ಬೆಳೆದ ಪಸಲು ಮನೆ ತುಂಬಿದ ಹೊತ್ತಿಗೆ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿಯುತ್ತದೆ. ಪ್ರತಿ ಬೆಳೆಯೂ ರೈತರ ಕೈಗೆ ಬಂದಾಗ ಇದೇ ಪರಿಸ್ಥಿತಿ. ತೆಂಗು ಬೆಳೆಗಾರರ ಸಂಕಷ್ಟವೂ ಇದರಿಂದ ಹೊರತಾದದ್ದಲ್ಲ. ಕೊಬ್ಬರಿ ಇದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ನಷ್ಟದ ಹೊರೆ.
ಕೆಲವೊಮ್ಮೆ ಕೃಷಿಕರ ನೆರವಿಗೆ ಬರುವಂತದ್ದು ಬೆಂಬಲ ಬೆಲೆ. ಈ ಬೆಂಬಲ ಬೆಲೆಗೂ ಹತ್ತಾರು ಕಟ್ಟುಪಾಡುಗಳು. ಆದರೂ ಬೆಂಬಲ ಬೆಲೆ ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸುವುದು ಮಾತ್ರ ಸುಳ್ಳಲ್ಲ. ತೆಂಗು ಬೆಳೆಗಾರರು ದರ ಕುಸಿತದಿಂದ ಸಂಕಷ್ಟದಲ್ಲಿದ್ದರು. ಅರ್ಹ ಬೆಂಬಲ ಬೆಲೆ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದರು. ಕೇಂದ್ರ ಸರಕಾರವು ಉಂಡೆ ಕೊಬ್ಬರಿಗೆ ಕ್ವಿಂಟಾಲಿಗೆ 12,000 ಬೆಂಬಲ ಬೆಲೆ ಘೋಷಿಸಿದರೆ ರಾಜ್ಯ ಸರ್ಕಾರವು 1500ರೂ ಬೆಂಬಲ ಬೆಲೆ ನೀಡುವುದಾಗಿ ಹೇಳಿದೆ. ಇದೀಗ ಉಂಡೆ ಕೊಬ್ಬರಿಗೆ ಒಟ್ಟಾಗಿ ಕ್ವಿಂಟಾಲಿಗೆ ರೂಪಾಯಿ 13,500 ಬೆಂಬಲ ಬೆಲೆ ದೊರೆಯಲಿದೆ. ಉತ್ಕ್ರಷ್ಟ ಗುಣಮಟ್ಟದ ಕೊಬ್ಬರಿಗೆ ಮಾತ್ರ ಈ ಬೆಂಬಲ ಬೆಲೆ ದೊರೆಯಲಿದೆ. ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ ಏಳು ಎಂಟು ಸಾವಿರವಿದ್ದುದು ಇನ್ನು 10,000ದ ವರೆಗೆ ತಲುಪಲೂಬಹುದು.
ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಕೆಲವು ಕಡೆ ಈಗಾಗಲೇ ಆರಂಭವಾಗಿದೆ. ಫೆಬ್ರವರಿ ಆರಂಭದಲ್ಲಿ ಖರೀದಿ ಶುರುವಾಗಲಿದೆ. ರಾಜ್ಯದಲ್ಲಿ ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ ಜಿಲ್ಲೆಗಳ ರೈತರಿಂದ ಕೊಬ್ಬರಿ ಖರೀದಿಸಲು ಆದೇಶಿಸಲಾಗಿದೆ. ಉಂಡೆ ಕೊಬ್ಬರಿಯನ್ನು ಖರೀದಿಸಲು ನಫೆಡ್ ಸಂಸ್ಥೆಯು ಕೇಂದ್ರ ಸರಕಾರದ ಖರೀದಿ ಸಂಸ್ಥೆಯನ್ನಾಗಿಸಿ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ಸಂಸ್ಥೆಯನ್ನು ರಾಜ್ಯ ಸರಕಾರದ ಸಂಸ್ಥೆಯನ್ನಾಗಿಸಿ ನೇಮಿಸಿದೆ ಖರೀದಿಯು ಮೂರು ತಿಂಗಳವರೆಗೆ ನಡೆಯುತ್ತದೆ. ಪ್ರತಿ ಎಕರೆಗೆ ಆರು ಕ್ವಿಂಟಾಲಿನಷ್ಟು ಪ್ರತಿ ರೈತರಿಗೆ ಗರಿಷ್ಠ 20 ಕ್ವಿಂಟಾಲ್ ಪ್ರಮಾಣ ನಿಗದಿ ಪಡಿಸಲಾಗಿದೆ. ಉತ್ತಮ ಗುಣಮಟ್ಟದ ಉಂಡೆ ಕೊಬ್ಬರಿ ಹೊಂದಿದ ರೈತರಿಗೆ ಬೆಂಬಲ ಬೆಲೆ ಯೋಜನೆ ಪ್ರಯೋಜನ ದೊರೆಯಬಹುದು ಗುಣಮಟ್ಟವಿಲ್ಲವೆಂದು ನಿರಾಕರಿಸಿದರೆ ಮತ್ತೆ ಆತ ಖಾಸಗಿ ಮಾರುಕಟ್ಟೆಯನ್ನು ಆಶ್ರಯಿಸಬೇಕಾಗಬಹುದು. ಬೆಂಬಲ ಬೆಲೆಯಿಂದಾಗಿ ಮುಕ್ತ ಮಾರುಕಟ್ಟೆಯ ಧಾರಣೆಯಲ್ಲಿ ಸ್ವಲ್ಪಮಟ್ಟಿನ ಹೆಚ್ಚಳ ಕೂಡ ಆಗಬಹುದು.