-ಪ್ರಬಂಧ ಅಂಬುತೀರ್ಥ
ನಾನೊಬ್ಬ ಚಿಕ್ಕ ಮಟ್ಟದ ಗೋ ಸಂವರ್ಧಕ, ನಮ್ಮ ಬಳಿ ದೊಡ್ಡ ಪ್ರಮಾಣದ ಸಗಣಿ ಗೊಬ್ಬರ ಇದೆ. ಈ ಎಲೆಚುಕ್ಕಿ ಸಂವತ್ಸರದಲ್ಲಿ ಎಲ್ಲಾ ಅಡಿಕೆ ಬೆಳೆಗಾರರೂ ತಮ್ಮ ಅಡಿಕೆ ತೋಟದ ಮರಕ್ಕೆ ಕೇವಲ ನೂರು ನೂರು ಗ್ರಾಮ್ ಸಗಣಿ ಗೊಬ್ಬರ ಹಾಕ್ತೀವಿ ಅಂತ ಮನಸು ಮಾಡಿದರೆ ಈಗಿರುವ ಗೋಶಾಲೆಗಳ, ಗೋ ಸಂವರ್ಧನಾ ಕೇಂದ್ರದ ಹಸುಗಳೂ *ಸ್ವಾವಲಂಬಿ* ಆಗುತ್ತವೆ
ಆದರೆ ನಮ್ಮ ರೈತ ಬಂಧುಗಳು ಅತಿ ಕಡಿಮೆ ಬೆಲೆಗೆ ಸಗಣಿ ಸಿಗಬೇಕು ಎನ್ನುವ ದೋರಣೆ ಹೊಂದಿರುತ್ತಾರೆ. ನಮ್ಮ ತಯಾರಿಕೆಯ ಸಗಣಿ ಕಾಂಪೋಸ್ಟ್ ಗೊಬ್ಬರ+ ಸೂಕ್ಷ್ಮಾಣು ಜೀವಿಗಳ ಸಂಯೋಜನೆಯ ಗೊಬ್ಬರ ಟನ್‌ಗೆ ಹನ್ನೆರಡು ಸಾವಿರ ಎಂದು ಗ್ರಾಹಕರಿಗೆ ಹೇಳಿದರೆ ಅವರು ನೋಡೋಣ ಮುಂದಿನ ತಿಂಗಳು ಹೇಳ್ತೀನಿ ಎನ್ನುತ್ತಾರೆ. ನಂತರ ಸೊಸೈಟಿಗೆ ಹೋಗಿ “ಕಾಸಿನ ಬೆಲೆ ಇಲ್ಲದ” ಪ್ರೆಸ್ ಮಡ್‌ನ್ನ ಕೊಂಡು ತಂದು ತೋಟಕ್ಕೆ ಹಾಕ್ತಾರೆ. ಪ್ರೆಸ್ ಮಡ್ ಗೊಬ್ಬರ ಖಂಡಿತವಾಗಿಯೂ ಕೃಷಿಗೆ ಹಾನಿ ಎಂದು ವಿಜ್ಞಾನಿಗಳೇ ಹೇಳಿದರೂ ಕಿಲೋಗೆ ಎಂಟು ರೂಪಾಯಿಗೆ ಸಿಗುತ್ತದೆ. ಕಡಿಮೆ ಬೆಲೆ ಅಂತ ಕೊಂಡು ಅಡಿಕೆ ಮರದ ಬುಡಕ್ಕೆ ಹಾಕಿ ಸಮಾಧಾನಪಟ್ಟುಕೊಳ್ಳುತ್ತಾರೆ.
ಎಂಥಹ ದುರಂತ ನೋಡಿ, ನಮಗೆ ಒಂದು ಕೆಜಿ ಗೊಬ್ಬರ ತಯಾರಾಗಲು ಸುಮಾರು ಹದಿನೆಂಟು ರೂಪಾಯಿ ಬೀಳುತ್ತದೆ. ಹದಿನೆಂಟು ರೂಪಾಯಿಯ ಗೊಬ್ಬರವನ್ನು ನಾವು ಗ್ರಾಹಕರಿಗೆ ಹೊರೆಯಾಗಬಾರದು ಎಂದು ಹನ್ನೆರಡು ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ. ಈ ಅಮೂಲ್ಯ ಸೂಕ್ಷ್ಮಾಣು ಜೀವಿಯುಕ್ತ ಗೊಬ್ಬರ ತಯಾರಿಕಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಕೊಂಡು ಗೋವುಳಿಸುವ ನಮ್ಮ ಪ್ರಯುತ್ನಕ್ಕೆ ಪ್ರೋತ್ಸಾಹ ನೀಡಿ ತಮ್ಮ ಅಡಿಕೆ ಮರವನ್ನೂ ಸುಫುಷ್ಠಿ ಗೊಳಿಸಿ ತಮಗೂ, ಗೋವುಗಳಿಗೂ ಒಳ್ಳೆಯದು ಮಾಡಿಕೊಳ್ಳಬಹುದು ಮತ್ತು ಒಳ್ಳೆಯದು ಮಾಡಬಹುದು.
ಈ ಪ್ರೆಸ್ ಮಡ್ ಮತ್ತು ಅತಿ ರಾಸಾಯನಿಕ ಗೊಬ್ಬರ ಬಳಕೆ ಇನ್ನ ಹತ್ತು ವರ್ಷಗಳಲ್ಲಿ ಈ ಕೃಷಿ ಭೂಮಿಯ ಸಾರ ನಿಸ್ಸಾರ ಮಾಡಿ ಎಲ್ಲಾ ಬಗೆಯ ಕೃಷಿಯನ್ನೂ ನಾಶ ಮಾಡಲಿದೆ. ರೈತರು ಕೃಷಿ ಉಳಿಸಿಕೊಳ್ಳಲು ಸಗಣಿ ಗೊಬ್ಬರ ಹಾಕಲೇಬೇಕು.. ಅದರ ಅವಶ್ಯಕತೆ ಹಿಂದಿಗಿಂತಲೂ ಈಗ ಹೆಚ್ಚಿದೆ. ಸಂಸ್ಕರಿತ ಸೆಗಣಿ ಗೊಬ್ಬರದಿಂದ ಮಣ್ಣಿನ ಆರೋಗ್ಯವೂ ವೃದ್ಧಿಯಾಗುತ್ತದೆ. ಕೃಷಿ ಇಳುವರಿಯೂ ಹೆಚ್ಚುತ್ತದೆ. ರೈತರು ಸಗಣಿ ಗೊಬ್ಬರವನ್ನು ಖರೀದಿಸುವ ಮನಸ್ಸು ಮಾಡಿದರೆ ಗೋವುಗಳ ಆಹಾರಕ್ಕಾಗಿ ದಾನ ಮಾಡಿ ಎಂದು ಬೇಡುವ ದುಸ್ಥಿತಿಗೆ ಗೋ ಶಾಲೆಗಳು ಬರುತ್ತಿರಲಿಲ್ಲ.
ಇವತ್ತು ಎಂಟು ಹತ್ತು ಎಕರೆ ಅಡಿಕೆ ತೋಟ ಇರುವವರೂ ಒಂದು ಎರಡು ಹಸು ಕೂಡ ಸಾಕರು. ಯಾರಿಗೂ ಗೋವು ಬೇಡವಾಗಿದೆ. ಬದಲಾದ ಕಾಲದಲ್ಲಿ ಎಲ್ಲರಿಗೂ ಗೋವು ಸಾಕಲು ಕಷ್ಟ. ಇರಲಿ ಆದರೆ ಕನಿಷ್ಠ ಇಂತಹ ಗೊಬ್ಬರ ಮೌಲ್ಯವರ್ಧನೆ ಪ್ರಯತ್ನಕ್ಕೆ ರೈತರು ಪ್ರೋತ್ಸಾಹ ಮಾಡಿದರೆ ಖಂಡಿತವಾಗಿಯೂ ಗೋವು ಉಳಿತಾವೆ. ಗೋಶಾಲೆ ಮತ್ತು ಡೈರಿ ಫಾರ್ಮ್ ಎರಡಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಗೋಶಾಲೆಗೆ ಸಗಣಿ ಗೊಬ್ಬರವೇ ಆಧಾರ.
ಡೈರಿ ಫಾರ್ಮ್ನವರಿಗೆ ಸಗಣಿ ಉಪ ಉತ್ಪನ್ನ. ಡೈರಿ ಫಾರ್ಮ್ನವರು ಮೂರು ರೂಪಾಯಿ ಕೆಜಿಗೆ ಸಗಣಿ ಮಾರಾಟ ಮಾಡಿದರೆ ಗಿಟ್ಟುತ್ತದೆ.
ಆದರೆ ಗೋಶಾಲೆಯವರಿಗೆ ಮೂರು ರೂಪಾಯಿ ಸಿಕ್ಕರೆ ನಷ್ಟ. ಸಾಮಾನ್ಯವಾಗಿ ಡೈರಿ ಯವರು ಸಾಕುವುದು ಹೆಚ್ ಎಫ್ ಮತ್ತು ಜೆರ್ಸಿ ಹಸುಗಳು. ಈ ಹೆಚ್ ಎಫ್ ಮತ್ತು ಜೆರ್ಸಿ ಹಸುಗಳ ಒಂದು ಮಿಲಿ ಸಗಣಿಯಲ್ಲಿ ಇರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕೇವಲ ಐವತ್ತು ಲಕ್ಷ ವಾದರೆ ಅದೇ ದೇಸಿ ತಳಿ ಹಸುಗಳ ಸಗಣಿಯ ಒಂದು ಮಿಲಿಗ್ರಾಂ ಸಗಣಿಯಲ್ಲಿ ಐನೂರು ಕೋಟಿ ಸೂಕ್ಷ್ಮಾಣು ಜೀವಿಗಳು ಲಭ್ಯತೆ ಇರುತ್ತದೆ.
ಸಾಮಾನ್ಯವಾಗಿ ಎಲ್ಲಾ ಗೋಶಾಲೆಗಳಲ್ಲೂ ದೇಸಿ ತಳಿ ಹಸುಗಳೇ ಇರುವುದು. ದೇಸಿ ತಳಿ ಹಸುಗಳ ಸಗಣಿ ಖಂಡಿತವಾಗಿಯೂ ಶ್ರೇಷ್ಠ ಮೌಲ್ಯಯುತ. ಇಷ್ಟೆಲ್ಲಾ ಅನುಕೂಲ ಇದ್ದರೂ ರೈತರು ಇದನ್ನು ಅರ್ಥ ಮಾಡಿ ಕೊಳ್ಳದಿದ್ದರೆ ಏನು ಪ್ರಯೋಜನ? ಸಗಣಿ ಗೊಬ್ಬರವನ್ನು ಮೌಲ್ಯವರ್ಧನೆಯನ್ನುಗೊಳಿಸಿ ನೀಡುವ, ಹೀಗೆ ದೇಸಿ ತಳಿ ಹಸುಗಳ ಸಾಕಿ ಸಲಹುವ ನಮ್ಮಂಥವರು ಬೀದಿಯಲ್ಲಿ ನಿಂತು ದನ ಸಾಕಲು ಸಹಾಯ ಮಾಡಿ ಎಂದು ಜೋಳಿಗೆ ಹಿಡಿದು ಬೇಡಬೇಕಾಗುತ್ತದೆ.
ಎಲ್ಲಾ ರೈತ ಬಾಂಧವರಲ್ಲಿ ದೇಸಿ ತಳಿ ಸಾಕುವ ಗೋಶಾಲೆ ಗೋ ಸಂವರ್ಧಕ ಸಮೂಹದ ಎಲ್ಲರ ಪರವಾಗಿ ಕಳಕಳಿಯಿಂದ ಬೇಡಿ ಕೊಳ್ಳುತ್ತಿದ್ದೇವೆ…ದಯಮಾಡಿ ನಮ್ಮ ದೇಸಿ ತಳಿ ಹಸುಗಳ ಸಗಣಿ ಗೊಬ್ಬರ ಮೌಲ್ಯವರ್ಧನೆ ಯ ಪ್ರಯತ್ನ ವನ್ನು ಪ್ರೋತ್ಸಾಹಿಸಿ. ನಮ್ಮ ದೇಸಿ ತಳಿ ಹಸುಗಳು ಸ್ವಾವಲಂಬಿಯಾಗಲಿ.