-ರಾಧಾಕೃಷ್ಣ ತೊಡಿಕಾನ
ಆಡು ಮುಟ್ಟದ ಸೊಪ್ಪಿಲ್ಲ ಎಂಬುದು ಗಾದೆ ಮಾತು. ಆಡುಸೋಗೆಯನ್ನು ಹೊರತು ಪಡಿಸಿ ಉಳಿದ ಹಸಿರೆಲೆ ಚಿಗುರುಗಳ ಮೇಲೆ ಬಾಯಾಡಿಸದೆ ಬಿಡುವುದಿಲ್ಲ. ತಮ್ಮ ಉದರ ಪೋಷಣೆಗಾಗಿ ಪರಿಸರದ ಖಾಲಿ ಜಾಗಗಳಲಿ, ಹೊಲಗದ್ದೆಗಳಲ್ಲಿ ಗುಡ್ಡ ಪರಿಸರದಲ್ಲಿ ನೈಸರ್ಗಿಕವಾದ ಹಸಿರು ಮೇವು ತಿನ್ನುತ್ತಾ ತನ್ನೊಡೆಯನಿಗೆ ನಿರ್ದಿಷ್ಟವಾದ ಆದಾಯ ತಂದುಕೊಡಬಲ್ಲವು. ಹಳ್ಳಿಗಳಲ್ಲಿ ರೈತಾಪಿ ವರ್ಗ ಕೃಷಿಗೆ ಪೂರಕವಾಗಿ ದನ ಸಾಕಾಣೆ ಮಾಡುವುದು ಸಾಮಾನ್ಯ. ಮನಸ್ಸಿದ್ದಲ್ಲಿ ಆಡುಗಳನ್ನು ಸಾಕಿ ಸ್ವದ್ಯೋಗ ಕಂಡುಕೊಳ್ಳಬಹುದು
ಮೇಕೆಗಳು ಎಟಿಎಂ ಇದ್ದ ಹಾಗೆ ಎಂಬ ಮಾತಿದೆ. ಆಡು ಸಾಕಾಣಿಕೆಯನ್ನು ನೆಚ್ಚಿಕೊಂಡು ಗ್ರಾಮೀಣ ಆರ್ಥಿಕತೆ ಹಾಗೂ ಸ್ವಾವಲಂಬನೆಯ ಬದುಕಿನಲ್ಲಿ ಯಶಸ್ಸು ಕಾಣುತ್ತಿರುವ ಯುವ ಸಮುದಾಯಗಳಿವೆ. ಅಂತಹವರಲ್ಲಿ ಉಡುಪಿ ಸಮೀಪದ ನಯನಂಪಳ್ಳಿ ಸಂತೆಕಟ್ಟೆ ಬಳಿಯ ಪ್ರವೀಣ ನಾಯ್ಕ್ ಕೂಡಾ ಒಬ್ಬರು. ಕಳೆದ ಆರು ವರ್ಷಗಳಿಂದ ತನ್ನ ವೃತ್ತಿಯ ನಡುವೆ ಹವ್ಯಾಸಕ್ಕಾಗಿ ಆರಂಭಿಸಿದ ಆಡು ಸಾಕಾಣೆ ಈಗ ಪೂರ್ಣ ಪ್ರಮಾಣದ ಉದ್ಯೋಗವಾಗಿ ತೊಡಗಿಸಿಕೊಳ್ಳುವಂತೆ ಅವರನ್ನು ಪ್ರೇರೆಪಿಸಿದೆ.
ಪ್ರವೀಣ್ ನಾಯ್ಕ್ ಎಲೆಕ್ಟ್ರಿಕಲ್ ಡಿಪ್ಲೋಮೊ ಪದವಿ ಪಡೆದ ನಂತರ “ಅಮ್ಮ ಡಿಜೆ ಸೌಂಡ್ಸ್ ಮತ್ತು ಡಿಸೈನರ್” ಎಂಬ ಸಂಸ್ಥೆ ಹುಟ್ಟು ಹಾಕಿ ಮನೆಯ ಡಿಸೈನ್ ಕೆಲಸಗಳನ್ನು ಮಾಡುತ್ತಾ ಬಿಡುವಿಲ್ಲದೆ ದುಡಿಯುವ ಯುವಕ. ಕೃಷಿಕ ಕುಟುಂಬದ ಹಿನ್ನಲೆ ಮತ್ತು ಪ್ರಾಣಿ ಪಕ್ಷಿ ಸಾಕಾಣೆಯ ಒಲವಿದ್ದ ಅವರಿಗೆ ಆಡು ಸಾಕಣೆಯತ್ತ ಮೂಡಿದ ಆಸಕ್ತಿ ಈಗ ಸ್ವಾವಲಂಬನೆಯ ಬದುಕಿಗೆ ಆಡುಗಳೇ ಹೊಸ ದಾರಿಯನ್ನು ತೋರಿಸಿವೆ.
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಿಂದ ಮಾಹಿತಿ ಮಾರ್ಗದರ್ಶನ ಸಲಹೆಗಳನ್ನು ಪಡೆದು ಆರಂಭದಲ್ಲಿ 11 ಆಡುಗಳನ್ನು ಖರೀದಿಸಿ ತಂದಿದ್ದರು. ಅಟ್ಟೊಳಿಗೆ ಮಾದರಿಯಲ್ಲಿ 15×20 ಅಡಿಯ ಆಡಿನ ಕೊಟ್ಟಿಗೆ ನಿರ್ಮಾಣ ಮಾಡಿದ್ದರು. ಸುಮಾರು 1.5 ಲಕ್ಷರೂಪಾಯಿ ಅದಕ್ಕಾಗಿ ವ್ಯಯಿಸಿದ್ದರು. ಶೆಡ್ ಒಳಗೆ ಸಾಕುವ ಆಡುಗಳಾದರೆ ಹೆಚ್ಚೇನೂ ಜಾಗ ಬೇಕಾಗಿಲ್ಲ. ಕಡಿಮೆ ಪ್ರದೇಶದಲ್ಲಿ ಸಾಮರ್ಥ್ಯಕ್ಕನುಗುಣವಾಗಿ ಆಡುಗಳನ್ನು ಸಾಕಬಹುದು. ನಾಯ್ಕ್ ಅವರ ಪರಿಸರದಲ್ಲಿ ಕೃಷಿ ಭೂಮಿ, ಒಂದಿಷ್ಟು ಗುಡ್ಡಗಾಡು ಹಸಿರು ಮೇವು ಪ್ರದೇಶಗಳಿದ್ದವು. ಆದುರಿಂದ ಆಡುಗಳನ್ನು ಮೇಯಿಸಿ ಸಾಕುವುದರತ್ತ ಮನಸ್ಸು ಮಾಡಿದರು.
ಪ್ರವೀಣ್ ಅವರು ಕೆಲಸಕ್ಕೆ ಹೋಗುವ ಮುನ್ನ ಬೆಳಗ್ಗೆ ಮತ್ತು ಬಂದ ನಂತರ ಸಂಜೆ ಹೊಲಗದ್ದೆ ಗುಡ್ಡಗಳತ್ತ ಆಡುಗಳನ್ನು ಕೊಂಡೊಯ್ದು ಮೇಯಿಸಿ ಬರುವುದು ಅವರ ಪಾಳಿಯಾದರೆ ಅದರ ನಡುವೆ ಅವುಗಳನ್ನು ಮೇಯಿಸುವ ಜವಾಬ್ದಾರಿ ಅವರ ಪತ್ನಿ ಸಜಾತಾ ಪಿ.ನಾಯ್ಕ್ ಅವರದ್ದು. ಟೈಲರಿಂಗ್ ಸ್ವ ಉದ್ಯೋಗ ಮಾಡುತ್ತಿರುವ ಸುಜಾತ ಅವರಿಗೂ ಆಡು ಸಾಕುವಲ್ಲಿ ಆಸಕ್ತಿ. ಈಗ ಅವರಲ್ಲಿ 6೦ಕ್ಕೂ ಹೆಚ್ಚು ಆಡುಗಳಿವೆ. ‘ಅಮನ್ ಗೋಟ್ ಫಾರಂ’ ತಲೆಯೆತ್ತಿ ಆರು ವರ್ಷ ಕಳೆದಿದೆ.
ಪ್ರವೀಣ್ ಮತ್ತು ಸುಜಾತ ಪಿ. ನಾಯ್ಕ್ ದಂಪತಿ ಸಾಕಿರುವುದು ಉಸ್ಮಾನಾಬಾದ್ ಮೇಕೆ ತಳಿಗಳನ್ನು. ಹೊಲಗದ್ದೆಗಳಲ್ಲಿ ಬಿಟ್ಟು ಮೇಯಿಸಿ ಸಾಕುವುದಕ್ಕೆ ಅನುಕೂಲವಾದ ತಳಿ. ವರ್ಷಕ್ಕೆ ಎರಡು ಬಾರಿ ಎರಡು ಮರಿ ಹಾಕುತ್ತವೆ. ಈವರೆಗೆ ಮರಿಗಳೂ ಸೇರಿದಂತೆ 300-350 ಆಡಿಗಳನ್ನು ಮಾರಾಟ ಮಾಡಿದ್ದಾರೆ. ಕಿಲೋವೊಂದಕ್ಕೆ 5೦೦ರೂಪಾಯಿಯಂತೆ ಮಾರಾಟ ಮಾಡುವ ಅವರು ಮಾರಾಟಕ್ಕಾಗಿ ಮಾರುಕಟ್ಟೆಗಳನ್ನು ಅಲೆಯ ಬೇಕಾಗಿಲ್ಲ. ಬೇಕಾದ ಗ್ರಾಹಕರು ಮನೆಗೆ ಬಂದು ಕೊಂಡೊಯ್ಯುತ್ತಾರೆ.
ಹಾಲು ಹೆಚ್ಚು ಪೌಷ್ಟಿದಾಯಕ. ಹಲವು ಪೋಷಕಾಂಶಗಳನ್ನು ಹೊಂದಿರುವ ಆಡಿನ ಹಾಲು ಔಷಧೀಯ ಗುಣವುಳ್ಳದ್ದು. ಆದರೆ ಆಡುಗಳು ಹೆಚ್ಚು ಹಾಲು ಕೊಡುವುದಿಲ್ಲ. ಆದ್ದರಿಂದ ಹಾಲನ್ನು ಮಾರಾಟ ಮಾಡುವುದಿಲ್ಲ. ಯಾರಾದರೂ ಔಷಧಿಗೆ ಬೇಕೆಂದು ಕೇಳಿದರೆ ಹಾಲು ಕರೆದು ಕೊಡುವುದನ್ನು ಬಿಟ್ಟರೆ ಉಳಿದೆಲ್ಲವೂ ಮರಿಗಳಿಗೆ ಬಿಡುವುದಾಗಿ ಪ್ರವೀಣ್ ಹೇಳುತ್ತಾರೆ. ಆಡಿನ ಹಾಲು ಮಾರಾಟ ಮಾಡುವುದಾದರೆ ಬೇಡಿಕೆ ಇಲ್ಲವೆಂದಿಲ್ಲ.
ಆಡುಗಳನ್ನು ಬಿಟ್ಟು ಮೇಯಿಸುವುದರಿಂದ ಇತರ ಮೇವು ಕಡಿಮೆ ಸಾಕಾಗುತ್ತದೆ. ಮೆಕ್ಕೆ ಜೋಳ, ನೆಲಗಡಲೆ ಗಿಡ, ಉದ್ದಿನ ಗಿಡ ನೇಫಿಯರ್ ಹುಲ್ಲು ಮೊದಲಾದವುಗಳನ್ನು ಇತರ ಆಹಾರವಾಗಿ ನೀಡುತ್ತಾರೆ. ಒಂದುವರೆ ಎಕ್ರೆ ರಾಗಿ, ಒಂದುವರೆ ಎಕ್ರೆ ಮೆಕ್ಕೆ ಜೋಳವನ್ನು ಸಾವಯುವದಲ್ಲಿ ಬೆಳೆಯುತ್ತಿದ್ದಾರೆ. ಬೆಳೆಯೇನೋ ಉತ್ತಮವಾಗಿದ್ದರೂ ಕಾಡು ಪ್ರಾಣಿ ಪಕ್ಷಿಗಳ ಹಾವಳಿಯಿಂದ ಬೆಳೆಗೆ ತಕ್ಕುದಾದ ಫಸಲು ಗಿಟ್ಟಲಿಲ್ಲ. ಜೋಳದ ದಂಟು ಮತ್ತು ರಾಗಿ ಹುಲ್ಲು ಲಭ್ಯವಾದರೂ ಖರ್ಚುವೆಚ್ಚಗಳನ್ನು ಲೆಕ್ಕ ಹಾಕಿದಾಗ ಅದೇನು ಹೆಚ್ಚು ಪ್ರಯೋಜನಕಾರಿಯೆನಿಸಲಿಲ್ಲ.
ಈ ನಡುವೆ ಆಡು ಸಾಕಾಣೆಯನ್ನೇ ಮುಖ್ಯ ಕಸುಬಾಗಿರಿಸಿಕೊಳ್ಳಬೇಕು, ಇನ್ನೂ ಹೆಚ್ಚಿನ ಆಡುಗಳನ್ನು ಸಾಕಬೇಕು ಉದ್ದೇಶದಿಂದ ಪೆರ್ಡೂರು ಸಮೀಪ ಕೃಷಿ ಭೂಮಿಯನ್ನು ಖರೀದಿಸಿದ್ದು ಅಲ್ಲೇ ಆಡು ಸಾಕಣೆಯ ಕೇಂದ್ರವಾಗಿರಿಸಿಕೊಳ್ಳಬೇಕೆಂಬ ಆಶಯ ಅವರದು. ಆಡುಗಳಿಗೆ ಬೇಕಾದ 50×40 ಅಡಿಯ ಸುಸಜ್ಜಿತ ಕಟ್ಟಡ ಈಗಾಗಲೇ ನಿರ್ಮಿಸಿದ್ದಾರೆ. ಹಸಿರು ಮೇವು ಬೆಳೆಸುವ ಯೋಜನೆ ರೂಪಿಸಿಕೊಂಡಿದ್ದಾರೆ.
ಆಡಿನ ಗೊಬ್ಬರ
ಬೆಳೆಗಳಿಗೆ ಬೇಕಾದ ಕೆಲ ಪೋಷಕಾಂಶಗಳು ಆಡಿನ ಗೊಬ್ಬರದಲ್ಲಿದೆ. ಈಗ ಎಷ್ಟೋ ಮಂದಿ ಕೃಷಿಕರು ಆಡಿನ ಗೊಬ್ಬರವನ್ನು ಹೊರ ರಾಜ್ಯಗಳಿಂದಲೂ ತರಿಸಿಕೊಳ್ಳುತ್ತಿದ್ದಾರೆ. ಈ ಗೊಬ್ಬರಕ್ಕೆ ಬೇಡಿಕೆಯಿರುವುದಿಂದ ಇದರಲ್ಲಿ ಒಂದಿಷ್ಟು ಆದಾಯವನ್ನು ಪಡೆಯಬಹುದು. ತೋಟದ ಬೆಳೆಗಳಿಗೆ, ನರ್ಸರಿಗಳಿಗೆ, ಅಲಂಕಾರಿಕ ಹೂ ಗಿಡಗಳಿಗೆ ಹಾಕಲು ಈ ಗೊಬ್ಬರವನ್ನು ಕೊಂಡೊಯ್ಯುತ್ತಾರೆ.
ಪ್ರವೀಣ್ ಅವರು ಆಡಿನ ಕಂಪೋಸ್ಟ್ ಗೊಬ್ಬರವನ್ನು ತಯಾರಿಸುತ್ತಾರೆ. ಕಿಲೋ ಒಂದಕ್ಕೆ 2೦ರೂಪಾಯಿಯಂತೆ 2.5 ಮತ್ತು 5 ಪ್ಯಾಕೆಟ್ಟುಗಳನ್ನು ಮಾಡಿ ಮಾರಾಟ ಮಾಡುತ್ತಾರೆ. ಆಡಿನ ಗೊಬ್ಬರ ದೊಡ್ಡ ಪ್ರಮಾಣದಲ್ಲಿ ಬೇಕಾದರೂ ಕೊಡುತ್ತಾರೆ. ತೋಟದ ಬೆಳೆಗಾರರರು, ನರ್ಸರಿಯವರು, ಮನೆಗಳಲ್ಲಿರುವ ಅಲಂಕಾರ ಗಿಡಗಳಿಗೆ ಹಾಕಲು ಈ ಗೊಬ್ಬರಕ್ಕೆ ಬೇಡಿಕೆಯಿಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಸಂತೆಕಟ್ಟೆ ಬಳಿಯಲ್ಲಿ ಆಡು, ಆಡಿನ ಹಾಲು, ಗೊಬ್ಬರ ಮಾರಾಟ ಕೇಂದ್ರವನ್ನು ತೆರೆಯಬೇಕೆಂಬ ಯೋಚನೆ ಅವರಲ್ಲಿದೆ. ದನ ಸಾಕಾಣೆಗಿಂತ ಆಡು ಸಾಕಾಣೆ ಖರ್ಚುವೆಚ್ಚಗಳು ಕಡಿಮೆ. ಗ್ರಾಮೀಣ ಭಾಗದ ಯುವಕರು ಮನಸ್ಸಿದ್ದರೆ ಇದನ್ನು ಲಾಭದಾಯಕ ಉದ್ಯಮ -ವ್ಯವಹಾರವಾಗಿ ಮಾಡಿಕೊಳ್ಳಬಹುದು ಎಂಬುದು ಪ್ರವೀಣರ ಅಭಿಪ್ರಾಯವಾಗಿದೆ.
ಇದಲ್ಲದೆ ಔಷಧೀಯ ಗಿಡಗಳನ್ನು ಬೆಳೆಯುತ್ತಾರೆ. ಶತಾವರಿ, ವೀಳ್ಯದೆಲೆ, ಕಾಡುಬಸಳೆ, ಹಿಪ್ಪಲಿ, ಕಿರಾತಕಡ್ಡಿ, ಕಾಡು ಕೊತ್ತಂಬರಿ, ದೊಡ್ಡಪತ್ರೆ, ಪಲಾವ್ ಎಲೆ ಗಿಡಗಳನ್ನು ಮಾಡಿ ಮಾರಾಟ ಮಾಡುವ ಉದ್ದೇಶವಿದೆ. ಅವರ ಸಂಬಂಧಿ ಚಾಂತಾರಿನ ವಿನೋದ್ ಅವರು ಮಾರುಕಟ್ಟೆ, ಮಾಹಿತಿ ಸಹಕಾರಗಳನ್ನು ನೀಡುತ್ತಿದ್ದಾರೆ. ಆಡು ಸಾಕಾಣೆಗೆ ಸರಕಾರದ ಸಹಾಯಧನದ ನೆರವು ಅವರಿಗೆ ದೊರೆತಿದೆಯಲ್ಲದೆ ಸಮಗ್ರ ಕೃಷಿ ಪದ್ಧತಿಯಲ್ಲಿ ಆಡು ಸಾಕಾಣಿಕೆ ಘಟಕದಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಇಲಾಖೆಯು ಗೌರವಿಸಿದೆ
ಮಾಹಿತಿಗೆ ಮೊ. 9964022895, 8970354893