-ವಿ. ಕೆ. ವಾಲ್ಪಾಡಿ
ಮಟೋವ ರುಚಿಯಲ್ಲಿ ಸಿಹಿಯಾಗಿರುವ ಹಣ್ಣು. ಒಂದು ರೀತಿಯಲ್ಲಿ ರಂಬುಟಾನ್ ಹಣ್ಣಿನ ಹಾಗೆಯೇ. ಅದರಂತೆ ಮಟೋವ ಹಣ್ಣಿಗೂ ವಿಶಿಷ್ಟವಾದ ಪರಿಮಳವಿದೆ. ವರ್ಷದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಫಲ ನೀಡುವ ಕಾಲೋಚಿತ ಹಣ್ಣಾಗಿ ನಮಗೆ ಸಿಗುತ್ತದೆ. ಸಸ್ಯ ಶಾಸ್ತ್ರೀಯವಾಗಿ ಮಟೋವ ಹಣ್ಣನ್ನು ಪೊಮೇಟಿಯ ಪಿನ್ನಾಟ ಎಂದು ಕರೆಯಲಾಗುತ್ತದೆ. ಇದು ಲಿಚಿ ಕುಟುಂಬದ ಸದಸ್ಯ. ಅವುಗಳನ್ನು “ಪಪುವಾದ ವಿಶಿಷ್ಟ ಹಣ್ಣು” ಎಂದು ಕರೆಯಲಾಗುತ್ತದೆ. ಮತ್ತು ಪಪುವಾ ನ್ಯೂಗಿನಿಯಾ ದ್ವೀಪದಲ್ಲಿ ಟನ್ ಅಥವಾ ಟೌನ್, ಇಂಡೋನೇಶ್ಯದಲ್ಲಿ ಬುವಾ ಮಟೋವ ಮತ್ತು ಪಶ್ಚಿಮ ಮಲೇಷ್ಯಾದಲ್ಲಿ “ಕಸಾಯಿ” ಎಂದು ಕರೆಯುತ್ತಾರೆ.
ಶಿರಸಿಯ ಪ್ರಮೋದ ಹೆಗಡೆಯವರು ಆಂಧ್ರ ಪ್ರದೇಶದಿಂದ ಎರಡು ಗಿಡಗಳನ್ನು ತಂದು ನೆಟ್ಟು ಬೆಳೆಸಿದ್ದು ನಾಲ್ಕು ವರ್ಷದಲ್ಲೇ ಫಲ ನೀಡಲು ಆರಂಭಿಸಿದೆ. ಗೊಂಚಲು ಗೊಂಚಲಾಗಿ ಕಾಯಿಗಳು ಆಗುತ್ತಿದ್ದು ಅದರಲ್ಲಿ ಪ್ರತಿದಿನ 2 ಗೊಂಚಲನ್ನೇ ಕೊಯ್ದರೂ ಒಂದರಿAದ ಎರಡು ಕಿಲೋವರೆಗೆ ಹಣ್ಣು ಸಿಗುತ್ತದೆ. ಇದರ ಕಾಯಿ ಅಥವಾ ಹಣ್ಣಿನ ಸಿಪ್ಪೆ ಬಲು ದಪ್ಪವಾಗಿರುವುದರಿಂದ ಹಕ್ಕಿ, ಬಾವಲಿಗಳಿಗೆ ಕುಕ್ಕಿ ತಿನ್ನಲಾಗುವುದಿಲ್ಲ. ಮಂಗಗಳ ಹಾವಳಿಯನ್ನು ಮರಕ್ಕೆ ಬಲೆ ಹೊದಿಸಿ ತಡೆಯಬಹುದಾಗಿದೆ. ಸುಮಾರು ನಲವತ್ತಡಿಗೂ ಹೆಚ್ಚು ಎತ್ತರ ಬೆಳೆಯುವುದರಿಂದ ಅನುಕೂಲಕರ ಎತ್ತರ ಬೆಳೆದಾಗಲೇ ಕತ್ತರಿಸುವುದರಿಂದ ಪೊದರಿನಾಕೃತಿಯಲ್ಲಿ ಬೆಳೆಸಬಹುದು. ಪೊದರಿನ ಗಾತ್ರದಲ್ಲಿಯೇ ಬೆಳೆಯುವ ಜಾತಿಯ ಗಿಡವಿದೆ. ಅದು ತುಂಬಾ ಬೆಲೆೆಯದ್ದಾಗಿರುತ್ತದೆ.
ಪ್ರಮೋದ ಹೆಗಡೆಯವರು ತಮ್ಮ ನರ್ಸರಿಯಲ್ಲಿ ಮಟೋವ ಗಿಡಗಳನ್ನು ತಯಾರಿಸಿ ಗಿಡವೊಂದಕ್ಕೆ 8೦೦ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ತನ್ನಲ್ಲಿನ ಈ ಹಣ್ಣಿನ ಗಿಡಗಳು ಉತ್ಕೃಷ್ಟ ಜಾತಿಯದು.
ಮಟೋವ ಗಿಡವನ್ನು ಅದರ ಬೀಜದಿಂದಲೇ ಮಾಡಬೇಕು ಹೊರತು ಖಂಡಗಳಿಗೆ ಕಸಿ ಕಟ್ಟುವುದರಿಂದ ಆಗುವುದಿಲ್ಲ ಎಂಬುದಾಗಿ ಹೆಗಡೆ ಅವರು ತನ್ನಲ್ಲಿನ ಅನುಭವ ಮಾಹಿತಿ ಹಂಚಿಕೊಳ್ಳುತ್ತಾರೆ. ಅವರು ತನ್ನ ಭೂಮಿಯಲ್ಲಿ ಸುಮಾರು 4೦೦ ಜಾತಿಯ ವಿವಿಧ ಪ್ರಭೇದಗಳ ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದು ಅವುಗಳ ಗಿಡಗಳನ್ನು ತಯಾರು ಮಾಡಿ ಆಸಕ್ತರಿಗೆ ಮಾರಾಟ ಮಾಡುತ್ತಿದ್ದಾರೆ.
ಅಡಿಕೆಯ ಹಾಗೆ ಇರುವ ಮಟೋವವನ್ನು ಅಂಗೈಯಲ್ಲಿ ಇಟ್ಟು ಮತ್ತೊಂದು ಕೈಯಿಂದ ಬಡಿದರೆ ಅದು ಒಡೆಯುತ್ತದೆ. ಯಾವುದೇ ಪ್ರದೇಶದಲ್ಲಿ ಬೆಳೆಯಬಲ್ಲ ಮಟೋವವನ್ನು ಕರಾವಳಿಯಲ್ಲಿ ಜೂನ್ ತಿಂಗಳಲ್ಲಿ ನೆಟ್ಟು ಬೆಳೆಸಬೇಕು. ಡಿಎಂಸಿ-90 ಎನ್ನುವ ಗೊಬ್ಬರವನ್ನಷ್ಟೇ ಹಾಕಿದರೆ ಸಾಕು ಎಂಬುದು ಹೆಗಡೆಯವರ ಸಲಹೆ.
ಮಟೋವ ಪ್ರಯೋಜನ
ಉತ್ಕರ್ಷಣ ನಿರೋಧಕಗಳು, ರೋಗನಿರೋಧಕ ಶಕ್ತಿ ವೃದ್ಧಿ, ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೋರಾಡುವ ಅತ್ಯುತ್ತಮ ಮೂಲ, ವಿಟಮಿನ್ ಸಿ ಮತ್ತು ಇ, ಖನಿಜಗಳು, ಟ್ಯಾನಿನ್ ಮಟೋವ ಹಣ್ಣಿನಲ್ಲಿರುವ ಪೋಷಕಾಂಶಗಳು. ಆರ್‌ಐ ಆರೋಗ್ಯ ಸಚಿವಾಲಯದ (ಟಿಕೆಪಿಐ) ದತ್ತಾಂಶದ ಆಧಾರದ ಮೇಲೆ ಪ್ರತಿ 1೦೦ ಗ್ರಾಂ ಮಟೋವದಲ್ಲಿ 21.1 ಗ್ರಾಂ ಕಾರ್ಬೋಹೈಡ್ರೇಟ್, 0.18 ಮಿ.ಗ್ರಾಮ್ ಥಯಾಮಿನ್, 76.5 ಗ್ರಾಮ್ ನೀರು ಮತ್ತು 0.30 ಮಿ.ಗ್ರಾಂ ತಾಮ್ರ ಹೊಂದಿರುತ್ತದೆ.
ಮಾರುಕಟ್ಟೆ ದರ
ಆನ್‌ಲೈನ್ ನರ್ಸರಿಗಳ ಮಾಹಿತಿ ಆಧಾರದ ಮೇಲೆ ಕರ್ನಾಟಕದಲ್ಲಿ ಒಂದು ಕೆಜಿ ಮಟೋವ ಹಣ್ಣಿನ ಬೆಲೆ ಸುಮಾರು ರೂ.5೦೦ರಷ್ಟಿದೆ. ಅದಾಗಿಯೂ ಈ ಪ್ರದೇಶದಲ್ಲಿ ಅದರ ಸೀಮಿತ ಲಭ್ಯತೆಯಿಂದಾಗಿ ತಾಜಾ ತಿನ್ನಲು ಸಿದ್ಧವಾದ ಹಣ್ಣನ್ನು ಕಂಡುಹಿಡಿಯುವುದು ಕಷ್ಟಕರವಾಗಬಹುದು. ಆದ್ದರಿಂದ ವಿಶೇಷ ಮಾರುಕಟ್ಟೆಯಲ್ಲಿ ಕಂಡು ಬಂದರೆ ಪ್ರತಿ ಹಣ್ಣಿನ ಬೆಲೆ ಗಮನಾರ್ಹವಾಗಿ ಹೆಚ್ಚಿರಬಹುದು. ಮಟೋವ ಹಣ್ಣಿನ ಗಿಡದ (ಪೊಮೆಟಿಯ ಪಿನ್ನಾಟ) ಬೆಲೆ ಗಾತ್ರ ಮತ್ತು ಮೂಲವನ್ನು ಅವಲಂಬಿಸಿಕೊಂಡು ಮುನ್ನೂರರಿಂದ ಒಂದು ಸಾವಿರ ರೂಪಾಯಿವರೆಗೆ ಬೇರೆ ಬೇರೆ ರೀತಿಯ ದರವಿದೆ.
ಮಾಹಿತಿಗೆ ಮೊ.9379138682