ಎಳನೀರು, ತೆಂಗಿನಕಾಯಿಯ ಉಪಯೋಗಗಳ ಬಗ್ಗೆ ಬಹುತೇಕ ಮಂದಿ ಬಲ್ಲರು. ತೆಂಗು ಬೆಳೆಗಾರರು ತೆಂಗಿನಕಾಯಿ ಸುಲಿದ ನಂತರ ಸಿಪ್ಪೆ ಗುಡ್ಡದಾಕಾರದಲ್ಲಿ ಮನೆಯ ಬಳಿ ರಾಶಿ ಬಿದ್ದಿರುತ್ತದೆ. ಕ್ರಮೇಣ ಬಚ್ಚಲು ಮನೆ ಒಲೆಯಲ್ಲಿ ಉರಿದು ಬೂದಿ ಆಗುತ್ತದೆ. ಮರಳಿ ಕೃಷಿಗೆ ಗೊಬ್ಬರವಾಗುತ್ತದೆ. ಆದರೆ ಸಿಪ್ಪೆ ಬರಿಯ ತ್ಯಾಜ್ಯವಾಗದೆ ಹಲವಾರು ಉಪ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳಾಗುತ್ತದೆ ಎಂದರೆ ಅಚ್ಚರಿಯಾಗುತ್ತದೆ. ಹುರಿ ಹಗ್ಗ, ಕೊಕೊಪಿಟ್, ಗೊಬ್ಬರ ಮೊದಲಾದವುಗಳಿಗೆ ಮೂಲ ಕಚ್ಚಾವಸ್ತುಗಳಾಗುತ್ತವೆ. ಅದರಂತೆಯೇ ತೆಂಗಿನ ಸಿಪ್ಪೆಯ ನಾರುಗಳನ್ನು ಬಳಸಿಕೊಂಡು ಅಲಂಕಾರಿಕ ಹೂ ಕುಂಡಗಳನ್ನು, ಬುಟ್ಟಿಗಳನ್ನು ತಯಾರಿಸಿ ಜನೋಪಯೋಗಿಯಾಗಿಸಬಹುದು ಎಂಬುದನ್ನು ಸಾಧಿಸಿದ್ದಾರೆ ಸಹೋದರಿಯರಿಬ್ಬರು
ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಡಾ.ಮೀರಾ ಮತ್ತು ನಯನ ಸಹೋದರಿಯರು ತೆಂಗಿನ ಸಿಪ್ಪೆಯ ನಾರುಗಳನ್ನು ಬಳಸಿಕೊಂಡು ಅಂದ ಚಂದದ ಅಲಂಕಾರಿಕ ಕುಂಡಗಳನ್ನು ತಯಾರಿಸಿ ಪರಿಸರ ಪ್ರಿಯರ ಗಮನ ಸೆಳೆದಿದ್ದಾರೆ. ಆಯುರ್ವೇದ ವೈದ್ಯೆ ಡಾ.ಮೀರಾ ಅವರು ಈ ಅಲಂಕಾರಿಕ ಕುಂಡಗಳ ತಯಾರಿಯ ಹಿಂದಿರುವ ರೂವಾರಿ.
ಹಳ್ಳಿಯ ಮನೆಗಳಲ್ಲಿ, ಪೇಟೆ ಪಟ್ಟಣಗಳ ಬಹುಮಹಡಿ ಕಟ್ಟಡದಲ್ಲಿರುವ ಮನೆಗಳೆದುರು ಹೂ ಗಿಡ, ಅಲಂಕಾರಿಕ ಗಿಡಗಳನ್ನು ಬೆಳೆಸುವವರಿದ್ದಾರೆ. ಹಿಂದೆಯಿದ್ದ ಮಣ್ಣಿನ ಹಾಗೂ ಸಿಮೆಂಟಿನ ಕುಂಡಗಳ ಬದಲಾಗಿ ಪ್ಲಾಸ್ಟಿಕ್ ಕುಂಡಗಳು ಬಂದಿವೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬೇರೆ ವಸ್ತುಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಕುಂಡಗಳನ್ನು ತಯಾರಿಸಬಹುದೇ ಎಂಬ ಯೋಚನೆ ಬಂದಾಗ ಮೀರಾ ಮಾಹಿತಿಗಾಗಿ ಅಂತರ್ಜಾಲದಲ್ಲಿ ಜಾಲಾಡಿದರು. ತೆಂಗಿನ ಸಿಪ್ಪೆಯಿಂದ ತಯಾರಿಸಬಹುದಾದ ಕೆಲವು ಉತ್ಪನ್ನಗಳ ಮಾಹಿತಿ ಅವರಿಗೆ ಲಭ್ಯವಾಯಿತು. ಅದನ್ನೇ ಆಧರಿಸಿಕೊಂಡು ತೆಂಗಿನ ನಾರಿನಿಂದ ಹೂ ಗಿಡಗಳ ಕುಂಡಗಳ ತಯಾರಿಗೆ ಸಿದ್ಧತೆ ಮಾಡಿಕೊಂಡರು.
ಇದಕ್ಕೆ ಪೂರಕವಾದ ಯಂತ್ರೋಪಕರಣಗಳು ಹಾಗೂ ಕಚ್ಚಾ ಸಾಮಗ್ರಿಗಳ ಶೇಖರಣೆಗಾಗಿ ಸ್ಥಳಾವಕಾಶ ಬೇಕಿತ್ತು. ಕಣ್ಣೂರು ಅಡ್ಯಾರಿನಲ್ಲಿರುವ ತಮ್ಮದಾದ ಆಯುರ್ವೇದ ಗಿಡಮೂಲಿಕೆ ಬೆಳೆಯುವ ಜಾಗದಲ್ಲಿ ಸಂಜೀವಿನಿ ಗಾರ್ಡನ್ ಪ್ರೋಡಕ್ಟ್ಎಂಬ ಹೆಸರಿನಲ್ಲಿ ತಯಾರಿಕಾ ಘಟಕವನ್ನು ಆರಂಭಿಸಲಾಯಿತು. ಒಂದು ವರ್ಷದ ಹಿಂದಷ್ಟೇ ಪ್ರಾರಂಭವಾದ ಈ ಉದ್ಯಮ ಹೊಸತನ ತಂದಿದೆ. ಬಹಳಷ್ಟು ಮಂದಿಯ ಕುತೂಹಲ ಕೆರಳಿಸಿದ ಕುಂಡಗಳು ಈಗ ಕೃಷಿಮೇಳ, ಹಲಸು ಹಬ್ಬ, ಕೃಷಿ ಸಂತೆ ಮೊದಲಾದ ಕಡೆಗಳಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ
ಪರಿಸರ ಸ್ನೇಹಿ ಕುಂಡಗಳು
ತೆಂಗಿನ ನಾರಿನ ಕುಂಡಗಳು ಹೆಚ್ಚು ಪರಿಸರ ಸ್ನೇಹಿ. ರಾಸಾಯನಿಕ ಹಾಗೂ ಹಾನಿಕಾರಕ ಅಂಶಗಳಿಲ್ಲ. ಹಗುರವಾಗಿದ್ದು ಮನೆಯ ಯಾವ ಮೂಲೆಗೂ ಸ್ಥಳಾಂತರ ಮಾಡಬಹುದು. ಮಣ್ಣಿನ ಅವಶ್ಯಕತೆಯಿಲ್ಲ. ಕೊಕೊಪಿಟ್, ಎರೆ ಗೊಬ್ಬರ, ದ್ರವ ಗೊಬ್ಬರಗಳನ್ನು ಬಳಸಿಕೊಂಡು ಗಿಡಗಳನ್ನು ಬೆಳೆಸಬಹುದು. ನೀರಿನ ಪ್ರಮಾಣವೂ ಕಡಿಮೆ. ನೀರು ಚಿಮುಕಿಸಿದರೆ ಸಾಕು. ತೇವಾಂಶವನ್ನು ಬಹಳಷ್ಟು ದಿನಗಳವರೆಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.
ತೆಂಗಿನ ಸಿಪ್ಪೆಯ ನಾರಿನ ಕುಂಡಗಳು ನಾಲ್ಕು ಮಾದರಿಗಳಲ್ಲಿ ಲಭ್ಯವಿದೆ.4,6,8,10 ಇಂಚುಗಳ ವ್ಯಾಸವುಳ್ಳ ಸಣ್ಣ ಹಾಗೂ ದೊಡ್ಡ ಕುಂಡಗಳನ್ನು ತಯಾರಿಸಲಾಗುತ್ತಿದೆ. ತೆಂಗಿನ ನಾರಿನ ಈ ಕುಂಡದಲ್ಲಿ ಹಲವಾರು ಬಗೆಯ ಗಿಡ ಬಳ್ಳಿಗಳನ್ನು ಬೆಳೆಸಬಹುದು. ವೀಳ್ಯದೆಲೆ, ತುಳಸಿ, ಲೋಳೆಸರ ಮೊದಲಾದ ಔಷಧಿ ಸಸ್ಯಗಳು, ಕೊತ್ತಂಬರಿ, ಮೆಂತೆ, ಪುದಿನ, ಪಾಲಕ್, ಸಬ್ಬಕ್ಕಿ ಮೊದಲಾದ ತರಕಾರಿ ಹಾಗೂ ಅಂಥೋರಿಯ, ಆರ್ಕೆಡ್, ಸೇವಂತಿಗೆ, ಲಿಲ್ಲಿ, ದುಂಡು ಮಲ್ಲಿಗೆ, ಗೊಂಡೆ ಹೂವು ಮೊದಲಾದಗಳನ್ನು ಬೆಳೆಸಬಹುದು
ಡಾ. ಮೀರಾ ಅವರ ಮನದಾಳದಲ್ಲಿ ಹುಟ್ಟಿಕೊಂಡ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸಲು ಸಹೋದರಿ ನಯನ ಅವರು ಕೈಜೋಡಿದ್ದಾರೆ. ಅಲ್ಲದೆ ಪರಿಸರ ಸ್ನೇಹಿ ಉದ್ಯಮದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ನಯನ ಅವರ ಪತಿ ಬಾಲಕೃಷ್ಣ ರಾವ್ ಅವರು ಪ್ರೋತ್ಸಾಹಿಸುತ್ತಿದ್ದಾರೆ.
ತಮ್ಮ ಪರಿಸರಲ್ಲೇ ಸಿಗುವ ತೆಂಗಿನ ಸಿಪ್ಪೆಯನ್ನು ಕಚ್ಚಾ ವಸ್ತುಗಳನ್ನಾಗಿ ಬಳಸಿಕೊಂಡು ತಯಾರಾಗುವ ಈ ಉತ್ಪನ್ನಗಳಿಗೆ ಬೇಡಿಕೆ ಈಗ ಹೆಚ್ಚಾಗುತ್ತಿದೆ. ಸಂಜೀವಿನಿ ಗಾರ್ಡನ್ ಪ್ರೋಡಕ್ಟ್ ಘಟಕವು ಕೆಲ ಮಂದಿಗೆ ಉದ್ಯೋಗಾವಕಾಶವನ್ನು ನೀಡಿದೆ. ನಾರಿನ ಕುಂಡಗಳಲ್ಲಿ ಇನ್ನಷ್ಟು ಮಾದರಿಗಳನ್ನು ಮತ್ತು ಬೇರೆ ಬೇರೆ ಉತ್ಪನ್ನಗಳ ತಯಾರಿಯ ಆಶಯವೂ ಆ ಸಹೋದರಿಯರಲ್ಲಿ ಇದೆ. ನವೀನ್ ಕುಮಾರ್ ಅವರು ತಯಾರಿಕೆ ಮತ್ತು ಮಾರುಕಟ್ಟೆ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಮಾಹಿತಿಗೆ 7019960850, 973103961
-ರಾಧಾಕೃಷ್ಣ ತೊಡಿಕಾನ