-ಪ್ರಬಂಧ ಅಂಬುತೀರ್ಥ
ಅದು 1975 ರ ನಂತರದ ಕಾಲ, ಮಲೆನಾಡಿನ ಆ ಕಾಲದ ದೊಡ್ಡ ಜಮೀನ್ದಾರರ ಮಗನೊಬ್ಬ ಆಗಷ್ಟೇ ವಿಧ್ಯಾಭ್ಯಾಸ ಮಾಡಿ ಅಪ್ಪನೊಂದಿಗೆ ಕೃಷಿ ಮಾಡಲು ಬಂದಿದ್ದ. ಆ ಕಾಲದಲ್ಲೂ ಮಲೆನಾಡಿನಲ್ಲಿ ಅಡಿಕೆ ಯೇ ವಾಣಿಜ್ಯ ಬೆಳೆ. ಈ ಕಾಲದಂತೆ ಆ ಕಾಲದಲ್ಲಿ ಗುಡ್ಡ ಬೆಟ್ಟ ಬಯಲಿನಲ್ಲಿ ಅಡಿಕೆ ತೋಟ ಮಾಡುತ್ತಿರಲಿಲ್ಲ.
ಬಹುಶಃ ರಾಸಾಯನಿಕ ಗೊಬ್ಬರ ರಾಸಾಯನಿಕ ಔಷಧ (ಕೋಲ್ಮನ್ ರ ಬೋರ್ಡೋ ಹೊರತಾಗಿ ಬೇರೆ ರಾಸಾಯನಿಕ ಔಷಧ ಗೊತ್ತಿಲ್ಲ) ಬಳಕೆಯಲ್ಲಿರಲಿಲ್ಲ…!! ಪ್ರೆಸ್ ಮಡ್ ಅಂದರೆ ಏನಂತಲೇ ಗೊತ್ತಿರಲಿಲ್ಲ…!!
ಬೇಸಾಯ ಎಂದರೆ ಅತ್ಯಂತ ಅಚ್ಚುಕಟ್ಟಾಗಿ ದೇಸಿ ತಳಿ ಮಲೆನಾಡು ಗಿಡ್ಡ ಹಸುಗಳ ಅತ್ಯುತ್ತಮ ತುಳಕಲು ಗೊಬ್ಬರ…!! ಒಂದೊಂದು ಅಡಿಕೆ ಮರಕ್ಕೆ ಮೂರು ನಾಲ್ಕು ಬುಟ್ಟಿ ಕೊಟ್ಟಿಗೆ ಗೊಬ್ಬರ ಹಾಕ್ತಿದ್ದ ಕಾಲವದು…
ಅಂತಹ ಕಾಲದಲ್ಲೂ ಈ ಕಾಲದ ಎಲೆಚುಕ್ಕಿ ಶಿಲೀಂಧ್ರ ರೋಗ ಬಂದಿತ್ತಂತೆ..
ಆ ಕಾಲದಲ್ಲೂ ಈ ಕಾಲದ ಕೃಷಿಕ ಅಡಿಕೆ ಬೆಳೆಗಾರರಂತೆ ಎಲೆಚುಕ್ಕಿ ಶಿಲೀಂಧ್ರ ರೋಗಕ್ಕೆ ಭಯಪಟ್ಟಿದ್ದರಂತೆ…ನಾನು ಮೊದಲು ಪ್ರಸ್ತಾಪಿಸಿದ ಶ್ರೀಮಂತ ಜಮೀನ್ದಾರರು ಈ ಎಲೆಚುಕ್ಕಿ ಶಿಲೀಂಧ್ರ ರೋಗಕ್ಕೆ ಬೆದರಿ ಯಾತಕ್ಕೂ ಅಡಿಷಿನಲ್ ಆಗಿ ಇನ್ನೊಂದು ಉದ್ಯೋಗ ಇರಲಿ ಅಂತ ತಮ್ಮ ಮಗನನ್ನ ಆ ಕಾಲದಲ್ಲಿ ಊರಿಗೆ ಬಂದಿದ್ದ ಬ್ಯಾಂಕ್ ಒಂದರಲ್ಲಿ ಡಿಪಾಸಿಟ್ ಮಾಡಿ ಕೆಲಸಕ್ಕೆ ಸೇರಿಸಿದ್ದರಂತೆ..!! ಈ ನಲವತ್ತು ಐವತ್ತು ವರ್ಷಗಳಲ್ಲೂ ಎಲೆಚುಕ್ಕಿ ಶಿಲೀಂಧ್ರ ರೋಗ ಹಾಗೆಯೇ ಉಳಿದಿತ್ತು ಈಗ ಹೆಚ್ಚಾಗಿದೆ…
ಶಿಲೀಂಧ್ರ ರೋಗ ಇದುವರೆಗೂ ಉಲ್ಬಣವಾಗದ ಕಾರಣ ಅಡಿಕೆ ಮರಕ್ಕೆ ಇದ್ದ ಚೈತನ್ಯ (ರೈತರು ನೀಡುತ್ತಿದ್ದ ಗೋ ಆಧಾರದ ಸಾವಯವ ಗೊಬ್ಬರ ದ ಕಾರಣದಿಂದ) ಮತ್ತು ನಿಸರ್ಗ ಪೂರಕ ವಾತಾವರಣ.
ಈ ಮೂವತ್ತು ವರ್ಷಗಳ ಈಚೆ ನಮ್ಮ ಮಲೆನಾಡು ಮತ್ತು ಕರಾವಳಿಯ ಜಿಲ್ಲೆಯಲ್ಲಿ ಅಭಿವೃದ್ಧಿಯ ನೆಪದಲ್ಲಿ ಆದ ನಿಸರ್ಗ ನಾಶ ಮತ್ತು ಕೃಷಿ ಗಾಗಿ ಅರಣ್ಯ ಒತ್ತುವರಿ ನಾಶ , ಮಳೆ ಮಾರುತಗಳ ಗಮನಾರ್ಹ ವ್ಯತ್ಯಾಸ…
ಈಗ್ಗೆ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಮಳೆಗಾಲದ ಸಂಧರ್ಭದಲ್ಲಿ ಜೂನ್ ನಿಂದ ಆಗಷ್ಟ್ ತನಕ ಒಂದು ಹಂತದ ಮಳೆ ಅದರ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಕಡಿಮೆ ಆಗಿ ಅಕ್ಟೋಬರ್ ನಲ್ಲಿ ಸಂಪೂರ್ಣ ಮಳೆ ನಿಲ್ಲುತ್ತಿತ್ತು. ಈಗ ಕೆಲವು ವರ್ಷಗಳಿಂದ ಜೂನ್ ತಿಂಗಳಲ್ಲಿ ಮಳೆ ಬರುತ್ತಲೇ ಇಲ್ಲ…!!ಜುಲೈ ಅಥವಾ ಆಗಷ್ಟ್ ನಲ್ಲಿ ಅತಿ ಮಳೆ..
ಸೆಪ್ಟೆಂಬರ್ ನಲ್ಲೂ ಮಳೆ.. ಹಿಂಗಾರು ಮಳೆ ಮಲೆನಾಡು ಕರಾವಳಿಯ ಪ್ರದೇಶದಲ್ಲಿ ಹಿತ ಮಿತವಾಗಿ ಬಂದರೆ ಈ ಪರಿಸರದ ಕೃಷಿಗೆ ಪೂರಕ…!! ಸೆಪ್ಟೆಂಬರ್ ತಿಂಗಳ ಮಳೆ ಮತ್ತು ಶುಷ್ಕ ವಾತಾವರಣ ಎಲೆಚುಕ್ಕಿ ಶಿಲೀಂಧ್ರ ಗಳ ಚಟುವಟಿಕೆಗಳು ಹೆಚ್ಚಲು ಕಾರಣವಾಗಿದೆ. ಸೆಪ್ಟೆಂಬರ್ ಮೊದಲ ವಾರದ ತನಕವೂ ಮಲೆನಾಡು ಕರಾವಳಿಯ ಹೆಚ್ಚಿನ ಯಾವ ರೈತರ ಅಡಿಕೆ ತೋಟದಲ್ಲೂ ಎಲೆಚುಕ್ಕಿ ಶಿಲೀಂಧ್ರ ರೋಗದ ಸುದ್ದಿ ಇರಲಿಲ್ಲ..!! ಸಪ್ಟೆಂಬರ್ ಎರಡನೇ ವಾರದ ಹೊತ್ತಿಗೆ ದಿಡೀರಾಗಿ ಎಲೆಚುಕ್ಕಿ ಶಿಲೀಂಧ್ರ ಅಡಿಕೆ ತೋಟದ ಹಸಿರ ಸೋಗೆಯ ಮೇಲೆ ದಾಂಗುಡಿಯಿಡ್ತು…!! ಸೆಪ್ಟೆಂಬರ್ ನಲ್ಲಿ ಈ ಹಿಂದೆ ಮಳೆ ಬಂದರೂ ಹೀಗೆ ಕುಂಭದ್ರೋಣ ಮಳೆ ಬರುತ್ತಿರಲಿಲ್ಲ…!! ನಮ್ಮಲ್ಲಿ ಅನೇಕ ಮುಂಬೆಳಸಿನ ಅಡಿಕೆ ಬೆಳೆಗಾರರು ಈ ಸಮಯದಲ್ಲಿ ಅಡಿಕೆ ಕೊಯ್ಲು ಶುರು ಮಾಡುತ್ತಿದ್ದರು…!! ಸೆಪ್ಟೆಂಬರ್ ತಿಂಗಳಲ್ಲಿ ಒಂದೊಂದು ಮಳೆ ಬಂದರೂ ಬಿಸಿಲು ಖಾರವಾಗಿ , ಪ್ರಕರವಾಗಿ ಇರುತ್ತಿತ್ತು…
ಆದರೀಗ….ವಾತಾವರಣ fail ಆಗಿದೆ…ಗೌತಮ ಬುದ್ಧನೀಗ ಸಾವಿಲ್ಲದ ಮನೆಯಿಂದ ಸಾಸುವೆ ಕಾಳು ತರಲು ಹೇಳಿದಂತೆ “ಎಲೆಚುಕ್ಕಿ ಬಾಧೆಯಿಲ್ಲದ” ಅಡಿಕೆ ಬೆಳೆಗಾರನ ಮನೆಯಿಂದ ಒಂದು ಮುಷ್ಠಿ ಅಡಿಕೆ ತಗೊಂಡು ಬಾ… ಎನ್ನುವ ಕಾಲ ಬಂದಿದೆ… ಲಗಾಯ್ತಿನಿಂದ ಸುಪ್ತವಾಗಿದ್ದ ಎಲೆಚುಕ್ಕಿ ಶಿಲೀಂಧ್ರ ರೋಗ ಮತ್ತೆ ಎದ್ದು ಅಡಿಕೆ ಸೋಗೆಯ ಮೇಲೆ ಗೊನೆಯ ಮೇಲೆ ರೌದ್ರ ನರ್ತನ ಮಾಡಲು ಎದ್ದು ಕೂತಿದೆ. ಎಲೆಚುಕ್ಕಿ ಶಿಲೀಂಧ್ರ ಕ್ಕೆ ಯಾವ ಯಾವ ಪ್ರತೌಷದ ಎಷ್ಟು ಎಷ್ಟು ಭಾರಿ ಅಡಿಕೆ ಮರದ ಯಾವ ಯಾವ ಭಾಗಕ್ಕೆ ಸಿಂಪಡಣೆ ಮಾಡಲು ಸಾದ್ಯ…?
ಅಡಿಕೆ ಕೊಳೆಯೂ ಒಂದು ಶಿಲೀಂಧ್ರ..
ಈ ಶಿಲೀಂಧ್ರ ಕ್ಕೆ ಮಲೆನಾಡು ಕರಾವಳಿಯ ರೈತರು ಪೂರ್ವಭಾವಿ ಯಾಗಿ ಅಡಿಕೆ ಗೊನೆಗೆ ಬೋರ್ಡೋ ಸಿಂಪಡಣೆ ಮಾಡಿ ಅಡಿಕೆ ಕೊಳೆ ನಿಯಂತ್ರಣ ದಲ್ಲಿಡುತ್ತಾರೆ. ಅತಿ ಮಳೆ ಅತೀ ಶೈತ್ಯಾಂಶದ ವಾತಾವರಣದಲ್ಲಿ ಅಡಿಕೆ ಬೋರ್ಡೋ ಸಿಂಪಡಸಿದಾಗ್ಯೂ ಶಿಲೀಂಧ್ರ ದಾಳಿ ಮಾಡುತ್ತವೆ.. ಮತ್ತೆ ಮಳೆಯಿಲ್ಲದ ವಾತಾವರಣದಲ್ಲಿ ಮತ್ತೆ ಅಡಿಕೆ ಬೆಳೆಗಾರರು ಅಡಿಕೆ ಗೊನೆಗೆ ಬೋರ್ಡೋ ಸಿಂಪಡಣೆ ಮಾಡಿ ಅಡಿಕೆ ಕೊಳೆ ಶಿಲೀಂದ್ರ ವನ್ನು ನಿಯಂತ್ರಣ ಮಾಡುವ ಪ್ರಯತ್ನ ಮಾಡ್ತಾನೆ….
ಆದರೆ …. ಇದರಂತೆ “ಎಲೆಚುಕ್ಕಿ” ಯೂ ಒಂದು ಶಿಲೀಂದ್ರ…
ಆದರೆ ಈ ಶಿಲೀಂದ್ರ ದಾಳಿ ಮಾಡಿ ..ಎಲೆಚುಕ್ಕಿ ದಾಳಿ ಮಾಡಿದ ತದನಂತರದ ಲಕ್ಷಣಗಳು ಗೋಚರಿಸುವಾಗ ಅಲ್ಲಿಗೆ ಎಲೆಚುಕ್ಕಿ ಶಿಲೀಂಧ್ರ ನಾಶಕ ಸಿಂಪಡಣೆ ಮಾಡುವಾಗ ಅಲ್ಲಿ ಎಲೆಚುಕ್ಕಿ ಶಿಲೀಂಧ್ರ ಗಳು ಜೀವಂತ ವಾಗಿರುತ್ತವೆಯಾ…??? ನಮಗೆ ಇದುವರೆಗೂ ಎಲೆಚುಕ್ಕಿ ಶಿಲೀಂಧ್ರ ಬಾಧೆಯ ಲಕ್ಷಣಗಳು ಕಾಣಿಸುತ್ತಿದೆ…
ಎಲೆಚುಕ್ಕಿ ಶಿಲೀಂಧ್ರ ಬಾಧೆ ಉಲ್ಬಣಿಸುವುದು ಕಾಣಿಸುತ್ತಿದೆ. ಆದರೆ ಯಾವುದೇ ಶಿಲೀಂದ್ರ ನಾಶಕ ಸಿಂಪಡಣೆಯಿಂದ ಪರಿಣಾಮಕಾರಿಯಾಗಿ ಎಲೆಚುಕ್ಕಿ ಶಿಲೀಂಧ್ರ ನಾಶವಾಗುವ ಬಗ್ಗೆ ಗೋಚರವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ….!!! ಈ ವರೆಗೂ ಎಲೆಚುಕ್ಕಿ ರೋಗಕ್ಕೆ the best medicine ” ಸೂರ್ಯನ ಬಿಸಲು ” ಮಾತ್ರ….
ರೈತ ಬಾಂಧವರು ಈ ಬಗ್ಗೆ ವಿಶ್ಲೇಷಣೆ ಮಾಡಲಿ:
ಎಲೆಚುಕ್ಕಿ ರೋಗ ಬರೋದಾದರೆ ಕೊಟ್ಟಿಗೆ ಗೊಬ್ಬರ ಹಾಕಿ ಬೇಸಾಯ ಮಾಡಿದ ತೋಟವೋ , ರಾಸಾಯನಿಕ ಹಾಕಿ ಬೇಸಾಯ ಮಾಡಿದ ತೋಟವೋ, ಪ್ರೆಸ್ ಮಡ್ ಹಾಕಿ ಬೇಸಾಯ ಮಾಡಿದ ತೋಟವೋ , ಕಂದಾಯ ಭೂಮಿಯ ತೋಟವೋ, ಅರಣ್ಯ ಒತ್ತುವರಿ ಮಾಡಿ ಮಾಡಿದ ತೋಟವೋ, ಸಿಕ್ಕಾಪಟ್ಟೆ ಮುತುವರ್ಜಿಯಿಂದ ಬೆಳಸಿದ ತೋಟವೋ, ಬೇಜವಾಬ್ದಾರಿ ಯಿಂದ ನಿರ್ವಹಣೆ ಮಾಡಿದ ತೋಟವೋ, ಜಾತಿ ಯೋ , ಧರ್ಮವೋ, ಊರೋ, ಬಡವರೋ, ಬಲ್ಲಿದರೋ , ಅದೃಷ್ಟ ವಂತರೋ , ದುರಾದೃಷ್ಟವಂತರ ತೋಟವೋ , ಬಾರಿ ಬಾರಿ ಶಿಲೀಂದ್ರ ನಾಶಕ ಸಿಂಪಡಣೆ ಮಾಡುವರೋ , ಶಿಲೀಂದ್ರ ನಾಶಕ ಸಿಂಪಡಣೆ ಮಾಡದವರ ತೋಟವೋ … ಯಾರ ತೋಟವನ್ನೂ ಎಲೆಚುಕ್ಕಿ ಶಿಲೀಂಧ್ರ ಬಿಟ್ಟಿಲ್ಲ….
ನಾನು ಶಿಲೀಂದ್ರ ನಾಶಕ ಸಿಂಪಡಣೆ ಮಾಡಿ ಎಲೆಚುಕ್ಕಿ ಶಿಲೀಂಧ್ರ ರೋಗದಿಂದ ಬಚಾವಾದೆ…!!
ನಾನು ಈ ಗೊಬ್ಬರ ಹಾಕಿ ಬೇಸಾಯ ಮಾಡಿ ಎಲೆಚುಕ್ಕಿ ಶಿಲೀಂಧ್ರ ರೋಗ ವಾಸಿ ಮಾಡಿದೆಯಂತಲೋ ಹೇಳುವುದು ಪರಿಶುದ್ಧ ಮೋಸ…ಸುಳ್ಳು…
ಸರ್ಕಾರ ಅಡಿಕೆ ಸಂಶೋಧನಾ ಕೇಂದ್ರ ಕ್ಕೆ ಎಲೆಚುಕ್ಕಿ ಶಿಲೀಂಧ್ರ ಬಗ್ಗೆ ಅಧ್ಯಯನ ಮಾಡಲು ಸಂಪನ್ಮೂಲಗಳನ್ನು ನೀಡಿ ಮೊದಲು ಶಿಲೀಂದ್ರ ಗಳ ಚಟುವಟಿಕೆಗಳನ್ನು ಆಳವಾಗಿ ಅದ್ಯಯನ ಮಾಡಬೇಕು….
ಸುಮ್ಮನೆ ಬೋರ್ಡೋ ಸಿಂಪಡಣೆ ಮಾಡಿ, ಹೆಕ್ಸಕೊನಾಜಾಲು ಸಿಂಪಡಣೆ ಮಾಡಿ, ಟ್ರೋಪಿಕೊನಾಜಾಲು ಸಿಂಪಡಣೆ ಮಾಡಿ, ಆಮೇಲೆ ಪ್ರಾಪಿಕೊನಜಾಲು ಸಿಂಪಡಣೆ ಮಾಡಿ ... ಅಂತ ಹೇಳ್ತಾ ಹೋಗೋದಲ್ಲ…!!
ನಮ್ಮ ಮಲೆನಾಡು ಕರಾವಳಿಯ ಅಡಿಕೆ ತೋಟದಲ್ಲಿ ಒಂದು ಎಕರೆ ಅಡಿಕೆ ತೋಟದಲ್ಲಿ ಎಷ್ಟು ಇನ್ ಕಮ್ ಬರುತ್ರಿ…?? ವರ್ಷಕ್ಕೆ ಮೂರು ನಾಲ್ಕು ಸರ್ತಿ ಬೋರ್ಡೋ ..ಐದಾರು ಸರ್ತಿ ಎಲೆಚುಕ್ಕಿ ಶಿಲೀಂಧ್ರ ನಾಶಕ ಸಿಂಪಡಣೆ ಮಾಡಿದರೆ ಬರೋ ಅಡಿಕೆ ಉತ್ಪತ್ತಿ ಯಲ್ಲಿ ಅಡಿಕೆ ಬೆಳೆಗಾರರಿಗೆ ಏನು ಉಳಿತದೆ…??
ಒಂದು ಸತಿ ಅಥವಾ ಒಂದು ವರ್ಷ ಎಲೆಚುಕ್ಕಿ ಶಿಲೀಂಧ್ರ ಗಳಿಗೆ ಔಷಧ ಸಿಂಪಡಣೆ ಮಾಡಿ ಮುಂದೆಂದೂ ಎಲೆಚುಕ್ಕಿ ಶಿಲೀಂಧ್ರ ರೋಗ ಬರದಂತೆ ತಡೆಯೋಕಾದರೆ ಐದಲ್ಲ ಹತ್ತು ಸತಿ ಔಷಧ ಸಿಂಪಡಣೆ ಮಾಡಿಸೋಣ… ಇದು ಹಾಗಲ್ಲ.. ಅತಿ ಮುಖ್ಯವಾಗಿ ಎಲೆಚುಕ್ಕಿ ಶಿಲೀಂಧ್ರ ನಾಶಕ್ಕೆ ಔಷಧ ಸಿಂಪಡಣೆ ಮಾಡುವಾಗ ಅಲ್ಲಿ ಎಲೆಚುಕ್ಕಿ ಶಿಲೀಂಧ್ರ ಜೀವಂತ ವಾಗಿದ್ದರೆ ಮಾತ್ರ ಶಿಲೀಂದ್ರ ನಾಶಕ ಔಷಧ ಸಿಂಪಡಣೆ ಮಾಡಿ ಪ್ರಯೋಜನ…
ಇಲ್ಲದ ಶಿಲೀಂದ್ರ ಕ್ಕೆ ಶಿಲೀಂದ್ರ ನಾಶಕ ಸಿಂಪಡಣೆ ಮಾಡಿ ಏನು ಪ್ರಯೋಜನ…!?
ಇವತ್ತು ಎಲೆಚುಕ್ಕಿ ಶಿಲೀಂಧ್ರ ಪೀಡಿತ ಅಡಿಕೆ ಮರಕ್ಕೆ ರಕ್ಷಣೆ ಸೂಕ್ಷ್ಮಾಣು ಜೀವಿಗಳ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುವುದು, ಸುಣ್ಣ ಒದಗಿಸುವುದು… ಸುದೀರ್ಘ ಕಾಲ ನಿರಂತರವಾಗಿ ಪೋಷಕಾಂಶಗಳನ್ನು ನೀಡುವ ಕೊಟ್ಟಿಗೆ ಗೊಬ್ಬರ ವನ್ನು ಬೇಸಾಯಕ್ಕೆ ಬಳಸಿ ಅಡಿಕೆ ಮರಕ್ಕೆ ಶಿಲೀಂಧ್ರ ಬಾಧೆ ತಡೆಯುವ ಶಕ್ತಿ ನೀಡಬೇಕು ಅಷ್ಟೇ…
ಇದರ ವಿನಃ ರಾಷ್ಟ್ರಕವಿ ಕುವೆಂಪು ರವರ ಪದ್ಯದ ಸಾಲು “ಬಿಸಿಲಿದು ಬರಿ ಬಿಸಿಲಲ್ಲ ಸೂರ್ಯನ ದಯೆ ಕಾಣೋ ಮಾಣೋ …” ನ ತಾತ್ಪರ್ಯ ದಂತೆ ಎಲೆಚುಕ್ಕಿ ಶಿಲೀಂಧ್ರ ಕ್ಕೆ ಸೂರ್ಯನ ಬಿಸಿಲೇ ಮದ್ದು….. ಮುದ್ದು….