spot_img
Saturday, August 23, 2025
spot_imgspot_img
spot_img

ಬದುಕು ಎತ್ತರಿಸಿದ ಎರೆಹುಳು ಉದ್ಯಮ:ಎರೆಹುಳಗಳೇ ಇವರಿಗೆ ನವಚೇತನ ನೀಡಿತು

-ಡಾ. ಕೃಷ್ಣಮೂರ್ತಿ ಎ.ಟಿ  ಕೆವಿಕೆ, ಮೂಡಿಗೆರೆ

ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಭೂಮಿಯನ್ನು ಹದಗೊಳಿಸುವ, ಕಳಿತ ತ್ಯಾಜ್ಯಗಳನ್ನು ತಿಂದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕಾಯಕ ಜೀವಿ ಎರೆಹುಳು. ಮಳೆಗಾಲ ಅಥವಾ ತೇವಾಂಶವಿರುವಲ್ಲಿ ಕಾಣಿಸಿಕೊಳ್ಳುವ ಎರೆಹುಳುಗಳು ನಿಸರ್ಗ ದಯಪಾಲಿಸಿದ ಉಳುಮೆ ಯಂತ್ರಗಳು. ಎರೆಹುಳುಗಳ ಮಹತ್ವ ಅರಿತ್ತಿದ್ದರೂ ಅದರ ಹೊಟ್ಟೆಪಾಡು ಎಂದು ಉಪೇಕ್ಷಿಸಿದವರೇ ಹೆಚ್ಚು.

ಎರೆಹುಳು ಗೊಬ್ಬರದಲ್ಲೂ ಕೃಷಿ ಉತ್ಪತ್ತಿ ಹೆಚ್ಚಿಸುವ ಚೈತನ್ಯವಿದೆ ಎಂಬುದು ಅರಿತಾಗ ಎರೆಹುಳು ಸಾಕಾಣೆ ಮತ್ತು ಗೊಬ್ಬರ ತಯಾರಿ ಉದ್ಯಮ ವ್ಯವಹಾರದಲ್ಲಿ ಕೆಲವು ಮಂದಿ ತೊಡಗಿಕೊಂಡರು. ಎರೆಹುಳು-ಗೊಬ್ಬರ ವ್ಯವಹಾರದಿಂದಲೇ ಬದುಕನ್ನು ಎತ್ತರಿಸಿಕೊಂಡು ಹೆಸರು ಗಳಿಸಿದವರು ಗರ್ಜೆ ಈಶ್ವರಪ್ಪ. ಎರೆಹುಳು ಉತ್ಪಾದನೆಯಿಂದಲೇ ಅವರ ಹೆಸರಿನ ಮುಂದೆ ಎರೆಹುಳು ಸೇರಿಕೊಂಡು “ಎರೆಹುಳು ಈಶ್ವರಪ್ಪ” ಎಂದೇ ಪರಿಚಿತರು. ಎರೆಹುಳುಗಳನ್ನು ಅವರು ಸಾಕಿದರು. ಎರೆಹುಳುಗಳು ಅವರ ಜೀವನಕ್ಕೊದು ಭದ್ರ ಬುನಾದಿಯನ್ನು ಹಾಕಿಕೊಟ್ಟವು. ಅವರಿತ್ತ ಸಗಣಿ ಹಾಗೂ ಕೃಷಿ ತ್ಯಾಜ್ಯಗಳನ್ನು ತಿಂದು ಮೌಲ್ಯಯುತವಾದ ಗೊಬ್ಬರಗಳನ್ನು ನೀಡಿವೆ. ಸಾಂಪ್ರದಾಯಿಕವಾದ ಬೆಳಗಳನ್ನು ಬೆಳೆದು ಅದರಲ್ಲಿಯೇ ಜೀವನ ನಡೆಸಬೇಕಾಗಿದ್ದ ಈಶ್ವರಪ್ಪನವರಿಗೆ ಆ ಬೆಳೆಗಳೇ ಕೈ ಕೊಟ್ಟಾಗ ನವ ಚೈತನ್ಯ ತುಂಬಿಸಿದ್ದು ಎರೆಹುಳುಗಳೇ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗರ್ಜೆ ಈಶ್ವರಪ್ಪ ಕೃಷಿಕರು. ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳಬೇಕಾದ ಅವರು 5.2 ಎಕರೆ ಭೂಮಿಯನ್ನು ಹೊಂದಿದ್ದರು. ಭತ್ತದ ಬೇಸಾಯವಲ್ಲದೆ ಕಲ್ಲಂಗಡಿ, ನೀರುಳ್ಳಿ, ಕಬ್ಬು ಹೀಗೆ ವಿವಿಧ ಬೆಳೆಗಳನ್ನು ಬೆಳೆದರೂ ಯಶಸ್ಸು ಸಾಧ್ಯವಾಗಿರಲಿಲ್ಲ. ಸೋಲು ಅವರನ್ನು ಹಿಂಬಾಲಿಸಿತ್ತು. ಆನಂತರ ತೋಟಗಾರಿಕೆ ಬೆಳೆಯತ್ತ ಗಮನ ಹರಿಸಿದರೂ ಭವಿಷ್ಯದ ಚಿಂತೆಯಿತ್ತು.
ಕಡೂರಿನಲ್ಲಿರುವ ಕೃಷಿ ಇಲಾಖೆಗೆ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಎರೆಹುಳು ಸಾಕಾಣೆ ಮತ್ತು ಗೊಬ್ಬರ ತಯಾರಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ದೊರೆಯಿತು. ಜೊತೆಗೆ ಎರಡು ಕೆಜಿ ಎರೆಹುಳು ನೀಡಿ ಎರೆಹುಳು-ಎರೆಗೊಬ್ಬರ ತಯಾರಿಸುವಂತೆ ಸಲಹೆಯಿತ್ತರು. ಈ ಎರಡು ಕೆಜಿ ಎರೆಹುಳುವಿನ ಸಂತಾನ ವೃದ್ಧಿಸುತ್ತಾ ಇಪ್ಪತ್ತಾಯಿತು. ನಂತರ ಇನ್ನೂರಕ್ಕೇರಿತು. ಹೆಚ್ಚುತ್ತಿರುವ ಎರೆಹುಳುವನ್ನು ಏನು ಮಾಡುವುದೆಂಬ ಜಿಜ್ಞಾಸೆ ಆರಂಭವಾದಾಗ ರೈತರಿಗೆ ಎರೆಹುಳು ಮಾರಾಟಕ್ಕೆ ಮುಂದಾದರು. ಒಂದೆಡೆ ಎರೆ ಗೊಬ್ಬರ, ಮತ್ತೊಂದೆಡೆ ಎರೆಹುಳು ಮಾರಾಟ. ರೈತರಿಂದ ಬೇಡಿಕೆ ಬರುತ್ತಿದ್ದಂತೆ ಇದನ್ನೇ ಉದ್ದಿಮೆ-ವ್ಯವಹಾರವಾಗಿ ರೂಪಿಸಿಕೊಳ್ಳಲು ಆರಂಭಿಸಿದರು. ಅದಾಗಲೇ ಅವರ ಹೆಸರಿನ ಮುಂದೆ ಎರೆಹುಳು ಅಂಟಿಕೊAಡು “ಎರೆಹುಳು ಈಶ್ವರಪ್ಪ” ಎಂದೇ ಖ್ಯಾತರಾದರು.

ಎರೆಹುಳು ಗೊಬ್ಬರ
ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಎರೆಹುಳು ಸಾಕಾಣೆ ಈಗ ಗ್ರಾಮೀಣ ಉದ್ಯಮ ರೂಪವನ್ನು ಪಡೆದುಕೊಂಡಿದೆ. ಶ್ರೀ ಶಾರದಾಂಬ ಎರೆಹುಳು ಘಟಕ ಸ್ವಾಭಿಮಾನದ ಬದುಕನ್ನು ಕಲಿಸಿದೆ. 25 ವರ್ಷಗಳ ಎರೆಹುಳು ಸಾಕಾಣೆ ಮತ್ತು ವ್ಯವಹಾರ ಅನುಭವಗಳನ್ನು ಹಲವಾರು ರೈತರಿಗೆ ಹಂಚಿದ್ದಾರೆ. ಸಗಣಿ, ಕೃಷಿ ತ್ಯಾಜ್ಯಗಳನ್ನು ಬಳಸಿಕೊಂಡು ಎರೆಗೊಬ್ಬರ ತಯಾರಿಸಲಾಗುತ್ತದೆ . ಕಡಪಕಲ್ಲಿನ ತೊಟ್ಟಿಗಳನ್ನು ನಿರ್ಮಿಸಿಕೊಂಡಿರುವುದಲ್ಲದೆ ಸರಳ ಸುಧಾರಿತ ಪದ್ಧತಿಗಳಿಂದಲೂ ಗೊಬ್ಬರ ತಯಾರಿಸಿತ್ತಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಬಂದು ಎರೆಹುಳು ಮತ್ತು ಎರೆಗೊಬ್ಬರ ಕೊಂಡೊಯ್ಯುತ್ತಾರೆ. ಒಂದೇ ದಿನ ಒಂದು ಕ್ವಿಂಟಾಲ್ ಎರೆಹುಳುವನ್ನು ಮಾರಾಟ ಮಾಡಿರುವ ಹೆಗ್ಗಳಿಕೆ ಅವರದು. ಬೇಡಿಕೆಯಷ್ಟು ಉತ್ಪಾದನೆ ಮಾಡಿಕೊಳ್ಳಲಾಗುತ್ತಿಲ್ಲ. ಗೊಬ್ಬರ-ಎರೆಹುಳು ಬೇಕಾದಲ್ಲಿ ಮುಂಗಡವಾಗಿ ತಿಳಿಸಬೇಕಾಗುತ್ತದೆ. ಎರೆಹುಳು-ಗೊಬ್ಬರ ಅವರ ಜೀವನವನ್ನು ಬದಲಾಯಿಸಿದೆ. ಈ ಉದ್ಯಮದೊಂದಿಗೆ ಅವರ ಕೃಷಿಯೂ ಸುಧಾರಣೆ ಕಂಡಿದೆ. ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದೆ.

ರೈತರು ರಾಸಾಯನಿಕ ಗೊಬ್ಬರದತ್ತ ಮುಖಮಾಡಿದಾಗ ಎರೆಹುಳದ ನೆನಪು ಮರೆತು ಹೋಯಿತು. ಸಾವಯವ ಗೊಬ್ಬರ ತಯಾರಿಯಲ್ಲಿ ಅದರ ಪಾತ್ರ ಹಾಗೂ ಸಾವಯುವ ಗೊಬ್ಬರದ ಅನುಕೂಲತೆಯೂ ನಗಣ್ಯವಾಯಿತು. ರಾಸಾಯಿನಿಕ ಗೊಬ್ಬರದ ಘಾಟಿಗೆ ರೈತರ ಸಹಾಯಕ ಎರೆಹುಳು ದೂರವಾಯಿತು. ಆದರೆ ಈಗ ಹಾಗಲ್ಲ. ಎರೆಹುಳು ಮತ್ತು ಮಣ್ಣಿನ ಮಹತ್ವ ಅರಿವಾಗಿದೆ. ರೈತರು ಸಾವಯವದತ್ತ ಮರಳುತ್ತಿದ್ದಾರೆ. ಶೂನ್ಯ ಬಂಡವಾಳದಿಂದ ಸಹಜ ಕೃಷಿ ಮಾಡಿ ಸಮೃದ್ಧ ಬೆಳೆ ತೆಗೆಯಬಹುದು. ಎನ್ನುತ್ತಾರೆ ಈಶ್ವರಪ್ಪ.
”ಮಾನವ ಸತ್ತರೆ ಮಣ್ಣಿಗೆ ಮಣ್ಣೇ ಸತ್ತರೆ ಎಲ್ಲಿಗೆ”… ಹೌದು! ಸಹಜ ಪ್ರಶ್ನೆ. ರಾಸಾಯಿನಿಕ ಬಳಕೆಯಿಂದ ಮಣ್ಣು ಸಾರ ಕಳೆದುಕೊಂಡು ಸತ್ವ ಹೀನವಾದರೆ ಫಲವಂತಿಕೆಯೇ ನಷ್ಟವಾದಂತೆ. ಅದನ್ನರಿತೇ ತನ್ನ ಕೃಷಿಕ್ಷೇತ್ರವನ್ನು ಪೂರ್ಣವಾಗಿ ಸಾವಯವ ಕೃಷಿಗೆ ಪರಿವರ್ತಿಸಿದ್ದಾರೆ. ಈಶ್ವರಪ್ಪ ಅವರು ಏಕ ಬೆಳೆಗೆ ಜೋತು ಕೊಂಡವರಲ್ಲ. ಸಮ್ಮಿಶ್ರ ಬೆಳೆಗೆ ಒತ್ತು ನೀಡಿದ್ದಾರೆ. ಸಾಂಪ್ರದಾಯಿಕವಾದ ರಾಗಿ, ಜೋಳ, ಬೆಳೆಯೊಂದಿಗೆ ತೊಗರಿ, ಅವರೆ, ಸಾಮೆಯನ್ನು ಬೆಳೆಯುತ್ತಿದ್ದರೆ ತೋಟಗಾರಿಕಾ ಬೆಳೆಗಳು ಆದಾಯ ತಂದುಕೊಡುವ ಮತ್ತೊಂದು ಮೂಲ. ಅಡಿಕೆ, ತೆಂಗು, ಕಾಳುಮೆಣಸು, ನಿಂಬೆ, ಸೀತಾಫಲ, ರಾಮಫಲ, ಮಾವು, ಹಲಸು, ಬಾಳೆ ಅವರ ಕೃಷಿಕ್ಷೇತ್ರವನ್ನು ಹಸಿರಾಗಿಸಿದೆ. ಸಾವಯವ ಕೃಷಿಗೆ ಹೈನುಗಾರಿಕೆ ಪೂರಕವಾದುದು. ಎರೆಗೊಬ್ಬರ ತಯಾರಿಯಲ್ಲದೆ ಸಗಣಿ ಗಂಜಲದಿಂದ ಜೀವಸಾರವನ್ನು ಸಿದ್ಧಪಡಿಸಿ ಕೃಷಿಗೆ ಬಳಸುತ್ತಾರೆ. ಅರಣ್ಯ ಕೃಷಿಯತ್ತಲೂ ಗಮನ ಹರಿಸಿರುವ ಅವರು ಶ್ರೀಗಂಧ, ಸಾಗುವಾನಿ, ಹೆಬ್ಬೇವು ಮೊದಲಾದುವುಗಳಿವೆ

ರಾಸಾಯಿನಿಕ, ಕ್ರೀಮಿನಾಶಕಗಳನ್ನು ಬಳಸಿ ಭೂಮಿ ಕಳಾಹೀನವಾಗುತ್ತದೆ. ಕಳೆನಾಶಕವು ಕೃಷಿಗೆ ಸಹಕಾರಿಯಾದ ಜೀವಿಗಳನ್ನು ನಾಶಪಡಿಸುತ್ತದೆ. ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಆದುದರಿಂದ ರೈತರು ಸಾವಯವದತ್ತ ಗಮನಹರಿಸಬೇಕು. ಶೂನ್ಯ ಬಂಡವಾಳದಿಂದ ಕೃಷಿ ಮಾಡಿದವನಿಗೆ ಸಾಲದ ಅವಶ್ಯಕತೆಯಿಲ್ಲ ಎಂಬ ಅಭಿಪ್ರಾಯ ಈಶ್ವರಪ್ಪ ಅವರದು.

ಸೋಲೇ ಗೆಲುವಿನ ಸೋಪಾನ ಎಂಬಂತೆ ಆರಂಭಿಕವಾಗಿ ಕೃಷಿಯಲ್ಲಿ ಸೋಲುಂಡರೂ ಎದೆಗುಂದದೆ ಮುನ್ನಡೆದ, ರೈತ ಮಿತ್ರ ಎರೆಹುಳುವನ್ನೇ ತನ್ನ ಉದ್ಯಮವಾಗಿ ಬಳಸಿ ಬೆಳೆಸಿದ ಈಶ್ವರಪ್ಪ ಅವರಿಗೆ ಯಶಸ್ಸಿನ ಫಲ ದೊರೆತಿದೆ. ತನ್ನ ಉದ್ಯಮದಲ್ಲಿ ಕೆಲಮಂದಿಗೆ ಉದ್ಯೋಗವನ್ನು ನೀಡಿರುವುದಲ್ಲದೆ ಕೃಷಿಯೂ ಸೇರಿದಂತೆ ವಾರ್ಷಿಕವಾಗಿ ಸುಮಾರು ೨೦ ಲಕ್ಷ ಆದಾಯ ಪಡೆಯುತ್ತಿರುವುದು ಹೆಮ್ಮೆಯ ವಿಷಯವೇ. ಹಲವಾರು ಮಂದಿ ಇವರ ಎರೆಹುಳು ಉದ್ಯಮ ಘಟಕ, ಕೃಷಿ ಕ್ಷೇತ್ರಕ್ಕೆ ಪ್ರತಿ ವರ್ಷ ಭೇಟಿಯಿತ್ತು ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಎರೆಹುಳು ಸಾಕಾಣೆ ಮತ್ತು ಎರೆಗೊಬ್ಬರ ತಯಾರಿ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಾಗಿ ಬೇರೆ ಬೇರೆ ಕಡೆಗಳಲ್ಲಿ ತರಬೇತಿಯನ್ನು ನೀಡಿದ್ದಾರೆ. ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ, ಕೃಷಿ ತಜ್ಞರ ಮಾಹಿತಿ ಮಾರ್ಗದರ್ಶನ ಇವರ ಯಶಸ್ಸಿಗೆ ಸಹಕಾರಿಯಾಗಿದೆ.

ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ರಾಜ್ಯ ಸರಕಾರದ ಕೃಷಿ ಪಂಡಿತ ಪ್ರಶಸ್ತಿ, ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ, ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ, ಕೃಷಿ ವಿ.ವಿ, ಕೆವಿಕೆ ಮೂಡಿಗೆರೆ ಹಾಗೂ ಸ್ಥಳೀಯ ಸಂಘ, ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಿವೆ
ಮಾಹಿತಿಗೆ ಮೊ. 9449412962

ನಿರೂಪಣೆ : ರಾಧಾಕೃಷ್ಣ ತೊಡಿಕಾನ

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group