spot_img
Sunday, January 5, 2025
spot_imgspot_img
spot_img
spot_img

ಗ್ರಾಮೀಣ ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ರಹದಾರಿಯಾಯಿತು ಈ ಸಿಯೊ ಲಿಕ್ವಿಡ್ ಸೋಪ್

-ರಾಧಾಕೃಷ್ಣ ತೊಡಿಕಾನ

ಹಳ್ಳಿಗಳಲ್ಲಿ ಸ್ವ ಉದ್ಯೋಗದ ಅವಕಾಶಗಳು ಕಡಿಮೆ. ಉದ್ಯೋಗಕ್ಕಾಗಿ ಯುವ ಸಮುದಾಯ ನಗರದತ್ತ ಮುಖಮಾಡುವುದೇ ಹೆಚ್ಚು. ಕೆಲವರು ಸ್ವಂತ ಉದ್ಯೋಗ ವ್ಯವಹಾರವನ್ನು ನಡೆಸಲು ಮುಂದಾದರೂ ಯಶಸ್ಸು ದೂರದ ಮಾತು. ಸ್ವ ಉದ್ಯೋಗ ಕೈಹಿಡಿಯುವುದಿಲ್ಲ. ಆಗ ಯೋಚನೆ-ಯೋಜನೆ ಹಳ್ಳ ಹಿಡಿಯುತ್ತವೆ.

ಗ್ರಾಮೀಣ ಭಾಗದಲ್ಲಿ ಕಿರು ಉದ್ಯಮಗಳನ್ನು ಮಾಡಿ ಯಶಸ್ಸಿನ ಹೆದ್ದಾರಿಯನ್ನು ಕಂಡವರು ಹಲವರಿದ್ದಾರೆ. ಪುರುಷರು ಮಾತ್ರವಲ್ಲ. ಮಹಿಳೆಯರು ಕೂಡಾ ಗೃಹ ಆಧಾರಿತ ಕಿರು ಉದ್ಯಮಗಳಲ್ಲಿ ತೊಡಗಿಸಿಕೊಂಡು ಗ್ರಾಮೀಣ ಆರ್ಥಿಕತೆಯಲ್ಲಿ ಸಂಚಲನ ಮೂಡಿಸಿದ್ದಿದೆ.

ಸಂಧ್ಯಾ ಶ್ರೀ ಸತ್ಯಪ್ರಕಾಶ್ ಅವರು ನಗರದ ಖಾಸಗಿ ಸಂಸ್ಥೆಯಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಸ್ವಂತದ್ದಾದ ದ್ರವ ರೂಪದ ಶುಭ್ರಕಗಳ ತಯಾರಿಕೆಯಲ್ಲಿ ಚಾಪು ಮೂಡಿಸಿದ್ದಾರೆ. ಹಳ್ಳಿಯಲ್ಲಿ ಎಂಥಹ ಉದ್ಯಮ-ಉದ್ಯೋಗವೆಂದು ಮನೆಯಲ್ಲಿ ಸುಮ್ಮನೆ ಕುಳಿತಿದ್ದರೆ ಅವರಿಗೆ ಯಶಸ್ಸಿನ ಗರಿ ಮೂಡಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಸಂಧ್ಯಾಶ್ರೀ ಅವರು ಎಂ.ಕಾಮ್ ಪದವೀಧರೆ. ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಅವರ ಪತಿ ಸತ್ಯ ಪ್ರಕಾಶ್ ಆನೆಕಲ್ಲು ಮಂಗಳೂರಿನ ಕಾಲೇಜೊಂದರಲ್ಲಿ ಪ್ರೋಫೆಸರ್. ಮನೆಯಲ್ಲಿ ಅಡಿಕೆ ತೋಟ ಇತರ ಕೃಷಿ ಇದ್ದುದರಿಂದ ಉದ್ಯೋಗಕ್ಕೆ ಹೋಗಬೇಕಾದ ಅನಿವಾರ್ಯತೆ ಸಂಧ್ಯಾಶ್ರೀ ಅವರಿಗೆ ಇರಲಿಲ್ಲ. ಆದರೆ ಸ್ವ ಉದ್ಯೋಗ ಮಾಡಬೇಕೆಂಬ ಹಂಬಲವಿತ್ತು.

ಕರ್ನಾಟಕ ಮತ್ತು ಕೇರಳ ಗಡಿ ಅಂಚಿನಲ್ಲಿರುವ ದಕ್ಷಿಣ ಕನ್ನಡ ಮತ್ತು ಕಾಸರಗೋಡನ್ನು ಬೆಸೆಯುವ ಆನೆಕಲ್ಲಿನವರಾದ ಸತ್ಯಪ್ರಕಾಶ್ ಅವರು ಉದ್ಯೋಗದಲ್ಲಿದ್ದರೂ ಫಿನಾಯಿಲ್ ಹಾಗೂ ದ್ರವ ರೂಪದ ಸಾಬೂನು ತಯಾರಿಯನ್ನು ಹವ್ಯಾಸಕ್ಕಾಗಿ ಮಾಡುತ್ತಿದ್ದರು. ಆದರೆ ಅವರ ಉದ್ಯೋಗದ ಕಾರಣದಿಂದ ಹೆಚ್ಚಿನ ಗಮನ ಹರಿಸಲಾಗಿರಲಿಲ್ಲ. ಗ್ರಾಮೀಣ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಕನಸು ಹೊತ್ತಿದ್ದ ಪತಿ ಸತ್ಯಪ್ರಕಾಶ್ ಅವರ ಆಶಯ ಹಾಗೂ ಪ್ರೇರಣೆಯಿಂದ ಸ್ವದ್ಯೋಗದತ್ತ ಆಸಕ್ತಿ ಮೂಡಿತು. ಪತಿ ಆರಂಭಿಸಿದ್ದ ಕಿರು ಉದ್ಯಮವನ್ನು ಮುನ್ನೆಡೆಸಲು ಮುಂದಾದರು.

ಬಂಟ್ವಾಳದ ತಾಲೂಕಿನ ಅಳಕೆಯ ಸತ್ಯ ಸಾಯಿ ವಿಹಾರದ ಸಮೀಪದ ಸಂಕೀರ್ಣವೊಂದರಲ್ಲಿ “ಸಿಯೊ ಲಿಕ್ವಿಡ್ ಡಿಟರ್ಜಂಟ್” ಎಂಬ ಹೆಸರಿನ ದ್ರವರೂಪದ ಸಾಬೂನು ತಯಾರಿ ಘಟಕ ೨೦೨೦ರಲ್ಲಿ ಹುಟ್ಟು ಪಡೆಯಿತು. ಆರಂಭದಲ್ಲಿ ಸುತ್ತುಮುತ್ತಲಿನ ಪರಿಸರದವರೇ ಈ ಉತ್ಪನ್ನಗಳ ಗ್ರಾಹಕರು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿಕ್ಕ ಬಂಡವಾಳದಲ್ಲಿ ಆರಂಭವಾದ ಈ ಘಟಕವು ಗರಿಬಿಚ್ಚಿಕೊಳ್ಳುತ್ತಿದ್ದಂತೆ ಕಾಲಿಟ್ಟ ಕೊರೊನಾ ಇವರ ವ್ಯವಹಾರದ ಮೇಲೂ ಪರಿಣಾಮ ಬೀರಿತು. ಆದರೂ ಧೃತಿಗೆಡಲಿಲ್ಲ. ಈ ನಾಲ್ಕು ವರ್ಷಗಳಲ್ಲಿ ಏಳುಬೀಳುಗಳಿದ್ದರೂ ವ್ಯವಹಾರಿಕವಾಗಿ ನಿಂತ ನೀರಾಗಲಿಲ್ಲ. ಶುಭ್ರಕ ದ್ರವ ಹಾಗೂ ಫಿನಾಯಿಲ್ ಸೇರಿದಂತೆ ವಿವಿಧ ಮಾದರಿಯ ಹದಿಮೂರು ಉತ್ಪನ್ನಗಳು ಇಲ್ಲಿ ಸಿದ್ಧವಾದವು.

ವಾಹನಗಳು, ಪಾತ್ರೆಗಳು, ಬಟ್ಟೆ ತೊಳೆಯಲು ಸ್ಲೈಡ್ ಮಲ್ಟಿಪರ್ಪಸ್ ಕ್ಲೀನಿಂಗ್ ಲಿಕ್ವಿಡ್, ನೆಲಸ್ವಚ್ಛತೆಗೆ ಹೂವಿನ ಪರಿಮಳವುಳ್ಳ ಸ್ಲೈಡ್  ಸುಗಂಧ್, ವಾಷಿಂಗ್ ಮಿಷನ್‌ನಲ್ಲಿ ಬಟ್ಟೆ ಶುಭ್ರಗೊಳಿಸಲು ಸ್ಲೈಡ್ ಎಂಡಿ ಡಿಟರ್ಜಂಟ್ ಲಿಕ್ವಡ್, ಸ್ಲೈಡ್ ವೈಪ್ ಆಲ್, ಶೌಚಾಲಯ ಕ್ಲೀನರ್, ಫಿನಾಯಿಲ್ ಹೀಗೆ ಹಲವು ಮಾದರಿಯ ಉತ್ಪನ್ನಗಳು ಈಗ ಗ್ರಾಹಕರ ಮನ ಸೆಳೆದಿವೆ.

ನಗರ ಮಾತ್ರವಲ್ಲ ಹಳ್ಳಿ ಹಳ್ಳಿಗಳಲ್ಲಿ ಆಧುನಿಕತೆಯ ಸ್ಪರ್ಶವಾಗಿದೆ. ಹೊಸ ಕಟ್ಟಡಗಳು, ಸಂಕೀರ್ಣಗಳು, ಪ್ಲಾಟ್‌ಗಳು, ಮನೆಗಳು ತಲೆಯೆತ್ತಿವೆ. ಇವುಗಳ ಸ್ವಚ್ಛತೆಗೆ ಶುಭ್ರಕಗಳ ಬಳಕೆ ಅನಿವಾರ್ಯ. ಈ ಹಿನ್ನಲೆಯಲ್ಲಿಯೇ ವಿವಿಧ ನಮೂನೆಗಳ ಮಾರ್ಜಕಗಳ ಮಾರುಕಟ್ಟೆ ಬೆಳೆಯುತ್ತಿದೆ. ದೊಡ್ಡ ಮಾರುಕಟ್ಟೆಯನ್ನು ಸಿಯೊ ಲಿಕ್ವಡ್ ಡಿರ್ಜಂಟ್ ಇನ್ನಷ್ಟೇ ಪ್ರವೇಶಿಸಬೇಕಾದರೂ ಅದರದೇ ಆದ ಮಾರುಕಟ್ಟೆ ಜಾಲವಿದೆ. ತನ್ನ ಉತ್ಪನ್ನಗಳನ್ನು ಹಳ್ಳಿಗಳ ಮನೆಗಳು, ಶಾಲೆ ಕಾಲೇಜು, ಆಸ್ಪತ್ರೆಗಳಲ್ಲಿ ಪರಿಚಯಿಸುತ್ತಾ ಬಂದಿದೆ.

ಕೃಷಿ ಕುಟುಂಬದ ಹಿನ್ನೆಲೆ ಮತ್ತು ಕೃಷಿಯಿರುವುದರಿಂದ ಪಾರಂಪಾರಿಕವಾಗಿ ದನ ಸಾಕಣೆಯು ಅವರಲ್ಲಿದೆ. ಗೋ ಅರ್ಕವನ್ನು ಬಳಸಿಕೊಂಡು ಪಿನಾಯಿಲ್ ತಯಾರಿಸುತ್ತಿದ್ದಾರೆ. ಇದಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ.

ಯಾವುದೇ ಉತ್ಪನ್ನಗಳು ತಯಾರು ಮಾಡಬಹುದು. ಮಾರುಕಟ್ಟೆ ಮಾಡುವುದೇ ಎದುರಾಗುವ ಸಮಸ್ಯೆ.. ಇವರು ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ. ನೇರ ಮಾರಾಟವಲ್ಲದೆ ಈಗ ಮಾರುಕಟ್ಟೆಯಲ್ಲಿಯೂ ಈ ಉತ್ಪನ್ನಗಳಿವೆ. ಮುಂದಿನ ದಿನಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವುದು ಮಾರುಕಟ್ಟೆ ಮತ್ತಷ್ಟು ವಿಸ್ತರಿಸುವ ಯೋಜನೆ ಸಂದ್ಯಾ ಶ್ರೀ ಮತ್ತು ಸತ್ಯ ಪ್ರಕಾಶ್ ಅವರದು. ಲಾವಂಚ, ನೊರೆಕಾಯಿ, ಕರಿಬೇವು, ನಿಂಬೆ, ಅರಸಿನಗಳ ಸ್ನಾನದ ಸಾಬೂನು ಅಲ್ಲದೆ ದ್ರವರೂಪದ ಮಾರ್ಜಕಗಳನ್ನು ತಯಾರಿಸುವ ಯೋಚನೆಯಿದೆ. ಹಳ್ಳಿಗಳಲ್ಲಿ ಇರುವ ಮಹಿಳೆಯರು ಸ್ವಾವಲಂಬನೆಗೆ ಇಂಥ ಬೇರೆ ಬೇರೆ ಕಿರು ಉದ್ಯಮಗಳನ್ನು ಆರಂಭಿಸಿದರೆ ಸ್ವದ್ಯೋಗದೊಂದಿಗೆ ಗ್ರಾಮೀಣ ಆರ್ಥಿಕತೆಯ ವೃದ್ಧಿಗೆ ಸಹಾಯವಾಗುತ್ತದೆ.ಎನ್ನುತ್ತಾರೆ ಸಂಧ್ಯಾ ಸತ್ಯಪ್ರಕಾಶ್ ಆನೆಕಲ್ಲು.

ಈ ಉದ್ಯಮದ ಯಶಸ್ಸಿಗೆ ಪತಿ ಸತ್ಯಪ್ರಕಾಶ್ ಹಾಗೂ ಮಾವ ಈಶ್ವರ ಭಟ್ ಅತ್ತೆ ಲಲಿತ ಕುಮಾರಿ ಮತ್ತು ಕುಟುಂಬ, ಮಂಗಳೂರಿನ ವೈದ್ಯರು, ಬ್ಯಾಂಕ್ ಉದ್ಯೋಗಿಗಳ ಬೆಂಬಲ, ಗ್ರಾಹಕರು ತೋರಿದ ಆಸಕ್ತಿ ಈ ಉದ್ಯೋಗದಲ್ಲಿ ತೊಡಗಿಕೊಳ್ಳಲು ಪ್ರೇರಣೆಯಾಗಿರುವುದನ್ನು ನೆನಪಿಸಿಕೊಳ್ಳುತ್ತಾರೆ.

ಸಾಮಾಜಿಕ ಜಾಲತಾಣದ ಮೂಲಕವೇ ಹೆಚ್ಚಾಗಿ ವ್ಯವಹರಿಸುತ್ತಿದ್ದ ಇವರಿಗೆ ಇತ್ತೀಚೆಗೆ ಕೈರಂಗಳದ ಪುಣ್ಯಕೋಟಿ ನಗರದಲ್ಲಿ ನಡೆದ ಕೃಷಿ ಮೇಳದ ರೂವಾರಿ ರಾಜಾರಾಮ್ ಭಟ್ ಅವರು ನೀಡಿದ “ಮಳಿಗೆ ” ಅವರ ಸಾರ್ವಜನಿಕ ಮಾರುಕಟ್ಟೆಯ ಹೊಸ ಆಯಾಮವನ್ನು ತೆರೆದಿರಿಸಿತು. ಈ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದವರು “ಭಾರೀ ಒಳ್ಳೆಯದಿದೆ, ನೀನೂ ತೆಗೆ” ಎಂದು ಇತರರಿಗೂ ಈ ಉತ್ಪನ್ನಗಳನ್ನು ಖರೀದಿಸುವಂತೆ ಗ್ರಾಹಕರೇ ಪ್ರೋತ್ಸಾಹಿಸಿದರು. ಸಿದ್ಧ ಮಾಡಿದ್ದ ಎಲ್ಲಾ ಉತ್ಪನ್ನಗಳು ಎರಡೇ ದಿನಗಳಲ್ಲಿ ಖಾಲಿಯಾಗಿ ಮತ್ತೆ ರಾತಿಯ್ರೆಲ್ಲಾ ಕುಳಿತು ತಯಾರಿ ಮಾಡಿ ತಂದುದು ಮುಗಿದು ಹೋದರೂ “ಎಂಕ್ ಒಂಜಿ ಸುಗಂಧ ಕರ‍್ಲೆ” ಎಂದು ಗ್ರಾಹಕರು ಬೇಡಿಕೆಯಿಡುತ್ತಿದ್ದುದನ್ನು ಸ್ಮರಿಸಿಕೊಳ್ಳತ್ತಾರೆ. ಸತ್ಯಪ್ರಕಾಶ್ ಆನೆಕಲ್ಲು.

ಹಳ್ಳಿಗಳಲ್ಲಿದ್ದುಕೊಂಡು ಕೃಷಿ ಮತ್ತಿತರ ಚಟುವಟಿಕೆಯಲ್ಲಿ ತೊಡಗಿಕೊಂಡರೂ ಕಿರು ಉದ್ಯಮ-ವ್ಯವಹಾರಗಳು, ಸ್ವದ್ಯೋಗಗಳು ಸಣ್ಣಮಟ್ಟದಲ್ಲಿ ಆರ್ಥಿಕ ಚೈತನ್ಯ ತುಂಬಬಲ್ಲವು. ಮಾಹಿತಿಗಾಗಿ ಈ ಸಂಖ್ಯೆ 9880041226, 9449241143

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group