spot_img
Thursday, September 19, 2024
spot_imgspot_img
spot_img
spot_img

ನೌಕಾ ಕನ್‌ಟೈನರಿನಲ್ಲಿ ಕೇಸರಿ ಕೃಷಿ :ಉದ್ಯೋಗ ತೊರೆದು ಕೇಸರಿ ಕೃಷಿ ಮಾಡಿದ ಯುವಕನ ಸಾಹಸವಿದು!

«ಅಡ್ಡೂರು ಕೃಷ್ಣ ರಾವ್

ಭಾರತದ ಸಾಂಬಾರ ಪದಾರ್ಥಗಳಲ್ಲಿ ಕೇಸರಿಗೆ ಬಂಗಾರದ ಬೆಲೆ. ಇದಕ್ಕೆ ಬಹಳ ಬೇಡಿಕೆಯಿದ್ದರೂ ಇದರ ಉತ್ಪಾದನೆ ಕಾಶ್ಮೀರದ ಒಂದು ಸಣ್ಣ ವಲಯಕ್ಕೆ ಸೀಮಿತ. ಈಗ ಶೈಲೇಶ್ ಮೋದಕ್ ಎಂಬ ಸಾಫ್ಟ್-ವೇರ್ ಇಂಜಿನಿಯರ್ ಪುಣೆಯಲ್ಲಿ ಇದರ ಕೃಷಿ ಮಾಡಬಹುದೆಂದು ತೋರಿಸಿದ್ದಾರೆ.

ಹದಿಮೂರು ವರುಷ ಉದ್ಯೋಗ ಮಾಡುತ್ತಾ ಪ್ರತಿ ತಿಂಗಳೂ ವೇತನ ಪಡೆಯುತ್ತಿದ್ದ ಶೈಲೇಶ್ ಮೋದಕ್, ಅದನ್ನು ತೊರೆದು ಕೇಸರಿ ಕೃಷಿ ಶುರು ಮಾಡಿದ್ದೊಂದು ಸಾಹಸ. ಅವರು ನೌಕಾ ಕನ್-ಟೈನರಿನಲ್ಲಿ ಜಲಕೃಷಿ (ಹೈಡ್ರೋಫೋನಿಕ್ಸ್) ವಿಧಾನ ಅನುಸರಿಸಿ ಕೇಸರಿ ಬೆಳೆಯುತ್ತಿದ್ದಾರೆ. ಮೊದಲ ಕೇಸರಿ ಬೆಳೆಯಲ್ಲಿ ಅವರ ಇಳುವರಿ ಕೇವಲ 875 ಗ್ರಾಮ್. ಅದನ್ನು ಗ್ರಾಮ್‌ಗೆ ರೂ. 500 ದರದಲ್ಲಿ ಮಾರಲು ಅವರಿಗೆ ಸಾಧ್ಯವಾಯಿತು.

ನಾಸಿಕದ ಮಧ್ಯಮ ವರ್ಗದ ಕುಟುಂಬದವರಾದ ಶೈಲೇಶ್ ಮತ್ತು ಅವರ ಸೋದರರಿಗೆ ಬಾಲ್ಯದಿಂದಲೂ ಒಳ್ಳೆಯ ಉದ್ಯೋಗ ಗಳಿಸಿ ಜೀವನ ಸಾಗಿಸಬೇಕೆಂದು ಹೆತ್ತವರು ಕಲಿಸಿದ್ದರು. “ಹಾಗಾಗಿ, ಒಳ್ಳೆಯ ಉದ್ಯೋಗ ತೊರೆದು, ಸ್ವ-ಉದ್ಯೋಗ ಶುರು ಮಾಡುವುದು ಬದುಕಿನ ದೊಡ್ಡ ಸವಾಲಾಗಿತ್ತು” ಎನ್ನುತ್ತಾರೆ ಶೈಲೇಶ್.

ಪುಣೆ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮುಗಿಸಿದ ಶೈಲೇಶ್ ಇಸಿಎಸ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದರು. “ಆಗ ನಾನು ಕೆಂಬೋಡಿಯಾ, ಮಲೇಷ್ಯಾ, ಉಗಾಂಡಾ ಇನ್ನಿತರ ದೇಶಗಳಿಗೆ ಹೋಗಬೇಕಾಯಿತು. ಅದರಿಂದಾಗಿ ನಾನು ಬಹಳಷ್ಟು ಆತ್ಮವಿಶ್ವಾಸ ಗಳಿಸಿದೆ. ಅನಂತರ ಬಾರ್-ಕ್ಲೇಶ್ ಸೇರಿ, ಐವತ್ತು ಜನರ ತಂಡಕ್ಕೆ ಮುಖ್ಯಸ್ಥನಾದೆ. ಅಲ್ಲಿ ನನಗೆ ಭಡ್ತಿ ಸಿಗುವುದರಲ್ಲಿತ್ತು. ಆದರೆ ನನಗ್ಯಾಕೋ ಎಲ್ಲವೂ ಸರಿಯಿಲ್ಲ ಅನಿಸತೊಡಗಿತು” ಎಂದು ತಿಳಿಸುತ್ತಾರೆ ಶೈಲೇಶ್.

ಅಂತೂ 2016ರಲ್ಲಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದರು ಶೈಲೇಶ್. ಅನಂತರ ಶುರು ಅವರ ಹುಡುಕಾಟ – ಸ್ವಉದ್ಯೋಗಿಯಾಗುವ ಕನಸು ಹೊತ್ತು. ಒಮ್ಮೆ ರೇಡಿಯೋ ಸಂದರ್ಶನವೊಂದರಲ್ಲಿ ಜೇನ್ನೊಣಗಳು ನಾಶವಾದರೆ ಜಗತ್ತಿಗೆ ಅಪಾಯ ಕಾದಿದೆ ಎಂಬ ಮಾಹಿತಿ ಕೇಳಿಸಿಕೊಂಡರು. ಆಗ ಅವರಿಗೆ, ರೈತರ ಹೊಲಗಳಿಗೆ ಜೇನ್ನೊಣಗಳ ಪೆಟ್ಟಿಗೆ-ಕುಟುಂಬಗಳನ್ನು ಬಾಡಿಗೆಗೆ ಕೊಡುವ ಐಡಿಯಾ ಮಿಂಚಿತು. ಅದನ್ನು ಶುರು ಮಾಡಿಯೇ ಬಿಟ್ಟರು ಶೈಲೇಶ್.

ಆದರೆ, ಕೆಲವೇ ತಿಂಗಳುಗಳಲ್ಲಿ ಅವರು ಅದನ್ನು ಕೈಬಿಡಬೇಕಾಯಿತು – ಕೆಲಸಗಾರರು ಕೊರತೆಯಿಂದಾಗಿ. ಇವರಿಂದ ತರಬೇತಿ ಪಡೆದು ಜೇನು-ಕುಟುಂಬಗಳ ನಿರ್ವಹಣೆ ಮಾಡಲು ಕಲಿತ ಕೆಲಸಗಾರರು ಒಂದೆರಡು ವಾರಗಳಲ್ಲೇ ಜೇನ್ನೊಣಗಳಿಂದ ಕಚ್ಚಿಸಿಕೊಂಡ ನಂತರ ಕೆಲಸ ತೊರೆದು ಹೋಗುತ್ತಿದ್ದರು.

ಈ ಹಂತದಲ್ಲಿ ಹಲವಾರು ರೈತರ ಹೊಲಗಳಿಗೆ ಭೇಟಿಯಿತ್ತು ಕೃಷಿಯ ಬಗ್ಗೆ ಸಾಕಷ್ಟು ತಿಳಿದುಕೊಂಡರು ಶೈಲೇಶ್. ಕೊನೆಗೆ ಕೃಷಿಯಲ್ಲಿ ತೊಡಗಲು ನಿರ್ಧರಿಸಿದ ಶೈಲೇಶರಿಗೊಂದು ಆತಂಕ: ಹವಾಮಾನ ಅವಲಂಬಿಸಿದ ಕೃಷಿಯಲ್ಲಿ ಸೋಲಿನ ಸಾಧ್ಯತೆ ಕಡಿಮೆ ಮಾಡುವ ಬಗೆ ಹೇಗೆ? ಈ ನಿಟ್ಟಿನಲ್ಲಿ ಅಧ್ಯಯನಕ್ಕೆ ಶುರುವಿಟ್ಟ ಶೈಲೇಶರಿಗೆ 2018ರಲ್ಲಿ ಮೊಟ್ಟಮೊದಲ ಬಾರಿ ಜಲಕೃಷಿ ಬಗ್ಗೆ ತಿಳಿದಾಗ ಮಿಂಚು ಹೊಡೆದಂತಾಯಿತು.

ಅನಂತರ, ಜಲಕೃಷಿ ಬಗ್ಗೆ ಮಾಹಿತಿ ಸಂಗ್ರಹಕ್ಕೆ ತೊಡಗಿದರು ಶೈಲೇಶ್ – ಪುಸ್ತಕಗಳನ್ನು ಓದುವುದು, ಇಂಟರ್-ನೆಟ್‌ನಲ್ಲಿ ಮಾಹಿತಿ ಪಡೆಯುವುದು. ಈ ನಡುವೆ ಕೆಂಬೊಡಿಯಾ ಮತ್ತು ವಿಯೆಟ್‌ನಾಮ್ ದೇಶಗಳಿಗೂ ಭೇಟಿಯಿತ್ತು ಇನ್ನಷ್ಟು ಮಾಹಿತಿ ಸಂಗ್ರಹಿಸಿದರು. ಹೀಗೆ ಒಂದು ವರುಷ ಜಲಕೃಷಿ ಬಗ್ಗೆ ಅಧ್ಯಯನ ಮಾಡಿದರು ಶೈಲೇಶ್.

ಕೊನೆಗೆ, ನೌಕಾ (ಷಿಪ್ಪಿಂಗ್) ಕನ್‌ಟೈನರಿನಲ್ಲಿ ಜಲಕೃಷಿ ಮಾಡಲು ಅವರು ನಿರ್ಧರಿಸಿದರು. ಯಾಕೆಂದರೆ, ಅದರೊಳಗೆ ಉಷ್ಣತೆ, ತೇವಾಂಶ ಸಹಿತವಾಗಿ “ಹವಾಗುಣ”ವನ್ನು ನಿಯಂತ್ರಿಸಲು ಸಾಧ್ಯ. ಮುಂಬೈಗೆ ಹೋಗಿ ರೂಪಾಯಿ ಐದು ಲಕ್ಷ ತೆತ್ತು ನೌಕಾ ಕನ್‌ಟೈನರ್ ಖರೀದಿಸಿ, ಅದನ್ನು ಪುಣೆಗೆ ತರಿಸಿದರು.

ಜಲಕೃಷಿಯ ಅನುಕೂಲಗಳ ಬಗ್ಗೆ ಶೈಲೇಶ್ ತಿಳಿಸುವ ಮಾಹಿತಿ: ಈ ವಿಧಾನದಲ್ಲಿ ಮಣ್ಣಿನ ಬಳಕೆಯೇ ಇಲ್ಲ. ಸಸಿಗಳಿಗೆ ದ್ರಾವಣದ ಮೂಲಕ ಪೋಷಕಾಂಶಗಳನ್ನು ಒದಗಿಸಲಾಗುತ್ತದೆ. ಸಸಿಗಳ ಬೇರುಗಳು ಗಾಳಿಯಲ್ಲಿ ನೇತಾಡುತ್ತಾ ಇರುತ್ತವೆ. ಇದರಲ್ಲಿ ಹವಾಗುಣ ನಿಯಂತ್ರಿಸಲು ಸಾಧ್ಯವಿರುವ ಕಾರಣ ವರುಷವಿಡೀ ಬೆಳೆಗಳನ್ನು ಬೆಳೆಸಬಹುದು. ಅದಲ್ಲದೆ, ಸಾಮಾನ್ಯ ಕೃಷಿಗೆ ಹೋಲಿಸಿದಾಗ, ಜಲಕೃಷಿಗೆ ಅಗತ್ಯವಾದ ನೀರಿನ ಪರಿಮಾಣ ಶೇಕಡಾ 95ರಷ್ಟು ಕಡಿಮೆ. ಆರಂಭದಲ್ಲಿ ಶೈಲೇಶ್ ಲೆಟ್ಯೂಸ್, ಸ್ಟ್ರಾಬೆರಿ, ಟೊಮೆಟೊಗಳನ್ನು ಬೆಳೆದರು.

ಯಾವ ರೊಕ್ಕದ ಬೆಳೆ ಬೆಳೆಸಬಹುದೆಂದು ಶೈಲೇಶ್ ಪರಿಶೀಸುತ್ತಿದ್ದಾಗ, ಅವರು ಗಮನಿಸಿದ ಒಂದು ಸಂಗತಿ: ನಮ್ಮ ದೇಶದಲ್ಲಿ ಬಳಕೆಯಾಗುವ ಶೇಕಡಾ 95ರಷ್ಟು ಕೇಸರಿ ಕಾಶ್ಮೀರದ ಪಾಂಪೋರ್ ಎಂಬ ಒಂದೇ ಪ್ರದೇಶದಿಂದ ಬರುತ್ತಿದೆ. ಕೇಸರಿಗೆ ಬಹಳ ಬೇಡಿಕೆಯಿದೆ ಆದರೆ ಪೂರೈಕೆ ಬಹಳ ಕಡಿಮೆಯಿದೆ. ಇದರ ಕೃಷಿಯ ಬಹುದೊಡ್ಡ ಸಮಸ್ಯೆ ಬೀಜಗಳ ಪೂರೈಕೆಯದ್ದು. “ನಾನು ಆರ್ಡರ್ ಮಾಡಿದ ಬೀಜದ ಕೇವಲ ಶೇಕಡಾ 30ರಷ್ಟು ಮಾತ್ರ ಸುಸ್ಥಿತಿಯಲ್ಲಿ ಕೈಸೇರಿತು” ಎಂದು ತಿಳಿಸುತ್ತಾರೆ ಶೈಲೇಶ್.

ಅಂತೂ ಹಲವು ತಿಂಗಳ ಅಧ್ಯಯನ ಮತ್ತು ಅನೇಕ ಕೇಸರಿ ಕೃಷಿಕರ ಜೊತೆ ಅನುಭವ ಹಂಚಿಕೆಯ ನಂತರ, ಕನ್‌ಟೈನರಿನ ಕೇವಲ 160 ಚದರಡಿ ಜಾಗದಲ್ಲಿ ಕೇಸರಿ ಸಸಿಗಳನ್ನು ಬೆಳೆಸಿದರು ಶೈಲೇಶ್. ಮೊದಲ ಕೇಸರಿ ಹೂ ಅರಳಿದಾಗ ಅವರಿಗೆ ಖುಷಿಯೋ ಖುಷಿ. “ಹೀಗೆ ನಿಯಂತ್ರಿತ ಹವಾಮಾನದಲ್ಲಿ ಕೇಸರಿ ಸಸಿಗಳನ್ನು ಬೆಳೆಸಿದಾಗ ಹೂಗಳು ಅರಳುತ್ತವೇಯೇ?” ಎಂಬ ಅವರ ಆತಂಕ ಕೊನೆಗೂ ನಿವಾರಣೆಯಾಗಿತ್ತು. ಕೇಸರಿ ಕೃಷಿಗಾಗಿ ಅವರು ಮಾಡಿದ ಒಟ್ಟು ಹೂಡಿಕೆ ರೂಪಾಯಿ 10 ಲಕ್ಷ. ಕೇಸರಿ ಕೃಷಿಯಿಂದ ಹೂಡಿಕೆಯ ಅರ್ಧದಷ್ಟನ್ನು ಕೆಲವೇ ತಿಂಗಳುಗಳಲ್ಲಿ ಹಿಂಪಡೆಯಲು ಅವರಿಗೆ ಸಾಧ್ಯವಾಗಿತ್ತು.

ಶೈಲೇಶರ ಮುಂದಿನ ಯೋಜನೆ, ಜಲಕೃಷಿ ವಿಧಾನದಲ್ಲಿ ಕೇಸರಿ ಕೃಷಿಯನ್ನು ಸರಳವಾಗಿಸುವುದು ಮತ್ತು ಅದನ್ನು ಆಸಕ್ತರಿಗೆಲ್ಲ ತಿಳಿಸುವುದು. ಒಂದು ಪುಟ್ಟ ಕೋಣೆಯಲ್ಲಿ ಆಸಕ್ತರೆಲ್ಲರೂ ಕೇಸರಿ ಕೃಷಿ ಮಾಡುವ ಅವರ ಕನಸು ನನಸಾಗಲಿ ಎಂದು ಹಾರೈಸೋಣ

ಬರಹ «ಅಡ್ಡೂರು ಕೃಷ್ಣ ರಾವ್

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group