spot_img
Tuesday, September 17, 2024
spot_imgspot_img
spot_img
spot_img

ಖುಷಿಗಾಗಿ ಕಬ್ಬು ಕೃಷಿ ಮಾಡಿದ ಎನ್. ಟಿ.: ಇವರ ಹಸಿರ ಪ್ರೀತಿಯೇ ಒಂದು ಸ್ಪೂರ್ತಿ!

-ಗಣಪತಿ ಹಾಸ್ಪುರ

ಹುಳಗೋಳದ ಎನ್.ಟಿ ಇದ್ನಲ ಅವ ಅಡಿಕೆ ತೋಟದಲ್ಲಿಯೇ ಕಬ್ಬು ಬೆಳೆದ್ನೊ ಮಾರಾಯ್ಯಾ.ಅವ್ನ ತೋಟದಲ್ಲಿ ಈಗ ಆಳೇತ್ತರಕ್ಕೆ ಕಬ್ಬು ಬೆಳೆದಿದ್ದು ನೋಡಿದ್ರೆ ಬಾಳ್ ಖುಷಿಯಾಗ್ತ.ಅವ ಮನೆಲಿ ಒಬ್ನೆ ಆದ್ರೂವಾ ಬಹಳ ಕಷ್ಟಪಟ್ಟು ಕೃಷಿ ಮಾಡ್ತಾ ಇದ್ನಲಾ….ಅವ್ನ ಸಾಹಸಕ್ಕೆ ಮೆಚ್ಚದೇಯೋ….ಅಂತ ಒರ್ವ ಮಿತ್ರರು ಹೇಳಿದಾಗ ಸಹಜವಾಗಿಯೇ ಆಶ್ಚರ್ಯವಾಗಿತ್ತು. ಅವ್ರಾಡಿನ ಮಾತನ್ನ ಕೇಳಿದಾಕ್ಷಣ ಅವರ ತೋಟವನ್ನು ಕಣ್ಣಾರೇ ನೋಡಬೇಕೆಂಬ ಆಸೆ ಆಕ್ಷಣ ಮನಸ್ಸಲ್ಲಿ ಟೀಸಿಲೊಡೆದಿತ್ತು.

ಶಿರಸಿ ತಾಲೂಕಿನ ಬೈರುಂಬೆ ಸಮೀಪದ ಹುಳಗೋಳದ ನಾಗಪತಿ ತಿಮ್ಮಯ್ಯ ಹೆಗಡೆ ಅವರು ಎನ್.ಟಿ. ಹೇಳಿಯೇ ಊರಲ್ಲಿ ಚಿರಪರಿಚಿತರು. ಅವರಿಗೆ ಮೂರು ಕಡೆಗಳಲ್ಲಿ ಕೃಷಿಭೂಮಿ ಇದೆ. ಅವರು ಪ್ರಧಾನವಾಗಿ ಅಡಿಕೆ ಕೃಷಿಯನ್ನು ಮಾಡಿದರೂ , ಕಾಳುಮೆಣಸಿನ ಬೆಳೆಯನ್ನು ಸಹಾ ಮಾಡುತ್ತಾ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದಾರೆ.

ಇವರಿಗೆ ಗುಂಡಿಗದ್ದೆಯಲ್ಲಿ ಒಂದು ಎಕರೆ ಅಡಿಕೆ ತೋಟವಿದೆ.ಅದು ಮನೆಯಿಂದ ಬಹಳ ದೂರವಿದ್ದರು, ಆ ಜಾಗದ ತೋಟವನ್ನು ವ್ಯವಸ್ಥಿತವಾಗಿ, ಆಧುನಿಕ ಪದ್ದತಿಯಲ್ಲಿಯೇ ಸಾಗುವಳಿ ಮಾಡುತ್ತಾ ಉತ್ತಮ ಫಸಲನ್ನು ಪಡೆಯುತ್ತಿದ್ದಾರೆ. ಈ ಜಾಗದಲ್ಲಿ ದೊಡ್ಡ ವಿದ್ಯತ್ ತಂತಿ ಹಾದು ಹೋಗಿದ್ದರಿಂದ ಒಂದಿಷ್ಟು ಜಾಗ ಖಾಲಿ ಉಳಿದಿತ್ತು. ಅಲ್ಲಿ ಅಡಿಕೆ ಹಚ್ಚಿದ್ರು ಸಮಸ್ಯೆ, ಬಾಳೆ ನೆಟ್ಟರೆ ಮಂಗನ ಕಾಟ….ಹೀಗಾಗಿ ಒಂದಿಷ್ಟು ಜಾಗದಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೆ ಹಾಗೆ ಉಳಿದಿತ್ತು. ಅಲ್ಲಿ ಏನಾದ್ರು ಬೆಳೆಯಬೇಕು ಅನಿಸಿತ್ತೇ ವಿನಃ, ಯಾವುದನ್ನ ಮಾಡಬೇಕು ಅಂತ ಮನಸ್ಸಲ್ಲಿ ಹೊಳಿತಾ ಇರಲಿಲ್ಲ.

ಒಮ್ಮೆ ಊರಿನಲ್ಲಿ ಒಬ್ಬರು ಊರಿನವರನ್ನ,ಆತ್ಮೀಯರನ್ನು ಕರೆದು ಆಲೆಮನೆ ಹಬ್ಬ ಮಾಡಿದ್ದರು. ಅದ್ಕೆ ಹೋದಾಗ ನನಗೂ ಖುಷಿಯಾಗಿತ್ತು. ಜೊತೆಗೆ ನಾವು ಈ ರೀತಿಯಲ್ಲಿ ಹಬ್ಬ ಮಾಡಬೇಕೆಂಬ ಪ್ರೇರಣೆಯೂ ಆಗಿತ್ತು. ಹಾಗೆ ಯೋಚಿಸಿ ಕಬ್ಬು ಬೆಳೆಯಲು ಸಂಕಲ್ಪಿಸಿದೆ.2022 ರಲ್ಲಿ ಒಂದಿಷ್ಟು ಕಬ್ಬನ್ನು ತಂದು ಹೊಸ ವಿಧಾನದಲ್ಲಿ ನಾಟಿ ಮಾಡಿದೆ. ನನಗೆ ಆ ಬೆಳೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ , ಅಡಿಕೆ ತೋಟದಲ್ಲಿ , ವಿದ್ಯುತ್ ತಂತಿ ಹಾದು ಹೋದ ಜಾಗದಲ್ಲಿ ನೆಟ್ಟು ಪೋಷಿಸಿದೆ.ಕಳೆದ ಸೀಜನ್ನಿನಲ್ಲಿ ಹೇಳಿಕೊಳ್ಳುವಷ್ಟು ಕಬ್ಬು ಬಲಿತಿರಲಿಲ್ಲ.ಆ ನಂತರ ಆ ಕೃಷಿಯ ಬಗ್ಗೆ ಅಷ್ಷಷ್ಟೇ ಮಾಹಿತಿ ಪಡೆದುಕೊಂಡೆ. ಈ ಸೀಜನ್ನಿನಲ್ಲಿ ಸುಮಾರು 40 ಗುಂಡಿಯಲ್ಲಿ ಕಬ್ಬನ್ನು ಸುಧಾರಿತ ಪದ್ದತಿಯಲ್ಲಿ ನೆಟ್ಟು, ಆರೈಕೆ ಮಾಡಿದೆ. ಮಂಗಗಳು ಬರದಂತೆ ಸುತ್ತಲೂ ಬಲೆಯನ್ನು ಅಳವಡಿಸಿ,ಕಬ್ಬಿನ ಬೆಳೆಯನ್ನು ಸಂರಕ್ಷಿಸಿದೆ. ಈ ಸುಧಾರಿತ ಪದ್ದತಿಯಲ್ಲಿ ಕಬ್ಬಿನ ಕೃಷಿ ಮಾಡಿದರೆ, ರವದೆಯನ್ನು ಕಬ್ಬಿಗೆ ಸುತ್ತಲೇ ಬೇಕಿಲ್ಲ.ಓಳಿ ಮಾಡಿ ಬೀಜ ಹಾಕಬೇಕಿಲ್ಲ.ಮಣ್ಣನ್ನು ಏರಿಸಿಕೊಡಬೇಕು ಎಂಬ ಕೆಲಸವೂ ಇರುವುದಿಲ್ಲ.ನಮ್ಮ ಹಿರಿಯರು ಮಾಡುವ ಅರ್ಧದಷ್ಟು ಕೆಲಸವೂ ಈ ಸುಧಾರಿತ ಪದ್ದತಿಯಲ್ಲಿ ಇಲ್ಲದೇ ಇರುವುದರಿಂದ ಕಬ್ಬಿನ ಕೃಷಿಯನ್ನು ಬೆಳೆಯುವುದೀಗ ಬಹಳ ಸುಲಭ ಎನ್ನುತ್ತಾರೆ ಹುಳಗೋಳದ ನಾಗಪತಿ ಹೆಗಡೆ.

ಇವರು ಈ ವರುಷ ಸುಮಾರು ನಲವತ್ತು ಗುಂಡಿಯಲ್ಲಿ ಕಬ್ಬಿನ ಬೀಜವನ್ನು ಹಾಕಿದ್ದರು. ಅದೀಗ ಹುಲುಸಾಗಿ ಬೆಳೆದು ಮೂನ್ನೂರಕ್ಕು ಹೆಚ್ಚು ಕಬ್ಬುಗಳು ಆಳೆತ್ತರಕ್ಕೆ ಬಲಿತು ನಿಂತಿವೆ. ಎನ್.ಟಿ. ಅವರ ಅಂದಾಜಿನ ಪ್ರಕಾರ ಇವಿಷ್ಟು ಕಬ್ಬು ನೂರಕ್ಕು ಹೆಚ್ಚು ಜನರು ಆರಾಮವಾಗಿ ಕಬ್ಬಿನ ಹಾಲನ್ನು ಕುಡಿಬಹುದು ಎನ್ನುತ್ತಾರೆ.

ಹುಳಗೋಳದ ಉತ್ಸಾಹಿ ಕೃಷಿಕ ನಾಗಪತಿ ಹೆಗಡೆಯವರು ಈ ಕಬ್ಬನ್ನು ಬೆಲ್ಲ ಮಾಡುವುದಕ್ಕು ಬೆಳೆದಿಲ್ಲ; ಮಾರಾಟ ಮಾಡುವುದಕ್ಕು ಈ ಕೃಷಿ ಮಾಡಿದವರಲ್ಲ. ತಮ್ಮ ನೆಂಟರು, ಸ್ನೇಹಿತರು, ಊರ ಜನರನ್ನು ಸೇರಿಸಿ ಆಲೆಮನೆ ಹಬ್ಬ ಮಾಡಿ ಸವಿಯಬೇಕು ಎನ್ನುವ ಏಕೈಕ ಉದ್ದೇಶದಿಂದ ಖಾಲಿ ಜಾಗದಲ್ಲಿ ಒಂದಿಷ್ಟು ಕಬ್ಬನ್ನು ಬೆಳೆಸಿದ್ದೇನೆ‌. ಈ ರೀತಿಯ ಸಂಭ್ರಮದಲ್ಲಿ ಹಾಲು ಸವಿದಾಗಿನ ಸಂತೋಷ , ಉತ್ಸಾಹ ಏಷ್ಟು ಹಣ ಕೊಟ್ಟರೂ ಸಿಗಲಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group