spot_img
Thursday, December 4, 2025
spot_imgspot_img
spot_img

ಮಲೆನಾಡು ಕರಾವಳಿಯ ಪ್ರದೇಶದಲ್ಲಿ ಉದ್ಯಮ ಶೂನ್ಯತೆ, ಒಂದು ಚಿಂತನೆ

-ಪ್ರಬಂಧ ಅಂಬುತೀರ್ಥ

ನನ್ನ ಲೇಖನದಲ್ಲಿ ಕಳೆದು ಹೋದ ಅಥವಾ ಕಳೆದು ಹೋಗುತ್ತಿರುವ ಮಲೆನಾಡು ಕರಾವಳಿಯ ಕೃಷಿ ವೈಭವ ಭವಿಷ್ಯದ ಮಲೆನಾಡು ಕರಾವಳಿಯ ದಿನಗಳ ಬಗ್ಗೆ ಸದಾ ಆತಂಕಪಡುತ್ತಲೇ ಮಲೆನಾಡು ಕರಾವಳಿಯಲ್ಲಿ ಜನಪದ ಜೀವನ ಉಳಿಸಲು ಸಾದ್ಯವೇ…? ಎನ್ನುವ ಚಿಂತನೆಯನ್ನೂ ಮಾಡುವ ಪ್ರಯತ್ನ ಮಾಡಿದ್ದೇನೆ. ನಾನೂ ಇಲ್ಲಿಯೇ ಬಾಳಿ ಬದುಕುತ್ತಿರುವುದರಿಂದ ನಮ್ಮ ಪರಿಸರ ಮೊದಲಿನಂತಾಗಲಿ ಎಂದು ಸದಾ ಆಶಿಸುತ್ತೇನೆ.

ನೀವೊಂದು ವಿಚಾರ ಗಮನಿಸಿ ನಮಗಿಂತ ಕೆಟ್ಟ ಪರಿಸ್ಥಿತಿ ಪ್ರಕೃತಿ ವಿಕೋಪ ಅನುಭವಿಸುತ್ತಿರುವ  ಉತ್ತರ ಕರ್ನಾಟಕದ ಹಳ್ಳಿ ಕೃಷಿ ಜೀವನ ನಮ್ಮಷ್ಟು ಆಶಾವಾದ ಕಳೆದುಕೊಂಡಿಲ್ಲ…!!

ಇದಕ್ಕೆ ಬಹುಮುಖ್ಯ ಕಾರಣ ಉತ್ತರ ಕರ್ನಾಟಕದ ಭಾಗದಲ್ಲಿ ನಮ್ಮ ಮಲೆನಾಡು ಕರಾವಳಿಯಷ್ಟು ” ಶಿಕ್ಷಣದ”  ಹಿಂದೆ ಬಿದ್ದಿಲ್ಲ. ಉತ್ತರ ಕರ್ನಾಟಕಿಯರು  ನಮ್ಮ ಹಾಗೆ ಮನೆ ಮಕ್ಕಳನ್ನೆಲ್ಲಾ ಪಟ್ಟಣಕ್ಕೆ ತಳ್ಳಿ ತಾವು ಹಳ್ಳಿಗಳಲ್ಲಿ ಭವಿಷ್ಯದ ಬರವಸೆ ಕಳೆದುಕೊಂಡು ಒಂಟಿ ಬುಡುಕರಾಗಿಲ್ಲ…!! ಬಹುತೇಕ ಎಲ್ಲಾ ಬಗೆಯ ಭಾರತೀಯ ಪಾರಂಪರಿಕ ಉದ್ಯಮಗಳೂ ಮುಖ್ಯವಾಗಿ ತಲೆಮಾರಿನಿಂದ ತಲೆಮಾರಿಗೆ ನಿರ್ವಹಣೆ ಮಾಡುವವರಿಲ್ಲದೆ ತಂತ್ರಜ್ಞಾನ ವರ್ಗಾವಣೆ ಯಾಗದೇ   ಅವಸಾನವಾದವು. ಕೊನೆಯಲ್ಲಿ ಎಲ್ಲ ಭಾರತೀಯರೂ ಅನುಸರಿಸುತ್ತಿದ್ದ ಕೃಷಿ ಮಾಧ್ಯಮವೂ ಜಾಗತಿಕರಣದ ನಂತರ ನಿರ್ಗಮನ ಶುರು ವಾಗಿದೆ. ಇದು ದೇಶದ ಬೇರೆಲ್ಲ ದಿಕ್ಕಿಗಿಂತ ನಮ್ಮ ಮಲೆನಾಡು ಕರಾವಳಿಯ ಕೃಷಿ ಪ್ರದೇಶದಲ್ಲಿ ಹೆಚ್ಚು.

ಮಲೆನಾಡು ಮತ್ತು ಕರಾವಳಿಯ ಕೃಷಿ ಚಟುವಟಿಕೆಗಳು ಆಸಕ್ತಿ ಕಳೆದುಕೊಳ್ಳುವಂತಾಗಲು  ನೈಸರ್ಗಿಕ ವಿಕೋಪ ಎಷ್ಟು ಕಾರಣವೋ ಅಷ್ಟೇ ಕಾರಣ ಮೂರು ನಾಲ್ಕನೇ ತಲೆಮಾರಿನ ಜಮೀನ್ದಾರರ ಪೀಳಿಗೆ ಕೃಷಿಗೆ ಆಸಕ್ತಿ ತೋರಿಸದಿರುವುದು ಅಥವಾ ಕೃಷಿಗೆ ಬಾರದಿರುವುದು ಅಷ್ಟೇ ಕಾರಣ…

ನೀವು ಚಿಂತನೆ ಮಾಡಿ: ಮಲೆನಾಡು ಕರಾವಳಿಯ ಐದು ಜಿಲ್ಲೆಯಲ್ಲಿ ಅಡಿಕೆ, ಕಾಫಿ , ಕೋಕೋ , ಕಾಳುಮೆಣಸು, ಏಲಕ್ಕಿ , ಕಿತ್ತಳೆ , ಬಾಳೆ , ಅರಿಷಿಣ , ಶುಂಠಿ ಯಂತಹ ಬೆಳೆಗಳಿಗೆ ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆ ಇದ್ದರೂ ಈ ಜಿಲ್ಲೆ ಗಳ ವ್ಯಾಪ್ತಿಯಲ್ಲಿ ಒಂದೇ ಒಂದು ಈ ಕೃಷಿ  ಉತ್ಪನ್ನಗಳ ಮೌಲ್ಯವರ್ಧನ ಕೈಗಾರಿಕೆಯಿಲ್ಲ…!!! ಇದ್ದದ್ದರಲ್ಲಿ ಕಾಫಿ ಬೆಳೆ ಮೌಲ್ಯ ವರ್ಧನೆ ಮಾಡಿ ದೇಶದಾದ್ಯಂತ ಮಲೆನಾಡಿನ ಕಾಫಿ ಬೆಳೆಯ ಸೊಗಡು ಪಸರಿಸಲು ದಿವಂಗತ ಸಿದ್ದಾರ್ಥ ಹೆಗಡೆ ಯವರು ಒಂದು ದೊಡ್ಡ ಪ್ರಯತ್ನವನ್ನು “ಕಾಫಿ ಡೇ “ಉದ್ಯಮ ದ ಮೂಲಕ ಮಾಡಿದ್ದರು.‌ ಆದರೆ ಯಾಕೋ ಆ ಉದ್ಯಮ ನಿರೀಕ್ಷಿತ ಮಟ್ಟಕ್ಕೆ ಯಶಸ್ಸು ಗಳಿಸದೇ ಸ್ವತಃ ಸಂಸ್ಥಾಪರನ್ನೇ ಬಲಿ ತೆಗೆದುಕೊಂಡಿತ್ತು. ಅದಕ್ಕೆ ಬೇರೆ ಒಂದಷ್ಟು ಕಾರಣಗಳಿದ್ದರೂ ಮಲೆನಾಡು ಕಾಫಿ ವಿಶ್ವ ವಿಖ್ಯಾತ ವಾಗಿ ಬ್ರಜಿಲ್ಲೋ ಪ್ರಜಿಲ್ಲೋ ದೇಶದ ಮಾರುಕಟ್ಟೆ ಸ್ಪರ್ಧೆ ಇಲ್ಲದೇ ತನ್ನದೇ ಮಾರುಕಟ್ಟೆ ಸಾರ್ವಭೌಮತ್ವ ಸ್ಥಾಪಿಸಲಿಲ್ಲ ಎಂಬುದು ಖೇದಕರ ವಾಸ್ತವ ಸಂಗತಿ.

ಕೋಕೋ ಬೀಜ ಸಂಸ್ಕರಿಸಿ ಚಾಕೊಲೇಟ್ ತಯಾರಿಸಿ ಮಾರಾಟ ಮಾಡುವ ವಿಶೇಷ ಪ್ರಯೋಗಶೀಲತೆಯನ್ನ ಪುತ್ತೂರಿನ  ಕ್ಯಾಂಪ್ಕೋ ದಂತಹ ಸಹಕಾರಿ ಸಂಸ್ಥೆ ಮಾಡಿತ್ತು. ಆದರೆ ಅದೂ ಕೂಡ ಬಹುರಾಷ್ಟ್ರೀಯ ಕಂಪನಿಗಳ ಚಾಕೊಲೇಟ್ ಉತ್ಪನ್ನ ದ ಎದುರು ನಿಂತು ರಾಜನಂತೆ ಮೆರೆಯಲಿಲ್ಲ.ಯಾಕೋ ನಾವೇ ನಮ್ಮ ಮಲೆನಾಡಿನ ಉದ್ಯಮ ಗಳನ್ನು ಪ್ರೋತ್ಸಾಹಿಸುತ್ತಿಲ್ಲವೇನೋ ಎನಿಸುತ್ತದೆ. ಅರೆಕಾ ಟೀ ಖ್ಯಾತಿಯ ಶ್ರೀ ನಿವೇದನ್ ನೆಂಪೆಯವರು ತಮ್ಮ ಉತ್ಪನ್ನ ವನ್ನು ಯಶಸ್ವಿಯಾಗಿ ಪ್ರಮೋಟ್ ಮಾಡಿದ್ದು ವಿದೇಶದಲ್ಲಿ….!!! ಅಕಸ್ಮಾತ್ತಾಗಿ ಅವರು ಕರ್ನಾಟಕ ಅಥವಾ ಭಾರತದ ಮಾರುಕಟ್ಟೆಯಲ್ಲಿ ದೊಡ್ಡ ಯಶಸ್ಸು ನಿರೀಕ್ಷೆ ಮಾಡಿದ್ದರೆ ಖಂಡಿತವಾಗಿಯೂ ಸಾಧ್ಯವಿಲ್ಲವಾಗಿತ್ತು.

ಇಲ್ಲೇನೋ ಮಾಡಬೇಕು…

ಏನೋ ಹೊಸದು ಕೊಡಬೇಕು…

ಎನ್ನುವ ಅನೇಕ ಕನಸುಗಳು ನೆನಸಾಗಿಲ್ಲ…!!! ನಮ್ಮ ಜನ ಇದು ನಮ್ಮದು ಎಂದು ಪ್ರೀತಿಯಿಂದ ಪ್ರೋತ್ಸಾಹಿಸುತ್ತಿಲ್ಲ ಎನಿಸುತ್ತಿದೆ…!!; ಇದು ನಕಾರಾತ್ಮಕ ಚಿಂತನೆ ಅಲ್ಲ… ಶೂನ್ಯ ಅಥವಾ ಕಡಿಮೆ ಬಂಡವಾಳ ದಿಂದ ಏನನ್ನೋ ಸಾಧಿಸ ಹೊರಟು ನಿರಾಶರಾದ ಅನೇಕರು ಕಾಣಸಿಗುತ್ತಾರೆ. ನಾನೇ ಒಬ್ಬ ಸ್ವ ಉದ್ಯಮಿಯಾಗಿ ನಮ್ಮ ಸಂಸ್ಥೆಯ ಮೂಲಕ ಉತ್ಕೃಷ್ಟ ದರ್ಜೆಯ ಮಲೆನಾಡು ಗಿಡ್ಡ ತಳಿ ಗೋವುಗಳ ಗವ್ಯೋತ್ಪನ್ನದಿಂದ ತಯಾರಿಸಲಾದ ಸಾವಯವ ಗೊಬ್ಬರ ವನ್ನು ಊರು ಮನೆಯಲ್ಲಿ ವ್ಯಾಪಾರ ಮಾಡಲಾಗಿದ್ದು ನಮ್ಮ ಉತ್ಪನ್ನ ದ ಕೇವಲ ನಾಲ್ಕು ಪ್ರತಿಶತ ಮಾತ್ರ…!!!

ಸ್ಥಳೀಯ  ಉದ್ಯಮ ವನ್ನು  ಯಾಕೋ ಸ್ಥಳೀಯರೇ ಯಾಕೋ ಅಷ್ಟಾಗಿ ಪ್ರೋತ್ಸಾಹಿಸುತ್ತಿಲ್ಲ ಎನಿಸುತ್ತಿದೆ.‌ಈ ಕಾರಣಕ್ಕೆ ನಮ್ಮ ನಡುವಿನ ಅನೇಕರು ಉದ್ಯಮಿಗಳಾಗು ತ್ತಿಲ್ಲ. ಹದಿನೈದು ವರ್ಷಗಳ ಹಿಂದೆ ಶಿರಸಿ ಸಮೀಪದಲ್ಲಿ ಮೆಣಸಿನಕಾಯಿ ಒಲಿಯೋರಿಸಿನ್ ಸಂಸ್ಕರಣಾ  ಘಟಕ ವನ್ನು ಕೃಷಿಕ ಕುಟುಂಬದಿಂದ ಬಂದ  ಮೂರು ಜನ  ನ್ಯಾಯವಾದಿಗಳು  ಪಾಲುದಾರಿಕೆಯಲ್ಲಿ ಆರಂಭಿಸಿದ್ದರು. ಆ ಉದ್ಯಮ ಹೆಚ್ಚು ದಿನ ನಡೆಯಲಿಲ್ಲ. ಮರವಂತೆ ಸಮೀಪದಲ್ಲಿ ಸಂಪೂರ್ಣ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ಒಂದು ಕಾಯರ್ ಉದ್ಯಮ ಸ್ಥಾಪಿಸಲಾಗಿತ್ತು.‌ ಅದೂ ಈಗ ಸೀಝಾಗಿ ಬದಿಗೆ ನಿಂತಿದೆ. ಹೀಗಿನ ಒಂದಷ್ಟು ಅಪಘಾತಗಳು ಹೊಸದು ಮಾಡಲು ಹೊರಟವರಿಗೆ ಬೆರ್ಚಪ್ಪ ನಂತೆ ಬೆದರಿಸಿ ನಿಲ್ಲಿಸುತ್ತದೆ…!! ಆದರೆ ಮಲೆನಾಡು ಕರಾವಳಿ ಸಂಪೂರ್ಣ ಖಾಲಿಯಾಗಬಾರದೆಂದರೆ ನಮ್ಮ ಮಲೆನಾಡಿನ ಕೃಷಿ ಉತ್ಪನ್ನ ಗಳಿಗೆ ಇಲ್ಲೇ ಸಂಸ್ಕರಣೆ ಮೌಲ್ಯ ವರ್ಧನೆ ಯಾಗಿ ಮಾರುಕಟ್ಟೆಗೆ ಹೋಗುವಂತಹ ಉದ್ಯಮ ಬೇಕಿದೆ ಮತ್ತು ಮಲೆನಾಡು ಕರಾವಳಿಯ ಊರುಗಳು ಕೃಷಿಯೇತರ ನಿಸರ್ಗ ಸ್ನೇಹಿ ಉದ್ಯಮಗಳು ಆರಂಭವಾಗಬೇಕಿದೆ.‌ ಸರ್ಕಾರದ ಸಂಬಂಧಿಸಿದ ಇಲಾಖೆ ಈ ಉದ್ಯಮಗಳು ಒಂದು ಹಂತಕ್ಕೆ ಬರುವ ತನಕವೂ ಹಿಂದೆ ನಿಲ್ಲಬೇಕಿದೆ.

ನಮ್ಮ ದೇಶದಲ್ಲಿ ಉದ್ಯಮ ಸ್ನೇಹಿ ಆರ್ಥಿಕ ವ್ಯವಸ್ಥೆ ಇಲ್ಲ. ‌ಎಲ್ಲಾ ಉದ್ಯಮವನ್ನು ಬಂಡವಾಳಷಾಹಿಯೇ ಮಾಡಬೇಕು ಐಡಿಯಾ ಇದ್ದವ ಉದ್ಯಮ ಕಟ್ಟಿ ಯಶಸ್ಸು ಕಾಣೋದು ಬಲು ಕಷ್ಟ.

ಶಿರಸಿ ಸಮೀಪದ ನನ್ನ ಆಪ್ತರೊಬ್ಬರು ಒಂದು ಅದ್ಭುತವಾದ ಚಾಲಿ ಅಡಿಕೆ ಸುಲಿ ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ. ಆದರೆ ಅದನ್ನು ತಾವೇ ಬಿಡುಗಡೆ ಮಾಡಿ ಮಾರುಕಟ್ಟೆ ಕಂಡುಕೊಂಡು ತಾವೊಬ್ಬ ಕೃಷಿ ಯಂತ್ರೋಪಕರಣೋದ್ಯಮಿಯಾಗುವ ಆಸೆಗೆ ಈ ವ್ಯವಸ್ಥೆ ಸಹಕರಿಸುತ್ತಿಲ್ಲ.

ಯಾವುದೇ ಉದ್ಯಮ ಕಟ್ಟಿ ಅದು ಮಾರುಕಟ್ಟೆ ಯಲ್ಲಿ ಒಂದು ಛಾಪು ಮೂಡಿಸಿ ಒಂದು ಹಂತಕ್ಕೆ ಬರಲು ಸಮಯ  ಬೇಕಾಗುತ್ತದೆ. ಆದರೆ ಈ ಸಮಯ ಬರುವಷ್ಟು ಸಮಯ ತಾಳಿ ಕೊಳ್ಳುವ ವ್ಯವಸ್ಥೆ ನಮ್ಮ ಹಣಕಾಸು ಸಂಸ್ಥೆಗಳಿಲ್ಲ.‌‌ ಕೆಲವು ಸರ್ತಿ ಲೋನ್ ಸಂಪೂರ್ಣ ವಾಗುವುದರೊಳಗೆ ಲೋನಿನ ಕಂತು ಬಂದು ಉದ್ಯಮಿಯ ಕಂಗೆಡಿಸುತ್ತದೆ.  ಹೀಗಿನ ಕಾರಣಕ್ಕೆ ನಮ್ಮಲ್ಲಿ ಉದ್ಯಮ ಸ್ಥಾಪಿಸಲು ನವ್ಯೋದ್ಯಮಿಗಳು ಉತ್ಸಾಹ ತೋರುತ್ತಿಲ್ಲ…!!!ಶಿರಸಿ ಮೂಲದವರೊಬ್ಬರು ಬಹಳಷ್ಟು ಪೇಟೆಂಟ್ ಹೊಂದಿದ ಇಂಜಿನಿಯರ್  ತಂತ್ರಜ್ಞಾನಿಗಳು  ನೀಲಾವರ ಸಮೀಪದಲ್ಲಿ ಒಂದು ತಂತ್ರಜ್ಞಾನ ಸಂಬಂಧಿಸಿದ ತರಬೇತಿ ಕೇಂದ್ರ ಆರಂಭಿಸಿ ದರು.  ಆದರೆ ಆ ಶೈಕ್ಷಣಿಕ ಕೇಂದ್ರ ದಲ್ಲಿ ಸೇರಿ ಅವರ ಆಶಯದಂತೆ ತಯಾರಾಗಲು ವಿದ್ಯಾರ್ಥಿಗಳೇ ಬರಲಿಲ್ಲ. ‌

ಬಹುಶಃ ಅವರು ಯಶಸ್ಸು ಕಂಡಿದ್ದಿದ್ದರೆ ನಮ್ಮ ಮಲೆನಾಡು ಕರಾವಳಿಯ ಪ್ರದೇಶದಲ್ಲಿ ಅನೇಕ ಹೊಸ ಉದ್ಯಮ ಗಳು ನೆಲೆ ಕಂಡು ಮಲೆನಾಡು ಕರಾವಳಿ ಉದ್ಯಮಶೀಲವಾಗುತ್ತಿತ್ತೇನೋ ಗೊತ್ತಿಲ್ಲ. ಮಲೆನಾಡು ಕರಾವಳಿಗೆ  ಮರಳಿ ಬರಲಿ ಮೂರು ನಾಲ್ಕನೇ ತಲೆಮಾರಿನ ಪೀಳಿಗೆ. ಮಲೆನಾಡು ಕರಾವಳಿ ಕೃಷಿ ಉತ್ಪನ್ನ ಮತ್ತು ಅರಣ್ಯ ಉತ್ಪನ್ನ ಗಳ ಮೌಲ್ಯವರ್ಧನೆಯಾಗಲಿ. ಶೂನ್ಯದಿಂದ , ತಪಸ್ಸು ಮಾಡಿ ಪ್ರಾಮಾಣಿಕತೆಯಿಂದ ಸಾಧನೆ ಮಾಡಿದವರು ವಿರಳಾತಿವಿರಳ. ಹಾಗೆ ಸಾಧಿಸಿದವರಿಗೆಲ್ಲಾ ನನ್ನ ಅಭಿನಂದನೆಗಳು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group