-ನವಜಾತ ಕಾರ್ಕಳ
ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ನಿತ್ಯದ ಆಹಾರದ ಬಟ್ಟಲಲ್ಲಿ ಜೋಳದ ರೊಟ್ಟಿಗೆ ಮೊದಲ ಆದ್ಯತೆ. ಪೌಷ್ಟಿಕಾಂಶವುಳ್ಳ ಸಿರಿ ಧಾನ್ಯಗಳಲ್ಲಿ ಒಂದಾದ ಜೋಳ ಹಲವು ಆರೋಗ್ಯ ಭಾಗ್ಯವನ್ನು ಹೊಂದಿದೆ. ಅದರಲ್ಲಿರುವ ಜೀವಸತ್ವಗಳು, ಖನಿಜಾಂಶಗಳು ನಮಗರಿವಿಲ್ಲದಂತೆ ನಮ್ಮ ಆರೋಗ್ಯ ವರ್ಧನೆಗೆ ಸಹಕಾರಿಯಾಗಿವೆ
ಉತ್ತರ ಕರ್ನಾಟಕ ಭಾಗದ ಬಹಳಷ್ಟು ಮಹಿಳೆಯರು ಸ್ವಾವಲಂಬನೆಯ ಬದುಕಿಗೆ ರೊಟ್ಟಿಯನ್ನೆ ಅವಲಂಭಿಸಿದ್ದಾರೆ. ರೊಟ್ಟಿಯಿಂದ ಜೀವನದ ದಾರಿ ಕಂಡುಕೊಂಡಿದ್ದಾರೆ. ಖಡಕ್ ರೊಟ್ಟಿ ಉದ್ಯಮ-ವ್ಯವಹಾರವಾಗಿ ರೂಪುಗೊಂಡಿದೆ.
ಕರಾವಳಿ ಕರ್ನಾಟಕದಲ್ಲಿ ಸಿರಿ ಧಾನ್ಯದ ಮಹತ್ವದಿಂದ ಜೋಳಕ್ಕೂ ಬೆಲೆ ಬಂದಿದೆ. ಬೇರೆ ಬೇರೆ ಕಾರಣದಿಂದ ಉತ್ತರ ಕರ್ನಾಟಕದ ಜನರೂ ಈ ಭಾಗದಲ್ಲಿ ನೆಲೆಸಿರುವುದರಿಂದ ರೊಟ್ಟಿಯ ಗೃಹ ಉದ್ಯಮ ಗಟ್ಟಿಯಾಗುತ್ತಿದೆ. ಆಹಾರ ಕ್ಷೇತ್ರದಲ್ಲಿ ಸ್ವದ್ಯೋಗ ಮಾಡುವ ಆಸಕ್ತಿಯಿದ್ದಲ್ಲಿ ಜೋಳದ ರೊಟ್ಟಿ ಉದ್ಯಮಕ್ಕೂ ಅವಕಾಶ ಹೆಚ್ಚಿದೆ.
ಮೂಡಬಿದ್ರೆಯ ಪಿಲಿಪಂಜರ ಬಳಿ ಶ್ರೀ ರೇಣುಕಾದೇವಿ ಹೋಮ್ ಪ್ರೊಡಕ್ಟ್ ಎಂಬ ಹೆಸರಿನಲ್ಲಿ ಜೋಳದ ರೊಟ್ಟಿ ತಯಾರಿ ಘಟಕ ಹೊಂದಿರುವ ಪ್ರಿಯಾಂಕ ಸ್ವಾವಲಂಬನೆಯ ದಾರಿಕಂಡುಕೊಂಡಿದ್ದಾರೆ. ಪ್ರಿಯಾಂಕ ಪದವೀಧರೆ. ಗೃಹಿಣಿ. ಗೃಹಕೃತ್ಯಗಳು ಮುಗಿದ ನಂತರ ಉಳಿದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಅದಮ್ಯ ಆಸೆ ಸ್ವದ್ಯೋಗದತ್ತ ಗಮನ ಹರಿಸುವಂತೆ ಮಾಡಿತು. ಆಗ ಅವರಿಗೆ ಹೊಳೆದದ್ದು ಜೋಳದ ಖಡಕ್ ರೊಟ್ಟಿ ಉದ್ಯಮ.
ಮೂಲತ: ಅವರು ಹಾವೇರಿಯವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಅವರ ಪತಿ ಬಸವರಾಜ್ ಸೇವೆ ಸಲ್ಲಿಸುತ್ತಿದ್ದುದರಿಂದ ಕಳೆದ ಕೆಲವು ವರ್ಷಗಳಿಂದ ಮೂಡಬಿದಿರೆಯ ನಿವಾಸಿ. ಮನೆಯಲ್ಲಿಯೇ ಆರಂಭಸಿದ ರೊಟ್ಟಿ ಮೊದಮೊದಲು ಆಸುಪಾಸಿನ ಬೇಡಿಕೆಗಷ್ಟೇ ಸೀಮಿತವಾಗಿತ್ತು. ರೊಟ್ಟಿಯ ರುಚಿ ಹತ್ತಿಕೊಳ್ಳುತ್ತಿದ್ದಂತೆ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯಾಯಿತು. ಈ ಹಿನ್ನಲೆಯಲ್ಲಿ ರೊಟ್ಟಿ ಯಂತ್ರವನ್ನು ಖರೀದಿಸಿದರು. ಇದರಿಂದ ರೊಟ್ಟಿ ತಯಾರಿ ಸುಲಭವಾಯಿತು.
ರೊಟ್ಟಿಗೆ ಬೇಕಾದ ಜೋಳವನ್ನು ಬಿಜಾಪುರ, ಹಾವೇರಿಯಿಂದ ತರಿಸಿಕೊಳ್ಳುತ್ತಾರೆ. ಉತ್ತಮ ಗುಣಮಟ್ಟದ ಜೋಳವನ್ನು ರೈತರು ನೇರವಾಗಿ ನೀಡಿದರೆ ಅವರಿಂದಲೂ ಖರೀದಿಸುತ್ತಾರೆ. ಒಣ ರೊಟ್ಟಿ ಪ್ಯಾಕೆಟ್ ಒಂದರಲ್ಲಿ ಹತ್ತು ರೊಟ್ಟಿಗಳಿದ್ದು 9೦ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಈಗ ಸಾಮಾಜಿಕ ಜಾಲ ತಾಣಗಳನ್ನು ಮಾರಾಟಕ್ಕಾಗಿ ಬಳಸಿಕೊಳ್ಳುತ್ತಿದ್ದರೆ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿಯೂ ಲಭ್ಯವಿರಲಿದೆ. ನೆಲಗಡಲೆ ಹಾಗೂ ಹುರಿಗಡಲೆ ಒಣ ಚಟ್ನಿಪುಡಿಯೂ ತಯಾರಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ವಿವಿಧ ಸಿರಿಧಾನ್ಯಗಳು ಹಾಗೂ ಬೇಳೆ ಕಾಳುಗಳು, ಒಣಹಣ್ಣುಗಳು, ಬೀಜಗಳನ್ನು ಸೇರಿಸಿ ತಯಾರಿಲಾಗುವ ಪೋಷಕಾಂಶಗಳ ಮಿಶ್ರಣಗಳು ಹೆಚ್ಚು ಪ್ರಚಲಿತದಲ್ಲಿವೆ. ಸಮತೋಲಿತವಾದ ಮಿಶ್ರಣವು ಆರೋಗ್ಯ ವರ್ಧಕವಾಗಿದ್ದು ಇಂತಹ ಮಿಶ್ರಣಗಳನ್ನು ಪ್ರಿಯಾಂಕ ಅವರು ತಯಾರಿಸುತ್ತಿದ್ದಾರೆ.
ಗೃಹ ಉದ್ಯಮದಿಂದ ಗ್ರಾಮೀಣ ಪರಿಸರದಲ್ಲಿ ಮಹಿಳೆಯರಿಗೆ ಉದ್ಯೋಗವನ್ನು ನೀಡಿದಂತಾಗುತ್ತದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇಂತಹ ಸ್ವ ಉದ್ಯೋಗ ಪ್ರೇರಕವಾಗಿದೆ. ಎನ್ನುತ್ತಾರೆ ಪ್ರಿಯಾಂಕ. ಪತಿ ಬಸವರಾಜ್ ಹಾಗೂ ಸಹೋದರ ಮಲ್ಲೇಶ್ ಹಾಗೂ ತಂದೆ, ತಾಯಿ ನೀಡುತ್ತಿರುವ ಪ್ರೋತ್ಸಾಹ ತನ್ನ ಸ್ವದ್ಯೋಗದ ಆಸೆಯನ್ನು ಪೂರೈಸಿದೆ ಎಂದು ಹೇಳುತ್ತಾರೆ. ಮಾಹಿತಿ ಮೊ: 9901759211