-ಪ್ರಬಂಧ ಅಂಬುತೀರ್ಥ
ಅಕೇರಿ ಸಮಯ ಬಂತು.ಹಾಂ ಹೂಂ ಆಂದರೆ ಮಳೆಗಾಲ ಸುರುವಾತದೆ. ಮಳೆಗಾಲದ ಕೆಲಸ ಉಂದೂ ಆಗಲ.. ರಮೇಸಣ್ಣ ನಿಗೆ ಮಂಡೆ ಬಿಸಿಯಾಗಕ್ಕೆ ಹತ್ತು. ಮನೆ ಮೇಲಿನ ಹಾಡ್ಯದ ದರಗು ಗುಡುಸಿರೆ ಮನೆ ಕೊಟ್ಟಿಗೆ ಬಾಗಿಲಿಗೆ ಬರೋದೆಂಗೆ.. ಮೊನ್ನೆ ದೇವರ ಗೌರ್ಮೆಂಟೋರು ಸಕಾಲ ದಲ್ಲಿ ಸಾಂಕ್ಷನ್ ಮಾಡಿ ಸುರಿಸಿದ ಬಂಗಾರದ ಮಳೆ ಬರೋ ಮುಂಚೆ ರಮೇಸಣ್ಣ ಜಲಜಕ್ಕ ದಂಪತಿಗಳು ಹಾಡ್ಯದ ದರಗು ಗುಡಿಸಿ ರಾಶಿ ಮಾಡಿ ಕೊಂಡಾಗಿತ್ರು. ಆದರೆ ಹಾಡ್ಯದಿಂದ ದರಗು ಮನೆ ಬಾಗಿಲಿಗೆ ಹೊತ್ತು ತರೋಕೆ ಊರಿನ ಎಲ್ಲಾ ಸೇರೇಗಾರರನ್ನೂ ಬೇಟಿ ಮಾಡಿದರೂ ಒಂದು ಆಳು ಬರ್ಲ… ಯಾನು ಪಿಕ್ ಅಪ್ ನವರೂ ಬರ್ಲ…
ಹಂಗೂ ರಮೇಸಣ್ಣ ಛಲಬಿಡದ ತ್ರಿವಿಕ್ರಮ ನ ನಮೂನೆಯಲ್ಲಿ ಯಸೋದಕ್ಕ, ಸಾರದಕ್ಕ , ಸೈಲಕ್ಕರ ಮನೆ ಹಾದಿ ಸಮಸಿ ಅವ್ರ ಮನೆ ಬಗ್ಗಿ ನಾಯಿ ಹತ್ತಿರ ಬಯ್ಸಿ ಕೊಂಡಿದ್ದಷ್ಟೇ ಬಂತು .. ಏನೂ ಪ್ರಯೋಜನ ಆಗಲ…!!!
ಆಪೆ ಅನಂತಣ್ಣ ಜೀತೋ ಜಯರಾಮಣ್ಣ ನಿಗೂ ನಾಕು ಟ್ರಿಪ್ ದರಗು ಹೊಡೆದು ಕೊಡೋಕ್ಕೆ ಪುರುಸೋತ್ತಿಲ್ಲ. ಫೋನ್ ಮಾಡಿರೆ ಅವ್ತ ಫೋನ್ ನ ರಿಂಗ್ ಟೋನ್ ಏನಿಲ್ಲ ಏನಿಲ್ಲ.. ಹಾಡನ್ನ ಕೇಣದಾಗಿದೆ.. ಫೋನೇ ನೆಗ್ಗಲ್ಲ..!! ಕಡೀಕೆ ಬೆಂಕಿಬಿದ್ದ್ ಹೋಗಲಿ ಅಡಿಕೆ ರೇಟು ಐವತ್ತು ಸಾವ್ರ ಆಗಿದೆ ನಾವೇ ಒಂದು ಗೂಡ್ಸ್ ತರನ ಅಂತ ಸೋ ರೂಮಿಗೆ ಹೋಗಿ ಕೇಂಡ್ರೆ ಯಾವೂ ಐದು ಲಕ್ಸ ದೊಳಗಿಲ್ಲ . ಇದು ಭಾರಿ ಕ್ಯಾಸ್ಟಲಿ ಎನ್ನಿಸಿ ಬಿಟ್ಟರು. ಕೃಷಿ ಮಳಿಗೆಲಿ ಸಿಗುವ ಷಣ್ಣ ಸೈಜಿನ ಮಿಷಿನ್ ಗಾಡಿಯೂ ಒಂದು ಲಕ್ಷ…!! ರಮೇಸಣ್ಣ ಅದನ್ನೂ ನೋಡಿರು. ಪ್ರಯೋಜನ ಇಲ್ಲ ಅಂತ ಬಿಟ್ಟರು.
ಸಂಜೆ ಮಂಡೆ ಬಿಸಿ ಮಾಡಿಕೊಂಡು ಮಹೇಸಣ್ಣನ ಅಂಗಡಿಲಿ ಕೂತಾಗ ಅಲ್ಲಿಗೆ ಬಂದ ಗಣೇಸಣ್ಣ ರಮೇಸಣ್ಣನಿಗೆ “ಇದಕ್ಕಿಂತ ಮಂಡೆ ಬಿಸಿ ಮಾಡಕಂತಿಯಾ...? ಅಂಗೈಯಲ್ಲಿ ಬಂಗಾರ ಇಟ್ಟುಕೊಂಡು ಊರೆಲ್ಲಾ ಯಾಕೆ ಅಲಿತೀಯ..? ನಿಮ್ಮ ಮಾರುತಿ 800 ನ್ನ ಕೊಯ್ಸಿ ಪಿಕ್ ಅಪ್ ಮಾಡಿಸಿ ಬಿಡು.
ಈ 800 ಕೊಯ್ಸಿ ಪಿಕ್ ಅಪ್ ಮಾಡೋದು ಈ ಬೈಕ್ ಪಿಕ್ ಅಪ್ಪೂ , ಗೂಡ್ಸು, ಷಣ್ ಸೈಜಿನ ಟ್ರಾಲಿ ಮೋಟಾರು ಸೇರಿದಂತೆ ಎಲ್ಲಕ್ಕಿಂತ ಚೀಪು.. ಇಪ್ಪತ್ತೈದು ಮೂವತ್ತು ಸಾವಿರದೊಳಗೆ ಒಂದೊಳ್ಳೆಯ ರೈತ ಸ್ನೇಹಿ ಗೂಡ್ಸ್ ಆತದೆ “ಎಂಬ ಸಲಹೆ ಕೊಟ್ಟರು.
ಕಡೀಕೆ ಮನೇ ಮೂಲೇಲಿ ನಿಂತು ತುಕ್ಕು ಹಿಡಿತಿದ್ದ ಮಾರುತಿ 800 ನ್ನ ಆಚಾರ್ ಹತ್ತಿರ ಕಟ್ ಮಾಡಿಸಿ ಒಂದು ಮಿನಿ ಪಿಕ್ ಅಪ್ ಮಾಡಿಸೇ ಬಿಟ್ಟರು ರಮೇಸಣ್ಣ. ಈ ಪಿಕ್ ಅಪ್ ಮಾಡಿಕೊಂಡ ಮೇಲೆ ರಮೇಸಣ್ಣ ನ ತ್ವಾಟ ತುಡಿಕೆ ಕೆಲಸ,ಈಗ ಮಿಲ್ಲಿಗೆ ಹೋಗಕೆ ಆಪೆ ರಿಕ್ಷಾ ಅನಂತಣ್ಣನ ಗಿರಿಯದು ಬ್ಯಾಡಾಗಿದೆ. ಸೊಸೇಟಿಯಿಂದ ಗೌರ್ಮೇಂಟು ಗೊಬ್ಬರ ತರಾಕೆ , ಗದ್ದೆಗೆ ವೀರ್ಯದ ಗೊಬ್ಬರದ ಮೂಟೆ ತರೋಕೆ ಜೀತೋ ಗೂಡ್ಸ್ ಜಯಣ್ಣನ ಬೆನ್ನತ್ತದು ಬ್ಯಾಡ ಆಗಿದೆ. ಹಿಂಡಿ ಮೂಟೆ ತರೋ ಆಟೋ ಬಾಡಿಗೆ , ಹಸಿ ಹುಲ್ಲಿನ ಹೊರೆ ತರೋ ಕೆಲಸ , ಈಗ ದರಗು ತರೋ ಮುಂತಾದ ಎಲ್ಲಾ ಕೆಲಸಾನೂ ಈಜೀ ಆಗಿದೆ. ರಮೇಸಣ್ಣ ಈ ಮಾರುತಿ ಕನ್ವರ್ಟೆಡ್ ಪಿಕ್ ಅಪ್ ಮಾಡಿದ ಮೇಲೆ ಸ್ವಾವಲಂಬಿ ಆಗಿದಾರೆ ಎಂಬುದು ಖುಸಿ ಇಸಿಯ..
ರಮೇಸಣ್ಣ 800 ಪಿಕ್ ಅಪ್ ನ ದರುಗು ಪ್ರಸಂಗ..
ಮಲೆನಾಡಿನ ಬಹುತೇಕ ಎಲ್ಲಾ ಕೃಷಿ ಕುಟುಂಬದ ನಮೂನೆಯಲ್ಲೇ ನಮ್ಮ ರಮೇಸಣ್ಣ ನ ಕುಟುಂಬ ಕೂಡ..
ರಮೇಸಣ್ಣ ಜಲಜಕ್ಕ ಈ ಇಳಿ ವಯಸ್ಸಿನಲ್ಲಿ ವರ್ಷಾವಧಿ ಕೆಲಸ ಆದ ದರಗು ತರಕ್ಕೆ ಹಾಡ್ಯಕ್ಕೆ ತಮ್ಮ ” ಮಾರುತಿ ಪಿಕ್ ಅಪ್ ಕಾರು” ತಗುಂಡು ಹೋದರು. ಬೆಳಗಿಂದ ಕಾನು ತಂಪಲ್ಲಿ ಬೆನ್ನು ಬಗ್ಗಸಿ ಗುಡುಸಿಟ್ಟಿದ್ದ ದರಗನ್ಬ ಸೀರೆಗೆ ಗುಡಿಸಿ ದೂಡಿ ಒಡ್ಡಿ ತುಂಬಿ ಆಂಜನೇಯ ಸಂಜೀವಿನಿ ಪರ್ವತ ಹೊತ್ತಂಗೆ ಮಾರುತಿ ಕಾರಿಗೆ ಒಂದೊಂದೇ ದರಗಿನ ಹೊರೆ ಏರಿ ಸಿದರು.
ಎಲ್ಲ ಸೀರೆ ದರಗಿನ ಜಲ್ಲೆ ನ ಕಾರಿಗೆ ಏರಿಸಿ ದ ಮೇಲೆ ಜಲಜಕ್ಕ ಕಾರಿನಂಡಿಗೆ ಕೂತು ಕಣ್ಣಲ್ಲಿ ನೀರು ತುಂಬಿಕೊಂಡರು. ರಮೇಸಣ್ಣ ಪ್ರೀತಿಯಿಂದ ಜಲಜಕ್ಕ ನಿಗೆ..”ಯಂತಾತೆ ಜಲಜ..? ಯಾಕೆ ಕಣ್ಣೀರು ಹಾಕ್ತಿ..? ಕಣ್ಣಿಗೆ ಕಸಗಿಸ ಬಿತ್ತನೇ ..? ” ಎಂದು ಆಪ್ತತೆಯಿಂದ ರಮಿಸಿ ಕೇಂಡರು. ಅದಕ್ಕೆ ಜಲಜಕ್ಕ – “ರೀ.. ನಿಮಗೆ ಮೇಲೆ ಕಾಣೋ ಸೀರೆ ದರಗಿನ ಜಲ್ಲೆ ಬರೀ ದರಗು ತುಂಬಿದ ಜಲ್ಲೆ.. ಆದರೆ ನಂಗೆ ಆ ಸೀರೆಗಳ ಜೊತೆಗೆ ನೆಂಟಸ್ತಿಕೆ ಇದೆ. ಬಂಧು ಬಳಗದ ಪ್ರೀತಿಯ ಉಡುಗೊರೆ ಅದು.. ಆ ಮೆರೂನ್ ಕಲರ್ ಸೀರೆ ಅಣ್ಣನ ಮಗಳ ಬಯಕೆ ಶಾಸ್ತ್ರದಲ್ಲಿ ನಂಗೆ ಕೊಟ್ಟದ್ದು.. ನೀಲಿ ಹೂ ಹೂ ಸೀರೆ ನಿಮ್ಮ ಅಣ್ಣ ನ ಮಗನ ಮದುವೆ ಲಿ ಹುಡುಗಿ ಕಡೆ ಬೀಗರು ಕೊಟ್ಟಿದ್ದು.. ತಿಳಿ ನೀಲಿ ಕಲರ್ ಸೀರೆ ನಮ್ಮ ಪುಟ್ಟಿ ಬೆಂಗಳೂರಿಂದ ಅವಳ ಫಸ್ಟ್ ಸಂಬಳದಲ್ಲಿ ತಗೊ ಬಂದದ್ದು.. ಅರಿಷಿಣ ಬಣ್ಣದ ಸೀರೆ ನಮ್ಮ ಪಾಪಣ್ಣ ಕೆಲಸಕ್ಕೆ ಸೇರಿದ ಮೇಲೆ ನಂಗೆ ತಂದುಕೊಟ್ಟಿದ್ದು.. ಕಪ್ಪಂಚು ಬಿಳಿ ಸೀರೆ ನನ್ನ ತಂಗಿ ಮಗನ ಎಂಗೇಜ್ಮೆಂಟಿಗೆ ಕೊಟ್ಟಿದ್ದು.. ” ಜಲಜಕ್ಕ ಕಣ್ಣೀರು ಹಾಕ್ತಾನೇ ಮಾತು ಮುಂದುವರಿಸುತ್ತಾ ” ಈ ಸೀರೆ ಗಳು ನೆಂಟರ ಮನೆ ಊಟದ ಮನೆಯಲ್ಲಿ ನಾವು ತೊಟ್ಟವು.. ತಮ್ಮ ಕೊನೆ ಉಸುರಿರೋ ತಂಕಾನೂ ಈ ಸೀರೆ ಜೀವ ಸವೆಸಿ ದರಗು ತುಂಬಿಸಿಕೊಂಡು ನಮಗೆ ಸೇವೆ ಸಲ್ಲಿಸುತ್ತಾ ಈ ಸೀರೆ ಉಟ್ಟ ಸಂಭ್ರಮದ ದಿನಗಳ ಗ್ಯಾಪಕ ಮಾಡಿಸುತ್ತಾ ತಮ್ಮ ಸೀರೆ ಜೀವನ ಸಾರ್ಥಕ ಗಳಿಸಿ ಕೊಳ್ತಿದ್ದಾವೆ ನೋಡಿ.. ನಾವು ಮನಸರು ಸತ್ತರೆ ಬೂದಿ ಮಾತ್ರ.. ಆದರೆ ಸೀರೆ ನಾವು ಉಟ್ಟು ಬಿಸಾಡಿದ ಮೇಲೂ ನಮಗೆ ಹೆಂಗೆಲ್ಲಾ ಉಪಕಾರ ಮಾಡ್ತಾವೆ ನೋಡಿ.. ” ಅಂದರು ಕಣ್ಣೀರು ಸುರಿಸುತ್ತಾ .
ನಂತರ ಜಲಜಕ್ಕ ಸಿಂಬಳ ಸೀಟಿ ಬಿಸಾಡಿ ತನ್ನ ಮಾಸಲು ನೈಟಿಯ ತುದಿಯಿಂದ ತಮ್ಮ ಮೂಗು ವರೆಸಿಕೊಂಡರು. ರಮೇಸಣ್ಣನಿಗೂ ಸೊಪ ದುಃಖ ಆತು. ರಮೇಸಣ್ಣ ಜಲಜಕ್ಕ ನಿಗೆ ಉಡುಗೊರೆ ಬಂದ್ ಸೀರೆಗೆಲ್ಲ ಟೈಲರ್ ಸಾವಂತ್ರಕ್ಕನ ಹತ್ತಿರ ಕುಪ್ಪಸ ಹೊಲಸಿ ಹೊಲಸಿ ಮಜೂರಿ ಕೊಟ್ಟು ಸುಸ್ತಾದ ದಿನಗಳೂ ಆದ ಖರ್ಚು ಒಂದು ಸತಿ ಲೆಕ್ಕಾಚಾರ ಹಾಕಿ ಒಂಚೂ ಬೇಜಾರಾತು…
ರಮೇಸಣ್ಣ ಕಲ್ಲಂಗಡಿ ಹಣ್ಣನ್ನ ಕೊಯ್ದ ಹಾಗಿನ ಕೊಯ್ದ ಮಾರುತಿ ಪಿಕ್ ಅಪ್ ಕಾರಿನ ಡೋರು ತೆಗೆದು ಒಳಗೆ ಹೊಗ್ಗಿ ಕೀ ತಿರಸಿ ಕಾರು ಸ್ಟಾರ್ಟ್ ಮಾಡಿದರು. ಜಲಜಕ್ಕ ಪಕ್ಕದ ಸೀಟಿನಲ್ಲಿ ಕೂತ್ತು ಡಬಾರ್ ಡೋರ್ ಹಾಕಿ ಕುತ್ತ ಹೊಡತಕ್ಕೆ ಜಲಜಕ್ಕ ಸೀರೆ ದರಗಿನ ಮೂಟೆಗಳ ಸಮೇತ ಇಡೀ ಕಾರೇ ಅಲ್ಲಾಡಿತು.
“ಮನೋಜವಂ ಮಾರುತ ತುಲ್ಯ ವೇಗಂ ..” ಅಂತ ಸಂಸ್ಕೃತ ಶ್ಲೋಕ ಹೇಳ್ತಾ ಮಾರುತಿ ದರುಗಿನ ಸಂಜೀವಿನಿ ಪರ್ವತ ಹೊತ್ತು ರಮೇಸಣ್ಣ ಜಲಜಕ್ಕ ರ ಮನೆ ಕಡೆಗೆ ಹೋಗತೊಡಗಿತು..
-ಚಿತ್ರ ಕೃಪೆ – ತಬಲ ಸತ್ಯಣ್ಣ