spot_img
Tuesday, September 17, 2024
spot_imgspot_img
spot_img
spot_img

ಏಣಿ ಏರಿ ಮೆಣಸು ಕೊಯ್ಯುವ ಶುಭಾ 

-ಗಣಪತಿ ಹಾಸ್ಪುರ

ಸಾಮಾನ್ಯವಾಗಿ ಇಂದು ಎಲ್ಲರ ಚಿತ್ತ ನಗರಗಳ ಕಡೆಯಿದೆ.ಅಲ್ಲಿ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ನೌಕರಿ ಮಾಡಿಯೇ ಜೀವನ ಮಾಡಬೇಕು ಎಂಬುದು ಕೇವಲ ಗಂಡುಮಕ್ಕಳು ಒಂದೇ ಅಲ್ಲ, ಹೆಣ್ಣು ಮಕ್ಕಳ ಮನಸ್ಸಿನಲ್ಲಿಯೂ ಅಡಕವಾಗಿದೆ.ಅಂದ್ರೆ ಸ್ವ ಬಲದ ಮೇಲೆ ದುಡಿದು ಗಳಿಸಬೇಕು ಎಂಬುದು ಅವರಿಚ್ಛೆ ಆಗಿರಬಹುದು. ಆಧುನಿಕ ಜೀವನ ಶೈಲಿಯಲ್ಲಿ ಅದು ತಪ್ಪೇನು ಅಲ್ಲ.ನಗರವೇ ಆಗಲಿ ಹಳ್ಳಿಯೇ ಆಗಲಿ ದಂಪತಿಗಳು ಜೊತೆಯಾಗಿ ದುಡಿದರೆ ಸಂಸಾರದ ನೌಕೆಯನ್ನು ವ್ಯವಸ್ಥಿತ ಮಾರ್ಗದಲ್ಲಿ ಮುನ್ನಡೆಸಬಹುದು ಎಂಬುದು ಅವರ ಅಭಿಲಾಷೆಯೂ  ಆಗಿರಬಹುದು.ಈ ಹೈಟೆಕ್ ಜೀವನದಲ್ಲಿ ನೌಕರಿಯಲ್ಲಿ ಜೊತೆಯಾಗಿ ದುಡಿಯುವಷ್ಟು ದಂಪತಿಗಳು, ಹಳ್ಳಿಯಲ್ಲಿ ಕೃಷಿಯ ಕೆಲಸದಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಅತೀ ವಿರಳ.

ಆದರೂ, ಗ್ರಾಮೀಣ ಪ್ರದೇಶದಲ್ಲಿ ಪತಿಯ ಕೃಷಿ ಚಟುವಟಿಕೆಗೆ ಹೆಗಲು ಕೊಡುವ, ಅವರಂತೆ ಕೃಷಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಹೆಂಗಳೆಯರು ಸಹ ನಮ್ಮ ಮುಂದೆ ಇರುವುದು ನಿಜಕ್ಕೂ ಹೆಮ್ಮೆಯ ಸಂಗತಿ.ಅಂತಹ ಆದರ್ಶ ಕಾರ್ಯದಲ್ಲಿ ತೊಡಗಿಕೊಂಡ ಕೃಷಿ ಸಾಧಕಿಯನ್ನು ಗುರುತಿಸುವ ಕಾರ್ಯವೂ ನಡೆದಾಗ ಮಾತ್ರ ಅವರ ಪರಿಶ್ರಮ ಸಾರ್ಥಕ ಆಗಬಹುದು. ಅಂತಹ ಸಾಧನೆ ಮಾಡುತ್ತಾ ಇರುವುದರಲ್ಲಿ ಗಿಳಿಗುಂಡಿ ಶುಭಾ ಭಟ್ ಸಹಾ ಒಬ್ಬರು.                                   ‌                        ‌

‌ ಸಿದ್ದಾಪುರ ತಾಲೂಕಿನ  ಹಳ್ಳಿಬೈಲ್ ಸಮೀಪದ ಗಿಳಿಗುಂಡಿಯ ನಿವಾಸಿಯಾದ ಶುಭಾ ಪ್ರಶಾಂತ ಭಟ್  ಕೇವಲ ಗೃಹಿಣಿಯೋ , ಅಥವಾ ಕೃಷಿ ಮಹಿಳೆಯೂ ಅಲ್ಲ. ಅವರು ಡಾನ್ಸ್, ಕಸೂತಿ, ಹಾಡು ಹೇಳುವುದು, ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸುವುದು, ಹೊಲಿಗೆ ಕೆಲಸ,ಬ್ಯೂಟಿಶಿಯನ್,  ಅಂದದ ರಂಗೋಲಿ ಹಾಕುವುದ್ರಲ್ಲಿ….ಹೀಗೆ ಭಿನ್ನ ಭಿ‌ನ್ನ ಚಟುವಟಿಕೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶುಭಾ ಭಟ್ ಬಹುಮುಖ ಪ್ರತಿಭೆ ಎಂದರೂ ತಪ್ಪಾಗಲಾರದು.ಅಷ್ಟೇ ಅಲ್ಲ, ಪತಿಯ ಕೃಷಿ ಕಾರ್ಯಗಳಿಗೂ ಹೆಗಲು ಕೊಟ್ಟು ಶ್ರಮಿಸುತ್ತಾ ಇದ್ದಾರೆ.

                       ‌

ಮೆಣಸು ಕೊಯ್ಯವ ನಾರಿ!               ‌                                       

ಈಗ ಮೆಣಸು ಬೆಳೆಗಾರರಿಗೆ ಅಗ್ನಿಪರೀಕ್ಷೆ ಆರಂಭವಾಗಿದೆ. ಮಳೆಗಾಲದಲ್ಲಿ ಮದ್ದು ಹೊಡೆದು ಮೆಣಸಿನ ಬಳ್ಳಿಗಳನ್ನು ಸಂರಕ್ಷಿಸಿಕೊಂಡು ಬಂದಿರುವ ಕೃಷಿಕರು, ಈಗ ಅದ್ರ ಕೊಯ್ಯವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದು ಅಡಿಕೆ ಕೃಷಿ ಯಂತೆ ಸುಲಭವೇನು ಅಲ್ಲ. ಅಡಿಕೆಯ ಫಸಲು ಕೊಯ್ಯಲು ವಿಳಂಭವಾದರೆ ಅದು ಹಣ್ಣಾಗಿ ಉದುರತ್ತದೆ. ಹಾಗೆ ಉದುರಿದ ಅಡಿಕೆಯನ್ನು ಆರಿಸಿಕೊಂಡು ಬರಬಹುದು. ಆದ್ರೇ, ಈ ಕಪ್ಪು ಬಂಗಾರ ಹಾಗಲ್ಲ. ಅದು ಹಣ್ಣಾಗಿ ಉದುರಿದರೆ ನೆಲದಿಂದ ಆರಿಸುವುದು ಬಹಳ ಕಷ್ಟ.ಹಣ್ಣಾಗುವ ಮೊದಲೆ ಕೊಯ್ದರೆ ಜಿಕ್ಕಾಗುವುದೇ ಹೆಚ್ಚು.

ಹೀಗಾಗಿ ಈ ಮೆಣಸು ಬೆಳೆ ಅತೀ ಸೂಕ್ಷ್ಮವಾಗಿದ್ದು ,ಅದ್ರ ಫಸಲು ಕೊಯ್ಯವುದಕ್ಕು ಒಂದು ಹದವಿದೆ. ಬಳ್ಳಿಯಲ್ಲಿ ಒಂದೆರಡು ಕರೆ ಹಣ್ಣಾದಾಗ ಫಸಲು ಕೊಯ್ಲು ಮಾಡಲು ಆರಂಭ ಮಾಡಿದರೆ ಉತ್ತಮ ಫಲ ಪಡೆಯಲು ಸಾಧ್ಯ ಎನ್ನುತ್ತಾರೆ ಅನುಭವಿ ಮೆಣಸು ಬೆಳೆಯುವ ಕೃಷಿಕರು.                    ‌

ಈಗೀಗ ಈ ಮೆಣಸು ಕೊಯ್ಯಲು ಜನ ಸಿಗುವುದಿಲ್ಲ. ಕೆಲ ಭಾಗದಲ್ಲಿ ಕೆ.ಜಿ ಲೆಕ್ಕದಲ್ಲಿ, ಬಹುಕಡೆಗಳಲ್ಲಿ ಆಳ್ ಲೆಕ್ಕದಲ್ಲಿ ಮೆಣಸನ್ನು ಕೊಯ್ಯುವ ಕೆಲಸ ಮಾಡಿಸುತ್ತಾರೆ.ಕೆಲ ರೈತರಿಗೆ ಕಡಿಮೆ ಭೂಮಿ ಇದ್ದು, ತೀರಾ ಕಡಿಮೆ ಪ್ರಮಾಣದಲ್ಲಿ ಮೆಣಸಿನ ಕೃಷಿ ಮಾಡುತ್ತಾ ಇದ್ದಾರೆ. ಇಂಥಹ ಬೆಳೆಗಾರರು ಮೆಣಸಿನ ಫಸಲನ್ನು ಕಾರ್ಮಿರಿಂದ ಕೊಯ್ಯಿಸಿದರೆ ಅದ್ರ ಉತ್ಪನ್ನಕ್ಕಿಂತ, ಆಳಿನ ಪಗಾರೆ ಹೆಚ್ಚು ಆಗುತ್ತದೆ ಎಂಬ ಕಾರಣಕ್ಕೆ ಸ್ವಶ್ರಮದಿಂದ ಮೆಣಸಿನ ಫಸಲನ್ನು ಕೊಯ್ದು ಕೊಳ್ಳುತ್ತಾರೆ. ಕೇವಲ ಮನೆಯ ಗಂಡಸರು ಒಂದೇ ಅಲ್ಲ, ಮನೆಯ ಹೆಂಗಳೆಯರು ಸಹ ಕೈಜೋಡಿಸುತ್ತಾರೆ. ಅಂಥವರಲ್ಲಿ ಗಿಳಿಗುಂಡಿಯ ಶುಭಾ ಭಟ್ ಸಹ ಒಬ್ಬರು.             ‌

ಇವರಿಗೆ ಇರುವುದು  ಒಂದುವರೆ ಎಕರೆ ಅಡಿಕೆ ತೋಟ.   ‌ಕೇವಲ ಅಡಿಕೆ ಒಂದೇ ಇದ್ರೆ ಸಾಲದು ಎಂಬ ಕಾರಣಕ್ಕೆ ಅವರ ಮನೆಯವರು ಮೆಣಸಿನ ಸಸಿಗಳನ್ನು  ಸಹ ಹಚ್ಚಿ ಬೆಳೆಸಿದ್ದರು. ಶುಭಾ ಅವರು ಚಿಕ್ಕ ವಯಸ್ಸಿನಲ್ಲಿ ಹಣ್ಣು ಕೊಯ್ಯಲು,ಕಡಿಗೆ ಸೊಪ್ಪು ಕೊಯ್ಯಲು ಮರ ಹತ್ತಿ ಕೊಯ್ಯುವ ಆಭ್ಯಾಸ ಇತ್ತು. ಆದ್ರೆ, ಮದುವೆ ಆದ್ಮೇಲೆ ಮರ ಏರಿ ಕೊಯ್ಲೇ ಬೇಕು ಎನ್ನುವ ಅನಿವಾರ್ಯತೆ ಬರಲಿಲ್ಲ. ಬಹುಶಃ 2012 ರಲ್ಲಿ ತೋಟದಲ್ಲಿ ಮೆಣಸೆಲ್ಲ ಹಣ್ಣಾಗಿ ಉದುರಿಹೊಗ್ತು. ಒಂದ್ ಆಳ್ಗ ಬೇಕು ಅಂದ್ರುವಾ ಸಿಕ್ತ್ವಿಲ್ಲೆ ಹೇಳಿ ಯಜಮಾನ್ರು ಒಬ್ಬರೇ ಮೆಣಸು ಕೊಯ್ಲು ಮಾಡುತ್ತಿದ್ದರು.ಒಮ್ಮೆ ಅವರು ತಿರುಗಾಟ ಕ್ಕೆ ಹೋದ ಸಮಯದಲ್ಲಿ ಏಣಿಯನ್ನು ಏರಿ ಮನೆಯವರು ಬರುವ ಮೊದ್ಲೆ ಒಂದ್ ಚೀಲದಷ್ಟು ಮೆಣಸನ್ನು ಕೊಯ್ದು ಇಟ್ಟಿದ್ದೆ. ಅವ್ರು ಬೈಬಬಹುದು ಎಂಬ ಕಾರಣಕ್ಕೆ ಬಹಳ ನಾಜೂಕಿನಿಂದ ಮೆಣಸಿನ ಫಸಲನ್ನು ಕೊಯ್ದಾಗ ಮನಸ್ಸಿಗೆ ಸಂತೃಷ್ತಿಯೂ ಆಗಿತ್ತು.

ನಾಲಕೆಯಿಂದ ಮನೆಯವರೊಂದಿಗೆ ನಾನು ಮೆಣಸು ಕೊಯ್ದರೆ ಆಳಿಗೆ ಕೊಡುವ ಹಣವನ್ನು ಉಳಿಸಬಹುದು, ನಮ್ ತೋಟದಲ್ಲಿ ಹಣ್ಣಾಗಿ ಉದುರಿ ಹೋಗುವ ಮೊದ್ಲೆ ಫಸಲನ್ನು ಕೊಯ್ದು ಬೆಳೆ ಉಳಿಸಿಕೊಳ್ಳಬಹುದು, ಹಾಗೂ ಯಜಮಾನರಿಗೆ ನಾವು ಸಹಾಯ ಮಾಡಿದರೆ, ಬೇಗ ಆ ಕೆಲಸವನ್ನು ಮುಗಿಸಬಹುದು ಎಂಬ ವಿಚಾರ ಹೊಳೆದಿತ್ತು. ಅಂತೆಯೇ,ಆ ಸೀಜನ್ನಿಂದಲೇ ಪತಿಯ ಜೊತೆಗೆ , ಮನೆ ಕೆಲಸಗಳನ್ನು ಪೂರೈಸಿಕೊಂಡು ಮೆಣಸು ಕೊಯ್ಯಲು ಏಣಿ ಏರಲು ಆರಂಭ ಮಾಡಿದೆ ಎಂದು ಶುಭಾ ಭಟ್ ತಮ್ಮ ಏಣಿ ಸಾಹಸದ ಕೆಲಸದ ಬಗ್ಗೆ ಮುಕ್ತವಾಗಿ ಹೇಳಿದರು.

    ‌

ಇವರು ಮೆಣಸಿನ ಫಸಲನ್ನು ಕೊಯ್ಯಲು ಚೂಳಿಯೋ, ಚೀಲವನ್ನು ಬಳಕೆ ಮಾಡುವುದಿಲ್ಲ. ಅದ್ನ ಉಪಯೋಗ ಮಾಡಿದರೆ ಸೊಂಟಕ್ಕೆ ಭಾರವಾಗಿ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಆದ್ರೆ ಸೀರೆಯನ್ನು ಕೊಳವೆ ತರ ಮಾಡಿಕೊಂಡು ಬಳಕೆ ಮಾಡಿದರೆ ಎಷ್ಟೇ ಎತ್ತರದ ಬಳ್ಳಿಯಿರಲಿ, ಅಷ್ಟು ಎತ್ತರಕ್ಕೆ ಏರಿ ಮೆಣಸಿನ ಫಲ ಕೊಯ್ದು ಸೀರೆಯ ಕೊಳವೆಗೆ ಹಾಕಿದರೆ , ಅದು ನೇರವಾಗಿ ನೆಲಕ್ಕೆ ಬಂದಿರುತ್ತದೆ. ಹೀಗಾಗಿ ಹೆಚ್ಚು ಭಾರವಿಲ್ಲದ, ಸೊಂಟಕ್ಕು ಆರಾಮವಾದ ಸೀರೆಯ ಕೊಳವೆಯನ್ನುಮೆಣಸು ಕೊಯ್ಯಲು  ಹೆಣ್ಣು ಮಕ್ಕಳು ಬಳಸಿಕೊಳ್ಳಬಹುದು ಎನ್ನುತ್ತಾರೆ ಶುಭಾ ಭಟ್.

ನಾನು ಇಪ್ಪತ್ತು ಫೀಟಿನ ಏಣಿಯನ್ನುಜೋಡಿಸಿಕೊಂಡು ನಲವತ್ತು ಫೀಟಿನಷ್ಟು ಎತ್ತರದ ಏಣಿಯನ್ನು ಏರಿ  ಮೆಣಸನ್ನು ಕೊಯ್ದಿರುವೆ. ಮರ ಏರುವಾಗ ಧೈರ್ಯವೂ ಬೇಕು. ಜೊತೆಗೆ ಡ್ರೆಸ್ಸಿ ನ ಬಗ್ಗೆನು ಕಾಳಜಿ ವಹಿಸಬೇಕು. ಸೀರೆ ಉಟ್ಟು ಅಷ್ಟೆ ಲ್ಲ ಎತ್ತರ ಏಣಿಯಲ್ಲಿ ಹತ್ತುವುದು ಕಷ್ಟ. ಇನ್ನು ಮನೆಯವರ ಸಹಾಯ, ಪ್ರೋತ್ಸಾಹ ಇಲ್ಲದೇ ಏಣಿಯ  ಕೆಲಸ ಮಾಡುವುದು ಅಸಾಧ್ಯ. ಆದ್ರೆ ನಾನು ಚಿಕ್ಕವಳಿರುವಾಗ ಮುಂಡದ ತೋಟದ ಕೊನೆನು ಕೊಯ್ದ ಅನುಭವ, ಆ ಕೆಲಸದಲ್ಲಿ ಇರುವ ಆಸಕ್ತಿ, ಯಾವುದೇ ಅಂಜಿಕೆ ಇಲ್ಲದೇ ಏಣಿಯನ್ನು ಏರುವ ಧೈರ್ಯ ಇದ್ದಿದ್ದರಿಂದ ಈಗ ಮೆಣಸು ಕೊಯ್ಯಲು ನೆರವಿಗೆ ಬಂದಿತ್ತು. ಮನೆಯವರು ತನ್ನ ಕೆಲಸಕ್ಕೆ ಸಾಹಸದ ಕೆಲಸಕ್ಕೆ  ಪ್ರೋತ್ಸಾಹ  ಕೊಟ್ಟಿದ್ದರಿಂದ ಈಗ ಸರಾಗವಾಗಿ ಏಣಿಯನ್ನು ಹತ್ತಿ ಮೆಣಸನ್ನು ಕೊಯ್ಯುತ್ತಾ ಇದ್ದೇನೆ‌.ಮನೆ ಕೆಲಸಗಳನ್ನು ಮುಗಿಸಿಕೊಂಡು ಮೆಣಸನ್ನು ಕೊಯ್ಯಲು ಹೋಗುವೆ. ಏನಿಲ್ಲವೆಂದರೂ ದಿನಕ್ಕೆ ಸರಾಸರಿ   40 – 45 ಕೆ.ಜಿ ಯಷ್ಟು ಮೆಣಸಿನ ಫಸಲನ್ನು ನಾನು ಕೊಯ್ಯುತ್ತೇನೆ. ಇದರಿಂದ ನನಗೆ ಖುಷಿಯೂ ಇದೆ. ಸಂತೃಪ್ತಿಯೂ ಇದೆ. ನಮ್ಮನೆ ಕೆಲಸವನ್ನು ನಮ್ಮ ಪರಿಶ್ರಮದಿಂದ ಮಾಡಿಕೊಂಡರೆ ಆತ್ಮಸಂತೋಷದ ಜೊತೆಗೆ, ಅನಾವಶ್ಯಕ ಕೂಲಿಗೆ ವ್ಯಯವಾಗುವ ಹಣವೂ ಉಳಿಸಿದೆವು ಎಂಬ ಆತ್ಮತೃಷ್ತಿ ಆಗದೇ ಇರದು.
ಹೀಗೆ ಏಣಿಯನ್ನು ಏರಿ  ಮೆಣಸು ಕೊಯ್ಯುವ ಕೆಲಸ ಮಾಡಿದಾಗ ಒಂದಿಷ್ಟು ಜನ ಅಪಹಾಸ್ಯ ಮಾಡುವುದುಂಟು. ಅದ್ಕೆ ಕಿವಿಗೊಡದೆ ನಮ್ಮನೆ ಕೆಲಸವನ್ನು ನಾವು ಖುಷಿಯಿಂದ ಇನ್ನಷ್ಟು ಆಸಕ್ತಿಯಿಂದ ಮಾಡಿದರೆ ನಾಲ್ಕಾರು ಜನರಿಗಾದರೂ ನಮ್ಮ ಶ್ರಮದ ಮೌಲ್ಯ ಅರ್ಥವಾಗಿ, ಏಣಿ ಏರಿ ಮಾಡುವ ಸಾಹಸ ಕೆಲಸ ಮಾಡಲು ಇನ್ನುಳಿದ ಹೆಂಗಳೆಯರಿಗೂ ಹುಮ್ಮಸ್ಸು, ಧೈರ್ಯವೂ ಬಂದರೂ ಆಶ್ಚರ್ಯ ವಿಲ್ಲ ಎನ್ನುತ್ತಾರೆ ಗಿಳಿಗುಂಡಿಯ ಶುಭಾ ಭಟ್. ಇವರಂಥಹ  ಕೃಷಿ ಕೆಲಸದಲ್ಲಿ ಸಾಹಸಿ ಮಹಿಳೆಯರು ಹೆಚ್ಚಾದರೆ, ಕೃಷಿಯ ವೈವಿಧ್ಯವನ್ನು ಉಳಿಸುವುದ್ರ ಜೊತೆಗೆ ಕೃಷಿ ಬೆಳೆಗಳನ್ನು ವೃದ್ಧಿಸಿಕೊಂಡು ಅದರ ಆದಾಯದಿಂದ ಸಂತೃಪ್ತಿ ಕೃಷಿ ಸಂಸಾರವನ್ನು ಮುನ್ನೆಡೆಸಲು ಸಾಧ್ಯ ಆಗಬಹುದು.                           ‌

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group