spot_img
Friday, October 18, 2024
spot_imgspot_img
spot_img
spot_img

ಕೃ‍ಷಿ ಕನಸಿನಲ್ಲಿ ಬದುಕು ಬೆಳಗಿತು : ಬ್ರಹ್ಮಾವರ ಯಶಸ್ವಿ ಕೃಷಿಕನ ಕತೆ ಇದು!

ಅವರೊಬ್ಬ ಪ್ರತಿಭಾವಂತ. ಉನ್ನತ ಶಿಕ್ಷಣ ಪಡೆವ ಅದಮ್ಯ ಆಸೆಯಿತ್ತು. ಆದರೆ ಅವರನ್ನು ಅನಿರೀಕ್ಷಿತವಾಗಿ ಸೆಳೆದದ್ದು ಮಾತ್ರ ಕೃಷಿಕ್ಷೇತ್ರ. ಬಯಸದೇ ಬಂದರೂ ಈ ಕ್ಷೇತ್ರದಲ್ಲಿಯೇ ಯಶಸ್ಸನ್ನು ಹುಡುಕಿ ನಡೆದರು. ಹೊಸಹೊಸ ಪ್ರಯೋಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತ ಕೃಷಿಕ್ಷೇತ್ರದ ಸಂನ್ಮೂಲ ವ್ಯಕ್ತಿಗಳಾಗಿ ಬೆಳೆದರು. ಅವರು ಯಾರೆಂದು ಕುತೂಹಲ ಹುಟ್ಟಿರಬೇಕಲ್ಲ!! ಹೌದು! ಕೃಷಿ, ಹೈನುಗಾರಿಕೆ, ಗ್ರಾಮಾಭಿವೃದ್ಧಿ, ಶಿಕ್ಷಣರಂಗ ಸೇರಿದಂತೆ ಯಡ್ತಾಡಿ ಪರಿಸರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಯಡ್ತಾಡಿ ಸತೀಶ್ ಕುಮಾರ್ ಶೆಟ್ಟಿ.

ಬ್ರಹ್ಮಾವರ ತಾಲೂಕಿನ ಯಡ್ತಾಡಿ ಸತೀಶ್ ಕುಮಾರ್ ಶೆಟ್ಟರು ಕೃಷಿಕ ಕುಟುಂಬದವರು. ಅವರ ಆಸೆಯಿದ್ದುದು ಇಂಜಿನಿಯರಿಂಗ್ ಶಿಕ್ಷಣ ಪಡೆಯುವದರತ್ತ. ಪದವಿಪೂರ್ವ ಶಿಕ್ಷಣ ಮುಗಿಸಿದ ಕೂಡಲೇ ಅನಿವಾರ್ಯವಾಗಿ ಕೃಷಿಕ್ಷೇತ್ರಕ್ಕೆ ಧುಮುಕಬೇಕಾಯಿತು. ತಾನು ಬಯಸಿದ್ದ ಕ್ಷೇತ್ರಕ್ಕೆ ಹೋಗಲಾಗದಿದ್ದರೂ ಕೃಷಿಯನ್ನೇ ನೆಚ್ಚಿಕೊಂಡು ಹೊಸ ಸಾಧ್ಯತೆಯನ್ನು ಕಂಡುಕೊಳ್ಳುತ್ತಾ ಯಶಸ್ಸಿನ ಮೆಟ್ಟಿಲೇರಿದ್ದಾರೆ.

ಶೆಟ್ಟರು ಕೃಷಿಕ್ಷೇತ್ರಕ್ಕೆ ಕೈಹಾಕಿದಾಗ ಬಹಳಷ್ಟು ಮಂದಿ ಈ ಯುವಕ ಕೃಷಿಯಲ್ಲಿ ಏನು ಸಾಧನೆ ಮಾಡಬಹುದು. ಭತ್ತದ ಬೆಳೆ ಬಿಟ್ಟರೆ ಮತ್ತೇನಿದೆ ಎಂದುಕೊಂಡವರಿದ್ದರು. ಅವರೂ ಕೂಡಾ ಸಾಂಪ್ರದಾಯಿಕ ಭತ್ತದ ಬೆಳೆಯನ್ನೇ ಆಯ್ದುಕೊಂಡರು. ಹೊಸ ಹೊಸ ತಳಿಗಳನ್ನು ಬೆಳೆದುದಲ್ಲದೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ತಯಾರಿಸಿದರು. ಕೃಷಿ ಇಲಾಖೆ ಭತ್ತದ ಬಿತ್ತನೆ ಬೀಜ ಖರೀದಿಸಿತು. ಉತ್ತಮ ಬೆಲೆಯೂ ದೊರೆಯಿತು.

ಆನಂತರ ಯಡ್ತಾಡಿ ಪರಿಸರದಲ್ಲಿ ಪ್ರಪ್ರಥಮವಾಗಿ ಕಬ್ಬು ಬೆಳೆದರು. ಆ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳನ್ನು ಸಾಗಾಟಕ್ಕೆ ಸಮಸ್ಯೆಯಿತ್ತು. ಇದಕ್ಕಾಗಿ ಹೊರ ಜಿಲ್ಲೆಗಳಿಂದ ಟ್ತಾö್ಯಕ್ಟರುಗಳನ್ನು ತರಿಸಿಕೊಂಡರೆ ಖರ್ಚುವೆಚ್ಚಗಳು ಹೆಚ್ಚಾಗುತ್ತಿತ್ತು. ಬಿತ್ತಿ ಬೆಳೆದವನಿಗೆ ಲಾಭದಾಯಕವಾಗಿರಲಿಲ್ಲ. ಈ ವೆಚ್ಚಗಳನ್ನು ಕಡಿತಗೊಳಿಸಲು ತಾವೇ ಟ್ರಾಕ್ಟರ್ ಖರೀದಿಸಿ ಹಳ್ಳಿಗಳ ಜನರ ನೆರವಿಗೆ ಬಂದರು. ಟ್ರಾö್ಯಕ್ಟರ್ ಬೇಡಿಕೆ ಹೆಚ್ಚಾಗುತ್ತಿದಂತೆ ಮತ್ತರಡು ಟ್ರಾö್ಯಕ್ಟರ್ ಖರೀದಿಸಿ ಕೃಷಿಕರಿಗೆ ಅನುಕೂಲ ಮಾಡಿಕೊಟ್ಟರು. ತೆಂಗು, ಅಡಿಕೆ, ಬಾಳೆ ಮತ್ತಿತರ ಕೃಷಿಯಲ್ಲಿ ತೊಡಗಿಕೊಂಡರೂ ಭತ್ತದ ಕೃಷಿ ಮಾತ್ರ ಬಿಟ್ಟವರಲ್ಲ.

ಕೃಷಿಕ್ಷೇತ್ರದಲ್ಲಿ ಸುಮಾರು ೫೦ ವರ್ಷಗಳ ಅನುಭವ ಅವರದು. ಸಾಂಪ್ರದಾಯಿಕ ಕೃಷಿಗೆ ಈಗ ಯಾಂತ್ರೀಕರಣದ ಸ್ಪರ್ಶವಾಗಿದೆ. ಯಾಂತ್ರೀಕರಣದಿಂದ ಕೆಲಸಗಾರರ ಸಮಸ್ಯೆ ಕಡಿಮೆಯಾಗಿದೆ. ಭತ್ತದ ಕೃಷಿಯಲ್ಲಿ ಖರ್ಚುವೆಚ್ಚಗಳು ಕಡಿಮೆಯಾಗಿವೆ ಎನ್ನುತ್ತಾರೆ ಸತೀಶ್ ಕುಮಾರ್ ಶೆಟ್ಟರು.

ಬತ್ತದ ಕೊಯಿಲಿನ ನಂತರ ಗದ್ದೆಯನ್ನು ಹಾಗೇ ಬಿಡದೆ ಉಪಬೆಳೆಯಾಗಿ ಉದ್ದು ಬೆಳೆಯುತ್ತಾರೆ. ಅವರಿಗೆ ಅದೊಂದು ಲಾಭದಾಯಕ ಬೆಳೆಯಾಗಿದೆ. ಉದ್ದನ್ನು ಹೆಚ್ಚಾಗಿ ಬಿತ್ತನೆ ಬೀಜಕ್ಕಾಗಿಯೇ ಬೆಳೆಯುತ್ತಾರೆ. ಎಳ್ಳು, ನೆಲಗಡಲೆ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಯ ಪ್ರಯೋಗಗಳನ್ನು ಮಾಡಿಯೂ ಯಶಸ್ಸು ಕಂಡಿದ್ದಾರೆ. ಕಳೆದ ೩೩ ವರ್ಷಗಳಿಂದ ಕೃಷಿಕ್ಷೇತ್ರದ ಸಂಪನ್ಮೂಲ ವ್ಯಕ್ತಿಯಾಗಿಯೂ ತಮ್ಮ ಅನುಭವಗಳನ್ನು ಕೃಷಿಕರಿಗೆ ಧಾರೆ ಎರೆದಿದ್ದಾರೆ. ಹಲವಾರು ಮಂದಿ ಯುವಕೃಷಿಕರಿಗೆ ಪ್ರೇರಣೆಯಾಗಿದ್ದಾರೆ.

ವಿವಿಧ ತಳಿಯ ತೆಂಗು

ಹೈಬ್ರೀಡ್ ಸೇರಿದಂತೆ ವಿವಿಧ ತಳಿಯ ತೆಂಗು ಅವರಲ್ಲಿದೆ. ತನ್ನ ಒಂದು ಪಾರ್ಶ್ವದ ತೆಂಗಿನ ತೋಟವನ್ನು ಸಾವಯವದಲ್ಲಿಯೇ ಬೆಳೆಸಿದ್ದಾರೆ. ಅದಕ್ಕೆ ನೀರು,ಗೊಬ್ಬರ ನೀಡುತ್ತರಾದರೂ ಬುಡವನ್ನು ಬಿಡಿಸಿ ಗೊಬ್ಬರ ಹಾಕುವ ಗೋಜಿಗೆ ಹೋದವರಲ್ಲ. ಆದರೂ ಸುಮಾರು ೨೫-೩೦ಸಾವಿರ ತೆಂಗಿನಕಾಯಿ ಪಡೆಯುತ್ತಾರೆ. ಅಡಿಕೆ ಬೆಳೆಯೂ ಇದೆ. ಅಡಿಕೆ ತೊಟದಲ್ಲಿ ದೊಡ್ಡ ಅಡಿಕೆ ಮರದ ಬುಡದಲ್ಲಿ ಬಿದ್ದು ಮೊಳಕೆಯೊಡೆದ ಅಡಿಕೆ ಗಿಡವನ್ನೂ ಬೆಳೆಯಲು ಬಿಟ್ಟಿದ್ದಾರೆ. ಆ ಗಿಡಗಳಿಗೆ ಬುಡಬಿಡಿಸಿ ಗೊಬ್ಬರ ನೀಡುವುದಿಲ್ಲ

ರೈತರು ಬೆಳೆಯ ಒಳಸುರಿಯ ಖರ್ಚನ್ನು ಆದಷ್ಟು ಕಡಿಮೆ ಮಾಡಿ ಉತ್ಪನ್ನಗಳನ್ನು ಹೆಚ್ಚಿಸುವ ದಾರಿ ಕಂಡುಕೊಳ್ಳಬೇಕು. ಬೆಳೆ ವಿಮೆಯು ಮಾಡಿಸಿಕೊಳ್ಳುವುದು ಅವಶ್ಯಕ. ತೋಟಗಾರಿಕಾ ಬೆಳೆಯಲ್ಲಿ ಮಿಶ್ರ ಬೆಳೆಗಳಿರಬೇಕು. ಭತ್ತದ ಬೆಳೆಯ ಜೊತೆಗೆ ಸ್ವಾವಲಂಬನೆಯ ಉಪವೃತ್ತಿಗಳಿದ್ದರೆ ಹೆಚ್ಚು ಅನುಕೂಲ ಎಂಬುದು ಅವರ ಅನುಭವದ ಮಾತು
ಅಡಿಕೆ, ತೆಂಗು, ಸೇರಿದಂತೆ ವಿವಿಧ ಬೆಳೆಗಳು ಅವರ ಕೃಷಿಯಲ್ಲಿದೆ. ಕೃಷಿ ಕ್ಷೇತ್ರಕ್ಕೆ ಬರುವ ಯುವಕರು ಕೃಷಿಯೊಂದಿಗೆ ಮೌಲ್ಯವರ್ಧನೆ, ಮಾರುಕಟ್ಟೆಯ ಕಡೆಗೆ ಗಮನ ಹರಿಸಬೇಕು. ತನ್ನ ಅಭಿವೃದ್ಧಿಗೆ ಹೊಸ ಚಿಂತನೆಗಳು, ಪ್ರಯೋಗ ಶೀಲತೆ ಮೈಗೂಡಿಸಿಕೊಳ್ಳಬೇಕು. ಕೃಷಿ ಇಲ್ಲದೆ ದೇಶ ಉಳಿಯದು. ಕೃಷಿಕರು ಸಂಘಟಿತರಾಗಿ ಸಹಕಾರಿ ತತ್ವದಲ್ಲಿ ಕಾರ್ಯ ನಿರ್ವಹಿಸಿದರೆ ಉತ್ತಮ ಫಲ ಪಡೆಯಬಹುದು.

ಸರಕಾರಗಳು ಯಾರನ್ನೂ ಸೋಮಾರಿಗಳನ್ನಾಗಿ ಮಾಡಬಾರದು. ದುಡಿಯುವ ಕೈಗಳಿಗೆ ಕೆಲಸವಿರಬೇಕು. ರೈತರಿಗೆ ಸಹಾಯಧನದ ಬದಲು ಉತ್ತಮ ದರ, ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. ಎನ್ನುತ್ತಾರೆ. ಸತೀಶ್ ಕುಮಾರ್ ಶೆಟ್ಟರ ಕೃಷಿ ಕೆಲಸ ಕಾರ್ಯಗಳಲ್ಲಿ ಹೆಗಲುಕೊಟ್ಟು ಸಹಕರಿಸಿದವರು ಅವರ ಪತ್ನಿ ವಿಮಲಾ ಶೆಟ್ಟಿ. ಮಕ್ಕಳಲ್ಲೂ ಕೃಷಿ ಆಸಕ್ತಿಯಿತ್ತು. ಮೂರು ಮಂದಿ ಪುತ್ರರು ವಿದೇಶದಲ್ಲಿದ್ದಾರೆ. ಪುತ್ರಿ ಬೆಂಗಳೂರಿನಲ್ಲಿದ್ದಾರೆ.

ಶೆಟ್ಟರು ಪಶ್ಚಿಮ ಬಂಗಾಲ, ಹರ್ಯಾಣ, ಒರಿಸ್ಸಾ, ತಮಿಳುನಾಡು, ಆಂಧ್ರ, ಮಹಾರಾಷ್ಟç ಮೊದಲಾದ ರಾಜ್ಯಗಳಲ್ಲಿ ಹಾಗೂ ಅಮೇರಿಕಾಗಳಲ್ಲಿ ಕೃಷಿ ಪ್ರವಾಸಗಳನ್ನು ಮಾಡಿದ್ದು ತಮ್ಮ ಅನುಭವಗಳನ್ನು ಕೃಷಿಕರೊಂದಿಗೆ ಹಂಚಿಕೊಂಡಿದ್ದಾರೆ.

ಸತೀಶ್ ಕುಮಾರ್ ಶೆಟ್ಟಿ ಅವರು ಪ್ರಗತಿಪರ ಕೃಷಿಕ ಮಾತ್ರವಲ್ಲ ಸಮಾಜ ಸೇವೆ, ಸ್ಥಳೀಯ ಆಡಳಿತದ ಸಾರಥ್ಯವನ್ನು ವಹಿಸಿಕೊಂಡು ಊರಿನ ಅಭಿವೃದ್ಧಿಯಲ್ಲಿ ಭಾಗಿದಾರರು. ಅವರು ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಾಗ ಆ ಪರಿಸರದಲ್ಲಿ ವಾಹನ ಸಂಚಾರಕ್ಕೆ ಸೇತುವೆಗಳು ಇರಲಿಲ್ಲ. ಓಡಾಟಕ್ಕೆ ದೋಣಿಯನ್ನು ಆಶ್ರಯಿಸಬೇಕಾಗಿತ್ತು. ವಿದ್ಯುತ್ ಇರಲಿಲ್ಲ. ಈ ಹಳ್ಳಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿತ್ತು. ತಮ್ಮೂರಿನ ಬೇಡಿಕೆಯನ್ನು ಸರಕಾರದ ಮುಂದಿಟ್ಟು ಹೋರಾಟ ಮಾಡಿದರು. ಊರಿಗೆ ವಿದ್ಯುತ್ ಬಂತು. ವಾಹನ ಸಂಚಾರಕ್ಕೆ ಸೇತುವೆಯಾಯಿತು.

ಸ್ಥಳೀಯ ಮಕ್ಕಳಿಗೆ ಪ್ರೌಢ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸೈಬ್ರಕಟ್ಟೆ ಮಹಾತ್ಮ ಗಾಂಧಿ ಅನುದಾನಿತ ಪ್ರೌಢಶಾಲೆ ಆರಂಭಿಸಲಾಯಿತು. ಈ ಶಾಲೆ ಹಲವಾರು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ತಳಹದಿಯಾಯಿತು. ಬಡ ಮಕ್ಕಳಿಗೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳು ಆರಂಭವಾದವು. ಎರಡು ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗ್ರಾಮದ ಅಭಿವೃದ್ಧಿಗೆ ದುಡಿದ ಸಾರ್ಥಕತೆ ಇವರದು. ಉಡುಪಿಯ ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ರೈತರಿಗೆ ಅವಶ್ಯಕವಾದ ಸಾಲ ಸೌಲಭ್ಯ ಒದಗಿಸುವಲ್ಲಿ ಶ್ರಮಿಸಿದ್ದಾರೆ. ಸರಕಾರದ ವಿವಿಧ ಇಲಾಖೆಗಳಿಂದ ರೈತರಿಗೆ ದೊರೆಯುವ ಸೌಲಭ್ಯವನ್ನು ದೊರಕಿಸಿಕೊಡುವಲ್ಲಿಯೂ ಶ್ರಮಿಸಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ. ಸಂಘ-ಸಂಸ್ಥೆಗಳು ಗೌರವಿಸಿವೆ.

  • ರಾಧಾಕೃಷ್ಣ ತೊಡಿಕಾನ ಮೊ: ೯೪೮೧೭೫೦೦೮೫

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group