ಬರಹ-ರಾಧಾಕೃಷ್ಣ ತೊಡಿಕಾನ – ಪ್ರಸಾದ್ ಶೆಣೈ
ಹಸಿರ ಉಡುಗೆಯುಟ್ಟ ಗಿಡದ ಮೇಲೆ ಹಾಲು ಬಣ್ಣದ ಮೂಗುತಿಯಂತೆ ಮೂಡಿದ ಮಲ್ಲಿಗೆಯ ಮೊಗ್ಗು. ಬೆಳಕು ಹರಿವ ಮುನ್ನವೇ ಸುತ್ತಮುತ್ತೆಲ್ಲಾ ಪಸರಿಸುವ ಕಂಪು. ಹುಟ್ಟಿನ ಸಾರ್ಥಕತೆಗೆ ಕಾಯುವ ಮಲ್ಲಿಗೆಗೆ ಮುದಗೊಳ್ಳುವ ಮನಸ್ಸು. ಮಲ್ಲಿಗೆಯಿಂದಲೇ ಬಾಳು ಬೆಳಗಿಸಿಕೊಂಡವರು. ಯಶಸ್ಸಿನ ಪಥ ಹಿಡಿದು ನಡೆದವರು… ಕತೆ ಹಲವಾರು.

ಮಲ್ಲಿಗೆ ಕೃಷಿ ಹೂವಿನಷ್ಟು ಹಗುರವಲ್ಲ. ಶ್ರಮವಿದೆ. ನಿರಂತರ ಕೆಲಸವಿದೆ. ಆದರೆ ಯಾರು ಬೇಕಾದರೂ ಮಲ್ಲಿಗೆ ಬೆಳೆಯಬಹುದು. ಮಲ್ಲಿಗೆಯ ಮೌಲ್ಯ., ವಿಶಾಲವಾದ ಮಾರುಕಟ್ಟೆ ಇತರ ಯಾವ ಕೃಷಿ-ಫಸಲಿಗೂ ದೊರೆಯಲಾರದು. ಎಂಬುದು ಮಲ್ಲಿಗೆ ಬೆಳೆಯಿಂದಲೇ ಹೆಚ್ಚು ಪರಿಚಿತ, ಸಾವಯುವ ಮಲ್ಲಿಗೆ ಕೃಷಿಕ ರಾಮಕೃಷ್ಣ ಶರ್ಮ ಬಂಟಕಲ್ಲು ಅವರ ಅನುಭವದ ಮಾತು
ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮರು ಪ್ರಯೋಗಶೀಲ ಕೃಷಿಕ. ತನ್ನ ಕೃಷಿ ನೆಲದ ಗುಣ ಧರ್ಮವನ್ನು ಸಾವಯವದಿಂದಲೇ ತೂಗಿ ಅಳೆದು ನಿಸರ್ಗದತ್ತವಾದ ಸಾರದ ಸುರಿಯಿಂದಲೇ ಮಣ್ಣನ್ನು ಸಮೃದ್ಧಗೊಳಿಸಿ ಕೃಷಿ ಮಾಡಿದವರು. ಖುಷಿ ಪಟ್ಟವರು. ವಿದ್ಯಾರ್ಥಿ ದೆಸೆಯಲ್ಲಿ ಕೈ ಕೆಸರು ಮಾಡಿಕೊಂಡು ನೋವು ಉಂಡವರು. ನಲಿವು ಕಂಡವರು. ಮಲ್ಲಿಗೆ ಕೃಷಿಯಿಂದ ಕಂಪು ಬೀರಿದವರು
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್ಲು ಅರಸಿಕಟ್ಟೆಯ ರಾಮಕೃಷ್ಣ ಶರ್ಮರ ತಂದೆ ಲಕ್ಷ್ಮೀನಾರಾಯಣ ಶರ್ಮ ಅವರು ಕೃಷಿಕರಾಗಿದ್ದರು. ಪಾರಂಪರಿಕ ಕೃಷಿ ಅವರಲ್ಲಿತ್ತು. ಸ್ವಾತಂತ್ರ‍್ಯ ಚಳುವಳಿಯಲ್ಲೂ ಪಾಲ್ಗೊಂಡಿದ್ದರು. ಹಿಂದಿ ಪಂಡಿತರಾಗಿದ್ದ ಅವರು ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಲಕ್ಷ್ಮೀ ನಾರಾಯಣ ಶರ್ಮರಿಗೆ ಮಲ್ಲಿಗೆ ಕೃಷಿಯ ಆಸಕ್ತಿಯಿತ್ತು. ಆದರೆ ಮಲ್ಲಿಗೆ ಗಿಡಗಳು ಸ್ಥಳೀಯವಾಗಿ ಸಿಗುತ್ತಿರಲಿಲ್ಲ. ಮಲ್ಲಿಗೆ ಕೃಷಿಯ ಬಯಕೆ ಭಟ್ಕಳದವರಿಗೆ ಕರೆದೊಯ್ಯಿತು. 1950 ರಲ್ಲಿ ಕೆಲವು ಗಿಡಗಳನ್ನು ತಂದು ನೆಟ್ಟರು. ಅದು ಚಿಗುರೊಡೆದು ಮಲ್ಲಿಗೆ ಮೆಲ್ಲಗೆ ಘಮಘಮಿಸಿತ್ತು. ದೊಡ್ಡ ದರವಿರಲಿಲ್ಲ. ಹೆಚ್ಚಿನ ಆದಾಯವು ಕೃಷಿಕರ ಕೈ ಸೇರುತ್ತದೆ ಎಂಬ ಗ್ಯಾರಂಟಿಯೂ ಇರಲಿಲ್ಲ. ಹಾಗಿದ್ದರೂ ಮಲ್ಲಿಗೆ ಸುತ್ತಮುತ್ತೆಲ್ಲ ಅರಳುತ್ತಾ ವಿಸ್ತರಿಸುತ್ತಾ ಹೋಗುವುದನ್ನು ಬಿಡಲಿಲ್ಲ.

ರಾಮಕೃಷ್ಣ ಶರ್ಮ ಅವರು ವಿದ್ಯಾಭ್ಯಾಸದ ನಡುವೆ ಕೃಷಿಯತ್ತ ಒಲವು ತೋರಿದರು. ಸ್ನಾತಕೋತ್ತರ ಪದವಿಯ ನಂತರ ಕೆಲ ಕಾಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರೂ ಅವರನ್ನು ಆಕರ್ಷಿಸಿದ್ದು ಕೃಷಿ. ಅವರು ಕೃಷಿಗಿಳಿದಾಗ ರಾಸಾಯನಿಕ ಗೊಬ್ಬರದೇ ಅಬ್ಬರ. ಹೆಚ್ಚು ರಾಸಾಯನಿಕ ಗೊಬ್ಬರ, ಹೆಚ್ಚು ಇಳುವರಿ, ಹೆಚ್ಚು ಆದಾಯ ಎಂಬ ನಂಬಿಕೆ ಎಲ್ಲಡೆಯಿತ್ತು. ಅಡಿಕೆ, ತೆಂಗು, ಕಾಳು ಮೆಣಸು, ಗೇರು, ಮಾವು, ತರಕಾರಿ ಎಲ್ಲದಕ್ಕೂ ರಾಸಾಯನಿಕ ಗೊಬ್ಬರವೇ ಪ್ರಮುಖ ಆಹಾರ. ಆದರೆ ರಾಸಾಯನಿಕ ಗೊಬ್ಬರ ಎಷ್ಟು ಬೇಕು, ಯಾಕೆ ಬೇಕು, ಯಾವ ಮಣ್ಣಿಗೆ ಬೇಕು ಎಂಬ ಮಾಹಿತಿ ಬಹುತೇಕರಿಗೆ ಇಲ್ಲದ ಕಾರಣ ರಾಸಾಯನಿಕ ಗೊಬ್ಬರ ಉಂಡು ಮಣ್ಣು ಹಳಸಿತು. ಆದಾಯಕ್ಕೆ ಕುತ್ತು ಎದುರಾಯಿತು. ಇದೇ ಮಾದರಿ ಮುಂದುವರಿದರೆ ಭವಿಷ್ಯತ್ತಿನ ಬೆಳೆಗೂ ಮಾರಕವಾಗಬಹುದೆಂದು ಎಂದು ಅರಿತ ಶರ್ಮರು ಮರಳಿದ್ದು ಸಾವಯುವಕ್ಕೆ. ವಿಷಯುಕ್ತ ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರವನ್ನು ಬಿಟ್ಟು ಗಿಡಮರಗಳಿಗೆ ಉಣಿಸಿದ್ದು ಸಾವಯುವ ಗೊಬ್ಬರ. 2006 ರಿಂದ ಈವರೆಗೆ ಸಾವಯುವ ಗೊಬ್ಬರವೇ ಆಧಾರ. ಸೊಂಪಾದ ಬೆಳೆಗೆ ಆಹಾರ.
ಸುದೀರ್ಘ ಅವಧಿಯ ಮಲ್ಲಿಗೆ ಕೃಷಿ ಅವರಿಗೆ ಹಲವಾರು ಪಾಠಗಳನ್ನು ಕಲಿಸಿದೆ. ಪ್ರಕೃತಿಯೊಂದಿಗೆ ಗಿಡಮರಗಳ ಒಡನಾಟ-ಒಡಂಬಡಿಕೆಯ ಗುಟ್ಟು ಬಿಚ್ಚಿಟ್ಟಿದೆ. ಶಂಕರಪುರದ ಸುತ್ತಮುತ್ತೆಲ್ಲಾ ಅರಳಿದ ಮಲ್ಲಿಗೆ ಉಡುಪಿ ಮಲ್ಲಿಗೆಯಾಗಿ ಭೌಗೋಳಿಕ ಮಾನ್ಯತೆಯನ್ನು ಪಡೆಯಿತು.
ಮಲ್ಲಿಗೆಯಲ್ಲಿ ಹೊಸ ಪ್ರಯೋಗಗಳು
ಉಡುಪಿ ಶಂಕರಪುರ ಮಲ್ಲಿಗೆ ತಳಿ ಅಭಿವೃದ್ಧಿಪಡಿಸುತ್ತಾ ಗಿಡಗಳನ್ನು ತಯಾರಿಸಿ ಇತರರಿಗೂ ಹಂಚಿದರು. ನೂರು ಗಿಡದಿಂದ ಆರಂಭವಾದ ಅವರ ಮಲ್ಲಿಗೆ ಕೃಷಿ ಈಗ 1250 ಕ್ಕೂ ಹೆಚ್ಚಾಗಿದೆ. 1500 ಕ್ಕೆ ತಲುಪಲು ಗಿಡಗಳು ಸಿದ್ಧವಾಗಿವೆ. ಇವರೀಗ ಮಲ್ಲಿಗೆ ಕೃಷಿಗೆ ಹೆಚ್ಚು ಒಲವು ತೋರಿರುವುದು ಗ್ರೋಬ್ಯಾಗಿನಲ್ಲಿ ಬೆಳೆಯುವುದರತ್ತ. ಪ್ಲಾಸ್ಟಿಕ್ ಚೀಲದಲ್ಲಿ ಬೆಳೆಯುವುದು. ಹೆಚ್ಚು ಅನುಕೂಲ ಎಂಬುದು ಅವರ ಅಭಿಪ್ರಾಯ.

ದಪ್ಪ ಪ್ಲಾಸ್ಟಿಕ್ ಚೀಲದಲ್ಲಿ ನೀರು, ಗೊಬ್ಬರ ಹೀರಿಕೊಂಡು ಗಿಡವು ಉತ್ತಮವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ನೆಲದಲ್ಲಾದರೆ ಮಣ್ಣಿನೊಂದಿಗೆ ಇರುವ ಹುಲ್ಲು, ಕಳೆ ಗಿಡಗಳೂ ನೀರು ಗೊಬ್ಬರದ ಪಾಲು ಪಡೆಯುತ್ತವೆ. ಇದರಿಂದ ಗಿಡಗಳಿಗೆ ಹಾಕಿದ ಗೊಬ್ಬರ, ನೀರು ಪೂರ್ಣ ಪ್ರಮಾಣದಲ್ಲಿ ದಕ್ಕುವುದಿಲ್ಲ. ಮಣ್ಣಿನಲ್ಲಿದ್ದ ಗಿಡಗಳಿಗೆ ಎಲೆ ಚುಕ್ಕೆ ಶೀಲೀಂದ್ರ ಬಾಧೆ. ಹೆಚ್ಚು. ನೆಲಕ್ಕೆ ಪ್ಲಾಸ್ಟಿಕ್ ಹಾಳೆ ಹಾಸಿ ಅದರ ಮೇಲೆ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಗಿಡಗಳನ್ನು ಬೆಳೆಸಿದರೆ ಕಡಿಮೆ ಅಂತರದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಬಹುದು. ಗಿಡಗಳ ಸುತ್ತ ಓಡಾಡಿ ಹೂವಿನ ಕೊಯ್ಲು, ಗೊಬ್ಬರ ನೀಡುವುದೂ ಸುಲಭ. ನೆಲದಲ್ಲಿ ಆದರೆ ಸುತ್ತ ಆವರಿಸಿಕೊಳ್ಳುವ ಕಳೆ ತೆಗೆಯಬೇಕಾಗುತ್ತದೆ. ಇಲ್ಲವಾದರೆ ಗಿಡಗಳಿಗೆ ನೀಡಿದ ಆಹಾರದಲ್ಲಿ ಕಳೆಗಳು ಪಾಲು ಪಡೆದು ಹೆಚ್ಚುವರಿ ಕೆಲಸವಾಗುತ್ತದೆ ಎನ್ನುತ್ತಾರೆ ಶರ್ಮರು
ಗಿಡಗಳ ನಾಟಿ
ಮಲ್ಲಿಗೆ ಗಿಡಗಳನ್ನು ಕಸಿ ಮಾಡಿ ತೊಟ್ಟೆಯಲ್ಲಿ ಬೆಳೆಸುವುದು ಹೆಚ್ಚು ಸೂಕ್ತ. ಅದರಲ್ಲಿಯೂ ತೊಟ್ಟೆ ಗಿಡಗಳ ಬೇರುಗಳು ನೆಲಕ್ಕೆ ಹೋಗಿರಬಾರದು, ಈ ಬೇರುಗಳು ನೆಲದಾಳಕ್ಕೆ ಇಳಿದರೆ ಲಕೋಟೆ ಗಿಡ ನೆಲದ ಗಿಡವಾಗುತ್ತದೆ. ಗಿಡಗಳನ್ನು ಬೇಕಾದಲ್ಲಿಗೆ ಸ್ಥಳಾಂತರ ಮಾಡಲು ಸಾಧ್ಯವಾಗುವುದಿಲ್ಲ. ಅಧಿಕ ಇಳುವರಿ ಬರುವುದಿಲ್ಲ. ಗಿಡಗಳ ಕಡ್ಡಿ(ತುಂಡು)ಗಳನ್ನು ನೇರ ತೊಟ್ಟೆಯಲ್ಲಿ ಬೆಳೆಸಿದರೆ ಉಳಿಯುವ ಪ್ರಮಾಣ ಕಡಿಮೆ. ಆದರೆ ಕಸಿ ಮಾಡಿದ ಸಸಿಗಳು ಹೆಚ್ಚು ಪ್ರಮಾಣದಲ್ಲಿ ಉಳಿಯುತ್ತವೆ-ಬೆಳೆಯುತ್ತವೆ. ಭೂಮಿಯ ಮೇಲ್ಪದರದ ಮಣ್ಣು, ತರೆಗೆಲೆ ಮತ್ತು ಮರಳು ಸಮ ಪ್ರಮಾಣದ ಹಾಕಿ ಗಿಡಗಳನ್ನು ಬೆಳೆಸುವುದು ಹೆಚ್ಚು ಸಮಂಜಸ. ರಾಸಾಯನಿಕದ ಗೊಬ್ಬರ ಬೇಕಾಗಿಲ್ಲ. ಸಾವಯುವ ಗೊಬ್ಬರದಲ್ಲಿ ಉತ್ತಮ ಫಸಲು ತೆಗೆಯಬಹುದೆಂಬುದಕ್ಕೆ ಅವರು ಸಾಕ್ಷಿ.

ಹಟ್ಟಿಗೊಬ್ಬರ, ನೆಲಗಡಲೆ ಹಿಂಡಿ, ಕಹಿ ಬೇವು ಹಿಂಡಿ, ಸಗಣಿ, ಗೋಮೂತ್ರವನ್ನು ಸೇರಿಸಿ ಮೂರು ದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಅದಕ್ಕೆ ನೀರು ಸೇರಿಸಿ ದ್ರವ ಗೊಬ್ಬರವನ್ನಾಗಿ ಮಾಡಿ ಗಿಡಗಳಿಗೆ ನೀಡುತ್ತಾರೆ. ನೀರಿನ ಪ್ರಮಾಣವು ಕಡಿಮೆ ಸಾಕಾಗುತ್ತದೆ. ಬಿಸಿಲು ಹೂವಿನ ಇಳುವರಿ ಹೆಚ್ಚಿಸಲು ಸಹಕಾರಿ. ನೆರಳಿನಲ್ಲಿ ಬೆಳೆಸಿದರೆ ಇಳುವರಿ ಹೆಚ್ಚು ಸಿಗದು.
ಚಳಿಗಾಲ ಮತ್ತು ಮಳೆಗಾಲ ಮಲ್ಲಿಗೆ ಹೂ ಕಡಿಮೆ
ಎಲ್ಲಾ ಕಾಲದಲ್ಲೂ ಮಲ್ಲಿಗೆ ಹೂ ಒಂದೇ ರೀತಿಯಾಗಿರುವುದಿಲ್ಲ. ಹವಮಾನದ ವ್ಯತಿರಿಕ್ತವೂ ಅದರ ಮೇಲೆ ಪರಿಣಾಮ ಬೀರುತ್ತದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಹೂ ಕಡಿಮೆಯಾಗುತ್ತದೆ. ಆದರೆ ಬೇಸಿಗೆಯಲ್ಲಿ ಹೂವಿನ ಪ್ರಮಾಣ ಹೆಚ್ಚು . ತಿಂಗಳಲ್ಲಿ 15 ದಿವಸ ಜಾಸ್ತಿ ಹೂ ಇದ್ದರೆ ಮತ್ತೆ ಹದಿನೈದು ದಿವಸಗಳು ಇಳುವರಿ ಕಡಿಮೆಯಾಗುತ್ತದೆ. ನಾಲ್ಕು ಮಂದಿ ಇರುವ ಚಿಕ್ಕ ಸಂಸಾರಕ್ಕೆ 50 ಗಿಡ ಮಲ್ಲಿಗೆ ಇದ್ದರೆ ಸಾಕು. ಸರಳ ಬದುಕಿಗೆ ಏನು ಕೊರತೆಯಾಗದು. ವರ್ಷವೊಂದಕ್ಕೆ ಒಂದು ಗಿಡದಲ್ಲಿ ಒಂದು ಸಾವಿರದಿಂದ ಒಂದುವರೆ ಸಾವಿರದ ವರೆಗೆ ಆದಾಯವನ್ನು ಪಡೆಯಬಹುದು. ಮಲ್ಲಿಗೆಗೆ ಬೇಡಿಕೆ ಹಾಗು ಉತ್ತಮ ದರವಿರುವುದರಿಂದ ಮಲ್ಲಿಗೆ ಕೃಷಿ ಮಾಡಿದ ರೈತರಿಗೆ ನಷ್ಟವಾಗದು. ಹೂವೇ ಚಿನ್ನದ ಹಾಗೆ. ಬಾಳು ಬಂಗಾರ ಆಗುವುದಕ್ಕೆ ಮಲ್ಲಿಗೆಯಿಂದಲೂ ಸಾಧ್ಯ. ಕೃಷಿಕ ಸಂಶೋಧಕನಾಗಿರಬೇಕು. ಹೊಸಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು. ಪ್ರಾಯೋಗಿಕ ಪಥ ಒಂದೇ ಅಲ್ಲ. ಬೇರೆಯೂ ಇರುತ್ತದೆ.
ಉದ್ಯೋಗಾವಕಾಶ
ಮಲ್ಲಿಗೆ ಗಿಡಗಳನ್ನು ತಯಾರಿಸುವುದರಿಂದ ಹೂ ನೆಯ್ದು ಮಾಲೆ ಮಾಡಿ ಮಾರಾಟ ಮಾಡುವ ವರೆಗೆ ಹಲವು ಉದ್ಯೋಗಗಳು ಗ್ರಾಮೀಣ ಮಟ್ಟದಲ್ಲಿ ಸೃಷ್ಟಿಯಾಗುತ್ತದೆ. ನರ್ಸರಿ ಗಿಡಗಳು, ಹೂ ಬಿಡುವ ಗಿಡಗಳು ಸೇರಿದಂತೆ 1500 ಗಿಡಗಳ ಆರೈಕೆಗೆ ಮನೆಯವರನ್ನು ಹೊರತುಪಡಿಸಿ ಇಬ್ಬರಿಗೆ ನಿತ್ಯ ಕೆಲಸವಿದೆ. ಆನಂತರ ಹೂಗಳನ್ನು ಮಾಲೆ ಮಾಡುವುದಕ್ಕೆ ನುರಿತ ಕೆಲಸಗಾರರು ಬೇಕೇಬೇಕು. ಹೂ ಕೊಯ್ಯುವುದಕ್ಕೆ, ಮಾಲೆ ಮಾಡುವುದಕ್ಕೆ 6 ಮಂದಿ ಸ್ಥಳೀಯರಿದ್ದಾರೆ. ಅವರು ಎಂಟು ಒಂಬತ್ತು ಗಂಟೆವರೆಗೆ ಕೆಲಸವನ್ನು ಮುಗಿಸಿ ಮತ್ತೆ ಬೇರೆ ಕೆಲಸಗಳಿಗೆ ಹೋಗಬಹುದು. ಆದರೂ ಹೂವಿನ ಕೃಷಿ ಹೂವಿನ ಹಾಸಿಗೆಯಂತಲ್ಲ, ಶ್ರಮವಿದೆ. ನಿರಂತರ ಕೆಲಸವಿದೆ.
ರಾಮಕೃಷ್ಣರ ಕೃಷಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸುತ್ತಾ ಬಂದವರು ಅವರ ಪತ್ನಿ ಶುಭದಾ ಶರ್ಮ. ಪುತ್ರ ಸೂರಜ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಉದ್ಯೋಗದಲ್ಲಿದ್ದಾರೆ. ಮೊದಲು ವಿದೇಶದಲ್ಲಿದ್ದರು. ಈಗ ಬೆಂಗಳೂರಿನಲ್ಲಿದ್ದಾರೆ. ಅವರನ್ನೂ ಮಲ್ಲಿಗೆ ಆಕರ್ಷಿಸಿದೆ. ಹೂವಿನ ಕೃಷಿಯತ್ತ ಒಲವು ಮೂಡಿಸಿದೆ.

ಮಲ್ಲಿಗೆಗೆ ಭಾರೀ ಬೇಡಿಕೆ
ಸಾವಯವ ಮಲ್ಲಿಗೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಮಲ್ಲಿಗೆ ಹೂವು ಚಿನ್ನದಂತಾಗಿದೆ. ಚಿನ್ನವಿಲ್ಲದೇ ಶುಭ ಸಮಾರಂಭಗಳು ನಡೆಯುವುದೇ ಕಡಿಮೆ. ಮಲ್ಲಿಗೆ ಧಾರ್ಮಿಕಾಗಿ, ಪ್ರತಿಷ್ಠೆಯ ಸಂಕೇತವಾಗಿ, ಸೌಂರ‍್ಯ ಜಗತ್ತಿಗೂ ಅವಶ್ಯವಾಗಿರುವುದರಿಂದ ಮಲ್ಲಿಗೆಯಿಲ್ಲದ ಶುಭ ಸಮಾರಂಭ ಗಳನ್ನು ಕಲ್ಪಿಸುವುದೂ ಸಾಧ್ಯವಿಲ್ಲ. ಹಾಗಾಗಿ ಎಲ್ಲೆಡೆಗಳಿಂದಲೂ ಮಲ್ಲಿಗೆ ಬೇಕು ಎನ್ನುವ ಬೇಡಿಕೆ ಜಾಸ್ತಿಯಾಗುತ್ತಲೇ ಇದೆ. ಮಲ್ಲಿಗೆಯ ದರ ಏರುಪೇರಾಗುತ್ತಲೇ ಇದ್ದರೂ ದೊಡ್ಡಮಟ್ಟದ ಬೆಲೆ ಕುಸಿತ ಆಗದು. ಹಾಗಾಗಿ ಮಾರುಕಟ್ಟೆಯಲ್ಲಿ ಮಲ್ಲಿಗೆ ದರ ಸ್ಥಿರತೆ ಹಾಗೂ ಬೇಡಿಕೆ ಎರಡನ್ನೂ ಕಾಯ್ದುಕೊಂಡಿದೆ.
ಮಲ್ಲಿಗೆ ಕೃಷಿಯಲ್ಲಿ ಸಾಕಷ್ಟು ಲಾಭವಿದ್ದರೂ ಮಲ್ಲಿಗೆ ಕೃಷಿಯ ಸಂಘಟಿತ ಮಾರುಕಟ್ಟೆ ಬೆಳೆದ ಊರಲ್ಲಿ ಇರದಿದ್ದರೆ ಬೆಳೆದವರಿಗೆ ಕಷ್ಟ. ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿದ್ದರೆ ಮಲ್ಲಿಗೆ ಕೃಷಿಯ ಆಸಕ್ತಿಯೂ ಕಡಿಮೆಯಾಗಬಹುದು. ಊರಿನಲ್ಲಿ ಮಲ್ಲಿಗೆ ಕಟ್ಟೆ ಇದ್ದರೆ ಮಾರುಕಟ್ಟೆ ಕಂಡುಕೊಳ್ಳುವುದು ಸುಲಭ. ಇಲ್ಲದಿದ್ದರೆ ಕಷ್ಟ. ಆ ಸಂದರ್ಭದಲ್ಲಿ ಮಲ್ಲಿಗೆ ಕೃಷಿ ಮಾಡುವವರು ಒಟ್ಟಾಗಿ ಸೇರಿಕೊಂಡು ಮಲ್ಲಿಗೆ ಕಟ್ಟೆಯನ್ನು ನಿರ್ಮಿಸಬೇಕು, ಇಲ್ಲಿ ರೈತರಿಂದಲೇ ಮಾರುಕಟ್ಟೆ ಸಾಧ್ಯವಿದೆ. ಒಂದು ಅಟ್ಟಿ ಮಲ್ಲಿಗೆಯ ಬೆಲೆ 2100 ರವರೆಗೂ ಇರುವುದರಿಂದ ಬೆಳೆದ ಮಲ್ಲಿಗೆಗೆ ಲಾಭ ತೆಗೆಯುವುದು ಸುಲಭ. ರಾಜ್ಯದ ವಿವಿಧ ಭಾಗಗಳಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಮಲ್ಲಿಗೆಗೆ ಬೇಡಿಕೆ ಇದೆ. ವಿಮಾನದಲ್ಲೂ ವಿವಿಧ ದೇಶಗಳಿಗೆ ಮಲ್ಲಿಗೆಯನ್ನು ಕಳಿಸುವ ವ್ಯವಸ್ಥೆಯೂ ಇದೆ

ಬದುಕು ಕೊಡುವ ಮಲ್ಲಿಗೆ
ಒಳ್ಳೆಯ ಲಾಭವಿದೆ ಎಂದು ಬೇರೇನೂ ಮುಂದಾಲೋಚನೆಯಿಲ್ಲದೇ ಒಮ್ಮೆಲೇ ಸಾವಿರ ಗಿಡಗಳನ್ನು ನೆಡುವುದಕ್ಕಿಂತ, ಮೊದಲು ಒಂದಷ್ಟು ಗಿಡಗಳನ್ನು ನೆಟ್ಟು ಅದನ್ನು ಶ್ರದ್ಧೆಯಿಂದ ಸಾಕಬೇಕು. ಎಕರೆಗಟ್ಟಲೇ ಜಾಗ ಬೇಕೆಂದಿಲ್ಲ. ತಾರಸಿ ಇದ್ದರೂ ಮಲ್ಲಿಗೆ ಕೃಷಿ ಮಾಡಬಹುದು. ಒಳ್ಳೆಯ ಬಿಸಿಲು ಬೀಳುವ ವ್ಯವಸ್ಥೆ ಇದ್ದರಾಯಿತು. ಆಸಕ್ತಿಯ ಜೊತೆಗೆ ಶ್ರದ್ಧೆ ಇದ್ದರೆ ಖಂಡಿತವಾಗಿಯೂ ಮಲ್ಲಿಗೆ ಕೃಷಿ ಮಾಡಿಯೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು, ಬೇರೆ ಯಾವ ಬೆಳೆಯಲ್ಲೂ ಮಲ್ಲಿಗೆಯಷ್ಟು ಆದಾಯವಿಲ್ಲ. ಮೊದಲು 50 ಮಲ್ಲಿಗೆ ಗಿಡ ನೆಟ್ಟು ಅದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ಕೆಲಸಗಾರರಿಗೆ ಕೊಡುವ ಹಣ ಕಳೆದರೂ ಬದುಕಲು ಬೇಕಾದಷ್ಟು ಆದಾಯ ಗಳಿಸಬಹುದು. ವರ್ಷವೊಂದಕ್ಕೆ ಒಂದು ಗಿಡದಿಂದ 1000-2೦೦೦ ರೂ ಪಡೆಯಬಹುದು. ಗಿಡ ಹೆಚ್ಚಿದ್ದರೆ ಚೆನ್ನಾಗಿ ನಿರ್ವಹಣೆ ಮಾಡಿದರೆ ಲಾಭ ಜಾಸ್ತಿ 5೦ ಗಿಡವಿದ್ದರೆ ವರ್ಷಕ್ಕೆ ಒಂದು ಲಕ್ಷ ಆದಾಯಕ್ಕೆ ಕೊರತೆಯಾಗದು ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ರಾಮಕೃಷ್ಣ ಶರ್ಮರು. ಉಪಕೃಷಿಯಾಗಿಯೂ ಮಲ್ಲಿಗೆ ಕೃಷಿಯನ್ನು ಮಾಡಬಹುದು. ಬೇರೆ ವೃತ್ತಿಯ ಜೊತೆಗೂ ಇನ್ನೊಂದು ಆದಾಯದ ಮೂಲವಾಗಿ ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು. ಎನ್ನುವುದು ಅವರ ಅಭಿಪ್ರಾಯ.

ಮಲ್ಲಿಗೆ ಕೃಷಿಕರು ಗಮನಿಸಬೇಕಾದ ಅಂಶಗಳು
ಎಪ್ರಿಲ್ ತಿಂಗಳು ಬಿಟ್ಟು ಬೇರೆ ಸಮಯದಲ್ಲಿ ಬುಡದ ಮಣ್ಣನ್ನು ಸಡಿಲಿಸಬಾರದು
- ಮಳೆಯಿಂದ ಮಣ್ಣಿನ ತೇವಾಂಶ ಹೆಚ್ಚು ಇರುವಾಗ ಗಿಡ ನಾಟಿ ಮಾಡಬಾರದು.
- ಸವರಿಕೆಯನ್ನು ಎಪ್ರಿಲ್ ತಿಂಗಳಲ್ಲಿ ಮಾತ್ರ ಮಾಡಬೇಕು
- ಗೊಬ್ಬರದ ಸಂರಕ್ಷಣೆಯನ್ನು ಸರಿಯಾಗಿ ಮಾಡಬೇಕು. ಗೊಬ್ಬರ ಬಿಸಿಲು ಮತ್ತು ಮಳೆ ನೀರಿಗೆ ಹಾಕಬಾರದು. ಆದರೆ ತೇವಾಂಶವಿರಬೇಕು. 3 ತಿಂಗಳು ಕಳಿತ ಗೊಬ್ಬರ ನೀಡಿದರೆ ಒಳ್ಳೆಯದು. ಗೊಬ್ಬರ ಹಾಕಿದ ಮೇಲೆ ತರಗಲೆ ಮುಚ್ಚಬೇಕು.
- ರಾಸಾಯಿನಿಕ ಗೊಬ್ಬರ ಕ್ರೀಮಿನಾಶಕಗಳನ್ನು ಬಳಸದೆ ಸಾವಯವಕ್ಕೆ ಒತ್ತು ನೀಡಿ.
- ಹೂವಿನ ಗಿಡದ ಬುಡದಲ್ಲಿ ಕಳೆಗಳಿರಬಾರದು. ತರಗೆಲೆ ಅಥವಾ ಪ್ಲಾಸ್ಟಿಕ್ ಹಾಳೆ ಹೊದಿಕೆಯಿಂದ ಕಳೆ ನಿಯಂತ್ರಣ ಸುಲಭ
- ಗಿಡದ ಚಿಗುರು ಮತ್ತು ಎಲೆ ಕಡಿಮೆ ಇದ್ದರೆ ದ್ರವ ರೂಪದ ಗೊಬ್ಬರ ಸಂದರ್ಭನುಸಾರವಾಗಿ ನೀಡಬೇಕು
- ಹೊಸ ಮಣ್ಣು ಕೂಡುವುದಾದರೆ ಕಾಡಿನಲ್ಲಿರುವ ಮೇಲ್ಮಣ್ಣನ್ನು ಎಪ್ರಿಲಿನಲ್ಲಿ ನೀಡಬಹುದು.
- ಗಿಡಗಳ ನಾಟಿಗೆ ಅಧಿಕ ಇಳುವರಿ ನೀಡುವ ತಳಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು
- ಮಾಹಿತಿಗೆ-9686866940






