spot_img
Wednesday, October 22, 2025
spot_imgspot_img
spot_img

ಕುಲುಮೆ ಇವರಿಗೆ ಜೀವನಾಸಕ್ತಿಯ ಚಿಲುಮೆ:ಕಮ್ಮಾರಿಕೆಯಿಂದಲೇ ಬದುಕು ರೂಪಿಸಿಕೊಂಡ ಯಶಸ್ವಿ ವ್ಯಕ್ತಿಯ ಕತೆ

-ರಾಧಾಕೃಷ್ಣ ತೊಡಿಕಾನ

ನಿಗಿನಿಗಿ ಕೆಂಡದಲ್ಲಿ ಕಾದರೆ ಕಬ್ಬಿಣವೂ ಮೆದುವಾಗುತ್ತದೆ. ಸುತ್ತಿಗೆಯ ಏಟಿಗೆ ಬಾಗುತ್ತದೆ. ನೀರು ಸೋಕಿದರೆ ಮರಳಿ ಕಠಿಣವಾಗುತ್ತದೆ. ನೋಡುನೋಡುತ್ತಿದ್ದಂತೆ ಕಮ್ಮಾರನ ಕುಲುಮೆಯಲ್ಲಿ ಬೆಂದು ಬಳಲಿದ ಕಬ್ಬಿಣ ಹೊಸ ಆಕಾರ ಪಡೆದು ಕೃಷಿಕರಿಗೆ ಬೇಕಾದ ಉಪಕರಣಗಳಾಗಿ ರೂಪುಗೊಳ್ಳುತ್ತವೆ. ಈ ಉಪಕರಣಗಳು ಕಮ್ಮಾರನ ವೃತ್ತಿ ಕೌಶಲ್ಯತೆಯ ಅನಾವರಣವಾಗಿದೆ.

ಕೃಷಿ ಯಂತ್ರೋಪಕರಣಗಳ ತಯಾರಿಕೆಗೆ ಈಗ ಆಧುನಿಕತೆಯ ಸ್ಪರ್ಶ ದೊರೆತಿದೆ. ಹೊಸ ಹೊಸ ತಂತ್ರಜ್ಞಾನಗಳು ಕೃಷಿ ಕ್ಷೇತ್ರವನ್ನು ಪ್ರವೇಶಿಸಿ ಕೃಷಿ ಕೆಲಸಕಾರ್ಯಗಳನ್ನು ಸುಲಭಗೊಳಿಸಿವೆ. ಈ ಹೊಸತನ ಬರುವ ಮೊದಲೇ ಕೃಷಿ ಉಪಕರಣ ತಯಾರಾಗುತ್ತಿದ್ದವು. ಆದರೆ ಅವು ಯಂತ್ರಗಳ ಮೂಲಕವಲ್ಲ. ಅದೊಂದು ಉದ್ಯಮವಾಗಿಯೂ ಅಲ್ಲ. ಕಮ್ಮಾರರು ತಮ್ಮ ಮನೆಯ ಬಳಿಯೋ ಅನುಕೂಲಕರವಾದ ಇತರ ಸ್ಥಳಗಳಲ್ಲಿಯೋ ಹಾಕಿಕೊಂಡ ಸಣ್ಣ ಕೊಟ್ಟಿಗೆಗಳಲ್ಲಿ. ಅವೇ ಕೃಷಿ ಉಪಕರಣಗಳ ತಯಾರಿ ಕೇಂದ್ರಗಳು. ರೈತರ ಕೃಷಿಕಾಯಕವನ್ನು ಸುಲಭಗೊಳಿಸುವ ಸಲಕರಣೆಗಳ ಕಮ್ಮಟದ ಬಿಂದುಗಳು. ಎಷ್ಟೇ ತಂತ್ರಜ್ಞಾನಗಳು ಬಂದಿರಲಿ, ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕವಾದ ಕುಲಕಸುಬು ಮುಂದುವರಿಸುವ ಕೆಲವು ಕುಟುಂಬಗಳಿವೆ. ವೈ. ದಾಮೋದರ ಆಚಾರ್ಯ ಅವರು ಕಮ್ಮಾರಿಕೆಯಿಂದಲೇ ಬದುಕು ರೂಪಿಸಿಕೊಂಡವರು ಮತ್ತು ಬೆಳೆದವರು.

ಕೃಷಿ ಮೇಳ, ಕೃಷಿ ವಸ್ತು ಪ್ರದರ್ಶನ ಮತ್ತು ಮಾರಾಟ ಯಾವುದೇ ಇರಲಿ ದಾಮೋದರ ಆಚಾರ್ಯರವರ ಕಬ್ಬಿಣದ ಕತ್ತಿ ಮತ್ತು ಇತರ ಉಪಕರಣ ಮಾಡುವ ಪ್ರಾತ್ಯಕ್ಷಿಕೆ, ಮಾರಾಟ ಮಳಿಗೆಯೊಂದು ಇದ್ದೇ ಇರುತ್ತದೆ. ಕಲುಮೆಯಲ್ಲಿ ಕೆಂಪಾಗಿ ಅರಳುವ ಕೆಂಡದುAಡೆಗಳ ಬದಿಯಲ್ಲಿ ಕುಳಿತು ಕಬ್ಬಿಣವನ್ನು ಅದರಳೊಗಿಟ್ಟು ಕೆಂಪಾಗಿಸಿ ಬೇಕಾದ ಆಕಾರ ಕೊಡುವ ಅವರ ಕಲೆಗಾರಿಕೆ ಊರ ಹೊರಗಿನವರು ಕಣ್ತುಂಬಿಕೊಂಡಿದ್ದಾರೆ.

ಮಳೆಗಾಲ ಆರಂಭವಾಯಿತೆಂದರೆ ಕೃಷಿಕರಿಗೆ ಬಿಡುವಿಲ್ಲದ ಕೆಲಸ. ಉಳುಮೆ ಉಪಕರಣದಿಂದ ಕತ್ತಿಯವರೆಗೆ ಹಲವು ಉಪಕರಣಗಳು ಕೃಷಿಕರಿಗೆ ಬೇಕಿದ್ದ ಆವಶ್ಯಕ ಹತ್ಯಾರುಗಳು. ಆಗ ಕಮ್ಮಾರ ವೃತ್ತಿಯವರಿಗೆಲ್ಲ ಭಾರೀ ಬೇಡಿಕೆ ಇದ್ದೇ ಇರುತ್ತಿತ್ತು. ಹಿಂದೆ ಕೃಷಿ ಉಪಕರಣಗಳು ಕಮ್ಮಾರರ ಕುಲುಮೆಯಲ್ಲಿ ಬೆಂದು ಹೊರಬರುತ್ತಿದ್ದವು. ಈಗ ಹಾಗಲ್ಲ. ಉಳುಮೆಗೆ ಟ್ರಾö್ಯಕ್ಟರ್, ಟಿಲ್ಲರ್ ಬಂದಿದೆ. ನೇಗಿಲು ಮೊದಲಾದುವು ಯಂತ್ರಗಳಲ್ಲಿ ತಯಾರಾಗುತ್ತಿವೆ. ಆದ್ದರಿಂದಲೇ ಕಮ್ಮಾರಿಕೆಯ ಕೊಂಡಿಗಳು ಶಿಥಿಲವಾಗುತ್ತಿವೆ. ಒಂದೆರಡು ಹಳ್ಳಿಗೆ ಒಂದರಂತೆ ಇದ್ದ ಆಚಾರಿ ಕೊಟ್ಟಿಗೆ ಈಗ ಅಪರೂಪವಾಗಿದೆ. ಆ ವೃತ್ತಿಯಿಂದ ಗಳಿಕೆ ಉಳಿಕೆಯ ಅವಕಾಶ ಹಿಂದಿನಂತಿಲ್ಲ. ಎಲ್ಲಾ ಕೃಷಿ ಉಪಕರಣಗಳು ಮಾರುಕಟ್ಟೆಯಲ್ಲಿ ಸಿಗುವುದರಿಂದ ಕಮ್ಮಾರಿಕೆ ಕೆಲಸವು ಕಡಿಮೆಯಾಗಿದೆ. ಈ ವೃತ್ತಿ ಮಾಡುವವರು ಬೇರೆ ಬೇರೆ ವೃತ್ತಿಗೆ ಬದಲಾಗುತ್ತಿದ್ದಾರೆ. ಆದರೂ ಸಾಂಪ್ರದಾಯಿಕವಾದ ಕಬ್ಬಿಣದ ಕೆಲಸ ಮಾಡುವ ಎರ್ಲಪಾಡಿಯ ದಾಮೋದರ ಆಚಾರ್ಯ ಅವರು ಆಕರ್ಷಣೆಯ ಕೇಂದ್ರವಾಗುತ್ತಾರೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಸರಕಾರಿ ಕಾಲೇಜು ಸಮೀಪದ ಎರ್ಲಪಾಡಿಯ ದಾಮೋದರ ಆಚಾರ್ಯ ಅವರ ಜೀವನದಲ್ಲಿ ಏಳುಬೀಳುಗಳಿದ್ದರೂ ಯಶೋಗಾಥೆ ಮಾತ್ರ ಅಚ್ಚರಿಯದು. ದಾಮೋದರ ಆಚಾರ್ಯರಿಗೆ ಮರದ ಪೀಠೋಪಕರಣ ತಯಾರಿ ತಿಳಿದಿತ್ತು. ಮೂಡಬಿದಿರೆಯ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದ ಅವರು ಅನಿವಾರ್ಯ ಕಾರಣಗಳಿಂದ ಸಂಸ್ಥೆ ಬಿಡಬೇಕಾಯಿತು. ಊರಿಗೆ ಮರಳಿದ ಅವರಿಗೆ ಬಡಗಿ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಕೃಷಿ ಉಪಕರಣಗಳಿಗೆ ಬೇಡಿಕೆ ಇತ್ತು. ಆದರೆ ಆ ಕೆಲಸ ತಿಳಿದಿರಲಿಲ್ಲ. ಕಮ್ಮಾರರ ಕೊಟ್ಟಿಗೆಯಲ್ಲಿ ತಿಳಿದದ್ದು ಅರೆಬರೆ ಮಾಹಿತಿ. ಆದರೂ ಛಲ ಬಿಡದೆ ತನ್ನ ಅನುಭವದೊಂದಿಗೆ ಕಮ್ಮಾರಿಕೆಗೆ ಮುಂದಾದರು. ಆರಂಭದಲ್ಲಿ ಕಷ್ಟವಾಯಿತು. ಎದೆಗುಂದದೆ ಕೃಷಿ ಉಪಕರಣಗಳನ್ನು ತಯಾರಿಕೆಯಲ್ಲಿ ತೊಡಗಿಕೊಂಡರು. ಅವರ ಆಸಕ್ತಿ, ಶ್ರದ್ಧೆ, ಕಠಿಣ ಶ್ರಮದಿಂದಲೇ ಗುಣಮಟ್ಟದ ಉಪಕರಣವನ್ನು ತಯಾರಿಸಿದರು. ಕೃಷಿಕರ ವಿಶ್ವಾಸ ಗಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ತಂಡದಲ್ಲಿದ್ದ ಅವರಿಗೆ ಯೋಜನೆಯ ವತಿಯಿಂದ ಬಜಗೋಳಿಯಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಕೃಷಿ ಉಪಕರಣಗಳ ತಯಾರಿಕೆಯ ಪ್ರಾತ್ಯಕ್ಷಕೆ ಮತ್ತು ಮಾರಾಟಕ್ಕೆ ಅವಕಾಶವೊಂದು ದೊರೆಯಿತು. ಆ ಮೇಳವು ಅವರ ಜೀವನದ ಗಾಲಿಯ ದಿಕ್ಕು ಬದಲಾಯಿಸಿತು. ಆ ನಂತರ ಆಳ್ವಾಸ್‌ನ ವಿರಾಸತ್, ಕೃಷಿಮೇಳಗಳಲ್ಲಿ ಅವರ ಕಮ್ಮಾರಿಕೆ ಪ್ರಾತ್ಯಕ್ಷಕೆ ನೋಡಿ ಜನ ಮೆಚ್ಚಿಕೊಂಡರು. ದ.ಕ, ಉಡುಪಿ, ಕಾಸರಗೋಡು, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ಕೃಷಿ ಮತ್ತು ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಾಮೋದರ ಆಚಾರ್ಯ ಅವರ ಕಮ್ಮಾರಿಕೆ ಪ್ರಾತ್ಯಕ್ಷಿಕೆ ಮಾರಾಟ, ಸಂಚಾರಿ ಕುಲುಮೆ ಹೆಚ್ಚು ಜನಪ್ರಿಯವಾಗುವಂತೆ ಮಾಡಿತು. ಅವರು ಸ್ಥಳದಲ್ಲಿ ಮಾಡಿದ ಕತ್ತಿಗಳನ್ನು ರಾಜ್ಯದ ವಿವಿಧ ಕಡೆಗಳಿಂದ ಬಂದ ಜನರು ಖರೀದಿಸಿದ್ದಾರೆ.

ನಾನಾ ವಿಧದ ಕತ್ತಿಗಳು

ಕೃಷಿಕರು ಬಳಸುವ ಕತ್ತಿಗಳಲ್ಲಿ ನಾನಾ ವಿಧವಿದೆ. ಕತ್ತಿ ಎಲ್ಲಾ ಕಡೆ ಬಳಕೆಯಿದ್ದರೂ ಪ್ರದೇಶದಿಂದ ಪ್ರದೇಶಕ್ಕೆ ಆಕಾರದಲ್ಲಿ ಬದಲಾಗುತ್ತದೆ. ಸುಮಾರು 64 ಬಗೆಯ ಕತ್ತಿಗಳಿವೆ ಎನ್ನಲಾಗುತ್ತಿದೆ. ದಾಮೋದರ ಆಚಾರ್ಯರು 12 ನಮೂನೆಯ ಕತ್ತಿಗಳನ್ನು ಮಾಡುತ್ತಾರೆ. ಹುಲ್ಲು ಕೊಯ್ಯುವ ಕತ್ತಿ, ಸೊಪ್ಪು ಕೊಯ್ಯುವ ಕತ್ತಿ, ಬೆಳೆ ಕಟಾವಿನ ಹಲ್ಲು ಕತ್ತಿ, ಮರದ ಗೆಲ್ಲು ತುಂಡರಿಸುವ ಕತ್ತಿ, ಮಂಡೆ ಕತ್ತಿ, ಎಳನೀರು ಕತ್ತರಿಸುವ ಕತ್ತಿ, ಅಡಿಕೆ ಗೊನೆ ಕೊಯ್ಯುವ ಕತ್ತಿ, ಬಾಣಂತಿ ಕತ್ತಿ ಹಲವು ಮಾದರಿಯ ಕತ್ತಿ ಕುಲುಮೆಯಲ್ಲಿ ಮೂರ್ತ ರೂಪ ಪಡೆಯುತ್ತದೆ. ಬಾಣಂತಿ ಕತ್ತಿ ಇದೊಂದು ಸಣ್ಣ ಕತ್ತಿ. ಪರಂಪರೆಯಿಂದ ಬಂದ ಇತಿಹಾಸವುಳ್ಳದ್ದು. ಬಾಣಂತಿಯರು ತಮ್ಮ ಜೊತೆ ಇರಿಸಿಕೊಳ್ಳುವ ಕತ್ತಿ. ಆಧುನಿಕತೆ ಮನೆ ಮಾಡಿದರೂ ಕೆಲವು ಕಡೆಗಳಲ್ಲಿ ಈಗಲೂ ಸಂಪ್ರದಾಯದ ಈ ಕತ್ತಿಯನ್ನು ಬಾಣಂತಿಯರು ತಮ್ಮ ಬಳಿ ಇರಿಸಿಕೊಳ್ಳುತ್ತಾರೆ. ಅದಕ್ಕಾಗಿ ಈಗಲೂ ಈ ಕತ್ತಿಯನ್ನು ಕೊಂಡೊಯ್ಯುತ್ತಾರೆ. ಮಿಲಾವು ಕಬ್ಬಿಣವನ್ನು ಬಳಸಿ ಕತ್ತಿ ಮಾಡಲಾಗುತ್ತಿದ್ದು ಇವು ಮಸೆದಷ್ಟು ಹರಿತವಾಗುತ್ತವೆ. ಅದರ ಬಾಯಿ(ಅಲಗು)ತುಂಡಾಗುವುದಿಲ್ಲ.

ಕಬ್ಬಿಣವನ್ನು ಕುಲುಮೆಯಲ್ಲಿ ಕಾಯಿಸಿ ಅದನ್ನು ನೀರಿಗಿಡುವುದರಲ್ಲಿಯೂ ಮಹತ್ವವಿದೆ. ಕಾದ ಕಬ್ಬಿಣ ತಣ್ಣಗಾಗಿಸಲು ಮರಾಯದಲ್ಲಿರುವ ನೀರಿನಲ್ಲಿ ಮುಳುಗಿಸಿ ತೆಗೆಯಲಾಗುತ್ತದೆ. ಆ ನೀರನ್ನು ರೋಗನಿರೋಧಕ ಶಕ್ತಿಯಿದೆಂದು ಕೆಲವರು ಕೊಂಡೊಯ್ಯುವುದಿದೆ. ಅವರು ಮಾಡುತ್ತಿರುವ ಹೆಚ್ಚಿನ ಎಲ್ಲಾ ಕತ್ತಿಗಳು ಬೇಡಿಕೆಯುಳ್ಳವೆ ಅಗಿವೆ. ಯಂತ್ರದ ಮೂಲಕ ತಯಾರದ ಪಿಕ್ಕಾಸು, ಹಾರೆ ಮತ್ತಿತರ ಉಪಕರಣಗಳನ್ನು ರೈತರು ತಂದು ಅದನ್ನು ಕುಲುಮೆಯಲ್ಲಿ ಕಾಯಿಸಿ ಮತ್ತೆ ಹದಗೊಳಿಸಿ ತೆಗೆದುಕೊಂಡು ಹೋಗುತ್ತಾರೆ. ರೈತರಿಗೆ ಬೇಕಾದ ಸಾಮಾಗ್ರಿಯನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಡುವ ಬದ್ಧತೆಯನ್ನು ರೂಢಿಸಿಕೊಂಡಿದ್ದಾರೆ. ಆದ್ದರಿಂದ ಊರಲ್ಲದೆ ಪರ ಊರ ಹಳ್ಳಿಗಳ ಕೃಷಿಕ ವರ್ಗ ಇವರಲ್ಲಿಗೆ ಬಂದು ಕತ್ತಿಗಳನ್ನು ಮಾಡಿಸಿಕೊಂಡು ಹೋಗುವುದಿದೆ. ಇವರ ಕತ್ತಿ ಅಥವಾ ಇತರ ಉಪಕರಣಗಳ ಬಾಳಿಕೆ ಬಗ್ಗೆ ಜನರೂ ವಿಶ್ವಾಸ ಹೊಂದಿದ್ದಾರೆ. ಕತ್ತಿ ಹಿಡಿಗೆ ಎಂಜಿರದ ಬೀಣೆ, ಗೇರು, ಹೊನ್ನೆ ಮರ ಬಳಸುತ್ತಾರೆ.

ಕುಟುಂಬ ಸದಸ್ಯರೆಲ್ಲರು ಭಾಗಿ: ಸಾಂಪ್ರದಾಯಿಕವಾದ ಈ ಕಾಯಕದಲ್ಲಿ ಒಂದಿಬ್ಬರು ತೊಡಗಿಕೊಂಡು ಉಳಿದವರು ಬೇರೆ ವೃತ್ತಿಯಲ್ಲಿರುತ್ತಾರೆ. ಆದರೆ ಆಚಾರ್ಯರ ಮನೆಮಂದಿಯೆಲ್ಲರೂ ಮಗ್ನರಾಗಿರುವುದು ಇದೇ ಕೆಲಸದಲ್ಲಿ. ಕೃಷಿ ಮೇಳ, ವಸ್ತು ಪ್ರದರ್ಶನಗಳಿದ್ದರೆ ಅಷ್ಟೂ ದಿನ ಇಡೀ ಕುಟುಂಬವೇ ಅಲ್ಲಿರುತ್ತದೆ. ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಅದೊಂದು ಕಲಾತ್ಮಕ, ಭಾವನಾತ್ಮಕ ದೃಶ್ಯ. ಅವರ ಎರಡು ಸಾಕು ನಾಯಿಗಳು ಪ್ರಾತ್ಯಕ್ಷಿಕೆ ಸ್ಥಳದಲ್ಲಿ ಹಾಯಾಗಿರುತ್ತವೆ. ಅವುಗಳಿಗೂ ಸಂಚಾರ ಯೋಗ. ಪತ್ನಿ ಪುಷ್ಪಾವತಿ ಎಲ್ಲಾ ಕೆಲಸಗಳಲ್ಲಿ ಸಹಭಾಗಿ. ತನ್ನೆಲಾ ಯಶಸ್ಸಿಗೆ ಪತ್ನಿಯ ಶ್ರಮವೂ ಕಾರಣ ಎನ್ನುತ್ತಾರೆ ದಾಮೋದರ ಆಚಾರ್ಯರು. ಪುತ್ರ ಸತ್ಯಪ್ರಸಾದ್, ಮಗಳು ಧನ್ಯಶ್ರೀ ಎಲ್ಲರ ಶ್ರಮ ಸಂಸ್ಕೃತಿ ಶ್ರೇಯಸ್ಸಿನ ಹಿಂದಿದೆ. ಮೊಮ್ಮಗ ಶಾಲೆಗೆ ಹೋಗುತ್ತಿದ್ದರೂ ಬಿಡುವಿನ ಸಮಯದಲ್ಲಿ ಅವರೊಂದಿಗೆ ಕೆಲಸದಲ್ಲಿ ಭಾಗಿದಾರಿ. ಮನೆಮಂದಿಯ ಸಹಕಾರವೇ ತನಗೆ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ. ದಾಮೋದರ ಆಚಾರ್ಯರ ಮತ್ತೊಂದು ಸಂಗಾತಿಯೆಂದರೆ ರೇಡಿಯೋ. ಅವರು ಠಿಕಾಣಿ ಹೂಡಿದಲ್ಲೆಲ್ಲಾ ರೇಡಿಯೋ ಜೊತೆಗಿರುತ್ತದೆ. ಅವರೊಬ್ಬ ರೇಡಿಯೋ ಪ್ರಿಯರು. ಕಳೆದ 45 ವರ್ಷಗಳಿಂದ ರೇಡಿಯೋ ಕೇಳುಗರು. ಕೃಷಿರಂಗ ಅವರ ಖುಷಿಯ ವಿಷಯ.

ಕೃಷಿ ಯಂತ್ರೋಪಕರಣಗಳು ಉದ್ಯಮ ರೂಪ ಪಡೆದು ಕಾರ್ಖಾನೆಗಳಲ್ಲಿ ತಯಾರಾಗಿ ಮಾರುಕಟ್ಟೆಗೆ ಬಂದಾಗ ಕಮ್ಮಾರಿಕೆ ಕೆಲಸಗಳು ಕಡಿಮೆಯಾದವು. ಬಹಳಷ್ಟು ಮಂದಿ ಈ ವೃತ್ತ್ತಿಯನ್ನೇ ತೊರೆದು ಬೇರೆ ಕೆಲಸಗಳನ್ನು ಆಯ್ದುಕೊಂಡರು. ಕೊರೊನಾ ಕಾಲಘಟ್ಟದಲ್ಲಿ ಪರವೂರುಗಳಲ್ಲಿ ದುಡಿಯುತ್ತಿದ್ದ ಬಹುತೇಕ ಮಂದಿ ಮನೆ ಸೇರಿದರು. ಮನೆಗೆ ಬಂದವರು ಕೃಷಿಯಲ್ಲಿ ತೊಡಗಿಕೊಂಡರು. ಆದರೆ ಕೊರೊನಾ ಇವರನ್ನು ಸೋಲಿಸಲಿಲ್ಲ. ಕೈ ತುಂಬಾ ಕೆಲಸ ಕೊಟ್ಟಿತು. ಆಧುನಿಕ ಯಂತ್ರಗಳು ಎಷ್ಟೇ ಬರಲಿ. ಕುಲಕಸುಬುಗಳನ್ನು ಮುಂದುವರಿಸಬಹುದು. ಜೀವನಕ್ಕೆ ತೊಂದರೆಯಾಗದು ಎಂಬುದು ಅವರ ದೃಢ ನಂಬಿಕೆ

ಕೃಷಿ ಆಸಕ್ತರಾದ ಅವರಿಗಿರುವುದು ಚಿಕ್ಕ ಜಾಗ. ಅದರಲ್ಲೂ ಮಳೆನೀರ ಕೊಯ್ಲು ಅಳವಡಿಸಿದ್ದಾರೆ. ಹಳ್ಳಿಗಳಲ್ಲಿ ಸ್ವ ಉದ್ಯೋಗ ಮಾಡಿಕೊಂಡಿರುವ ಇಂತಹವರಿಗೆ ಸರಕಾರದ ನೆರವು ದೊರೆತರೆ ಆರ್ಥಿಕತೆ ಚೇತರಿಸುತ್ತದೆ. ಗ್ರಾಮೀಣ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ. ದಾಮೋದರ ಆಚಾರ್ಯರ ಶ್ರಮ, ಶ್ರದ್ಧೆ, ಕಠಿಣ ದುಡಿಮೆ, ಸಾಧನೆಯನ್ನು ಗುರುತಿಸಿ ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಮಾಹಿತಿಗೆ ಮೊ. 9611910871

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group