ಅವು ತಮ್ಮ ಒಂದು ಸುತ್ತಿನ ಉಪಹಾರವನ್ನು ಮುಗಿಸಿದ್ದವು. ಮತ್ತೆ ತಮಗೆ ಬರಲಿರುವ ಆಹಾರದ ನಿರೀಕ್ಷೆಯಲ್ಲಿದ್ದವು. ತಮ್ಮ ಒಡೆಯ ಪಕ್ಕದಲ್ಲಿ ಸುಳಿದಾಡಿದಾಗಲೆಲ್ಲಾ ಕತ್ತು ಎತ್ತರಿಸಿ ಕಣ್ಣರಲಿಸಿ ನೋಡುತ್ತಿದ್ದವು. ಮುಖವನ್ನು ಮತ್ತೆ ಮುಂದಕ್ಕೆ ಮಾಡಿ ಇನ್ನೇಕೆ ತಡ ಎಂದು ಕೇಳುವಂತಿತ್ತು ನೋಟ…ಕೆಲವು ಮೆಲ್ಲಗೆ ಅಂಬಾ ಎನ್ನಲು ಆರಂಭಿಸಿದ್ದವು
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹೆಗ್ಡೆಬೆಟ್ಟು ಕಮಲೇಶ ನಾಯಕ್ ಅವರು ಕೃಷಿಕರು. ಅದರೊಂದಿಗೆ ಅಷ್ಟೇ ಮಹತ್ವ ಹೈನುಗಾರಿಕೆಗೂ ನೀಡಿದ್ದಾರೆ. ಹೈನುಗಾರಿಕೆಯಲ್ಲಿರುವ ಖರ್ಚುವೆಚ್ಚಗಳು, ಸಮಸ್ಯೆಗಳ ಲೆಕ್ಕಾಚಾರ ಹಾಕಿ ಹೈನುಗಾರಿಕೆ ಮಾಡಿದವರಲ್ಲ. ಆದರೆ ದನ ಸಾಕಾಣೆಯಲ್ಲಿ ಯಶಸ್ಸು ಕಂಡವರು. ಕಮಲೇಶ ನಾಯಕ್ ಮತ್ತು ಅವರ ಪತ್ನಿ ಶಾರದಾ ನಾಯಕ್ ಇಬ್ಬರೂ ಹೈನುಗಾರಿಕೆಯಲ್ಲಿ ಆಸಕ್ತಿ ಹೊಂದಿದವರು. ಅವರ ಸುಮಾರು ಎಂಟು ಎಕರೆ ಅಡಿಕೆ ಹಾಗೂ ತೆಂಗು ಅಲ್ಲದೆ ಕೊಕ್ಕೊ ಇರುವ ತೋಟಕ್ಕೆ ಗೊಬ್ಬರ ಹೊಂದಿಸಲು ದನ ಸಾಕಣೆ ಆರಂಭದಲ್ಲಿ ಅನಿವಾರ್ಯವಾಗಿತ್ತು. ಆಗ ಅವರಲ್ಲಿ ಊರ ತಳಿಗಳಿದ್ದವು.
ಮನೆ ಉಪಯೋಗಕ್ಕೆ ಬೇಕಾದಷ್ಟು ಬಳಸಿ ನಂತರ ಮಿಕ್ಕಿದನ್ನು ಹಾಲಿನ ಸೊಸೈಟಿಗೆ ನೀಡುವ ಪರಿಪಾಠವಿತ್ತು. ಆನಂತರ ಕಮಲೇಶ ಮತ್ತು ಶಾರದಾ ಅವರು ಹೈನುಗಾರಿಕೆ ಬಗ್ಗೆ ಹೆಚ್ಚು ಗಮನ ಹರಿಸಿದರು. ಆರಂಭದಲ್ಲಿ ೩ಲೀ ಹಾಲು ಡೈರಿಗೆ ನೀಡುತ್ತಿದರೆ ನಂತರದ ದಿನಗಳಲ್ಲಿ ೧೨೦-೧೩೦ರವರೆಗೂ ತಲುಪಿತ್ತು. ಆದರೆ ಈಗ ಕೆಲವು ಗಬ್ಬದ ಹಸುಗಳಿರುವುದರಿಂದ ಮತ್ತೆ ಕೆಲವು ಮಾರಾಟ ಮಾಡಿರುವುದರಿಂದ ಹಿಂದಿನಷ್ಟು ಹಾಲು ಡೈರಿಗೆ ಹಾಕುತ್ತಿಲ್ಲ. ಹಸು-ಕರು ಸೇರಿದಂತೆ ೨೨ ದನಗಳನ್ನು ಪೋಷಿಸುತ್ತಿದ್ದಾರೆ. ಗೀರ್, ಸಾಹಿವಾಲ್, ಜರ್ಸಿ ಮೊದಲಾದ ಮಿಶ್ರ ತಳಿಗಳು ಅವರಲ್ಲಿವೆ.
ಹೈನುಗಾರಿಕೆ ಅಷ್ಟು ಸುಲಭವಲ್ಲ. ರೂಪುರೇಷೆಗಳನ್ನು ಹಾಕಿಕೊಂಡು ವೈಜ್ಞಾನಿಕವಾಗಿ ಹೈನುಗಾರಿಕೆ ಮಾಡಿದರೆ ಹೆಚ್ಚು ಹಾಲು ಉತ್ಪಾದನೆ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಕೆಲಸಗಾರರನ್ನೇ ಆಶ್ರಯಿಸಿಕೊಂಡು ಹೈನುಗಾರಿಕೆ ಮಾಡುವುದು ಹೆಚ್ಚು ಫಲದಾಯಕವಾಗದು. ನಾವು ಹಾಲಿಗಾಗಿಯೇ ಹೈನುಗಾರಿಕೆ ಮಾಡುತ್ತಿಲ್ಲ. ಇದರಿಂದ ಕೃಷಿಗೆ ಹೆಚ್ಚು ಅನುಕೂಲವಾಗುತ್ತದೆ. ತಮ್ಮನ್ನು ತಾವೇ ಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಂಡಿರುವುದರಿಂದ ಆದಾಯವೂ ಬರುತ್ತಿದೆ. ಎನ್ನುತ್ತಾರೆ ಕಮಲೇಶ ಮತ್ತು ಶಾರದಾ ದಂಪತಿ.
ಹೈನುಗಾರಿಕೆಗೆ ಅನುಕೂಲವಾಗುವಂತೆ ತಮ್ಮ ಜಾಗದಲ್ಲಿ ಒಂದುವರೆ ಎಕ್ರೆಯಷ್ಟು ನೇಫಿಯರ್ ಸೇರಿದಂತೆ ಹೈಬ್ರಿಡ್ ತಳಿಯ ಹುಲ್ಲು ಬೆಳೆಸಿದ್ದಾರೆ. ಅದರೊಂದಿಗೆ ತೋಟದಲ್ಲಿ ನೈಸರ್ಗಿಕ ಹುಲ್ಲಿದೆ. ದನದ ಕೊಟ್ಟಿಗೆಯ ಸ್ಲರಿಯನ್ನು ಪಂಪ್ ಮೂಲಕ ಹುಲ್ಲಿಗೆ ಹಾಯಿಸುತ್ತಾರೆ. ಇದಲ್ಲದೆ ಸೈಲೇಜನ್ನು ತರಿಸಿಕೊಳ್ಳುತ್ತಿದ್ದಾರೆ. ಹಿಂಡಿಯನ್ನು ತಾವೇ ತಯಾರಿಸಿಕೊಳ್ಳುತ್ತಾರೆ.ಹಿಂಡಿಯಲ್ಲಿ ಜೋಳ, ಜೋಳದ ಕಡ್ಡಿ, ತೆಂಗು, ನೆಲಗಡಲೆ, ಹತ್ತಿ, ಎಳ್ಳು ಮೊದಲಾದುವುಗಳ ಮಿಶ್ರಣ ಮಾಡಿ ತಾವೇ ಹಿಂಡಿ ತಯಾರಿಸಿಕೊಳ್ಳುತ್ತಾರೆ.
ಯಂತ್ರದಲ್ಲಿ ಹಾಲು ಕರೆಯುವುದಕ್ಕೆ ವಿದ್ಯುತ್ ಅವಶ್ಯಕ. ಕೆಲವೊಂದು ಬಾರಿ ಹಾಲು ಕರೆಯಬೇಕಾದ ಸಮಯಕ್ಕೆ ಸರಿಯಾಗಿ ವಿದ್ಯುತ್ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಹಾಲು ಕರೆದು ಕ್ಲಪ್ತ ಸಮಯದಲ್ಲಿ ಸಂಘಕ್ಕೆ ಹಾಲು ನೀಡುವುದು ಕಷ್ಟವಾಗುತ್ತದೆ. ಅದಕ್ಕಾಗಿ ಸೋಲಾರ್ ವ್ಯವಸ್ಥೆ ಮಾಡಿಕೊಳ್ಳುವ ಯೋಚನೆ ಅವರದಾಗಿದೆ. ಗೋಬರ್ ಗ್ಯಾಸ್ ಹೊಂದಿದ್ದಾರೆ
ಮಣ್ಣಿನ ಫಲವತ್ತತೆ
ಕೃಷಿಕರು ದನ ಸಾಕುವುದರಿಂದ ಹೆಚ್ಚಿನ ಪ್ರಯೋಜನವಾಗುವುದು ಕೃಷಿಗೆ. ಗೊಬ್ಬರ ಕೃಷಿಗೆ ಉಪಯೋಗವಾಗುತ್ತದೆ. ಇದರಿಂದ ರಾಸಾಯನಿಕ ಗೊಬ್ಬರ ಖರೀದಿಯ ಅವಶ್ಯಕತೆಯಿಲ್ಲ. ಪಾರಂಪರಿಕವಾದ ಸಾವಯುವ ಕೃಷಿ ಚಟುವಟಿಕೆಗೆ ಅನುಕೂಲವಾಗುತ್ತದೆ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಜೊತೆಗೆ ಮಣ್ಣಿನ ಪದರ ಬಹಳಷ್ಟು ನಯವಾಗಿರುತ್ತದೆ. ಕೃಷಿ ಆದಾಯವೂ ಹೆಚ್ಚುತ್ತದೆ.
ಒಮ್ಮಿಂದೊಮ್ಮೆಗೆ ಇದರಲ್ಲಿ ಯಶಸ್ಸು ಸಾಧ್ಯವಿಲ್ಲ. ಮೊದಲು ಊರ ಅಥವಾ ಮಿಶ್ರ ತಳಿಗಳನ್ನು ಸಾಕಿ ಅನುಭವಕ್ಕೆ ಬರಬೇಕು. ಆನಂತರ ಹೆಚ್ಚು ದನಗಳನ್ನು ಸಾಕಲು ಮುಂದಾಗಬೇಕು. ಹೈನುಗಾರಿಕೆಯಲ್ಲಿ ಜೀವನಕ್ಕೆ ದಾರಿ ಇದೆ. ಆದರೆ ದೊಡ್ಡ ಆದಾಯದ ನಿರೀಕ್ಷೆ ಬೇಡ. ದುಡಿಯುವ ಮನಸ್ಸು ಬೇಕು. ಆರ್ಥಿಕ ಸೌಲಭ್ಯಗಳು ಸಿಗಬೇಕು. ಸರಕಾರದ ಪ್ರೋತ್ಸಾಹವೂ ಬೇಕು. ಹುಲ್ಲು ಬೆಳೆಯುವುದಕ್ಕೆ ಒಂದಿಷ್ಟು ಜಾಗ ಬೇಕು. ಆಗ ಪರಿಣಾಮಕಾರಿಯಾಗಿ ಹೈನುಗಾರಿಕೆ ಮಾಡಬಹುದು ಎನ್ನುತ್ತಾರೆ ಕಮಲೇಶ ನಾಯಕ್.
ಕಮಲೇಶ ನಾಯಕ್ ಅವರ ಪುತ್ರ ಶೈಲೇಶ ನಾಯಕ್ ಅವರು ಕೃಷಿ-ಹೈನುಗಾರಿಕೆ ಬಗ್ಗೆಯೂ ಕಾಳಜಿ ಹೊಂದಿದ್ದಾರೆ. ಇವರ ಮೊಬೈಲ್ ಸಂಪರ್ಕ: 9900925449
♦ರಾಧಾಕೃಷ್ಣ ತೊಡಿಕಾನ
ಚಿತ್ರ : ರಾಮ್ ಅಜೆಕಾರ್