-ಆರ್ ಕೆ ಕಾರ್ಕಳ
ಸಸ್ಯಜನ್ಯ ಸೊಪ್ಪು ಮತ್ತು ಗೆಡ್ಡೆ ಗೆಣಸುಗಳ ಆಹಾರ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ತಮಗರಿವಿಲ್ಲದಂತೆ ಹೆಚ್ಚುತ್ತದೆ. ಈ ಭೂಮಿ ಪ್ರಕೃತಿ ನೀಡಿದ ಗೆಡ್ಡ ಗೆಣಸುಗಳು ಸೊಪ್ಪುಗಳು ನಮಗೆ ಆಹಾರ ಮಾತ್ರವಲ್ಲ ಔಷಧಿಯಾಗಿ ಪರಿಣಮಿಸುತ್ತಾ ಬಂದಿದೆ. ನಿಸರ್ಗದ ಈ ಕೊಡುಗೆಗಳನ್ನು ಅನುಭವಿಸಿದ ಜ್ಞಾನ ಮತ್ತು ಪ್ರಯೋಗಗಳಿಂದ ಆಯಾ ಪ್ರದೇಶ ಹಾಗೂ ಋತುಮಾನಗಳಿಗೆ ಅನುಕೂಲವಾಗಿ ಹಸಿರು ಸೊಪ್ಪು ಹಾಗೂ ಗೆಡ್ಡೆ ಗೆಣಸುಗಳ ಆಹಾರವು ನಮ್ಮ ಪಾಲಿಗೆ ದೊರೆತಿದೆ. ಆದುದರಿಂದಲೇ ಹಸಿರು ಸೊಪ್ಪು ಮತ್ತು ಗೆಡ್ಡೆ ಗೆಣಸು ಸೇವನೆ ನಮ್ಮ ಆಹಾರದ ಮುಖ್ಯ ಭಾಗಗಳಾಗಿವೆ ಕಂದಮೂಲಾದಿಗಳನ್ನು ತಿಂದು ಬದುಕು ಕಟ್ಟಿಕೊಂಡ ದಿನಗಳಿದ್ದವು. ನಾವು ಬಳಸುವ ಸೊಪ್ಪು ಗೆಡ್ಡೆ ಗೆಣಸುಗಳಲ್ಲಿ ಔಷಧೀಯ ಗುಣಗಳಿವೆ ಎಂಬುದು ಇಳಿದಿತ್ತೋ ಇಲ್ಲವೋ; ಅದಂತೂ ನಿಜ. ಇಂತಹ ಆಹಾರಗಳೇ ಔಷಧಿಯಾಗಿ ಕಾರ್ಯನಿರ್ವಹಿಸುತ್ತಾ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗುತ್ತಿದ್ದವು.
ಕಾಡು ಮತ್ತು ನಾಡಿನ ಸೊಪ್ಪುಗಳ ಪಲ್ಯ ಪದಾರ್ಥಗಳು, ಗೆಡ್ಡೆ ಗೆಣಸುಗಳು ಈಗಲೂ ಗ್ರಾಮೀಣ ಜನರ ಊಟದ ತಟ್ಟೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಸುವರ್ಣ ಗೆಡ್ಡೆ, ಕೆಸುವಿನ ಗೆಡ್ಡೆಗಳು ಸಿಹಿ ಗೆಣಸು, ಮರಗೆಣಸು, ನಾಟೆಗೆಣಸು, ಚೂನ ಗೆಣಸು, ಮೂಲಂಗಿ, ಕ್ಯಾರೆಟ್ ಬೀಟ್ರೂಟ್, ಶುಂಠಿ, ಅರಿಶಿನ ಮತ್ತಿತರ ಹಲವು ಗಡ್ಡೆಗಳು ದಿನನಿತ್ಯದ ಅಡುಗೆಯಲ್ಲಿ ಬಳಕೆಯಾಗುತ್ತಲೇ ಇವೆ. ಗ್ರಾಮೀಣ ಭಾಗದಲ್ಲಿ ಜನರು ಬಳಕೆ ಮಾಡುವ ಇತರ ಕಾಡು ಗಡ್ಡೆಗಳು ಹಲವಾರು ಇವೆ. ಅವುಗಳಲ್ಲಿ ಅಪರೂಪವಾದ “ನೊರೆ”ಯೂ ಪ್ರಮುಖವದುದು.
ಅರಣ್ಯವಾಸಿಗಳಾಗಲಿ ಕಾಡಂಚಿನ ಜನರಿಗಾಗಲಿ ಇದರ ಪರಿಚಯ ಈಗಲೂ ಇರಬಹುದು. ಅದರಂತೆ ಸೊಪ್ಪು ತರಕಾರಿಗಳು ಕೂಡಾ. ಬಸಳೆ, ಕೆಸುವಿನ ಸೊಪ್ಪು, ಅಗಸೆ ಸೊಪ್ಪು, ನುಗ್ಗೆ ಸೊಪ್ಪು, ಪುದಿನ, ಪಾಲಕ್, ಮೆಂತ್ಯೆ, ಸಬ್ಬಸಿಗೆ, ಹೊನಗೊನೆ ಸೊಪ್ಪು, ಅಣ್ಣೆ ಸೊಪ್ಪು, ಗಣಿಕೆ ಸೊಪ್ಪು, ತಿಮರೆ, ಎಲೆಕೋಸು, ಹಲವು ಸೊಪ್ಪುಗಳು ನಗರಗಳಲ್ಲೂ ಪರಿಚಿತವಾದರೂ ಕಾಡಿನ ಇನ್ನೂ ಕೆಲವು ಸೊಪ್ಪುಗಳು ಆಹಾರದ ಬಟ್ಟಲಲ್ಲಿವೆ. ಪುನರ್ಪುಳಿ, ಕಾಯರಪುಳಿ ಸೊಪ್ಪು, ಅಮೃತ ಬಳ್ಳಿ ಸೇರಿದಂತೆ ಹಲವು ಗಿಡಮೂಲಿಕೆಗಳ ಸೊಪ್ಪುಗಳು ಬಳಕೆಯಲ್ಲಿವೆ.
ಗೆಡ್ಡೆ ಗೆಣಸುಗಳು ಹಾಗೂ ಹಸಿರು ತರಕಾರಿಗಳನ್ನು ಸೊಪ್ಪುಗಳನ್ನು ಜನತೆಗೆ ಪರಿಚಯಿಸುವ ಪ್ರಯತ್ನಕ್ಕೆ ಮಂಗಳೂರಿನ ಸಾವಯುವ ಗ್ರಾಹಕ ಬಳಗವು ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ರಾಜ್ಯಮಟ್ಟದ ಗೆಡ್ಡೆ ಗೆಣಸು ಮತ್ತು ವಿವಿಧ ಹಸಿರು ಸೊಪ್ಪಿನ ಮೇಳವನ್ನು ಸಾವಯವ ಕೃಷಿಕ ಗ್ರಾಹಕ ಬಳಗ (ರಿ) ಮಂಗಳೂರು ವಿವಿಧ ಸಂಘ ಸಂಸ್ಥೆಯ ಸಹಕಾರದೊಂದಿಗೆ 2025 ಜನವರಿ 4 ಮತ್ತು 5 ರಂದು ಮಂಗಳೂರಿನಲ್ಲಿ ಹಮ್ಮಿಕೊಂಡಿದೆ.
ಈ ಮೇಳದಲ್ಲಿ ಹೆಚ್.ಡಿ ಕೋಟೆಯ ಚನ್ನಕೇಶವ ಮತ್ತು ತಂಡ, ಮೈಸೂರಿನಿಂದ ಆಶಾ ಮತ್ತು ತಂಡ, ಸಹಜ ಸೀಡ್ಸ್, ಪಿರಿಯಪಟ್ಟಣದ ಸುಪ್ರೀತ್ ತಂಡ, ವೈನಾಡಿನ ಶಾಜಿ, ಜೋಯಿಡಾದ ತಂಡಗಳು ತಮ್ಮ ತಮ್ಮಲ್ಲಿರುವ ಅಪೂರ್ವ ಗೆಡ್ಡೆ ಗೆಣಸುಗಳ ಸಂಗ್ರಹವನ್ನು ಪ್ರದರ್ಶನ ಮಾಡಲಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಯ ತರಕಾರಿ ಸೊಪ್ಪು ಮತ್ತು ಗೆಡ್ಡೆ ಗೆಣಸುಗಳ ಬೆಳೆಗಾರರು ಮತ್ತು ಮಾರಾಟಗಾರರು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳಿಗೆ ಗೆಡ್ಡೆ ಗೆಣಸುಗಳ ಮಹತ್ವನ್ನು ಪರಿಚಯಿಸುವ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಗಡ್ಡೆ ಗೆಣಸಿನ ಹಾಗೂ ವಿವಿಧ ಸೊಪ್ಪಿನ ಖಾದ್ಯಗಳ ರುಚಿ ಸವಿಯುವ ಆಹಾರ ಮೇಳವೂ ನಡೆಯಲಿದೆ
ಮಾಹಿತಿಗೆ ಮೊ. 9480682923