ರಾಧಾಕೃಷ್ಣ ತೊಡಿಕಾನ
ಕೃಷಿ ಕ್ಷೇತ್ರದಲ್ಲಿ ಇತ್ತೀಚಿಗೆ ಹೆಚ್ಚು ಹೆಚ್ಚು ಯಂತ್ರಗಳು ಬಳಕೆಯಾಗುತ್ತಿವೆ. ಹೊಸ ಹೊಸ ಯಂತ್ರಗಳು ಹೊಲಗದ್ದೆಗಳಲ್ಲಿ ಸದ್ದು ಮಾಡುತ್ತಿವೆ. ಬೀಜ ಮತ್ತು ಗೊಬ್ಬರ ಏಕಕಾಲದಲ್ಲಿ ಬಿತ್ತನೆ ಮಾಡುವ ಯಂತ್ರವಿದೆ. ಅಲ್ಲದೆ ಯಾರ ಸಹಾಯವಿಲ್ಲದೆ ರಿಮೋಟ್ ಮೂಲಕವೇ ಬೀಜ ಬಿತ್ತನೆ ಮಾಡಬಹುದು. ಗೊಬ್ಬರ ಹಾಕಬಹುದು. ಈ ರೀತಿಯ ಯಂತ್ರವು ಈಗ ಮಾರುಕಟ್ಟೆಗೆ ಬಂದಿವೆ. ಹಲವು ವಿಧದ ಬೀಜವನ್ನು ಬಿತ್ತುವ ಯಂತ್ರಗಳಿದ್ದರೂ ಆಲೂಗಡ್ಡೆ ಬೀಜ ಬಿತ್ತನೆಗೆ ಯಾವುದೇ ಯಂತ್ರಗಳಿರಲಿಲ್ಲ. ಆದರೆ ಈಗ ಆಲೂಗಡ್ಡೆ ಬೆಳೆಗಾರರಿಗೆ ಅನುಕೂಲವಾಗುವ ಯಂತ್ರವೊಂದು ಪರಿಚಯಿಸಲಾಗಿದೆ. ಮೂಡಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ತಂತ್ರಜ್ಞಾನ ವಿಭಾಗದ ಅಂತಿಮ ಪದವಿಯ ವಿದ್ಯಾರ್ಥಿ ಸಂತೋಷ ಎಂ. ಅವರು ಈ ಹೊಸ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಆಲೂಗಡ್ಡೆ ಕೃಷಿಯಲ್ಲಿ ಹಾಸನಕ್ಕೆ ಮೊದಲ ಸ್ಥಾನ. ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ, ಉತ್ತರ ಕರ್ನಾಟಕ ಭಾಗದಲ್ಲಿ ಆಲೂಗಡ್ಡೆ ಬೆಳೆಗಾರರಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಉಳುಮೆಗೆ ಯಾಂತ್ರಗಳ ಬಳಕೆಯಾದರೂ ಬಹುತೇಕ ಕಡೆಗಳಲ್ಲಿ ಆಲೂಗಡ್ಡೆ ಬಿತ್ತನೆಗೆ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸುತ್ತಾ ಬರುತ್ತಿದ್ದಾರೆ.
ಸಾಂಪ್ರದಾಯಿಕವಾಗಿ ಒಂದು ಎಕರೆ ಬಿತ್ತನೆಗೆ 10-12 ಸಾವಿರ ಖರ್ಚು ವೆಚ್ಚಗಳಾದರೆ ದಿನವೊಂದಕ್ಕೆ ಏಳೆಂಟು ಮಹಿಳೆಯರು,ಇಬ್ಬರು ಗಂಡಸರು ಸೇರಿದಂತೆ 10 ಮಂದಿ ಕೂಲಿ ಕಾರ್ಮಿಕರ ಅವಶ್ಯಕತೆ ಇದೆ. ಪ್ರಸ್ತುತ ದಿನಗಳಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ. ಏಕಕಾಲದಲ್ಲಿ ಬಿತ್ತನೆ ಕಾರ್ಯವು ನಡೆಯುವುದರಿಂದ ಕಾರ್ಮಿಕರಿಗಾಗಿ ಕಾಯಬೇಕಾದಂತಹ ಪರಿಸ್ಥಿತಿ. ಈ ಹಿನ್ನೆಲೆಯಲ್ಲಿ ಆಲೂಗಡ್ಡೆ ಬೀಜಗಳನ್ನು ಬಿತ್ತನೆಗೆ ಅನುಕೂಲವಾಗುವಂತಹ ಯಂತ್ರವನ್ನು ಸಂತೋಷ್ ಎಂ. ಅಭಿವೃದ್ಧಿಪಡಿಸಿದ್ದಾರೆ.
ಕೋಲಾರ ಜಿಲ್ಲೆಯ ಗುರುಗುಂಜಿಗ್ರಮದ ಗುರ್ಕಿಯ ಸಂತೋಷ ಎಂ. ಅವರು ಕೃಷಿಕ ಕುಟುಂಬದವರು. ಅದರಲ್ಲೂ ಆಲೂಗಡ್ಡೆ ಬೆಳೆಗಾರರು. ಮೂಡಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೃಷಿ ತಂತ್ರಜ್ಞಾನ ವಿಭಾಗದ ಅಂತಿಮ ಪದವಿಯಲ್ಲಿದ್ದಾರೆ. ಪದವಿಯ ನಂತರ ಕೃಷಿಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂಬ ಆಸಕ್ತಿ ಹೊಂದಿರುವ ಅವರು ಆಲೂಗಡ್ಡೆ ಬಿತ್ತನೆ ಸಮಯದಲ್ಲಾಗುವ ಸಮಸ್ಯೆ ಬಲ್ಲರು. ಆದುದರಿಂದ ರೈತರಿಗೆ ಅನುಕೂಲವಾಗುವ ಆಲೂಗಡ್ಡೆ ಬಿತ್ತನೆಗೆ ಸುಧಾರಿತ ಯಂತ್ರ ತಯಾರಿಯಲ್ಲಿ ಆಸಕ್ತಿ ವಹಿಸಿದರು. ಈ ಸಂದರ್ಭದಲ್ಲಿ ಕೃಷಿ ತಂತ್ರಜ್ಞಾನ ವಿಭಾಗದ ವಿನುತಾ ಎಂ. ಬೆಟ್ಟಗೇರಿ ಅವರ ಮಾರ್ಗದರ್ಶನ ಈ ಯಂತ್ರ ತಯಾರಿಗೆ ಪ್ರೇರಕವಾಯಿತು.
ವಿಶೇಷತೆಗಳು
* ಸಾಂಪ್ರದಾಯಿಕ ಬಿತ್ತನೆಯಲ್ಲಿ ಕೆಲವು ಕಡೆ ಬಿತ್ತನೆಯಾಗದೆ ಉಳಿಯಬಹುದು. ಆದರೆ ಈ ಯಂತ್ರದಲ್ಲಿ ಅಂತ ಸಮಸ್ಯೆಗಳಿಲ್ಲ.
* ಟ್ರ‍್ಯಾಕ್ಟರ್ ಮೂಲಕ ನಿಖರ ಬಿತ್ತನೆಗೆ ಸಹಕಾರಿ. ಬೆಲ್ಟ್ ಕನ್ವೆಯರ್ ಮೇಲೆ ಸಣ್ಣ ಸಣ್ಣ ಬಟ್ಟಲು ಇರುವುದರಿಂದ ಒಂದೊAದೇ ಆಲೂಗಡ್ಡೆ ಬಿತ್ತಲು ಅನುಕೂಲ.
* ಗಿಡದಿಂದ ಗಿಡಕ್ಕೆ ಅಡಿ ಅಂತರವಿರಿಸಬಹುದು
* ಸಾಲಿನಿಂದ ಸಾಲಿಗೆ ಒಂದರಿಂದ ಒಂದು ಕಾಲು ಅಡಿ ಅಂತರ ಅಥವಾ ರೈತರಿಗೆ ಅವಶ್ಯಕತೆ ತಕ್ಕಂತೆ ಅಂತರ ವಿರಿಸಿಕೊಳ್ಳಬಹುದು.
* ಬೀಜಗಳನ್ನು ಎಷ್ಟು ಆಳದಲ್ಲಿ ಬಿತ್ತಬೇಕೆಂಬುದು ನಿಗದಿಪಡಿಸಿಕೊಳ್ಳಬಹುದು.
* ಟ್ರ‍್ಯಾಕ್ಟರ್ ಚಾಲನೆಗೆ ಒಬ್ಬರಿದ್ದರೆ ಸಾಕು, ಇತರ ಅಳುಗಳ ಅವಶ್ಯಕತೆ ಇಲ್ಲ.
* ಒಂದು ಎಕರೆ ಬಿತ್ತನೆಗೆ ಎರಡು ಗಂಟೆ ಸಾಕು. 70 ಗಂಟೆಯ ಮಾನವ ಶ್ರಮವನ್ನು ಈ ಯಂತ್ರ 2-3 ಗಂಟೆಯಲ್ಲಿ ನಿರ್ವಹಿಸುತ್ತದೆ. ಸಮಯದ ಉಳಿತಾಯವಾಗುತ್ತದೆ. ಆಯಾ ಋತುಮಾನದಲ್ಲಿ ಕ್ಲಪ್ತ ಸಮಯಕ್ಕೆ ಬಿತ್ತನೆ ಮಾಡಿಕೊಳ್ಳಬಹುದು.
*ಯಾಂತ್ರೀಕೃತ ಆಲೂಗಡ್ಡೆ ಬೀಜ ಬಿತ್ತನೆ ಯಂತ್ರವು ಕಾಲುವೆ ತೋಡುವಿಕೆ, ಬೀಜ ಬಿತ್ತನೆ ಮತ್ತು ಕಾಲುವೆಗಳನ್ನು ಮುಚ್ಚಿ ಪಾತಿಗಳನ್ನಾಗಿಸುತ್ತದೆ. ಮೂರು ಕೆಲಸಗಳನ್ನು ಏಕ ಕಾಲದಲ್ಲಿ ಮಾಡುತ್ತದೆ.
* ನಾಲ್ಕು-ಆರು ಸೆ.ಮಿ. ಗಾತ್ರದ ಬೀಜವನ್ನು ಬಿತ್ತನೆ ಮಾಡಬಹುದು.
ಆಳ್ವಾಸ್ ವಿರಾಸತ್ ಸಂದರ್ಭದಲ್ಲಿ ಕೃಷಿ ಸಿರಿಯಲ್ಲಿ ಪ್ರಾತ್ಯಕ್ಷಿಕೆಗಾಗಿ ಇರಿಸಿದ ಈ ಯಂತ್ರವನ್ನು ವೀಕ್ಷಿಸಿದ ರೈತರು ಈ ಯಂತ್ರವನ್ನು ಬಹು ಉಪಯೋಗಿ ಬಿತ್ತನೆ ಯಂತ್ರವಾಗಿ ಅಭಿವೃದ್ಧಿಪಡಿಸುವಂತೆ ಸಲಹೆಗಳನ್ನು ನೀಡಿದ್ದಾರೆ. ಅದರತ್ತಲೂ ಗಮನಹರಿಸುವುದಾಗಿ ಸಂತೋಷ್ ಹೇಳುತ್ತಾರೆ. ಕಬ್ಬಿನ ಬೀಜ ಬಿತ್ತನೆಗೂ ಅನುಕೂಲವಾಗುವಂತೆ ಅಭಿವೃದ್ಧಿಪಡಿಸುವ ಯೋಜನೆ ಅವರದು. ಮುಂದಿನ ದಿನಗಳಲ್ಲಿ ಗೊಬ್ಬರ ಮತ್ತು ಬೀಜ ಏಕಕಾಲಲ್ಲಿ ಬಿತ್ತನೆಗೂ ಅನುಕೂಲವಾಗುವಂತೆ ಯಂತ್ರವನ್ನು ಅಭಿವೃದ್ಧಿಪಡಿಸುವ ಯೋಚನೆಯಿದೆ.
ಮಾಹಿತಿಗೆ ಮೊ: 7483813336 [email protected]