ಯಾವುದೇ ಹೂವಿನ ಸೌಂದರ್ಯಕ್ಕೆ ಮನಸೋಲದಿರವವನೂ ಸೀತಾಳೆ ಹೂವಿನ ಸೌಂದರ್ಯಕ್ಕೆ, ಅದರ ಬಿನ್ನಾಣಗಳಿಗೆ, ಅದರ ಮಾಟಗಳಿಗೆ ಮನಸೋಲಲೇಬೇಕು. ಅಂತಹ ಹೂವು ಸೀತಾಳೆ. ಈ ಜಗತ್ತಿನಲ್ಲಿ ಎಲ್ಲಾ ಬಣ್ಣಗಳಲ್ಲಿ ಹೂವು ಸಿಗುವುದು ಎರಡೇ ಜಾತಿಯ ಹೂಗಳಲ್ಲಿ. ಒಂದು ಸೀತಾಳೆ 2. ಗುಲಾಬಿ (ಕೃತಕವಾಗಿ ಕೆಲವು ಬಣ್ಣಗಳನ್ನು ಸೃಷ್ಠಿಸಲಾಗಿದೆ). ಸೀತಾಳೆ ಹೂವಿನಲ್ಲಿ ನೈಸರ್ಗಿಕವಾಗಿ ಎಲ್ಲಾ ಬಣ್ಣಗಳೂ ಸಿಗುತ್ತವೆ. ಆರ್ಕಿಡ್ ಎಂದು ಕರೆಯಲ್ಪಡುವ ಈ ಹೂವು ಸರಿಸುವಾರು 25000 ಜಾತಿಗಳಿವೆ. ನಮ್ಮಲ್ಲಿ ಕೆಲವು ವರ್ಷಗಳ ಹಿಂದೆ ಹವಾ ಮಾಡಿದ ವೆನಿಲ್ಲಾ ಕೂಡ ಒಂದು ಸೀತಾಳೆ ಹೂ ಜಾತಿಯೇ.
ಆರ್ಕಿಡ್ ಹೂವುಗಳು ತಮ್ಮ ಸುಂದರವಾದ ಮತ್ತು ಸಂಕೀರ್ಣವಾದ ಹೂವುಗಳಿಗೆ ಹೆಸರುವಾಸಿಯಾಗಿವೆ. ಜಗತ್ತಿನ ಎಲ್ಲಾ ಕಡೆಯಲ್ಲೂ ಬೆಳೆದು ಹೂ ಬಿಡುವ ಜಾತಿ ಆರ್ಕಿಡ್. ವಾಂಡಾ ಎಂಬ ಜಾತಿಯ ಆರ್ಕಿಡ್ ಹೂವಿಗೆ ಸೀತೆ ದಂಡೆ ಎಂಬ ಹೆಸರಿದೆ. ಸೀತೆ ವನವಾಸದಲ್ಲಿದ್ದಾಗ ಈ ಹೂವನ್ನು ದಂಡೆಯಾಗಿ ಮುಡಿದುಕೊಳ್ಳುತ್ತಿದ್ದಳು ಎಂಬ ಪ್ರತೀತಿಯಿಂದ ಸೀತಾದಂಡೆ ಎಂದೇ ಕರೆಯಲ್ಪಡುತ್ತದೆ.
ಈ ಆರ್ಕಿಡ್ಗಳ ಪ್ರಪಂಚವೇ ಒಂದು ವಿಚಿತ್ರ. ತುಂಬಾ ಆಸಕ್ತಿಯಿಂದ ಬೆಳೆದರೆ ಬೆಳೆಯಲಾಗದು, ಕಾಳಜಿ- ನಿಶ್ಕಾಳಜಿ ಎರಡೂ ಮಿಶ್ರಿತವಾಗಿದ್ದರೇನೆ ಇದು ಬೆಳೆಯುವುದು.
ಆರ್ಕಿಡ್ಗಳನ್ನು ನಮ್ಮ ಶಿರಸಿ- ಸಿದ್ದಾಪುರ-ಯಲ್ಲಾಪುರ-ಕುಮಟಾ ಭಾಗದ ಕೆಲವು ರೈತರು 2000 ರಿಂದ 2008 ರ ವರೆಗೆ ಹಸಿರು ಮನೆಗಳಲ್ಲಿ ಬೆಳೆದಿದ್ದರು. ಚಪ್ಪರಮನೆ ಶಂಕರ ಹೆಗಡೆಯವರು ಆಯಿ ಆರ್ಕಿಡ್ಸ್ ಎಂಬ ನರ್ಸಿರಿಯನ್ನೇ ಮಾಡಿದ್ದರು. ಕ್ಯಾನ್ ಪ್ಲೋರಾ ಎಂಬ ಸಂಘಟನೆಯನ್ನೇ ಶಿರಸಿಯ ರೈತರು ಆ ಸಮಯದಲ್ಲಿ ಹುಟ್ಟು ಹಾಕಿದ್ದರು. ನಂತರ ಮಾರುಕಟ್ಟೆಯ ಸಮಸ್ಯೆಯಿಂದ ಒಬ್ಬಬ್ಬರಾಗಿ ಬಿಡುತ್ತಾ ಬಂದು ಈಗ ಮನೆಯ ಅಲಂಕಾರಕ್ಕಾಗಷ್ಟೇ ಈ ರೈತರುಗಳು ಬೆಳೆಯುತ್ತಿದ್ದಾರೆ.
ಡೆಂಡ್ರೋಬಿಯಂ, ಕ್ಯಾಟ್ಲೆಯಾ, ಪೆಲೆನೋಪ್ಸಿಸ್, ವಾಂಡಾ ತಳಿಗಳನ್ನು ವ್ಯಾಪಾರ ದೃಷ್ಟಿಯಿಂದ ಬೆಳೆಯಲಾಗುತ್ತದೆ. ಸೋನಿಯಾ (ಗಾಂದಿ ಅಲ್ಲ) ತಳಿ ತುಂಬಾ ಪ್ರಸಿದ್ಧವಾದ ತಳಿ. ಹೂಗಳು 3 ರಿಂದ 12 ವಾರಗಳಿಗೂ ಹೂದಾನಿಯಲ್ಲಿ, ಗಿಡದಲ್ಲಿ ಬಾಳುತ್ತವೆ ಸೀತಾಳೆ ಹೂವು.
ಆರ್ಕಿಡ್ ಬಗ್ಗೆ ಹೇಳುವಾಗ ಇನ್ನೊಂದು ನಮ್ಮ ಜಿಲ್ಲೆಯ ಹೆಮ್ಮೆಯ ವಿಷಯವನ್ನು ನಾನಿಲ್ಲಿ ಹೇಳಲೇಬೇಕು. ಆರ್ಕಿಡ್ ಹೂವಿನ ಮೇಲೇ ಅತಿ ಹೆಚ್ಚು ಸಂಶೋಧನೆ ಮಾಡಿದವರು ನಮ್ಮ ಜಿಲ್ಲೆಯವರು. ಡಾ. ಸದಾನಂದ ಹೆಗಡೆ ಮುತ್ತಮುರುಡು ಅವರು. ಇವರಿಗೆ ಆರ್ಕಿಡ್ ಹೂವಿನ ಬಗ್ಗೆ ಎಷ್ಟೊಂದು ಮಮತೆಯೆಂದರೆ ಇವರ ಮಗಳಿಗೂ ಆರ್ಕಿಡ್ ಹೂವಿನ ಹೆಸರೇ ಇಟ್ಟಿದ್ದಾರೆ ಸಿರೂಲಿಯಾ ಎಂದು.
-ಸತೀಶ ಹೆಗಡೆ.