ಬರಹ-ಅಡ್ಡೂರು ಕೃಷ್ಣ ರಾವ್
ಆಗಸ್ಟ್ 2014ರಲ್ಲಿ ಕೇರಳದ ಕೆ.ಎಸ್. ಶೀಜ ಅವರಿಗೆ ಬರಸಿಡಿಲು ಬಡಿದಂತಾಯಿತು. ಕಾರಣ: ಮೆಕಾನಿಕಲ್ ಇಂಜಿನಿಯರ್ ಆದ ಅವರ ಮಗ ಕೊಯಂಬತ್ತೂರಿನಲ್ಲಿ ಭೀಕರ ಅಪಘಾತದಲ್ಲಿ ಸಿಲುಕಿ, ಆತನ ಕಾಲಿಗಾದ ಭಾರೀ ಹಾನಿ. ಅವನ ಚಿಕಿತ್ಸೆಗಾಗಿ ತಮಿಳ್ನಾಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಬೇಕಾಯಿತು ಶೀಜ ಮತ್ತು ಅವರ ಕುಟುಂಬ. ಮಗ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಹತ್ತಿರವೇ ಮನೆಯೊಂದರಲ್ಲಿ ಒಂದೂವರೆ ವರುಷ ನೆಲೆಸಬೇಕಾಯಿತು.
ಆಸ್ಪತ್ರೆಗೆ ಓಡಾಟ ಮತ್ತು ನಿರಂತರ ಚಿಕಿತ್ಸೆಯ ಆ ಅವಧಿಯಲ್ಲಿ ಶೀಜ ಮಾನಸಿಕವಾಗಿ ಬಳಲಿದರು. ಆಗ ಅವರು ಸಾಂತ್ವನ ಪಡೆದದ್ದು ಹೊಸದಾಗಿ ಶುರು ಮಾಡಿದ ಕೃಷಿ ಚಟುವಟಿಕೆಯಿಂದ.
ತಾವಿದ್ದ ಮನೆಯ ಸುತ್ತಮುತ್ತಲಿನ ಜಾಗದಲ್ಲಿ ತರಕಾರಿ ಸಸಿಗಳನ್ನು ನೆಡಲು ಶುರುವಿಟ್ಟರು ಶೀಜ. ಬೀಜ ಬಿತ್ತುವುದು, ಸಸಿಗಳನ್ನು ನೆಡುವುದು, ಅವನ್ನು ಪೋಷಿಸುವುದು, ಅವುಗಳ ಬೆಳವಣಿಗೆ ಗಮನಿಸುವುದು – ಇವುಗಳಿಂದಾಗಿ ತಮ್ಮ ಹತಾಶೆಯಿಂದ ಹೊರಬರಲು ಅವರಿಗೆ ಸಾಧ್ಯವಾಯಿತು. “ಬೀಜಗಳು ಮೊಳಕೆಯೊಡೆಯುವುದು, ಹೂಗಳು ಅರಳುವುದು ಇದನ್ನೆಲ್ಲ ನೋಡುತ್ತ ನೋಡುತ್ತ ಬದುಕಿನಲ್ಲಿ ಭರವಸೆ ಮೂಡಿತು” ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಶೀಜ.
ಶೀಜ (ವಯಸ್ಸು 53 ವರುಷ) ಕಲಿತದ್ದು ಪಿಯುಸಿ. ಅವರು ಅದಾಗಲೇ ಕಂಪ್ಯೂಟರ್ ಕಲಿಕಾ ಕೇಂದ್ರವನ್ನು 25 ವರುಷ ನಿರ್ವಹಿಸಿದ್ದರು. ಮಗನ ಚಿಕಿತ್ಸೆಯ ನಂತರ ಕೇರಳಕ್ಕೆ ಹಿಂತಿರುಗಿದ ಶೀಜ ಗಟ್ಟಿ ನಿರ್ಧಾರ ಮಾಡಿದ್ದರು: ಇನ್ನು ಏನಿದ್ದರೂ ತಾನು ತಮಿಳ್ನಾಡಿನಲ್ಲಿ ಶುರು ಮಾಡಿದ್ದನ್ನು ಮುಂದುವರಿಸುವುದು – ಮುಖ್ಯವಾಗಿ ಸಾವಯವ ಕೃಷಿ ಮಾಡುತ್ತ ಹಣ್ಣು, ತರಕಾರಿ ಬೆಳೆಸುವುದು ಎಂಬುದಾಗಿ. ಶೀಜ ಅವರ ಕುಟುಂಬವೂ ಅವರ ನಿರ್ಧಾರಕ್ಕೆ ಒತ್ತಾಸೆಯಾಯಿತು. ಸರಕಾರಿ ತರಬೇತಿ ಕೇಂದ್ರವೊಂದರಿಂದ ತರಬೇತಿ ಪಡೆದು ಸಾವಯವ ಕೃಷಿಯ ವಿಧಾನಗಳನ್ನು ತಿಳಿದುಕೊಂಡರು.

ತಮ್ಮ ಕುಟುಂಬದ 25 ಸೆಂಟ್ಸ್ ಜಾಗದಲ್ಲಿ ಮತ್ತು ಲೀಸಿಗೆ ಪಡೆದ ಒಂದು ಎಕರೆ ಜಮೀನಿನಲ್ಲಿ ಸಾವಯವ ಕೃಷಿಗೆ ತೊಡಗಿದರು ಶೀಜ. ಆರಂಭದಲ್ಲಿ ಅವರು ಬೆಳೆದದ್ದು ಟೊಮೆಟೊ, ಕ್ಯಾರೆಟ್ ಇತ್ಯಾದಿ ತರಕಾರಿಗಳನ್ನು. ಗಿಡಗಳಿಂದ ಕೊಯ್ಲು ಮಾಡುತ್ತ ಮಾಡುತ್ತ ತಾನು ಸರಿಯಾದ ದಾರಿಯಲ್ಲೇ ಸಾಗುತ್ತಿದ್ದೇನೆ ಎಂಬುದು ಅವರಿಗೆ ಖಚಿತವಾಯಿತು.
ಈಗ ಅವರ ಜಮೀನಿನಲ್ಲಿ ಬೆಳೆದಿರುವ 200 ಗಿಡಗಳಿಂದ ಸಿಗುತ್ತಿದೆ ಸಮೃದ್ಧ ಫಸಲು: 25 ವಿಧದ ತರಕಾರಿಗಳು (ಬೆಂಡೆ, ಸೌತೆ, ಟೊಮೆಟೊ, ಎಲೆಕೋಸು, ಹೂಕೋಸು ಇತ್ಯಾದಿ) ಮತ್ತು 8 ವಿಧದ ಹಣ್ಣುಗಳು – ಕಲ್ಲಂಗಡಿ, ವಿದೇಶಿ ಹಣ್ಣುಗಳಾದ ರಾಂಬುಟಾನ್ ಮತ್ತು ಮ್ಯಾಂಗೋಸ್ಟಿನ್ ಸಹಿತ.
ಸಾವಯವ ಕೃಷಿಯ ಜೊತೆಗೆ ಜೇನ್ನೊಣ ಸಾಕಣೆ, ಕೋಳಿ ಸಾಕಣೆ ಮತ್ತು ಅರಶಿನದ ಸಂಸ್ಕರಣೆ – ಇವನ್ನೂ ಶುರುವಿಟ್ಟರು ಶೀಜ. ಕೋಳಿ ಹಿಕ್ಕೆಯನ್ನು ಗೊಬ್ಬರವಾಗಿ ಬಳಸಲು ಪರಿಣಾಮಕಾರಿ ವಿಧಾನವೊಂದನ್ನು ಅವರು ಬಳಸುತ್ತಿದ್ದಾರೆ. “200 ಲೀಟರ್ ಡ್ರಮ್ಮಿನಲ್ಲಿ ನೀರು ತುಂಬಿಸುತ್ತೇನೆ. ನಂತರ ತೆಂಗಿನ ನಾರಿನಿಂದ ಮಾಡಿದ ಚೀಲದಲ್ಲಿ 25 ಕಿಲೋ ಕೋಳಿ ಹಿಕ್ಕೆಯನ್ನು ಹಾಕಿ, ಅದನ್ನು ನೀರಿನ ಡ್ರಮ್ಮಿನ ಮೇಲೆ ನೇತು ಹಾಕುತ್ತೇನೆ – ಚೀಲದ ಕೆಳಭಾಗ ನೀರಿನಲ್ಲಿ ಮುಳುಗಿರುತ್ತದೆ. ಚೀಲವು ಫಿಲ್ಟರ್ ಬ್ಯಾಗಿನಂತೆ ಕೆಲಸ ಮಾಡುತ್ತದೆ. ಅಂದರೆ, ಕೋಳಿ ಹಿಕ್ಕೆಯ ಪೋಷಕಾಂಶಗಳು ನಿಧಾನವಾಗಿ ಡ್ರಮ್ಮಿನ ನೀರಿನಲ್ಲಿ ಕರಗುತ್ತವೆ” ಎಂದು ಶೀಜ ತಿಳಿಸುತ್ತಾರೆ.
“ಒಂದು ವಾರದ ನಂತರ ನೀರಿನ ಡ್ರಮ್ಮಿನಿಂದ ಪೋಷಕಾಂಶಗಳಿರುವ ಒಂದು ಲೀಟರ್ ದ್ರಾವಣ ತೆಗೆದು ಅದಕ್ಕೆ ಒಂಬತ್ತು ಲೀಟರ್ ನೀರು ಬೆರೆಸುತ್ತೇನೆ. ಈ ನೀರನ್ನು ಗಿಡಗಳಿಗೆ ನೇರವಾಗಿ ದ್ರವಗೊಬ್ಬರವಾಗಿ ಹಾಕುತ್ತೇನೆ. ಇದರಲ್ಲಿ ಸಾಕಷ್ಟು ಸಾರಜನಕ ಅಂಶವಿರುವ ಕಾರಣ, ಗಿಡಗಳು ಹಸುರಾಗಿ ಮತ್ತು ವೇಗವಾಗಿ ಬೆಳೆಯುತ್ತವೆ” ಎಂದು ಶೀಜ ವಿವರಿಸುತ್ತಾರೆ.
ಶೀಜ ಅವರ ಸಾವಯವ ಕೃಷಿಯ ಬಗ್ಗೆ ಮಾಹಿತಿ ಪಡೆದ ಸುತ್ತಮುತ್ತಲಿನ ಹಲವು ಜನರು ಅವರಿಂದ ಹಣ್ಣು ತರಕಾರಿಗಳನ್ನು ಖರೀದಿಸತೊಡಗಿದರು. ತನ್ನದೇ ವಾಟ್ಸಾಪ್ ತಂಡ ರಚಿಸಿದ ಶೀಜ ಅವರಿಗೆ ಹೆಚ್ಚೆಚ್ಚು ಹೊಸ ಗ್ರಾಹಕರನ್ನು ಪಡೆಯಲು ಸಾಧ್ಯವಾಯಿತು. ಕ್ರಮೇಣ ಅವರೆಲ್ಲರೂ ಶೀಜ ಅವರ ಖಾಯಂ ಗ್ರಾಹಕರಾದರು. ಇದಕ್ಕೆ ಕಾರಣ ಶೀಜ ಅವರು ಮಾರಾಟ ಮಾಡುವ ಸಾವಯವ ಹಣ್ಣುತರಕಾರಿಗಳ ತಾಜಾತನ, ಅವುಗಳ ಬಾಳ್ವಿಕೆ ಹಾಗೂ ರುಚಿ.

ಹಣ್ಣುತರಕಾರಿಗಳು, ಜೇನು, ಕೋಳಿಮೊಟ್ಟೆ ಮತ್ತು ಅರಿಶಿನ ಹುಡಿ – ಇವೆಲ್ಲದರ ಮಾರಾಟದಿಂದ ವರುಷಕ್ಕೆ ಸುಮಾರು ರೂಪಾಯಿ 50,000/- ಆದಾಯ ಗಳಿಸುತ್ತಿದ್ದಾರೆ ಶೀಜ. ವಾರ್ಷಿಕ 20 ಕಿಗ್ರಾ ಜೇನು ಮಾರಾಟದಿಂದಲೇ ಅವರ ಗಳಿಕೆ ರೂ. 11,000/-
ಸುಮಾರು ಒಂದೆಕ್ರೆ ಜಮೀನಿನಿಂದ ತಾನು ಗಳಿಸುತ್ತಿರುವ ಆದಾಯದ ಬಗ್ಗೆ ಶೀಜ ಅವರಿಗೆ ತೃಪ್ತಿಯಿದೆ. ಜೊತೆಗೆ, “ಷೀ ಗಾರ್ಡನ್” ಎಂಬ ತನ್ನ ಯೂ-ಟ್ಯೂಬ್ ಚಾನೆಲ್ ಮೂಲಕ ನೂರಾರು ಆಸಕ್ತರು ತನ್ನಂತೆ ಸಾವಯವ ಕೃಷಿಯಲ್ಲಿ ತೊಡಗಲು ಪ್ರೇರಣೆಯಾಗಿದ್ದಾರೆ ಶೀಜ.
“ನನ್ನದು ಕೇವಲ ಬೀಜಗಳನ್ನು ಬಿತ್ತುವ ಮತ್ತು ಗಿಡಗಳನ್ನು ಬೆಳೆಸುವ ಕೆಲಸವಲ್ಲ. ಈ ಕೃಷಿ ನನ್ನ ಹಳೆಯ ನೋವುಗಳನ್ನು ಮರೆಯಲು ನನಗೊಂದು ದಾರಿಯಾಗಿದೆ ಮತ್ತು ಸಾವಯವ ಕೃಷಿಯ ಫಲಗಳನ್ನು ಸುತ್ತಮುತ್ತಲಿನ ಜನರೊಂದಿಗೆ ಹಂಚಿಕೊಳ್ಳಲು ವೇದಿಕೆ ಒದಗಿಸಿದೆ. ನನ್ನ ಜೀವನದ ಅತ್ಯಂತ ಕಷ್ಟದ ದಿನಗಳಲ್ಲಿ ಶುರುವಾದ ನನ್ನ ತೋಟ ಈಗ ನೂರಾರು ಜನರಿಗೆ ಭರವಸೆಯ ನೆಲೆಯಾಗಿದೆ” ಎನ್ನುತ್ತಾರೆ ಶೀಜ.







