spot_img
Tuesday, September 17, 2024
spot_imgspot_img
spot_img
spot_img

ಹಾಳು ಮೂಳು ಮಾರುಕಟ್ಟೆ ತರಕಾರಿಗಳನ್ನು ಕಡಿಮೆ ಮಾಡೋಣ: ಪ್ರಕೃತಿಯಲ್ಲಿದೆ ಆರೋಗ್ಯ

-ಎಂ.ಟಿ ಶಾಂತಿಮೂಲೆ, ಪೈಲಾರು

ನಿಮಗೆ ತಿಳಿದಂತೆ ಈ ಹಿಂದೆ ಗಡ್ಡೆಗೆಣಸುಗಳ ಬಗ್ಗೆ ಅವುಗಳ ಗುಣಗಳ ವಿಷಯ ಪ್ರಸ್ತಾಪಿಸಿದ್ದೆ; ನೆನಪಿರಬಹುದು. ಇಲ್ಲಿ ಈಗ ಎಲೆ ತರಕಾರಿಗಳ ವಿಷಯದಲ್ಲಿ ಅವುಗಳ ಔಷಧೀಯ ಗುಣಗಳ ಬಗ್ಗೆ ತಿಳಿಸಲು ಇಚ್ಚಿಸಿದ್ದೇನೆ.

ನಮ್ಮ ಪ್ರಕೃತಿ ನಮ್ಮ ದೈನಂದಿನ ಜೀವನಕ್ಕೆ ಅಪಾರ ಸಸ್ಯ ಸಂಪತ್ತನ್ನು ನೀಡಿ ಕರುಣಿಸಿದೆ. ಆದರೆ ನಮ್ಮ ಜನಜೀವನವೇ ಬದಲಾಗಿದೆ. ಏನನ್ನು ನೀಡಿ ಏನನ್ನು ತಿನ್ನಬೇಕು ಎನ್ನುವ ಜ್ಞಾನವೇ ನಮ್ಮಿಂದ ದೂರ ಸರಿದಿರುವುದು ಆಸ್ಪತ್ರೆಗಳ ಪುಣ್ಯ. ದಿನನಿತ್ಯ ಸಮಯಕ್ಕೆ ಸರಿಯಾಗಿ ಸಮತೋಲನದ ಆಹಾರ ಸೇವಿಸಿದರೆ ವೈದ್ಯರ ಮೊರೆ ಹೋಗುವ ಅಗತ್ಯವೇ ಇಲ್ಲ.

ನಮ್ಮ ಅಂಗಳದಲ್ಲೇ ಬೆಳೆಯುವ ಹೆಚ್ಚು ನೀರನ್ನು ಬೇಡದಿರುವ ಅನೇಕ ಆಹಾರಯೋಗ್ಯ ಸಸ್ಯಸಂಪತ್ತು ನಮ್ಮ ನೆಲದಲ್ಲೇ ಹುಟ್ಟಿ ಅಲ್ಲೇ ಮಣ್ಣು ಪಾಲಾಗುತ್ತದೆ.

ಒಂದೆಲಗ : ಒಂದು ದಿವ್ಯ ನೈಸರ್ಗಿಕ ಕೊಡುಗೆ. ಒಂದೆಲಗದಲ್ಲಿ ಅನೇಕ ಗುಣಗಳಿವೆ. ಹಾಗೆಯೇ ಬೇರೆ ಬೇರೆ ಪ್ರಬೇಧಗಳಿವೆ. ಪಾಶ್ಚಾತ್ಯ ರಾಷ್ಟ್ರದ ಒಂದೆಲಗವೂ ನಮ್ಮ ಮಣ್ಣಿಗೆ ಕಾಲಿಟ್ಟರೂ ನಮ್ಮ ಬಂದೇಲಗಕ್ಕೆ ಸಾಟಿ ಇಲ್ಲ. ತುಳು ಭಾಷೆಯಲ್ಲಿ ಇದನ್ನು ತಿಮರೆ ಎನ್ನುತ್ತಾರೆ. ಹವಿಗನ್ನಡ ಭಾಷೆಯಲ್ಲಿ ‘ಉರಗೆ’ ಎನ್ನುವುದು ರೂಢಿ. ಇತ್ತೀಚೆಗೆ ಸರ್ವೇಸಾಮಾನ್ಯವಾಗಿ ಬಿಪಿ+ಶುಗರ್ ಎನ್ನುವ ಕಾಯಿಲೆ ಎಲ್ಲೆಡೆ ಎಲ್ಲೋ ವಯೋಮಾನದ ಜನರಲ್ಲೂ ಬದುಕು ಕಟ್ಟಿಕೊಂಡ ಕಾಯಿಲೆ. ವೈದ್ಯರ ಸಲಹೆ ದಿನಾ ಒಂದು ಮಾತ್ರೆ ಸೇವಿಸಿ ಎನ್ನುವ ಮಾತು ಪ್ರಚಲಿತ. ಬಿಪಿ ಅಂದರೆ ರಕ್ತದೊತ್ತಡ. ಶೇ.೬೦ರಷ್ಟು ಜನ ರಾಸಾಯನಿಕ, ಕೀಟನಾಶಕಗಳ ಸ್ನಾನದಿಂದ ಬೆಳೆದ ತರಕಾರಿ ಸೊಪ್ಪುಗಳನ್ನೇ ಅವಲಂಬಿಸಿರುವುದು ನಿತ್ಯ ಸತ್ಯ. ಇವರಲ್ಲಿ ಹೆಚ್ಚಿನ ಜನ ನಗರವಾಸಿಗಳು. ಬೇರೆ ಗತ್ಯಂತರವಿಲ್ಲ.

ಕೆಲಸದ ಒತ್ತಡದಿಂದ ಹೈರಾಣಾಗಿ ರಕ್ತದ ಒತ್ತಡಕ್ಕೂ ಬಲಿಯಾಗುತ್ತಾರೆ. ಕೆಲವರಿಗೆ ಏರು ಮತ್ತೆ ಕೆಲವರಿಗೆ ಇಳಿ ಒತ್ತಡವನ್ನು ತಗ್ಗಿಸಿ ಸ್ಥಿರವಾಗಿರಿಸಲು ಒಂದೆಲಗದಲ್ಲೇ ಔಷಧೀಯ ಗುಣವಿದೆ. ಮಕ್ಕಳಲ್ಲಿ ಏಕಾಗ್ರತೆ ಮೂಡಿಸಿ ಪಾಠ ಪ್ರವಚನಗಳನ್ನು ಆಲಿಸಿ ಮೆದುಳಿನಲ್ಲಿ ಹಿಡಿದಿಟ್ಟುಕೊಳ್ಳುವ ನೆನಪಿನ ಶಕ್ತಿಯನ್ನು ನೀಡುತ್ತದೆ. ದಿನವೂ ಬ್ರಾಹ್ಮಿ ಮುಹೂರ್ತದಲ್ಲಿ ಈ ಬ್ರಾಹ್ಮಿಯ (ಒಂದೆಲಗ) ನಾಲ್ಕು-ಐದು ಎಲೆಗಳನ್ನು ಜಗಿದು ಒಂದು ಲೋಟ ಬಿಸಿ ಆರಿದ ನೀರು ಸೇವಿಸುವುದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ಹೇರಳವಾಗಿ ಬೆಳೆದ ಒಂದೆಲಗವನ್ನು ನೆರಳಲ್ಲಿ ಒಣಗಿಸಿ ಉಪ್ಪು ಮಿಶ್ರಿತ ಮಾಡಿ ಪುಡಿಮಾಡಿಕೊಂಡು ಕರಡಿಗೆಯಲ್ಲಿ ಹಾಕಿಟ್ಟರೆ ಅಗತ್ಯವಿದ್ದಾಗ ಚಟ್ನಿ-ತಂಬುಳಿ ಮಾಡಿ ಭೋಜನಕ್ಕೆ ಉಪಯೋಗಿಸಬಹುದು. ಒಂದೆಲಗ ಒಂದು ಚಿಕ್ಕ ಪ್ರಬೇಧವಿದೆ.

ಇದನ್ನು ಬೊಟ್ಟು ತಿಮ್ಮರೆ ಎಂದೂ ಕರೆಯಬಹುದು. ಇದನ್ನು ತಲೆಗೆ ಮೈಗೆ ಲೇಪಿಸಲು ಕಾಯಿಸಿ ಇಟ್ಟುಕೊಳ್ಳಬಹುದು. ಪ್ರತಿ ಶನಿವಾರ ಇದನ್ನು ಉಪಯೋಗಿಸಿದರೆ ಮೈಕಾಂತಿ ಹೆಚ್ಚುತ್ತದೆ. ಚಿಕ್ಕಮಕ್ಕಳ ಮೈಗೆ ಹಚ್ಚುವ ಎಣ್ಣೆಗೆ ಒಂದೆಲಗ+ನೆಲನೆಲ್ಲಿ+ಕಾಡು ಶಂಖ ಪುಷ್ಪದ ಎಲೆ+ಕೆಂಪು ನೆಲನೆಲ್ಲಿ ಸಮಾನ ಪ್ರಮಾಣದಲ್ಲಿ ಹಾಗೂ ಭೃಂಗರಾಜ ಅರ್ಧ ಪಾಲು ಸೇರಿಸಿ ತೆಂಗಿನ ಎಣ್ಣೆ ಅಥವಾ ಶುದ್ಧ ಎಳ್ಳೆಣ್ಣೆಯಲ್ಲಿ ಹದ ಕಾಯಿಸಿ ಬಾಟಲಿಯಲ್ಲಿ ಹಾಗೆಯೇ ತುಂಬಿಟ್ಟುಕೊAಡು ಉಪಯೋಗಿಸಬಹುದು. ಈ ಎಣ್ಣೆಯನ್ನು ನಿದ್ರಾಹೀನತೆಗೆ ಸಂಜೆ ತಲೆ ನೆತ್ತಿಗೆ ಪೋಸಿ ಮಲಗಿದರೆ ಕುಂಭಕರ್ಣ ನಿದ್ರೆ

ಭೃಂಗರಾಜ : ಇದು ಸಂಸ್ಕೃತ. ಪದ ಹಳ್ಳಿಯಲ್ಲಿ ಗರುಗ ಎಂದೇ ಕರೆಯುವುದು ವಾಡಿಕೆ. ಭೃಂಗರಾಜ ದೇವ ಪೂಜೆ, ಪಿತೃ ಕಾರ್ಯಗಳಿಗೆ ಬಳಸುವ ಸಸ್ಯ. ಕೂದಲಿನ ಬೆಳವಣಿಗೆಗೆ ಅತ್ಯಂತ ಉಪಯುಕ್ತವಾಗಿದ್ದು ಆಯುರ್ವೇದ ಪಂಡಿತರು ಹೆಚ್ಚಾಗಿ ಇದನ್ನು ಕೂದಲಣ್ಣೆ ಕಾಯಿಸಲು ಉಪಯೋಗಿಸುತ್ತಾರೆ. ದೇಹಕ್ಕೆ ತಂಪು ನೀಡಿ ಉಷ್ಣದ ದಿನಗಳಲ್ಲಿ ನಮ್ಮ ರಕ್ಷಣೆ ಮಾಡುತ್ತದೆ. ಒಂದೆಲಗದ ಜೊತೆಗೆ ಇದನ್ನು ತಂಬುಳಿಗೆ ಉಪಯೋಗಿಸಬಹುದು.

ದೊಡ್ಡಪತ್ರೆ : ನಮ್ಮೂರಲ್ಲಿ ಸಾಂಬ್ರಾಣಿ ಎಲೆ ಎಂದೇ ಕರೆಯುವ ಇದು ಸ್ವಲ್ಪ ಉಷ್ಣ ಪ್ರಕೃತಿಯ ಸಸ್ಯ. ಮಕ್ಕಳಿಗೆ ಬೇಸಿಗೆಯಲ್ಲಿ ಶರೀರದಲ್ಲಿ ಬೀಳುವ ಬಿಸ್ರುಪ್ಪು ಎನ್ನುವ ಬೊಕ್ಕೆಗಳಿಗೆ ಇದರ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ರಸ ಲೇಪಿಸಿದರೆ ಮೂರು ದಿನದಲ್ಲಿ ಗುಣ. ಇದರ ಸಾರು ಕೂಡಾ ಸೇವನೆಗೆ ಯೋಗ್ಯ. ಜ್ಯೂಸ್ ತಯಾರಿಸಿ ಶೀತ ಕಡಿಮೆಯಾಗುತ್ತದೆ. ನೆತ್ತಿಗೆ ಇದರ ರಸ ಹಚ್ಚಿದರೂ ಶೀತ ಕಡಿಮೆಯಾಗುತ್ತದೆ

ಎಲವದಿಗ : ಎಲವದಿಗ ಕೆಂಪಿನ ಕಾಯಿಲೆ ಇರುವ ಮಕ್ಕಳಿಗೆ ದಿವ್ಯ ಔಷಧ. ಇದನ್ನು ರಕ್ತ ಚಂದನ ತೇದು ಅದರ ಜೊತೆಗೆ ಕರಿನೆಕ್ಕಿ ಎಲೆಯೊಂದಿಗೆ ಎಣ್ಣೆಯಲ್ಲಿ ಹಾಕಿ ಕಾಯಿಸಿ ಲೇಪಿಸುತ್ತಾರೆ. ಇದರ ತಂಬುಳಿ ಆಹಾರಕ್ಕೂ ಯೋಗ್ಯ. ಔಷಧೀಯ ಗುಣ ಹೊಂದಿದೆ. ಫಂಗಸ್ ಕಾಯಿಲೆ ಬಾರದಂತೆ ಪ್ರತಿರೋಧವಾಗಿ ಇದನ್ನು ಉಪಯೋಗಿಸುತ್ತಾರೆ. ಆನೆ ಸಜಂಕ್ (ತಗಚೆ) ಕುಟುಂಬದ ಪ್ರಬೇಧ

ಸಜಂಕು : ತಗಚೆ ಗಿಡ ಬಿಸಿಲಿರುವ ಜಾಗದಲ್ಲಿ ಹೇರಳವಾಗಿ ಬೆಳೆಯುವ ಸಸ್ಯ. ಇದರ ಎಲೆ ಚಿಗುರು ಪಲ್ಯ ಮಾಡಲು ಉಪಯೋಗ. ಎಲೆಗಳನ್ನು ಹಚ್ಚಿ ಒಗ್ಗರಣೆಗೆ ಹುರಿದ ಕುಚ್ಚು ಲಕ್ಕಿ ಪುಡಿಯೊಂದಿಗೆ ಸೇರಿಸಿ ಪಲ್ಯ ಮಾಡಿ ಉಪಯೋಗಿಸುವುದು ಹಳ್ಳಿಗಾಡಿನಲ್ಲಿ ಇಂದಿಗೂ ಚಾಲ್ತಿಯಲ್ಲಿ ಉಳಿದಿದೆ. ಆನೆ ಸಜಂಕ್ ಸಾಕುನಾಯಿಗಳ ಫರಂಗಿ ಕಾಯಿಲೆಗೆ ಉಪಯೋಗ. ಇದನ್ನು ಬಾಡಿಸಿ ಅರೆದು ಹಚ್ಚಿದರೆ ನಾಯಿಗಳ ಫರಂಗಿ ಕಾಯಿಲೆ ಗುಣವಾಗುವುದು

ವಿಟಮಿನ್ ಗಿಡ : ವಿಟಮಿನ್ ಗಿಡವೆಂದೇ ಕರೆಯುವ ಇದರ ಎಲೆ ತಂಬುಳಿ ಮಾಡಿ ಉಪಯೋಗಿಸಿದರೆ ವಿಟಮಿನ್ ಕೊರತೆ ನಿವಾರಣೆಯಾಗಿ ಸಂದು ನೋವು ಕಡಿಮೆಯಾಗುತ್ತದೆ. ಜೊತೆಗೆ ಇತರೆ ಕಾಯಿಲೆಗಳಿಗೂ ಇದು ಶಾಮಕ ಗುಣ ಹೊಂದಿದೆ.

ನೇರಳೆ ಬುಗುಡಿ : ನೇರಳೆ ಬಣ್ಣ ಹೊಂದಿದ ಒಂದು ಅಯೋಡೈನ್ ಇರುವ ಗಿಡ. ಸಾಮಾನ್ಯ ಬಿಸಿಲಲ್ಲೂ ಇದು ಸೊಂಪಾಗಿ ಬೆಳೆಯುತ್ತದೆ.ಇದರ ಎಲೆಯ ತಂಬುಳಿ ಆಹಾರಕ್ಕೆ ಯೋಗ್ಯ. ಅಯೋಡೈಸ್ಡ್ ಉಪ್ಪು ತಿನ್ನಲ್ಲೇ ಬೇಕಿಲ್ಲ. ಇದರ ಎಲೆಯ ಸೇವನೆಯಿಂದ ಗಳಗಂಡ ಬಾರದಂತೆ ತಡೆಯಬಹುದು

ತುರಿಕೆ ಇಲ್ಲದ ಕೆಸುವಿನ ಎಲೆ : ಈ ಕೆಸುವಿನ ಎಲೆಯನ್ನು ಹಸಿಯಾಗಿಯೇ ಉಪಯೋಗಿಸಿದರೆ ಆಹಾರಕ್ಕೆ ಯೋಗ್ಯ. ಸಲಾಡ್ ಎನ್ನುವ ಆಂಗ್ಲಪದ ಹೆಚ್ಚಿನ ಮಂದಿಗೆ ಪ್ರಚಲಿತ. ಕಂಗ್ಲೀಷ್ ಭಾಷೆಯಲ್ಲಿ ಪರಿಚಿತ ಶಬ್ದ. ಕೆಸುವಿನ ಎಲೆಯನ್ನು ಚಿಕ್ಕದಾಗಿ ಕತ್ತರಿಸಿ ಲಿಂಬೆಹಣ್ಣಿನ ರಸ, ಉಪ್ಪು ಸೇರಿಸಿ ಸಲಾಡ್ ಮಾಡಿ ‘ಹಸಿಪಾಕ’ವನ್ನೇ ಆಹಾರವಾಗಿ ಉಪಯೋಗಿಸಬಹುದು.

ಕೊನೆಯಲ್ಲಿ ಹೇಳುವುದೆಂದರೆ ಸ್ಥಳೀಯ ಸೊಪ್ಪು ತರಕಾರಿಗಳಾದ ಹರಿವೆ, ಬಸಳೆಗಳ ಜೊತೆಗೇ ಮೇಲೆ ವಿವರಿಸಿದ ಎಲೆ ತರಕಾರಿಗಳನ್ನು ಉಪಯೋಗಿಸಿ ತರಕಾರಿ ಹೊರೆಯ ಜೊತೆಗೆ ವೈದ್ಯರ ಮಾತ್ರೆ ತಿನ್ನುವ ಕಾಯಿಲೆಗಳನ್ನು ತಡೆದು ಆರೋಗ್ಯವನ್ನು ಕಾಪಾಡಿಕೊಂಡು ಆರೋಗ್ಯವಂತರಾಗಿ ಶತಾಯುಷಿಗಳಾಗೋಣ. ಹಾಳು ಮೂಳು ಮಾರುಕಟ್ಟೆ ತರಕಾರಿಗಳನ್ನು ಕಡಿಮೆ ಮಾಡೋಣ. ಕೈಜೋಡಿಸಿ. ಇದನ್ನು ಒಂದು ಅಭಿಯಾನವೆಂದು ಭಾವಿಸಿ ನಿಮ್ಮ ಶರೀರವನ್ನು ಕಾಪಾಡಿ.

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group