ರಾಧಾಕೃಷ್ಣ ತೊಡಿಕಾನ
ತೆಂಗಿನಕಾಯಿ ಸುಲಿದ ಮೇಲೆ ಸಿಪ್ಪೆಯಿಂದ ನಾರು, ಕೊಕೊಫಿಟ್‌ಮೊದಲಾದ ಉಪ ಉತ್ಪನ್ನಗಳನ್ನು ಪಡೆಯಬಹುದು. ತೆಂಗಿನಕಾಯಿ ಗೆರಟೆ ಬಹುತೇಕ ಕಡೆ ಉರುವಲಾಗುತ್ತದೆ, ತಪ್ಪಿದರೆ ಇದ್ದಿಲಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಹಿಂದೆ ಆಯ್ದ ಗೆರಟೆಯಿಂದ ಸೌಟುಗಳನ್ನು ತಯಾರಿಸುತ್ತಿದ್ದರು. ಸ್ಟೀಲ್ ಹಾಗೂ ಅಲ್ಯೂಮಿನಿಯಂ ಸೌಟುಗಳು ಮನೆ ತುಂಬಿಕೊಂಡಾಗ ಗೆರಟೆಯ ಸೌಟುಗಳು ತೆರೆಯ ಮರೆಗೆ ಸರಿದವು. ತ್ಯಾಜ್ಯವಾಗಿ ಹೋಗುವ ಗೆರಟೆಗಳು ಹೊಸ ರೂಪ ಪಡೆದುಕೊಂಡು ಕರ ಕೌಶಲದ ಅಲಂಕಾರಿಕ ವಸ್ತುಗಳಾಗುತ್ತಿವೆ.
ಹಳ್ಳಿ ಭಾಗದಲ್ಲಿ ಸ್ವದ್ಯೋಗ ಉದ್ಯಮಕ್ಕೆ ಗೆರಟೆಗಳು ಪೂರಕ ಕಚ್ಚಾ ವಸ್ತುಗಳಾಗುತ್ತವೆ. ಹತ್ತಾರು ಕೈಗಳಿಗೆ ಕೆಲಸವನ್ನು ನೀಡಿ ಕುಟುಂಬಗಳ ಆರ್ಥಿಕ ಚೈತನ್ಯಕ್ಕೆ ಸಹಕಾರಿಯಾಗುತ್ತಿವೆ ಎಂದರೆ ಅಚ್ಚರಿಯಾಗದಿರದು. ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಎಂಬಲ್ಲಿ ಹಲಮಂದಿ ಮಹಿಳೆಯರ ಕೈಗಳಲ್ಲಿ ಗೆರಟೆ ಕಲ್ಪ ಕಲಾಕೃತಿಯಾಗಿ ಅನಾವರಣಗೊಳ್ಳುತ್ತಿವೆ. ತನಿಯಶ್ರೀ ಹ್ಯಾಂಡ್‌ಲೂಮ್‌ಮತ್ತು ಹ್ಯಾಂಡ್‌ಕ್ರಾಪ್ಟ್ ಸಂಸ್ಥೆಯು ಕಲ್ಪ ಕಲಾಕೃತಿಗಳ ಹುಟ್ಟಿಗೆ ವೇದಿಕೆಯಾಗಿದೆ.
ತ್ಯಾಜ್ಯವಾಗಿ ಎಲ್ಲೋ ಸುಟ್ಟು ಹೋಗಬಹುದಾದ ಗೆರಟೆ ಹೊಸ ರೂಪಗಳನ್ನು ಪಡೆದು ಮನಾಕರ್ಷಕ ಕಲಾಕೃತಿಗಳಾಗುತ್ತಿವೆ. 150 ಕ್ಕೂ ಹೆಚ್ಚಿನ ವಿವಿಧ ಬಗೆಯ ಕಲಾಕೃತಿಗಳು ಇವರ ಉತ್ಪನ್ನಗಳಲ್ಲಿ ಸೇರಿವೆ. ಚಿಪ್ಪಿಯಲ್ಲಿ ಚಿಪ್ಪಿನಿಂದ ಹೊರಬಂದು ಇಣುಕುವ ಕೂರ್ಮ, ಭತ್ತದ ಕೃಷಿಕರು ಭತ್ತ ಸಂಗ್ರಹಿಸುವ ಆಕರ್ಷಕವಾದ ತುಪ್ಪೆ, ಹೂದಾನಿ, ಚಹಾ ಕಪ್, ಮೊಬೈಲ್ ಸ್ಟ್ಯಾಂಡ್, ಸಾಬೂನು ಪೆಟ್ಟಿಗೆ, ಕೀ ಬಂಚ್, ಐಸ್ ಕಪ್, ಸುಂದರ ಕಲಾಕೃತಿಗಳು ಒಮ್ಮೆ ಕಣ್ಣರಳಿಸುವಂತೆ ಮಾಡುತ್ತವೆ.
ಕೈಯಿಂದಲೇ ರೂಪುಗೊಳ್ಳುತ್ತಿರುವ ಕಲ್ಪ ಕಲಾಕೃತಿ ಹಳ್ಳಿಯಲ್ಲಿ ಸದ್ದಿಲ್ಲದೆ ಕೆಲ ಮಹಿಳೆಯರಿಗೆ ಸ್ವ ಉದ್ಯೋಗ ನೀಡಿ ಆರ್ಥಿಕ ಸಬಲೀಕರಣಕ್ಕೆ ಎಡೆಮಾಡಿದೆ. ದಿನದ ಬಿಡುವಿನ ವೇಳೆ ಅಥವಾ ಪೂರ್ಣಾವಧಿ ವೃತ್ತಿಯಾಗಿ 3೦ ಮಂದಿ ಮಹಿಳೆಯರಿಗೆ ಈ ಕಲಾಕೃತಿಗಳು ಕೆಲಸ ನೀಡಿವೆ.
ರವೀಂದ್ರ ಆಚಾರ್ಯ ಅವರ ಮುಂದಾಳತ್ವ ಹಾಗೂ ಗಿರಿಜಾ ಉಪ್ಪುಂದ ಮತ್ತು ಜ್ಯೋತಿ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಹುಟ್ಟಿಕೊಂಡ ತನಿಯ ಶ್ರೀ ಕಲ್ಪಕಲಾಕೃತಿ ಸಂಸ್ಥೆ ಗ್ರಾಮೀಣ ಆರ್ಥಿಕತೆ, ಮಹಿಳೆಯರಿಗೆ ಸ್ವ ಉದ್ಯೋಗ ವ್ಯವಹಾರಗಳಿಗೆ ಪೂರಕವಾಗಿಯೇ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ.
ರವೀಂದ್ರ ಆಚಾರ್ಯ ಅವರು ಈ ಹಿಂದೆ ಪ್ರತಿಷ್ಠಿತ ಸೇವಾ ಸಂಸ್ಥೆಯಲ್ಲಿ ಸುಮಾರು 12 ವರ್ಷಗಳ ಕಾಲ ಮೇಲ್ವಿಚಾರಕರಾಗಿ ದುಡಿದವರು. ಗಿರಿಜಾ ಉಪ್ಪುಂದ ಮತ್ತು ಜ್ಯೋತಿ ಕುಂದಾಪುರ ಅವರು ಸೇವಾಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಿದ್ದರು. ಅದಾದ ನಂತರ “ಶುಭಂ” ಎಂಬ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯಲ್ಲಿ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದ ಸದಸ್ಯರು ತುರ್ತು ಆವಶ್ಯಕತೆಗೆ ಸಂಘದಿಂದ ಸಾಲಸೌಲಭ್ಯ ಪಡೆದುಕೊಂಡಾಗ ಮರುಪಾವತಿಗೆ ಪೂರಕವಾಗುವಂತಹ ಸ್ವ ಉದ್ಯೋಗದ ಅವಶ್ಯಕತೆಯಿತ್ತು.

ಭಾರತೀಯ ವಿಕಾಸ ಟ್ರಸ್ಟ್ ಮತ್ತು ರೋಬೋ ಸಾಷ್ಟ್ ಸಂಸ್ಥೆ ಸಹಕಾರದಿಂದ ಕುಂದಾಪುರ ಬೈಂದೂರು ಪರಿಸರದ 3೦ ಮಂದಿ ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವ ಯೋಜನೆಯೊಂದಿಗೆ 15 ದಿನಗಳ ಕಾಲ ತರಬೇತಿ ನೀಡಲಾಯಿತು. ತರಬೇತಿ ಪಡೆದ ಮಹಿಳೆಯರು ಘಟಕಕ್ಕೆ ಬಂದು ಅಥವಾ ಮನೆಯಲ್ಲಿ ಇದ್ದು ಕಲಾಕೃತಿ ತಯಾರು ಮಾಡಬಹುದು. ದ.ಕ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ತೆಂಗು ಬೆಳೆ ಹೆಚ್ಚಿರುವುದರಿಂದ ಕಚ್ಚಾ ವಸ್ತುಗಳ ಸಮಸ್ಯೆ ಇಲ್ಲ. ಗ್ರಾಮೀಣ ಭಾಗದಲ್ಲಿ ಅಥವಾ ಪೇಟೆ ಪಟ್ಟಣಗಳಲ್ಲಿ ತ್ಯಾಜ್ಯವಾಗುವ ವಸ್ತುವನ್ನೇ ಆಯ್ದುಕೊಂಡು ಕಸದಿಂದ ರಸ ತೆಗೆವ ಕೆಲಸಕ್ಕೆ ಕೈಹಾಕಲಾಯಿತು.
ತೆಂಗಿನ ಎಣ್ಣೆ ತಯಾರಿಯ ಘಟಕಗಳು, ಹೋಟೆಲ್ ಮತ್ತು ಮನೆಗಳಿಂದ ಗೆರಟೆಯನ್ನು ಸಂಗ್ರಹಿಸಿ ಅದಕ್ಕೆ ಅಲಂಕಾರಿಕ ರೂಪ ನೀಡಲಾಗುತ್ತದೆ. ಈ ಕಲಾಕೃತಿಗಳನ್ನು ಕೊಳ್ಳುವ ಗ್ರಾಹಕರಿದ್ದಾರೆ. ಉಡುಗೊರೆ ನೀಡುವುದಕ್ಕೆ, ಮನೆಯ ಅಂದ ಹೆಚ್ಚಿಸುವುದಕ್ಕೆ ಅನುಕೂಲವಾಗುವುದರಿಂದ ಖರೀದಿಸುತ್ತಾರೆ. ಕೆಲವು ಹೋಟೆಲ್‌ಗಳು ಕಪ್‌ಗಳಿಗಾಗಿ ಬೇಡಿಕೆ ಇಡುತ್ತಾರೆ, ಬೇಡಿಕೆ ಇರುವ ವಸ್ತುಗಳನ್ನು ಮಾಡಿ ಮಾಡಿಕೊಡಲಾಗುವುದು ಎನ್ನುತ್ತಾರೆ ರವೀಂದ್ರ ಆಚಾರ್ಯ.
ಈ ಸಂಸ್ಥೆಗೆ ಸರಕಾರದ ಸವಲತ್ತುಗಳೇನು ದೊರೆತಿಲ್ಲ. ಸ್ವ ಉದ್ಯೋಗಕ್ಕೆ ಸಂಬಂಧಿಸಿದಂತೆ ಸರಕಾರ ನೆರವು ನೀಡಲು ಮುಂದಾದರೆ ಇನ್ನಷ್ಟು ಅಭಿವೃದ್ಧಿಪಡಿಸಿ ಗ್ರಾಮೀಣ ಮಹಿಳೆಯರಿಗೆ ಇದರಿಂದ ಉದ್ಯೋಗಾವಕಾಶ ಹೆಚ್ಚು ಹೆಚ್ಚು ನೀಡುವ ಉದ್ದೇಶ ಸಂಸ್ಥೆ ಹೊಂದಿದೆ. ಕಲಾಕೃತಿ ರಚನೆಯ ತರಬೇತಿ ಪಡೆಯಲು ಇಚ್ಛಸಿದಲ್ಲಿ ತರಬೇತಿಯನ್ನು ನೀಡಲಾಗುತ್ತದೆ.
ಮಾಹಿತಿಗೆ 8317320525