ಉಡುಪಿ/ಮಂಗಳೂರು: ಹಲವು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಕರಾವಳಿ ಜಿಲ್ಲೆಗಳಲ್ಲಿ ಗುರುವಾರದಿಂದ ಚುರುಕಾಗಿದ್ದು, ಕೃಷಿ ಚಟುವಟಿಕೆಗಳಿಗೂ ಒಂದಷ್ಟು ವೇಗ ಸಿಕ್ಕಿದ್ದು ಕೃಷಿಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಸಾಮಾನ್ಯವಾಗಿ ಜೂನ್ ಅಂತ್ಯದಲ್ಲಿ ಕೃಷಿ ಚಟುವಟಿಕೆಗಳು ಇನ್ನಷ್ಟು ಗರಿಗೆದರುವ ಹೊತ್ತು. ಆದರೆ ಈ ಸಲ ಮುಂಗಾರು ಮಳೆಯ ಪತ್ತೆಯೇ ಇರಲಿಲ್ಲವಾದ್ದರಿಂದ ಕರಾವಳಿ ಭಾಗದ ಕೃಷಿಕರು ಉತ್ಸಾಹ ಕಳೆದುಕೊಂಡಿದ್ದರು. ಕೆಲವು ಭತ್ತದ ಕೃಷಿಯೇ ಬೇಡ ಎನ್ನುವ ನಿರ್ಧಾರವನ್ನೂ ಮಾಡಿದ್ದರು. ಆದರೆ ಮುಂಬರುವ ದಿನಗಳಲ್ಲಿ ಮುಂಗಾರು ಬಿರುಸುಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು ಕೃಷಿ ಚಟುವಟಿಕೆಗಳು ಮತ್ತೆ ರೆಕ್ಕೆ ಬಿಚ್ಚಿದೆ.
ಹೊನ್ನಾವರ ತಾಲೂಕಿನಲ್ಲಿ ಗರಿಷ್ಠ 110 ಮಿಮಿ ಮಳೆಯಾಗಿದ್ದರೆ ಕುಮಟಾದಲ್ಲಿ 96 ಮಿಮಿ ಮತ್ತು ಭಟ್ಕಳದಲ್ಲಿ 86 ಮಿಮಿ ಮಳೆಯಾಗಿದೆ. ಆದಾಗ್ಯೂ, ಮಳೆಯ ಪ್ರಮಾಣವು ನಿರೀಕ್ಷಿತ ಮಟ್ಟದಲ್ಲಿಲ್ಲದೆ ಕುಸಿತವನ್ನು ದಾಖಲಿಸಿದೆ.
ಬುಧವಾರದವರೆಗೂ ಕರಾವಳಿ ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಸಹಿತ ಭಾರೀ (115 ರಿಂದ 244 ಮಿಮಿ) ಮಳೆಯ ಸಂಭಾವನೆ ಇದ್ದು, ಸಮುದ್ರವೂ ಪ್ರಕ್ಷುಬ್ದವಾಗಲಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ