spot_img
Tuesday, September 17, 2024
spot_imgspot_img
spot_img
spot_img

ಭತ್ತದ ಕೃಷಿ ಬತ್ತದ ಉತ್ಸಾಹ: ಮಲೆನಾಡಲ್ಲಿ, ಕೃಷಿಯ ಖುಷಿಯಲ್ಲಿ ಬದುಕಿದ ಕೃಷಿಕನ ಕತೆ

ಬರಹ: ರಾಧಾಕೃಷ್ಣ ತೊಡಿಕಾನ / ಚಿತ್ರ: ರಾಮ್ ಅಜೆಕಾರ್

ಅದೊಂದು ಸುಂದರ ಪರಿಸರ. ಸುತ್ತಮುತ್ತ ಹಸಿರು ಪಟ್ಟಿ ನಡುವೆ ಇಳಿಜಾರಿನ ಪ್ರದೇಶದಲ್ಲಿ ಕಣ್ಸೆಳವ ಭತ್ತದ ಗದ್ದೆಗಳು. ಮಾಳ ಮುಳ್ಳೂರು ಘಾಟಿ ರಸ್ತೆಯಾಗಿ ಶೃಂಗೇರಿಯತ್ತ ಹೋಗುವ ಮಂದಿಗೆ ಬೆಚ್ಚೊಳ್ಳಿಯ ಬಳಿಯ ಆ ಗದ್ದೆಗಳು ಮೊದಲು ಹಸಿರಾಗಿ ನಂತರ ಬಾಗಿದ ತೆನೆಗಳು ಹೊಂಬಣ್ಣಕೆ ತಿರುಗಿ ಒಂದಷ್ಟು ಕಣ್ತುಂಬಿಕೊಳ್ಳುವಂತೆ ಮಾಡುತ್ತದೆ. ಹಲವಾರು ಮಂದಿ ಸೆಲ್ಫಿಯನ್ನು ತೆಗೆದುಕೊಂಡು ಸಂಭ್ರಮಿಸುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಪಂಚಾಯತು ವ್ಯಾಪ್ತಿಯ ಗುಲಗುಂಜಿ ಮನೆ ಗ್ರಾಮದ ಬೆಚ್ಚೊಳ್ಳಿ ಕೇಶವ ಮೂರ್ತಿಯವರ ಗದ್ದೆಗಳು ಆಕರ್ಷಣೀಯ. ಇಳಿಜಾರಿನ ಇವರ ಗದ್ದೆ ಸಾಲುಗಳು. ಅದಕ್ಕೆ ಸೇರಿಕೊಂಡೇ ಮುಂದುವರಿದ ಭತ್ತದ ಗದ್ದೆ ಬಯಲು ಒಮ್ಮೆ ಮನ ಸೆಳೆಯುತ್ತದೆ.

ನಾಲ್ಕು ತಲೆಮಾರಿನಿಂದಲೂ ಕೃಷಿಯನ್ನೇ ನೆಚ್ಚಿಕೊಂಡ ಕುಟುಂಬದ ಕೇಶವಮೂರ್ತಿಯವರಿಗೆ ತಂದೆ ಕೆಂಪೇಗೌಡರಿಂದ ಬಂದ ಕೃಷಿ ಭೂಮಿಯಲ್ಲಿ ಒಂದು ಎಕರೆ ಬತ್ತದ ಗದ್ದೆ ಅವರ ಪಾಲಿನದು. ಚಿಕ್ಕನಿಂದಿನಲ್ಲಿಯೇ ಕೃಷಿಯ ಬಗ್ಗೆ ಒಲವು ಮೂಡಿಸಿಕೊಂಡ ಕೇಶವ ಮೂರ್ತಿಯವರು ತನ್ನ ವಿದ್ಯಾಭ್ಯಾಸದ ನಂತರ ಕೃಷಿಗೆ ಅಂಟಿಕೊಂಡರು.

೫೦ ವರ್ಷಗಳಿಂದ ಭತ್ತ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಭತ್ತ ಸಾಕು ಅನಿಸಲಿಲ್ಲ. ಹೊಸ ಹೊಸ ತಳಿಗಳನ್ನು ಬೆಳೆದು ಅದರಿಂದ ಖುಷಿಕಂಡವರು. ವಾಣಿಜ್ಯ ಬೆಳೆಗಳ ವ್ಯಾಮೋಹ ಹೆಚ್ಚಾಗುತ್ತಾ ಭತ್ತದ ಬೆಳೆಯಿಂದ ದೂರ ಸರಿಯುತ್ತಿರುವ ಈ ಕಾಲಘಟ್ಟದಲ್ಲೂ ಅವರು ಭತ್ತದ ಬೆಳೆಯ ನಂಟು ಬಿಟ್ಟಿಲ್ಲ. ಅಡಿಕೆ ಮತ್ತು ಇತರ ವಾಣಿಜ್ಯ ಬೆಳೆಗಳನ್ನು ಇತರ ಭೂಮಿಯಲ್ಲೂ ಬೆಳೆಯಬಹುದು. ಆದರೆ ಭತ್ತದ ಗದ್ದೆಗಳಿಗೆ ವಾಣಿಜ್ಯ ಬೆಳೆ ಮಾಡಿದ ನಂತರ ಭತ್ತದ ಗದ್ದೆಗಳಾಗಿ ಪರಿವರ್ತಿಸುವುದು ಕಷ್ಟ. ಒಮ್ಮೆ ಬತ್ತದ ಬೆಳೆ ಕಳೆದುಕೊಂಡರೆ ಮತ್ತೆ ಮಾಡಲಾಗುವುದಿಲ್ಲ. ತನ್ನ ಭತ್ತ ಬೆಳೆಯುವ ಪ್ರದೇಶವನ್ನು ಎಂದಿಗೂ ವಾಣಿಜ್ಯ ಬೆಳೆ ಬೆಳೆಯಲು ಬಳಸುವುದಿಲ್ಲ ಎಂಬ ದೃಢ ನಿರ್ಧಾರ ಕೇಶವಮೂರ್ತಿ ಮಾಡಿದ್ದಾರೆ.

ನಾನು ಕೃಷಿ ಮಾಡಲು ಆರಂಭಿಸಿದಾಗ ಭತ್ತದ ಇಳುವರಿ ಎಕ್ರೆಗೆ ನಾಲ್ಕು ಕ್ವಿಂಟಾಲು ಅಷ್ಟೇ ಇತ್ತು. ಈಗ 26 ಕ್ವಿಂಟಾಲುವರೆಗೂ ಭತ್ತದ ಇಳುವರಿ ಪಡೆಯುತ್ತಿದ್ದೇನೆ. ಉತ್ತಮ ಫಸಲು ಪಡೆಯಲು ಮಣ್ಣು, ನೀರು, ಗೊಬ್ಬರ ಮಾತ್ರ ಸಾಕಾಗದು. ಬೀಜದ ಆಯ್ಕೆಯು ಮುಖ್ಯವಾಗುತ್ತದೆ. ಬೀಜ ನೆನೆ ಹಾಕುವಾಗ ಜಡ್ಡುಗಳನ್ನು ತೆಗೆದು ಗಟ್ಟಿ ಕಾಳನ್ನು ಮಾತ್ರ ಮೊಳಕೆ ಬರಿಸಿದಾಗ ಈ ಸಸಿಗಳು ಉತ್ತಮವಾಗಿರುತ್ತವೆ. ಎರಡು ಮೂರು ಸಸಿಗಳನ್ನು ನಾಟಿ ಮಾಡಿದಾಗ ೨೫-೩೦ ಎಗೆಗಳು ಬುಡದಿಂದ ಹೊರಬರುತ್ತವೆ. ಇದರಿಂದ ಬರುವ ತೆನೆಯೊಂದರಲ್ಲಿ 180-200 ಭತ್ತದ ಕಾಳುಗಳು ಇರುತ್ತವೆ ಎನ್ನುತ್ತಾರೆ ಅವರು.

ಈ ವರ್ಷ ಐಆರ್-೬೪ ಬೆಳೆದಿದ್ದಾರೆ. ಭತ್ತದ ಕೃಷಿಗೆ ಕೂಲಿ ಕಾರ್ಮಿಕರ ಸಮಸ್ಯೆ ಇದೆ. ಅದರಿಂದಾಗಿ ಆಧುನಿಕ ಯಂತ್ರೋಪಕರಣಗಳು ಭತ್ತದ ಗದ್ದೆಗಳಲ್ಲಿ ಸದ್ದು ಮಾಡುತ್ತಿವೆ. ಆದರೆ ಇವರು ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಎತ್ತುಗಳ ಮೂಲಕ ತಾನೇ ಉಳುಮೆ ಮಾಡುತ್ತಾರೆ. ಉಳುಮೆಗೆ ಬೇಕಾದ ನೊಗ, ನೇಗಿಲು, ಜತ್ಗೆ ಎಲ್ಲಾ ಸಾಧನಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ.

ತಳಿಗಳು

ಕೇಶವಮೂರ್ತಿಯವರು ಈ ಹಿಂದೆ ಹಲವಾರು ತಳಿಯ ಭತ್ತವನ್ನು ಬೆಳೆದಿದ್ದಾರೆ. ಹೆಗ್ಗೆ, ಪುಟ್ಟ ಹೆಗ್ಗೆ, ಬಿಳಿ ಕಣ್ಣು ಹೆಗ್ಗೆ, ಕೋಸ್‌ಮುಡಿ ಹಳ್ಗ, ಗಂಜಿಹಳ್ಗ, ಬಲಿಗ ಹಳ್ಗ, ಆನೆಕೊಂಬು, ರತ್ನಚೌಡಿ, ರತ್ನವಲ್ಲಿ, ಡೆಲ್ಲಿಬೋಗ, ಕೊಯಮುತ್ತೂರು, ಬಿಕೊಡು, ಬಂಗಾರಕಡಿ, ರಾಜ ನನ್ನ ರಾಜ,. ಜ್ಯೋತಿ, ಪದ್ಮ ರೇಖೆ, ನಾಗವಲ್ಲಿ, ರಾಜಮುಡಿ, ಜೀರಿಗೆ ಸಾಲೆ ಕೊತ್ತಂಬರಿ, ಕಾಳು, ತುಂಗಾ, ಇಂಟನ್, ಐಟಿ, ಕೆ.ಹೆಚ್- 13, ಎಮ್.ಆರ್-64, ಐ.ಆರ್ -64, ನೇಟಿ ಹೊನ್ನು, ಐ.ಆರ್-8, ಇ.ಎಸ್-18, ಕಾರ್, ಸೋನಾ ಮಸೂರಿ, ಬಾಸುಮತಿ, ಕಲ್ಚೆರಿ, ಕುಂಬ್ರಿ, ಅಸುಡಿ, ಬಿ.ಆರ್, ಬೆಂಕಿ ಪಟ್ಟಣ, ಜಡೆ ಕೊಯಮುತ್ತೂರು, ಗಿಡ್ಡಗೌರಿ, ದೊಡ್ಡ ಐ.ಟಿ, ರಾಜಮುಡಿ, ಎನ್ಟಿಪಿ, ಶಿವಮೊಗ್ಗಕೊಯಮುತ್ತೂರು, ವಾಳ್ಯ ಮೊದಲಾದ 54 ಹೆಚ್ಚು ತಳಿಗಳನ್ನು ಈ ಹಿಂದೆ ಬೆಳೆದಿದ್ದಾರೆ. ಈ ಬಾರಿ ಐ.ಆರ್-64 ತಳಿ ಬೆಳೆದಿದ್ದಾರೆ. ಅದಲ್ಲದೆ ಬೇರೊಂದು ಕಡೆಯಿರುವ ಗದ್ದೆಯಲ್ಲಿ ಸ್ಥಳೀಯ ತಳಿಯನ್ನೂ ಬೆಳೆದಿದ್ದಾರೆ. ಪ್ರತೀ ವರ್ಷವೂ ತಳಿ ಬದಲಾವಣೆ ಮಾಡುತ್ತಾರೆ. ಈ ವರ್ಷ ಮಾಡಿದ ತಳಿ ಮರು ವರ್ಷ ಮಾಡುವುದಿಲ್ಲ. ಬೇರೆ ತಳಿ ಆಯ್ದುಕೊಳ್ಳುತ್ತಾರೆ

ಕೃಷಿಯಲ್ಲಿ ಲಾಭ ನಷ್ಟದ ಪ್ರಶ್ನೆ ಲೆಕ್ಕಕ್ಕಿಲ್ಲ. ಕೃಷಿಕನಾದವನು ಉತ್ತು ಬಿತ್ತಿ ಬೆಳೆಯದಿದ್ದರೆ ಕೃಷಿಕನಲ್ಲದವರು ಆಹಾರ ಧಾನ್ಯಗಳನ್ನು ಖರೀದಿಸುವುದಾದರೂ ಎಲ್ಲಿಂದ? ನಾವು ಕೂಡ ಆಹಾರ ಧಾನ್ಯ ತರುವುದಲ್ಲಿಂದ ಪ್ರಶ್ನೆ ಅವರದು. ಭೂಮಿ ಬಂಜೆಯಲ್ಲ: ಸಂಪನ್ನಳು. ಮನುಷ್ಯನ ಮನಸ್ಸು ಬಂಜೆಯಾದರೆ ಭೂಮಿಯೂ ಬರಿದಾದಂತೆ ಕಾಣುತ್ತದೆ. ಬೆಳೆದ ಭತ್ತದಲ್ಲಿ ಒಂದು ಭಾಗ ಮನೆ ಬಳಕೆಗೆ. ಮತ್ತೊಂದು ಭಾಗ ಮಾರಾಟಕ್ಕೆ. ಆದರೆ ಇನ್ನೊಂದು ಭಾಗ ಶೇಖರಣೆ ಮಾಡಿ ಇಡಲಾಗುತ್ತದೆ. ಏಕೆಂದರೆ ಮುಂಬರುವ ವರ್ಷದ ಬೆಳೆ ಕೈ ಕೊಟ್ಟರೆ ಇದು ಉಪಯೋಗಕ್ಕೆ ಬರುತ್ತದೆ ಎಂಬ ಲೆಕ್ಕಾಚಾರ. ಭತ್ತವಲ್ಲದೆ ಅಡಿಕೆ, ಕಾಫಿ, ಕಾಳು ಮೆಣಸು, ಏಲಕ್ಕಿ, ಕಿತ್ತಳೆ ಬೆಳೆಯುತ್ತಾರೆ. ಭತ್ತದ ಕೊಯ್ಲಿನ ನಂತರ ತರಕಾರಿ ಬೆಳೆಯುತ್ತಾರೆ. ತರಕಾರಿ ಮನೆ ಬಳಕೆಗೆ ಮತ್ತು ನೆಂಟರಿಷ್ಟರು ಹಾಗೂ ನೆರೆಕರೆಯವರಿಗೆ ನೀಡುತ್ತಾರೆ. ಕೃಷಿಯಲ್ಲಿ ಯಂತ್ರೋಪಕರಣ ಬಳಸುವುದು ಕಡಿಮೆ. ಆದರೂ ಅವಶ್ಯಕತೆ ಇದ್ದಾಗ ಭತ್ತದ ನಾಟಿ, ಕಟಾವಿಗೆ ಯಂತ್ರ ಬಳಸುತ್ತಾರೆ. ಕೃಷಿಗೆ ಪೂರಕ ಕೆಲವು ಉಪಕರಣಗಳನ್ನು ಅವರೇ ತಯಾರಿಸಿ ಕೊಳ್ಳುತ್ತಾರೆೆ. ಇವರ ಪುತ್ರಿಯರಾದ ಪ್ರಕೃತಿ, ಸಂಸ್ಕೃತಿಗೂ ಕೃಷಿಯ ಬಗ್ಗೆ ಅನುಭವವಿದೆ. ಗದ್ದೆ ನಾಟಿ ಕೊಯ್ಲು ಹಾಗು ಇತರ ಕೆಲಸಗಳಲ್ಲಿ ಅವರು ಭಾಗಿಯಾಗುತ್ತಾರೆ.

ನಾಟಿ ವೈದ್ಯ

ಕೇಶವಮೂರ್ತಿ ಅವರು ಕೃಷಿಕರಷ್ಟೇ ಅಲ್ಲ ನಾಟಿ ಔಷಧಿ ಪಂಡಿತರಾಗಿದ್ದಾರೆ. ಗಿಡಮೂಲಿಕೆ ಔಷಧಿಗಾಗಿ ದೂರದ ಊರುಗಳಿಂದಲೂ ಜನ ಬರುತ್ತಾರೆ. ಜಿಲ್ಲೆಯಿಂದಲೂ ಹೊರ ಜಿಲ್ಲೆಗಳಿಂದಲೂ ಔಷಧಿಗಾಗಿ ಬರುತ್ತಾರೆ. ಪಿತ್ತ, ಕಾಮಲೆ, ಹುಳಕಡ್ಡಿ, ಮೂಲವ್ಯಾಧಿ ಚರ್ಮರೋಗ, ತಲೆಸಿಡಿತ, ಮಕ್ಕಳಾಗುವಿಕೆ, ಹೊಟ್ಟೆ ಹುಣ್ಣು ಸೇರಿದಂತೆ ಹಲವು ಕಾಯಿಲೆಗಳಿಗೆ ಅವರು ಗಿಡಮೂಲಿಕೆ ಔಷಧಿಯನ್ನು ನೀಡುತ್ತಿದ್ದಾರೆ. ಇದಲ್ಲದೆ ಜಾನುವಾರುಗಳಿಗೂ ಔಷಧಿಗಳನ್ನು ನೀಡುತ್ತಾರೆ. ಔಷಧೀಯ ಗಿಡಮೂಲಿಕೆಗಳನ್ನು ಆಸುಪಾಸಿನ ಕಾಡಿನಿಂದ ಸಂಗ್ರಹಿಸುತ್ತಾರೆ. ಔಷಧಿ ನೀಡುವುದಕ್ಕೂ ಕೆಲವು ನಿಯಮಗಳಿರುವುದರಿಂದ ಔಷಧಿಯ ಗಿಡಮೂಲಿಕೆಗಳನ್ನು ಕಾಡಿನಿಂದ ಸಂಗ್ರಹಿಸಬೇಕಾದ ಕಾರಣದಿಂದ ಮುಂಚಿತವಾಗಿ ತಿಳಿಸಿ ಬಂದರೆ ಅನುಕೂಲವೆನ್ನುತ್ತಾರೆ. ಕಲೆ, ಸಂಸ್ಕೃತಿಯ ಬಗ್ಗೆ ಒಲವಿರುವ ಇವರು ಯಕ್ಷಗಾನ ಕಲಾವಿದರೂ ಆಗಿದ್ದಾರೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group