-ಪ್ರಬಂಧ ಅಂಬುತೀರ್ಥ
ನಾನು ನನ್ನಂಥವರು ಅಡಿಕೆಯ ಎಲೆಚುಕ್ಕಿ ಶಿಲೀಂಧ್ರ ಬಾಧೆಯ ಬಗ್ಗೆ ಬರೆದಾಗೆಲೆಲ್ಲ ಮಲೆನಾಡಿನ ಅಡಿಕೆ ಬೆಳೆಗಾರರ ಭವಿಷ್ಯ ಏನು …? ಎಂಬ ಚಿಂತನೆ ಮಾಡಿದಾಗ ಕೆಲವರು ನೀವು ನಕಾರಾತ್ಮಕ ವಾಗಿ ಬರೆಯಬೇಡಿ. ಅಡಿಕೆ ಬೆಳೆಗಾರರಿಗೆ ಆಶಾವಾದ ಮೂಡಿಸಿ… ಎನ್ನುವ ಪ್ರತಿಕ್ರಿಯೆ ನೀಡ್ತಾರೆ. ಒಬ್ಬ ಮಲೆನಾಡಿನ ಎಕರೆ ಅಡಿಕೆ ತೋಟದಲ್ಲಿ ಹತ್ತು ಕ್ವಿಂಟಾಲ್ ಅಡಿಕೆ ಬೆಳೆ: ಮೌಲ್ಯ ಅಂದಾಜು ಸುಮಾರು ಐದು ಲಕ್ಷ ರೂಪಾಯಿ ಮೊತ್ತ ದ ಉತ್ಪನ್ನ ಬೆಳೆಯುವವರಿಗೆ ಕಳೆದ ವರ್ಷ ಮತ್ತು ಈ ವರ್ಷ ತೊಂಬತ್ತು ಅಥವಾ ತೊಂಬತ್ತೈದು ಪ್ರತಿಶತ ಅಡಿಕೆ ಇಳುವರಿ ನಷ್ಟ ಆಗಿದೆಯೆಂದರೆ ಅವನು ಪ್ರಸಕ್ತ ಸಾಲಿನಲ್ಲಿ ಜೀವನ ಮಾಡುವುದು ಹೇಗೆ…? ಬಹಳಷ್ಟು ಭಾಗದ ಅಡಿಕೆ ಬೆಳೆಗಾರರಿಗೆ ಈ ಸರ್ತಿ ಬೆಳೆ ವಿಮೆಗೂ ಎಲೆಚುಕ್ಕಿ ಶಿಲೀಂಧ್ರ ಬಾಧೆಯುಂಟಾಗಿದೆ. ವಿಮಾ ಪರಿಹಾರವೂ ಇಲ್ಲವಾಗಿದೆ.
ಕಬ್ಬು ಬತ್ತ ಶುಂಠಿ ಬೆಳೆಗಳು ಒಂದು ವರ್ಷ ಪೂರಾ ನಷ್ಟ ಆದರೂ ಇನ್ನೊಂದು ವರ್ಷ ಅದನ್ನು ಸರಿಪಡಿಸಿಕೊಳ್ಳಬಹುದು. ಆದರೆ ಅಡಿಕೆಯಂತಹ ದೀರ್ಘಕಾಲದ ಬೆಳೆ ಸಂಪೂರ್ಣ ನೆಲ ಕಚ್ಚದರೆ ಬದುಕುವ ಬಗೆ ಹೇಗೆ..? ಅಡಿಕೆ ಬೆಳೆಗಾರರು ತಾಳ್ಮೆಯಿಂದ ಈ ದುರಿತವನ್ನ ಎದುರಿಸಬೇಕು. , ಧೃತಿಗೆಡಬಾರದು ಎಂದು ಸಲಹೆ ನೀಡುತ್ತಾರೆ. ಇದು ಖಂಡಿತವಾಗಿಯೂ ಸರಿ. ಆದರೆ ಒಂದು ಎಕರೆಯ ಅಡಿಕೆ ಬೆಳೆ ಸುಮಾರು ಐದು ಲಕ್ಷ ಉತ್ಪತ್ತಿ ಯಲ್ಲಿ ನಾಲ್ಕು ಲಕ್ಷದ ಐವತ್ತು ಸಾವಿರ ಖೋತ ಆದರೆ ಬೇರೆ ಯಾವ ಸೋರ್ಸೂ ಇಲ್ಲದ ಅಡಿಕೆಯೊಂದರಿಂದಲೇ ಬದುಕು ಕಟ್ಟಿ ಕೊಂಡ ಅತಿ ಸಣ್ಣ ಮತ್ತು ಮದ್ಯಮ ವರ್ಗದ ರೈತರು ಜೀವನ ಮಾಡೋದು ಹೇಗೆ…? ಹೀಗೆ ಮಲೆನಾಡಿನ ಅನೇಕ ರೈತರ ಪರಿಸ್ಥಿತಿಯಾಗಿದೆ..
ಸಣ್ಣಪುಟ್ಟ ಮಧ್ಯಮ ವರ್ಗದವರು ಬ್ಯಾಂಕು, ಸೊಸೈಟಿ ಸಾಲದ ಕಂತು ತೀರಿಸದಿರುವುದು ಹೇಗೆ…? ಸುಂಕದವ ಅಥವಾ ಬಡ್ಡಿಯವ ಅಡಿಕೆ ಬೆಳೆಗಾರರ ಸಂಕಷ್ಟ ಕೇಳ್ತಾನ, ಇವತ್ತು ಒಂದು ಎರಡು ಸಾವಿರ ರೂಪಾಯಿ ಗಳೆಲ್ಲ ಇಪ್ಪತ್ತು ವರ್ಷಗಳ ಹಿಂದಿನ ನೂರು ರೂಪಾಯಿ ಇದ್ದಂತೆ. ಚೀಲ ಪುಟ್ಟ ದುಡ್ಡು ಯಾವುದಕ್ಕೂ ಸಾಲದು.. ಮನೆ ಬಿಟ್ಟರೆ ಖರ್ಚು. ಒಂದು ಇನ್ ಕಮ್ ನಲ್ಲಿ ಎಲ್ಲಾ ನಿರ್ವಹಣೆ ಆಗ್ತಿತ್ತು ಈಗ ಅದೇ ಇಲ್ಲ ಅಂತಾದರೆ…?
ತಿಂಗಳ ತಿಂಗಳ ಗ್ಯಾರಂಟಿ ಸಂಬಳದವರು , ಸರ್ಕಾರಿ ಸಂಬಳದ “ಉಬಯವಾಸಿ” ಕೃಷಿಕರು ಖಂಡಿತವಾಗಿಯೂ ಧೈರ್ಯವಾಗಿ ಈ ಎಲೆಚುಕ್ಕಿ ಶಿಲೀಂಧ್ರ ರೋಗ ಬಾಧೆಯನ್ನು ಹತ್ತು ಹಲವಾರು ಬಗೆಯ ಪ್ರಯತ್ನ ಪ್ರಯೋಗ ಮಾಡುತ್ತಾ ಎದುರಿಸಿ ನಿಲ್ಲ ಬಹುದು … ಇಂದಲ್ಲ ನಾಳೆ ಮಡಚಿದ ಅಡಿಕೆ ಮರದ ಸೋಗೆ ಸೈನಿಕರು ಸೆಲ್ಯುಟ್ ಹೊಡೆದಂತೆ ಎದ್ದು ನಿಲ್ಲಬಹುದು…
ಆದರೆ ಬಡ ಮಧ್ಯಮ ವರ್ಗದ ರೈತರು ಮಡಚಿದ ಸೋಗೆ ಎದ್ದು ನಿಂತು ಮೊದಲಿನ ಅಡಿಕೆ ಇಳುವರಿ ಬರುವ ವರೆಗೂ ಗಟ್ಟಿ ನಿಲ್ಲಲು ಸಾದ್ಯವೇ…? ಸಾಲಗಾರರು ಅಲ್ಲಿ ತನಕ ಅವನನ್ನು ಗಟ್ಟಿಯಾಗಿರಲು ಬಿಡ್ತಾರೆಯೇ…?
ಸಮಾಜ ಸರ್ಕಾರ ರೈತರನ್ನು ಇಂತಹ ಸಂದರ್ಭದಲ್ಲೇ ಕೈಹಿಡಿದು ಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ.
ಪರ್ಯಾಯದ ಬಗ್ಗೆ ಒಂದಷ್ಟು ಚಿಂತನೆಗಳು
ನೇರವಾಗಿ ಅಡಿಕೆ ಯನ್ನೇ ನಂಬಿಕೊಂಡ ಅಡಿಕೆ ಬೆಳೆಗಾರರು ವರ್ತಮಾನ ಮತ್ತು ಭವಿಷ್ಯದ ಕೃಷಿ ಬದುಕಿನ ಬಗ್ಗೆ ಆತಂಕ ಪಟ್ಟು ಮುಂದಿನ ಜೀವನದ ಬಗ್ಗೆ ಚಿಂತನೆ ಮಾಡಬೇಕು..ನಮಗೆ ಅಂದರೆ ಅಡಿಕೆ ಬೆಳೆಗಾರರಿಗೆ ಆತ್ಮವಿಶ್ವಾಸ ತಾಳ್ಮೆ ಇರೋದು ಮಾತ್ರ ವಲ್ಲ ನಮಗೆ ಸಾಲ ಕೊಟ್ಟ ಬ್ಯಾಂಕು , ಸಹಕಾರಿ ಸಂಘಗಳು, ಫೈನಾನ್ಸ್, ಮಂಡಿ ಇತರೆ ಲೇವಾದೇವಿ ಗಳಿಗೆ” ಇವನು” ಇವತ್ತಲ್ಲ ನಾಳೆ ಸಾಲ ಹಿಂದಿರುಗಿಸುತ್ತಾನೆ ಎಂಬ ವಿಶ್ವಾಸ ಇದ್ದರೆ ರೈತರಿಗೆ ಆತ್ಮವಿಶ್ವಾಸ ಮೂಡುತ್ತದೆ ಹಾಗೆಯೇ.. ಜವಾಬ್ದಾರಿಯುತ ಸರ್ಕಾರ ಅಡಿಕೆ ಎಲೆಚುಕ್ಕಿ ಶಿಲೀಂಧ್ರ ಬಾಧೆಗೊಳಗಾದ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಮೂಲ ಬಂಡವಾಳ (ಸಾಲದ ರೂಪದಲ್ಲಿ) ನೀಡಿ ಮತ್ತು ಈ ಸಾಲದ ಕಂತನ್ನ ಪರ್ಯಾಯ ಬೆಳೆಯ ಫಸಲು ಬರುವವ ರೆಗೂ ನೀಡಬೇಕು (ಈ ಯೋಜನೆ ತಾಳೆ ಬೆಳೆ ಕೃಷಿ ಗೆ ಇತ್ತು- ತಾಳೆ ನೆಟ್ಟು ನಾಲ್ಕು ವರ್ಷಗಳ ನಂತರ ಸಾಲದ ಕಂತು ಶುರು ವಾಗುತ್ತಿತ್ತು) .
ಪಶ್ಚಿಮ ಘಟ್ಟದ ಘಟ್ಟಗಳ ಅಂಚಿನ ಊರಿನ ಕೃಷಿ ಭೂಮಿ ಅತಿ ಮಳೆಯಿಂದ ಯಾವುದೇ ಕೃಷಿ ಬೆಳೆಯಲೂ ಅಸಾಹಾಯಕವಾಗಿರುವುದು ಗಮನಾರ್ಹ ಗಂಭೀರ ಸಂಗತಿ. ಸರ್ಕಾರ ಇಲ್ಲಿನ ರೈತರಿಗೆ ವಿಶೇಷವಾಗಿ ಪ್ಯಾಕೇಜ್ ನೀಡಿ ಸಹಕರಿಸಬೇಕು…
ಇವತ್ತು ಮಲೆನಾಡಿನ ರೈತರಿಗೆ ಎಲೆಚುಕ್ಕಿ ಶಿಲೀಂಧ್ರ ರೋಗ ಬಾಧೆ ಎಂದು ವಿಶ್ಲೇಷಣೆ ಮಾಡಿದರೂ ಹವಾಮಾನ ವೈಪರೀತ್ಯಗಳು ಮತ್ತು ಕಾಡು ಪ್ರಾಣಿಗಳ ಮಿತಿಮೀರಿದ ಹಾವಳಿ ಪರ್ಯಾಯ ಬೆಳೆ ಯತ್ತ ಮುಖಮಾಡದಂತೆ ಮಾಡಿದೆ. ಮಲೆನಾಡಿನಲ್ಲಿ ಮುಕ್ಕಾಲುಪಾಲು ವಯೋವೃದ್ದರು ಅಥವಾ ಐವತ್ತು ವರ್ಷ ದಾಟಿದವರೇ ಹೆಚ್ಚಿನ ಜನ ಕೃಷಿ ಯಲ್ಲಿ ಇದ್ದಾರೆ. ಕೂಲಿ ಕಾರ್ಮಿಕರ ಸಂಖ್ಯೆ ಯೂ ಕಡಿಮೆಯಿದೆ.
ಪರ್ಯಾಯ ದ ಅನಿವಾರ್ಯ ಇದ್ದರೂ ಪರ್ಯಾಯ ವನ್ನು ಜಾರಿಗೆ ತರಲು ವಯಸ್ಸು , ಆಸಕ್ತಿ , ಚೈತನ್ಯದ ಕೊರತೆ ಕಾಣಿಸುತ್ತಿದೆ.
ಯಾವುದೇ ರೀತಿಯ ಹೊಸ ಪರ್ಯಾಯ ಬೆಳೆಯೂ ರೈತರ ಭೂಮಿಯಲ್ಲಿ ಆ ಬೆಳೆ ನೆಲೆ ಕಂಡು ಮಾರುಕಟ್ಟೆಯ ನಾಡಿಮಿಡಿತ ರೈತರಿಗೆ ಸಿಕ್ಕಿ ಒಂದು ಹಂತಕ್ಕೆ ಬರಲು ಐದರಿಂದ ಹತ್ತು ವರ್ಷಗಳೇ ಬೇಕಾಗಬಹುದು. ಹಿಂದೆ ಶೃಂಗೇರಿ, ಎನ್ ಆರ್ ಪುರ, ಕೊಪ್ಪ ಭಾಗದಲ್ಲಿ ಹಳದಿ ಎಲೆ ರೋಗ ಭಾದೆ ಅಡಿಕೆ ಬೆಳೆಗೆ ಕಾಡಿದಾಗ ಅರ್ಧದಷ್ಟು ಜನ ರೈತರು ವಲಸೆ ಹೋದರು. ಉಳಿದವರು ಕಾಫಿ ಕಾಳುಮೆಣಸು ಬೆಳೆಗೆ ಬದಲಾಗಿ ಬೆಳೆದು ಅದರಲ್ಲಿ ಬದುಕು ಭವಿಷ್ಯ ಕಂಡರು. ಇದನ್ನೇ ಇವತ್ತು ಬಹಳಷ್ಟು ಜನ ಮಲೆನಾಡಿನ ಈ ಕಡೆಯ ರೈತರಿಗೂ ಉದಾಹರಣೆ ಕೊಟ್ಟು ನೀವೂ ಕಾಫಿ, ಕಾಳುಮೆಣಸು ಬೆಳೆ ಬೆಳೆದು ಅಡಿಕೆಗೆ ಪರ್ಯಾಯ ಕಂಡುಕೊಳ್ಳಿ ಎನ್ನುವ ಸಲಹೆ ನೀಡ್ತಾರೆ. ಆದರೆ ಶೃಂಗೇರಿ ಕೊಪ್ಪ ಭಾಗದ ವಾತಾವರಣ ಮಳೆ ನಿಸರ್ಗ ಆ ಬೆಳೆಗೆ ಪೂರಕವಾಗಿ ಅಲ್ಲಿನ ರೈತರ ಶ್ರಮ ಸಾರ್ಥಕ ಗೊಳಿಸಿತು. ಆದರೆ ಇಲ್ಲಿ ಆ ಬೆಳೆ ಅಷ್ಟು ಸುಲಭವಲ್ಲ. ಅಲ್ಲಿಗಿಂತ ಇಲ್ಲಿ ಹೆಚ್ಚು ಶ್ರಮ ಪಡಬೇಕಾಗುತ್ತದೆ.
ನೀವು ಅಡಿಕೆ ಗಿಡವನ್ನು ರಾಜಸ್ಥಾನದ ಮರುಭೂಮಿಯಲ್ಲಿ ನೀರಿನ ವ್ಯವಸ್ಥೆ ಮಾಡಿ ಸಂಬಾಳಿಸಿದರೆ ಅಲ್ಲೂ ಅಡಿಕೆ ನೆಲೆ ಕಂಡು ಅಡಿಕೆ ಬೆಳೆ ಫಸಲು ಬರುತ್ತದೆ. ಆದರೆ ಕಾಫಿ, ಕಾಳುಮೆಣಸು ಬೆಳಿಗೆ ಇಂತಿಷ್ಟೇ, ನಿಯಮಿತ ಮಳೆ ವಾತಾವರಣದ ಆರ್ದ್ರತೆ , ಇಳಿಜಾರಿನ ಪ್ರದೇಶ ಬಹಳ ಅವಶ್ಯಕ.
ನಮ್ಮ ಮಲೆನಾಡಿನ ಬಹುತೇಕ ಅಡಿಕೆ ತೋಟಗಳು ಸಮ ಮಟ್ಟ ಲೆವೆಲ್ ಇದೆ. ಇಲ್ಲಿ ಇಳಿಜಾರು ಪ್ರದೇಶಗಳಲ್ಲಿ ಕೃಷಿ ಕಡಿಮೆ. ಅಡಿಕೆಗೆ ಎಂದು ಸಿದ್ಧಪಡಿಸಿದ ಜಾಗೆ ಯಲ್ಲಿ ಕಾಫಿ ಕಾಳುಮೆಣಸು ಬೆಳೆ ಅಷ್ಟು ಸುಲಭವಲ್ಲ.
ಕಾಳುಮೆಣಸಿಗೆ ಆಂಶಿಕ ನೆರಳು ಗಾಳಿ ಮತ್ತು ಸೂರ್ಯನ ಬೆಳಕು ಅತಿ ಮುಖ್ಯ ಕಾಫಿ ಗೂ ಮುಖ್ಯ. ಅಡಿಕೆ ಯ ಕೊಳೆ ರೋಗ ಶಿಲೀಂಧ್ರ ಕಾಳುಮೆಣಸಿಗೂ ಹಾನಿ ಮಾಡುವ ಸಾದ್ಯತೆ ಇದೆ.
ಅಡಿಕೆ ಯಲ್ಲಿ ಕಾಳುಮೆಣಸು ಅಡಿಕೆ ಅವಲಂಬಿತ ಕಾಳುಮೆಣಸು ಕೃಷಿ ಗಿಂತ ಕಾಳುಮೆಣಸು ಪ್ರತ್ಯೇಕ ಕಾಡು ಮರ ಅಥವಾ ಆಯಾ ಭಾಗಕ್ಕೆ ಹೊಂದಿಕೆಯಾಗುವ ಗಿಡ/ಮರ ಆಯ್ಕೆ ಮಾಡಿಕೊಳ್ಳಿ…
ಬಂಡವಾಳ ಹೆಚ್ಚು ಹಾಕಿ ಯಾವುದೇ ಹೊಸ ಕೃಷಿ ಸದ್ಯದ ಪರಿಸ್ಥಿತಿಯಲ್ಲಿ ಬೇಡ ಎನಿಸುತ್ತದೆ. ಮೆಕೆಡೊಮಿಯಾ ಅದು ಇದು ಅಂತ ಹೊಸ ಬೆಳೆಗಿಂತ ಕಾಫಿ ಅಥವಾ ಕಾಳುಮೆಣಸು ಉತ್ತಮ. ಕಾಫಿ ಬೆಳೆ ಯನ್ನು ಸಾಮೂಹಿಕವಾಗಿ ಎಲ್ಲಾ ರೈತರು ನಾಟಿ ಮಾಡಿದರೆ ಪರವಾಗಿಲ್ಲ. ಒಂದು ಕೋಗಿನ ಒಂದು ಊರಿನ ಒಬ್ಬಿಬ್ಬರು ಕಾಫಿ ಬೆಳೆಯಲು ಪ್ರಯತ್ನ ಮಾಡಿದರೆ ಕಾಫಿ ಹಣ್ಣಾದರೆ ಕಾಡು ಪ್ರಾಣಿಗಳ ಬಾಯಿಗೆ ಕೊಟ್ಟಂತಾಗುತ್ತದೆ ಅಷ್ಟೇ. ರೈತರು ಕಾಫಿ ಕಾಳುಮೆಣಸು ಹೊಸದಾಗಿ ಬೆಳೆಯುವುದಾದರೆ ಚಾಲ್ತಿ ಕಾಳುಮೆಣಸು ಕಾಫಿ ಬೆಳೆ ಬೆಳೆಯುವ ಕ್ಷೇತ್ರದಲ್ಲಿ ಒಂದಷ್ಟು ಅಧ್ಯಯನ ಮಾಡಿ ನಂತರ ನಾಟಿ ಮಾಡುವುದೊಳಿತು.
ಅಡಿಕೆ ಯಂತಹ ಮಾರುಕಟ್ಟೆ ಸ್ಥಿರತೆ ಇರುವ ಇನ್ನೊಂದು ಬೆಳೆ ಕೃಷಿ ಇಲ್ಲ. ಕಾಳುಮೆಣಸು ಬೆಳೆ ಎರಡು ವರ್ಷಗಳ ಹಿಂದೆಯಷ್ಟೇ ಒಂದು ಗೌರವಯುತ ಬೆಲೆ ದಾಖಲಿಸಿದೆ. ಕಾಫಿ ಬೆಳೆ ಕೂಡ ಅಷ್ಟೇ.
ಬ್ರಜಿಲ್ಲೂ ಗಿಜಿಲ್ಲೂ ಅಂತ ಕೆಲವೊಮ್ಮೆ ಕೊಯ್ದ ಕೂಲಿ ಹುಟ್ಟದಷ್ಟು ಬೆಲೆ ಕುಸಿತ ವಾಗಿದ್ದುದು ಇದೆ. ವಾಣಿಜ್ಯೀಕರಣವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆವ ಬೆಳೆ ಕಾಫಿ. ಮನೆ ಖರ್ಚಿಗೆ ಕಾಫಿ ಬೆಳೆದ ಲೆಕ್ಕಾಚಾರದಲ್ಲಿ ಕಾಫಿ ಬೆಳೆಯುವ ಪ್ರಯತ್ನ ಬೇಡ. ಹಾಗೆಯೇ ಕಾಳುಮೆಣಸು ಕೂಡ ಅಷ್ಟೇ. ಅಡಿಕೆ ಯಷ್ಟು ಲಾಭದಾಯಕ ಆಗಬೇಕು ಅಂತಾದರೆ ಕಾಳುಮೆಣಸಿಗೆ ಅಡಿಕೆ ಯಷ್ಟೇ ಅಥವಾ ಅಡಿಕೆ ಗಿಂತ ಹೆಚ್ಚು ಮುತುವರ್ಜಿ ವಹಿಸಬೇಕು.
ಅಡಿಕೆ ಗೆ ಪರ್ಯಾಯ ಬಹುಶಃ ಅಡಿಕೆ ಬೆಳೆಯೇ. ಅಡಿಕೆ ಬೆಳೆ ಕೆಲವಾರು ವರ್ಷಗಳ ನಂತರ ವಾದರೂ ಮಲೆನಾಡಿಗೆ ಮರಳ ಬಹುದೇನೋ…!!! ಮಲೆನಾಡಿನ ಅಥವಾ ಭಾರತದ ಹಳ್ಳಿಗಳ ನಗರ ವಲಸೆ ಕೃಷಿ ಕ್ಷೇತ್ರದ ಹೊಸ ಪ್ರಯೋಗ ಪ್ರಯತ್ನ ಗಳಿಗೆ ಅಷ್ಟೇನೂ ಉತ್ಸಾಹ ದಾಯಕವಾಗಿಲ್ಲ ಎನಿಸುತ್ತದೆ.
ಕೃಷಿಕ ಬಂಧುಗಳೇ. ಭವಿಷ್ಯದ ಬಗ್ಗೆ ಹೆಚ್ಚು ಜಾಗೃತರಾಗಿ.. ಖರ್ಚು ಕಡಿಮೆ ಮಾಡಿ. ಹೊಸದಾಗಿ ಹೊಸ ಬೆಳೆಗೆ ದಯವಿಟ್ಟು “ಭಾರೀ ಬಂಡವಾಳ ಹೂಡಿಕೆ ಬೇಡ” ಎನ್ನುವುದು ಕಳಕಳೀಯ ಕೋರಿಕೆ. ಜನ ಪ್ರತಿನಿಧಿಗಳು ಮಲೆನಾಡಿನ ಈ ತಲ್ಲಣಗಳು ಮತ್ತು ಸಣ್ಣ ಮತ್ತು ಮಧ್ಯಮ ವರ್ಗದ ಅಡಿಕೆ ಕೃಷಿಯನ್ನೇ ನಂಬಿಕೊಂಡ ವರಿಗೆ ಈ ತುರ್ತಿನಲ್ಲಿ ಜೊತೆ ನಿಂತು ಭರವಸೆಯ ಬೆಳಕು ತೋರಿಸಬೇಕಿದೆ..
ನಿರೀಕ್ಷಿಸೋಣವೇ…
-ಪ್ರಬಂಧ ಅಂಬುತೀರ್ಥ
9481801869






