spot_img
Tuesday, March 31, 2026
spot_imgspot_img
spot_img

ಮುಜೆಂಟಿ ಜೇನು ಸಾಕಣೆಯಲ್ಲಿ ಖುಷಿ ಕಂಡ ಶ್ರೀಹರಿ ಪ್ರಸಾದ್

-ರಾಧಾಕೃಷ್ಣ ತೊಡಿಕಾನ

ಜೇನುಗೂಡು ಮತ್ತು ಅದರ ಸುತ್ತ ಹಾರಾಡುವ ಜೇನು ನೊಣಗಳನ್ನು ಸುಲಭವಾಗಿ ಗುರುತ್ತಿಸುತ್ತೇವೆ. ಆದರೆ ಸಣ್ಣಪುಟ್ಟ ಸಂದಿ–ಗೋಂದಿಗಳಲ್ಲಿ, ಗೋಡೆಯ ಬಿರುಕುಗಳಲ್ಲಿ ಅಥವಾ ಮರದ ಒಳಗೆ ಸಣ್ಣ ಮನೆ ಕಟ್ಟಿಕೊಂಡು ನಿಶ್ಯಬ್ದವಾಗಿ ಬದುಕುವ ಮುಜೆಂಟಿ ಜೇನು ಕಂಡುಹಿಡಿಯುವುದು  ಸುಲಭವಲ್ಲ. ಬಹಳಷ್ಟು ಮಂದಿಗೆ ಅವು ಕಣ್ಣಿಗೆ ಬೀಳುವುದೇ ಇಲ್ಲ.

ಇಂತಹ ಜೇನುನೊಣಗಳನ್ನು ಸಾಮಾನ್ಯವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಸಾಕುವುದಿಲ್ಲ. ಕಾರಣ, ಅವುಗಳಿಂದ ಹೆಚ್ಚಿನ ಪ್ರಮಾಣದ ಜೇನು ಸಿಗುವುದಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಮುಜೆಂಟಿ ಅಥವಾ ಚುಚ್ಚದ ಜೇನು ನೊಣಗಳ ಸಾಕಣೆ ಹವ್ಯಾಸಕ್ಕಾಗಿ ಅಥವಾ ಸ್ವ ಉದ್ಯೋಗದ ಅವಕಾಶವಾಗಿ ಗಮನ ಸೆಳೆಯುತ್ತಿದೆ.

ಹನಿಗೂಡಿ ಹಳ್ಳ: ಈ ಸಣ್ಣ ನೊಣಗಳು ಹೂವಿನಿಂದ ಹೂವಿಗೆ ಹಾರಿ ಮಕರಂದವನ್ನು ಸಂಗ್ರಹಿಸುತ್ತವೆ. “ಹನಿಗೂಡಿ ಹಳ್ಳ” ಎಂಬಂತೆ ಅತಿ ಚಿಕ್ಕ ಹೂಗಳಿಂದಲೂ ಮಕರಂದವನ್ನು ಸಂಗ್ರಹಿಸಿ ಜೇನು ತಯಾರಿಸುತ್ತವೆ. ಸಣ್ಣ ಜಾಗಗಳಲ್ಲಿ ವಾಸಿಸುವ ಈ ನೊಣಗಳ ಉತ್ಪಾದನೆ ಕಡಿಮೆ ಇದ್ದರೂ, ಅವು ನೀಡುವ ಜೇನು ಉತ್ತಮ ಗುಣಮಟ್ಟದ್ದು. ಹಾಗೂ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಈ ಕಾರಣದಿಂದಲೇ ಇತ್ತೀಚೆಗೆ ಮುಜೆಂಟಿ ಜೇನು ಕೃಷಿಕರ ಗಮನ ಸೆಳೆಯುತ್ತಿದೆ. ಮನೆ ತೋಟಗಳಲ್ಲಿ ಈ ಜೇನು ಸಾಕಾಣೆಗೆ ಆಸಕ್ತಿ ಹೆಚ್ಚುತ್ತಿದೆ.

ಇಂಜಿನಿಯರ್‌ನಿಂದ ಜೇನು ಸಾಕಾಣಿಕೆಗೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕುದ್ದುಪದವು ಗ್ರಾಮದ ಶ್ರೀಹರಿ ಪ್ರಸಾದ್ ವೃತ್ತಿಯಲ್ಲಿ ಇಂಜಿನಿಯರ್. ಆದರೆ ಅವರು ಕೃಷಿಕ ಕುಟುಂಬದಲ್ಲಿ ಬೆಳೆದವರು. ಬಾಲ್ಯದಿಂದಲೇ ಕೃಷಿಯ ಮೇಲೆ ವಿಶೇಷ ಆಸಕ್ತಿ ಹೊಂದಿದ್ದರು.

ಇವರ ಜಮೀನಿನಲ್ಲಿ  ಪರಂಪರೆಯ ಭತ್ತ ಕೃಷಿಯ ಜೊತೆಗೆ ಅಡಿಕೆ, ತೆಂಗು, ರಬ್ಬರ್ ಮೊದಲಾದ ಬೆಳೆಗಳನ್ನು ಬೆಳೆಸುತ್ತಾರೆ. ಬಾಲ್ಯದಲ್ಲಿ ಮನೆಯ ಪರಿಸರದಲ್ಲಿ  ಕಾಣುತ್ತಿದ್ದ ಜೇನು ನೊಣಗಳ ಕುಟುಂಬಗಳು ಇವರಲ್ಲಿ ಕುತೂಹಲ ಮೂಡಿಸಿತ್ತು.  ಅದೇ ಕುತೂಹಲ ಮುಂದೆ ಮುಜೆಂಟಿ ಜೇನು ಸಾಕಣೆ ಕಡೆಗೆ ಪ್ರೇರೇಪಣೆ ನೀಡಿತು. ಐದು ಪೆಟ್ಟಿಗೆಯಿಂದ ಆರಂಭವಾದ ಮುಜೆಂಟಿ ಜೇನು ಕೃಷಿ ನೂರು ಪೆಟ್ಟಿಗೆ ವರೆಗೆ ತಲುಪಿದೆ. ಚಿಕ್ಕ ಪೆಟ್ಟಿಗೆಯ ಸಮೇತ ಜೇನು ಕುಟುಂಬಗಳನ್ನು ಕೊಂಡೊಯ್ಯಲು  ಬೇರೆಬೇರೆ ಜಿಲ್ಲೆಗಳಿಂದಲೂ ಇವರಲ್ಲಿಗೆ ಬರುತ್ತಾರೆ.

ಕಡಿಮೆ ಉತ್ಪಾದನೆ ಹೆಚ್ಚು ಮೌಲ್ಯ

ಮುಜೆಂಟಿ ಜೇನುನೊಣಗಳು ದೊಡ್ಡ ಆದಾಯ ತರುವ ತಳಿ ಅಲ್ಲ. ಒಂದು ವರ್ಷದಲ್ಲಿ ಹೆಚ್ಚೆಂದರೆ 2೦೦ರಿಂದ 3೦೦ ಗ್ರಾಂ ಜೇನು ಮಾತ್ರ ದೊರೆಯಬಹುದು. ಆದರೆ ಅದರ ಗುಣಮಟ್ಟ ಉತ್ತಮವಾಗಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಒಂದು ಕಿಲೋಗ್ರಾಂ ಮುಜೆಂಟಿ ಜೇನು ಸುಮಾರು 25೦೦ರಿಂದ 3೦೦೦ ರೂಪಾಯಿವರೆಗೆ ಬೆಲೆ ತಲುಪುತ್ತದೆ. ಎನ್ನುತ್ತಾರೆ ಶ್ರೀಹರಿ ಪ್ರಸಾದ್ ಅವರ ಬಳಿ ಸಾಮಾನ್ಯ ಜೇನು ಸಾಕಣೆಗೆ ಬಳಸುವ ಪೆಟ್ಟಿಗೆಗಳೂ ಇದ್ದರೂ, ಅವರ ವಿಶೇಷ ಆಸಕ್ತಿ ಮುಜೆಂಟಿ ಸಾಕಾಣೆಯತ್ತ.  ಈ ಸಣ್ಣ ನೊಣಗಳು ದೀರ್ಘಕಾಲ ಒಂದೇ ಸ್ಥಳದಲ್ಲಿ ನೆಲೆಸಿ ಬದುಕುವ ಗುಣ ಹೊಂದಿವೆ.

ಮುಜೆಂಟಿ ಜೇನುನೊಣಗಳು ದೊಡ್ಡ ಆದಾಯ ತರುವುದಿಲ್ಲದಿದ್ದರೂ, ಪರಿಸರ ಸ್ನೇಹಿ. ಇವುಗಳಿಂದ  ಪರಾಗ ಸ್ಪರ್ಶ ಹೆಚ್ಚಾಗಿ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಈ ಕಾರಣದಿಂದಲೇ ಈಗ ಅನೇಕರು ಮನೆ ತೋಟಗಳಲ್ಲಿ ಈ ಮುಜೆಂಟಿ ಸಾಕಲು ಆಸಕ್ತಿ ತೋರಿಸುತ್ತಿದ್ದಾರೆ.

ರೈತರಿಗೆ ಇ-ಮಾರುಕಟ್ಟೆ

ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರಕಿಸಲು ಶ್ರೀಹರಿ ಪ್ರಸಾದ್ ಅವರು ಇ-ಆರ್ಗ್ಯಾನಿಕ್ ಮಾರ್ಕೆಟ್ ಎಂಬ ವೇದಿಕೆಯನ್ನು ಆರಂಭಿಸಿದ್ದಾರೆ. ರೈತರಿಂದ ಗ್ರಾಹಕರಿಗೆ ನೇರ ವ್ಯಾಪಾರದ ಆನ್‌ಲೈನ್ ವೇದಿಕೆಯಿದು.Localformrs.in  ಈ ಆನ್‌ಲೈನ್ ವೇದಿಕೆಯ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು. ಹಾಗೆಯೇ ತಮಗೆ ಬೇಕಾದ ಹಣ್ಣು, ತರಕಾರಿ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆಯೂ ಇದೆ. ಇದರಿಂದ ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಬೆಳೆಸುವ ಪ್ರಯತ್ನ ವಲ್ಲದೆ ಕೃಷಿಕರಿಗೆ ಉತ್ತಮ ದರ ಹಾಗೂ ಗ್ರಾಹಕರಿಗೆ ಅರ್ಹ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನ ಒದಗಿಸುವುದು  ಅವರ ಉದ್ದೇಶವಾಗಿದೆ. ಅದಲ್ಲದೆ ಲೋಕಲ್ ಫಾರ್ಮರ್ಸ್ ಯೂ ಟ್ಯೂಬ್ ಚಾನಲ್ ಹೊಂದಿದ್ದಾರೆ ಮಾಹಿತಿಗೆ: 9480014021

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group