ರಾಧಾಕೃಷ್ಣ ತೊಡಿಕಾನ | ಚಿತ್ರ: ರಾಮ್ ಅಜೆಕಾರ್
ಕಡೆಗೋಲು ನೋಡಿದಾಗಲೆಲ್ಲಾ, ಕಡೆಗೋಲು ಹಿಡಿದು ಉಡುಪಿಯ ಶ್ರೀಕೃಷ್ಣನ ಭವ್ಯ ಮೂರ್ತಿ ಕಣ್ಣೆದುರು ನಿಂತಂತೆ ತೋರುತ್ತದೆ. ನಂತರ ಗ್ರಾಮೀಣ ಬದುಕಿನ ಚಿತ್ರಣ ಮನದ ಮೂಲೆಯಿಂದ ಮೆಲ್ಲನೆ ಇಣುಕುತ್ತದೆ. ದನ ಸಾಕಾಣೆ ಇರುವ ರೈತ ಕುಟುಂಬಗಳಲ್ಲಿ ಹಿಂದೆ ಮನೆಗೆ ಬೇಕಾದ ಹಾಲನ್ನು ಬಳಸಿ, ಉಳಿದ ಹಾಲನ್ನು ಮೊಸರು ಮಾಡಿ ಮಥಿಸಿ ಬೆಣ್ಣೆ, ತುಪ್ಪ ತಯಾರಿಸುವುದು ಸಾಮಾನ್ಯವಾಗಿತ್ತು. ಇದರ ತಯಾರಿಗೆ ಕಡೆಗೋಲು ಮುಖ್ಯ ಸಾಧನ. ಈಗೀಗ ಹಾಲನ್ನು ಡೈರಿಗೆ ಹಾಕುವವರೇ ಹೆಚ್ಚು. ಆದರೂ ಹಾಲಿನ ಉಪ ಉತ್ಪನ್ನಗಳನ್ನು ತಯಾರಿಸುವವರಿದ್ದಾರೆ.
ಈ ಕಡೆಗೋಲು ತಯಾರಿಯ ಹಿಂದೆ ಗ್ರಾಮೀಣ ಬದುಕಿನ ಸ್ವಾವಲಂಬನೆಯ ಕಥೆಯಿದೆ. ಜನರಿಗೆ ಅತ್ಯವಶ್ಯಕವಾದ ಕಡೇಗೋಲು ತಯಾರಿಯಲ್ಲಿ ಪರಂಪರೆಯ ವೃತ್ತಿ ಕೌಶಲವಿದೆ. ತನ್ನ ಜೀವನಕ್ಕೆ ಕಡೆಗೋಲನ್ನೇ ಆಧಾರವಾಗಿಸಿಕೊಂಡು ಯಶಸ್ಸು ಗಳಿಸಿದ ಹಲವರು ಇದ್ದಾರೆ. ಅಂತಹವರಲ್ಲಿ ಒಬ್ಬರು ಸದಾನಂದ ಗುಡಿಗಾರ್. ಜೀವನದ ಕಷ್ಟ-ಸುಖಗಳ ನಡುವೆ, ಕಡೆಗೋಲು ಅವರಿಗೆ ಯಶಸ್ಸಿನ ಪಥವನ್ನು ತೋರಿಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ನಿವಾಸಿ ಸದಾನಂದ ಗುಡಿಗಾರ್ ಪರಂಪರೆಯ ಮೂಲಕ ತಲೆಮಾರಿನಿಂದ ತಲೆಮಾರಿಗೆ ಬಂದ ಸಾಂಪ್ರದಾಯಿಕ ಗುಡಿ ಕೈಗಾರಿಕೆಯನ್ನು ನೆಚ್ಚಿ, ಬದುಕಿನ ಬುತ್ತಿ ಕಂಡವರು. ಕಳೆದ 4೦ ವರ್ಷಗಳಿಂದ ಅವರು ಕಡೆಗೋಲು ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸದಾನಂದ ಗುಡಿಗಾರ್ ತಯಾರಿಸುವ ಕಡೆಗೋಲುಗಳು ಹಾಲಿನಿಂದ ಉತ್ಪನ್ನಗಳ ತಯಾರಿಯಲ್ಲಿ ಸಹಕಾರಿಯಾಗುತ್ತವೆ. ಅವರು ಹಲವು ಮಾದರಿಯ ಕಡೇಗೋಲುಗಳನ್ನು ತಯಾರಿಸಿದ್ದಾರೆ:

ದೇವರಿಗೆ ಅರ್ಪಿಸುವ ಶ್ರೀಕೃಷ್ಣ ಕಡೆಗೋಲು
ಬೇರೆ ಬೇರೆ ಮಾದರಿಯ ಗ್ರಾಮೀಣ ಬಳಕೆಯ ಕಡೆಗೋಲು ತೀರಾ ಹಳ್ಳಿಯ ಮೂಲೆಯಲ್ಲಿ ಕುಳಿತು, ಕಡೇಗೋಲು ತಯಾರಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬೆಲೆ: 4೦ ರೂ. ರಿಂದ 4೦೦೦ ರೂ. ವರೆಗೆ, ಗಾತ್ರಕ್ಕೆ ತಕ್ಕಂತೆ ದರ ನಿಗದಿಯಾಗಿರುತ್ತದೆ.
ನೈಸರ್ಗಿಕ ಹಾಗೂ ಪರಂಪರೆಯ ಕಲೆ
ಈಗ ಯಂತ್ರದಿಂದ ತಯಾರಿಸಲಾದ ಕಡೇಗೋಲುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಸದಾನಂದ ಗುಡಿಗಾರ್ ಅವರು ಕರಕುಶಲತೆಯಿಂದಲೇ ಕಡೇಗೋಲು ತಯಾರಿಸುತ್ತಾರೆ. ಬಣ್ಣ ಲೇಪನ ಅಥವಾ ಎಣ್ಣೆ ಬಳಸದೆ ನೈಸರ್ಗಿಕ ಸ್ಥಿತಿಯಲ್ಲಿಯೇ ಗ್ರಾಹಕರಿಗೆ ನೀಡಲಾಗುತ್ತದೆ. ಉಡುಪಿ ಮಾರುಕಟ್ಟೆಯಲ್ಲಿ ಅವರು ತಯಾರಿಸಿದ ಕಡೇಗೋಲುಗಳಿಗೆ ಬೇಡಿಕೆ ಹೆಚ್ಚು. ನೇರವಾಗಿ ಖರೀದಿಸುವವರು ಅಥವಾ ಮುಂಚಿತವಾಗಿ ಗಾತ್ರ ತಿಳಿಸಿ ಮಾಡಿಸಿಕೊಂಡು ಹೋಗುವವರಿದ್ದಾರೆ.
ಪರಂಪರೆ ಮುಂದುವರಿಸುವ ಆಶಯ
ಸದಾನಂದ ಗುಡಿಗಾರ್ ತಮ್ಮ ಮುಂದಿನ ತಲೆಮಾರಿಗೆ ಈ ಪರಂಪರೆ ಮುಂದುವರಿಯಬೇಕು ಆಶಯ ಸದಾನಂದ ಗುಡಿಗಾರ್ ಅವರದು. ಪುತ್ರ ಪ್ರಶಾಂತ ಗುಡಿಗಾರ್ ಬೇರೆ ಉದ್ಯೋಗದಲ್ಲಿದ್ದರೂ, ಬಿಡುವಿನ ಸಮಯದಲ್ಲಿ ತಂದೆಯೊಂದಿಗೆ ಕಡೆಗೋಲು ತಯಾರಿಯಲ್ಲಿ ತೊಡಗಿ ಈ ಕಲೆಯನ್ನು ಮುಂದುವರಿಸುವ ಆಸಕ್ತಿ ಹೊಂದಿದ್ದಾರೆ. ಸದಾನಂದ ಗುಡಿಗಾರ್ “ಕರಕುಶಲತೆಯ ಕಡೆಗೋಲು ಕಲೆ ಉಳಿದು ಬೆಳೆಯಬೇಕಾದರೆ ಜನರು ಈ ಕಲೆಗೆ ಬೆಲೆಕೊಟ್ಟು ಪ್ರೋತ್ಸಾಹಿಸಬೇಕು” ಎನ್ನುತ್ತಾರೆ.
ಸ್ಥಳೀಯ ಮೆದು ಮರಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಈ ತಯಾರಿಕೆಗಳು ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬುತ್ತವೆ ಮತ್ತು ಹಳ್ಳಿಗಳಲ್ಲಿ ಸ್ವ ಉದ್ಯೋಗವನ್ನು ಸೃಷ್ಟಿಸುತ್ತವೆ. ಪರಂಪರೆಯ ಕಲೆಗಾರಿಕೆಗೆ ಪ್ರೋತ್ಸಾಹ ನೀಡುವುದು ಅತ್ಯವಶ್ಯಕ. ಮಾಹಿತಿಗೆ:7760812842






