spot_img
Wednesday, October 30, 2024
spot_imgspot_img
spot_img
spot_img

ಔಷಧೀಯ ಸಸ್ಯಗಳ ಕೃಷಿಯಿಂದ ವರುಷಕ್ಕೆ ರೂ.10 ಕೋಟಿ ಆದಾಯ!

ಬರಹ-ಅಡ್ಡೂರು ಕೃಷ್ಣ ರಾವ್

ರಾಜಸ್ಥಾನದ ನಗೌರ್ ಜಿಲ್ಲೆಯ ರಾಜಪುರ ಗ್ರಾಮದ ರಾಖೇಶ್ ಚೌಧರಿ ಬಿ. ಎಸ್ಸಿ. ಪದವಿ ಶಿಕ್ಷಣ ಮುಗಿಸಿ, ಹಳ್ಳಿಗೆ ಮರಳಿದರು. ಔಷಧೀಯ ಸಸ್ಯಗಳ ಕೃಷಿ ಮಾಡುವ ತನ್ನ ಯೋಜನೆಯನ್ನು ಕುಟುಂಬದವರಿಗೂ ಸ್ನೇಹಿತರಿಗೂ ತಿಳಿಸಿದಾಗ ಅವರಿಗೆ ಸಿಕ್ಕಿದ ಪ್ರತಿಕ್ರಿಯೆಗಳು: “ಇದರಲ್ಲಿ ನಿನಗೆ ಸೋಲು ಖಂಡಿತ”, “ನೀನು ಎಲ್ಲ ಹಣವನ್ನೂ ಕಳೆದುಕೊಳ್ಳುತ್ತಿ”.

“ಇದರಲ್ಲೇನೂ ಅಚ್ಚರಿಯಿಲ್ಲ. ಯಾಕೆಂದರೆ, ನೀವು ಡಿಗ್ರಿ ಗಳಿಸಿದರೆ ಸಂಬಳದ ಕೆಲಸಕ್ಕೆ ಹೋಗಬೇಕೆಂದು ಜನರು ನಿರೀಕ್ಷಿಸುತ್ತಾರೆ. ಈಗಿನ ಯುವಜನರಿಗಂತೂ ಕೃಷಿಯ ಬದಲಾಗಿ ಕೆಲವು ಸಾವಿರ ರೂಪಾಯಿ ಸಂಬಳದ ಕೆಲಸವೇ ಇಷ್ಟ” ಎನ್ನುತ್ತಾರೆ ರಾಖೇಶ್.

ಔಷಧೀಯ ಸಸ್ಯಗಳತ್ತ ಒಲಿದ  ಕ್ಷಣ

2003ರಲ್ಲಿ ತಮ್ಮ ಕೃಷಿ ಜಮೀನಿನ ನಿರ್ವಹಣೆಯಲ್ಲಿ ತಂದೆಗೆ ಸಹಕರಿಸುತ್ತಿದ್ದ ರಾಖೇಶ್ ಕೃಷಿಯ ಹೊಸ ಸಾಧ್ಯತೆಗಳ ಬಗ್ಗೆ ಮಾಹಿತಿ ಪರಿಶೀಲಿಸುತ್ತಿದ್ದರು. ಆಗ ಅವರಿಗೆ ರಾಜಸ್ಥಾನ ಔಷಧೀಯ ಸಸ್ಯಗಳ ಬೋರ್ಡಿನ “ಒಪ್ಪಂದ ಕೃಷಿ ಸ್ಕೀಮ್” ಬಗ್ಗೆ ತಿಳಿಯಿತು. ಔಷಧೀಯ ಸಸ್ಯಗಳ ಒಪ್ಪಂದ ಕೃಷಿ ಮಾಡುವ ಕೃಷಿಕರಿಗೆ ಆ ಬೋರ್ಡ್ ಸಹಾಯಧನ ಒದಗಿಸುತ್ತಿತ್ತು. ಕೃಷಿ ಉತ್ಪನ್ನಗಳ ಉತ್ಪಾದನೆ ಮತ್ತು ಒದಗಣೆಗಾಗಿ ಕೃಷಿಕರು ಹಾಗೂ ಸಂಸ್ಕರಣೆ ಮತ್ತು/ ಅಥವಾ ಮಾರ್ಕೆಟಿಂಗ್ ಘಟಕಗಳ ನಡುವಣ ಒಪ್ಪಂದವೇ ಒಪ್ಪಂದ ಕೃಷಿ. ಆದರೆ ಆ ಕಾಲಘಟ್ಟದಲ್ಲಿ ಅವರ ಪ್ರದೇಶದಲ್ಲಿ ಅವರ ಕುಟುಂಬದ ಸಹಿತವಾಗಿ ಯಾರೊಬ್ಬರೂ ಪಾರಂಪರಿಕ ಕೃಷಿಯ ಹೊರತಾಗಿ ಬೇರೇನನ್ನೂ ಕೈಗೆತ್ತಿಕೊಳ್ಳಲು ತಯಾರಿರಲಿಲ್ಲ.

ಅದೇನಿದ್ದರೂ ಈ ಅವಕಾಶವನ್ನು ಬಳಸಿಕೊಳ್ಳಲು ರಾಖೇಶ್ ನಿರ್ಧರಿಸಿದರು. ಔಷಧೀಯ ಸಸ್ಯಗಳ ಇಲಾಖೆಯ ಅಧಿಕಾರಿಗಳು ಭಾರೀ ಲಾಭದಾಯಕ ಔಷಧೀಯ ಸಸ್ಯಗಳ ಬಗ್ಗೆ ಇವರಿಗೆ ಮಾಹಿತಿ ನೀಡಿದರು.

ಆದರೆ ಹೊಸ ಯೋಜನೆಯನ್ನು ಕಾರ್ಯಗತಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ರಾಖೇಶರಿಗೆ ಹಣ ಹೊಂದಿಸುವುದೇ ದೊಡ್ಡ ಸವಾಲಾಗಿತ್ತು. ಸಾಲ ಪಡೆಯಲು ಭದ್ರತೆ ಒದಗಿಸಲೇ ಬೇಕಾಗಿತ್ತು. ಆದರೆ ಅವರದ್ದೇ ಆದ ಜಮೀನು ಇರಲಿಲ್ಲ. ಹಾಗಾಗಿ ಪತ್ನಿಯ ಒಡವೆಗಳನ್ನು ಅಡವಿಟ್ಟು ಸಾಲ ಪಡೆದರು. ಮನೆಯಲ್ಲಿದ್ದ ಕೆಲವು ದನಕರುಗಳನ್ನೂ ಮಾರಾಟ ಮಾಡಿ, ತನ್ನ ಮೊದಲನೆಯ ಬಿತ್ತನೆಗಾಗಿ ಹಣ ಹೊಂದಿಸಿದರು ರಾಖೇಶ್.

ಸಾಲದಲ್ಲಿ ಮುಳುಗಿದರೂ ಕನಸು ಬಿಡಲಿಲ್ಲ:
ತನ್ನ ಕುಟುಂಬದ ಜಮೀನಿನ ಒಂದು ಭಾಗದಲ್ಲಿ 2004ರಲ್ಲಿ ಅವರು ಮೊದಲಾಗಿ ಬಿತ್ತಿದ ಎರಡು ಔಷಧೀಯ ಸಸ್ಯಗಳು: ಅಗ್ನಿಶಿಖೆ (ಗೌರಿ ಹೂ) ಮತ್ತು ಲಿಕೋರೈಸ್ (ಗ್ಲೈಸಿರೈಸಾ ಗ್ಲಾಬ್ರಾ). ಆದರೆ ಮೊದಲ ಯತ್ನದಲ್ಲೇ ಭಾರೀ ನಷ್ಟವಾಯಿತು. “ರಾಜಸ್ಥಾನದಲ್ಲಿ ಬೇಸಗೆಯಲ್ಲಿ ಒಣ ಮತ್ತು ಬಿಸಿ ಹವಾಮಾನ ಹಾಗೂ ಚಳಿಗಾಲದಲ್ಲಿ ವಿಪರೀತ ಚಳಿ. ನಮ್ಮ ಪ್ರದೇಶದ ಹವಾಮಾನ ಮತ್ತು ಆ ಸಸ್ಯಗಳಿಗೆ ಅಗತ್ಯವಾದ ಹವಾಮಾನದ ಬಗ್ಗೆ ನಾನು ಆಳವಾಗಿ ಅಧ್ಯಯನ ಮಾಡಲಿಲ್ಲ. ಇದರಿಂದಾಗಿ ಸಸ್ಯಗಳು ಬೆಳೆಯಲಿಲ್ಲ. ನಾನು ಬಹಳ ಹಣ ಕಳೆದುಕೊಂಡೆ” ಎಂದು ನೆನಪು ಮಾಡಿಕೊಳ್ಳುತ್ತಾರೆ ರಾಖೇಶ್.

ಎಲ್ಲರೂ ಇವರ ಹುಚ್ಚಾಟದ ಬಗ್ಗೆ ಟೀಕೆ ಮಾಡಿದರೂ ರಾಕೇಶ್ ಎದೆಗುಂದಲಿಲ್ಲ. ಸಾಲದಲ್ಲಿ ಮುಳುಗಿದರೂ ಔಷಧೀಯ ಸಸ್ಯಗಳ ಕೃಷಿ ತೊರೆಯಲಿಲ್ಲ. ಎರಡನೆಯ ಬೆಳೆಗಾಗಿ ಅವರು ತನ್ನ ಟ್ರ್ಯಾಕ್ಟರನ್ನೇ ಅಡವಿಟ್ಟು ಸಾಲ ಪಡೆದು, ಲೋಳೆಸರ ಸಸಿಗಳನ್ನು ನೆಟ್ಟರು. ಈ ಬೆಳೆ ಚೆನ್ನಾಗಿ ಬೆಳೆದು ರಾಖೇಶ್ ಲಾಭ ಗಳಿಸಲು ಸಾಧ್ಯವಾಯಿತು.
ಯಾವುದೇ ಬೆಳೆ ಬೆಳೆಸುವ ಮುನ್ನ ಅದರ ಬಗ್ಗೆ ಅಧ್ಯಯನ ಮಾಡಬೇಕು ಮತ್ತು ತನ್ನ ಜಮೀನಿನ ಮಣ್ಣಿನ ಗುಣಲಕ್ಷಣಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಎಂಬುದು ಅವರು ಅನುಭವದಿಂದ ಕಲಿತ ಪಾಠ. ಹೊಸ ಬೆಳೆಯ ಕೃಷಿಗೆ ಕೈಹಾಕುವ ಮುನ್ನ ಈ ಮೂರು ಸಂಗತಿಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕೆಂದು ಅವರಿಗೆ ಅರಿವಾಗಿತ್ತು: ಆ ಪ್ರದೇಶದ ಹವಾಮಾನ, ಅತ್ಯುತ್ತಮ ಬೀಜ ಅಥವಾ ಸಸಿಗಳ ಲಭ್ಯತೆ ಮತ್ತು ಆ ಬೆಳೆಯ ಫಸಲಿನ ಮಾರುಕಟ್ಟೆ ಬೇಡಿಕೆ.

ಫಲಿಸಿದ ಕನಸು:

2005ರ ಹೊತ್ತಿಗೆ ಔಷಧೀಯ ಸಸ್ಯಗಳ ಕೃಷಿಯ ಯಶಸ್ಸಿನ ಸೂತ್ರ ರಾಖೇಶರಿಗೆ ಕರಗತವಾಯಿತು: ಅವರ ಜಮೀನಿನ ಮಣ್ಣು, ಬೆಳೆಸಬೇಕಾದ ಬೆಳೆ ಮತ್ತು ಅದಕ್ಕೆ ಅಗತ್ಯವಾದ ಹವಾಮಾನ ಇವನ್ನು ಸರಿಯಾಗಿ ಅಧ್ಯಯನ ಮಾಡಿದ್ದರು. ಅವರೀಗ ಮೂರನೆಯ ಸಂಗತಿಯ ಬೆನ್ನು ಹತ್ತಿದರು; ಅದೇನೆಂದರೆ ಫಸಲಿನ ಖರೀದಿದಾರ. ಕೊನೆಗೂ ಖರೀದಿದಾರ ಒಬ್ಬನನ್ನು ಪತ್ತೆ ಮಾಡಿದರು. ಆತ ಇವರ ಲೋಳೆಸರದ ಫಸಲನ್ನು ಕಿಲೋಕ್ಕೆ ರೂ.1.50 ದರದಲ್ಲಿ ಖರೀದಿಸಿದ.

“ಔಷಧೀಯ ಸಸ್ಯಗಳ ಕೃಷಿಯನ್ನು ಹೆಚ್ಚೆಚ್ಚು ಕೃಷಿಕರು ಕೈಗೆತ್ತಿಕೊಳ್ಳುವಂತೆ ಮಾಡಲು ಇದು ಸರಿಯಾದ ಸಮಯ” ಎಂದು ನಿರ್ಧರಿಸಿದರು ರಾಖೇಶ್. ಆದರೆ ರಾಜಸ್ಥಾನದ ಹೊರತಾಗಿ ಬೇರೆ ರಾಜ್ಯಗಳಿಗೆ ಭೇಟಿ ನೀಡದಿದ್ದ ರಾಖೇಶರಿಗೆ ಹೊಸಬರನ್ನು ಪರಿಚಯ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಮುಂದಿನ ಹೆಜ್ಜೆ ಇಡಲೇ ಬೇಕೆಂದು ಸಂಕಲ್ಪ ಮಾಡಿದ ರಾಖೇಶ್ ಬೇರೆಬೇರೆ ರಾಜ್ಯಗಳಿಗೆ ಹೋಗಿ, ಅಲ್ಲಿನ ಕೃಷಿಕರನ್ನೂ ಭೇಟಿಯಾಗಿ, ಔಷಧೀಯ ಸಸ್ಯಗಳ ಕೃಷಿಯ ಲಾಭಗಳನ್ನು ವಿವರಿಸಿ ಅವರ ಮನವೊಲಿಸತೊಡಗಿದರು. ಇದರಿಂದಾಗಿ, ಈಗ ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಗುಜರಾತ್  ರಾಜ್ಯಗಳ ಸುಮಾರು 3,000 ಕೃಷಿಕರು ರಾಖೇಶರ ಜೊತೆ ಕೈಗೂಡಿಸಿದ್ದಾರೆ. ಆಯಾ ಪ್ರದೇಶ ಮತ್ತು ಹವಾಮಾನಕ್ಕೆ ಸೂಕ್ತವಾದ ಔಷಧೀಯ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ, ಇವರನ್ನು ನವದೆಹಲಿಯ ರಾಷ್ಟ್ರೀಯ ಔಷಧೀಯ ಸಸ್ಯಗಳ ಬೋರ್ಡಿನ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.

ಇವೆಲ್ಲವನ್ನೂ ಸಾಧಿಸಲು ರಾಖೇಶರಿಗೆ ಹತ್ತು ವರುಷಗಳೇ ಬೇಕಾಯಿತು. ಅಂತೂ 2017ರಲ್ಲಿ “ವಿನಾಯಕ ಹರ್ಬಲ್” ಎಂಬ ಹೆಸರಿನ ಘಟಕವನ್ನು ಸ್ಥಾಪಿಸಿದರು. ಅವರ ಬಳಗದ ಕೃಷಿಕರು ಈಗ ಬೆಳೆಯುತ್ತಿರುವ ವಿವಿಧ ಔಷಧೀಯ ಸಸ್ಯಗಳ ಸಂಖ್ಯೆ 120. ಅವುಗಳ ಎಲೆ, ಹಣ್ಣು, ಬೀಜ, ಬೇರು, ಕಾಂಡ – ಇವನ್ನೆಲ್ಲ ದೇಶದ ಉದ್ದಗಲದ ಫಾರ್ಮಾ ಕಂಪೆನಿಗಳಿಗೂ ಡೀಲರುಗಳಿಗೂ ಮಾರಾಟ ಮಾಡಿ ಮತ್ತು ತಮ್ಮದೇ ಘಟಕದ ಆಯುರ್ವೇದ ಔಷಧಿಗಳ ಮಾರಾಟದಿಂದ ಅವರು ಗಳಿಸುತ್ತಿರುವ ವಾರ್ಷಿಕ ಆದಾಯ ರೂ.10 ಕೋಟಿ!

ವಿನಾಯಕ ಹರ್ಬಲ್ ಜೊತೆ ಕೈಜೋಡಿಸಿರುವ ಕೃಷಿಕರು ಬೆಳೆಸುತ್ತಿರುವ ಔಷಧೀಯ ಸಸ್ಯಗಳಲ್ಲಿ ಇವು ಸೇರಿವೆ: ಲೋಳೆಸರ, ಅಶ್ವಗಂಧ, ಚಿಯಾ (ಅಗಸೆ), ಮೆಂತೆ, ಸ್ಟೀವಿಯಾ (ಸಿಹಿ ತುಳಸಿ), ಅಕರ್‌ಕರ (ಅಥವಾ ಅಕರಕರಭಾ; ಅನಾಸೈಕ್ಲಸ್ ಪೈರೆತ್ರಮ್), ಚಮೋಮೈಲ್ (ಮಾಟ್ರಿಕರಿಯಾ ಚಮೋಮಿಲ್ಲಾ ಮತ್ತು ಚಮೇಮೆಲಮ್ ನೊಬೈಲ್ ಎಂಬ ಎರಡು ಸ್ಪೀಷೀಶ್ ಇವೆ. ಇದರ ಟೀ ನರಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಬಳಕೆ.) ಮತ್ತು ಫೆನ್ನೆಲ್ (ಫೋನಿಕುಲಮ್ ವಲ್ಗಾರೆ, ಗಾಢ ಹಳದಿ ಹೂಗಳ ಸಸ್ಯ; ಇದರ ಮೃದು ಕಾಂಡ, ಎಲೆಗಳು ಮತ್ತು ಬೀಜಗಳು ಔಷಧಿಯಾಗಿ ಬಳಕೆ.)

ಹೆಚ್ಚೆಚ್ಚು ಯುವ ಜನರು ಔಷಧಿಯ ಸಸ್ಯಗಳ ಕೃಷಿಯಲ್ಲಿ ತೊಡಗಬೇಕೆಂಬುದು ರಾಖೇಶ್ ಚೌಧರಿ ಅವರ ಆಶಯ. ಆದರೆ ಈಗ ಕೃಷಿಕರ ಮಕ್ಕಳು ಶಿಕ್ಷಣ ಪಡೆದು ಸಂಬಳದ ಕೆಲಸ ಹುಡುಕುತ್ತಾರೆಯೇ ವಿನಃ ಕೃಷಿಯನ್ನು ಜೀವನೋಪಾಯವಾಗಿ ಸ್ವೀಕರಿಸಲು ತಯಾರಿಲ್ಲ ಎನ್ನುತ್ತಾರೆ ರಾಖೇಶ್. ಸರಿಯಾಗಿ ಯೋಜನೆ ರೂಪಿಸಿ ಬೇಸಾಯ ಮಾಡಿ, ಫಸಲನ್ನು ಯೋಗ್ಯ ದರಕ್ಕೆ ಮಾರಾಟ ಮಾಡಿದರೆ ಕೃಷಿ ಖಂಡಿತವಾಗಿ ಲಾಭದಾಯಕ ಎಂಬುದು ಅವರ ನಂಬಿಕೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group