spot_img
Sunday, December 21, 2025
spot_imgspot_img
spot_img

ಕಾಡುತ್ಪತ್ತಿ ಮತ್ತು ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಯಶಸ್ಸಿನ ಹಾದಿಯಲ್ಲಿ ಸುಳ್ಯ ರೈತ ಉತ್ಪಾದಕ ಸಂಸ್ಥೆ

-ರಾಧಾಕೃಷ್ಣ ತೊಡಿಕಾನ

ರೈತ ಉತ್ತು ಬಿತ್ತಿ ಬೆಳೆಯಬಲ್ಲ. ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ದರೆ ಉತ್ತಮ ಬೆಲೆ ಸಿಗುವ ಖಾತರಿಯಿಲ್ಲ. ಎಷ್ಟೋ ಬಾರಿ ಬೆಲೆ ಇದ್ದಾಗ ಬೆಳೆಯಿಲ್ಲ. ಬೆಳೆ ಇರುವಾಗ ಬೆಲೆಯಿಲ್ಲ. ತಾನು ಬೆಳೆದ ಕೃಷಿ ಉತ್ಪನ್ನಗಳಿಗೆ ತಾನೇ ಬೆಲೆ ನಿರ್ಧರಿಸುವ ಹಕ್ಕು ಅಂತೂ ಆತನಿಗಿಲ್ಲ. ತಾನು ಮಾಡಿದ ಕೃಷಿ ವೆಚ್ಚಗಳನ್ನೇ ಭರಿಸಲಾರದಷ್ಟು ಕಡಿಮೆ ಬೆಲೆಗೆ ಫಸಲನ್ನು ಮಾರಾಟ ಮಾಡಬೇಕಾದ ಸಂದಿಗ್ಧತೆಯೂ ಬಾರದಿರುವುದಿಲ್ಲ. ಆಧುನಿಕ ತಂತ್ರಜ್ಞಾನ ಬಳಕೆ, ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮೊದಲಾದುವುಗಳಿಗೆ ಸಣ್ಣಪುಟ್ಟ ಕೃಷಿಕರಿಗೆ ಅವರದಾದ ಸಮಸ್ಯೆಗಳಿರುತ್ತವೆ .ಇದನ್ನು ಮನಗಂಡು ರೈತರು ತಮ್ಮ ಪರಿಸರದಲ್ಲಿ ಸಂಘಟಿತರಾಗಿ ರೈತ ಉತ್ಪಾದಕ ಕಂಪೆನಿಗಳನ್ನು ಸ್ಥಾಪಿಸಿಕೊಳ್ಳಲು ಕೇಂದ್ರ ಸರಕಾರವು ನೆರವು ನೀಡುತ್ತಿದೆ. ಸರಕಾರದ ಪ್ರೋತ್ಸಾಹದಿಂದ ಹಳ್ಳಿಗಳಲ್ಲಿ ರೈತರಿಗೆ ಪೂರಕವಾದ ಹಲವಾರು ರೈತ ಉತ್ಪಾದಕ ಕಂಪೆನಿಗಳು ಹುಟ್ಟಿಕೊಂಡಿವೆ ಮತ್ತು ಮತ್ತು ಯಶಸ್ಸಿನ ಪಥದಲ್ಲಿವೆ.

ರೈತರ ತೋಟ ಮತ್ತು ಪರಿಸರದಲ್ಲಿರುವ ಕಾಡುತ್ಪತ್ತಿ ಮತ್ತು ತೋಟಗಾರಿಕಾ ಬೆಳೆಗಳನ್ನು ಮೌಲ್ಯ ವರ್ಧನೆಗೊಳಿಸಿ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರು ಸೇರಿ ಹುಟ್ಟು ಹಾಕಿದ ಸಂಸ್ಥೆ-ಸುಳ್ಯ ರೈತ ಉತ್ಪಾದಕ ಕಂಪೆನಿ. ಸುಳ್ಯದ ಎಪಿಎಂಸಿ ಆವರಣದಲ್ಲಿರುವ ಈ ಸಂಸ್ಥೆ ಆರಂಭವಾದದ್ದು 2021 ರಲ್ಲಿ. ಸುಮಾರು 1200 ಸದಸ್ಯರನ್ನೊಳಗೊಂಡ ಸಂಸ್ಥೆ ಐದು ವರ್ಷಗಳಲ್ಲಿ ತನ್ನದಾದ ಛಾಪು ಮೂಡಿಸಿಕೊಂಡು ರೈತರ ಹಿತರಕ್ಷಣೆಯತ್ತ ಹೆಜ್ಜೆಯಿರಿಸಿದೆ.

PHOTOS : RAM AJEKAR

ರೈತರ ಸಂಘಟನೆ, ಕೃಷಿ ಉತ್ಪನ್ನಗಳ ಕ್ರೂಢೀಕರಣ, ಮೌಲ್ಯ ವರ್ಧನೆ, ಮಾರುಕಟ್ಟೆ ಒದಗಣೆ, ತಾಂತ್ರಿಕ ಮಾಹಿತಿ, ಉತ್ಪಾದನಾ ವೆಚ್ಚ ಕಡಿತ, ಗುಣಮಟ್ಟದ ಕೃಷಿ ಪರಿಕರಗಳ ಹಾಗೂ ಸರಕಾರದ ವಿವಿಧ ಸೌಲಭ್ಯಗಳನ್ನು ರೈತರಿಗೆ ಒದಗಿಸುವ ಧ್ಯೇಯೋದ್ದೇಶ ಈ ಸಂಸ್ಥೆ ಹೊಂದಿದೆ. ಸಂಸ್ಥೆಯಲ್ಲಿ ಸದಸ್ಯರಾಗಿರುವವರಲ್ಲಿ ಹಲವರು ಜೇನು ಕೃಷಿಕರು. ಅವರಿಗೆ ಬೇರೆಯೆಡೆ ಮಾರುಕಟ್ಟೆ ಹುಡುಕುವ ಪ್ರಮೇಯವಿಲ್ಲ. ಕಂಪೆನಿಯೇ ಉತ್ತಮ ದರ ನೀಡಿ ಜೇನು ಖರೀದಿಸುತ್ತಿದೆ. ಅಲ್ಲದೇ ೨ಟನ್ನಿಗೂ ಅಧಿಕ ಜೇನುತುಪ್ಪವನ್ನು ಮಾರಾಟ ಮಾಡಿದೆ. ಅಮೆಜಾನ್, ಒಎನ್‌ಡಿಸಿ ಮೂಲಕ ಅಂತರ್ಜಾಲದಲ್ಲಿ ಮಾರಾಟ ಮಾಡಿರುವುದಲ್ಲದೆ ಮಂಗಳೂರು ಹಾಪ್‌ಕಾಮ್ಸ್ ಹಾಗೂ ಬೆಂಗಳೂರು ಮಾರುಕಟ್ಟೆ ಮತ್ತು ಸ್ಥಳೀಯವಾಗಿ ಮಾರಾಟ ಮಾಡಿದೆ.

ಪಶ್ಚಿಮ ಘಟ್ಟದ ಕಾಡುಗಳಲ್ಲಿ ಸಿಗುವ ಕಾಡುತ್ಪತ್ತಿಗಳಲ್ಲಿ ಉಂಡೆ ಹುಳಿಯೂ ಒಂದು. ಉಂಡೆ ಹುಳಿ ಅಥವಾ ಕೆತ್ತೆ ಹುಳಿ ಮರಗಳು ಕಾಡುಗಳಲ್ಲಿ ಮಾತ್ರವಲ್ಲ. ಎಷ್ಟೋ ರೈತರು ತೋಟದ ಬದಿಗಳಲ್ಲಿವೆ. ಹಳ್ಳಿಗಳಲ್ಲಿ ಈ ಹುಳಿಯನ್ನು ಕೊಯ್ಲು ಮಾಡಿ ತಂದು ತೆಳುವಾಗಿ ಕತ್ತರಿಸಿ ಒಣಗಿಸಿ ಪುಡಿ ಮಾಡಿ ಸಾಂಬಾರ ಪದಾರ್ಥಗಳಿಗೆ ಉಪಯೋಗಿಸುತ್ತಿದ್ದು ಈ ಹುಳಿಗೆ ಭಾರೀ ಬೇಡಿಕೆಯಿದೆ. ಹಳ್ಳಿಗರಿಂದ ಸಂಗ್ರಹಿಸಿದ ಈ ಹುಳಿಯನ್ನು ಪುಡಿಯಾಗಿಸಿ ಮಾರಾಟ ಮಾಡಲಾಗುತ್ತಿದೆ. ಹುಣಿಸೆ ಹುಳಿಗೆ ಪರ್ಯಾಯವಾಗಿ ಬಳಕೆಯಾಗುವ ಈ ಹುಳಿಗೆ ಉತ್ತಮ ಮಾರುಕಟ್ಟೆಯಿದೆ. ಸಂಸ್ಥೆಯು ಈ ಬಾರಿ ಬಹಳಷ್ಟು ಕೃಷಿಕರಿಂದ ಈ ಹುಳಿಯನ್ನು ಖರೀದಿಸಿ ಉತ್ತಮ ಬೆಲೆ ನೀಡಿದೆ.

ಪುನರ್ಪುಳಿ ಮತ್ತೊಂದು ಕಾಡುತ್ಪತ್ತಿ. ಬಹಳಷ್ಟು ರೈತರ ಕೃಷಿ ಭೂಮಿಯಲ್ಲಿ ಮತ್ತು ಕಾಡುಗಳಲ್ಲಿ ಪುನರ್ಪಳಿ ಮರಗಳಿವೆ. ಆರೋಗ್ಯ ವರ್ಧಕವಾಗಿರುವ ಈ ಹುಳಿ ತಂಪು ಪಾನೀಯ ಹಾಗೂ ಇತರ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಪುನರ್ಪುಳಿಯನ್ನು ಖರೀದಿಸಿ ಉತ್ತಮ ಬೆಲೆಯನ್ನು ನೀಡಲಾಗುತ್ತಿದೆ. ಈಗ ಒಣಗಿಸಿದ ಸಿಪ್ಪೆಯನ್ನು ಖರೀದಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಅದರಿಂದ ಸಿರಪ್ ತಯಾರಿಸುವ ಉದ್ದೇಶವನ್ನು ಕಂಪೆನಿ ಹೊಂದಿದೆ.

ಸಾಂಬಾರು ಬೆಳೆಯಾದ ಅರಸಿನ ಔಷಧೀಯ ಗುಣವುಳ್ಳದ್ದು. ಹಿಂದೆ ಅರಸಿನ ಬಹಳಷ್ಟು ಕೃಷಿಕರು ಬೆಳೆಯುತ್ತಿದ್ದರು. ಈ ಪರಿಸರದಲ್ಲಿ ಅರಸಿನದ ಬೆಳೆ ಹೇಳಿಕೊಳ್ಳುವಷ್ಟಿಲ್ಲ. ಅರಸಿನ ಬೆಳೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅರಸಿನ ಖರೀದಿಸಿ ಮತ್ತು ಪುಡಿ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ರೈತರಿಂದ ಕೊಕ್ಕೊ ಖರೀದಿಸಿ ಸಂಸ್ಕರಿಸಿ ಕೊಕ್ಕೊ ಪೌಡರ್ ತಯಾರಿ ಯೋಜನೆಯೂ ಕಂಪೆನಿಯ ಮುಂದಿದೆ. ದೇಶೀ ದನದ ತುಪ್ಪ, ಅಡಿಕೆ, ಕೊಕ್ಕೊ, ತೆಂಗಿನಕಾಯಿ ಮತ್ತಿತರ ಕೃಷಿ ಉತ್ಪನ್ನಗಳನ್ನು ಉತ್ತಮ ದರದಲ್ಲಿ ಖರೀದಿಸುತ್ತಿದೆ.
ಕರಾವಳಿ ಜಿಲ್ಲೆಗಳಲ್ಲಿ ಗೃಹ ಬಳಕೆಯಾಗುತ್ತಿರುವ ತೆಂಗಿನೆಣ್ಣೆಯ ನೆಲೆ ಬೆಲೆ ಈಗ ವಿಸ್ತಾರಗೊಂಡಿದೆ. ಆರೋಗ್ಯ ವರ್ಧಕ ತೆಂಗಿನೆಣ್ಣೆ ಉಪಯೋಗ ಹಿಂದಿಗಿಂತ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಉತ್ತಮ ಗುಣಮಟ್ಟದ ತೆಂಗಿನೆಣ್ಣೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಂಪೆನಿಯು ತನ್ನಲ್ಲಾ ಉತ್ಪನ್ನಗಳನ್ನು ಪೂಮಲೆ ಬ್ರಾಂಡಿನಡಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ದೇಸಿ ದನದ ತುಪ್ಪ, ಮಾವಿನ ಮಿಡಿ ಉಪ್ಪಿನ ಕಾಯಿ ಮೊದಲಾದುವಲ್ಲದೆ ಕಂಪೆನಿಯು ರೈತರಿಗೆ ಅನುಕೂಲವಾಗುವಂತಹ ಯಂತ್ರೋಪಕರಣಗಳು, ಕೃಷಿಪರಿಕರಗಳು, ಸಾವಯವ, ರಾಸಾಯಿನಿಕ ಗೊಬ್ಬರಗಳನ್ನು ಅರ್ಹದರದಲ್ಲಿ ರೈತರಿಗೆ ನೀಡುತ್ತಿದೆ. ಪೂಮಲೆ ಬ್ರಾಂಡಿನಡಿಯಲ್ಲಿ ಇನ್ನಷ್ಟೂ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಆಶಯ ಹೊಂದಿದೆ. ಮುಂಬರುವ ದಿನಗಳಲ್ಲಿ “ಅಗ್ರಿ ಟೂರಿಸಮ್ “ ಪರಿಚಯಿಸುವ ಯೋಜನೆ ಸಂಸ್ಥೆಗಿದೆ.

ಕಂಪೆನಿಯು ಬೆಳ್ಳಾರೆ ಮತ್ತು ಎಲಿಮಲೆಯಲ್ಲಿ ಶಾಖೆಗಳನ್ನು ಹೊಂದಿದೆ. ಈ ವರ್ಷ 2.5 ಕೋಟಿ ವ್ಯವಹಾರವನ್ನು ನಡೆಸಿದೆ. ಕೇಂದ್ರ ಸರಕಾರವು ಕಂಪೆನಿಗೆ 15 ಲಕ್ಷ ಈಕ್ವಿಟಿ ಗ್ರಾಂಟ್, ಮೂರು ವರ್ಷದ ಸಿಬ್ಬಂದಿ ವೇತನ ನೀಡಿದರೆ ರಾಜ್ಯದ ಕೃಷಿ ಇಲಾಖೆಯ ಪ್ರಾಯೋಜಕತ್ವ, ಇತರ ಕೃಷಿ ಸಂಬಂಧಿತ ಇಲಾಖೆಗಳು ಸಹಕಾರ, ಸದಸ್ಯರ ಬೆಂಬಲದಿಂದ ಗಟ್ಟಿನೆಲೆ ಕಂಡುಕೊಳ್ಳುವಲ್ಲಿ ಯಶಸ್ಸು ಕಂಡಿದೆ.

ಆಡಳಿತ ಮಂಡಳಿ: ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷರಾಗಿ ವೀರಪ್ಪ ಗೌಡ ಕಣಕಲ್ ಸಾರಥ್ಯ ವಹಿಸಿದರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹರೀಶ್ ಕೆ. ಕಾರ್ಯನಿರ್ವಹಿಸುತ್ತಿದ್ದಾರೆ. ಜಯರಾಮ್ ಎಂ, ವಿಜಯಕುಮಾರ್ ಎಂ.ಡಿ, ಗೋವಿಂದ ಎ, ಸತ್ಯ ಪ್ರಸಾದ್ ಪಿ.ವಿ, ಶ್ರೀಶ ಕುಮಾರ್ ಎಂ.ಎಸ್, ಭಾಸ್ಕರ ನಾಯರ್, ಮಧುರ ಎಂ.ಆರ್, ನೇತ್ರ ಕುಮಾರ್ ಎ.ಪಿ, ಧರ್ಮಪಾಲ ಎಲ್, ರಾಮಕೃಷ್ಣ ಯು, ಸುರೇಶ್ ರೈ, ಕುಶಾಲಪ್ಪ ಗೌಡ, ಲೋಹಿತ್ ಕೊಡಿಯಾಲ, ಶಶಿಧರ ನಾಯರ್ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಮುಂಬರುವ ವರ್ಷಗಳಲ್ಲಿ ರೈತರ ಉತ್ಪಾದನೆ ಹಾಗೂ ಆದಾಯ ತರಬಲ್ಲ ಹಲವು ಯೋಜನೆಗಳನ್ನು ಸಂಸ್ಥೆಯು ಹಮ್ಮಿಕೊಳ್ಳಲು ಯೋಜಿಸಿದೆ.
ಮಾಹಿತಿಗೆ-9740507219

 

ಜಾಹೀರಾತುಗಳು

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group