spot_img
Wednesday, March 12, 2025
spot_imgspot_img

ಗ್ರಾಮೀಣ ಭಾಗದಲ್ಲಿ ಅರಳಿತು ತೆಂಗಿನೆಣ್ಣೆ ಗಾಣದ ಕನಸು: ನವ ಉದ್ಯೋಗಕ್ಕೆ ಆಧಾರವಾಯಿತು ಈ ದಂಪತಿಯ ಕಿರು ಉದ್ಯಮ!

-ರಾಧಾಕೃಷ್ಣ ತೊಡಿಕಾನ

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ತೆಂಗಿನ ಎಣ್ಣೆಗೆ ಹೆಚ್ಚು ಪ್ರಾಮುಖ್ಯತೆ. ಆಹಾರ, ಆರೋಗ್ಯ, ಔಷಧಿ  ಬಹು ವಿಧದಲ್ಲಿ ಬಳಕೆಯಿದೆ.  ಅಡುಗೆ, ತಿಂಡಿ ತಿನಿಸುಗಳ ತಯಾರಿಯಲ್ಲಿ ತೆಂಗಿನ ಎಣ್ಣೆಗೆ ಆದ್ಯತೆ.  ಗಿಡಮೂಲಿಕೆಯ ಎಣ್ಣೆ ತಯಾರಿಯಲ್ಲೂ ಉಪಯೋಗವಾಗುವುದು ತೆಂಗಿನೆಣ್ಣೆಯೇ. ತಲೆಗೆ ಹಚ್ಚಿಕೊಳ್ಳುವುದಲ್ಲದೆ ಚರ್ಮದ ಸ್ವಾಥ್ಯಕ್ಕೂ ತೆಂಗಿನ ಎಣ್ಣೆ ಹಿತಕಾರಿ.  ತೆಂಗಿನ ಉತ್ಪನ್ನಗಳನ್ನೇ ಬಳಸಿ ಗ್ರಾಮೀಣ ಭಾಗದಲ್ಲಿ ಕಿರು ಉದ್ಯಮ, ಸಂಸ್ಕರಣಾ ಘಟಕಗಳನ್ನು ಆರಂಭಿಸುವುದರಿಂದ ಸ್ಥಳೀಯ ಮಟ್ಟದಲ್ಲಿ ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಯಾಗುತ್ತದೆ.  ಗ್ರಾಮೀಣ ಆರ್ಥಿಕತೆ ಸಂಚಲನಗೊಳ್ಳುತ್ತದೆ. ರೈತರು ಬೆಳೆದ ಉತ್ಪನ್ನಗಳಿಗೆ ಹಳ್ಳಿಗಳಲ್ಲಿಯೇ ಉತ್ತಮ ಬೆಲೆ ದೊರೆಯಲು ಸಾಧ್ಯವಾಗುತ್ತದೆ.

ಈ ಉದ್ದೇಶವಿರಿಸಿಕೊಂಡು ಹಳ್ಳಿಯ ಮೂಲೆಯೊಂದರಲ್ಲಿ ಗಾಣದಿಂದ ತೆಂಗಿನ ಎಣ್ಣೆ ತೆಗೆಯುವ ಕಿರು ಉದ್ಯಮ ಆರಂಭಿಸಿರುವ ರೇವತಿ ಸತೀಶ್ ನಾಯಕ್ ಅವರ ಆಸಕ್ತಿಯ ಹಿಂದಿದೆ ಶ್ರಮ, ಶಕ್ತಿ. ಕಾರ್ಕಳ ಪೇಟೆಗೆ ಸಮೀಪವಿದ್ದರೂ ಹಳ್ಳಿ ಪರಿಸರವನ್ನು ಹೊಂದಿರುವ ದುರ್ಗಾ ಗ್ರಾಮದ ತೆಳ್ಳಾರಿನ ಅಂಚಿನಲ್ಲಿರುವ  ಗಾಣದಿಂದ ಎಣ್ಣೆ ತೆಗೆಯುವ ಉದ್ಯಮ ಹಳ್ಳಿಯ ಭಾಗದ ತೆಂಗು ಬೆಳೆಯುವ ರೈತರಿಗೆ ಸಹಕಾರಿ.

photos: Ram Ajekar

ತೆಳ್ಳಾರಿನ ಅಶ್ವಥ ಕಟ್ಟೆ ನಿವಾಸಿ ಸತೀಶ್ ನಾಯಕ್ ಅವರು ಕಾರ್ಕಳ ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ  ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ರೇವತಿ ನಾಯಕ್  ಗೃಹಿಣಿ. ಗ್ರಾಮೀಣ ಭಾಗದಲ್ಲಿ ಕೃಷಿ ಆಧಾರಿತವಾದ ಗೃಹ ಉದ್ಯಮ ಮಾಡಬೇಕೆಂಬ ಆಸಕ್ತಿ ಇಬ್ಬರಲ್ಲೂ ಇತ್ತು. ಹಲಸಿನ ಹಪ್ಪಳ, ಸಂಡಿಗೆ, ವಿವಿಧ ಉಪ್ಪಿನಕಾಯಿ ಮೊದಲಾದುವುಗಳನ್ನು ಹೆಚ್ಚಿನವರು  ಮಾಡುತ್ತಾರೆ. ಆದರೆ ಅದಕ್ಕಿಂತ ಭಿನ್ನವಾದ ಹೊಸದೇನಾದರೂ ಮಾಡಬೇಕೆಂಬುದು ಅವರ ಯೋಚನೆಯಾಗಿತ್ತು. ಹೊಸತಾದುದನ್ನು ಮಾಡುವುದಕ್ಕೆ ಅವರ ಮುಂದೆ ಹಲವು ಸವಾಲುಗಳು ಇದ್ದವು.

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಸ್ಥಾಪನೆ ಮತ್ತು ಉದ್ದಿಮೆಗಳ ಅಭಿವೃದ್ಧಿ ಯೋಜನೆಯಡಿ ಸಾಲ ಸೌಲಭ್ಯ ಹಾಗೂ ಸರಕಾರದ ಸಹಾಯಧನ ದೊರೆಯುವುದನ್ನು ಅವರು ಮನಗಂಡಿದ್ದರು.  ಹಳ್ಳಿಯಲ್ಲಿ ತೆಂಗು ಬೆಳೆಗಾರರು ಇದ್ದಾರೆ.  ಅವರಿಗೆಲ್ಲ ತೆಂಗಿನೆಣ್ಣೆ ಮಾಡಿಕೊಳ್ಳಬೇಕಾದರೆ  ನಗರದ ಮಿಲ್ಲುಗಳಿಗೆ ಹೋಗಬೇಕಾಗುತ್ತದೆ. ಬಹುತೇಕ ಕಡೆಗಳಲ್ಲಿ ಆಗಿಂದಾಗ ಕೊಬ್ಬರಿ ಎಣ್ಣೆ ಬೇಕಾದರೆ ಅವರದೇ ಕೊಬ್ಬರಿಯ ಎಣ್ಣೆ ಸಿಗುವುದು ಅಪರೂಪವೇ. ರೈತರು ತಂದ ಕೊಬ್ಬರಿಗೆ ಅನುಗುಣವಾಗಿ ಅವರೆದುರೇ ಕೊಬ್ಬರಿ ಎಣ್ಣೆ ಮಾಡಿಕೊಡುವ ಎಣ್ಣೆ ಗಾಣ ಸ್ಥಾಪಿಸುವುದಕ್ಕೆ ಸತಿಪತಿ ಮುಂದಾದರು.

ಹಿಂದೆ ಹಳ್ಳಿಗಳಲ್ಲಿ ಸಾಂಪ್ರದಾಯಿಕವಾದ ಮರದ ಗಾಣಗಳಿದ್ದವು. ಈಗ ಅಂತಹ ಗಾಣಗಳು ಮಾಯವಾದರೂ ಯಂತ್ರಚಾಲಿತವಾದ ಮರದ ಗಾಣಗಳಿವೆ.  ಗಾಣಗಳಲ್ಲಿ ಮರದ ಗಾಣ, ಕೋಲ್ಡ್ ಪ್ರೆಸ್ ಹಾಗೂ ಹಾಟ್ ಪ್ರೆಸ್ ಮೊದಲಾದ ಮೂರು ವಿಧಗಳಿವೆ. ಇವರು ಆಯ್ದುಕೊಂಡದ್ದು ಕೋಲ್ಡ್ ಪ್ರೆಸ್ ಗಾಣವನ್ನು. ಮರದ ಗಾಣ ಮತ್ತು ಕೋಲ್ಡ್ ಪ್ರೆಸ್ಸಿನಲ್ಲಿ ಎಣ್ಣೆ ಬಿಸಿಯಾಗುವುದಿಲ್ಲ. ಶೇ.6೦ರಷ್ಟು ಎಣ್ಣೆ ಸಿಗುತ್ತಾದರೂ ಉಳಿದದ್ದು ಹಿಂಡಿ ರೂಪದಲ್ಲಿ ಸಿಗುತ್ತದೆ. ಗ್ರಾಮೀಣ ಭಾಗದ ಕೃಷಿಕರಲ್ಲಿ ಬಹುತೇಕ ಮಂದಿ ಹೈನುಗಾರರು. ತೆಂಗಿನ ಹಿಂಡಿ ಪಶು ಆಹಾರವಾಗಿ ಬಳಕೆಯಾಗುತ್ತದೆ. ಇದರಿಂದ ಹಿಂಡಿಗಾಗಿ ವ್ಯಯಿಸಬೇಕಾದ ಖರ್ಚು ಕಡಿಮೆಯಾಗುತ್ತದೆ.

2024 ರಲ್ಲಿ ಜಲದುರ್ಗಾ ಗಾಣದೆಣ್ಣೆ ತಯಾರಿ ಘಟಕವನ್ನು ಮನೆಯ ಬಳಿಯೇ ರೇವತಿ ಸತೀಶ್ ನಾಯಕ್ ಅವರು ಆರಂಭಿಸಿದರು. ಪೇಟೆ ಬದಿಯಲ್ಲಿ ಎಲ್ಲಾದರೂ ಶುರು ಮಾಡುವುದನ್ನು ಬಿಟ್ಟು  ಈ ಹಳ್ಳಿ ಮೂಲೆಯ ಗಾಣಕ್ಕೆ  ಕೊಬ್ಬರಿ ಯಾರು ತರುತ್ತಾರೆ? ಎಂಬ ಅನುಮಾನ ಕೆಲವರು ವ್ಯಕ್ತಪಡಿಸಿದ್ದರು.  ರೇವತಿ ಸತೀಶ್ ನಾಯಕ್ ಅವರಲ್ಲೂ ಅಂತಹದ್ದೇ ಸಣ್ಣ ಅಳುಕು ಇತ್ತಾದರೂ ತಾವು ಆರಂಭಿಸಿದ ಗಾಣದಿಂದ ಹಳ್ಳಿಯ ಕೃಷಿಕರಿಗೆ ಪ್ರಯೋಜನವಾಗಬಹುದು. ಗುಣಮಟ್ಟದ ಎಣ್ಣೆಗೆ ಎಲ್ಲೇ ಆದರೂ ಬೇಡಿಕೆ ಬಂದೇ ಬರುತ್ತದೆ ಎನ್ನುವ ದೃಢ ವಿಶ್ವಾಸ ಅವರಲಿತ್ತು. ಅವರ ನಂಬಿಕೆ ಸುಳ್ಳಾಗಲಿಲ್ಲ. ಸುತ್ತಮುತ್ತಲಿನ ಗ್ರಾಮದ ಕೃಷಿಕರು ಕೊಬ್ಬರಿ ತಂದು ಎಣ್ಣೆ ಮಾಡಿಸಿಕೊಂಡು ಹೋಗುತ್ತಾರೆ. ಈಗ ಘಟಕ ಆರಂಭಿಸಿ ವರ್ಷವೊಂದು ಸಂದಿದೆ. ತೆಂಗಿನೆಣ್ಣೆ ಬಳಕೆದಾರರ ಮತ್ತು ಬೆಳೆಗಾರರ ಪ್ರೋತ್ಸಾಹ ಉದ್ಯಮಕ್ಕೆ ಶಕ್ತಿ ತುಂಬಿದೆ.

ಗ್ರಾಹಕರಿಗೆ ಕಲಬೆರಕೆಯಿಲ್ಲದ ಉತ್ತಮ ಗುಣಮಟ್ಟದ ಎಣ್ಣೆ ಮಾಡಿಕೊಡುವುದೇ ನಮ್ಮ ಉದ್ದೇಶವಾಗಿದೆ. ಘಟಕ ಉತ್ತಮವಾಗಿ ನಡೆಯಬೇಕು. ಪರಿಸರದ ತೆಂಗು ಬೆಳೆಗಾರರಿಗೆ ಹಾಗೂ ಕೊಬ್ಬರಿ ಎಣ್ಣೆ ಬಳಕೆದಾರರಿಗೆ ಗಾಣದ ನೈಸರ್ಗಿಕ ಶುದ್ಧ ಎಣ್ಣೆಯನ್ನು ನೀಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಸತೀಶ್ ನಾಯಕ್.

ಒಂದು ಬಾರಿಗೆ  ಗಾಣಕ್ಕೆ 12-15 ಕೆಜಿವರೆಗೆ ಕೊಬ್ಬರಿ ಹಾಕಬಹುದು. ಗಾಣದಲ್ಲಿ ಬಂದ ಎಣ್ಣೆಯನ್ನು ಡ್ರಮ್ಮುಗಳಲ್ಲಿ ತುಂಬಿಸಿಡಲಾಗುತ್ತದೆ. ಜಿಡ್ಡು ತಳಮಟ್ಟದಲ್ಲಿ ಶೇಖರಣೆಯಾಗುತ್ತದೆ. ಆ ನಂತರ ಸೋಸಿ ಎಣ್ಣೆಯನ್ನು ಸ್ಟೀಲ್ ಡ್ರಮ್ಮಿಗೆ ಹಾಕಿ ಬಿಸಿಲಿಗೆ ಇಡಲಾಗುತ್ತದೆ. ಈ ಸಂದರ್ಭದಲ್ಲಿ ಉಳಿದುಕೊಂಡಿದ್ದ ನೀರಿನ ಅಂಶವೂ ಆವಿಯಾಗಿ ಶುದ್ಧ ತೆಂಗಿನ ಎಣ್ಣೆ ಲಭ್ಯವಾಗುತ್ತದೆ. ಈ ಎಣ್ಣೆಯನ್ನು ದೀರ್ಘಕಾಲ ಸಂಗ್ರಹಿಸಿಡಬಹುದು ಎಂದು  ರೇವತಿ ಸತೀಶ್ ನಾಯಕ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಬೇಸಿಗೆಯಲ್ಲಿ  ತೆಂಗಿನಕಾಯಿ ಒಣಗಿಸಿ ಕೊಬ್ಬರಿ ಮಾಡೋದು ಸುಲಭ. ಆದರೆ ಮಳೆಗಾಲಲ್ಲಿ ಕೊಬ್ಬರಿ ಸಿಗುವುದಿಲ್ಲ. ತೆಂಗಿನ ಎಣ್ಣೆ ತೆಗೆಯುವ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತವೆ.  ಅಂತಹ ಸಂದರ್ಭದಲ್ಲಿ ಖರೀದಿಸಿದ ತೆಂಗಿನಕಾಯಿಗಳನ್ನು ಒಡೆದು ಒಣಗಿಸಲು ಸಾಂಪ್ರದಾಯಿಕ ಹಳೆಯ ತಂತ್ರಜ್ಞಾನದ ಡ್ರೈಯರ್ ಬಳಸಲಾಗುತ್ತದೆ.

ತೆಂಗಿನಕಾಯಿಯಿಂದ ಯಾವುದೂ ತ್ಯಾಜ್ಯವೆಂದು ಬಿಸಾಡುವಂತದ್ದು ಇಲ್ಲ. ತೆಂಗಿನ ಗೆರಟೆಯೂ ಉಪಯೋಗವಾಗುತ್ತದೆ. ಕಸವೂ ರಸವಾಗುತ್ತದೆ. ಗೆರಟೆಯಿಂದ ಇದ್ದಿಲು ಮಾಡಿ ಡಬ್ಬಿಗಳಲ್ಲಿ ತುಂಬಿಸಿ ಅದಕ್ಕೆ ಬೆಂಕಿ ಹಚ್ಚಿ ಡ್ರೈಯರಿನ ತಳಭಾಗದಲ್ಲ್ಲಿಟ್ಟರೆ ಡ್ರೈಯರಿನಲ್ಲಿ ಹಾಕಿದ  ತೆಂಗಿನಕಾಯಿ ಒಣಗಿ ಕೊಬ್ಬರಿಯಾಗುತ್ತದೆ.  ಅದರಿಂದ ಎಣ್ಣೆ ತೆಗೆಯಲಾಗುತ್ತದೆ.

ಕೊಬ್ಬರಿ ತಂದವರಿಗೆ ತೆಂಗಿನೆಣ್ಣೆ ಮಾಡಿಕೊಡುವುದಲ್ಲದೆ ಬೆಳೆಗಾರರಿಂದ ತೆಂಗಿನಕಾಯಿ, ಕೊಬ್ಬರಿಯನ್ನು ಖರೀದಿಸಿ “ಜಲದುರ್ಗಾ ತೆಂಗಿನೆಣ್ಣೆ” ಎಂಬ ಹೆಸರಿನಲ್ಲಿ ಸಾಂಪ್ರದಾಯಿಕ ತೆಂಗಿನೆಣ್ಣೆಯನ್ನು ಮಾರುಕಟ್ಟೆಗೂ ಬಿಡುಗಡೆ ಮಾಡಿದ್ದಾರೆ. ಸತೀಶ್ ನಾಯಕ್  ಅವರ ತಂದೆ ಹರಿಯಪ್ಪ ನಾಯಕ್ ಅವರು ಕೆಲ ದಶಕಗಳ ಕಾಲ ತೆಂಗಿನಕಾಯಿ ವ್ಯಾಪಾರಸ್ಥರಾಗಿದ್ದರು. ತೆಂಗಿನಕಾಯಿ, ಕೊಬ್ಬರಿ ಖರೀದಿಯ  ಅವರ ಅನುಭವಗಳು ಈ ಉದ್ಯಮಕ್ಕೆ ಸಹಾಯಕವಾಯಿತು.

ಆರಂಭದಲ್ಲಿ ಸ್ಥಳೀಯರು ಮಾತ್ರ  ಎಣ್ಣೆ ಮಾಡಿಸಿಕೊಂಡು ಹೋಗುತ್ತಿದ್ದರು. ಈಗ ಆಸುಪಾಸಿನ ಗ್ರಾಮದವರು ಕೊಬ್ಬರಿ ತಂದು ಎಣ್ಣೆ ಮಾಡಿಸಿಕೊಂಡು ಹೋಗುತ್ತಾರೆ. ಇದಲ್ಲದೆ ಮುಂಬೈ, ಬೆಂಗಳೂರು, ಮಂಗಳೂರು ಮುಂತಾದ ಕಡೆಯಿರುವ  ಊರಿನವರು ಇಲ್ಲಿಗೆ ಬಂದು ಕೊಬ್ಬರಿ ಎಣ್ಣೆಯನ್ನು ಕೊಂಡೊಯ್ಯುತ್ತಾರೆ. ಮಾರುಕಟ್ಟೆ ವ್ಯವಸ್ಥೆಗೆ ಸಾಮಾಜಿಕ ಜಾಲತಾಣಗಳನ್ನೇ ನೆಚ್ಚಿಕೊಂಡಿದ್ದಾರೆ. ತೆಂಗಿನಕಾಯಿ ಸುಲಿಯುವ ಕುಶಲಕರ್ಮಿಗಳು ಸಕಾಲದಲ್ಲಿ ಸಿಗುವುದು ಕಷ್ಟ. ಅದನ್ನರಿತ ಅವರು ತೆಂಗಿನಕಾಯಿ ಸುಲಿಯುವ ಯಂತ್ರವನ್ನು ಖರೀದಿಸಿದ್ದಾರೆ. ಈ ಯಂತ್ರವು ಗಂಟೆಗೆ 4೦೦ ತೆಂಗಿನಕಾಯಿ ಸುಲಿಯುವುದರಿಂದ ಆಳುಗಳಿಗಾಗಿ ಕಾಯಬೇಕಾದ ಪ್ರಮೇಯವಿಲ್ಲ.   ತೆಂಗಿನ ಎಣ್ಣೆ 1 ಲೀಟರ್, 2 ಲೀಟರ್, 5, 10 ಲೀಟರ್‌ಗಳಲ್ಲಿ ಲಭ್ಯವಿದೆ.  ಮಾಹಿತಿಗೆ 9449592782, 9743581107

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group