ಕೃಷಿಬಿಂಬ ಸುದ್ದಿ: ಪ್ರಧಾನಮಂತ್ರಿ ಫಸಲ್ ಬಿಮಾ ಬೆಳೆ ವಿಮಾ ಯೋಜನೆಯಿಂದ ಕೈಬಿಟ್ಟು ನಮ್ಮದೇ ರಾಜ್ಯದ ಹೊಸ ಬೆಳೆ ವಿಮಾ ನೀತಿ ರೂಪಿಸಿಕೊಳ್ಳುವ ಕುರಿತು ನಮ್ಮ ಸರಕಾರ ಯೋಚಿಸುತ್ತಿದೆ ಎಂದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸದನದಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಶಿವಲಿಂಗೇಗೌಡ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.
ಫಸಲ್ ಭೀಮಾ ಯೋಜನೆಯಿಂದ ಗುಜರಾತ್ ಸರ್ಕಾರ ಈ ಯೋಜನೆಯಿಂದ ಹೊರಬಂದು ಬೆಳೆ ವಿಮಾ ನೀತಿ ಮಾಡಿಕೊಂಡಿದೆ. ನಮ್ಮ ರಾಜ್ಯದ ಸರ್ಕಾರದ ಮಟ್ಟದಲ್ಲೂ ಇಂತಹ ಅಗತ್ಯವಿದೆ ಎಂದರು.ಈ ಕುರಿತು ಗಂಭೀರವಾಗಿ ಯೋಚಿಸುತ್ತೇವೆ ಎಂದವರು ಹೇಳಿದರು. ಶಾಸಕ ಶಿವಲಿಂಗೇಗೌಡ ಅವರು, ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನೆಯಲ್ಲಿ ಬಹಳಷ್ಟು ಲೋಪಗಳಿವೆ. ಕೃಷಿಕರಿಗೆ ಸರಿಯಾದ ವಿಮಾ ಸೌಲಭ್ಯ ಸಿಗುತ್ತಿಲ್ಲ. ಖಾಸಗಿ ಕಂಪನಿಗಳಿಗೆ ಅನುಕೂಲವಾಗುತ್ತಿದೆ . ಸಾಸಿವೆ, ಉದ್ದು, ಹೆಸರು ಮತ್ತಿತರೆ ದ್ವಿದಳ ದಾನ್ಯಗಳಿಗೆ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಜೂನ್ 22 ಅನ್ನು ಕೊನೆಯ ದಿನ ಮಾಡಲಾಗಿದೆ. ಆದರೆ, ಮುಂಗಾರು ಆರಂಭವಾಗಿದ್ದೇ ತಡವಾಗಿ. ರೈತರು ಆ ನಂತರವೂ ಈ ಬೆಳೆಗಳನ್ನು ಬಿತ್ತಿದ್ದು ವಿಮೆ ಮಾಡಿಸಲಾಗದೆ ವಂಚಿತರಾಗಿದ್ದಾರೆ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತ ಸಚಿವರು,
ಮನವಿ ಮಾಡಿದರೂ ಪ್ರಯೋಜನವಾಗಿಲ್ಲ:
ರಾಜ್ಯದ್ದೇ ಬೆಳೆ ವಿಮಾ ನೀತಿ ತರುವ ಚಿಂತನೆ ನಡೆದಿರುವುದನ್ನು ತಿಳಿಸಿದರು. ಜೊತೆಗೆ ಉದ್ದು, ಎಳ್ಳು ಮತ್ತು ಶೇಂಗಾ ಬೆಳೆಗಳಿಗೆ ಜೂ. 22 ರಂದು ಕೊನೆಯ ದಿನವಾಗಿತ್ತು. ಇದನ್ನು ವಿಸ್ತರಿಸಲು ನಾವು ಕೇಂದ್ರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದರು. ಆದರೆ, ಹತ್ತಿ, ಅಲಸಂದೆ, ತೊಗರಿ ಮತ್ತಿತರ ಬೆಳೆಗಳಿಗೆ ಜು.31ರವರೆಗೆ ಮತ್ತು ಸೂರ್ಯಕಾಂತಿ, ರಾಗಿ, ಭತ್ತ ಇನ್ನಿತರೆ ಬೆಳೆಗಳಿಗೆ ವಿಮೆ ಮಾಡಿಸಲು ಆ.16ರವರೆಗೆ ಅವಕಾಶವಿದೆ ಎಂದರು.