ರಾಜ್ಯದಲ್ಲಿ ಮಳೆಯ ಕೊರತೆ ಕಾಡಿದೆ. ಜಲಕ್ಷಾಮ ತಲೆದೋರಿದೆ. ರಾಜ್ಯದ ೨೧೬ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರಕಾರ ಘೋಷಿಸಿದೆ. ಬಿತ್ತಿ ಬೆಳೆಯುವ ರೈತರ ಬದುಕು ಮೂರಾಬಟ್ಟೆಯಾಗಿದೆ. ಬೆಳೆಯಾಧಾರಿತ ವಾರ್ಷಿಕ ನಷ್ಟ ಒಂದೆಡೆಯಾದರೆ ತಮಗೆ ಬೇಕಾದ ಅಗತ್ಯ ಆಹಾರ ಧಾನ್ಯಗಳು ತುತ್ತಿನ ಚೀಲಕ್ಕೆ ಸಿಗದಂತಾಗಿದೆ
ಮಳೆ ಕೊರತೆ, ಬರ ಹೊಸತೇನಲ್ಲ. ಆಗಾಗ ಅವು ಬಂದು ಹೋಗುತ್ತಲೇ ಇರುತ್ತದೆ. ಪರಿಸರ, ಕೃಷಿ, ವಿದ್ಯುತ್ ಮಾತ್ರವಲ್ಲ ಇತರ ಕ್ಷೇತ್ರಗಳಿಗೂ ದುಷ್ಪರಿಣಾಮವನ್ನು ಬೀರುತ್ತದೆ. ಮಳೆಯ ಕೊರತೆಯನ್ನು ನೀಗಿಸಲು ಬರದ ಬೇಗೆಯನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸಲು ನಮ್ಮಲ್ಲಿ ಪರಿಣಾಮಕಾರಿಯಾದ ಯಾವ ಯೋಜನೆಯೂ ಇಲ್ಲ. ಅಷ್ಟು-ಇಷ್ಟು ಪರಿಹಾರ ಸದ್ದು ಮಾಡುತ್ತದೆ. ಮಳೆ ಹನಿ ಬಿದ್ದೊಡನೆ ಅದೂ ಮಾಯವಾಗುತ್ತದೆ. ಈಗ ನಮ್ಮ ಮುಂದಿರುವುದು ಜಲ ಸಾಕ್ಷರತೆ ಮತ್ತು ಜಲ ಜಾಗೃತಿ
ಬರ ಅಥವಾ ಜಲಕ್ಷಾಮವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಒಂದಷ್ಟು ಪರಿಹಾರದ ಆಸೆಯನ್ನು ತೋರಿಸಿ ಸುಮ್ಮನಿರುವುದಿಲ್ಲ. ಹಳ್ಳಿಯಿಂದ ನಗರದ ವರೆಗೆ ಜಲ ಸಾಕ್ಷರತೆ, ಹನಿ ಹನಿ ನೀರು ಸದುಪಯೋಗಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಒಂದೆರಡು ವರ್ಷವಾದರೂ ಬರವನ್ನು ತಾಳಿಕೊಳ್ಳುವ-ಮುಂದೂಡುವ ಆತ್ಮವಿಶ್ವಾಸವನ್ನು ತುಂಬುವ ಪ್ರಾಮಾಣಿಕ ಕೆಲಸಗಳು ಸರಕಾರದಿಂದ ಸರಕಾರಗಳಿಂದ ನಡೆಯಬೇಕು. ಇದಕ್ಕೆಲ್ಲಾ ತಳ ಮಟ್ಟದ ಪೂರ್ವ ಸಿದ್ಧತೆ, ಅಷ್ಟೇ ಬದ್ಧತೆಯೂ ಬೇಕು
ಪ್ರತೀ ಗ್ರಾಮದಲ್ಲಿ ಬೀಳುವ ಮಳೆ ಪ್ರಮಾಣ, ಆ ಗ್ರಾಮದ ಬೆಳೆಗಳಿಗೆ ಬೇಕಾದ ನೀರಿನ ಅಗತ್ಯತತೆ, ಕುಡಿಯಲು ಬೇಕಾದ ನೀರು, ಗ್ರಾಮದಲ್ಲಿರುವ ಕೆರೆಗಳು ಅದರಿಂದ ಲಭ್ಯವಾಗುವ ನೀರು ಎಲ್ಲವನ್ನೂ ಸಮೀಕ್ಷೆ ಮಾಡಿ ಕೆರೆಬಾವಿ ಮರುಪೂರಣ, ಕೃಷಿಹೊಂಡಗಳು, ಒಡ್ಡುಗಳು, ಸೇರಿದಂತೆ ಯಾವ ಯಾವ ಮೂಲದಿಂದ ನೀರನ್ನು ಸಂಗ್ರಹಿಸಬಹುದು, ನೀರಿನ ಲಭ್ಯತೆಯ ಮೇಲೆ ಬೆಳೆ ಬೆಳೆಯಬಹುದು ಎಂಬ ನಿರ್ಧಾರಗಳಾಗಬೇಕು. ೩೦೦-೫೦೦ವರೆಗೆ ಮಳೆ ಬೀಳುವ ಪ್ರದೇಶದಲ್ಲಿ ಎಂಥಹ ಬೆಳೆ ಬೆಳೆಯಬಹುದು, ಅದಕ್ಕಿಂತ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಮತ್ಯಾವ ಬೆಳೆ ಬೆಳೆಯಬಹುದು ಎಂಬುದರ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ತೀವ್ರ ಬರಪೀಡಿತ ಗ್ರಾಮ, ಹಳ್ಳಿಗಳನ್ನು, ತಾಲೂಕುಗಳನ್ನು ಆದ್ಯತೆಯ ಮೇಲೆ ಆಯ್ದುಕೊಂಡು ಕೃಷಿ, ತೋಟಗಾರಿಕೆ, ನೀರಾವರಿ, ಸೇರಿದಂತೆ ಎಲ್ಲ ಇಲಾಖೆಗಳು, ಜನಪ್ರತಿನಿಧಿಗಳು, ಸ್ಥಳೀಯರನ್ನು ಸೇರಿಸಿ ಪೂರಕ ಯೋಜನೆಯನ್ನು ಅನುಷ್ಠಾನಗಳಿಸಿ ಬರ ನಿವಾರಣೆಯ ದೊಡ್ಡ ಆಂದೋಲನವನ್ನೇ ಹಮ್ಮಿಕೊಳ್ಳಬೇಕು.
ರಾಜ್ಯದಲ್ಲಿ ಸುಮಾರು ೩೪ ಸಾವಿರ ಕೆರೆಗಳಿವೆ ಎನ್ನಲಾಗುತ್ತಿದೆ. ಇವುಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಅವುಗಳನ್ನು ದುರಸ್ತಿಗೊಳಿಸಿ ನೀರುಣಿಸುವ ಕೆಲಸಬಾಗಬೇಕು. ಹೆಚ್ಚು ನೀರು ಬೇಡದ ತಳಿಗಳನ್ನು, ಬೆಳೆಗಳನ್ನು ರೈತರು ಬೆಳೆಯಲು ಪ್ರೇರೇಪಿಸಬೇಕು. ನೀರಿನ ಸ್ವಾವಲಂಬನೆಗೆ ಸರಕಾರ ತನ್ನದಾದ ಎಲ್ಲಾ ಪ್ರಯತ್ನಗಳನ್ನು ದಕ್ಷ, ಪ್ರಾಮಾಣಿಕ ನೆಲೆಯಿಂದ ಕೈಗೊಳ್ಳಬೇಕು. ಪ್ರತೀ ಗ್ರಾಮದ ನೀರಿನ ಬೇಡಿಕೆ, ಮಳೆ ನೀರಿನ ಲಭ್ಯತೆ ಮನಗಾಣುವ ಜತೆಜತೆಗೆ ಆಪತ್ಕಾಲದ ಸಂದರ್ಭದಲ್ಲಿ ಸಮುದ್ರ ನೀರಿನ ಬಳಕೆಯ ಸಾಧ್ಯತೆ, ಮೋಡ ಬಿತ್ತನೆಯತ್ತಲೂ ಗಮನ ನೀಡಬೇಕು.ರಾಜ್ಯದಲ್ಲಿ ಸುಮಾರು ೩೪ ಸಾವಿರ ಕೆರೆಗಳಿವೆ ಎನ್ನಲಾಗುತ್ತಿದೆ. ಇವುಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಅವುಗಳನ್ನು ದುರಸ್ತಿಗೊಳಿಸಿ ನೀರುಣಿಸುವ ಕೆಲಸಬಾಗಬೇಕು. ಹೆಚ್ಚು ನೀರು ಬೇಡದ ತಳಿಗಳನ್ನು, ಬೆಳೆಗಳನ್ನು ರೈತರು ಬೆಳೆಯಲು ಪ್ರೇರೇಪಿಸಬೇಕು. ನೀರಿನ ಸ್ವಾವಲಂಬನೆಗೆ ಸರಕಾರ ತನ್ನದಾದ ಎಲ್ಲಾ ಪ್ರಯತ್ನಗಳನ್ನು ದಕ್ಷ, ಪ್ರಾಮಾಣಿಕ ನೆಲೆಯಿಂದ ಕೈಗೊಳ್ಳಬೇಕು. ಪ್ರತೀ ಗ್ರಾಮದ ನೀರಿನ ಬೇಡಿಕೆ, ಮಳೆ ನೀರಿನ ಲಭ್ಯತೆ ಮನಗಾಣುವ ಜತೆಜತೆಗೆ ಆಪತ್ಕಾಲದ ಸಂದರ್ಭದಲ್ಲಿ ಸಮುದ್ರ ನೀರಿನ ಬಳಕೆಯ ಸಾಧ್ಯತೆ, ಮೋಡ ಬಿತ್ತನೆಯತ್ತಲೂ ಗಮನ ನೀಡಬೇಕು.