spot_img
Wednesday, December 4, 2024
spot_imgspot_img
spot_img
spot_img

ಮತ್ತೆ ಕರೆಯುತಿದೆ ಮಂಡ್ಯದ ಬೆಲ್ಲ! ಸ್ವಾವಲಂಬನೆಗೆ ಸಿಹಿಸಿಹಿ ದಾರಿ

-ರಾಧಾಕೃಷ್ಣ ತೊಡಿಕಾನ

ಮಂಡ್ಯ ಎಂದರೆ ನೆನಪಾಗುವುದು ಬೆಲ್ಲ.. ಕಬ್ಬು.. ಎಲ್ಲೆಂದರಲ್ಲಿ ಹಸಿರು ಹೊದ್ದ ಕಬ್ಬಿನ ಗದ್ದೆಗಳು. ಸಿಹಿವುಣಿಸುವ ಮನಸಣಿಸುವ ಕಬ್ಬಿನ ಉತ್ಪನ್ನಗಳನ್ನು ತಯಾರಿಸುವುದು ಈ ನೆಲದ ಜನರ ಕಾಯಕ. ಕಬ್ಬು ಅರೆಯುವ ಗಾಣ..ಆಲೆಮನೆಗಳು.. ಅದರಲ್ಲಿ ತಯಾರಗುವ ಬೆಲ್ಲ ಹೊರಸೂಸುವ ಸುಮಧುರ ಘಮ ಘಮ ಪರಿಮಳ.

ಮಂಡ್ಯದ ಬೆಲ್ಲವೆಂದರೆ ಗುಣಮಟ್ಟಕ್ಕೆ ಹೆಸರಾಗಿತ್ತು. ಮಂಡ್ಯವಲ್ಲದೆ ರಾಜ್ಯ ಮತ್ತು ದೇಶದಲ್ಲೆಡೆ ಬೆಲ್ಲದ ರುಚಿಯೇನೆಂದು ತಿಂದವರು ಬಲ್ಲರು. ಬೆಲ್ಲದ ಉದ್ಯಮ ಬೆಳೆದಂತೆ ಅತಿಯಾಸೆ ಗತಿಗೆಡಿಸಿತು.. ನೈಸರ್ಗಿಕ ವಿಧಾನದಿಂದ ತಯಾರಾಗುವ ಪಾರಂರಿಕ ಬೆಲ್ಲ ಕಲಬೆರಕೆಯಾಯಿತು. ಬೆಲ್ಲ ಪ್ರಿಯರ ಮಧುರವಾದ ಸಿಹಿ ಮಾಯವಾಯಿತು. ಕಹಿ ಭಾವನೆ ಹುಟ್ಟಿತು. ಬೆಲ್ಲದೊಂದಿಗೆ ರಾಸಾಯಿನಿಕ ತುಂಬಿದ ಮಂದಿ ಒಂದಷ್ಟು ಹಣ ಗಳಿಸಿ ಮಂಡ್ಯ ಬೆಲ್ಲದ ಉದ್ಯಮಕ್ಕೆ ಕೊಳ್ಳಿ ಇಟ್ಟರು. ಹಳ್ಳಿ ಹಳ್ಳಿಯಲ್ಲಿ ಹತ್ತಾರು ಕೈಗಳಿಗೆ ಉದ್ಯೋಗ ನೀಡಬಲ್ಲ, ಬದುಕು ಸಿಯಾಗಬಲ್ಲ ಈ ಉದ್ಯಮ ನೆಲಕಚ್ಚುವಂತೆ ಆ ಆಸೆ ಬುರುಕರು ಮಾಡಿದರು. ಬೆಲ್ಲ ಉತ್ಪಾದನಾ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿತು.

ಮಂಡ್ಯ ಜಿಲ್ಲೆಯ ಪಾರಂಪರಿಕ ಬೆಲ್ಲದ ಉದ್ಯಮವನ್ನು ಮತ್ತೆ ಹಿಂದಿನ ಸ್ಥರಕ್ಕೆ ಕೊಂಡೊಯ್ಯಬೇಕು. ಮಂಡ್ಯ ಬೆಲ್ಲಕ್ಕೆ ಹಿಂದಿನ ಖ್ಯಾತಿಗೆ ಮರಳಿ ತರಲು, ರಾಸಾಯಿನಿಕ ಮುಕ್ತ ಸಾವಯವ ಬೆಲ್ಲವನ್ನು ಉತ್ಪಾದನೆ ಮತ್ತು ಗ್ರಾಹಕರ ಮುಂದಿಟ್ಟಲು ಸಮಾನ ಮನಸ್ಕ ಕಬ್ಬು ಬೆಳೆಯುವ ರೈತರು ಒಗ್ಗೂಡಿ ಆರಂಭಿಸಿದ ಸಂಸ್ಥೆ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ.

ಕೇಂದ್ರ ಸರಕಾರ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ವಿಕಾಸನ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಈ ಸಂಸ್ಥೆಯನ್ನು ರೈತರೇ ಹುಟ್ಟು ಹಾಕಿದರು. ಕಬ್ಬು ಬೆಳೆಗಾರರಿಗೆ ಮತ್ತು ಆಲೆಮನೆ ಮಾಲೀಕರಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಒದಗಿಸುವ ಜೊತೆಗೆ ಜನ ಸಮುದಾಯಕ್ಕೆ ರಾಸಾಯನಿಕ ಮುಕ್ತ ಬೆಲ್ಲವನ್ನು ಒದಗಿಸುವ ಉದ್ದೇಶದಿಂದ ಈ ಸಂಸ್ಥೆ ಮುನ್ನಡೆಯಿ ಟ್ಟಿದೆ. ರೈತರಿಗಾಗಿ ರೈತರೇ ನಿರ್ಮಾಣ ಮಾಡಿರುವ ಕಂಪೆನಿಯಲ್ಲಿ 1೦೦೦ಕ್ಕೂ ಹೆಚ್ಚು ಕಬ್ಬು ಬೆಳೆಗಾರರ ಸದಸ್ಯರಿದ್ದಾರೆ. 2021 ರಲ್ಲಿ ಆರಂಭವಾದ ಈ ಸಂಸ್ಥೆ ಇದೀಗ ಪ್ರಗತಿಯ ಪಥದಲ್ಲಿದೆ.

ಬೆಲ್ಲವನ್ನು ‘ಕೀರೆಮಡಿ’ ಬ್ರ‍್ಯಾಂಡಿನಡಿಯಲ್ಲಿ ಮಾರಾಟವಾಗುತ್ತಿದ್ದು ತಿಂಗಳಿಗೆ 20-25 ಟನ್ ವ್ಯವಹಾರ ನಡೆಯುತ್ತಿದೆ. ಈ ಸಾವಯವ ಬೆಲ್ಲವು ಶೇ.6೦ಕ್ಕಿಂತಲೂ ಹೆಚ್ಚು ಬೆಂಗಳೂರಿನ ಆರ್ಗ್ಯಾನಿಕ್ ಕಂಪನಿಗಳು, ಅಂಗಡಿಗಳಿಗೆ ನೀಡಲಾಗುತ್ತದೆ. ಬೆಲ್ಲಕ್ಕೆ ಬೇಕಷ್ಟು ಬೇಡಿಕೆಯಿದೆ. ಆದರೆ ಅಷ್ಟು ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ತಿಂಗಳಿಗೆ 50-100 ಟನ್ ಬೆಲ್ಲ ಉತ್ಪಾದನೆಯ ಗುರಿ ಹೊಂದಿದೆ. ಮಹಾರಾಷ್ಟ್ರದ ಸಾವಯುವ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯೊಂದರ ದೊಡ್ಡ ಪ್ರಮಾಣದ ಬೇಡಿಕೆಯನ್ನು ಪೂರೈಸುವತ್ತ ಗಮನಹರಿಸುವುದಾಗಿ ಮುಖ್ಯ ಕಾರ್ಯನಿರ್ವಾಹಕ ಪ್ರದೀಪ್ ಹೇಳುತ್ತಾರೆ

ಸಂಸ್ಥೆಯು ಕೀರೆಮಡಿ ಬ್ರಾಂಡಿನೊಂದಿಗೆ ಪುಡಿಬೆಲ್ಲ. ಅಚ್ಚು ಬೆಲ್ಲ, ಬಕೆಟ್ ಬೆಲ್ಲ, ಕುಳ್ಫಿ ಬೆಲ್ಲ, ಆಣಿಬೆಲ್ಲ ಮೊದಲಾದ ಬೆಲ್ಲದ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಪುಡಿಬಲ್ಲ ಮತ್ತು ಅಚ್ಚುಬೆಲ್ಲ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಆನ್ಲೈನ್ ಮೂಲಕವೂ ಮಾರುಕಟ್ಟೆ ವ್ಯವಸ್ಥೆ ಇದೆ.

ಗುಣಮಟ್ಟದ ಬೆಲ್ಲ ತಯಾರಿ ಕುರಿತಂತೆ ತರಬೇತಿಗಳನ್ನು ರೈತ ಸದಸ್ಯರಿಗೆ ನೀಡಲಾಗುತ್ತದೆ. ಈಗ ೫ ನಾಟಿ ಗಾಣಗಳಿವೆ. ಇನ್ನೂ ಹತ್ತು ಗಾಣಗಳು ಕಂಪೆನಿಯೊಂದಿಗೆ ಕೈ ಜೋಡಿಸಲಿವೆ. ಕಂಪೆನಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕಾರಸವಾಡಿ ಮಹದೇವ್ ಸಾರಥ್ಯವಹಿಸಿದ್ದಾರೆ. ಧನಂಜಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕೃಷ್ಣಪ್ಪ , ಪ್ರಕಾಶ್, ಕೃಷ್ಣ, ಪ್ರಕಾಶ್ ಕೆ ಎಸ್, ಕೃಷ್ಣೇಗೌಡ, ಸಾಕಮ್ಮ, ಪಾಪಣ್ಣ, ವೆಂಕಟೇಗೌಡ, ಜೈರಾಜ್, ರಾಣಿ ಚಂದ್ರಶೇಖರ್ ನಿರ್ದೇಶಕರಾಗಿದ್ದಾರೆ. ಈ ಒಕ್ಕೂಟದಿಂದ ಹಳ್ಳಿ ಹಳ್ಳಿಗಳ ಕಬ್ಬು ಬೆಳೆಗಾರ ಸದಸ್ಯರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ರೈತರಿಗೆ, ಕೂಲಿ ಕಾರ್ಮಿಕರಿಗೆ, ಗಾಣ ನಡೆಸುವವರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿದೆ. ಸ್ವಾವಲಂಬನೆಗೆ ಮತ್ತು ಆರ್ಥಿಕ ಅಭಿವೃದ್ಧಿಗೆ ಪ್ರೇರಣೆಯನ್ನು ನೀಡಿದೆ.

ಚಿತ್ರ : ರಾಮ್ ಅಜೆಕಾರ್

9972670192 ಮಾಹಿತಿಗೆ ಮೊ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group