ರಾಧಾಕೃಷ್ಣ ತೊಡಿಕಾನ
ಕೃಷಿಕ ಬಿತ್ತಿ ಬೆಳೆದರೆ ಕೃಷಿಕನಿಗೆ ಮಾತ್ರ ಅದರ ಪ್ರಯೋಜನವಲ್ಲ. ಇಡೀ ಜನಸಮುದಾಯಕ್ಕೆ ಅದರ ಫಲ ದೊರೆಯುತ್ತದೆ. ಕೃಷಿ ಉತ್ಪನ್ನ ಸಂಸ್ಕರಣೆಯಿಂದ ಗ್ರಾಹಕನಿಗೆ ತಲುಪುವ ವರೆಗೆ ವಿವಿಧ ಹಂತದಲ್ಲಿ ಹಲವಾರು ಮಂದಿಗೆ ಉದ್ಯೋಗ ನೀಡಿದೆ. ಉದ್ಯಮ, ವ್ಯವಹಾರದಲ್ಲಿ ತೊಡಗಿಕೊಳ್ಳುವಂತೆ ಮಾಡಿದೆ.
ಕೃಷಿಕರು ಬೆಳೆಯುವ ಸಾಂಬಾರ್ ಬೆಳೆಗಳಲ್ಲಿ ಜೀರಿಗೆ ಹೆಚ್ಚಿನವರು ಬಲ್ಲರು. ಆಹಾರ ಪದಾರ್ಥಗಳಲ್ಲಿ ಇದರ ಬಳಕೆಯಿದೆ. ಕಾಡು ಜೀರಿಗೆ, ಕಾಳು ಜೀರಿಗೆ ಅಥವಾ ಕಪ್ಪು ಜೀರಿಗೆ ಜಾತಿಯ ಜೀರಿಗೆಯನ್ನು ಆಹಾರ ಪದಾರ್ಥಗಳಲ್ಲಿ ಇದರ ಬಳಕೆ ಹೆಚ್ಚು ಆದರೆ ಕಾಡುಜೀರಿಗೆ ಅಥವಾ ಕಪ್ಪು ಜೀರಿಗೆ ನಾಟಿ ಔಷಧ, ಆಯುರ್ವೇದ ಔಷಧಗಳಲ್ಲಿ ಉಪಯೋಗ ಹೆಚ್ಚು . ಕಾಳು ಜೀರಿಗೆ ಕೃಷಿಕರಿಗೆ ಒಂದು ಬೆಳೆಯಾದರೆ ಇದರ ಸಂಸ್ಕರಣೆ, ಔಷಧಿ ತಯಾರಿ ಮತ್ತೊಂದು ಬಗೆ.
ಕರಿಜೀರಿಗೆಯನ್ನೇ ಸಂಸ್ಕರಣೆ, ವ್ಯಾಪಾರ, ವ್ಯವಹಾರವಾಗಿ ಇರಿಸಿಕೊಂಡು ಬದುಕನ್ನು ಕಟ್ಟಿಕೊಂಡವರಿದ್ದಾರೆ. ಸ್ವಉದ್ಯೋಗ ಕಂಡುಕೊಂಡವೆದ್ದಾರೆ. ಅಂತಹವರಲ್ಲಿ ನಾಗರಾಜ ಮನ್ನಿಕೇರಿ ಕೂಡ ಒಬ್ಬರು. ಕರಿ ಜೀರಿಗೆ ಕಹಿಯಾದರೂ ಅದರಿಂದಲೇ ಬದುಕನ್ನು ಸವಿಯಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ನಾಗರಾಜ ಅವರು ಗಾರ್ಮೆಂಟ್ ಕಂಪನಿಯಲ್ಲಿ ಉದ್ಯೋಗವನ್ನು ಮಾಡಿಕೊಂಡಿದ್ದರು. ತನ್ನದೇ ಆದ ಸ್ವದ್ಯೋಗ ಮಾಡಿಕೊಳ್ಳಬೇಕೆಂಬ ಆಸಕ್ತಿ ಮೂಡಿತು. ತನ್ನ ಅನುಭವದ ಮೇಲೆ ಗಾರ್ಮೆಂಟಿನ ಸ್ವ ಉದ್ಯೋಗ ಆಯ್ದುಕೊಳ್ಳಬಹುದಿತ್ತು. ಆದರೆ ಅವರನ್ನು ಆಕರ್ಷಿಸಿದ್ದು ವಿರಳವಾಗಿ ಉಪಯೋಗವಾಗುವಂತಹ ಕಲೂಂಜಿ ಅಥವಾ ಕಪ್ಪು ಜೀರಿಗೆ. ಕರಿಜೀರಿಗೆ ಬಗ್ಗೆ ಕುತೂಹಲ ಆಸಕ್ತಿ ಹೆಚ್ಚಿ ಸಂಸ್ಕರಣೆ ಮಾರಾಟದ ಪುಟ್ಟ ವ್ಯವಹಾರವನ್ನು ೨೦೦೨ರಲ್ಲಿ ಶ್ರೀ ದೇವಿ ಫುಡ್ಸ್ ಎಂಬ ಹೆಸರಿನಲ್ಲಿ ಆರಂಭಿಸಿದರು
ಜನರಲ್ಲಿ ಕಪ್ಪು ಜೀರಿಗೆಯನ್ನು ಔಷಧಿಯಾಗಿ ಹೆಚ್ಚು ಬಳಕೆಯಿರುವುದು ಅವರಿಗೆ ತಿಳಿದಿತ್ತಾದರೂ ಈ ವ್ಯವಹಾರದಲ್ಲಿ ಯಶಸ್ಸು ದೊರೆಯುತ್ತದೋ ಇಲ್ಲವೋ ಎಂಬ ಅಂಜಿಕೆ ಒಳಗೊಳಗೆ ಇತ್ತು. ಕಾರಣ ಕರಿ ಜೀರಿಗೆ ಬೆಳೆ ನಮ್ಮ ಪರಿಸರದಲ್ಲಿಲ್ಲ. ದೂರದ ರಾಜಸ್ಥಾನ ಗುಜರಾತಿನಲ್ಲಿ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ವ್ಯವಹಾರಕ್ಕೆ ಬೇಕಾದ ಕರಿಜೀರಿಗೆ ಅಲ್ಲಿಂದಲೇ ತರಿಸಿಕೊಳ್ಳಬೇಕಾಗಿತ್ತು. ಸಾವಯುವ ಕೃಷಿಯಲ್ಲಿ ಬೆಳೆದ ಕಪ್ಪು ಜೀರಿಗೆಯನ್ನು ತಂದು ಮನೆಯಲ್ಲಿ ಸಂಸ್ಕರಿಸಿ ಗಾಣದ ಮೂಲಕ ಎಣ್ಣೆಯನ್ನು ತೆಗೆಯಲಾಗುತ್ತದೆ. ಕರಿ ಜೀರಿಗೆಯನ್ನು ಮುಖ್ಯ ವ್ಯವಹಾರವಾಗಿ ಮುಂದುವರಿಸುತ್ತಾ ಬಂದರು
ಉಪಯೋಗಗಳು : ಆಹಾರದಲ್ಲಿ ಸಾಂಬಾರ ಪದಾರ್ಥವಾಗಿ ಬಳಕೆಯಾಗುತ್ತಾದರೂ ನಾಟಿ ಔಷದ, ಆಯುರ್ವೇದ, ಯುನಾನಿ ಔಷಧಿಗಳಲ್ಲಿ ಕಪ್ಪು ಜೀರಿಗೆಯ ಉಪಯೋಗವಾಗುತ್ತಿದೆ. ಕಪ್ಪು ಜೀರಿಗೆಯಲ್ಲಿ ಮೆಗ್ನೇಷಿಯಂ, ಕ್ಯಾಲ್ಸಿಯಂ, ಕಬ್ಬಿಣ, ಸತು, ಪೊಟಾಷಿಯಂ ಮೊದಲಾದ ಪೋಷಕ ಧಾತುಗಳು ಇರುವುದರಿಂದ ಆರೋಗ್ಯ ವರ್ಧನೆ ಪೂರಕ. ಮಧುಮೇಹ ಸಮತೋಲನ, ರಕ್ತದ ಒತ್ತಡ ನಿಯಂತ್ರಣ, ಸಂಧಿವಾತ, ಕೀಲು ನೋವು, ಹೃದಯದ ತೊಂದರೆ ಶಮನಕಾರಿ ಗುಣವಿದೆ. ಚರ್ಮದ ಅಲರ್ಜಿ ಕಲೆಗಳ ನಿವಾರಣೆ, ಕೂದಲು ರಕ್ಷಣೆ ಹೀಗೆ ಹಲವು ಸಮಸ್ಯೆಗಳನ್ನು ಬಗೆ ಹರಿಸುವ ಶಕ್ತಿ ಈ ಕರಿ ಜೀರಿಗೆೆ ತಜ್ಞರ ಮತ್ತು ಅನುಭವಿಗಳ ಅಭಿಮತ.
ಈ ಕಪ್ಪು ಜೀರಿಗೆಯನ್ನು ನೇರವಾಗಿ ಒಂದು ಚಿಟಿಕೆಯಷ್ಟು ವಾರಕ್ಕೆ ಎರಡು ಬಾರಿ ತಿನ್ನಬಹುದು. ಪುಡಿಯನ್ನು ನೀರಿನಲ್ಲಿ ಸೇರಿಸಿ ಸೇವಿಸಬಹುದು. ಎಣ್ಣೆಯನ್ನು ಉಪಯೋಗಿಸಬಹುವುದು ಎನ್ನುತ್ತಾರೆ ನಾಗರಾಜ್. ಈ ಕರಿ ಜೀರಿಗೆ ಮಾರುಕಟ್ಟೆ ಮಾಡುವುದು ಸ್ವಲ್ಪ ಕಷ್ಟವೇನಿಸಿದರೂ ಇದರ ಮಹತ್ವ ತಿಳಿದ ಗ್ರಾಹಕರೇ ಮಾರುಕಟ್ಟೆ ಮಾಡಲು ಸಹಕಾರಿಯಾಗಿದ್ದಾರೆ. ರಾಜ್ಯವಲ್ಲದೆ ಹೊರ ರಾಜ್ಯಗಳಲ್ಲಿಯೂ ಗ್ರಾಹಕರಿದ್ದಾರೆ. ಹೊರದೇಶದಲಿರುವ ಊರಿನವರೂ ಕೊಂಡೊಯ್ಯುತ್ತಾರೆ. ಅಂಚೆ ಮತ್ತು ಕೊರಿಯರ್ ಮೂಲಕ ದೂರದ ಊರುಗಳಿಗೆ ಕಳಿಸಬಹುದಾಗಿ ಹೇಳುತ್ತಾರೆ.
ಇದರೊಂದಿಗೆ ಔಷಧಿಯ ಗುಣವುಳ್ಳ ಕಾಮ ಕಸ್ತೂರಿ ಬೀಜಗಳು, ಚೀಯಾ, ಮಲ್ಲಿಗೆಯ ಸುಗಂಧ ದ್ರವ್ಯಗಳನ್ನು ಇದರೊಂದಿಗೆ ಮಾರಾಟ ಮಾಡುತ್ತಿದ್ದಾರೆ. ಕುಟುಂಬ ಸದಸ್ಯರು ಈ ವ್ಯವಹಾರದಲ್ಲಿ ತೊಡಗಿಕೊಂಡಿರುವುದಲ್ಲದೆ ಒಂದಿಬ್ಬರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.
ಮಾಹಿತಿಗೆ 9035275494, 7899717878