spot_img
Wednesday, April 16, 2025
spot_imgspot_img
spot_img

ವ್ಯವಹಾರಕ್ಕೆ ಉದ್ಯಮ, ಕೃಷಿ ಇವರ ಬದುಕಿಗೆ ಖುಷಿ !

ರಾಧಾಕೃಷ್ಣ ತೊಡಿಕಾನ

ಉದ್ಯಮದಲ್ಲಿ ಏಳುಬೀಳುಗಳಿವೆ. ಅದನ್ನು ಗಮನದಲ್ಲಿರಿಸಿಕೊಂಡೇ ಈ ಕ್ಷೇತ್ರವನ್ನು ಪ್ರವೇಶಿಸುವುದು ಸಾಮಾನ್ಯ. ಸೋತಾಗ ನಿರಾಸೆಯಿಂದ ಕುಗ್ಗದೆ ಛಲದಿಂದ ಮುಂದುವರಿದಾಗ ಯಶಸ್ಸಿನ ಹಾದಿ ಮೆಲ್ಲನೆ ಗೋಚರಿಸಲಾರಂಭಿಸುತ್ತದೆ. ಜೆರೊಮ್ ಡಿಮೆಲ್ಲೊ ಕತೆಯೂ ಅದೆಯೇ. ಕೃಷಿಗೆ ಪೂರಕವಾದ ಯಂತ್ರೋಪಕರಣವನ್ನು ತಯಾರಿಸಲು ಹೋಗಿ ಕೈ ಸುಟ್ಟುಕೊಂಡರೂ ನಿರಂತರ ಶ್ರಮದಿಂದ ಮತ್ತೆ ಚೇತರಿಸಿ ತನ್ನ ಉದ್ಯಮದೊಂದಿಗೆ ಕೃಷಿಕರಿಗೆ ಅನುಕೂಲವಾದ ಕೃಷಿ ಯಂತ್ರೋಪಕರಣಗಳ ತಯಾರಿಗೆ ಆಸಕ್ತಿ, ಖುಷಿಗೊಂದಿಷ್ಟು ಕೃಷಿ ಹವ್ಯಾಸ ಬೆಳೆಸಿಕೊಂಡವರು.

ಜೆರೊಮ್ ಡಿಮೆಲ್ಲೊ ಎಸ್ಸೆಸಲ್ಸಿ ಮುಗಿಸಿದ ನಂತರ ತನ್ನ ಸಹೋದರ ಬಜಗೋಳಿಯಲ್ಲಿರುವ ಮ್ಯಾಕ್ಸಿಮ್ ಡಿಮೆಲ್ಲೊ ಅವರ ವೆಲ್ಡಿಂಗ್ ವರ್ಕ್ಸ್ನಲ್ಲಿ ಕೆಲ ಸಮಯ ಕೆಲಸ ಮಾಡಿದ ನಂತರ ಮುಂಬೈಗೆ ತೆರಳಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಆ ಕಂಪೆನಿ ಮೂಲಕ ಕುವೈತಿಗೆ ಹೋಗುವ ಅವಕಾಶ ಲಭಿಸಿತು. ಕುವೈತಿನಲ್ಲಿ ಕೆಲಸ ಮಾಡುತ್ತಿರುವಾಗಲೇ ಅಮೆರಿಕದ ವ್ಯಕ್ತಿಯೋರ್ವರು ಆರಂಭಿಸಿದ “ಎಎಸ್‌ಸಿ” ಕಂಪೆನಿಗೆ ಸೇರಿಕೊಂಡರು. ಐದು ವರ್ಷಗಳ ಕಾಲ ಆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು. ಅನಿವಾರ್ಯ ಕಾರಣಗಳಿಂದ ಕಂಪನಿ 2011 ರಲ್ಲಿ ಬಾಗಿಲು ಮುಚ್ಚಿತ್ತು, ಮುಂದೇನು?..ಬೇರೆ ದಾರಿಯಿರಲಿಲ್ಲ. ಮರಳಿ ಊರಿಗೆ ಬಂದರು. ಮತ್ತೆ ವಿದೇಶಕ್ಕೆ ಹೋಗಬೇಕೆಂಬ ಆಸೆಯಿತ್ತು. ಆದರೆ ಸಹೋದರ ಮ್ಯಾಕ್ಸಿಮ್ ಅವರ ಸಲಹೆಯಂತೆ ಕಾರ್ಕಳದ ಬೈಪಾಸ್ ಬಳಿಯಲ್ಲಿ ವಿಶ್ವಾಸ್ ಎಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಯನ್ನು ಆರಂಭಿಸಿದರು. ಕೃಷಿಕರಿಗೆ ಸಂಬAಧಿಸಿದ ಯಂತ್ರಗಳನ್ನು ತಯಾರಿಸಬೇಕೆಂಬ ಯೋಜನೆ ಅವರಲ್ಲಿತ್ತು.

ಆ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ರಬ್ಬರ್ ಬೆಳೆಯಿದ್ದರೂ ರಬ್ಬರ್ ಹಾಳೆಗಳನ್ನು ತಯಾರಿಸುವ ಯಂತ್ರಗಳು ಜಿಲ್ಲೆಯಲ್ಲಿರಲಿಲ್ಲ. ಬಹುತೇಕ ರಬ್ಬರ್ ರೋಲರ್‌ಗಳು ಕೇರಳ, ತಮಿಳುನಾಡುಗಳಿಂದ ಬರುತ್ತಿತ್ತು. ಸ್ಥಳೀಯವಾಗಿ ಉತ್ತಮ ಗುಣಮಟ್ಟದ ಯಂತ್ರ ತಯಾರಿಸಿ ರಬ್ಬರ್ ಬೆಳೆಗಾರರ ಬೇಡಿಕೆಯನ್ನು ಪೂರೈಸುವುದು ಅವರ ಉದ್ದೇಶವಾಗಿತ್ತು. ವಿಶ್ವಾಸ್ ರಬ್ಬರ್ ರೋಲರ್ ಮಾರುಕಟ್ಟೆ ಪ್ರವೇಶಿಸಿತು. ಆಯಾ ಋತುಮಾನಕ್ಕೆ ಹೊರತುಪಡಿಸಿ ಉಳಿದ ತಿಂಗಳಲ್ಲಿ ಕೆಲಸಗಾರರಿಗೆ ಉದ್ಯೋಗ ಕೊಡಲು ಸಮಸ್ಯೆಯಾಯಿತು. ಆದರೂ ಮೂರು ವರ್ಷಗಳ ಕಾಲ ರಬ್ಬರ್ ರೋಲರ್ ತಯಾರಿ ಮಾಡಿದ್ದರು. ರೋಲರ್ ಮಾರಾಟವಾಯಿತಾದರೂ ಕಾಸು ಕೈ ಸೇರುತ್ತಿರಲಿಲ್ಲ. ವ್ಯವಹಾರದಲ್ಲಿ ಭಾರೀ ನಷ್ಟವಾಯಿತು. ಮತ್ತೆ ವಿದೇಶಕ್ಕೆ ಹೋಗುವ ಯೋಚನೆ ಮಾಡಿದರಾದರೂ ಪತ್ನಿ ಲವೀನಾ ಪ್ರಮೀಳಾ ಡಿಮೆಲ್ಲೊ ನೀಡಿದ ಸಹಕಾರ ಮತ್ತು ಪ್ರೇರಣೆಯಿಂದ ಸಾಲದ ಹೊರೆಯನ್ನು ತಗ್ಗಿಸಿಕೊಂಡು ಹೊಸ ಯೋಜನೆಗಳಿಗೆ ಕೈ ಹಾಕದೆ ಇದ್ದುದರಲ್ಲಿಯೇ ಸಮಾಧಾನ ಪಡುತ್ತಾ ಯಂತ್ರೋಪಕರಣಗಳ ಕೆಲಸ ಮಾಡುತ್ತಿದ್ದಾಗ ಸ್ವಲ್ಪ ಚೇತರಿಸಿಕೊಂಡರು.

ಈ ನಡುವೆ ಮತ್ತೇನಾದರೂ ಹೊಸತು ಮಾಡುವ ತವಕ. ನೀರಿನಿಂದ ವಿದ್ಯುತ್ ಉತ್ಪಾದನೆಯ ಟರ್ಬೋವೊಂದನ್ನು ತಯಾರಿಸಿದರು. ಪ್ರಾಯೋಗಿಕವಾಗಿ ಸಫಲತೆ ಕಂಡರೂ ಅದನ್ನು ನೀರು ಮುಳುಗಿಸಿತು. ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಯಿತು. ಟರ್ಬೋ ಯಶಸ್ವಿಯಾಗಿದ್ದರೆ ಹಳ್ಳಿಗಳಲ್ಲಿರುವ ಹೊಳೆಗಳಲ್ಲಿ ಎಷ್ಟೋ ಟರ್ಬೋಗಳು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದವು. ಅದಾಗಲಷ್ಟೇ ಸಾಲದ ಸುಳಿಯಿಂದ ಚೇತರಿಸಿಕೊಳ್ಳುತ್ತಿದ್ದ ಡಿಮೆಲ್ಲೊ ಅವರಿಗೆ ವಿದ್ಯುತ್ ಉತ್ಪಾದನಾ ಯಂತ್ರವು ಮರ್ಮಾಘಾತ ನೀಡಿತು.

ತನ್ನ ಉದ್ಯಮವನ್ನು ಅನಿವಾರ್ಯವಾಗಿ ಮಿಯ್ಯಾರಿನ ನೆಲ್ಲಿಗುಡ್ಡೆಯಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸಬೇಕಾಯಿತು. 2020ರ ಮಾರ್ಚ್ನಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮ ಆರಂಭಿಸಿದರೂ ಕೊರೊನಾ ವ್ಯವಹಾರದ ಬಾಗಿಲನ್ನೇ ಮುಚ್ಚುವಂತೆ ಮಾಡಿತು. ಇತ್ತ ಕೆಲಸಗಾರರನ್ನು ಬಿಡುವಂತಿಲ್ಲ. ಬಿಟ್ಟರೆ ಉತ್ತರ ಭಾರತದ ಕೆಲಸಗಾರರು ಮತ್ತೆ ಬರಬಹುದೆಂಬ ವಿಶ್ವಾಸವಿರಲಿಲ್ಲ. ಅರ್ಧ ಸಂಬಳ ಹಾಗೂ ಅವರ ದಿನದ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬೇಕಾಯಿತು. ಮತ್ತೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. ಕೊನೆಗೆ ತನ್ನ ವರ್ಕ್ ಶಾಪ್ ಸಮೀಪದ ಶೆಡ್ಡಿನಲ್ಲಿ ವಾಸ್ತವ್ಯ ಮಾಡಬೇಕಾದ ಸಂದಿಗ್ಧ ಸ್ಥಿತಿಯನ್ನು ಎದುರಿಸಬೇಕಾಯಿತು. ಕೊರೊನಾದ ನಂತರ ನಿಧಾನವಾಗಿ ವ್ಯವಹಾರ ಚೇತರಿಸಿಕೊಂಡಿತು. ತನ್ನ ಉದ್ಯಮ ಘಟಕದ ಸಮೀಪ ೪೦ ಸೆಂಟ್ಸ್ ಜಾಗವನ್ನು ಖರೀದಿಸಿ ಅಲ್ಲಿ ಮನೆ ನಿರ್ಮಿಸಿಕೊಂಡಾಗ ಅವರಿಗೆ ಸಮಾಧಾನದ ನಿಟ್ಟುಸಿರು.

ಖುಷಿಗಾಗಿ ಕೃಷಿ

ಈ ಜಾಗದಲ್ಲಿ ತನ್ನ ಉದ್ಯಮಕ್ಕೆ ಸಂಬಂಧಪಟ್ಟಂತೆ ವಿಸ್ತೃತ ಯೋಜನೆ ರೂಪಿಸಿಕೊಳ್ಳಬಹುದಿತ್ತು. ಆದರೆ ಮನೆಯ ಮುಂದೆ ಸುತ್ತಮುತ್ತ ಒಂದಿಷ್ಟು ಹಸಿರು ಸೃಷ್ಟಿಸುವತ್ತ ಮನಮಾಡಿದರು. ಮತ್ತೆ ಸ್ವಲ್ಪ ಜಾಗ ಖರೀದಿಸಿದರು. ಒಂದು ಎಕರೆಯಲ್ಲಿ ಅಡಿಕೆ ಗಿಡ ನೆಟ್ಟಿದ್ದು ಫಸಲು ಬರುವ ಹಂತದಲ್ಲಿದೆ. ಅದಲ್ಲದೆ ಈ ಜಾಗದ ಆವರಣದಲ್ಲಿ ಹಣ್ಣಿನ ಗಿಡಗಳಿವೆ. ತೆಂಗು, ಬಾಳೆಯಿದೆ. ತೋಟದ ಮಧ್ಯೆ ಅಲಸಂಡೆ, ತೊಂಡೆ, ಬಸಳೆ, ಸೋರೆಕಾಯಿ ಮತ್ತಿತರ ತರಕಾರಿ ಬೆಳೆಸಿದ್ದಾರೆ. ತನ್ನದೇನಿದ್ದರೂ ಖುಷಿಗಾಗಿ ಕೃಷಿ. ತೋಟದಲ್ಲಿ ಒಂದಿಷ್ಟು ದೈಹಿಕ ಶ್ರಮ ಮನಸ್ಸಿಗೂ ತೃಪ್ತಿ ನೀಡುತ್ತದೆ. ಎನ್ನುತ್ತಾರೆ ಡಿಮೆಲ್ಲೊ

ದನ ಸಾಕಣೆ

ದೇಸೀಯ ಮೂರು ದನಗಳನ್ನು ಸಾಕಿದ್ದಾರೆ. ಹೈನುಗಾರಿಕೆ ಮಾಡಿ ಹಾಲು ಸೊಸೈಟಿಗೆ ನೀಡಿ ಅದರಿಂದ ಸಂಪಾದನೆ ಮಾಡುವ ಉದ್ದೇಶದಿಂದ ದನ ಸಾಕಾಣೆಯನ್ನು ನೆಚ್ಚಿಕೊಂಡಿಲ್ಲ. ತೋಟದಲ್ಲಿರುವ ಹುಲ್ಲು ದನಗಳಿಗೆ ಆಹಾರವಾಗುತ್ತದೆ. ತೋಟದ ಕಳೆ ಕಡಿಮೆಯಾಗುತ್ತದೆ. ಸಗಣಿಯಿಂದ ಎರೆಹುಳು ಗೊಬ್ಬರ ತಯಾರಿ, ಗೋಬರ್ ಗ್ಯಾಸ್ ತಯಾರಿ ಸೇರಿದಂತೆ ತೋಟಕ್ಕೆ ಬೇಕಾದ ಗೊಬ್ಬರವನ್ನು ಸರಿದೂಗಿಸುವುದು ಇವರ ಉದ್ದೇಶ. ಆಡು ಸಾಕಾಣೆಗೂ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಅನಾಥ ನಾಯಿಗಳಿಗೆ ಆಶ್ರಯ

ಜರ್ಮನ್ ಶಫರ್ಡ್ ನಾಯಿಗಳನ್ನು ಸಾಕಿದ್ದರೂ ಹಲವು ಅನಾಥ ಹಾಗೂ ರೋಗ ಪೀಡಿತ ನಾಯಿಗಳನ್ನು ತಂದು ಆರೈಕೆ ಮಾಡಿ, ಅನ್ನ ಹಾಕಿ ಸಾಕುವುದು ಅವರ ಹಾಗೂ ಮನೆ ಮಂದಿಯ ಹವ್ಯಾಸ.

ಕೃಷಿ ಲಾಭ ತಂದು ಕೊಡಬೇಕೆಂಬ ಉದ್ದೇಶದಿಂದ ಮಾಡುತ್ತಿಲ್ಲ. ನಾವು ಬೆಳೆಸಿದ ಗಿಡ ಮರಗಳು ನಮಗೆ ಖುಷಿಯನ್ನು ನೀಡುತ್ತವೆ. ತಾನು ಕಚೇರಿಗೆ ಹೋಗುವ ಮುನ್ನ ತೋಟದಲ್ಲಿ ಸ್ವಲ್ಪ ಕೆಲಸ ಮಾಡುತ್ತೇನೆ. ಅದೇ ನನಗೆ ದೈಹಿಕ ವ್ಯಾಯಾಮ. ಅದರಿಂದ ದಿನವಿಡೀ ಉಲ್ಲಾಸಿತನಾಗಿರಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಡಿಮೆಲ್ಲೋ.

ರೈತರಿಗೆ ಬೇಕಾದ ಕೃಷಿ ಯಂತ್ರೋಪಕರಣ ತಯಾರಿಸಲು ಮತ್ತೆ ಮುಂದಾಗಿದ್ದಾರೆ. ರಬ್ಬರ್ ರೋಲರ್‌ನ ಕಹಿ ನೆನಪು ಸದಾ ಕಾಡುತ್ತಿದ್ದರೂ ರೈತರು ಕೂಲಿಯಾಳುಗಳ ಸಮಸ್ಯೆ ಎದುರಿಸುತ್ತಿರುವುದಿಂದ ತೋಟಕ್ಕೆ ಗೊಬ್ಬರ ಸಾಗಿಸಲು, ತೋಟದಿಂದ ಅಡಿಕೆ, ತೆಂಗಿನಕಾಯಿ ಇತರ ಉತ್ಪನ್ನಗಳನ್ನು ತರಲು ಅನುಕೂಲವಾಗುವಂತ ಹಳೆಯ ವಾಹನಗಳನ್ನು ಬಳಸಿ ಡಂಪರ್ ತಯಾರಿಸಲು, ಕಳೆ ಕೊಚ್ಚುವ ಯಂತ್ರಗಳು ಸೇರಿದಂತೆ ಕೃಷಿ ಯಂತ್ರೋಪಕರಣಗಳ ದುರಸ್ತಿ, ಕೃಷಿಕರಿಗೆ ಅನುಕೂಲವಾಗುವ ಯಂತ್ರಗಳನ್ನು ತಯಾರಿಸುವ ಯೋಜನೆ ಅವರಲ್ಲಿದೆ ಮೊ. 9071762052

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group