ರೇಷ್ಮೆ ಎಂದ ಕೂಡಲೇ ಮಿರಿಮಿರಿ ಮಿರುಗುವ ರೇಷ್ಮೆ ಬಟ್ಟೆಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ ಈ ಬಟ್ಟೆಯ ಹಿಂದೆ ರೇಷ್ಮೆ ಕೃಷಿಕನಿಂದ ಪ್ರಾರಂಭಿಸಿ ಬಟ್ಟೆ ಉತ್ಪಾದನೆ ಮತ್ತು ಮಾರಾಟದವರೆಗೆ ಹಲವಾರು ದುಡಿಯುವ ಕೈಗಳಿವೆ. ಶ್ರಮಶಕ್ತಿಯಿದೆ. ರೇಷ್ಮೆ ಹುಳುವಿನ ಮಾಯಾಜಾಲದ ಎಳೆಗಳನ್ನು ಬಳಸಿಕೊಂಡು ಬದುಕುವ ಲಕ್ಷಾಂತರ ಕುಟುಂಬದ ಔನ್ನತ್ಯದ ಕಥೆಯಿದೆ.
ರೇಷ್ಮೆ ಕೃಷಿ ಕೆಲವರಿಗೆ ಉದ್ಯೋಗ, ಮತ್ತೆ ಕೆಲವರಿಗೆ ಮುಖ್ಯ ಕಸುಬು, ಹಲವರಿಗೆ ಉಪಕಸುಬು. ಇನ್ನೊಂದಷ್ಟು ಮಂದಿಗೆ ಉದ್ಯಮ-ವ್ಯವಹಾರ. ಹಿಪ್ಪು ನೇರಳೆ-ರೇಷ್ಮೆ ಹುಳು ಸಾಕಾಣಿಕೆ, ರೇಷ್ಮೆ ಗೂಡು ಬಿಚ್ಚಣಿಕೆ, ನೇಕಾರಿಕೆ ಹೀಗೆ ಹಲವು ಮಜಲುಗಳಲ್ಲಿ ತೆರೆದುಕೊಳ್ಳುವ ನಾನಾ ಹಂತಗಳು, ನಾನಾ ಮುಖಗಳು, ನಿರಂತರ ಚಟುವಟಿಕೆಗಳು ಹಲವರನ್ನು ಈ ಕ್ಷೇತ್ರದತ್ತ ಗಮನ ಸೆಳೆಯುವಂತೆ ಮಾಡಿದೆ. ಇತ್ತೀಚೆಗಿನ ದಿನಗಳಲ್ಲಿ ಇತರ ವಾಣಿಜ್ಯ ಬೆಳೆಗಳಿಂತ ಹೆಚ್ಚು ರೈತರನ್ನು ಈ ಕೃಷಿ ಆಕರ್ಷಿಸಿಸುತ್ತಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಸೋಮನಹಳ್ಳಿ ಪುಟ್ಟ ಹಳ್ಳಿ. ಕೃಷಿಕ ಸಮುದಾಯವೇ ಹೆಚ್ಚು. ಕೃಷಿಯೇ ಇವರ ಜೀವಾಳ. ಈ ಪ್ರದೇಶದಲ್ಲಿ ಭತ್ತ, ರಾಗಿ, ಜೋಳ, ಶುಂಠಿ, ಆಲೂಗಡ್ಡೆ ಹಾಗೂ ಇತರ ತರಕಾರಿ ಕೃಷಿಯನ್ನೇ ಅವಲಂಬಿಸಿಕೊಂಡು ಬಂದವರು. ಕೆಲ ವರ್ಷಗಳಿಂದ ರೇಷ್ಮೆ ಮೆಲ್ಲಮೆಲ್ಲನೆ ಇವರ ಕೃಷಿ ಕ್ಷೇತ್ರವನ್ನು ಆವರಿಸಿಕೊಳ್ಳತೊಡಗಿದೆ.
ಸೋಮನ ಹಳ್ಳಿಯ ಹರೀಶ್ ಮತ್ತು ಸತೀಶ್ ಸಹೋದರರು ತಮ್ಮ ಸಾಂಪ್ರದಾಯಿಕ ಕೃಷಿಯೊಂದಿಗೆ ಇತರ ಕೃಷಿಯನ್ನು ಮಾಡುವುದರತ್ತ ಮನ ಮಾಡಿದಾಗ ಅವರನ್ನು ಆಕರ್ಷಿಸಿದ್ದು ರೇಷ್ಮೆ ಕೃಷಿ. ತಮ್ಮ ಖಾಲಿ ಜಾಗದಲ್ಲಿ ರೇಷ್ಮೆ ಕೃಷಿಗಾಗಿ ಹಿಪ್ಪು ನೇರಳೆ ನಾಟಿ ಮಾಡಿದರು. ಹುಲುಸಾಗಿ ಬೆಳೆದ ಹಿಪ್ಪು ನೇರಳೆ ಹಸಿರೆಲೆಯಿಂದ ತುಂಬಿಕೊಂಡಿತು. ರೇಷ್ಮೆ ಬೆಳೆೆಗೆ ಅನುಕೂಲವಾದ ಕಟ್ಟಡವೂ ತಲೆಯೆತ್ತಿತು. ಮೊದಲ ಇಳುವರಿ ಅವರ ಕೈಬಿಡಲಿಲ್ಲ. ರೇಷ್ಮೆಯಿಂದ ಯಶಸ್ಸು ಪಡೆದ ಹರೀಶ್ ಅವರು ಈಗ ಪ್ರಗತಿಪರ ಕೃಷಿಕರು. ಸ್ಥಳೀಯ ಇತರ ರೇಷ್ಮೆ ಬೆಳೆಗಾರರಿಗೆ ಅವರ ಕೃಷಿ ಮಾದರಿಯಾಗಿ ರೂಪುಗೊಂಡಿದೆ.
ಅವರು ಒಂದೂವರೆ ಎಕರೆ ಹಾಗೂ ಅವರ ಸಹೋದರ ಸತೀಶ್ ಒಂದೂವರೆ ಎಕರೆ ಹಿಪ್ಪುನೇರಳೆ ಬೆಳೆಸುತ್ತಿದ್ದಾರೆ. ಹರೀಶ್ ಅವರು ವರ್ಷದಲ್ಲಿ 8-9 ಬೆಳೆ ತೆಗೆಯುತ್ತಿದ್ದಾರೆ. ಒಟ್ಟು 1680 ಮೊಟ್ಟೆಗಳಿಂದ 1322 ಕೆಜಿ ಗೂಡು ಉತ್ಪಾದನೆ ಮಾಡುತ್ತಿದ್ದಾರೆ. 1 ಕೆಜಿಗೆ ರೂ.1177 ಧಾರಣೆ ದೊರೆತಿದೆ. ವರ್ಷವೊಂದಕ್ಕೆ ಸುಮಾರು 15,56,000 ಆದಾಯ ಪಡೆದಿದ್ದರೆ ಇಲಾಖೆಯಿಂದ ಗೂಡಿನ ಪ್ರೋತ್ಸಾಹ ಧನವಾಗಿ 1, 33,200 ರೂ. ನೀಡಿದೆ. ಈ ಮೂಲಕ ಉತ್ತಮ ಆದಾಯವನ್ನು ಪಡೆದುಕೊಂಡಿದ್ದಾರೆ. ಒಬ್ಬ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ ಪಡೆಯಬಹುದಾದ ಆದಾಯವನ್ನು ಅವರು ಈ ರೇಷ್ಮೆ ಬೆಳೆಯಲ್ಲಿ ಗಳಿಸಿದ್ದಾರೆ ಎಂದರೆ ಅಚ್ಚರಿಯಾದೀತು. ಶ್ರದ್ಧೆ, ಆಸಕ್ತಿ, ಕಾಯಕ ನಿಷ್ಠೆಯಿಂದ ಯಶಸ್ಸಿನ ಹಾದಿ ಕಂಡಿದ್ದಾರೆ.
ಅವರ ಸಾಧನೆಯನ್ನು ಗುರುತಿಸಿ ಸರಕಾರ ಪ್ರಗತಿಪರ ರೇಷ್ಮೆ ಕೃಷಿಕರೆಂದು ಸನ್ಮಾನಿಸಿದೆ.
ಹರೀಶ ಅವರ ರೇಷ್ಮೆ ಕೃಷಿ ನೋಡಿ ಪ್ರೇರಿತರಾಗಿ ಈ ಹಳ್ಳಿಯ ಸುತ್ತಮುತ್ತಲಿನ ಕೆಲ ಕೃಷಿಕರು ರೇಷ್ಮೆ ಬೆಳೆಯಲು ಮುಂದಾಗಿದ್ದಾರೆ. ಮೋಹನ್, ಸೋಮಶೇಖರ್, ಸೈಯದ್ ಜೀಶನ್, ನಝೀರ್‌ಸಾಬ್, ಶಿವಣ್ಣ, ಎಂ.ಎಸ್.ಖಾನ್, ಶಿವರಾಜ್, ಪಾಪೇ ಗೌಡ, ರುದ್ರೇ ಗೌಡ, ರೆಹಮಾನ್ ಖಾನ್ ಮೊದಲಾದವರು ರೇಷ್ಮೆ ಕೃಷಿಯತ್ತ ಒಲವು ಮೂಡಿಸಿಕೊಂಡಿದ್ದಾರೆ. ಅಲ್ಲದೆ ಒಂದೂವರೆ ಎಕರೆಯಿಂದ ಮೂರು ಎಕರೆವರೆಗೂ ರೇಷ್ಮೆ ಕೃಷಿಗೆ ಹಿಪ್ಪು ನೇರಳೆ ಬೆಳೆದಿದ್ದಾರೆ.
ಕಡಿಮೆ ಬಂಡವಾಳ, ಕಡಿಮೆ ಶ್ರಮ ಶಕ್ತಿಯನ್ನು ಬೇಡುವ ಈ ರೇಷ್ಮೆ ಕೃಷಿಗೆ ಇಲಾಖೆಯು ಸಹಾಯಧನ, ಪ್ರೋತ್ಸಾಹಧನಗಳನ್ನು ನೀಡುತ್ತಾ ಬಂದಿದೆ. ಅರಕಲಗೂಡಿನ ರೇಷ್ಮೆ ಸಹಾಯಕ ನಿರ್ದೇಶಕ ಸೀತಾರಾಮ ಭಟ್ಟರ ಮಾರ್ಗದರ್ಶನ, ಇಲಾಖೆಯಿಂದ ಆರ್ಥಿಕ ನೆರವು ನೀಡಿರುವುದನ್ನು ಸ್ಮರಿಸಿಕೊಳ್ಳುವ ಹರೀಶ್ ರೇಷ್ಮೆ ಇಲಾಖೆಯ ಹಲವು ಸೌಲಭ್ಯ ಪಡೆದಿರುವುದನ್ನು ನೆನಪಿಸಿಕೊಳ್ಳತ್ತಾರೆ.
ಹಿಪ್ಪು ನೇರಳೆ ನಾಟಿ
ಹಿಪ್ಪು ನೇರಳೆಯಲ್ಲಿ ಬಹಳಷ್ಟು ತಳಿಗಳಿದ್ದರೂ ಅಧಿಕ ಇಳುವರಿ ನೀಡುವ ವಿ-೧ ತಳಿಗೆ ಈಗ ಭಾರೀ ಬೇಡಿಕೆ. ಯಾವ ಮಣ್ಣಿಗೂ ಅತ್ಯಂತ ಸುಲಭವಾಗಿ ಹೊಂದಿಕೊಳ್ಳುವ ಸಮೃದ್ಧವಾಗಿ ಹಸಿರೆಲೆಗಳನ್ನು ನೀಡುವ ಈ ಹಿಪ್ಪುನೇರಳೆ ತಳಿ ಹೆಚ್ಚು ಜನಪ್ರಿಯ. ಸಾಲಿನಿಂದ ಸಾಲಿಗೆ ೮ ಅಡಿ ಅಂತರ ಹಾಗೂ ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತರದಲ್ಲಿ ನಾಟಿ ಮಾಡಬಹುದು. ಒಮ್ಮೆ ನಾಟಿ ಮಾಡಿದರೆ ಇಪ್ಪತ್ತು-ಇಪ್ಪತ್ತೈದು ವರ್ಷಗಳ ವರೆಗೂ ಸೊಪ್ಪಿನ ಇಳುವರಿ ಪಡೆಯಬಹುದು. ನೀರು-ಗೊಬ್ಬರ ಅತಿಯಾಗಿ ಬೇಡದು. ಒಣ ಭೂಮಿಯಲ್ಲಿಯೂ ತಮ್ಮ ಬೇರುಗಳನ್ನು ಭದ್ರಗೊಳಿಸುವ ಶಕ್ತಿ ಅದಕ್ಕಿದೆ.
ಒಂದು ಎಕರೆಗೆ ೨೮೦೦೦ ಕೆಜಿ ಸೊಪ್ಪು ಪಡೆಯಬಹುದು. ಒಂದು ಬೆಳೆಯಲ್ಲಿ ನೂರು ಮೊಟ್ಟೆಗೆ ೧೨೦೦ ಕೆಜಿ ಹಿಪ್ಪುನೇರಳೆ ಸೊಪ್ಪು ಅಗತ್ಯ. ಒಂದು ಎಕರೆ ಹಿಪ್ಪುನೇರಳೆ ಬೆಳೆಯಿದ್ದರೆ ಒಂದು ಬೆಳೆಗೆ ೨೫೦-೩೦೦ ರೇಷ್ಮೆ ಮೊಟ್ಟೆಗಳನ್ನು ಸಾಕಬಹುದು ಎನ್ನುತ್ತಾರೆ ಅರಕಲಗೂಡು ತಾಲೂಕಿನ ರೇಷ್ಮೆ ಸಹಾಯಕ ನಿರ್ದೇಶಕ ಸೀತಾರಾಮ ಭಟ್ಟರು.
ತ್ಯಾಜ್ಯಗಳು
ರೇಷ್ಮೆ ಕೃಷಿಯಲ್ಲಿ ತ್ಯಾಜ್ಯ ನಿರುಪಯುಕ್ತವಲ್ಲ. ರೇಷ್ಮೆ ಹುಳುಗಳು ತಿಂದುಳಿದ ತ್ಯಾಜ್ಯಗಳು ಗೊಬ್ಬರವನ್ನಾಗಿ ಮಾರ್ಪಡಿಸಬಹುದು. ತ್ಯಾಜ್ಯಗಳನ್ನು ಗುಂಡಿ ತೋಡಿ ಪದರ ಪದರವಾಗಿ ಹಾಕಿ ಕೊಳೆಯಲು ಬಿಟ್ಟು ಗೊಬ್ಬರವಾಗಿಸಿ ಮತ್ತೆ ಗಿಡಗಳಿಗೆ ಹಾಕುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಇದರಿಂದ ರಾಸಾಯಿನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬಹುದು. ರಾಸಾಯಿನಿಕ ಗೊಬ್ಬರ ಹಾಕುವುದಾದಲ್ಲಿ ಎಕ್ರೆಗೆ ೧೪೦ ಕೆಜಿ ಸಾರಜನಕ, ೭೦ಕೆಜಿ ರಂಜಕ ಹಾಗೂ ೪೦ಕೆಜಿ ಪೋಟಾಷ್ ನೀಡಬಹುದು.
ರೇಷ್ಮೆ ಕೃಷಿಗೆ ಬಳಸಿದ ನಂತರ ಉಳಿಕೆಯಾದ ಹಿಪ್ಪು ನೇರಳೆ ಎಲೆಗಳು ಕುರಿ-ಮೇಕೆ ಸಾಕಾಣಿಕೆಗೆ, ಹೈನುಗಾರಿಕೆಗೆ ಪೂರಕ.
ರೇಷ್ಮೆ ಕೃಷಿ ಉಪಕರಣಗಳು, ತಂತ್ರಜ್ಞಾನಗಳು, ಹಿಂದಿಗಿAತ ಹೆಚ್ಚು ಸುಧಾರಣೆ ಕಂಡಿವೆ. ಹಿಂದಿನ ದೊಡ್ಡದಾದ ರೇಷ್ಮೆ ಹುಳು ಸಾಕಾಣಿಕೆಯ ಚಂದ್ರಿಕೆಗಳು ಈಗಿಲ್ಲ. ಹಗುರ ಹಾಗೂ ಸುಲಭವಾಗಿ ಸ್ಥಳಾಂತರಿಸಲು ಅನುಕೂಲವಾಗುವ ಪ್ಲಾಸ್ಟಿಕ್ ಚಂದ್ರಿಕೆಗಳು ಬಂದಿವೆ. ರೇಷ್ಮೆ ಸಾಕಾಣಿಕೆ ಕಟ್ಟಡಕ್ಕೆ ಸರಕಾರದ ನೆರವು ದೊರೆಯುವುದರಿಂದ ಸುಸಜ್ಜಿತವಾದ ಕಟ್ಟಡ ನಿರ್ಮಿಸಿಕೊಳ್ಳಬಹುದು.. ರೇಷ್ಮೆ ಇಲಾಖೆಯಿಂದ ೬೦೦ ಚದರಡಿಯ (೩೦ ಅಡಿ ಉದ್ದ ೨೦ ಅಡಿ ಅಗಲದ) ರೇಷ್ಮೆ ಸಾಕಾಣಿಕೆ ಮನೆ ನಿರ್ಮಾಣಕ್ಕೆ ೨.೨೫ ಲಕ್ಷ ಹಾಗೂ ೧೦೦೦ ಚದರ ಅಡಿಯ ಕಟ್ಟಡ ನಿರ್ಮಾಣಕ್ಕೆ ೩ ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ
೨೫ ದಿನಗಳಲ್ಲಿ ರೇಷ್ಮೆ ಉತ್ಪಾದನೆ
ರೇಷ್ಮೆ ಕೃಷಿ ಶೀಘ್ರ ಫಲದಾಯಕ. ರೇಷ್ಮೆ ಬೆಳೆಯನ್ನು ೨೫ ದಿನಗಳಲ್ಲಿ ಪಡೆಯಬಹುದು. ಬೇಸಿಗೆಯಲ್ಲಿ ೨೨ಕ್ಕೆ ಫಸಲು ಕೈಗೆ ಬರುತ್ತದೆ. ಚಾಕಿಯ ಎರಡು ಹಂತಗಳನ್ನು ಬಿಟ್ಟರೆ ೩,೪,೫ ಹಂತಗಳನ್ನು ರೈತರ ರೇಷ್ಮೆ ಸಾಕಾಣಿಕೆ ಮನೆಯಲ್ಲಿ ಬೆಳೆಸಲಾಗುತ್ತದೆ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಹುಳುಗಳ ಪರಿವರ್ತನೆಯ ಕಾಲಘಟ್ಟಕ್ಕೆ ಜ್ವರದ ಹಂತಗಳೆಂದು ಗುರುತಿಸಲಾಗುತ್ತಿದೆ.
ಮೊದಲ ಹಂತದ ಬೆಳವಣಿಗೆ ೩.೫ ದಿನ (ಜ್ವರ ೨೪ ಗಂಟೆ) ಎರಡನೇ ಹಂತ ಎರಡೂವರೆ ದಿನ (ಜ್ವರ ೨೦-೨೪ ಗಂಟೆ) ೩ನೇ ಹಂತ ೩ ದಿನ (ಜ್ವರ ೧ದಿನ) ೪ನೇ ಹಂತದಲ್ಲಿ (೧ದಿನ ಜ್ವರ ) ೫ನೆಯ ಹಂತ ಕೊನೆಯ ಹಂತವಾಗಿದ್ದು ಇದಾದ ೭-೮ ದಿನಗಳಲ್ಲಿ ರೇಷ್ಮೆ ಹುಳುಗಳು ತನಗೊಂದು ಬೆಚ್ಚಗಿನ ಮನೆ ಕಟ್ಟಿಕೊಳ್ಳುವುದರಲ್ಲಿ ನಿರತವಾಗುತ್ತವೆ. ರೇಷ್ಮೆ ಹುಳು ಸಾಕಾಣಿಕೆ ಸಂದರ್ಭದಲ್ಲಿ ರೇಷ್ಮೆ ಸಾಕಾಣಿಕೆ ಮನೆಯ ವಾತಾವರಣವನ್ನು ೨೫-೨೮ಡಿಗ್ರಿಯೊಳಗೆ ಕಾಪಾಡಿಕೊಳ್ಳುವುದು ಹೆಚ್ಚು ಆವಶ್ಯಕ.
ಮಾರುಕಟ್ಟೆ ಸಮಸ್ಯೆಯಿಲ್ಲ
ರೇಷ್ಮೆ ಬೆಳೆಗೆ ಮಾರುಕಟ್ಟೆಯ ಸಮಸ್ಯೆಯಿಲ್ಲ. ರಾಮನಗರ ರೇಷ್ಮೆ ಗೂಡುಗಳ ಮಾರುಕಟ್ಟೆಗೆ ಹೆಸರುವಾಸಿ. ಏಷ್ಯಾದಲ್ಲೇ ನಂಬರ್ ಒನ್ ಮಾರುಕಟ್ಟೆಯ ಕೀರ್ತಿ ಇದರದ್ದು. ಕೃಷಿಕರು ರೇಷ್ಮೆಗೂಡು ಮಾರಾಟಕ್ಕೆ ಹೆಚ್ಚಾಗಿ ರಾಮನಗರವನ್ನೇ ಆಶ್ರಯಿಸುತ್ತಾರೆ. ಉತ್ತಮ ಧಾರಣೆಯೂ ದೊರೆಯುತ್ತದೆ. ಹಣ ಪಡೆಯಲು ಪರದಾಡಬೇಕಿಲ್ಲ.
ಡಿಜಿಟಲೀಕರಣದಿಂದಾಗಿ ಮತ್ತಷ್ಟು ಪ್ರಯೋಜನವಾಗಿದೆ. ರೇಷ್ಮೆ ಗೂಡು ಮಾರಾಟವಾದ ಕೂಡಲೇ ಖಾತೆಗೆ ಹಣ ಜಮಾವಾಗುತ್ತದೆ. ಎನ್ನುತ್ತಾರೆ ಬೆಳೆಗಾರ ಹರೀಶ್. ಮಾರುಕಟ್ಟೆಗಾಗಿ ರಾಮನಗರವನ್ನೇ ಎಲ್ಲರೂ ಆಶ್ರಯಿಸಬೇಕೆಂದೇನೂ ಇಲ್ಲ. ಹಾಸನದಲ್ಲೂ ಮಾರುಕಟ್ಟೆ ವ್ಯವಸ್ಥೆಯಿದೆ. ಅದರಂತೆ ರೇಷ್ಮೆ ಬೆಳೆಯುವ ಜಿಲ್ಲೆಗಳ ಕೇಂದ್ರಗಳಲ್ಲೂ ಖರೀದಿ ಕೇಂದ್ರಗಳಿವೆ. ರೈತರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗುವುದಿಲ್ಲ
ಹಾಸನ ಜಿಲ್ಲೆಯಲ್ಲಿ ಬಹಳಷ್ಟು ರೈತರು ರೇಷ್ಮೆಯನ್ನು ನೆಚ್ಚಿಕೊಂಡಿದ್ದಾರೆ. ಅವರಲ್ಲಿ ಅರಕಲಗೂಡು ತಾಲ್ಲೂಕಿನ ೧೭೬ ಹಳ್ಳಿಗಳಲ್ಲಿ ಸುಮಾರು ೫೦೦ ಹೆಕ್ಟೇರ್ ರೇಷ್ಮೆ ಬೆಳೆಯಿದೆ. ೬೮೯ ರೇಷ್ಮೆ ಬೆಳೆಗಾರರಿದ್ದಾರೆ. ಅದರಲ್ಲೂ ಶೇಕಡಾ ೫೦ಕ್ಕಿಂತ ಹೆಚ್ಚು ಮಂದಿ ಸಣ್ಣ ಪ್ರಮಾಣದ ರೈತರು ಈ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ತಾಲೂಕಿನ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಕೃಷಿಗಾಗಿ ಸರಕಾರದಿಂದ ವಿವಿಧ ರೂಪದ . ೧,೭೬,೯೧,೨೩೮ ರೂ. ಸಹಾಯಧನ ಹಾಗೂ ಕೇಂದ್ರ ಸರಕಾರದಿಂದ ೭೨ ಲಕ್ಷ ನೇರ ಅನುದಾನ ದೊರೆತಿದೆ. ರೇಷ್ಮೆ ಕೃಷಿಯಿಂದ ಜಿಲ್ಲೆಯ ರೈತರಿಗೆ ೫೦೦೦ ಲಕ್ಷ ಆದಾಯ ಬರುತ್ತಿದೆ.
ರೇಷ್ಮೆ ಅಭಿವೃದ್ಧಿಗೆ ಇಲಾಖೆಯ ನೆರವು
* ಕೇಂದ್ರ ಪುರಸ್ಕೃತ, ರಾಜ್ಯ ವಲಯ ಯೋಜನೆಗಳಡಿ ಹಿಪ್ಪು ನೇರಳೆ ನಾಟಿ, ಸಾಕಾಣಿಕೆ ಸಲಕರಣೆಗಳ ಖರೀದಿ, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣ, ಹನಿ ನೀರಾವರಿ ಅಳವಡಿಕೆ ಮೊದಲಾದುವುಗಳಿಗೆ ಸಹಾಯಧನ
* ಜಿಲ್ಲಾ, ತಾಲೂಕು ಪಂಚಾಯಿತಿ ಯೋಜನೆಯಡಿ ಹಿಪ್ಪುನೇರಳೆ ನಾಟಿ ಹಾಗೂ ಕಿಸಾನ್ ನರ್ಸರಿ ಉತ್ಪಾದನೆಗೆ ಸಹಾಯಧನ
* ರೇಷ್ಮೆ ಅಭಿವೃದ್ಧಿ ಯೋಜನೆಯಡಿ ರೇಷ್ಮೆ ನೂಲು ಬಿಚ್ಚಾಣಿಕೆಗೆ ವಿಲೇವಾರಿಯಾದ ಬಿತ್ತನೆ ಗೂಡಿಗೆ ಪ್ರತಿ ಕೆಜಿಗೆ ೨೨೫ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆ ಗೂಡಿಗೆ ಉತ್ಪಾದಕತೆ ಆದರಿಸಿ ಪ್ರತಿ ಕೆಜಿಗೆ ೧೨೦ ಪ್ರೋತ್ಸಾಹ ಧನ
* ಪ್ರತಿ ಕೆಜಿಗೆ ದ್ವಿತಳಿ ಸಂಕರಣ ಗೂಡಿಗೆ ರೂ.೧೦ ಪ್ರೋತ್ಸಾಹಧನ
* ಪ್ರತಿ ೧೦೦ ದ್ವಿತಳಿ ಮೊಟ್ಟೆಗಳ ಚಾಕಿಗೆ ೧೦೦೦ ಸಹಾಯಧನ
* ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಿಪ್ಪುನೇರಳೆ ನರ್ಸರಿ, ಹಿಪ್ಪುನೇರಳೆ ತೋಟ ನಿರ್ಮಾಣ, ಮರ ಪದ್ಧತಿ ಹಿಪ್ಪು ನೇರಳೆ ತೋಟ ಸ್ಥಾಪನೆ, ಕಾಮಗಾರಿಗಳನ್ನು ವೈಯಕ್ತಿಕ ಫಲಾನುಭವಿಗಳ ಜಮೀನಿನಲ್ಲಿ ಅನುಷ್ಠಾನ
ಚಾಕಿ ಸಾಕಾಣಿಕೆ ಸ್ವಾವಲಂಬನೆಗೆ ದಾರಿ
ರೇಷ್ಮೆ ಕೃಷಿಯಲ್ಲಿ ಚಾಕಿ ಸಾಕಾಣಿಕೆಯು ಮಹತ್ವದ ಹಂತ. ರೇಷ್ಮೆ ಮೊಟ್ಟೆಗಳಿಂದ ಲಾರ್ವಾ ಅಥವಾ ಹುಳುವಾಗಿಸುವ ಮೊದಲೆರಡು ಹಂತಗಳೆ ಚಾಕಿ ಸಾಕಾಣಿಕೆ. ರೇಷ್ಮೆ ಕೃಷಿಯಲ್ಲಿ ಅತ್ಯಂತ ಸಂವೇದನಾಶೀಲ ಹಾಗೂ ಸೂಕ್ಷö್ಮವಾದ ಅವಧಿಯಿದು. ಚಾಕಿ ಸಾಕಾಣಿಕೆ ಕೇಂದ್ರಗಳಿಂದ ಎರಡನೇ ಹಂತ ಪೂರೈಸಿದ ಹುಳುಗಳನ್ನು ಬೆಳೆಗಾರರು ಕೊಂಡೊಯ್ದು ಸಾಕಿದರೆ ಕಾರ್ಯಕ್ಷಮತೆ ಹೆಚ್ಚು. ಅಲ್ಲದೆ ಉತ್ತಮ ಗುಣಮಟ್ಟದ ರೇಷ್ಮೆ ಗೂಡುಗಳನ್ನು ಪಡೆಯಬಹುದು. ಒಳ್ಳೆಯ ಇಳುವರಿ ಪಡೆಯಲು ಸಾಧ್ಯ.
ರೈತರಿಗೆ ಬೇಕಾಗುವ ಚಾಕಿಗಳನ್ನು ಬೆಳೆದು ಕೊಡುವ ಚಾಕಿ ಸಾಕಾಣಿಕಾ ಕೇಂದ್ರಗಳು ಸ್ವ ಉದ್ಯೋಗ ಮತ್ತು ಉದ್ಯಮವನ್ನು ಒದಗಿಸಿದೆ. ಅಂತಹ ಚಾಕಿ ಸಾಕಾಣಿಕಾ ಕೇಂದ್ರಗಳನ್ನು ನಡೆಸಿ ಆರ್ಥಿಕವಾಗಿ ಯಶಸ್ಸು ಕಂಡವರಿದ್ದಾರೆ. ಅರಕಲಗೂಡು ತಾಲೂಕು ತೇಜೂರಿನ ಚಂದ್ರು ಮತ್ತು ಸಣ್ಣಸ್ವಾಮಿ ಸಹೋದರರು ಚಾಕಿ ಸಾಕಾಣಿಕಾ ಕೇಂದ್ರಗಳಿಂದ ಗಮನ ಸೆಳೆದಿದ್ದಾರೆ.
ಇವರು ತಮ್ಮ ರೇಷ್ಮೆ ಕೃಷಿಯೊಂದಿಗೆ ಚಾಕಿ ಸಾಕಾಣಿಕಾ ಕೇಂದ್ರವನ್ನು ಆರಂಭಿಸಿ ಸುತ್ತುಮುತ್ತಲಿನ ಹಳ್ಳಿಗಳಿಗೆ ಚಾಕಿಗಳನ್ನು ವಿತರಿಸುತ್ತಿದ್ದಾರೆ. ಭದ್ರಾವತಿ, ಶಿವಮೊಗ್ಗ, ಮಂಡ್ಯ, ಬಳ್ಳಾರಿ ಜಿಲ್ಲೆಗಳಲ್ಲದೆ ಆಂದ್ರಕ್ಕೂ ಚಾಕಿಗಳನ್ನು ನೀಡಿದ ಹೆಗ್ಗಳಿಕೆ ಇವರದು. ಚಾಕಿ ಸಾಕಾಣಿಕಾ ಕೇಂದ್ರವೂ ಆದಾಯವನ್ನು ತಂದುಕೊಡಬಲ್ಲುದು ಅಲ್ಲದೆ ಉದ್ಯೋಗ ಅವಕಾಶಗಳನ್ನು ನೀಡಬಲ್ಲುದು. ತಮ್ಮ ತಮ್ಮ ಹಳ್ಳಿಗಳಿಂದಲೇ ಇಂತಹ ಉದ್ಯೋಗ ಮಾಡುವುದರಿಂದ ಗ್ರಾಮೀಣ ಮಟ್ಟದಲ್ಲೇ ಉದ್ಯೋಗ ಕಂಡುಕೊAಡAತಾಗುತ್ತದೆ. ಚಾಕಿ ಸಾಕಾಣಿಕೆಗೂ ಇಲಾಖೆವತಿಯಿಂದ ಸಹಾಯಧನವಿದೆ.
-ರಾಧಾಕೃಷ್ಣ ತೊಡಿಕಾನ ಮೊ.೯೪೮೦೭೫೦೦೮೫