ಶಿರಸಿ ತಾಲೂಕಿನ”ನೀರ್ನಳ್ಳಿ” ಯಾರಿಗೆ ಗೊತ್ತಿಲ್ಲ ಹೇಳಿ?! ಆ ಊರು ಮೂರು ಕ್ಷೇತ್ರದಿಂದ ರಾಜ್ಯದಲ್ಲಿಯೇ ಮನೆ ಮಾತಾಗಿದೆ. ಕೃಷಿ, ಚಿತ್ರಕಲೆ, ಸಿನೇಮಾ ರಂಗದಲ್ಲಿ ನೀರ್ನಳ್ಳಿಯ ಮಣ್ಣಿನ ವ್ಯಕ್ತಿಗಳೇ ಪ್ರಸಿದ್ದರಾಗಿದ್ದು ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಅದ್ರಲ್ಲಿಯೂ ಮಲೆನಾಡಿನ ಕೃಷಿಕರಿಗೆ ಅತೀ ಸುಂದರ, ಮನಸ್ಸಿಗೂ ಉಲ್ಲಾಸ ನೀಡುವ , ಹಾಗೂ ಅತ್ಯಂತ ಆಪ್ತವಾದ ಅಡಿಕೆ ತೋಟವೆಂದು ಗೊತ್ತುಪಡಿಸುವುದಿದ್ದರೆ ಅದು” ನೀರ್ನಳ್ಳಿಯ ಪ್ರಶಾಂತ ನಿಲಯದ ಆವರಣದಲ್ಲಿ ಹೆಮ್ಮರವಾಗಿ ಬಲಿತು ನಿಂತಿದೆ. ಎಲ್ಲ ವರ್ಗದ ಕೃಷಿಕರಿಗೂ ಆದರ್ಶವಾಗಿರುವ ತೋಟವೆಂದೇ ಅದು ಜನಸಾಮಾನ್ಯರಲ್ಲಿ ಅಚ್ಚೊತ್ತಿ ಕುಳಿತಿದೆ.
ನಿಜ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೀರ್ನಳ್ಳಿಯ ಪ್ರಗತಿಪರ ಕೃಷಿಕರಾದ ಸೀತಾರಾಮ ಮಂಜುನಾಥ ಹೆಗಡೆ ಜಿಲ್ಲೆಯಲ್ಲಿಯೇ ಉತ್ತಮ ಕೃಷಿಕರಲ್ಲಿ ಒಬ್ಬರು.ಅವರ ಅಡಿಕೆ ತೋಟ ಹಲವಾರು ದೃಷ್ಟಿಯಿಂದ ಪ್ರಸಿದ್ದವಾಗಿದೆ. ನೀರ್ನಳ್ಳಿಯ ಈ ಹೆಗಡೆಯವರ ಅಡಿಕೆ ತೋಟಕ್ಕೆ ಬಂದವರಾರು ಬೇಸರ ಮಾಡಿಕೊಳ್ಳುವುದೇ ಇಲ್ಲ.ಅಲ್ಲಿನ ಅಡಿಕೆ ತೋಟದ ಸೊಬಗು, ಹೈನೋದ್ಯಮವನ್ನು ನೋಡಲು ಬರುವವರಿಗೆಲ್ಲ ಸೀತಾರಾಮ ಹೆಗಡೆಯವರ ದಂಪತಿಗಳು ಆತ್ಮೀಯತೆಯಿಂದ ಸ್ವಾಗತಿಸಿ,ಉಪಚರಿಸುವ ಪರಿಯೇ ವಿಶಿಷ್ಟವಾದುದು. ಮನೆಗೆ ಬಂದವರಿಗೆಲ್ಲ ತಮ್ಮ ಕೃಷಿ ಚಟುವಟಿಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಇವರು,ಯಾವ ಬೆಳೆಯನ್ನು ಹೇಗೆ ಮಾಡಿದರೆ ಉತ್ತಮ ಆದಾಯ ಪಡೆಯಬಹುದು, ನಿರ್ವಹಣಾ ಕ್ರಮ ಹೇಗೆ, ಯಾವ ಬೆಳೆಗಳು ನಮ್ಮ ಭಾಗಕ್ಕೆ ಸೂಕ್ತ, ಅದ್ರ ಸಾಧಕ – ಬಾಧಕವನ್ನೆಲ್ಲಾ ತೆರೆದ ಪುಸ್ತಕದಂತೆ ಮುಕ್ತವಾಗಿ ತೆರೆದಿಡುವ ಪ್ರಾಮಾಣಿಕತನ ಇವರಲ್ಲಿದೆ.
ಇವರ ಸಮಗ್ರ ಕೃಷಿ ತೋಟದ ವೈಯ್ಯಾರ, ಮುಗಿಲೆತ್ತರಕ್ಕೆ ಹಬ್ಬಿ ನಿಂತ ಕಪ್ಪುಬಂಗಾರದ ಸೊಬಗು, ಅಡಿಕೆ ತೋಟದಲ್ಲಿ ಹುಲುಸಾಗಿ ಬೆಳೆದ ಕಾಫಿ ಕೃಷಿಯ ವೈವಿಧ್ಯಗಳನ್ನು ನೋಡುತ್ತಾ, ಸೀತಾರಾಮ ಹೆಗಡೆಯವರ ಜೀವನದ ಅನುಭವದ ಬುತ್ತಿಯ ಕಥಾ ಸಾರಾಂಶವನ್ನು ಕೇಳುತ್ತಿದ್ದರೆ ಸಮಯ ಕಳೆದಿದ್ದೆ ಗೊತ್ತಾಗುವುದಿಲ್ಲ. ಇನ್ನಷ್ಟು ಹೊತ್ತು ಅವರೊಂದಿಗೆ ಕಳೆಯಬೇಕು ಎನ್ನುವಷ್ಟು ಸಂತೋಷ ಆಗದೇ ಇರದು.ಇವರ ವಿಶಾಲವಾದ ಅಡಿಕೆ ತೋಟವನ್ನು ಸುತ್ತಾಡಿ ಬಂದರೇ ಇದು ಕೇವಲ ಸಾಮಾನ್ಯ ಕೃಷಿಕನ ತೋಟವಲ್ಲ,ಅದು ಬೃಹತ್ ವಿಸ್ತಾರವಾಗಿ ಬೆಳದ ‘ಕೃಷಿ ವಿಶ್ವವಿದ್ಯಾಲಯ’ವನ್ನೇ ಸುತ್ತಿರುಗಿ ಬಂದಂತೆ ಭಾಸವಾಗುತ್ತದೆ.
ಕಂಗೊಳಿಸುವ ಅಡಿಕೆ ತೋಟ!
ನೀರ್ನಳ್ಳಿಯ ಸೀತಾರಾಮ ಹೆಗಡೆಯವರು ಈಗ ಹದಿನೆಂಟು ಎಕರೆ ಅಡಿಕೆ ತೋಟದ ಮಾಲೀಕರು. ಹಾಗಂತ ಎಲ್ಲವನ್ನು ಒಮ್ಮೆಲೆಯೇ ಬರಣ ಸಿಗಿದು ಸಸಿಗಳನ್ನು ಹಚ್ಚಿ ಆರೈಕೆ ಮಾಡಿ ಬೆಳೆಸಿದ ತೋಟವೇ ಅಲ್ಲ.ಇವರ ತಂದೆ ಮಂಜುನಾಥ ಹೆಗಡೆಯವರು ಕಿರಾಣಿ ಅಂಗಡಿ ಹಾಗೂ ರೈಸ್ ಮೀಲ್ ನ್ನು ಬಹಳ ಚನ್ನಾಗಿ ನಡೆಸುತ್ತಾ ಕೃಷಿಯಲ್ಲಿಯೂ ಸಕ್ರೀಯವಾಗಿ ತೊಡಗಿಕೊಂಡಿದ್ದರು. ಮಂಜುನಾಥ ಹೆಗಡೆಯವರು ತಮ್ಮ ಕಾಲದಲ್ಲಿ ಸುಮಾರು ಎಂಟು ಎಕರೆ ಅಡಿಕೆ ತೋಟ ಹಾಗೂ ಉಳಿದ ಜಾಗದಲ್ಲಿ ಯಥೇಚ್ಛವಾಗಿ ಭತ್ತದ ಕೃಷಿಯನ್ನು ಸಾಂಪ್ರದಾಯಿಕ ಪದ್ದತಿಯಲ್ಲಿ ಬೆಳೆಯುತ್ತಿದ್ದರು. ಆಗಷ್ಟೇ ಪಿ.ಯು.ಸಿ ಓದಿದ್ದ ಮಗ ಸೀತಾರಾಮ ಹೆಗಡೆ ಅವರನ್ನು ಕೃಷಿ ಕೆಲಸಕ್ಕೆ ತೊಡಗಿಕೊಳ್ಳಲು ಉತ್ಸಾಹ ತೋರಿದಾಗ, ಕೃಷಿಭೂಮಿಯ ನಿರ್ವಹಣೆಯ ಜವಾಬ್ದಾರಿಯನ್ನು ಮಗನಿಗೆ ವಹಿಸಿ,ತಾವು ಅಂಗಡಿ, ರೈಸ್ ಮಿಲ್ಲನ್ನು ನೋಡಿಕೊಂಡರು.
ಕೃಷಿ ಕೆಲಸದಲ್ಲಿ ಬಹಳ ಆಸಕ್ತಿ, ಶ್ರದ್ಧೆಯಿಂದ ತೊಡಗಿಕೊಂಡ ಉತ್ಸಾಹಿ ತರುಣ ಸೀತಾರಾಮ ಹೆಗಡೆಯವರು ಭತ್ತದ ಬೇಸಾಯಕ್ಕೆ ಅಂಟಿಕೊಂಡಿದ್ದ ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಬದಲಿ ಬೆಳೆ ಬೆಳೆಯಲು ಚಿಂತನೆ ಮಾಡಿದರು. ಒಂದಿಷ್ಟು ಜಾಗದಲ್ಲಿ ತೆಂಗಿನ ಕೃಷಿ ಮಾಡಿದರೆ, ಇನ್ನುಳಿದ ಜಾಗದಲ್ಲಿ ಅಡಿಕೆಯೇ ಸೂಕ್ತವೆನಿಸಿ ಆ ಬೆಳೆಯನ್ನು ಮಾಡಲು ಆರಂಭಿಸಿದರು. ಹೆಗಡೆಯವರು ಅಡಿಕೆ ತೋಟವನ್ನು ಮಾಡುವ ಸಮಯದಲ್ಲಿ ಕ್ವಿಂಟಲ್ ಗೆ ಕೇವಲ 450 ರೂ. ದರವಿತ್ತು! ಇದು ಆಹಾರ ವಸ್ತುವಾಗದೇ ಇದ್ದರೂ ಸಹಾ, ಆ ದಿನದಲ್ಲಿ ಲಾಭದ ಬೆಳೆಯಾಗಿತ್ತು. ಯಾವಾಗಲೂ ಚಟದ ವಸ್ತುವಿಗೆ ಬೆಲೆ ಇರುತ್ತದೇಯೇ ವಿನಃ, ಆಹಾರವಸ್ತುವಿಗಲ್ಲ ಅಂತ ಸೀತಾರಾಮ ಹೆಗಡೆಯವರ ತಂದೆ ಮಂಜುನಾಥ ಹೆಗಡೆಯವರು ಆ ದಿನವೇ ಹೇಳಿದ್ದರಂತೆ! ಆದ್ಯಾಗು ಇವರು ಭಯದಿಂದಲೇ ಒಂದಿಷ್ಟು ಜಾಗದಲ್ಲಿ ಅಡಿಕೆಯ ಬದಲಾಗಿ ತೆಂಗಿನ ಕೃಷಿಯನ್ನು ಮಾಡಲು ಅಣಿಯಾದರು. ಹೀಗಾಗಿ ನೀರ್ನಳ್ಳಿಯ ಹೆಗಡೆಯವರು ಈಗ ಸುಮಾರು ಐದು ಎಕರೆಯಲ್ಲಿ ತೆಂಗಿನ ಕೃಷಿಯನ್ನು ಉಳಿಸಿಕೊಂಡು ಚನ್ನಾಗಿಯೇ ಆರೈಕೆ ಮಾಡುತ್ತಿದ್ದಾರೆ.ತೆಂಗಿನ ಪ್ಲಾಟಿನಲ್ಲಿಯೂ ಸಹಾ ಏಕಪ್ರಕಾರದ ಬೆಳೆ ಆದ್ಯತೆ ನೀಡದೆ ಬಹುವಿಧದ ಕೃಷಿಗೆ ಸ್ಥಾನ ಕಲ್ಪಿಸಿದ್ದಾರೆ.ತೆಂಗಿನ ಜೊತೆ ಮೊದಲು ಕೋಕೋ ಕೃಷಿಯೂ ಇತ್ತು.
ಆಮೇಲೆ ಆ ಕೃಷಿಗೆ ರೋಗದ ಕಾಟ, ಇದ್ದ ಫಸಲಿಗೂ ಯೋಗ್ಯ ದರ ಸಿಗದ ಕಾರಣ ಕೋಕೊ ಕೃಷಿಯಿಂದ ವಿಮುಖರಾದರು. ನಂತರ ಆ ಜಾಗವನ್ನು ( ತೆಂಗಿನ ಕೃಷಿಯಿರುವ ಖಾಲಿ ಜಾಗದಲ್ಲಿ..) ಗೊಬ್ಬರ ಗಿಡಗಳಲ್ಲಿ ಒಂದಿಷ್ಟು ಅಂತರದಲ್ಲಿ ನಾಟಿ ಮಾಡಿ, ಆ ಗಿಡಕ್ಕೆಲ್ಲ ಕಾಳುಮೆಣಸಿನ ಗಿಡಗಳನ್ನು ಹಚ್ಚಿ ಬೆಳೆಸಿದ್ದಾರೆ. ಅದೀಗ ತೃಷ್ತಿಯಾದಕ ಫಸಲನ್ನು ನೀಡುತ್ತಿದೆ. ತೆಂಗಿನ ಗಿಡಗಳ ಮದ್ಯೆ ಖಾಲಿ ಜಾಗವನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಬಹುದು ಎಂಬುದಕ್ಕೆ ಸೀತಾರಾಮ ಹೆಗಡೆಯವರ ತೆಂಗಿನ ಪ್ಲಾಟಿನ ಜಾಗವೇ ಪ್ರತ್ಯಕ್ಷ ದರ್ಶನ ನೀಡುತ್ತದೆ.
ನೀರ್ನಳ್ಳಿಯಲ್ಲಿ ಹಂತಹಂತವಾಗಿ ಹಾಕಿದ ಅಡಿಕೆ ತೋಟವೆಲ್ಲ ಈಗ ಸಮೃದ್ದವಾಗಿ ಬಲಿತು ನಿಂತಿವೆ. ತಂದೆ ಮಂಜುನಾಥ ಹೆಗಡೆಯವರು ಹಾಕಿಕೊಟ್ಟ ಚೌಕಟ್ಟಿನಲ್ಲಿ, ಅವರ ಸುಧೀರ್ಘ ಮಾರ್ಗದರ್ಶನ ದಲ್ಲಿ ಅವರು ಹೇಳಿದ ಸಾಂಪ್ರದಾಯಿಕ ಪದ್ದತಿಯಂತೆ ತೋಟವನ್ನು ನಿರ್ವಹಣೆ ಮಾಡಿಕೊಂಡು ಬಂದಿದ್ದೇನೆ.ಆ ಕಾಲದಲ್ಲಿ ಹಾಕಿದ ಅಡಿಕೆ ತೋಟಕ್ಕೆ ಸ್ವತಃ ತಂದೆಯವರೇ ಒಳಚರಂಡಿ ( ಡ್ರೈನೇಜ್) ಯನ್ನು ಕಲ್ಲಿನಿಂದ ಮಾಡಿಸಿದ್ದರು.
ಅದು ಈಗಲೂ ವ್ಯವಸ್ಥಿತವಾಗಿದೆ. ಮಂಡಗಾಲುವೆಯನ್ನು ಸಹಾ ಚೀಪ್ ಕಲ್ಲಿನಿಂದಲೇ ವ್ಯವಸ್ಥಿತವಾಗಿ ಕಟ್ಟಿಸಿದ್ದಾರೆ. ಈ ಕಲ್ಲಿನಿಂದ ಕಟ್ಟಿದ ಕಾಲುವೆಯೇ ತೋಟಕ್ಕೆ ವಿಶೇಷ ಕಳೆ ನೀಡಿದೆ. ಅಲ್ಲದೇ, ಈ ತೋಟದಲ್ಲಿ ತೆರೆದ ಕಾಲುವೆಯೂ ಇದೆ. ಅಂದರೆ, ಸೀತಾರಾಮ ಹೆಗಡೆಯವರು ಈ ಸುಧಾರಣೆಯ ಕಾಲಘಟ್ಟದಲ್ಲಿ ತೋಟದ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದಾರೆ. ವ್ಯವಸ್ಥಿತವಾಗಿ ಸರಾಗವಾಗಿ ವಾಹನ ಹೋಗಲು ರಸ್ತೆಯನ್ನು ಇಡೀ ತೋಟಕ್ಕು ಅಳವಡಿಸಿಕೊಂಡಿದ್ದರಿಂದ, ಹಲವಾರು ದೃಷ್ಟಿಯಿಂದ ಉಪಯುಕ್ತವಾಗಿದೆ. ಈ ವ್ಯವಸ್ಥೆ ಮಾಡಿಕೊಂಡಿದ್ದರಿಂದ ತೋಟದ ನಿರ್ವಣೆಯೂ ಸುಲಭ, ಗೊಬ್ಬರ – ಫಸಲು ಸಾಗಾಟಕ್ಕೂ ಅನುಕೂಲವಾಗಿದೆ. ತೋಟವನ್ನು ಸುಧಾರಿತ ಪದ್ದತಿಯಲ್ಲಿ ನಿರ್ವಹಣೆ ಮಾಡ್ತಾ ಇರುವುದರಿಂದ ಇಳುವರಿಯನ್ನು ಅಧಿಕ ಪಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಸೀತಾರಾಮ ಹೆಗಡೆ.
ಈ ಪ್ರಗತಿಪರ ಕೃಷಿಕರು ಪ್ರತಿ ಅಡಿಕೆ ಮರದ ಬುಡಕ್ಕೆ ಗೊಬ್ಬರವನ್ನು ಹಾಕದೇ, ಬರಣದ ಮದ್ಯೆ ಹಾಯಿಸುತ್ತಾರೆ.ಪ್ರತಿ ಮರಕ್ಕೆ ಸುಮಾರು 14 ರಿಂದ16 ಕೆ.ಜಿ.ಯಷ್ಟು ದಡ್ಡಿ ಗೊಬ್ಬರವನ್ನು ಸಾಮಾನ್ಯವಾಗಿ ಫೇಬ್ರುವರಿ ಸಮಯದಲ್ಲಿ ಹಾಕಿ ಪೋಷಿಸುತ್ತಾರೆ. ಅಲ್ಲದೇ, ತಜ್ಞರು ಶಿಪಾರಸ್ಸು ಮಾಡಿದ ರಾಸಾಯನಿಕ ಗೊಬ್ಬರವನ್ನು ಜೂನ್ ಹಾಗೂ ಸಷ್ಟೇಂಬರ್ ನಲ್ಲಿ ಹಾಕಿ ಆರೈಕೆ ಮಾಡುತ್ತಾರೆ. ಮಳೆ ಶುರುವಾಗುವ ಮೊದಲೇ ವ್ಯವಸ್ಥಿತವಾಗಿ ಮುಚ್ಚಿಗೆ ಮಾಡುವ ಇವರು, ಹನಿ ನೀರಾವರಿ ಯನ್ನು ಅಳವಡಿಸಿಕೊಂಡಿದ್ದಾರೆ.
ಪ್ರತಿ ವರುಷವೂ ಮೇ ತಿಂಗಳಿನಲ್ಲಿ ಎಕರೆಗೆ ನಾಲ್ಕೈದು ಕ್ವಿಂಟಲ್ ನಷ್ಟು ಸುಣ್ಣವನ್ನು ತೋಟದ ತುಂಬೆಲ್ಲ ಬೀರುತ್ತಾರೆ. ಈ ಎಲ್ಲ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡಿ, ಗಿಡಗಳಿಗೆ ಬೇಕಾಗುವ ಆಹಾರವನ್ನು ಯೋಗ್ಯ ಪ್ರಮಾಣದಲ್ಲಿ ನೀಡಿದ ಪರಿಣಾಮ ಇವರ ತೋಟದಲ್ಲಿ ಅಡಿಕೆ ಫಸಲು ಸರಾಸರಿ ಎಕರೆಗೆ 15 ರಿಂದ 18 ಕ್ವಿಂಟಲ್ ನವರಿಗೂ ಲಭಿಸುತ್ತಿದೆ.
ಕಪ್ಪುಬಂಗಾರದ ವೈಯ್ಯಾರ!
ಸೀತಾರಾಮ ಹೆಗಡೆಯವರ ಅನುಭವದ ಪ್ರಕಾರ ಈ ದಿನದಲ್ಲಿ ಏಕ ಬೆಳೆಯನ್ನು ನಂಬಿ ಜೀವನ ಮಾಡುವುದು ಕಷ್ಟ. ಪ್ರಧಾನ ಬೆಳೆ ಅಡಿಕೆಯಿದ್ದರೂ ಉಪ ಬೆಳೆಗಳು ತೋಟದಲ್ಲಿ ಇರಲೇಬೇಕು ಅಂತ ಪ್ರತಿಪಾದಿಸುತ್ತಾರೆ. ಉಪ ಬೆಳೆಗಳ ಆಯ್ಕೆ ಮಾಡಿಕೊಳ್ಳುವುದು ಆಯಾ ಭಾಗದ ಕೃಷಿಕರಿಗೆ ಸುಲಭವಲ್ಲ. ಅದು ಸಹಾ ದೊಡ್ಡ ಸವಾಲಿನ ಕೆಲಸವೇ ಸೈ. ಆದ್ಯಾಗು ನಮ್ಮ ಭಾಗದಲ್ಲಿ ಪ್ರಧಾನವಾಗಿ ಅಡಿಕೆ ಕೃಷಿ ಇರಲೇಬೇಕು. ಅದರೊಂದಿಗೆ ಕಾಳುಮೆಣಸು ನಾಟಿ ಮಾಡಿಕೊಂಡರೇ ಅದರಿಂದಲೂ ಉತ್ತಮ ಆದಾಯ ಪಡೆಯಲು ಸಾಧ್ಯವಿದೆ ಎನ್ನುತ್ತಾರೆ ಸೀತಾರಾಮ ಹೆಗಡೆ.
ಇವರ ಹದಿನೆಂಟು ಎಕರೆ ಅಡಿಕೆ ತೋಟದ ತುಂಬೆಲ್ಲ ಕಾಳುಮೆಣಸಿನ ಬಳ್ಳಿಗಳಿವೆ. ಬೆಟ್ಟದ ಜಾಗದಲ್ಲಿಯೂ ಸಹಾ ಸಿಲ್ವಲ್ ಓಕ್ ಗಿಡಗಳನ್ನು ಬೆಳೆಸಿ, ಅದಕ್ಕು ಕಪ್ಪು ಬಂಗಾರವನ್ನು ನಾಟಿ ಮಾಡಿದ್ದಾರೆ. ಹಿಂದೆ ತೋಟದಲ್ಲಿ ಸಾಕಷ್ಟು ಮೆಣಸಿನ ಬಳ್ಳಿಗಳನ್ನು ಬೆಳೆಸಲು ನಮ್ಮ ಅಲಕ್ಷ್ಯದಿಂದ ಸೋತಿದ್ದೇವೆ.ಆಗ,ಪಾರಂಪರಿಕ ಪದ್ದತಿಯಲ್ಲಿ ಮೆಣಸಿನ ಬಳ್ಳಿಯನ್ನು ನಿರ್ವಹಣೆ ಮಾಡಿಕೊಂಡು ಬರುತಿದ್ದೆ. ಆದ್ರೇ, ಆ ಸಮಯದಲ್ಲಿ ಬಳ್ಳಿಯನ್ನು ಉಳಿಸಿಕೊಳ್ಳುವುದು ಕಷ್ಟ ವಾಗಿತ್ತು.
ಮೆಣಸಿನ ಇಳುವರಿಯೂ ಸಹಾ ಯೋಗ್ಯ ಪ್ರಮಾಣದಲ್ಲಿ ಬರುತ್ತಾ ಇರಲಿಲ್ಲ. ಅಂತಹ ಸಂದಿಗ್ಧ ಸಮಯದಲ್ಲಿ ವಿಜ್ಞಾನಿ ಡಾ. ವೇಣುಗೋಪಾಲ್ ಅವರ ಪರಿಚಯವಾಗಿ, ಅವರ ಮಾರ್ಗದರ್ಶನದಲ್ಲಿ ಕಾಳುಮೆಣಸಿನ ಕೃಷಿಯನ್ನು ವೈಜ್ಞಾನಿಕ ಪದ್ದತಿಯಲ್ಲಿ ನಿರ್ವಹಣೆ ಮಾಡಲು ಪ್ರಾರಂಭವಾದ್ಮೇಲೆ ಮೆಣಸಿನ ಬಳ್ಳಿಗಳಿಗೆ ಬರುವ ರೋಗದ ಭಾದೆಯು ಕಡಿಮೆಯಾಯ್ತು. ಬಳ್ಳಿಗಳು ಚನ್ನಾಗಿ ಬಲಿತು ಫಸಲು ಬರುವುದು ಹೆಚ್ಚಾಗಿದೆ. ಅಲ್ಲದೇ,ಡಾ. ವಿ.ಎಮ್. ಹೆಗಡೆಯವರ ಸಲಹೆ, ನಿರ್ದೇಶನದ ಮೇರೆಗೆ ಕಾಳುಮೆಣಸಿನ ಬಳ್ಳಿಗಳಿಗೆ ಬೇಕಾಗುವ ಪೋಷಕಾಂಶ, ಗೊಬ್ಬರ, ಇತ್ಯಾದಿಗಳನ್ನು ಅವರು ಸೂಚಿಸಿದ ಪ್ರಮಾಣ ಹಾಗೂ ಆಯಾ ಸಮಯದಲ್ಲಿ ನೀಡಿ ಸಂರಕ್ಷಿಸಿದ ಪರಿಣಾಮ ಇಂದು ನೂರು ಕ್ವಿಂಟಲ್ ಮೆಣಸಿನ ಫಲ ಪಡೆಯುತ್ತಾ ಇದ್ದೇನೆ ಅಂತ ಸೀತಾರಾಮ ಹೆಗಡೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಕೃಷಿಭೂಮಿಯಲ್ಲಿ ನಾವು ಯಾವ ಬೆಳೆಯನ್ನು ಹೇಗೆ ಬೆಳಯಬೇಕು, ಆ ಕೃಷಿಗೆ ಯಾವ ಸಮಯದಲ್ಲಿ ಏನನ್ನು ಯಾವ ಪ್ರಮಾಣದಲ್ಲಿ ಕೊಡಬೇಕು ಎನ್ನುವುದು ಮುಖ್ಯವಾಗಿರುತ್ತದೆ. ಸಕಾಲದಲ್ಲಿ ನೀಡಬೇಕಾದ ಆಹಾರವನ್ನು ಯಾವುದೊ ಸಮಯದಲ್ಲಿ ನೀಡಿದರೇ ಆ ಕೃಷಿಯ ಫಲ ನಮ್ಮ ನಿರೀಕ್ಷೆ ಯಷ್ಟು ಬರುವುದಿಲ್ಲ.ಆಗ ಬಹುತೇಕರು ಅದು ಲಾಭದಾಯಿಕ ಬೆಳೆಯಲ್ಲ ಅಂತಲೇ ಭಾವಿಸುತ್ತಾರೆ. ಆದ್ರೇ,ಇದು ಸರಿಯಾದ ಕ್ರಮವೂ ಅಲ್ಲ, ಹಾಗಂತ ಒಮ್ಮೇಲೆ ನಿರ್ಧಾರ ಕ್ಕೆ ಬರುವುದು ಸಹಾ ಯೋಗ್ಯವಾದ ತಿರ್ಮಾನವೂ ಅಲ್ಲ. ನಮ್ಮ ಮಲೆನಾಡಿನಲ್ಲಿ ಅಡಿಕೆಯಾಗಲಿ, ಕಾಳುಮೆಣಸಿನ ಕೃಷಿಯೇ ಆಗಿರಲಿ ಆ ಕೃಷಿ ಬೆಳೆಗೆ ಬೇಕಾಗುವುದನ್ನು ವೈಜ್ಞಾನಿಕ ಪದ್ದತಿಯಂತೆ ನಿರ್ವಹಣೆ ಮಾಡಿ, ತಜ್ಞರು ಸೂಚಿಸಿದ ಸಮಯದಲ್ಲಿ ,ಶಿಪಾರಸ್ಸು ಮಾಡಿದ ಪ್ರಮಾಣದಲ್ಲಿ ಗೊಬ್ಬರ, ಪೋಷಕಾಂಶಗಳನ್ನು ನೀಡಿದಾಗ ಮಾತ್ರ ಯೋಗ್ಯ ಫಲ ಪಡೆಯಲು ಸಾಧ್ಯವಿದೆ. ಅದನ್ನು ಬಿಟ್ಟು ಯಾವ ಯಾವುದೋ ದಿನದಲ್ಲಿ ಕಾಟಾಚಾರಕ್ಕೆ ಆಹಾರ, ಪೋಷಕಾಂಶವನ್ನು ನೀಡಿದರೆ ಕೈ ಸುಟ್ಟಿಕೊಳ್ಳಬೇಕಾಗಬಹುದು.ಸ್ವಲ್ಪ ಲಕ್ಷವಹಿಸಿ , ಒಂದಿಷ್ಟು ಸಮಯ ಪರಿಶ್ರಮ ಪಟ್ಟರೇ ಯಾವ ಬೆಳೆಯಲ್ಲಾದರೂ ಯೋಗ್ಯವಾದ ಫಲ ಪಡೆಯಬಹುದು ಎಂಬುದು ಸೀತಾರಾಮ ಹೆಗಡೆಯವರ ಅನುಭವದ ಮಾತು.
ಕಾಫಿ ಕೃಷಿ ಸೂಕ್ತವಾಗಿದೆ!
ನೀರ್ನಳ್ಳಿಯ ಪ್ರಗತಿಪರ ಕೃಷಿಕ, ಸಾಮಾಜಿಕ ಚಟುವಟಿಕೆ ಯಲ್ಲಿ ಸಕ್ರೀಯವಾಗಿರುವ ಸೀತಾರಾಮ ಹೆಗಡೆಯವರು ಅಡಿಕೆ ತೋಟದಲ್ಲಿಯೇ ಕಾಫಿ ಕೃಷಿಯನ್ನು ಸಹಾ ದೊಡ್ಡ ಪ್ರಮಾಣದಲ್ಲಿ ಮಾಡಿದ್ದಾರೆ. ಆರು ವರುಷದ ಹಿಂದೆ ತಮ್ಮ ತೋಟದಲ್ಲಿ ಈ ಕೃಷಿಯನ್ನು ನಾಟಿ ಮಾಡಿರುವ ಇವರು ಸದ್ಯ ಹತ್ತು ಸಾವಿರ ಕಾಫಿ ಗಿಡದ ಒಡೆಯರು.ಅಡಿಕೆ ತೋಟದಲ್ಲಿ ಅರೇಬಿಕಾ ಪ್ರಭೇದ ದ ಚಂದ್ರಗಿರಿ, ಬೆಟ್ಟದಲ್ಲಿ ರೋಬೋಸ್ಟಾ ತಳಿಯನ್ನು ವ್ಯವಸ್ಥಿತವಾಗಿ ನೆಟ್ಟು, ಸುಧಾರಿತ ಪದ್ದತಿಯಲ್ಲಿಯೇ ಆರೈಕೆ ಮಾಡುತ್ತಿದ್ದಾರೆ.
ನಮ್ಮ ಪ್ರದೇಶಕ್ಕೆ ಈ ಕಾಫಿ ಕೃಷಿಯೂ ಯೋಗ್ಯ ಹಾಗೂ ಸೂಕ್ತವಾಗಿದ್ದು, ಅದರಿಂದ ಒಳ್ಳೆ ಫಸಲನ್ನು ಪಡೆಯಬಹುದು.ನಮ್ಮಲ್ಲಿ ಆಗಲ್ಲ ಹೇಳಿ ಕೈಕಟ್ಟಿ ನಿರಾಶೆ ವ್ಯಕ್ತಪಡಿಸದೇ, ಸುಲಭವಾಗಿ ಬೆಳೆಯಬಹುದಾದ ಕಾಫಿ ಕೃಷಿಯನ್ನು ತೋಟದ ಮದ್ಯೆಯೇ ನಾಟಿ ಮಾಡಿದರೇ ಯಾವ ಸಮಸ್ಯೆಯೂ ಉದ್ಬವಿಸುವುದಿಲ್ಲ. ನಮ್ಗೆ ಆ ಕೃಷಿಯನ್ನು ಮಾಡಲು ಹುಮ್ಮಸ್ಸು ಉಮೇದಿ ಇದ್ದರೇ ಮಾತ್ರ ಆ ಕೃಷಿಯಲ್ಲಿ ಯಶಸ್ಸನ್ನು ಕಾಣಬಹುದೇ ವಿನಃ, ಯಾರದ್ದೊ ಒತ್ತಾಯಕ್ಕೆ ಆ ಕೃಷಿಯನ್ನು ಮಾಡಿದರೇ ಆ ಕೃಷಿಯಲ್ಲಿ ತೃಪ್ತಿಕರವಾದ ಬೆಳೆ ಪಡೆಯುವುದು ಕಷ್ಟವಾದೀತು! ಆದ್ರೇ, ಸೂಕ್ತ ಸಮಯದಲ್ಲಿ ಯೋಗ್ಯ ತಿರ್ಮಾನ ಕೈಗೊಳ್ಳುವ ಮನಸ್ಸು ತೋಟದ ಮಾಲೀಕ ಮಾಡಿದಾಗ ಮಾತ್ರ ಅಡಿಕೆ ತೋಟದಿಂದ ಬರುವ ಆದಾಯ ಹೆಚ್ಚಿಸಿಕೊಳ್ಳಬಹುದು.ಇವತ್ತಿನ ಹೈಟೆಕ್ ದಿನಮಾನದಲ್ಲಿ ಅಡಿಕೆ ಉತ್ಪನ್ನವೊಂದನ್ನೇ ನಂಬಿಕೊಂಡಿದ್ದರೆ,ನಿತ್ಯದ ಜೀವನದ ನಿರ್ವಹಣೆಗೂ ತತ್ವಾರ ಆಗಬಹುದು ಎಂಬುದು ಸೀತಾರಾಮ ಹೆಗಡೆಯವರ ಅಂಬೋಣ.
ಈ ಕಾಫಿ ಕೃಷಿಯಲ್ಲಿ ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಿಸಿದರೆ ಯೋಗ್ಯವಾದ ದರ ಪಡೆಯಬಹುದು. ಕಾಫಿಯನ್ನು ಕೊಯ್ದ ದಿನವೇ ಸಿಪ್ಪೆ ತೆಗೆದು ಒಣಗಿಸಿದರೇ ಬೇಗ ಒಣಗುತ್ತದೆ. ಇದ್ಕೆ ದರವೂ ಹೆಚ್ಚು. ಆದರೇ, ಸಿಪ್ಪೆಗೂಡಿದ್ದರೇ ( ಚರಿ)ಒಣಗಲೂ ಹನ್ನೇರಡು ದಿನ ಕಾಲಾವಧಿ ಬೇಕು, ಜೊತೆಗೆ ಇದ್ಕೆ ದರವೂ ಕಡಿಮೆ ಉಂಟು. ಹೀಗಾಗಿ ನಾನು ಕಾಫಿ ಬೀಜವನ್ನು ಸಂಸ್ಕರಣೇ ಮಾಡಿಯೇ ಒಣಗಿಸ್ತುತ್ತಾ ಇದ್ದೇನೆ. ನಾವು ಉಪಬೆಳೆಯಾಗಿ ಇದನ್ನು ಪರಿಗಣಿಸಿದರೂ ಈ ಕೃಷಿಯ ನಿರ್ವಹಣೆ ಮಾಡಲು ಅಲಕ್ಷ ಮಾಡಬಾರದು. ಪ್ರಧಾನ ಬೆಳೆಯಂತೆ ಈ ಉಪ ಕೃಷಿಯನ್ನು ಯೋಗ್ಯವಾದ ನಿರ್ವಹಣೆ ಮಾಡಿದರೇ ಯೋಗ್ಯವಾದ ಫಲವನ್ನು ಪಡೆಯಬಹುದು. ನನ್ನ ದೃಷ್ಟಿಯಲ್ಲಿ ಇದು ಲಾಭದಾಯಿಕ ಬೆಳೆಯೇ ವಿನಃ, ನಷ್ಟವಾಗುವ ಬೆಳೆಯಲ್ಲ. ಕಳೆದ ಆರು ವರುಷದ ಹಿಂದಷ್ಟೆ ನಾಟಿ ಮಾಡಿದ ಈ ಕಾಫಿಯೂ ಎರಡನೇ ವರುಷಕ್ಕೆ ಫಲ ಬಂದಿದೆ.ಆಗ ಮೂರು ನಾಲ್ಕು ಲಕ್ಷದಷ್ಟೆ ಆದಾಯ ಲಭಿಸಿತ್ತು. ಆದ್ರೇ ಈ ವರುಷ ನಮ್ಮ ತೋಟದಲ್ಲಿ ಬಂಪರ್ ಬೆಳೆಯಿದ್ದು ಸುಮಾರು ಮೂವತ್ತೈದು ಲಕ್ಷ ಆದಾಯ ಕಾಫಿಯಿಂದಲೇ ಸಿಗುವ ನಿರೀಕ್ಷೆ ಯಿದೆ ಎನ್ನುತ್ತಾರೆ ಸೀತಾರಾಮ ಹೆಗಡೆ.
ನಿತ್ಗಟ್ಟು ಅನಿವಾರ್ಯವಲ್ಲ…
ಸಾಮಾನ್ಯವಾಗಿ ಮಲೆನಾಡಿನ ಅಡಿಕೆ ಬೆಳೆಗಾರರು ತಮ್ಮ ತೋಟದಲ್ಲಿ ಪ್ರತಿ ಬರಣಕ್ಕು ನಿತ್ಗಟ್ಟನ್ನು ಹಾಕಿಡುತ್ತಾರೆ. ಇದನ್ನು ಆಗಾಗ ಅಷ್ಟಷ್ಟೆ ಮಣ್ಣನ್ನು ಬರಣಕ್ಕೆ ಹರಡುವ ಪದ್ದತಿ ಕೆಲವು ಕಡೆಯಲ್ಲಿದೆ. ಇನ್ನು ಕೆಲ ರೈತರು ಸದಾ ಕಾಲ ನಿತ್ಗಟ್ಟನ್ನು ಇಟ್ಟುಕೊಂಡಿರುತ್ತಾರೆ. ಅದು ಇದ್ದರೆ ಮಳೆಯ ನೀರು ಸರಾಗವಾಗಿ ಬಸೀದು ಹೋಗುತ್ತದೆ, ಬಾಳೆ ಕೃಷಿ ಇದ್ದರೇ ಅದ್ರ ಭದ್ರತೆಗೂ ನಿತ್ಗಟ್ಟು ಆಧಾರವಾಗಿ ಇರುತ್ತದೆ ಎನ್ನುವುದು ಹಿರಿಯರ ಅನುಭವದ ಮಾತು. ಆದ್ರೇ, ಈ ಯಾಂತ್ರೀಕೃತ ಬದುಕಿನಲ್ಲಿ ಅಡಿಕೆ ತೋಟಕ್ಕೆ ನಿತ್ಗಟ್ಟು ಇದ್ದರೇನೇ ಕೆಲವೊಂದು ಕೆಲಸಗಳಿಗೆ ಉಪದ್ರವವಾಗಿ ಕಾಡುತ್ತದೆ.ನಮ್ಮ ತೋಟದಲ್ಲಿ 1960 ರಿಂದ ನಿತ್ಗಟ್ಟೇ ಇಲ್ಲ! ಅದೀಗ ಅನಿವಾರ್ಯವೂ ಅಲ್ಲ.ಅವಶ್ಯಕತೆ ಕಂಡರೇ ತೋಟಕ್ಕೆ ಏಂಟತ್ತು ವರುಷಕ್ಕೆ ಒಮ್ಮೆ ಹಾಸ್ ಮಣ್ಣು ಕೊಡುವುದು ಹಲವು ದೃಷ್ಟಿಯಿಂದ ಉತ್ತಮ ಎನ್ನುತ್ತಾರೆ ಸೀತಾರಾಮ ಹೆಗಡೆ.
ಕಾಲುವೆಗೆ ಪ್ಲಾಸ್ಟಿಕ್!
ನೀರ್ನಳ್ಳಿಯ ಈ ಮಾದರಿ ಕೃಷಿಕರು ತಮ್ಮ ಅಡಿಕೆ ತೋಟದಲ್ಲಿರುವ ಪ್ರತಿ ಬಸೀಗಾಲುವೆಗೆ ಗುಣಮಟ್ಟದ ಪ್ಲಾಸ್ಟಿಕ್ ಕವರ್ ಹಾಕಿದ್ದಾರೆ.ಕಳೆದ ಹದಿನೈದು ವರುಷದ ಹಿಂದೆ ಹಾಕಿದ ಪ್ಲಾಸ್ಟಿಕ್ ಇಂದಿಗೂ ಸುಸ್ಥಿತಿಯಲ್ಲಿದೆ. ಆಗ ಸ್ವಲ್ಪ ಉತ್ತಮ ಕ್ವಾಲಿಟಿ ಪ್ಲಾಸ್ಟಿಕ್ ಕವರ್ ಹಾಕಿಕೊಂಡಿದ್ದರಿಂದ ( ಎಕರೆಗೆ ಅಂದು ಇಪ್ಪತ್ತು ಸಾವಿರ ವ್ಯಯವಾಗಿತ್ತು)ಬಾಳಕೆಗೆ ಬಂದಿದೆ. ಇನ್ನು ಐದಾರು ವರುಷಗಳ ಕಾಲ ಇದೇ ಪ್ಲಾಸ್ಟಿಕ್ ನ್ನು ಚೀಫ್ ಕಾಲುವೆಗಳಿಗೆ ಮುಚ್ಚಬಹುದು…ಅದು ಅಷ್ಟು ಯೋಗ್ಯವಾಗಿದೆ. ಇದನ್ನು ಮುಚ್ಚುವುದರಿಂದ ಕಾಲುವೆ ಹಿಸಿಯುವುದನ್ನು ತಡೆಗಟ್ಟುತ್ತದೆ, ಹಾಗೂ ಅನಾವಶ್ಯಕ ಕಳೆ ಬಲಿಯುವುದನ್ನು ತಡೆಗಟ್ಟಲು ಈ ಪ್ಲಾಸ್ಟಿಕ್ ಸಹಾಯಕವಾಗಿದೆ.ಇದರಿಂದ ಕಾಲುವೆ ನಿರ್ವಹಣೆ ಸುಲಭವಾಗಿದೆ ಎನ್ನುತ್ತಾರೆ ಹೆಗಡೆಯವರು.
ಹೈನೋದ್ಯಮಿಯೂ ಹೌದು!
ಸಮಗ್ರ ಕೃಷಿಯಲ್ಲಿಯಲ್ಲಿಯೇ ಸಂತೃಷ್ತಿಯನ್ನು ಪಡೆದುಕೊಂಡಿರುವ ನೀರ್ನಳ್ಳಿಯ ಸೀತಾರಾಮ ಹೆಗಡೆಯ ಕುಟುಂಬವು ಪಶುಸಂಗೋಪನೆಯ ಕಾರ್ಯದಲ್ಲಿಯೂ ಸಕ್ರೀಯವಾಗಿದೆ. ಸುಮಾರು 80 ಹಸುಗಳನ್ನು ಅತೀ ಪ್ರೀತಿಯಿಂದ ಸಾಕಿ ಸಲಹುತ್ತಿರುವ ಈ ಪ್ರಗತಿಪರ ಕೃಷಿಕರಿಗೆ ಹೈನು ಉದ್ಯಮವೇ ಆಕರ್ಷಣಿಯ ಕೇಂದ್ರವಾಗಿದ್ದು, ಅವರ ಕೃಷಿ ಬೆಳೆಗಳಿಗೆ ಇದೇ ಪಿಲ್ಲರ್ ಆಗಿದೆ. ಸುಮಾರು 400 ಲೀಟರ್ ಹಾಲನ್ನು ಹೈನೋಧ್ಯಮದಿಂದ ನಿತ್ಯ ಪಡೆಯುತ್ತಿರುವ ಈ ಕೃಷಿಕರು ,ಇದು ದೊಡ್ಡ ಲಾಭವೇನು ಅಲ್ಲ ಎನ್ನುತ್ತಾರೆ.ಆದ್ರೆ, ಹಸುಗಳಿಂದ ಸಿಗುವ ಸೆಗಣಿ, ಗಂಜಳದಿಂದ ಉತ್ಕೃಷ್ಟ ವಾದ ದಡ್ಡಿಗೊಬ್ಬರವನ್ನು ಸಿದ್ದ ಮಾಡಿ, ತೋಟದ ಬೆಳೆಗಳಿಗೆ ಹಾಕುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎನ್ನುತ್ತಾರೆ ಮಾದರಿ ಕೃಷಿಕ ಸೀತಾರಾಮ ಹೆಗಡೆ. ಈ ಹೈನೋಧ್ಯಮದ ಮುಖ್ಯ ದೇಖರಿಕೆಯನ್ನು ಪತ್ನಿ ವೇದಾ ಹೆಗಡೆ ಅವರೇ ನೋಡಿಕೊಳ್ಳುತ್ತಾರೆ. ಆಧುನಿಕ ವ್ಯವಸ್ಥೆಯ ಪರಿಧಿಯಲ್ಲಿ ಯಂತ್ರೋಪಕರಣಗಳನ್ನು ಉಪಯೋಗಿಸಿಕೊಂಡು ಕೊಟ್ಟಿಗೆ ಕೆಲಸವನ್ನು ನಿರ್ವಹಣೆ ಮಾಡುತ್ತಿದ್ದೇವೆ. ಕೇವಲ ಮೂರು ಲೇಬರ್ ನಿಂದ ಇಷ್ಟು ಹಸುಗಳನ್ನು ತಂದೆಯವರ ಕಾಲದಿಂದಲೂ ಲಾಲನೆ – ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ. ಈ ಪಸುಸಂಗೋಪನೆಯ ಕೆಲಸದಲ್ಲಿ ನೆಮ್ಮದಿಯೂ ಇದೆ ಎನ್ನುವುದು ಅವರ ಅಂತರಾಳದ ಮಾತು.