-ರಾಧಾಕೃಷ್ಣ ತೊಡಿಕಾನ
ಉದ್ಯೋಗವಿಲ್ಲದೆ ಯುವ ಸಮುದಾಯ ಚಡಪಡಿಸುತ್ತಿದೆ. ಹೊಸ ಅವಕಾಶವನ್ನು ಸೃಷ್ಟಿಸಿಕೊಳ್ಳಲಾಗದೆ ನಗರದತ್ತ ದೃಷ್ಟಿ ಹರಿಸಿ ಸಿಕ್ಕ ಸಣ್ಣಪುಟ್ಟ ಕೆಲಸದಲ್ಲೇ ಜೋತು ಬೀಳುವ ಕಾಲಘಟ್ಟದಲ್ಲಿ ಉತ್ತಮ ಉದ್ಯೋಗವನ್ನೇ ತೊರೆದು ಬಂದು ಹಳ್ಳಿಯ ಕೃಷಿ ಬದುಕಿನಲ್ಲಿ ಬೆಸೆದುಕೊಂಡು ದೇಶಿಯ ಹಸುಗಳಿಂದ ಉತ್ಪನ್ನಗಳನ್ನು ತಯಾರಿಸಿ ಯಶಸ್ಸನ್ನು ಪಡೆದ ಯುವಕ ರಂಜಿತ್ ಅವರ ಯಶೋಗಾಥೆ ಅಚ್ಚರಿ ಮೂಡಿಸುತ್ತದೆ.
ಮಲೆನಾಡ ಗಿಡ್ಡ ತಳಿಗಳೆಲ್ಲಾ ಹೆಚ್ಚಾಗಿ ಮಿಶ್ರ ತಳಿಯಾಗಿ ರೂಪಾಂತರಗೊಳ್ಳುತ್ತಿವೆ. ಆದರೂ ದೇಶೀಯವಾದ ಈ ತಳಿಗಳನ್ನೇ ಸಾಕಿ ಅದರಿಂದ ಸಿಗುವ ಹಾಲು, ಅರ್ಕ, ಸಗಣಿಯನ್ನು ಹಾಗೂ ತಮ್ಮ ಸುತ್ತಮುತ್ತೆಲ್ಲಾ ಸಿಗುವ ಔಷಧೀಯ ಗಿಡಮೂಲಿಕೆಗಳನ್ನು ಬಳಸಿಕೊಂಡು 15 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುವ ರಂಜಿತ್ ಶ್ರದ್ಧೆ, ಶ್ರಮ, ಆಸಕ್ತಿ ಮೇಲ್ಪಂಕ್ತಿಯದು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯ ರಂಜಿತ್ ಅವರು ತನ್ನ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಬಹುತೇಕ ಯುವಕರಂತೆ ಉದ್ಯೋಗ ನಿಮಿತ್ತ ಬೆಂಗಳೂರು ಸೇರಿದರು. ಸಾಪ್ಟ್ವೆರ್ ಕಂಪನಿಯಲ್ಲಿ ಉದ್ಯೋಗವೂ ಸಿಕ್ಕಿತ್ತು. ಉತ್ತಮ ಸಂಬಳವೂ ಇತ್ತು. ೨೦೧೯ರ ಕೋವಿಡ್ ಬಹಳಷ್ಟು ಜನರ ಬದುಕಿನ ದಿಕ್ಕು ಬದಲಾಯಿಸಿತು. ದೂರದ ನಗರದಲ್ಲಿರುವ ರಂಜಿತ್ ಅವರಿಗೂ ಕೊರೊನಾ ಸಮಸ್ಯೆ ಕಾಡಿತು. ಅನಿವಾರ್ಯವಾಗಿ ಉದ್ಯೋಗ ಬಿಟ್ಟು ಊರಿಗೆ ಬರಬೇಕಾಯಿತು. ಕೃಷಿ ಭೂಮಿಯಿದ್ದು ಅಡಿಕೆ, ತೆಂಗು, ಬತ್ತದ ಕೃಷಿಯಿತ್ತು. ಮನೆಯಲ್ಲಿ ಸುಮ್ಮನೆ ಕುಳಿತು ಕಾಲ ಹರಣ ಮಾಡಲಿಲ್ಲ. ಕೃಷಿಯಲ್ಲಿ ತೊಡಗಿಕೊಂಡರು. ಇದಕ್ಕಷ್ಟೇ ಸೀಮಿತವಾಗದೆ ಬೇರೆ ಏನಾದರೂ ಮಾಡಬೇಕೆಂಬ ಆಸೆ ಆಸಕ್ತಿ ಹೆಚ್ಚಾಯಿತು.
ಕೃಷಿಗೆ ಪೂರಕವಾಗಿ ದನ ಸಾಕಣೆಯಿತ್ತಾದರೂ ಅವು ಊರ ದನಗಳು. ಅವುಗಳನ್ನು ಮುಂದಿಟ್ಟು ಹೈನುಗಾರಿಕೆ ಮಾಡುವ ಹಾಗಿರಲಿಲ್ಲ. ಏಕೆಂದರೆ ಅವುಗಳಲ್ಲಿ ಹಾಲಿನ ಪ್ರಮಾಣ ಕಡಿಮೆ. ಹಾಲುಕೊಡುವ ತಳಿಗಳನ್ನು ತಂದು ಹೈನುಗಾರಿಕೆ ಮಾಡಲು ಮನಸ್ಸಿದ್ದರೂ ಹಲವು ಸವಾಲುಗಳಿದ್ದವು. ಆಗ ಹೊಳೆದದ್ದು ತಮ್ಮಲಿರುವ ಮಲೆನಾಡು ಗಿಡ್ಡ ದನಕರುಗಳನ್ನೇ ಉಳಿಸಿಕೊಂಡು ಅವುಗಳಿಂದಲೇ ಗೋ ಉತ್ಪನ್ನಗಳನ್ನು ತಯಾರಿ ಯೋಜನೆ. ಆತ್ಮ ನಿರ್ಭರ ಯೋಜನೆಯಡಿ ಗೋ ಉತ್ಪನ್ನಗಳನ್ನು ತಯಾರಿಯ ಬಗ್ಗೆ ತರಬೇತಿ ಪಡೆದುಕೊಂಡರು. ಈ ತರಬೇತಿಯಿಂದ ಇವರ ಆಲೋಚನೆಗಳಿಗೆ ಮತ್ತಷ್ಟು ಬಲ ಬಂದಂತಾಯಿತು.
ತ್ರಿ ಮಧುರ ದೇಶೀಯ ಫಾರ್ಮ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರಡಿಯಲ್ಲಿ ದೇಶೀಯ ಗೋ ಆಧಾರಿತ ಉತ್ಪನ್ನಗಳನ್ನು ತಯಾರಿಕೆಗೆ ಮುಂದಾದರು. ಗೋ ಅರ್ಕ ಮತ್ತು ಸಗಣಿ, ಗಿಡಮೂಲಿಕೆಗಳನ್ನು ಬಳಸಿ ಧೂಪ ತಯಾರಿಸಿದರು. ಮಾರ್ಕೆಟ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಸುತ್ತಮುತ್ತೆಲ್ಲಾ ಹಂಚಿದರು. ಬಳಕೆದಾರರಿಂದ ನಕಾರಾತ್ಮಕ ಹಾಗೂ ಸಕಾರಾತ್ಮಕ ಅಭಿಪ್ರಾಯಗಳು ಬಂದವು. ಇದರ ಅನುಭವದ ಮೇಲೆ ಇತರ ಉತ್ಪನ್ನಗಳ ತಯಾರಿಕೆಯ ಬಗ್ಗೆ ತನ್ನದೇ ಚಿಂತನೆ ನಡೆಸಿದರು.
ಪಾತ್ರೆಗಳನ್ನು ತೊಳೆದು ಸ್ವಚ್ಛಗೊಳಿಸಲು ಡಿಶ್‌ವಾಶ್, ಆನಂತರ ಫಿನಾಯಿಲ್, ತಲೆಕೂದಲ ಸಮೃದ್ಧಿಗೆ ಹೇರ್ ಆಯಿಲ್, ಮೊದಲಾದುವುಗಳನ್ನು ತಯಾರಿಸಿದರು. ಅವುಗಳ ಉಪಯೋಗ ಹಾಗೂ ರಂಜಿತರ ಉದ್ದೇಶ ಮನಗಂಡ ಈ ವಸ್ತುಗಳ ಬಳಕೆದಾರರು “ಅಡ್ಡಿಲ್ಲ ಮಾರಾಯ್ರೆ” ಎನ್ನುತ್ತಿದ್ದವರು ಆ ಉತ್ಪನ್ನಗಳನ್ನು ಕೇಳಿ ಪಡೆಯುವಷ್ಟು ಆಸಕ್ತರಾದರು. ಗೋ ಅರ್ಕ ಮತ್ತು ಸಗಣಿಯಿಂದ ಉಪ ಉತ್ಪನ್ನಗಳು ತಯಾರಿಸಿದಂತೆ ಸಿಗುವ ಹಾಲಿಂದಲೂ ಉತ್ಪಾದನೆ ತಯಾರು ಮಾಡಬೇಕೆಂದು ಯೋಚಿಸಿದಾಗ ಆರಂಭಿಸಿದ್ದು ಹಾಲಿನ ಸ್ನಾನದ ಸಾಬೂನು. ಅದಲ್ಲದೆ ಗೋಮಯ ಬಳಸಿ ಚಾರ್ಕೋಲ್ ಸ್ನಾನದ ಸಾಬೂನು. ಈ ಉತ್ಪನ್ನಗಳು ಗ್ರಾಹಕರ ಮನಸೆಳೆಯಿತು.
ತುಳಸಿ, ಪಾರಿಜಾತ, ಅಮೃತಬಳ್ಳಿ, ಹೀಗೆ ಗೋ ಅರ್ಕಗಳನ್ನು ತಯಾರಿಸಿ ಹಲವು ಸಾಧ್ಯತೆಗಳನ್ನು ವಿಸ್ತರಿಸಿಕೊಂಡರು. ತಮ್ಮ ಪರಿಸರದಲ್ಲಿರುವ ಗಿಡಮೂಲಿಕೆಗಳ ಉಪಯೋಗದೊಂದಿಗೆ ಇವುಗಳನ್ನು ನೆಟ್ಟು ಬೆಳೆಸುವುದಕ್ಕೂ ಪ್ರೇರಣೆಯಾಯಿತು. ದಂತಮಂಜನ, ನೋವಿನ ಮುಲಾಮುಗಳು ಸೇರಿದಂತೆ ಸುಮಾರು ೧೮ ವಿಧದ ಉತ್ಪನ್ನಗಳನ್ನು ತಯಾರಿಸಿದರೂ ೧೩ ವಿಧದ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಚ್ಚು ಚಲಾವಣೆಯಲ್ಲಿವೆ. ದೇಶೀಯ ಹಸುಗಳನ್ನು ಸಾಕಿರುವುದರಿಂದ ಅವು ಹೈನುಗಾರಿಕೆಗೆ ಲಾಭದಾಯಕವಲ್ಲ. ಆದ್ದರಿಂದ ಹಾಲನ್ನು ಡೈರಿಗೆ ಹಾಕದೆ ಉತ್ಪನ್ನಗಳ ತಯಾರಿಯಲ್ಲಿ ಬಳಸಿಕೊಳ್ಳುವುದೇ ಉತ್ತಮ. ಮೌಲ್ಯವರ್ಧಿತ ಉತ್ಪಾದನೆಯಲ್ಲಿ ಹಾಲಿನ ಬಳಕೆ ಲಾಭದಾಯಕವಾಗಿ ಪರಿಣಮಿಸಿದೆ.
ದಂತಮಂಜನ, ಹಾಲಿನ ಮತ್ತು ಚಾರ್ಕೋಲ್ ಸ್ನಾನದ ಸಾಬೂನು ದೆಹಲಿಯವರೆಗೆ ಮಾರಾಟವಾಗಿದೆ. ತನ್ನ ಗೋ ಉತ್ಪನ್ನಗಳಿಗೆ ಗ್ರಾಹಕರಿದ್ದಾರೆ. ಬೇಡಿಕೆಯೂ ಇದೆ ಎಂದು ಅಭಿಮಾನದಿಂದ ಹೇಳುತ್ತಾರೆ ರಂಜಿತ್.
ಮಾರುಕಟ್ಟೆ
ಬಹಳಷ್ಟು ಉತ್ಪನ್ನಗಳನ್ನು ಆನ್ಲೈನ್ ಮೂಲಕವೇ ಮಾರಾಟ ಮಾಡುತ್ತಾರೆ. ಅದಲ್ಲದೆ ಗೋ ಉತ್ಪನ್ನ ಸಾವಯುವ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಮೂಲಕ ಪ್ರಚಾರ ಪಡಿಸುತ್ತಾರೆ. ಡೋರ್ ಡೆಲಿವರಿ ವ್ಯವಸ್ಥೆಯೂ ಅವರಲ್ಲಿದೆ. ನಾನು ಕಂಪೆನಿಯಲ್ಲಿ ಇದ್ದಿದ್ದರೆ ಕಂಪೆನಿಗಾಗಿ ದುಡಿಯಬೇಕಾಗುತ್ತಿತ್ತು. ಇಲ್ಲಿ ಹಾಗಲ್ಲ. ಸ್ವಯಂ ಉದ್ಯೋಗ. ಮುಕ್ತ ಅವಕಾಶಗಳು. ಅವಶ್ಯಕತೆ ಇರುವಾಗ ಇತರರಿಗೂ ಕೆಲಸ ನೀಡುತ್ತಿದ್ದೇನೆ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತಾರೆ.
ಗೋ ಉತ್ಪನ್ನಗಳು ಕೃಷಿಗಷ್ಟೇ ಸೀಮಿತವಾಗದೆ ಮೌಲ್ಯವರ್ಧನೆಗೊಂಡು ಉಪಯುಕ್ತವಾಗುತ್ತಿದೆ. ಅವರಲ್ಲಿ ಈಗ 10 ದೇಶಿಯ ಹಸುಗಳಿವೆ. ಕಾರ್ಮಿಕ ಸಮಸ್ಯೆ ಇರುವುದರಿಂದ ಕೆಲಸಗಾರರನ್ನು ಹೆಚ್ಚು ಅವಲಂಭಿಸಿಲ್ಲ.
ಉಡುಪಿ, ಕುಂದಾಪುರ, ಮಂಗಳೂರು, ತುಮಕೂರು, ಹುಬ್ಬಳ್ಳಿ ಸೇರಿದಂತೆ ಹಲವು ಸಾವಯುವ ವಸ್ತುಗಳ ಮಾರಾಟದ ಅಂಗಡಿಗಳಲ್ಲಿ ಅವರ ಉತ್ಪನ್ನಗಳು ಲಭ್ಯವಿದೆ. ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಇದೆಯಾದರೂ ಉತ್ತಮ ಗುಣಮಟ್ಟ ಕಾಯ್ದುಕೊಂಡಿರುವುದರಿAದ ಹೆಚ್ಚು ಲಾಭ ತಂದು ಕೊಡುವ ವ್ಯವಹಾರವಲ.್ಲ ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ಪನ್ನಗಳನ್ನು ಮಾರುಕಟೆಗೆ ಪರಿಚಯಿಸುವ ಆಶಯವನ್ನು ರಂಜಿತ್ ಹೊಂದಿದ್ದಾರೆ. ಮಾಹಿತಿಗೆ ಮೊ: 6366663883