spot_img
Wednesday, October 23, 2024
spot_imgspot_img
spot_img
spot_img

ಸಾಂಪ್ರದಾಯಿಕ ಆಲೆಮನೆಯನ್ನೇ ನೆಚ್ಚಿಕೊಂಡವರಿಬ್ಬರ ಕತೆಯಿದು!

-ಆರ್.ಕೆ ಕಾರ್ಕಳ

ನಾಡ ಹಬ್ಬ ದಸರಾದ ಸಂಭ್ರಮದ ಸಂದರ್ಭ. ಆ ದೇವಸ್ಥಾನದ ತುಂಬೆಲ್ಲಾ ಭಕ್ತ ಗಡಣ. ವಿಶಾಲ ಬಯಲಿನಲ್ಲಿ ಸಂತೆ ಮತ್ತು ವಸ್ತು ಪ್ರದರ್ಶನ. ಅಲ್ಲೆಲ್ಲೋ ಮೂಲೆಯೊಂದರಲ್ಲಿ ನೇಗಿಲ ಯೋಗಿಯ ಧ್ವನಿ. ಧ್ವನಿ ಬಂದತ್ತ ಹೊರಳಿದರೆ ಎತ್ತಿನ ಗಾಣ. ಜೋಡು ಕೋಣಗಳು ವೃತ್ತಾಕಾರದಲ್ಲಿ ಚಲಿಸುತ್ತಿದ್ದರೆ ರಸಭರಿತ ಕಬ್ಬನ್ನು ಗಾಣವು ಹಿಂಡಿ ಹಿಪ್ಪೆ ಮಾಡುತ್ತಿತ್ತು. ತಾಜಾ ಕಬ್ಬಿನ ಹಾಲು ಕುಡಿಯುವುದಕ್ಕೆ ಜನಜಂಗುಳಿ. ಸೆಲ್ಪಿ ತೆಗೆದುಕೊಳ್ಳಲು ಮೊಬೈಲ್ ಮುಂದಿಟ್ಟುಕೊಂಡವರ ಸಂಖ್ಯೆ ಕಡಿಮೆಯೇನೂ ಇರಲಿಲ್ಲ.

ಕಬ್ಬಿನ ಹಾಲು ಹಿಂಡುವ ಸುಧಾರಿತ ವಿದ್ಯುತ್ ಚಾಲಿತ ಯಂತ್ರಗಳು ಕಾಲಿಟ್ಟ ಮೇಲೆ ಸಾಂಪ್ರದಾಯಿಕ ಎತ್ತಿನ ಗಾಣದ ಆಲೆಮನೆಗಳು ಕಡಿಮೆಯಾಗುತ್ತಾ ತೆರೆಯ ಮರೆಗೆ ಸರಿದಿವೆ. ಹಬ್ಬದ ವಾತಾವರಣ ಸೃಷ್ಟಿಸುತ್ತಿದ್ದ ಸಾಂಪ್ರದಾಯಿಕ ಆಲೆಮನೆಗಳು ಬಹುತೇಕ ಕಡೆಗಳಲ್ಲಿ ಕಣ್ಮರೆಯಾದರೂ ಹಳ್ಳಿ ಮೂಲೆಗಳಲ್ಲಿ ಅಲ್ಲೊಂದು-ಇಲ್ಲೊಂದು ಉಳಿದುಕೊಂಡು ಸಾಂಪ್ರದಾಯಿಕ ಗಾಣ, ಆಲೆಮನೆ ಜೀವಂತವಾಗಿರುವುದಕ್ಕೆ ಹಳ್ಳಿಗರ ಜೀವನ ಶೈಲಿಯೇ ಸಾಕ್ಷಿ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಗ ಎಂಬ ಹಳ್ಳಿಯ ತೊರ್ಲಿ ಬಂದ್ಯಾ ಎಂಬಲ್ಲಿಯ ಶರತ್ ಮತ್ತು ಚಂದ್ರಶೇಖರ ಅವರು ತಮ್ಮ ಎತ್ತಿನ ಗಾಣದೊಂದಿಗೆ ಪ್ರಾತ್ಯಕ್ಷಕೆಗಾಗಿ ಉಚ್ಚಿಲಕ್ಕೆ ಬಂದಿದ್ದರು. ಆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆಲೆಮನೆಯಿಂದಲೇ ಪರಿಚಿತರಾದವರು. ಶರತರ ತಂದೆ ಮೀನಾಕ್ಷಿಯ್ಯ ಮತ್ತು ಚಂದ್ರಶೇಖರ್ ಅವರು ಆಪ್ತ ಸ್ನೇಹಿತರು. ಇಬ್ಬರೂ ಕಬ್ಬು, ಬತ್ತ, ಅಡಿಕೆ ತೋಟವಿರುವ ಕೃಷಿಕರು. ಕಬ್ಬು ಅರೆದು ಬೆಲ್ಲ ತಯಾರಿಸಲು ಆಗಿನ ದಿನಗಳಲ್ಲಿ ಆಲೆಮನೆಗಳಲ್ಲಿ ನೆಚ್ಚಿಕೊಂಡದ್ದೇ ಎತ್ತಿನ ಗಾಣ. ಕಳೆದ ೪೦ ವರ್ಷಗಳಿಂದ ಅವರಿಬ್ಬರು ಆಲೆಮನೆಯನ್ನು ನಡೆಸುತ್ತಾ ಬಂದಿದ್ದಾರೆ.

ಸಾಂಪ್ರದಾಯಿಕ ಆಲೆಮನೆಯನ್ನು ಬಿಡಬಾರದು ಎಂಬ ಉದ್ದೇಶದಿಂದ ಈಗ ವಿರೂಪಾಕ್ಷಯ್ಯ ಅವರ ಮಗ ಶರತ್ ಮುಂದುವರಿಸುತ್ತಿದ್ದಾರೆ. ತನ್ನ ತಂದೆಯ ಸ್ನೇಹಿತರಾದ ಚಂದ್ರಶೇಖರ್ ಜೊತೆಗೂಡಿ ಸಾಂಪ್ರದಾಯಿಕ ಗಾಣದ ಆಲೆಮನೆ ಉಳಿಸಿಕೊಂಡಿದ್ದಾರೆ. ಕಬ್ಬು ಕಟಾವಿಗೆ ಲಭ್ಯವಿರುವ ಸಂದರ್ಭದಲ್ಲಿ ಆಲೆಮನೆಯಲ್ಲಿ ಕಬ್ಬು ಅರೆಯುವ ಕೆಲಸ ಶುರುವಾಗುತ್ತದೆ. ಜನವರಿಯಿಂದ ಮಾರ್ಚ್ವರೆಗೆ ಆಲೆಮನೆಯೊಂದಿಗೆೆ ಅಲೆದಾಟ. ಶರತ್ ಅವರಲ್ಲಿ ಕಬ್ಬು ನುರಿಯುವ ಯಂತ್ರವಲ್ಲದೆ ಎತ್ತಿನ ಗಾಣವೂ ಇದ್ದರೆ ಚಂದ್ರಶೇಖರ್ ಎತ್ತಿನ ಗಾಣ ಮಾತ್ರ ಅವಲಂಬಿತರು. ಗಾಣಗಳಿಗೆ ಕೆಲವು ಕಡೆಗಳಲ್ಲಿ ಎತ್ತಿನ ಬಳಕೆಯಿದೆಯಾದರೂ ಇವರದು ಕೋಣಗಳ ಜೋಡಿ. ಇಬ್ಬರಲ್ಲೂ ಒಂದೊಂದು ಜತೆ ಕೋಣಗಳಿದ್ದು ತಲಾ ಎರಡು ಗಂಟೆಗಳಂತೆ ದುಡಿತ. ಮತ್ತೆ ಎರಡು ಗಂಟೆ ವಿರಾಮ.

ಜೊನಿ ಬೆಲ್ಲ ತಯಾರಿ

ತಮ್ಮಲ್ಲಿ ಬೆಳೆದ ಕಬ್ಬಿನಿಂದಲೇ ಜೋನಿ ಬೆಲ್ಲ ಮಾಡುತ್ತಾರೆ. ಶೇಖರ್ ಅವರು ಸುಮಾರು ೧೦೦ ಕ್ಯಾನುಗಳಷ್ಟು ಬೆಲ್ಲ ತಯಾರಿಸುತ್ತಾರೆ. ಚಂದ್ರೇಖರ್ ಅವರೂ ಅಷ್ಟೇ. ಮನೆ ಬಳಕೆಗೆ ಬೇಕಾಗುವಷ್ಟು ತೆಗೆದಿರಿಸಿ ಉಳಿದವುಗಳನ್ನು ಮಾರಾಟ ಮಾಡುತ್ತಾರೆ. ಜೋನಿಬೆಲ್ಲ ತಯಾರಿಸುವಲ್ಲಿ ತೆಂಗಿನ ಎಣ್ಣೆ ಸ್ವಲ್ಪ ಬಳಸುವುದನ್ನು ಬಿಟ್ಟರೆ ಬೇರೆ ಯಾವುದೂ ಸೇರಿಸುವುದಿಲ್ಲ. ಎಲ್ಲವೂ ತಾಜ. ಶರತ್ ಮತ್ತು ಚಂದ್ರಶೇಖರ್ ತಮ್ಮಲ್ಲಿ ಕಬ್ಬಿನ ಬೆಲ್ಲ ತಯಾರಿಸಿ ಮುಗಿದ ನಂತರ ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಆಲೆಮನೆ ಹೂಡಿ ಜೋನಿಬೆಲ್ಲ ತಯಾರಿಸಿಕೊಡುತ್ತಾರೆ. ರಿಪ್ಪನ್ ಪೇಟೆ, ಅಲ್ಸೆ, ಹೆಬ್ಬಳ್ಳಿ, ಕಳಸೆ, ಬೆಳ್ಳೂರು, ಜಾಣಬೈಲು, ಹಿರಿಸಾನಿ ಮೊದಲಾದ ಹಳ್ಳಿಗಳಲ್ಲಿ ಠಿಕಾಣಿ ಹೂಡಿ ಆಲೆಮನೆ ನಿರ್ಮಿಸಿ, ಜೋನಿ ಬೆಲ್ಲ ತಯಾರಿ ಕಾಯಕದಲ್ಲಿ ತೊಡಗುತ್ತಾರೆ. ಆಗ ಕಬ್ಬು ಬೆಳೆದ ಆ ಊರಿನ ಕೃಷಿಕರು ಕಬ್ಬು ಕಟಾವು ಮಾಡಿ ತಂದು ಬೆಲ್ಲ ಮಾಡಿಸಿಕೊಳ್ಳುತ್ತಾರೆ.

ಬೃಹತ್ ಒಲೆ, ದೊಡ್ಡ ಕೊಪ್ಪರಿಗೆಯಲ್ಲಿ ಕಬ್ಬಿನ ಹಾಲು ಕುದಿಸುತ್ತಾ ಹೋದಂತೆ ನೀರಿನ ಅಂಶವೆಲ್ಲಾ ಇಂಗಿ ಸವಿಯಾದ ಜೋನಿ ಬೆಲ್ಲ ಸಿದ್ಧ. ಕಬ್ಬಿನ ರಸದ ಮಡ್ಡಿ ಹಾಗೂ ಕಬ್ಬಿನ ಸುಳಿಗಳು ದುಡಿವ ಕೋಣಗಳಿಗೆ ಆಹಾರವಾದರೆ ಕಬ್ಬಿನ ಜಲ್ಲೆಗಳು ಆಲೆಮನೆಯ ಒಲೆಗೆ ಉರುವಾಲಾಗುತ್ತದೆ. ಹಿಂದೆ ಬೆಲ್ಲ ಮತ್ತು ಬತ್ತವನ್ನು ಪ್ರತಿಯಾಗಿ ಕೊಡುತ್ತಿದ್ದರೆ. ಈಗ ಹಣದ ಲೆಕ್ಕಾಚಾರ.

ಕೃಷಿ ವಸ್ತು ಪ್ರದರ್ಶನ, ಕೃಷಿ ಮೇಳ, ಚಿಕ್ಕಮಗಳೂರು ಹಬ್ಬಗಳಲ್ಲಿ ಎತ್ತಿನ ಗಾಣ, ಆಲೆಮನೆಯಲ್ಲಿ ಬೆಲ್ಲ ತಯಾರಿಯ ಪ್ರಾತ್ಯಕ್ಷಿಕೆಗಳನ್ನು ಶರತ್ ಮತ್ತು ಚಂದ್ರಶೇಖರ್ ನೀಡುತ್ತಾರೆ. ಚಂದ್ರ ಶೇಖರ್ ಅವರ ಪುತ್ರ ಪ್ರಶಾಂತ್ ಅವರು ಸಹಕಾರ ನೀಡುತ್ತಾರೆ. ಕಬ್ಬಿನ ಕಟಾವು ಬೆಲ್ಲ ತಯಾರಿ ಮುಗಿದ ನಂತರ ಮತ್ತೆ ಕೃಷಿಕಾಯಕ.

ಯಾವುದೇ ಕಾರಣಕ್ಕೂ ಎತ್ತಿ ಗಾಣ ನಿಲ್ಲಿಸುವುದಿಲ್ಲ. ಇಂಥ ವ್ಯವಸ್ಥೆಯಿದ್ದುದನ್ನು ಜನ ಸಾಮಾನ್ಯರಿಗೆ ತೋರಿಸಿವುದಕ್ಕಾದರೂ ಉಳಿಸಿಕೊಳ್ಳುತ್ತೇವೆ. ಎನ್ನುತ್ತಾರೆ ಶರತ್ ಮತ್ತು ಚಂದ್ರಶೇಖರ್

ಮಾಹಿತಿಗೆ ಶರತ್-ಮೊ.9880263397,9481156287  ಚಂದ್ರಶೇಖರ್-ಮೊ.9972357526

ಚಿತ್ರ: ರಾಮ್ ಅಜೆಕಾರ್

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group