spot_img
Thursday, September 19, 2024
spot_imgspot_img
spot_img
spot_img

ಮಣ್ಣಿನ ಗೋಡೆಗಳ ಸರದಾರ ಪೂವಣ್ಣ : ದಣಿವರಿಯದೆ ದುಡಿದ ಕಾಯಕಯೋಗಿ

 ಬರಹ-ಜಯಪ್ರಕಾಶ್ ಪುಣಚ.
” ಬೇಡೆನಗೆ ಕೈಲಾಸ , ಬಾಡುವುದು ಕಾಯಕವು, ನೀಡೆನಗೆ ಕಾಯಕವ ಕುಣಿದಾಡಿ – ನಾಡ ಹಂದರಕೆ ಹಬ್ಬಿಸುವೆ “
  ಹೀಗೆಂದವರು ಶಿವ ಶರಣ ಕುಂಬಾರ ಗುಂಡಯ್ಯ. ನನಗೆ ಕೈಲಾಸ ಬೇಡ ಕಾಯಕವನ್ನು ನೀಡು ಎಂದು ಭಗವಂತನಲ್ಲಿ ಬೇಡುತ್ತಾರೆ.ಇಂತಹ ಶಿವಶರಣರು ಕಾಯಕ ಯೋಗಿಗಳು  ಇಂದಿಗೂ ಅದೆಷ್ಟೋ ಜನರಿಗೆ ಪ್ರೇರಣೆಯಾಗಿದ್ದಾರೆ.ತಾನು ಮಾಡುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿ ಸಮಾಜಮುಖಿಯಾಗಿ , ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅದೆಷ್ಟೋ ಜನರನ್ನು ಸಮಾಜದಲ್ಲಿ ನಾವು ಕಾಣಬಹುದು.ಈ ಕಥೆಯ ಕಥಾನಾಯಕ ಸಹ ಒಬ್ಬ ಕಾಯಕ ಯೋಗಿಯೇ.
ಬಂಟ್ವಾಳ ತಾಲೂಕಿನ ಪುಣಚದ ಶ್ರೀಪೂವಣ್ಣನವರು ತಮ್ಮ ಕರ್ತವ್ಯದ ಅವಧಿಯಲ್ಲಿ ಸುಮಾರು 500 ಕ್ಕೂ ಹೆಚ್ಚಿನ ಮಣ್ಣಿನ ಗೋಡೆಗಳನ್ನು ರಚಿಸಿ ಸಾಧನೆ ಮೆರೆದಿದ್ದಾರೆ.ಒಂದು ಕಾಲಕ್ಕೆ ಕಲ್ಲಿನ ಗೋಡೆಗಳು ಅಪರೂಪವಾಗಿದ್ದವು. ಕೆಲವರು ಮಾತ್ರ ಕಲ್ಲಿನ ಗೋಡೆಯಲ್ಲಿ ಮನೆಕಟ್ಟುತ್ತಿದ್ದರು.ಜನ ಸಾಮಾನ್ಯರು ,ಮಧ್ಯಮವರ್ಗದ ಜನ ಮಣ್ಣಿನ ಗೋಡೆಯಲ್ಲಿ ಮನೆ ನಿರ್ಮಿಸುತ್ತಿದ್ದರು. ಸುಲಭವಾಗಿ ಪ್ರಕೃತಿಯಲ್ಲಿ ದೊರೆಯುವ ಮಣ್ಣೇ ಬಹುಜನರಿಗೆ ಆಶ್ರಯತಾಣಕ್ಕೆ ಮೂಲಾಧಾರವಾಗಿತ್ತು.
ಮಣ್ಣಿನ ಗೋಡೆ ರಚನೆಯನ್ನೇ ತನ್ನ ಕಾಯಕವನ್ನಾಗಿ ಆಯ್ಕೆ ಮಾಡುವ ಆಕಸ್ಮಿಕ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ಪೂವಣ್ಣನವರು.ಆ ಕಾಲಕ್ಕೆ ಅಂದರೆ ಸುಮಾರು 50 ವರ್ಷಗಳ ಹಿಂದೆ ಗ್ರಾಮಗಳಲ್ಲಿ ಮನೆ ಕಟ್ಟಿಸಿಕೊಡುವ ಕಂಟ್ರಾಕ್ಟ್ ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಅವರ ಬಳಿ 10 ಜನರ ತಂಡವೊಂದಿತ್ತು.ಮನೆ ರಚನೆಯ ತಮತಲ ತಟ್ಟು ರಟನೆಯಿಂದ ಪ್ರಾರಂಭಗೊಂಡು ಗೋಡೆ ರಚನೆಯವರೆಗಿನ ಕೆಲಸವನ್ನು ಮಾಡುತ್ತಿದ್ದರು.ಅದರ ಪ್ರಮುಖ ಕೆಲಸ ಗೋಡೆ ಕಟ್ಟುವವನದಾಗಿತ್ತು. ಗೋಡೆ ನೇರವಾಗಿ , ಗಟ್ಟಿ ಮುಟ್ಟಾಗಿ , ಸುಂದರವಾಗಿ ರಚಿಸಬೇಕಾಗಿತ್ತು.ಅದಕ್ಕೆ ಹೆಚ್ಚು ಅನುಭವದ ಅವಶ್ಯಕತೆ ಇತ್ತು. ಹಾಗೆ ಅಂತಹ ಕೆಲಸಗಾರರಿಗೆ ಹೆಚ್ಚಿನ ಬೇಡಿಕೆಯಿತ್ತು.
ಒಂದು ದಿನ ಗೋಡೆ ಕಟ್ಟುವವರು ಮಣ್ಣು ಸರಿಯಾಗಿ ಹದಗೊಳಿಸಿಲ್ಲ ಎಂದು ತಗಾದೆ ತೆಗೆದರು. ಅನಾವಶ್ಯಕವಾಗಿ ಗೋಡೆ ತಯಾರಿಗೆ ನಿರಾಕರಿಸಿದರು. ಆದರೆ ಮನೆಕೆಲಸ ಅತಿ ತುರ್ತಾಗಿ ಆಗಬೇಕಿತ್ತು.ಆತನ ಬಳಿ ಎಷ್ಟೇ ವಿನಂತಿಸಿದರೂ ಗೋಡೆ ರಚನೆಗೆ ನಿರಾಕರಿಸಿದರು.ಇದರಿಂದ ಕುಪಿತರಾದ ಪೂವಣ್ಣನವರು ಸ್ವತಹ ತಾವೇ ಗೋಡೆ ರಚನೆಯ ಕೆಲಸಕ್ಕೆ ಇಳಿದುಬಿಟ್ಟರು.ಅಂದಿನಿಂದ ಪ್ರಾರಂಭಗೊಂಡ ಇವರ ಸಾಹಸಗಾಥೆ ಸುಮಾರು 50 ವರ್ಷಗಳ ಕಾಲ ನಿರಂತರವಾಗಿ ನಡೆಯಿತು.
ಮಣ್ಢಿನ ಗೋಡೆ ರಚನೆಗೆ ಮಣ್ಣನ್ನು ಕನಿಷ್ಟ 8 ದಿನವಾದರೂ ನೀರನಲ್ಲಿ ನೆನೆಸಿ ಹದ ಮಾಡಬೇಕು.ಹಾಗೆ ಹದಗೊಳಿಸಿದ ಮಣ್ಣನ್ನು ಒಂದು ಬಾರಿಗೆ 2 ಅಡಿ ಎತ್ರಕ್ಕೆ ಮಾತ್ರ ಗೋಡೆ ನಿರ್ಮಾಣ ಮಾಡುವುದು.ನಂತರ 8 ದಿನಗಳವರೆಗೆ ಅದನ್ನು ಒಣಗಲು ಬಿಡಬೇಕಿತ್ತು. ಈ ಮಧ್ಯೆ ಅದಕ್ಕೆ ಮಣ್ಣು ಸವರಿ ಎತ್ತರ ತಗ್ಗನ್ನು ಸರಿಪಡಿಸಿ ಮರದ ” ಪೊಲಿಮನೆ” ಎಂಬ ಸಾಧನದಿಂದ ಹದವಾಗಿ ತಟ್ಟಬೇಕಿತ್ತು.ಇದು ಬಲು ನಾಜೂಕಿನ ಕೆಲಸವಾಗಿತ್ತು.ಇದಕ್ಕೆ ಹೆಚ್ಟು ಅನುಭವ ಬೇಕಿತ್ತು.ತನ್ನ ನೆಚ್ಚಿನ ಕೆಲಸಗಾರ ಮಣಿಲದ ಅಬ್ದುಲ್ಲಾರನ್ನು ಹಾಗು ಪುಣಚದ ಸಂಕೇಸದ ಸೇಸಪ್ಪ ನಾಯ್ಕ್ ರವರನ್ನು ಸ್ಮರಿಸಿಕೊಳ್ಳುತ್ತಾರೆ ಇವರು.
 ಇವರ ಕೆಲಸದ ಪ್ರಾರಂಭ ದಿನಗಳಲ್ಲಿ ವೇತನ ದಿನಕ್ಕ 1 ರೂಪಾಯಿ. ಮಧ್ಯಾಹ್ನದ ಊಟ , ಉಪಹಾರವನ್ನು ಸ್ವತಃ ಇವರೇ ಮಾಡಿಕೊಳ್ಳಬೇಕಾಗಿತ್ತು. ಮಣ್ಣಿನ ಗೋಡೆಗಳು ಸುಮಾರು 1 ಅಡಿಯಷ್ಟು ದಪ್ಪನಾಗಿ ಬಲಿಷ್ಟವಾಗಿರುತ್ತಿತ್ತು. 7 ರಿಂದ 8 ಅಡಿಗಳಷ್ಟು ಎತ್ತರವಿರುತ್ತಿದ್ದವು. ಇಂದಿಗೂ ಗ್ರಾಮಮಟ್ಟದಲ್ಲಿ ಮಣ್ಣಿನ ಗೋಡೆಯನ್ನು ಕಾಣಬಹುದು. ವರ್ಷದ ಡಿಸೆಂಬರ್ ತಿಂಗಳಿನಿಂದ ಎಪ್ರಿಲ್ ವರೆಗೆ ಗೋಡೆ ರಚನೆಯ ಕೆಲಸ ಮಾಡುತ್ತಿದ್ದರು. ವರ್ಷವೊಂದಕ್ಕೆ ಸುಮಾರು 10 ರಿಂದ 12 ಮನೆಗಳನ್ನು ರಚಿಸುತ್ತಿದ್ದರು. ಇವರು ಕೆಲಸದಿಂದ ನಿವೃತ್ತಿಯನ್ನು ಪಡೆದಾಗ ಸಂಬಳ 400 ರೂಪಾಯಿಯಾಗಿತ್ತೆಂದು ಸ್ಮರಿಸಿಕೊಳ್ಳುತ್ತಾರೆ.ಆ ಕಾಲಕ್ಕೆ ಅತಿ ಹೆಚ್ಚಿನ ಬೇಡಿಕೆಯಳ್ಳ ಕಾರ್ಮಿಕರಾಗಿದ್ದರು.ಜೊತೆಗೆ ಹತ್ತು ಜನರಿದ್ದ ಕಾರ್ಮಿಕ ತಂಡವನ್ನು ಮುನ್ನಡೆಸುತ್ತಿದ್ದರು. ಕಷ್ಟದಲ್ಲಿರುವವರೆಡಿನ ಮಾನವೀಯ ತುಡಿತದಿಂದಾಗಿ ಜನರಿಗೆ ಹೆಚ್ಚು ಆಪ್ತರಾಗಿದ್ದಾರೆ.ದುಡ್ಡಿಲ್ಲ ಎಂದಾಗ ಇದ್ದಾಗ ಕೊಡು ಮಾರಾಯ ಎಂದು ಸಹಾಯ ಹಸ್ತ ಚಾಚಿದ್ದಾರೆ. ಪೂವಣ್ಣನವರ ಮನಸ್ಸು ಅವರ ಹೆಸರಿನಂತೆ ಹೂವಿನಂತೆ ಮೃದು.ಆ ಕಾಲಕ್ಕೆ ಸಮಾಜದಲ್ಲಿ ತೀರ ಸಂಕಷ್ಟದಲ್ಲಿದ್ದವರಿಗೆ ನೆರವಾದವರು.
 ಕೃಷಿಕರು , ಕೃಷಿಕಾರ್ಮಿಕರ ಮನೆ ನಿರ್ಮಾಣದ ಕನಸುಗಳಿಗೆ ರೆಕ್ಕೆಯಾದವರು. ಗಟ್ಟಿ ಮುಟ್ಟಾದ ಮಣ್ಣಿನ ಗೋಡೆ ರಚಿಸಿ ಕನಸಿನ ಮನೆ ಸಾಕಾರಗೊಳಿಸಿದವರು.ಈ ಗೋಡೆಗಳಿಗೆ ಸಿಮೆಂಟ್ ಸಾರಣೆಯನ್ನು ಮಾಡಬಹುದು.ಅದಲ್ಲದೆ ಆ ಕಾಲಕ್ಕೆ ಮಣ್ಣಿನ ಉಪ್ಪರಿಗೆಯ ಮನೆ ರಚಿಸುತ್ತಿದ್ದರು.ಮನೆಗೆ ಮರದ ಪಕ್ಕಾಸ ಜೋಡಿಸಿ ಮರದ ಹಲಿಗೆಯನ್ನು ಹಾಸುತ್ತಿದ್ದರು.ಅದರ ಮೇಲೆ ಸಂಪಿಗೆ ಮರದ ಎಲೆಗಳನ್ನು ಹಾಸಲಾಗುತ್ತಿತ್ತು. ಅದರ ಮೇಲೆ ಮಣ್ಣಿನ ಛಾವಣಿಯನ್ನು ರಚಿಸಲಾಗುತ್ತಿತ್ತು.ಇದು ಈಗಿನ ಮಹಡಿ ಮನೆಗಳನ್ನು ಹೋಲುತ್ತಿತ್ತು.ಮೇಲಿನ ಮಹಡಿಯೂ ವಾಸಕ್ಕೆ ಯೋಗ್ಯವಾಗಿರುತ್ತಿತ್ತು.  ಅಲ್ಲದೆ ಕೃಷಿ ಉತ್ಪನ್ನಗಳಾದ ಅಡಿಕೆ ,ತೆಂಗಿನ ಕಾಯಿ ,ಕರಿಮೆಣಸಿನ ಶೇಖರಣೆಗೆ ಉಪಯೋಗವಾಗುತ್ತಿತ್ತು.ಆ ಕಾಲಕ್ಕೆ ಕಬ್ಬಿಣ ,ಸಿಮೆಂಟ್ ಬಳಸದೆ ಮಹಡಿ ಮನೆ ಕಟ್ಟಿ ಸೈ ಅನಿಸಿಕೊಂಡಿದ್ದಾರೆ.
ಇದೆಲ್ಲದರ ಜೊತೆಗೆ ಸಂಘಟನೆ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದರು. ಮಂಗಳೂರಿನಲ್ಲಿ ಶ್ರೀದೇವಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ವಿವಿಧ ಸಂಘದ ಸಭೆಗಳಿಗೆ ಪುಣಚದಂತಹ ಹಳ್ಳಿಗಳಿಂದ ಹಾಜರಾಗುತ್ತಿದ್ದರು.ಆ ಕಾಲಕ್ಕೆ ದಿಗ್ಗರಾಜ ಅಮ್ಮೆಂಬಳ ಬಾಳಪ್ಪ , ಬಿ ಸಿ ರೋಡಿನ ಹೂವಯ್ಯ ಮುಂತಾದವರೊಡನೆ ಸಂಘಟನೆಗೆ ಕೈ ಜೋಡಿಸಿದ್ದಾರೆ. ವಿವಿಧ ಸಮಾಜ ಸೇವಾ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ಕಾಲಕ್ಕೆ ಕೆಲವೇ ಮಂದಿ ಸಭೆಗಳಿಗೆ ಸೇರುತ್ತಿದ್ದೆವು.ಹೆಚ್ಚು ಜನ ಇರುತ್ತಿರಲಿಲ್ಲ ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ.ಬಂದವರಿಗೆಲ್ಲರಿಗೆ 1 ಆಣೆಯ (ಆ ಕಾಲದ ಹಣ) ಚಹ ಹಾಗೂ 1 ಆಣೆಯ ತಿಂಡಿಯನ್ನು ಸಭೆ ಸೇರಿದವರು ತಮ್ಮ ತಮ್ಮ ಸರದಿಯಂತೆ ನೀಡುವುದು ವಾಡಿಕೆ.ಅಲ್ಲಿಂದ ಪ್ರಾರಂಭಗೊಂಡ  ಸಂಘ ಸಂಸ್ಥೆಗಳು ಇಂದು ಬೃಹದಾಕಾರವಾಗಿ ಬೆಳೆದದನ್ನು ನೋಡಿ ಖುಷಿಪಡುತ್ತಾರೆ. ನಾವು ಸಂಘಟಿತರಾದಷ್ಟು ಸಶಕ್ತರಾಗುತ್ತೇವೆ ಎನ್ನುವುದು ಇವರ ಅನಭವದ ಮಾತು.
ಪೂವಣ್ಣನವರು ಗಿಡಮೂಲಿಕೆಯ ಔಷಧಿಯನ್ನು ಉಚಿತವಾಗಿ ನೀಡುತ್ತಿದ್ದರು. ಚಿಕನ್ ಪೋಕ್ಸ್ ,ಜ್ವರ ,ತುರಿಕೆ ಗುಳ್ಳೆಗಳು ,ಕೆಂಪು ಗುಳ್ಳೆಗಳಿಗೆ ಸೇರಿದಂತೆ ಕೆಲವು ರೋಗಗಳಿಗೆ ಔಷಧಿಯನ್ನು ನೀಡುತ್ತಿದ್ದರು.ಇದು ಇವರ ಉಚಿತ ಸೇವೆಯಾಗಿತ್ತು. ಇದು ದೂರದಲ್ಲಿರುವ ವೈದ್ಯರನ್ನು ಭೇಟಿಮಾಡಬೇಕಾದವರಿಗೆ ಹೆಚ್ಚು ಸಹಾಯವಾಗುತ್ತಿತ್ತು.ಆ ಕಾಲಕ್ಕೆ ವೈದ್ಯರ ಸಂಖ್ಯೆ ಕಡಿಮೆ ಇತ್ತು.ಇದಲ್ಲದೆ ಆ ಕಾಲಕ್ಕೆ  ಹಳ್ಳಿಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದು ಮಂತ್ರಿಸಿ ದಾರ ನೀಡುವ ಕಾರ್ಯವನ್ನು ಮಾಡುತ್ತಿದ್ದರು.ಇದಲ್ಲದೆ ಬಾವಿ ರಚನೆಗೆ ನೀರಿನ ಮೂಲವನ್ನು ಆಯ್ಕೆ ಮಾಡುತ್ತಿದ್ದರು.
ಊರಿನ ತೋಟದಲ್ಲಿನ ಬಾಳೆಗೊನೆಗಳನ್ನು ಖರೀದಿಸಿ ವ್ಯಾಪಾರವನ್ನು ನಡೆಸಿದವರು.ಈ ಮೂಲಕ ಸದಾ ಕ್ರಿಯಾಶೀಲರಾಗಿದ್ದು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.ಒಂದೇ ಕೆಲಸವನ್ನು ನೆಚ್ಚಿಕೊಳ್ಳದೆ ವಿವಿಧ ಕ್ಷೇತ್ರಗಳಲ್ಲಿ ದುಡಿಮೆ ನಮ್ಮ ಜೀವನಕ್ಕೆ ಹೆಚ್ಚು ಸುರಕ್ಷಿತ ಎಂಬುದ ಇವರ ಅನುಭವ.ಇದಲ್ಲದೆ ಊರಿನ ಸಮಾಜ ಬಾಂಧವರ ಗುರಿಕಾರರಾಗಿಯೂ ಜನಾನುರಾಗಿಯಾಗಿದ್ದಾರೆ.ಜನ ಮೆಚ್ಚಿದ ಗುರಿಕಾರರಾಗಿದ್ದಾರೆ.ಜನರ ಸ್ಥಿತಿ ,ಪರಿಸ್ಥಿತಿಗನುಗುಣವಾಗಿ ಕಾರ್ಯಕ್ರಮಗಳ ಮುಂದಾಳುತ್ವ ವಹಿಸಿದವರು.ಎಲ್ಲ ವರ್ಗದ , ಎಲ್ಲ ಪರಿಸ್ಥಿಗಳಿಗೆ ಹೊಂದಿಕೊಳ್ಳುವ ಗುರಿಕಾರರಾಗಿ ಪ್ರಸಿದ್ಧರು.ಸಂಪ್ರದಾಯ, ಕಟ್ಟು ಪಾಡುಗಳಿಗೆ ಜೋತು ಬೀಳದೆ ಮನೆಯವರ ಆರ್ಥಿಕ ಸ್ಥಿತಿ ,ಸಾಮರ್ಥ್ಯಕ್ಕೆ ಅನುಗುಣವಾಗಿ ಮನೆ ,ಕುಟುಂಬಗಳ ಸಮಾರಂಭ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಸಮಾಜಮುಖಿ ಕಾರ್ಯಕ್ಕಾಗಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.ಇಂದಿಗೂ ಗುರಿಕಾರರಾಗಿ ಸಮಾಜವನ್ನು ಮನ್ನಡೆಸುತ್ತಿದ್ದಾರೆ.ಪತ್ನಿ , ಮಕ್ಕುಳು ,ಮೊಮ್ಮಕ್ಕಳೊಂದಿ ಸುಖ ಸಂಸಾರ. ದಣಿವರಿಯದೆ ದುಡಿದ ಕಾಯಕಯೋಗಿ ನಮಗೆಲ್ಲಾ ಮಾದರಿ.ಅವರ ಜೀವನ ಸುಖಕರವಾಗಿರಲಿ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group