ರೈತರು ಬೆಳೆದ ಬೆಳೆ ರೈತರ ಮನೆ ಸೇರಬೇಕಾದರೆ ಹಲವಾರು ಸಂಕಷ್ಟಗಳನ್ನು ದಾಟಿ ಬರಬೇಕು. ಪ್ರಾಕೃತಿಕ ವಿಕೋಪಗಳು ಒಂದೆಡೆಯಾದರೆ ಮತ್ತೊಂದೆಡೆ ಕಾಡು ಪ್ರಾಣಿಗಳ ಹಾವಳಿಯಿಂದ ಸಂರಕ್ಷಿಸಿಕೊಳ್ಳುವುದು ಹರಸಾಹಸವೆ. ಕಾಡು ಪ್ರಾಣಿಗಳಲ್ಲಿ ಅತ್ಯಂತ ಹೆಚ್ಚು ಬೆಳೆಹಾನಿ, ಕೃಷಿ ಉತ್ಪನ್ನಗಳನ್ನು ಹಾಳುಗೆಡವುದರಲ್ಲಿ ್ಲ ಮಂಗಗಳ ಪಾತ್ರವೇ ಹೆಚ್ಚು. ಇವು ತಿನ್ನುವುದಕ್ಕಿಂತ ಜಾಸ್ತಿ ರೈತರಿಗೆ ನಷ್ಟ ಉಂಟು ಮಾಡುತ್ತವೆ. ಬೆಳೆಗಳನ್ನು ರಕ್ಷಿಸಲು ಹೋಗಿ ಕೈಕಾಲು ಮುರಿದು ಕೊಂಡವರೂ ಇದ್ದಾರೆ. ಕೋತಿ ಚೇಷ್ಟೆಯೇ ಅಂತದ್ದು. ಪಟಾಕಿ ಹೊಡೆದರೆ ಕ್ಯಾರೆ ಎನ್ನುತ್ತಿಲ್ಲ
ಕರಾವಳಿ, ಮಲೆನಾಡು ಮಾತ್ರವಲ್ಲ ಇತರ ಕಡೆಯೂ ಕೋತಿಗಳ ಸಮಸ್ಯೆ ಸಹಿಸಲು ಸಾಧ್ಯವಾಗುವುದಿಲ್ಲ ಅಡಿಕೆ, ಎಳನೀರು, ಹಣ್ಣಿನ ಬೆಳೆಗಳು ಸೇರಿದಂತೆ ಹಲವು ಬೆಳೆಗಳಿಗೆ ಮಂಗಗಳೇ ದೊಡ್ಡ ಕಂಟಕ. ಮಂಗಗಳನ್ನು ಹೆದರಿಸಿ ಓಡಿಸುವ ಹಲವಾರು ಉಪಕರಣಗಳು ಬಂದಿದೆಯಾದರೂ ಇತ್ತೀಚೆಗೆ ಪಾಂಡುರಂಗ ಭಟ್ಟರು ತಯಾರಿಸಿದ ಕೋವಿ ಈಗ ಹೆಚ್ಚು ಸದ್ದು ಮಾಡುತ್ತಿದೆ.
ಪುತ್ತೂರಿನ ಮುರ ಸಮೀಪದ ಪಡ್ನೂರಿನ ಬನಾರಿ ಪಾಂಡುರಂಗ ಭಟ್ಟರು ಕೃಷಿಕರು. ಅವರ ತೆಂಗಿನತೋಟಕ್ಕೆ ದಾಳಿ ಮಾಡುತ್ತಿದ್ದ ಮಂಗಗಳು ಎಳೆಗಾಯಿಗಳಿಂದ ಹಿಡಿದು ಸಾಧಾರಣವಾಗಿ ಬೆಳೆದ ಕಾಯಿಗಳನ್ನು ಕಿತ್ತು ಕೆಲವೊಂದು ತಿಂದು ಉಳಿದವನ್ನು ಹಾಳುಗೆಡವಿ ಹಾಕುತ್ತಿದ್ದವು. ಪಟಾಕಿ ಸಿಡಿಸಿದರೆ ಸ್ವಲ್ಪ ದೂರ ಓಡಿ ಮತ್ತೆ ಬರುವ; ಕಲ್ಲು ಹೊಡೆದರೆ ಮರೆಯಿಂದಲೇ ತಪ್ಪಿಸಿಕೊಳ್ಳುವ ಮಂಗಗಳನ್ನು ಹೇಗಾದರೂ ಮಾಡಿ ಓಡಿಸುವ ಸಾಧನವನ್ನು ತಯಾರಿಸಬೇಕೆಂಬ ಯೋಚನೆ ಮೂಡಿತು. ಆಗ ರೂಪುಗೊಂಡದ್ದೇ ಮಂಗಗಳನ್ನು ಓಡಿಸುವ ಕೋವಿ.
ಈ ಕೋವಿಗೆ ಪೂರಕವಾದ ಮರದ ಹಿಡಿಕೆಯನ್ನು ಪುತ್ತೂರಿನಲ್ಲಿ ಮಾಡಿಸಿಕೊಂಡರು. ಸ್ಟೆನ್‌ಲೆಸ್ ಪೈಪುಗಳನ್ನು ಹೊರರಾಜ್ಯಗಳಿಂದ ತರಿಸಿಕೊಂಡರು. ಮುಕ್ಕಾಲು ಇಂಚು ವ್ಯಾಸವುಳ್ಳ ೨೬-೨೭ ಇಂಚು ಉದ್ದದ ಸ್ಟೆöನ್ಲೆಸ್ ಸ್ಟೀಲ್ ಪೈಪಿನ ನಳಿಕೆ ಹೊಂದಿದೆ. ಮರದ ಹಿಡಿ ಹಾಗೂ ನಳಿಕೆಯ ಮಧ್ಯೆ ಐ ಆಕಾರದ ಜೋಡಣೆಯನ್ನು ಹೊಂದಿದೆ. ಇದರಲ್ಲಿ ತಿರುಗಣೆ ಹಾಗೂ ಒಂದು ಸಣ್ಣ ತೂತು ಇದ್ದು ತಿರುಗಣೆಯನ್ನು ತೆಗೆದು ಸಣ್ಣ ಮಾದರಿಯ ಉಂಡೆ ಪಟಾಕಿ ಹಾಗೂ ನಳಿಗೆಗೆ ಸಣ್ಣಸಣ್ಣ ಕಲ್ಲುಗಳನ್ನು ತುಂಬಿಸಿ ಪಟಾಕಿಯ ತುದಿಗೆ ಬೆಂಕಿ ಹಚ್ಚಿದರೆ ‘ಡಮಾರ್’ ಎಂಬ ಸದ್ದಿನೊಂದಿಗೆ ನಳಿಕೆಯಲ್ಲಿದ್ದ ಸಣ್ಣ ಸಣ್ಣ ಕಲ್ಲುಗಳು ಸುಮಾರು ೧೨೦ ಅಡಿ ದೂರದವರೆಗೆ ಸಿಡಿಯುತ್ತದೆ. ಎಷ್ಟು ಅಡ್ಡಲಾಗಿ ಮಂಗಗಳು ಕುಳಿತರೂ ಕೆಲವಾದರೂ ಕಲ್ಲೇಟಿನ ರುಚಿ ಅನುಭವಿಸದೆ ಇರುವುದ್ದಿಲ್ಲ. ಇದರಿಂದ ಮಂಗಗಳನ್ನು ಮಾತ್ರವಲ್ಲ ಇತರ ಪ್ರಾಣಿಗಳನ್ನು ಓಡಿಸಬಹುದು.
ಲೈಸೆನ್ಸ್ ಬೇಕಾಗಿಲ್ಲ. ಪಟಾಕಿಯಿಟ್ಟು ಸಿಡಿಸುವಾಗ ಯಾವುದೇ ಅಪಾಯವಿಲ್ಲ. ದೀರ್ಘಕಾಲಿಕವಾದ ಬಾಳಿಕೆ. ತುಕ್ಕು ಹಿಡಿಯುವುದಿಲ್ಲ. ಯಾರೂ ಕೂಡ ಇದನ್ನು ಉಪಯೋಗಿಸಬಹುದು ಎನ್ನುತ್ತಾರೆ ಪಾಂಡುರಂಗ ಭಟ್ಟರು. ‘ಪ್ರಾಣಿಗಳ ಸಂರಕ್ಷಣೆ ಮಾನವ ಧರ್ಮ’ ಆದರೂ ಕೃಷಿಯನ್ನು ಪ್ರಾಣಿಗಳ ಹಾವಳಿಯಿಂದ ರಕ್ಷಿಸಿಕೊಳ್ಳುವುದು ಮುಖ್ಯವಾಗುತ್ತದೆ. ಈ ಹಿನ್ನಲೆಯಲ್ಲೇ ತಯಾರಾದ ಕೋವಿಯಿದು.
ಪಾಂಡುರಂಗ ಭಟ್ಟರು ಕಳೆದ ಎರಡು ವರ್ಷಗಳಿಂದ ೨೦೦೦ಕ್ಕೂ ಹೆಚ್ಚು ಬಂದೂಕುಗಳನ್ನು ಮಾರಾಟ ಮಾಡಿದ್ದಾರೆ. ಕೃಷಿ ಮೇಳ- ಪ್ರದರ್ಶನಗಳಲ್ಲಿ ಭಾಗವಹಿಸಿ ಪ್ರಾತ್ಯಕ್ಷಿಕೆ ನೀಡುತ್ತಾರೆ. ಈ ಬಂದೂಕು ಖರೀದಿಸಿದ ಕೃಷಿಕರಿಂದ ಉತ್ತಮ ಸ್ಪಂದನ ದೊರೆತಿದೆ
ಮಾಹಿತಿಗೆ ಮೊ: 9741810502
• ರಾಧಾಕೃಷ್ಣ ತೊಡಿಕಾನ