-ರಾಧಾಕೃಷ್ಣ ತೊಡಿಕಾನ
ತಾನು ಬೆಳೆಯುವ ಬೆಳೆ ವಿಷ ಆಹಾರವಾಗಿ ಮಾರ್ಪಾಡು ಆಗಿರಬಾರದು. ಅವು ಉತ್ತಮ ಗುಣಮಟ್ಟದ್ದಾಗಿರಬೇಕು. ಸತ್ವಯುತವಾಗಿಬೇಕು ಎಂಬ ಉದ್ದೇಶದಿಂದಲೇ ಸಾವಯುವ ಕೃಷಿಯನ್ನು ಆಯ್ಕೆ ಮಾಡಿಕೊಂಡು ದ್ರಾಕ್ಷಿ, ಕಬ್ಬು, ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದೇನೆ ಎನ್ನುತ್ತಾರೆ ಶಿವಾನಂದ ರಾಮಲಿಂಗಪ್ಪ ಜೋತೆಪ್ಪನವರ. ಹೀಗೆ ಹೇಳುವಾಗ ಅವರಲ್ಲಿ ಸಾರ್ಥಕತೆಯ ಭಾವವಿದೆ. ರಾಸಾಯನಿಕಗಳನ್ನು ಬಳಸಿ ಹೆಚ್ಚು ಉತ್ಪಾದಿಸಿ ಹೆಚ್ಚು ಸಂಪಾದಿಸುವ ಬದಲು ಸಾಂಪ್ರದಾಯಿಕವಾದ ಪದ್ಧತಿಯಿಂದ ಬಂದ ಬೆಳೆ ಹಾಗೂ ಆದಾಯಲ್ಲಿ ಸಂತೃಪ್ತಿಯಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರಿನ ಶಿವಾನಂದ ರಾಮಲಿಂಗಪ್ಪ ಜೋತೆಪ್ಪನವರ ಸಾವಯವ ಬೆಳೆಗಾರರು. ದ್ರಾಕ್ಷಿಯನ್ನು ಸಾವಯವದಲ್ಲಿ ಬೆಳೆದು ಗಮನ ಸೆಳೆದವರು. ಸುಮಾರು ೫ ಎಕರೆ ಕೃಷಿ ಭೂಮಿ ಹೊಂದಿರುವ ಶಿವಾನಂದ ಅವರಿಗೆ ತನ್ನ ಕೃಷಿ ಭೂಮಿ ರಾಸಾಯನಿಕಮಯ ಮಾಡುವ ಮನಸ್ಸಿರಲಿಲ್ಲ. ಕ್ರಿಮಿನಾಶಕ ಮತ್ತು ರಾಸಾಯನಿಕ ಮುಕ್ತವಾದ ಬೆಳೆ ಬೆಳೆಯಬೇಕೆಂಬ ಹಂಬಲ. ಅದರಿಂದ ಅವರ ದೃಷ್ಟಿಕೋನವೂ ಬದಲಾಯಿತು.
ವಾಣಿಜ್ಯ ಬೆಳೆಯಾದ ದ್ರಾಕ್ಷಿ ಇವರ ಪ್ರಧಾನ ಬೆಳೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಗಳನ್ನು ಬಳಸಿಕೊಂಡು ದ್ರಾಕ್ಷಿ ಕೃಷಿ ಮಾಡಿದ್ದರೆ ಎಕ್ರೆಯೊಂದಕ್ಕೆ ೧೮-೨೦ ಟನ್‌ವರೆಗೂ ಫಸಲು ಪಡೆಯಬಹುದಿತ್ತು. ಆದರೆ ಶಿವಾನಂದರು ಅತಿ ಆಸೆ ಬಯಸಲಿಲ.್ಲ ಸಾಂಪ್ರದಾಯಿಕವಾದ ಹಳೆ ಪದ್ಧತಿಯನ್ನೇ ಆಯ್ದುಕೊಂಡರು. ಸಾವಯವದಲ್ಲೇ ದ್ರಾಕ್ಷಿ ಬೆಳೆದರು. ಇವರಿಗೆ ಎಕ್ರೆಗೆ ಸಿಕ್ಕಿದ್ದು ಬರೆ ಎರಡೂವರೆ ಟನ್ ದ್ರಾಕ್ಷಿ ಅಷ್ಟೇ. ಮೂರು ಎಕರೆ ದ್ರಾಕ್ಷಿ ತೋಟದಲ್ಲಿ ಅವರು ಪಡೆದದ್ದು ಏಳೆಂಟು ಟನ್ ಗಳಷ್ಟು ಮಾತ್ರ.
ರಾಸಾಯಿನಿಕ ಬಳಸಿ, ಕೀಟ ನಾಶಕಗಳನ್ನು ಸಿಂಪಡಿಸಿ ದ್ರಾಕ್ಷಿ ಬೆಳೆದವರ ಲೆಕ್ಕಾಚಾರ ನೋಡಿದರೆ ಶಿವಾನಂದರ ಉತ್ಪಾದನೆ ಹಾಗೂ ಆದಾಯ ತುಂಬಾ ಕಡಿಮೆಯೇ. ಆ ಸಂದರ್ಭದಲ್ಲಿ ಮನಸ್ಸಿಗೆ ಖೇದವಾದರೂ ಒಳಸುರಿಗಳನ್ನು ಖರ್ಚುವೆಚ್ಚಗಳನ್ನು ತುಲನೆ ಮಾಡಿದಾಗ ಈ ಸಾವಯುವ ಪದ್ಧತಿಯ ಉತ್ಪಾದನೆ ಮತ್ತು ಆದಾಯ ಕಡಿಮೆ ಏನಲ್ಲ. ಏಕೆಂದರೆ ಬೆಳೆಗೆ ಬಳಸುವ ಗೊಬ್ಬರವಾಗಲಿ, ರೋಗ ಹತೋಟಿಯ ಔಷಧವಾಗಲಿ ನೈಸರ್ಗಿಕವಾಗಿಯೇ ದೊರೆಯುವಂತದ್ದು. ಸಾವಯುವ ಗೊಬ್ಬರ ಗಿಡಮೂಲಿಕೆಗಳ ಕಷಾಯಗಳಿಂದಲೇ ಆರೈಕೆ-ಪೂರೈಕೆ. ಆದುದರಿಂದ ಖರ್ಚುವೆಚ್ಚ ಅಸಲು ತುಸು ಕಡಿಮಯೇ. ಇವರು ಬೆಳೆದ ದ್ರಾಕ್ಷಿಯಲ್ಲಿ ಆರು ಟನ್ನುಗಳಷ್ಟು ಹಣ್ಣು ಮಾರಾಟ ಮಾಡುತ್ತಾರೆ. ಒಂದು ಟನ್ನಿನದು ಒಣ ದ್ರಾಕ್ಷಿ ತಯಾರಿ.
ಒಣ ದ್ರಾಕ್ಷಿ ತಿಂಡಿ ತಿನಿಸುಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಆಕರ್ಷಕವಾದ ಬಣ್ಣದ ಒಣ ದ್ರಾಕ್ಷಿ ಹಿರಿಕಿರಿಯರನ್ನು ಸೆಳೆಯುತ್ತದೆ. ಆದರೆ ಚೆಂದದ ಬಣ್ಣದ ದ್ರಾಕ್ಷಿಯಲ್ಲಿ ಒಂದಿಷ್ಟು ರಾಸಾಯಿನಿಕದಲ್ಲಿ ಮುಳುಗೆದ್ದುದು ಇರುತ್ತವೆ. ಆದರೆ ಶಿವಾನಂದರು ತಯಾರಿಸುವ ಒಣ ದ್ರಾಕ್ಷಿಗೆ ಚಂದದ ಬಣ್ಣವಿಲ್ಲ. ಆಕರ್ಷಣೆಯೂ ಇಲ್ಲ. ಆದರೆ ಅದರಲ್ಲಿ ಅದರ ನಿಜ ಸ್ವರೂಪವಿದೆ. ಯಾಕೆಂದರೆ ಅವರು ಬಿಸಿಲಲ್ಲಿ ಒಣಗಿಸಿ ಒಣ ದ್ರಾಕ್ಷಿ ತಯಾರಿಸುವುದು. ಸುಮಾರು 28 ದಿನಗಳ ಕಾಲ ಸೂರ್ಯ ಶಾಖದ ಸಹಜ ಪ್ರಕ್ರಿಯೆಯಲ್ಲಿ ಹಣ್ಣುಗಳು ಒಣಗುವುದರಿಂದ ಅದರ ನಿಜ ಬಣ್ಣ ಬಿಟ್ಟರೆ ಕೃತಕ ಬಣ್ಣವಿಲ್ಲ. ತಿಂದಾಗ ರುಚಿ ಮರೆಯಲಾಗದು.
ಮಾರುಕಟ್ಟೆ ಹೇಗೆ ರೈತರು ಮನೆಯಲ್ಲೇ ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಮಾಡುವುದೇ ದೊಡ್ಡ ಸಮಸ್ಯೆ. ಮಾಡಿದ ಉತ್ಪನ್ನಗಳು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಈಡಾಗುತ್ತಾರೆ. ಶಿವಾನಂದರಿಗೆ ಆ ಸಮಸ್ಯೆ ಎದುರಾಗಲಿಲ್ಲ. ಬೆಂಗಳೂರು, ಮೈಸೂರು, ಮಂಗಳೂರು ಹೀಗೆ ಬೇರೆ ಬೇರೆ ಕಡೆಗಳಲ್ಲಿ ಹಣ್ಣನ್ನು ಮಾರಾಟ ಮಾಡುತ್ತಾರೆ. ಇದನ್ನೇ ಕೇಳಿ ಪಡೆಯುವ ಮಾರಾಟಗಾರರೂ ಗ್ರಾಹಕರೂ ಇದ್ದಾರೆ.
ರಾಸಾಯನಿಕ ಬಳಸಿದ ದ್ರಾಕ್ಷಿಗಿಂತ ದರ ಸ್ವಲ್ಪ ಜಾಸ್ತಿ. ಆದರೂ ಯಾರು ಅದರ ಬಗ್ಗೆ ಗೊಣಗಿದವರಿಲ್ಲ. ಚೌಕಾಸಿ ಮಾಡಿದವರಿಲ್ಲ ಎನ್ನುತ್ತಾರೆ ಶಿವಾನಂದರು. ಸಾವಯುವ ದ್ರಾಕ್ಷಿ ಹಣ್ಣು ಕಿಲೋವೊಂದಕ್ಕೆ 120-140-ರೂವರೆಗೂ ಒಣ ದ್ರಾಕ್ಷಿಗೆ ಕೆ.ಜಿ ಒಂದಕ್ಕೆ 400-450 ವರೆಗೂ ಮಾರಾಟವಾಗುತ್ತದೆ.
]ಮುಖ್ಯ ಬೆಳೆ ದ್ರಾಕ್ಷಿಯಾದರೂ ಒಂದು ಎಕರೆ ಕಬ್ಬು ಹಾಗೂ ಇತರ ಆಹಾರ ಧಾನ್ಯಗಳನ್ನು ಬೆಳೆಯುತ್ತಾರೆ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ನೀಡುತ್ತಾರೆ. ಸಾವಯುವ ಮತ್ತು ರಾಸಾಯನಿಕದಲ್ಲಿ ಬೆಳೆದ ಕಬ್ಬಿಗೆ ದರ ಮಾತ್ರ ಒಂದೇ ರೀತಿಯದು. ವ್ಯತ್ಯಾಸವೆನಿಲ್ಲ.
ಕೃಷಿಗೆ ಬಳಸುವುದೇನು?
ದನ ಸಾಕಣೆ ಸಾವಯುವ ಗೊಬ್ಬರಕ್ಕೆ ಪೂರಕವಾದುದು. ಇವರು ಕೂಡ ಸಾವಯವ ಗೊಬ್ಬರಕ್ಕಾಗಿ ಆಕಳನ್ನು ಸಾಕಿದ್ದಾರೆ. ಸಗಣಿ ಮತ್ತು ಅದರ ಉಪ ಉತ್ಪನ್ನಗಳನ್ನೇ ಸಾವಯುವ ಕೃಷಿಗೆ ಬೆಳೆ ಪ್ರಚೋದಕ ಹಾಗೂ ಇಳುವರಿ ಹೆಚ್ಚಳಕ್ಕಾಗಿ ಬಳಸಲಾಗುತ್ತದೆ. ಜೀವಾಮೃತ, ಪಂಚಗವ್ಯ, ಸಾವಯುವ ಗೊಬ್ಬರ ಬಳಕೆಯಾದರೆ ದ್ರಾಕ್ಷಿಗೆ ಬರುವ ರೋಗ ಬಾಧೆ ತಡೆಗೆ ಗಿಡಮೂಲಿಕೆಗಳ ಕಷಾಯ ಬಳಸುತ್ತಾರೆ. ಅದರಿಂದ ಯಶಸ್ಸನ್ನೂ ಪಡೆದಿದ್ದಾರೆ.
ಸಾವಯುವ ಕೃಷಿಯಿಂದ ಭೂಮಿಯು ಮಣ್ಣು ಹಾಳಾಗುವುದಿಲ್ಲ. ಫಲವತ್ತಾಗಿರುತ್ತದೆ. ಜೊತೆಗೆ ಉತ್ತಮವಾದ ಆಹಾರ ಪದಾರ್ಥಗಳನ್ನು ಪಡೆಯಬಹುದು ಎನ್ನುತ್ತಾರೆ ಶಿವಾನಂದರು. ಸಾವಯವದಲ್ಲಿ ಇನ್ನಷ್ಟು ಹೆಚ್ಚು ಇಳುವರಿ ಪಡೆಯಬೇಕು. ಅದರತ್ತ ಗಮನಹರಿಸುವುದಾಗಿ ಹೇಳುವ ಅವರು ರಾಸಾಯಿನಿಕದಲ್ಲಿ ಬೆಳೆದ ಬೆಳೆಗೂ ಸಾವಯುವಲ್ಲಿ ಬೆಳೆದ ಉತ್ಪನ್ನಕ್ಕೂ ಖರ್ಚು ವೆಚ್ಚದಲ್ಲಿ ಅಂತರವಿದೆ. ಸಾವಯವದಲ್ಲಿ ಇಳುವರಿ ಹೆಚ್ಚಿಲ್ಲದಿರಬಹುದು. ಆದರೆ ಕಡಿಮೆ ಖರ್ಚಿನಿಂದ ಉತ್ತಮವಾದ ಉತ್ಪನ್ನವನ್ನೇ ಗ್ರಾಹಕರಿಗೆ ನೀಡಬಹುದು.
ಕಣೇರಿಯ ಶ್ರೀ ಕಾಡಸಿದ್ದೇಶ್ವರ ಶ್ರೀಗಳು ಇವರ ಸಾವಯವ ಕೃಷಿಯಾಸಕ್ತಿಗೆ ಪ್ರೋತ್ಸಾಹಿಸಿದ್ದಾರೆ. ದ್ರಾಕ್ಷಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡವಲ್ಲಿ ದೇಸಿರಿ ನವೀನ್ ಕುಮಾರ್, ಸಂದೀಪ್ ಮಂಜುನಾಥ್, ರತ್ನಾಕರ ಕುಳಾಯಿ, ಬದ್ರಿನಾಥ್, ಹರೇಕೃಷ್ಣ ಕಾಮತ್, ರೂಪೇಶ್ ಕಾಮತ್ ಮತ್ತಿತರರು ಸಹಕಾರ ನೀಡುತ್ತಿರುವುದನ್ನು ನೆನಪಿಸುತ್ತಾರೆ. ಹೆಚ್ಚಿನ ಮಾಹಿತಿಗೆ 9620674807