ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳ ಬಳಕೆಯು ವ್ಯಾಪಕವಾಗುತ್ತಿದೆ. ಕೈ ಚಾಲಿತದ ಪುಟ್ಟ ಯಂತ್ರಗಳಿಂದ ಯಾಂತ್ರೀಕೃತ ರೋಬೋಟೆಕ್ಸ್ ಯಂತ್ರ ಲೋಕದವರೆಗೆ ಬಂದು ನಿಂತಿದೆ. ಎತ್ತುಗಳಿಂದ ಉಳುಮೆ ನಿಧಾನವಾಗಿ ಮಾಯವಾಗುತ್ತಾ ಉಳುಮೆ ಯಂತ್ರಗಳು ಕೃಷಿ ಭೂಮಿಯಲ್ಲಿ ಸದ್ದು ಮಾಡುತ್ತಿವೆ.
ಹೊಸ ಹೊಸ ತಂತ್ರಗಳೊಂದಿಗೆ ಯಂತ್ರೋಪಕರಣ ನಿರ್ಮಾಣವಾಗುತ್ತಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಭೂಮಿಯನ್ನು ಹದಗೊಳಿಸುವ, ನಾಟಿ ಮಾಡುವ, ಕಟಾವು ಮಾಡುವ ಯಂತ್ರಗಳು ಮಾನವ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಿದೆ.
ರೈತರ ಜಾತ್ರೆಯಿಂದೇ ಹೆಸರಾದ ಧಾರವಾಡ ಕೃಷಿ ವಿವಿಯ ಕೃಷಿ ಮೇಳವು ಇತ್ತೀಚೆಗೆ ನಾಲ್ಕು ದಿನಗಳ ಕಾಲ ನಡೆಯಿತು. ರಾಜ್ಯದ ವಿವಿಧ ಮೂಲೆಗಳಿಂದ ಕೃಷಿಕರ ದಂಡು ಹರಿದು ಬಂದರೆ ಕೃಷಿಯಲ್ಲಿನ ಯಂತ್ರೋಪಕರಣ ಅವಲವಂಬನೆಗೆ ಪೂರಕವಾಗಿ ರಾಜ್ಯದ ಹಾಗೂ ಹೊರ ರಾಜ್ಯದ ವಿವಿಧ ಕಂಪನಿಗಳು ಯಂತ್ರೋಪಕರಣಗಳ ಲೋಕವನ್ನೇ ತೆರೆದಿರಿಸಿದವು.
ಕೃಷಿಕರ ಕೆಲಸದಾಳುಗಳ ಕೊರತೆ, ಹೆಚ್ಚುತ್ತಿರುವ ಕೂಲಿಗಳ ಸಂಬಳ, ಸಣ್ಣ ಮತ್ತು ಅತೀ ಸಣ್ಣ ರೈತರ ಪಾಲಿಗೆ ದೊಡ್ಡ ಸಮಸ್ಯೆ. ಇಂತಹ ಸಮಸ್ಯೆಗಳ ನಿವಾರಣೆಗೆ ಯಾಂತ್ರಿಕೀಕರಣದ ಮೊರೆ ಹೋಗುತ್ತಿರುವ ರೈತನಿಗೆ ಅಪೂರ್ವ ಯಂತ್ರಗಳ ನೋಡುವ ಅವಕಾಶವಿಲ್ಲಿ ದೊರೆಯಿತು.
ಉಳುಮೆಗೆ ಅನುಕೂಲವಾಗುವ ಸಣ್ಣ ದೊಡ್ಡ ಯಂತ್ರಗಳು, ಬಿತ್ತನೆ ಯಂತ್ರಗಳು, ಗೊಬ್ಬರ ಮಿಶ್ರಣದೊಂದಿಗೆ ಏಕಕಾಲದಲ್ಲಿ ಬಿತ್ತನೆ ಮಾಡಬಹುದಾದ ಯಂತ್ರಗಳು, ಗುಂಡಿ ತೆಗೆಯುವ, ಮರ ಕತ್ತರಿಸುವ, ಹುಲ್ಲು ಕತ್ತರಿಸುವ ಯಂತ್ರಗಳು, ಗಾರ್ಡನ್ ಟೂಲ್ಸ್ಗಳು. ಟ್ರ‍್ಯಾಕ್ಟರ್, ಟಿಲ್ಲರ್, ಪವರ್ ವೀಡರ್, ನೀರೆತ್ತುವ ಪಂಪುಗಳು, ಔಷಧಿ ಸಿಂಪರಣೆ, ಕಳೆ ಕೊಚ್ಚುವ ಯಂತ್ರ, ವಿದ್ಯುತ್ ಇಲ್ಲದಿದ್ದಲ್ಲಿ ಕೊಂಡೊಯ್ದು ನೀರು ಹಾಯಿಸಬಹುದಾದ ಟ್ರ‍್ಯಾಕ್ಟರ್ ಆಧಾರಿತ ಪಂಪುಗಳು.
ಬೃಹತ್ ಗಾತ್ರದ ಮೆಕ್ಕೆಜೋಳ ಕಟಾವು ಯಂತ್ರ ಸೇರಿದಂತೆ ಸಣ್ಣ-ದೊಡ್ಡ ಮಾದರಿಯ ಉಪಕರಣಗಳು ಪ್ರದರ್ಶನ ಮತ್ತು ಮಾರಾಟಕ್ಕಿದ್ದವು. ದೊಡ್ಡ ದೊಡ್ಡ ಹಿಡುವಳಿದಾರರಿಗೆ ಅನುಕೂಲವಾದ ಭಾರೀ ಗಾತ್ರ ಯಂತ್ರೋಪಕರಣಗಳು ಕಣ್ಮನ ಸೆಳೆದವು. ಯಂತ್ರೋಪಕರಣಗಳು ಸಣ್ಣದಿರಲಿ ದೊಡ್ಡದಿರಲಿ ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿಕರಿಗೆ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಕೆಲಸಗಾರ ಅವಲಂಬನೆಯನ್ನು ಕಡಿಮೆ ಮಾಡಿದೆ. ದೊಡ್ಡ ಯಂತ್ರೋಪಕರಣಗಳು ಬಳಕೆ-ಕಾರ್ಯಕ್ಷಮತೆ ಬಹಳಷ್ಟು ಹತ್ತಿರದಿಂದ ನೋಡುವ ಅವಕಾಶಗಳು ದೊರೆಯಿತು.