಆದಾಯ ಪಡೆದಿದ್ದಾರೆ. ಇವರ ಒಂದು ಭಾಗದ ಅಡಿಕೆ ತೋಟದಲ್ಲಿ ಅಡಿಕೆ ಗಿಡಗಳ ಅಂತರ ಹೆಚ್ಚು ದೂರ ಇರುವುದರಿಂದ ಚನ್ನಾಗಿ ಬೀಸಿಲು ಬಿಳುವುದರಿಂದ ಈ ಡ್ರಾಗನ್ ಬೆಳೆಯಲು ಯಾವುದೇ ಸಮಸ್ಯೆಯು ಆಗಿಲ್ಲ, ಆಗುವುದು ಇಲ್ಲ ಎಂದು ಖಚಿತವಾಗಿಯೇ ಹೇಳುತ್ತಾರೆ.ಪ್ರಸ್ತುತ ವರುಷ ಇವರು ಮತ್ತೇ ಈ ವಿದೇಶಿ ಹಣ್ಣಿನ ಗಿಡಗಳ ಸಂಖ್ಯೆ ಯನ್ನು ಹೆಚ್ಚಿಸಿಕೊಂಡಿರುವ ಸುಬ್ಬಣ್ಣ, ತಮ್ಮ ಆತ್ಮೀಯರಿಗೂ ಈ ಹಣ್ಣಿನ ಕೃಷಿ ಮಾಡಲು ಪ್ರೋತ್ಸಾಹವನ್ನು ನೀಡುತ್ತಾರೆ. ಒಂದೆರಡು ಗಿಡವನ್ನಾದರೂ ನೆಡಿ ಅಂತ ಗಿಡವನ್ನು ಕೊಟ್ಟು ಉಪಚರಿಸುತ್ತಾರೆ.
ಹಣ್ಣಿನ ಗಿಡಗಳ ವೈವಿದ್ಯ
ಬಹುತೇಕ ಮಲೆನಾಡಿನ ಅಡಿಕೆ ಬೆಳೆಗಾರರು , ನಮ್ಮ ನೆಲ ವಿಸ್ತರಣೆ ಆದರೇ ಪುನಃ ಅಡಿಕೆ ಸಸಿಗಳನ್ನೇ ಹಚ್ಚುತ್ತಾರೆಯೇ ವಿನಃ, ಬೇರೊಂದು ಗಿಡವನ್ನು ಹಚ್ಚಲು ಅಷ್ಟೊಂದು ಆಸಕ್ತಿಯನ್ನೇ ತೊರುವುದಿಲ್ಲ.ಆದ್ರೇ ಬಾಗಿನಕಟ್ಟಾದ ಪ್ರಗತಿಪರ ಕೃಷಿಕರಾದ ಸುಬ್ಬಣ್ಣ ತಮ್ಮ ಪ್ರದೇಶದ ಮೂಲ ಬೆಳೆಯನ್ನು ಮಾಡಿಕೊಂಡು ಬಹುವಿಧದ ಹಣ್ಣಿನ ಗಿಡಗಳನ್ನು ಅಡಿಕೆ ತೋಟದ ಅಂಚಿನಲ್ಲಿಯೇ ಬೆಳೆಸಿರುವುದು ಅವ್ರ ಸಾಹಸ – ಸಾಧನೆಯನ್ನು ಅಭಿನಂದಿಸಲೇಬೇಕು.
ಇವರು ತಮ್ಮ ತೋಟದ ಅಂಚಿನ ಜಾಗದಲ್ಲಿ ಅಪರೂಪದ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಬಗೆಬಗೆಯ ಹಲಸು, ಬಕ್ಕೆ, ಚೀನಾದ ಮ್ಯಾಂಗೋ, ದ್ರಾಕ್ಷಿ, ಪೇರಲೆ,ಆಮಟೆ, ಮ್ಯಾಂಗ್ಯೊಸ್ಟಿನ್,ರಸಬಾಳೆ,ರಾಜ್ ನೆಲ್ಲಿ, ಮರಸೇಬು, ಸಪೋಟ್,ವೆನಿಲ್ಲಾ, ಪಪ್ಪಾಯಿ,ಅನಾನಸ್….ಹೀಗೆ ಸುಮಾರು 160 ಕ್ಕು ಹೆಚ್ಚು ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ.ಅದ್ರಲ್ಲಿ ಅಮೇರಿಕಾ, ವಿಯೆಟ್ನಾಂ,ಚೀನಾ,…ಹೀಗೆ ಹಲವು ದೇಶದ ಹಣ್ಣಿನ ಗಿಡಗಳು ಇವರ ತೋಟದಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ. ಕಳೆದ ಆರು ವರುಷದ ಹಿಂದೆ ಮನೆ ಬಳಕೆಗಾಗಿ ಒಂದಿಷ್ಟು ಹಣ್ಣಿನ ಗಿಡಗಳನ್ನು ಬೆಳೆಸಬೇಕೆಂಬ ಉಮೇದಿ ಬಂದು ಗಿಡಗಳನ್ನು ಬೆಳೆಸಲು ಶುರು ಮಾಡಿದೆ.ಈಗ ಹೋದಲ್ಲೆಲ್ಲ ಹೊಸ ಗಿಡಗಳು ಕಂಡರೇ ಅದ್ನ ಹಣ ಕೊಟ್ಟು ಖರಿದಿ ಮಾಡಿ ತಂದು ನೆಟ್ಟು ಆರೈಕೆ ಮಾಡುತ್ತಿದ್ದೆನೆ. ಒಂದೆ ಹಷ್ಷಿನ ಗಿಡಗಳಲ್ಲಿ ಹಲವಾರು ಪ್ರಭೇದಗಳಿವೆ. ಮಾವು – ಹಲಸು- ಅನಾನಸು…ಇವುಗಳಲೆಲ್ಲ ವೈವಿದ್ಯತೆ ಇರುವ ( ರುಚಿ, ಆಕಾರ, ಗಾತ್ರ…ಇತ್ಯಾದಿ) ಹಣ್ಣಿನ ಗಿಡ ಇವರ ತೋಟದಲ್ಲಿ ಇರುವುದು ವಿಶೇಷ! ತಮ್ಮ ಪ್ರದೇಶದಲ್ಲಿ ಅಡಿಕೆ ತೋಟದ ಅಂಚಿನ ಭಾಗದಲ್ಲಿ ಇಂಥಹ ಹಣ್ಣಿನ ಗಿಡಗಳನ್ನು ನೆಟ್ಟಿಕೊಂಡರೇ ನಮ್ಗು ಅದರ ವೈಶಿಷ್ಟ್ಯ ವನ್ನು ಕಣ್ಣಾರೆ ನೋಡಿ, ಹಣ್ಣಿನ ಸವಿಯನ್ನು ನೊಡಬಹುದು.ಅಪರೂಪ ಏನಿಸಿದ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಸುಬ್ಬಣ್ಣ.
ಪರ್ಯಾಯ ಬೆಳೆ ಇರಬೇಕು!
ನಮ್ಮ ಭಾಗದಲ್ಲಿ ಅನಾದಿಕಾಲದಿಂದಲೂ ಅಡಿಕೆ ಕೃಷಿಯೊಂದಿಗೆ ಹಲವಾರು ಉಪ ಬೆಳೆಗಳನ್ನು ಮಾಡಿಕೊಂಡು ಬಂದರೂ,ಇವತ್ತಿನ ಕಾಲದಲ್ಲಿ ದುಬಾರಿಯಾದ ಕೂಲಿಯ ದರ, ಕಾಡು ಪ್ರಾಣಿಗಳ ಕಾಟ, ಬೆಳೆದ ಬೆಳೆಗಳಿಗೆ ಯೋಗ್ಯವಾದ ದರ ಇಲ್ಲದೇ ಇರುವುದಿಂದ ಮಲೆನಾಡಿನಲ್ಲಿ ಹಲವಾರು ಕೃಷಿಕರು ಇಂದು ಅಡಿಕೆಯೊಂದೇ ಬೆಳೆಗೆ ಅಂಟಿಕೊಂಡಿದ್ದಾರೆ. ಅದಕ್ಕು ಈಗ ಭಯಾನಕ ರೋಗ ಬಂದಿರುವುದರಿಂದ ಪರ್ಯಾಯ ಬೆಳೆಗಳನ್ನು ಕೃಷಿಕರೆ ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಉದ್ಬವಿಸಿದೆ. ನನ್ನ ದೃಷ್ಟಿಯಲ್ಲಿ ಮುಂದಿನ ದಿನದಲ್ಲಿ ಅಡಿಕೆ ಬೆಳೆಗೆ ಸಂಕಷ್ಟ ಬಂದರೇ ಹಲಸು, ಮಾವು, ಡ್ರಾಗನ್ ಪುಡ್, ಅನಾನಸ್, ಬಾಳೆ…ಇಂಥಹ ಹಣ್ಣಿನ ಬೆಳೆಗೆ ಆದ್ಯತೆ ಸಿಗಬಹುದು.ಅಲ್ಲದೇ, ಸೊಪ್ಪಿನ ಬೆಟ್ಟದಲ್ಲಿ ಕಾಳುಮೆಣಸು, ತೆಂಗು..ಇಂಥಹ ಬೆಳೆಗಳೆ ಅಡಿಕೆಗೆ ಪರ್ಯಾಯವಾಗಿ ನಿಲ್ಲಬಲ್ಲವು ಎಂದು ಬಾಗಿನಕಟ್ಟಾದ ಸುಬ್ಬಣ್ಣ ಮನಸ್ಸಿನ ಬಾವನೆಯನ್ನು ವ್ಯಕ್ತಪಡಿಸುತ್ತಾರೆ.
ಶ್ರದ್ಧೆ ಇರಲೇಬೇಕು!
ಕೃಷಿಯನ್ನು ಒತ್ತಾಯ, ಒತ್ತಡ ಹೇರಿ ಮಾಡುವುದಲ್ಲ. ಕೃಷಿ ಕಸುಬನ್ನು ಮಾಡುವವನಿಗೆ ಮೊದಲು ತಾಳ್ಮೆಯ ಜೊತೆಗೆ ಶ್ರದ್ದೆಯೂ ಇರಬೇಕು.ನಮ್ಮದು ಸಮಶೀತೋಷ್ಣ ವಲಯ ಆಗಿರುವುದರಿಂದ ಇಲ್ಲಿ ಇಂಥಹ ಒಂದೇ ಬೆಳೆಗೆ ಸೀಮಿತವಾಗಿಲ್ಲ. ಹಲವಾರು ಬೆಳೆಗಳನ್ನು ನಮ್ಮ ಪ್ರದೇಶದಲ್ಲಿ ಬೆಳೆಯಬಹುದು. ಯಾವುದೋ ಗಿಡವನ್ನು ನೆಟ್ಟ ಮಾತ್ರಕ್ಕೆ ಅದು ವ್ಯವಸ್ಥಿತವಾಗಿ ಬಲಿಯಬಹುದು ಎಂದು ಹೇಳಲಾಗದು. ನೆಟ್ಟ ಗಿಡವನ್ನು ಆಗಾಗ ನೋಡಬೇಕು, ಅದ್ಕೆ ಏನು ತೊಂದರೆ ಆಗಿದೆ, ಬೆಳವಣಿಗೆ ಸರಿಯಾಗಿ ಆಗ್ತಾ ಇದೇಯಾ.,ರೋಗ ಬಂದಿದೇಯಾ,ಕಾಂಡಕ್ಕೆ ಏನಾದ್ರು ಸಮಸ್ಯೆ ಆಗಿದೇಯಾ..ಅದೇಲ್ಲವನ್ನು ಸೂಕ್ಷ್ಮ ವಾಗಿ ಗಮನಿಸಿ ಉಪಚರಿಸ್ತಾ ಇರಲೇಬೇಕು.ಪ್ರತಿನಿತ್ಯ ನೋಡಲು ಆಗದೇ ಇದ್ದರೂ, ವಾರಕ್ಕೆ ಒಮ್ಮೆಯಾದರೂ ನಾವು ನೆಟ್ಟಿದ ಗಿಡವನ್ನು ಹತ್ತಿರ ಹೋಗಿ ನೋಡಿದರೇ( ಮಾತಾಡಿಸಿದರೇ …)ಅದ್ರ ವಾಸ್ತವಿಕ ಚಿತ್ರಣ ನಮ್ಮ ಗಮನಕ್ಕೆ ಬಂದೇ ಬರುತ್ತದೆ. ನಾವು ಆರು ತಿಂಗಳಾದರೂ ನೆಟ್ಟ ಗಿಡವನ್ನು ಗಮನಿಸದೇ ಇದ್ರೆ ಕಷ್ಟವಾಗಬಹುದು. ಕೃಷಿಯಲ್ಲಿ ಕೇವಲ ಪರಿಶ್ರಮವೊಂದೆ ಇದ್ದರೆ ಸಾಲದು , ಶ್ರದ್ದೆಯಿಂದ ಉಪಚರಿಸುವ ಮನಸ್ಸು ಇರಬೇಕು ಎಂದು ಪ್ರತಿಪಾದಿಸುತ್ತಾರೆ ಸುಬ್ಬಣ್ಣ.
ಮಂಗನ ಓಡಿಸಲು ಮೈಕ್…
ಬಾಗಿನಕಟ್ಟಾದ ಪರಿಶ್ರಮಿ ಕೃಷಿಕರಾದ ಸುಬ್ಬಣ್ಣ ತಮ್ಮ ತೋಟದಲ್ಲಿ ಮಂಗನ ಕಾವಲಿಗೆ ವ್ಯಕ್ತಿಯನ್ನು ಇಟ್ಟುಕೊಂಡಿಲ್ಲ.ಗನ್ ಮ್ಯಾನ್ ಜನರು ಇಲ್ಲಿ ಓಡಾಡುವುದು ಇಲ್ಲ.ಮಂಗಗಳನ್ನು ಓಡಿಸಲು ವಿದ್ಯುತ್ ನಿಂದ ನಡೆಯುವ ಕರ್ಕಸ ಸದ್ದು ಮಾಡುವ ಮೈಕ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕರೆಂಟು ಇಲ್ಲದ ಸಮಯದಲ್ಲಿಯೂ ಈ ಮೈಕ್ ಸದ್ದು ಮಾಡಬೇಕು ಎಂಬ ಕಾರಣಕ್ಕೆ ಬ್ಯಾಟರಿಯನ್ನು ಅಳವಡಿಸಿಕೊಂಡಿದ್ದಾರೆ. ಇದನ್ನು ಎಲ್ಲ ಸಮಯದಲ್ಲಿ ಹಾಕಬಾರದು, ನಾವು ಊಟ ಮಾಡುವ ಸಮಯದಲ್ಲಿ, ತೋಟದಲ್ಲಿ ಕೆಲಸ ಇರದ ಸಮಯದಲ್ಲಿ….ಹಾಕಿಟ್ಟರೇ ಇದು ಬಹಳ ಅನುಕೂಲ ಎಂಬುದು ಅವರ ಅಭಿಪ್ರಾಯ.
ಹಣ್ಣಿನ ಗಿಡ ಬೆಳೆಸಲು ಪ್ರೇರಣೆಯೇನು?
ಬಾಗಿನಕಟ್ಟಾದ ಸುಬ್ಬಣ್ಣ ತಮ್ಮ ತೋಟದಲ್ಲಿ ತಮಗೆ ತಿಳಿದ ಪದ್ದತಿಯಲ್ಲಿ ಕೃಷಿ ಮಾಡಿಕೊಂಡು ಇದ್ದವರು. ಒಮ್ಮೆ ಮಗನೊಂದಿಗೆ ನೆಂಟರ ಮನೆಗೆ ಹೋದಾಗ ಪಪ್ಪಾಯಿ ಹಣ್ಣನ್ನು ಇವರಿಗೆ ತಿನ್ನಲು ಕೊಟ್ಟಿದ್ದರಂತೆ. ಅದನ್ನು ಸವಿದ ಇವರಿಗೆ ಆ ತಳಿಯನ್ನು ನಾವು ಬೆಳೆಸಬೇಕೆಂಬ ಆಸೆಯಾಗಿತ್ತು. ಹಣ್ಣನ್ನು ಕೊಟ್ಟ ಮನೆಯವರ ಹತ್ತಿರ ಒಂದೆರಡು ಬೀಜ ಕೊಡಿ, ನಾನು ಸಸಿ ಮಾಡಿ ಬೆಳೆಸುವೆ ಎಂದು ಅಪೇಕ್ಷೆ ವ್ಯಕ್ತಪಡಿಸಿದ್ದರು.”ನಾವು ಹಣ ಕೊಟ್ಟು ಸಸಿ ತಂದಿದ್ದೇನೆ.ಹಾಗೆಲ್ಲ ಬೀಜ ಕೊಡುವುದಿಲ್ಲ. ಸಸಿ ಮಾಡಿ ಮಾರಾಟ ಮಾಡ್ತೆನೆ..” ಎನ್ನುವ ಅಹಂಕಾರದ ಮಾತು ಇವರ ಮಗನ ಮನಸ್ಸೆ ಕೇಡಿಸಿತು. ಅಪ್ಪಾ! ಇದ್ಯಾವುದು ಬ್ಯಾಡ.ನಾವೇ ಬೇರೆ ಕಡೆಯಿಂದ ತರಿಸಿಕೊಂಡು ಆ ಹಣ್ಣನ್ನು ಬೆಳೆಯೋಣ….”ಎಂದು ಮಗ ಸುಬ್ಬಣ್ಣನಿಗೆ ಪ್ರೇರಣೆ ನೀಡಿದ ನಂತರ ವೇ ಇಂದು ಅವರ ತೋಟದಲ್ಲಿ ಬಗೆಬಗೆ ಹಣ್ಣಿನ ಗಿಡಗಳ ಸಾಮ್ರಾಜ್ಯ ತಲೆಯೇತ್ತಲು ಮುಖ್ಯ ಕಾರಣ.ಅವರು ಕೇವಲ ಹಣ್ಣಿನ ಗಿಡಗಳನ್ನು ಮಾತ್ರ ಬೆಳೆಸಲಿಲ್ಲ.ಅವುಗಳ ವಿಶೇಷ, ವೈಶಿಷ್ಟ್ಯ ವನ್ನು ತಿಳಿದುಕೊಂಡಿರುವುದು ನಿಜಕ್ಕು ಮೆಚ್ಚಲೇ ಬೇಕು.ಪ್ರತಿಯೊಂದು ಗಿಡಗಳಿಗೂ ಅದ್ರ ವೈಜ್ಞಾನಿಕ ಹೆಸರನ್ನು ಸ್ವ- ಹಸ್ತಾಕ್ಷರದಲ್ಲಿ ಬೆರೆಸಿ ನಾಮಫಲಕ ಹಾಕಿದ್ದಾರೆ.ಆಸಕ್ತಿಯಿಂದ ಬಂದವರಿಗೆ ತಮಗೆ ತಿಳಿದ ಮಾಹಿತಿಯನ್ನು ಪಟಪಟನೆ ತೆರೆದಿಡುತ್ತಾರೆ.ಇವರ ಈ ಅತ್ಯದ್ಬುತ ಸಾಧನೆ – ಸಾಹಸ ಮಲೆನಾಡಿನ ಕೃಷಿಕರಿಗೆ ಒಂದು ಮಾದರಿ ಕೆಲಸವೆಂದರೂ ಅತೀಶಯೋಕ್ತಿ ಆಗಲಾರದು.