spot_img
Wednesday, October 30, 2024
spot_imgspot_img
spot_img
spot_img

ಕೃಷಿ ಉತ್ಪನ್ನಗಳ ಭೌಗೋಳಿಕ ಸೂಚಿ: ತಿಳಿದುಕೊಳ್ಳಲೇಬೇಕಾದ ಒಂದಷ್ಟು ವಿಷಯಗಳು!

-ಡಾ. ಶರತ್ಚಂದ್ರ ರಾನಡೆ

ಭಾರತವು ವಿಶ್ವವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ನಂತರ ವಿಶ್ವ ಗ್ರಾಮದ ಕಲ್ಪನೆಯಲ್ಲಿ ಇಡೀ ವಿಶ್ವವೇ ಒಂದು ಅಂಗಡಿಯಾಗಿ ಪರಿವರ್ತನೆಗೊಂಡಿದೆ. ತರಹೆವಾರು ವಿದೇಶಿ ಉತ್ಪನ್ನಗಳು ನಮ್ಮ ದೇಶಕ್ಕೆ ಅಸಂಖ್ಯಾ ಸಂಖ್ಯೆಯಲ್ಲಿ ಆಮದಾಗುತ್ತಿವೆ. ಹೀಗೆ ಬೇರೆ ಬೇರೆ ದೇಶದ ಉತ್ಪನ್ನಗಳು ನಮ್ಮ ದೇಶದಲ್ಲಿ ದಾಂಗುಡಿ ಇಟ್ಟರೆ ಸ್ಥಳೀಯ ಪಾರಂಪರಿಕ ಉತ್ಪನ್ನಗಳು ಅಳಿವಿನ ಅಂಚಿಗೆ ಹೋಗುತ್ತವೆ. ಆದ್ದರಿಂದ ನಮ್ಮ ದೇಶದ ಪಾರಂಪರಿಕ ಉತ್ಪನ್ನಗಳು ವಿಶ್ವದ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬರಲು ಅನುಕೂಲವಾಗುವಂತೆ ಅವುಗಳಿಗೆ ವಿಶೇಷ ವಹಿವಾಟಿನ ಅವಕಾಶವನ್ನು ಒದಗಿಸಲು ಭಾರತ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳಲ್ಲಿ

ಜಿಐ ಟ್ಯಾಗ್ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡುವುದು, ಪ್ರಚಾರ ಮತ್ತು ಮಾರಾಟಕ್ಕೆ ಯುನಿಟಿ ಮಾಲ್ ಸ್ಥಾಪಿಸಲು ಉತ್ತೇಜನ, ‘ಒಂದು ಜಿಲ್ಲೆ ಒಂದು ಉತ್ಪನ್ನ’ ರಪ್ತು ಪ್ರೋತ್ಸಾಹ ಯೋಜನೆ, ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗುವ ವೋಕಲ್ ಫಾರ್ ಲೋಕಲ್ ಯೋಜನೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳು ಮುಖ್ಯವಾದವುಗಳು. ಇದರಿಂದ ರೈತರ ಆದಾಯ ಹೆಚ್ಚುತ್ತದಲ್ಲದೆ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ಲಭ್ಯವಾಗುತ್ತದೆ. ಮುಖ್ಯವಾಗಿ ಭಾರತೀಯ ಉತ್ಪನ್ನಗಳ ರಫ್ತು ಪ್ರಮಾಣ ಹೆಚ್ಚಿ ಭಾರತ ಆತ್ಮನಿರ್ಭರತೆಯನ್ನು ಹೊಂದಲು ಸಾಧ್ಯವಾಗುತ್ತದೆ

ಭೌಗೋಳಿಕ ಸೂಚಿಯ ಅರ್ಥ

ಗುಣಮಟ್ಟದ ಉತ್ಪನ್ನಗಳನ್ನು ಅದು ಸಿದ್ಧಗೊಳ್ಳುವ ಅಥವಾ ಉತ್ಪಾದನೆಯಾಗುವ ಭೌಗೋಳಿಕ ಸ್ಥಳದ ಆಧಾರದ ಮೇಲೆ ಗುರುತಿಸುವುದಕ್ಕೆ ಭೌಗೋಳಿಕ ಸೂಚಿ ಅಥವಾ ಜಿಯಾಗ್ರಫಿಕಲ್ ಇಂಡಿಕೇಷನ್ಸ್ ಎಂದು ಕರೆಯುತ್ತೇವೆ. ಸಂಕ್ಷಿಪ್ತವಾಗಿ ಇದನ್ನು ಜಿಐ ಎಂದು ಕರೆಯಲಾಗುತ್ತದೆ. ಮತ್ತು ಜಿಐ ಉತ್ಪನ್ನಗಳನ್ನು ಜಿಐ ಟ್ಯಾಗ್ ಉತ್ಪನ್ನಗಳು ಅಥವಾ ಜಿಐ ಸೂಚಿತ ಉತ್ಪನ್ನಗಳು ಎಂದು ಕರೆಯುತ್ತೇವೆ

ಭೌಗೋಳಿಕ ಸೂಚಿ ಉತ್ಪನ್ನಗಳ ಗುಣಲಕ್ಷಣಗಳು

ಭೌಗೋಳಿಕ ಉತ್ಪನ್ನಗಳು ತಮ್ಮದೇ ಆದ ವಿಶಿಷ್ಟ ಗುಣ ಸ್ವಭಾವ ಮತ್ತು ಲಕ್ಷಣಗಳನ್ನು ಹೊಂದಿರುತ್ತವೆ. ಆಯಾ ಸ್ಥಳದ ವಿಶಿಷ್ಟ ಗುಣಗಳನ್ನು ಹೊಂದಿರುತ್ತವೆ. ಪರಂಪರಾಗತ ಸೊಗಡನ್ನು ಹೊಂದಿರುತ್ತವೆ. ಸ್ಥಳೀಯವಾಗಿ ಜನಪ್ರಿಯತೆಯನ್ನು ಮತ್ತು ಪ್ರಾದೇಶಿಕ ಹೆಸರನ್ನು ಹೊಂದಿರುತ್ತವೆ

ಭಾರತದಲ್ಲಿ ಜಿಐ ನೊಂದಣಿ ಕಾಯ್ದೆಯ ಜಾರಿ

ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯ ರಾಷ್ಟ್ರವಾಗಿರುವ ಭಾರತವು 1970 ರ ಪೇಟೆ ಕಾಯಿದೆಯನ್ನು 1995 ರಲ್ಲಿ ತಿದ್ದುಪಡಿ ಮಾಡಿ 1999 ರಲ್ಲಿ ಸರಕುಗಳ ಸೂಚಿ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆಯನ್ನು ರೂಪಿಸಿ ೨೦೦೩ರ ಸೆಪ್ಟೆಂಬರ್ 15 ರಿಂದ ಜಾರಿಗೆ ತಂದಿದೆ. ಇದರಿಂದ ಆಯಾ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವವರು ಒಂದು ಜನಪ್ರಿಯ ಉತ್ಪನ್ನದ ಹೆಸರನ್ನು ಮತ್ತೊಂದುಕ್ಕೆ ಬಳಸುವಂತಿಲ್ಲ ಎಂಬ ಕಾನೂನಿನ ರಕ್ಷಣೆ ಭೌಗೋಳಿಕ ಸೂಚಿ ಉತ್ಪನ್ನಗಳಿಗೆ ಸಿಗುತ್ತವೆ.

ನೋಂದಣಿ ವಿಧಾನ ಮತ್ತು ಅವಧಿ

ಉತ್ಪಾದಕರು ವ್ಯಕ್ತಿಗಳ ಸಂಘಟನೆ ಮತ್ತು ಕಾನೂನು ರೀತಿಯ ಸ್ಥಾಪನೆಯಾದ ಸಂಘ ಸಂಸ್ಥೆಗಳು ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ರಿಜಿಸ್ಟರ್ ಜಿಯೋಗ್ರಾಫಿಕಲ್ ಇಂಡಿಕೇಷನ್ಸ್ ಚೆನ್ನೈ ತಮಿಳ್ ನಾಡು ಈ ಕಚೇರಿಗೆ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬೇಕು. ನೋಂದಣಿ ಅವಧಿ ಹತ್ತು ವರ್ಷಗಳು ನಂತರ ನವೀಕರಿಸಬೇಕಾಗುತ್ತದೆ.

ನೋಂದಣಿಯ ವರ್ಗಾವಣೆ ಅಸಾಧ್ಯ

ನೊಂದಣಿ ಪಡೆದ ಭೌಗೋಳಿಕ ಸೂಚಿಗಳನ್ನು ಪರಬಾರೆ, ವರ್ಗಾವಣೆ, ಅಡಮಾನ ಲೈಸೆನ್ಸಿಂಗ್ ಅಥವಾ ಒಪ್ಪಂದ ಮುಂತಾದ ಕರಾರುಗಳಿಗೆ ಒಳಪಡಿಸಲು ಬರುವುದಿಲ್ಲ. ನೋಂದಣಿಯು ಸಂಬಂಧಿಸಿದ ಉತ್ಪಾದಕರ ಸಾರ್ವಜನಿಕ ಸ್ವಾಮ್ಯದ ಸುಸ್ತಾಗಿರುತ್ತದೆ.

ಟ್ರೇಡ್ ಮಾರ್ಕಿಗಿಂತ ಭಿನ್ನ

ವ್ಯಾಪಾರ ವ್ಯವಹಾರದಲ್ಲಿ ಒಂದು ಉದ್ಯಮದ ಉತ್ಪನ್ನ ಮತ್ತು ಸೇವೆಯನ್ನು ಪ್ರತ್ಯೇಕವಾಗಿ ಗುರುತಿಸುವ ಚಿನ್ಹೆ ಟ್ರೇಡ್ ಮಾರ್ಕ್. ಆದರೆ ಭೌಗೋಳಿಕ ಸೂಚಿಯು ಒಂದು ನಿರ್ದಿಷ್ಟ ಸ್ಥಳದಲ್ಲಿ ಬೆಳೆದು ಬಂದಿರುವ ವಿಶಿಷ್ಟ ಗುಣಲಕ್ಷಣಗಳಿಂದ ಕೂಡಿರುವ ಉತ್ಪನ್ನಗಳನ್ನು ಪ್ರತ್ಯೇಕಿಸಿ ಗುರುತಿಸುವ ವಿಧಾನವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಟ್ರೇಡ್ ಮಾರ್ಕ್ ಹೆಸರೇ ಹೇಳುವಂತೆ ವ್ಯಾಪಾರಕ್ಕೆ ಸಂಬಂಧಿಸದ್ದರೆ ಜಿಯೋಗ್ರಾಫಿಕಲ್ ಇಂಡಿಕೇಷನ್ಸ್ ಹೆಸರೇ ಸೂಚಿಸುವಂತೆ ಪ್ರಾದೇಶಿಕ ಉತ್ಪನ್ನಕ್ಕೆ ಸಂಬಂಧಿಸಿದೆ.

ಮೊದಲ ಭೌಗೋಳಿಕ ಸೂಚಿ ಪಡೆದ ಉತ್ಪನ್ನ

ಭಾರತದಲ್ಲಿ ಡಾರ್ಜಿಲಿಂಗ್ ಚಹಾ 2004-05  ರಲ್ಲಿ ಭೌಗೋಳಿಕ ಸೂಚಿಯನ್ನು ಪಡೆದ ಮೊದಲ ಉತ್ಪನ್ನವಾಗಿದೆ. ಇಂದು ಭಾರತದಲ್ಲಿ 465 ಉತ್ಪನ್ನಗಳು ಭೌಗೋಳಿಕ ಸೂಚಿಯನ್ನು ಪಡೆದಿದೆ.

ಕರ್ನಾಟಕದ ಜಿಐ ಟ್ಯಾಗ್ ಹೊಂದಿರುವ ಉತ್ಪನ್ನಗಳು

ಮೈಸೂರು ರೇಷ್ಮೆ ಮೊಟ್ಟ ಮೊದಲು ಕರ್ನಾಟಕದಲ್ಲಿ ಜಿಐ ಟ್ಯಾಗ್ ಪಡೆದ ಉತ್ಪನ್ನವಾಗಿದೆ, ಮೈಸೂರು ಅಗರಬತ್ತಿ ಮೈಸೂರು ವೀಳ್ಯದೆಲೆ, ನಂಜನಗೂಡಿನ ರಸ ಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಗಂಧದ ಎಣ್ಣೆ, ಮೈಸೂರು ಸ್ಯಾಂಡಲ್ ಸೋಪ್, ಬೆಂಗಳೂರು ನೀಲಿ ದ್ರಾಕ್ಷಿ, ಬೆಂಗಳೂರು ಕೆಂಪು ಉಳ್ಳಾಗಡ್ಡಿ, ಕೊಡಗಿನ ಹಸಿರು ಏಲಕ್ಕಿ, ಕೊಡಗಿನ ಕಿತ್ತಳೆ, ರಾಮನಗರ-ಚನ್ನಪಟ್ಟಣದ ಗೊಂಬೆಗಳು, ದೇವನಹಳ್ಳಿಯ ಚಕ್ಕೋತ, ಕಮಲಾಪುರದ ಕೆಂಪು ಬಾಳೆಹಣ್ಣು, ಸಂಡೂರಿನ ಬಂಜಾರ ಕಸೂತಿ, ಧಾರವಾಡ ಪೇಡ, ಬಾಗಲಕೋಟೆಯ ಇಲಕಲ್‌ಸೀರೆ, ಬ್ಯಾಡಗಿ ಮೆಣಸಿನಕಾಯಿ, ಕಿನ್ನಾಳದ ಆಟಿಕೆಗಳು, ಶಿವಮೊಗ್ಗದ ಅಪ್ಪೆ ಮಿಡಿ, ಉಡುಪಿ ಮಲ್ಲಿಗೆ, ಉಡುಪಿಯ ಮಟ್ಟಿ ಗುಳ್ಳ-ಬದನೆಕಾಯಿ ಮತ್ತು ಕಲ್ಬುರ್ಗಿಯ ಕೆಂಪು ತೊಗರಿ ಹಾಗೂ ವಿಜಯಪುರದ ಇಂಡಿಯ ಲಿಂಬೆಹಣ್ಣು ಸೇರಿದಂತೆ ಕರ್ನಾಟಕದ ಒಟ್ಟು 47  ಉತ್ಪನ್ನಗಳು ಜಿಐ ಟ್ಯಾಗ್ ಪಡೆದಿವೆ.

ಇತ್ತೀಚೆಗೆ ಜಿಐ ಟ್ಯಾಗ್ ಪಡೆದ ಉತ್ಪನ್ನಗಳ ವಿಶೇಷತೆಗಳು

ಕಲ್ಬುರ್ಗಿಯ ಕೆಂಪು ತೊಗರಿಗೆ ಈಗಾಗಲೇ ಜಿಐ ಟ್ಯಾಗ್ ದೊರೆತಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಕೆಂಪು ತೊಗರಿಯನ್ನು 9 ಲಕ್ಷ ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತಿದ್ದು ಕಲ್ಬುರ್ಗಿ ತೊಗರಿಯನ್ನು 37  ಲಕ್ಷ ಹೆಚ್ಚಾಗಿ ಬೆಳೆಯಲಾಗುತ್ತಿದೆ. ದೇಶದ ಒಟ್ಟು ಹತ್ತನೇ ಒಂದು ಭಾಗದಷ್ಟು ತೊಗರಿಯನ್ನು ಕಲಬುರ್ಗಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದ್ದು ಕಲ್ಬುರ್ಗಿಯ ತೊಗರಿ ಅಭಿವೃದ್ಧಿ ಮಂಡಳಿಯ ತಮ್ಮದಾದ ತೊಗರಿ ಬೆಳೆಯನ್ನು ಪರಿಚಯಿಸಿದೆ. ಅಲ್ಲದೆ ಕಲ್ಬುರ್ಗಿಯ ತೊಗರಿಯ ಮಂಡಳಿಗೆ ತನ್ನದೇ ಆದ ದಾಲ್ ಮಿಲ್ ಹೊಂದಲು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಪ್ರಾದೇಶಿ ಅಭಿವೃದ್ಧಿ ಮಂಡಳಿಯು ಮೂರು ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ.

ಅಸ್ಸಾಂ ನಿಂಬೆಯ ಬಳಿಕ ವಿಜಯಪುರ ಜಿಲ್ಲೆಯ ಇಂಡಿ ಲಿಂಬೆಗೆ ಭೌಗೋಳಿಕ ಮಾನ್ಯತೆ ದೊರೆತಿದೆ. ರಾಜ್ಯದಲ್ಲಿ ಒಟ್ಟು 21,660  ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆಯನ್ನು ಬೆಳೆಯುತ್ತಿದ್ದು 3000 ರೈತರು ಲಿಂಬೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ವಿಸ್ತೀರ್ಣದಲ್ಲಿ ವಿಜಯಪುರ ಜಿಲ್ಲೆ ಶೇಕಡ 58 ರಷ್ಟು ಅಂದರೆ 12220 ಹೆಕ್ಟೇರ್ ಪ್ರದೇಶವನ್ನು ಹೊಂದಿದ್ದು ವಿಜಯಪುರ ಜಿಲ್ಲೆಯ ಇಂಡಿಯಲ್ಲಿ 5,500 ಹೆಕ್ಟೇರ್ ಪ್ರದೇಶದಲ್ಲಿ ಮತ್ತು ಸಿಂದಗಿಯಲ್ಲಿ 4500 ಹೆಕ್ಟೇರ್ ಪ್ರದೇಶದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಲಿಂಬೆಯನ್ನು ಬೆಳೆಯಲಾಗುತ್ತಿದೆ

ಭೌಗೋಳಿಕ ಸೂಚಿ ಪಡೆಯಲು ಇರುವ ಶರತ್ತುಗಳು

ಉತ್ಪನ್ನಗಳು ನಿರ್ದಿಷ್ಟ ಸ್ಥಳದಲ್ಲೇ ಬೆಳೆಯಲ್ಪಡಬೇಕು. ಉತ್ಪನ್ನಗಳಿಗೆ ವಿಶೇಷ ಗುಣಮಟ್ಟ ಅಥವಾ ಲಕ್ಷಣಗಳಿರಬೇಕು. ಉತ್ಪನ್ನಗಳು ನಿರ್ದಿಷ್ಟ ಸ್ಥಳದಲ್ಲಿ ತಯಾರಾಗಬೇಕು. ಅರ್ಜಿಯಲ್ಲಿ ಉತ್ಪನ್ನಗಳು ಬೆಳೆಯುವ ಅಥವಾ ಸ್ಥಳದ ಹೆಸರನ್ನು ನಮೂದಿಸಬೇಕು. ಸಾಪಿತ ಸಂಘ ಸಂಸ್ಥೆಗಳು ನೋಂದಾಯಿತವಾದ ಹೆಸರನ್ನು ಬಳಸಬೇಕು

ಜಿಐ ಟ್ಯಾಗ್ ಉತ್ಪನ್ನಗಳು ಒಳಗೊಳ್ಳುವ ಅಂಶಗಳು

ಕೃಷಿ ಉತ್ಪನ್ನಗಳನ್ನು ಬೆಳೆಯುವುದು, ಸಂಸ್ಕರಿಸುವುದು ಮತ್ತು ಅವುಗಳ ವ್ಯಾಪಾರ ಅಥವಾ ವೈವಾಟು ನಡೆಸುವುದು, ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಕೆ ಮತ್ತು ವ್ಯಾಪಾರ, ನೈಸರ್ಗಿಕ ಉತ್ಪನ್ನಗಳ ಉತ್ಪಾದನೆ ಮತ್ತು ವೈವಾಟು, ಕರಕುಶಲ ಅಥವಾ ಕೈಗಾರಿಕಾ ವಸ್ತುಗಳ ರಚನೆ ಉತ್ಪಾದನೆ ಮತ್ತು ಮಾರಾಟ, ಆಹಾರ ಪದಾರ್ಥಗಳ ತಯಾರಿಕೆ ವ್ಯವಹಾರ ಅಥವಾ ವ್ಯಾಪಾರ

ಜಿಐ ಟ್ಯಾಗ್ ಪಡೆಯುವುದರಿಂದ ಆಗುವ ಉಪಯೋಗಗಳು

ನೋಂದಾಯಿತ ವಸ್ತುಗಳನ್ನು ಬೇರೆಯವರು ಅನಧಿಕೃತವಾಗಿ ಬಳಸುವುದನ್ನು ತಡೆಗಟ್ಟಬಹುದು. ಭೌಗೋಳಿಕ ಸೂಚಿಕೆಗಳಿಗೆ ಕಾನೂನಿನ ರಕ್ಷಣೆ ದೊರೆತು ಅವುಗಳ ರಫ್ತು ವ್ಯಾಪಾರ ಹೆಚ್ಚುತ್ತದೆ. ರೈತರಿಗೆ ಬೆಲೆ ಕುಸಿತದ ಆತಂಕ ದೂರವಾಗುತ್ತದೆ. ರೈತರಿಗೆ ಆಯಾ ಉತ್ಪನ್ನಗಳ ಪ್ರಾಧಿಕಾರ, ಮಂಡಳಿಗಳಿAದ ನೇರ ಖರೀದಿ ಸೌಲಭ್ಯ ಲಭ್ಯವಾಗುತ್ತದೆ. ರೈತರಿಗೆ ಹೊಲದಿಂದ ಮಾರುಕಟ್ಟೆಗೆ ಸಾಗಿಸುವ ಚಿಂತೆ ದೂರವಾಗುತ್ತದೆ. ಬ್ಯಾಂಡ್‌ನೇಮ್ ನಿಂದ ದೊರೆತ ಬೆಲೆಯಲ್ಲಿ ರೈತರಿಗೆ ಪಾಲು ಸಿಗುತ್ತದೆ.

ಜಿಐ ನೋಂದಣಿ ವ್ಯಾಪಾರ ಅಥವಾ ವಹಿವಾಟಿಗೊಂದು ಅತ್ಯುತ್ತಮ ಉಪಕರಣವಾಗುತ್ತದೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ. ಪರಂಪರಾಗತ ಸಂಪತ್ತು ಹಾಗೂ ಜ್ಞಾನದ ರಕ್ಷಣೆಯಾಗುತ್ತದೆ ಸ್ಥಳೀಯ ಉತ್ಪನ್ನಗಳಿಗೆ ವೋಕಲ್ ಫಾರ್ ಲೋಕಲ್ ಅಥವಾ ಧ್ವನಿಯಾಗಲು ಸಾಧ್ಯವಾಗುತ್ತದೆ. ಉತ್ಪನ್ನಗಳ ನಕಲು ಮಾಡದಂತೆ ತಡೆಯಬಹುದು. ಗುಣಮಟ್ಟವನ್ನು ಹಾಳು ಮಾಡದಂತೆ ರಕ್ಷಣೆ ದೊರೆಯುತ್ತದೆ.  ಗ್ರಾಹಕರಿಗೆ ಉತ್ತಮದರಲ್ಲಿ ಗುಣಾತ್ಮಕ ವಸ್ತುಗಳು ದೊರೆಯುತ್ತವೆ. ಭೌಗೋಳಿಕ ಪ್ರದೇಶದಲ್ಲಿ ಆಯಾ ವಸ್ತುಗಳ ಉತ್ಪಾದಕರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಮತ್ತು ಆಯಾ ಭೌಗೋಳಿಕ ಪ್ರದೇಶದ ಆರ್ಥಿಕ ಅಭಿವೃದ್ಧಿಯಾಗುತ್ತದೆ

ಸರಕಾರದ ಇಲಾಖೆಗಳ ಪಾತ್ರ

ಕೃಷಿ ತೋಟಗಾರಿಕೆ ಅಥವಾ ಕರಕುಶಲ ವಸ್ತುಗಳಿಗೆ ಭೌಗೋಳಿಕ ಸೂಚಿ ಲಭ್ಯವಾಗುವಲ್ಲಿ ಸಂಬAಧಿತ ಇಲಾಖೆಗಳ ಪಾತ್ರವು ಮುಖ್ಯವಾಗಿರುತ್ತದೆ. ಇಲಾಖೆಗಳು ನಿರ್ದಿಷ್ಟ ಉತ್ಪನ್ನವು ಭೌಗೋಳಿಕ ಸೂಚ್ಯಂಕ ಪಡೆಯಲು ಹೇಗೆ ಅರ್ಹ ಆಗಿದೆ ಎಂಬುದನ್ನು ಜಿಯೋಗ್ರಾಫಿಕಲ್ ಇಂಡಿಕೇಷನ್ಸ್ ರಿಜಿಸ್ಟಾçರ್‌ಗೆ ಸಾಕ್ಷಿ ಪುರಾವೆ ಒದಗಿಸಿ ಮನದಟ್ಟು ಮಾಡಬೇಕು ಬೇರೆ ಸಮುದಾಯ ಅಥವಾ ಪ್ರದೇಶದ ಜನರಿಂದ ಆಕ್ಷೇಪ ಎದುರಾದರೆ ಸಮಜಾಯಿಸಿ ನೀಡಬೇಕು. ರೈತರಲ್ಲಿ ಜಿಯ ಮಹತ್ವದ ಅರಿವು ಮೂಡಿಸಬೇಕು.

ಸರಕಾರದ ಪ್ರೋತ್ಸಾಹ

ಕರ್ನಾಟಕ ಸರಕಾರದ 2022-23 ರ ಮುಂಗಡಪತ್ರದಲ್ಲಿ ಚಿಕ್ಕಮಗಳೂರು, ಕೊಡಗು, ಬಾಬಾಬುಡನ್ ಗಿರಿಯ ಜಿಐ ಟ್ಯಗ್ ಹೊಂದಿರುವ ಅರೇಬಿಕಾ ಕಾಫಿ ವೈಶಿಷ್ಟö್ಯವನ್ನು ಜನಪ್ರಿಯಗೊಳಿಸಲು ಕಾಫಿ ಎಕೋ ಟೂರಿಸಮ್ ಪ್ರಾರಂಭಿಸುವ ಬಗ್ಗೆ ಪ್ರಸ್ತಾವನೆ ಇದೆ. ಜೊತೆಗೆ ಮೈಸೂರು ಮಲ್ಲಿಗೆ, ನಂಜನಗೂಡು ರಸ ಬಾಳೆ, ಮೈಸೂರು ವೀಳ್ಯದೆಲೆ ಇವುಗಳ ಉತ್ಪಾದನೆ, ಸಂಶೋಧನೆ ಹಾಗೂ ಮಾರುಕಟ್ಟೆ ಅಭಿವೃದ್ಧಿ ಮಾಡುವ ಬಗ್ಗೆ ತಿಳಿಸಲಾಗಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಜಿಐ ಟ್ಯಾಗ್ ಹೊಂದಿರುವ ಜಿಲ್ಲೆ ಮೈಸೂರು ಆಗಿದೆ. ರಾಜ್ಯದ ೪೬ ಜಿಐ ಟ್ಯಾಗ್ ಉತ್ಪನ್ನಗಳ ಪೈಕಿ 18 ಉತ್ಪನ್ನಗಳು ಮೈಸೂರು ಜಿಲ್ಲೆಗೆ ಸೇರಿವೆ. ಒಟ್ಟಿನಲ್ಲಿ ಯಾವುದೇ ಒಂದು ವಸ್ತು ಭೌಗೋಳಿಕ ಸೂಚ್ಯಂಕವನ್ನು ಪಡೆದುಕೊಂಡರೆ ಅದರ ಜನಪ್ರಿಯತೆ ಹೆಚ್ಚಾಗಿ ಆ ಉತ್ಪನ್ನ ಒಂದು ಬ್ರಾಂಡ್ ಆಗಿ ರೂಪುಗೊಳ್ಳುತ್ತದೆ.

ಯಾವುದೇ ಉತ್ಪನ್ನ ಬ್ರಾಂಡ್ ಆಗಿ ರೂಪುಗೊಂಡಾಗ ಸಹಜವಾಗಿ ಮಾರುಕಟ್ಟೆಯಲ್ಲಿ ಆದರೆ ಬೇಡಿಕೆ ಹೆಚ್ಚುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆ ಉತ್ಪನ್ನ ವಿಶಿಷ್ಟ ಸ್ಥಾನವನ್ನು ಪಡೆದು ರಫ್ತು ಯೋಗ್ಯವಾಗಿ ರೂಪುಗೊಳ್ಳುತ್ತದೆ. ಕೇಂದ್ರ ಸರ್ಕಾರ ಜಿಐ ಟ್ಯಾಗ್ ಉತ್ಪನ್ನಗಳ ಪ್ರಚಾರ ಹಾಗೂ ಖರೀದಿಗಾಗಿ ಯುನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರಕಾರಗಳಿಗೆ ಉತ್ತೇಜನವನ್ನು ನೀಡುತ್ತಿರುವುದವೀದಿಸೆಯಲ್ಲಿ ಧನಾತ್ಮಕ ಹೆಜ್ಜೆಯಾಗಿದೆ. ಜಿಐ ಮಹತ್ವದ ಬಗ್ಗೆ ರೈತರಲ್ಲಿ, ವಿಜ್ಞಾನಿಗಳಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿ ಜಾಗೃತಿ ಮೂಡಿಸಿ ಜಿಐ ಉತ್ಪನ್ನಗಳ ಖರೀದಿ ಹಾಗೂ ಮಾರಾಟಕ್ಕೆ ವಿಶೇಷ ವೇದಿಕೆಯನ್ನು ಸ್ಥಾಪಿಸಿ ನಕಲಿ ಉತ್ಪನ್ನಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಲ್ಲಿ ಕೃಷಿಕರು, ಕುಶಲಕರ್ಮಿಗಳು ಹಾಗೂ ಮೌಲ್ಯವರ್ಧಕರ ಆದಾಯ ಹೆಚ್ಚಿ ರಾಷ್ಟ್ರ ಕೃಷಿ ಕ್ಷೇತ್ರದಲ್ಲಿ ಆತ್ಮ ನಿರ್ಭರತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group