-ರಾಧಾಕೃಷ್ಣ ತೊಡಿಕಾನ
ಎಂತಾ ಮಾರಾಯ್ರೆ. ಮಂಗಗಳ ಕಾಟ.ಈಗೀಗ ಕೃಷಿಯೇ ಬೇಡಾಂತಾಗಿದೆ. ರೈತರು ಸೇರಿದಾಗ ಸಾಮಾನ್ಯವಾಗಿ ಕೇಳಿ ಬರುವ ಮಾತಿದು.
ಹೌದು, ಕಾಡು ಪ್ರಾಣಿಯ ಹಾವಳಿ ವಿಷಯ ಬಂದಾಗ ಮೊದಲು ಪ್ರಸ್ತಾಪವಾಗುವುದೇ ಮಂಗನದು. ಎಲ್ಲೆಂದರಲ್ಲಿ ಯಾವ ಘಳಿಗೆಯಲ್ಲೂ ಎಲ್ಲಾ ಮಂಗಮಾಯ ಮಾಡುವ ತಾಕತ್ತು ಅದಕ್ಕೆ ಮಾತ್ರ. ಬಿತ್ತುವಲ್ಲಿಂದ ಕೊಯಿಲಿನವರೆಗೆ ಅದು ನಾಶಮಾಡುವ ಬೆಳೆ ಒಂದೆರಡಲ್ಲ. ತೆಂಗಿನ ಮರದಲ್ಲಿ ತೆಂಗಿನಕಾಯಿ ಬಿಡಿ, ಹೊಂಬಾಳೆ ಅರಳಿದರೂ ಅದರ ಮೇಲೆ ಲಾಗ ಹಾಕಿ ಸರ್ವನಾಶ ಮಾಡಿಬಿಡುತ್ತದೆ. ತಮ್ಮ ತೋಟಗಳಿಂದ ಮಂಗಗಳನ್ನು ಓಡಿಸಲು ಹಲವಾರು ರೈತರು ತಮ್ಮದಾದ ಪ್ರಯತ್ನಗಳನ್ನು ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ.
ಕಲ್ಲೆಸತ, ಪಟಾಕಿಗಳ ಸಿಡಿಸಿದರೆ ಕ್ಯಾರೇ ಎನ್ನದೆ ಅಡಗಿ ಕುಳಿತು ನಮ್ಮ ಚಲನವಲನಗಳನ್ನೇ ಗಮನಿಸುವ ಚಾಲಾಕಿ ಅವು. ನಾಯಿಗಳಿಗೆ, ಹೆಂಗಸರಿಗೆ ಮತ್ತು ಮಕ್ಕಳಿಗೆ ಹೆದರಿಸಿ ಸುಮ್ಮನಾಗಿಸುವ ತಾಕತ್ತು ರೂಢಿಯಾಗಿದೆ.

ಮಂಗಳನ್ನು ಬೆದರಿಸಿ ಓಡಿಸುವ ಕೋವಿಗಳೀಗ ಅಲ್ಲಲ್ಲಿ ಸದ್ದು ಮಾಡುತ್ತಿವೆ. ಮೊದಲು ಪಿವಿಸಿ ಪೈಪಿನ ಗನ್ನುಗಳು ಬಂದವು. ಅದಾದ ನಂತರ ಮರದ ಹಿಡಿಕೆಯ ಕಬ್ಬಿಣದ ಗನ್ನುಗಳು ಕಾಣಿಸಿಕೊಂಡವು. ಈಗ ಸ್ಟೇನ್ ಲೆಸ್ ಸ್ಟೀಲ್ ಬಳಕೆಯ ಬಂದೂಕುಗಳಿವೆ.
ಕೊಕ್ಕಡದ ಬಾಳಪ್ಪ ಗೌಡರು ಮಂಗಗಳ ಹಾವಳಿಯನ್ನು ತಡೆಯಲು ತನ್ನದಾದ ಸುಲಭ ಸರಳ ತಂತ್ರಜ್ಞಾನದ ಸಾಧನ ತಯಾರಿಸಿದ್ದಾರೆ. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಅವರು ತಂದಿದ್ದ ಮಂಗಗಳನ್ನು ಬೆದರಿಸುವ ಕೋವಿ ರೈತರನ್ನು ಆಕರ್ಷಿಸಿತ್ತು. ಖರೀದಿಸುವವರಿದ್ದರು. ಆದರೆ ಅವರಲ್ಲಿ ತಯಾರಿಸಿದ ಕೋವಿಗಳಿರಲಿಲ್ಲ.
ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಬಾಳಪ್ಪ ಗೌಡರು ಕೃಷಿಕರು. ಏನೇ ಕೃಷಿ ಮಾಡಿದರೂ ಮಂಗಗಳು ಉಪದ್ರವ. ಮಂಗ ಓಡಿಸುವ ಹಲವು ಪ್ರಯತ್ನಗಳನ್ನು ಮಾಡಿದರೂ ಫಲಕಾರಿಯಾಗಲಿಲ್ಲ. ಆಗ ಹೊಳೆದದ್ದು ಮಂಗ ಓಡಿಸಲು ಸರಳ ಸಾಧನ ತಯಾರಿ. ಈಗ ಮಾರುಕಟ್ಟೆಯಲ್ಲಿರುವ ಗನ್ನುಗಳು ತಿರುಗಣೆ ತೆಗೆದು ಅದರೊಳಗೆ ಪಟಾಕಿಯಿಟ್ಟು ನಳಿಕೆಗೆ ಕಲ್ಲುಗಳನ್ನು ಹಾಕಿ ಪಟಾಕಿ ಸಿಡಿಸಿ ಮಂಗ ಓಡಿಸುವುದಾದರೆ ಇವರ ಗನ್ನುಗಳಿಗೆ ಪಟಾಕಿಯೇ ಬೇಡ. ಇವರದ್ದು ತೀರಾ ಸರಳ ಮಾದರಿ,
ಒಂದ ಅಡಿಯಷ್ಟು ಉದ್ದ ಉಳ್ಳ ದಪ್ಪದ ಕಬ್ಬಿಣದ ಆಯಾತಾಕಾರದ ಪಟ್ಟಿ. ಅದಕ್ಕೆ ಸುಮಾರು ಒಂದಡಿ ಉದ್ದದ ಒಂದೂವರೆ ಇಂಚಿನ ಕಬ್ಬಿಣದ ಪೈಪು, ಆಯಾತಾಕಾರದ ಕಬ್ಬಿಣದ ಪಟ್ಟಿಗೆ ಲೈಟರ್ ಜೋಡಣೆ, ಗ್ಯಾಸ್ ವೆಲ್ಡ್ಗೆ ಉಪಯೋಗಿಸುವ ಕಾರ್ಬೈಡ್ ಕಲ್ಲಿನ ಚೂರುಗಳು. ಇವಿಷ್ಟು ಬಾಳಪ್ಪ ಗೌಡರ ಮಂಗ ಓಡಿಸುವ ಕೋವಿಗೆ ಬೇಕಾದ ವಸ್ತುಗಳು.

ಕಾರ್ಬೈಡ್ ಕಲ್ಲಿನ ಚೂರುಗಳನ್ನು ಹಿಡಿಕೆಯ ಒಳಗೆ ಹಾಕಿ ಅದಕ್ಕೆ ಸ್ವಲ್ಪ ನೀರು ಸುರಿಯಲಾಗುತ್ತದೆ. ಆನಂತರ ಅದಕ್ಕೆ ಕಬ್ಬಿಣದ ಪೈಪು ಜೋಡಿಸಿ ಕಾಗದ ಉಂಡೆ ಸಣ್ಣ ಸಣ್ಣ ಕಲ್ಲುಗಳನ್ನು ತುಂಬಿಸಿ ಲೈಟರ್ ತುದಿ ಒತ್ತಿದರೆ ದೊಡ್ಡ ಪಟಾಕಿ ಸದ್ದಿನೊಂದಿಗೆ ಅದರಲ್ಲಿದ್ದ ಕಲ್ಲುಗಳು ಎತ್ತರಕ್ಕೆ ಸಿಡಿಯುತ್ತದೆ. ಮರದಲ್ಲಿರುವ ಮಂಗಗಳು ಗಲಿಬಿಲಿಗೊಂಡು ಪಲಾಯನ ಮಾಡುತ್ತವೆ.
ಕಳೆದ 15 ವರ್ಷಗಳಿಂದ ಮಂಗ ಓಡಿಸುವ ಕೋವಿಯನ್ನು ಮಾಡುತ್ತಿದ್ದು ಆಸಕ್ತರು ಬೇಕೇಂದು ಕೇಳಿದಲ್ಲಿ ಮಾಡಿಕೊಡುತ್ತಾರೆ. ಈ ವರೆಗೆ ಹಲವಾರು ಕೋವಿಗಳನ್ನು ಮಾರಾಟ ಮಾಡಿದ್ದಾರೆ . ಸರಳವಾದ ಈ ಕೋವಿಗೆ ರೈತರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ ಮಾಹಿತಿಗೆ 8494857747






