spot_img
Saturday, September 13, 2025
spot_imgspot_img
spot_img

ಗಿಡ್ಡ ತಳಿ ದನ ಸಂರಕ್ಷಣೆ ಸಂವರ್ಧನೆಯಲ್ಲಿ “ಪ್ರವೀಣ”

-ರಾಧಾಕೃಷ್ಣ ತೊಡಿಕಾನ

ಗಿಡ್ಡ ತಳಿಯ ದನಗಳನ್ನು ಮೇಯಿಸಲು ಹೊರಟಾಗ ಈ ದನಗಳನ್ನು ನಂಬಿ ಎಂತಹ ಹೈನುಗಾರಿಕೆ ಮಾಡುತ್ತೀಯಾ…. ಎಂದು ಬಹಳಷ್ಟು ಮಂದಿ ತಮಾಷೆ ಮಾಡಿದ್ದರು. ಆದರೂ ಧೃತಿಗೆಡದೆ ಅದನ್ನೇ ಮುಂದುವರಿಸಿದೆ. ಆಗ ಗೇಲಿ ಮಾಡಿದವರೆಲ್ಲಾ ಈಗ ಹುಬ್ಬೇರಿಸಿ ನೋಡುತ್ತಿದ್ದಾರೆ. ಮುಜುಗರಕ್ಕೂ ಒಳಗಾಗಿದ್ದಾರೆ. ಎನ್ನುತಾರೆ ಗಿಡ್ಡ ತಳಿ ಹೈನುಗಾರರಾದ ಪ್ರವೀಣ್ ಬೆಳ್ಳಾರೆ

ದನ ಸಾಕಾಣೆ ಲಾಭದಾಯಕವಲ್ಲ. ಕಷ್ಟ ನಷ್ಟಗಳು ಹೆಚ್ಚು. ಎಂಬುದು ಹೈನುಗಾರಿಕೆ ಮಾಡುತ್ತಿರುವ ಕೆಲವರ ಅಭಿಪ್ರಾಯ. ಈ ನಡುವೆಯೂ ಹೈನುಗಾರಿಕೆಯಿಂದ ಯಶನ್ನು ಕಂಡವರು ಹಲವರಿದ್ದಾರೆ. ಅಂತಹವರಲ್ಲಿ ಹೆಚ್ಚಾಗಿರುವುದು ಹೆಚ್ಚು ಹಾಲು ಕೊಡುವಂತಹ ಹೆಚ್‌ಎಫ್ ಅಥವಾ ಮಿಶ್ರ ತಳಿಗಳನ್ನು ಸಾಕಿದವರು. ಗಿಡ್ಡ ತಳಿಗಳನ್ನಲ್ಲ. ದೇಶೀಯವಾದ ಗಿಡ್ಡ ತಳಿಯನ್ನೇ ನೆಚ್ಚಿಕೊಂಡು ಅದನ್ನೇ ತನ್ನ ಆಸ್ತಿಯನ್ನಾಗಿಸಿ ಸಾಧನೆ ಮಾಡಿದ ಪ್ರವೀಣ್ ಬೆಳ್ಳಾರೆ ಮಾದರಿಯಾಗಿ ನಿಲ್ಲುತ್ತಾರೆ

ಪ್ರವೀಣ್‌ರಲ್ಲಿ ದೊಡ್ಡ ಆಸ್ತಿಪಾಸ್ತಿಗಳೇನು ಇಲ್ಲ. ಹೈನುಗಾರಿಕೆಗೆ ಸಂಬಂಧಪಟ್ಟಂತೆ ಬಹಳ ಹಾಲು ಕೊಡುವ ದೊಡ್ಡ ದೊಡ್ಡ ಹಸುಗಳಿಲ್ಲ. ಮಿಶ್ರತಳಿಯೂ ಇಲ್ಲ. ಹಿಂದೊಮ್ಮೆ ಕೃಷಿಕರ ಮನೆಮನೆಗಳಲ್ಲಿದ್ದ ಹಾಗೂ ಈಗ ಕಡೆಗಣನೆಗೊಳಗಾಗಿ ವಿನಾಶದ ಅಂಚಿನಲ್ಲಿರುವ ಅಪರೂಪದ ಕರಾವಳಿ ಮಲೆನಾಡು ಗಿಡ್ಡ ತಳಿಗಳೇ ಅವರಲ್ಲಿರುವ ಸಂಪತ್ತು. ಅವುಗಳೇ ಸರ್ವಸ್ವ. ಅವರ ಬದುಕಿಗೆ ಜೀವನಾಧಾರ

ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ಅವರು ಖಾಸಗಿ ಬಸ್ಸಿನಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಅದರೇನು ಕೊರೊನಾ ಇಡೀ ಜನಜೀವನವನ್ನೇ ಸ್ತಬ್ಧಗೊಳಿಸಿದಾಗ ಪ್ರವೀಣ್ ಅದಕ್ಕೆ ಹೊರತಾಗಿರಲಿಲ್ಲ. ಬಸ್ಸುಗಳ ಸಂಚಾರ ನಿಂತಿತು. ಎಲ್ಲರಂತೆ ಅವರೂ ಮನೆಯೊಳಗೆ ಬಂಧಿಯಾದರು. ಮನೆಯಲ್ಲಿ ಕುಳಿತು ಮಾಡುವುದೇನು?ಆಗ ಅವರ ಆಸಕ್ತಿ ಕೆರಳಸಿದ್ದು ಹೈನುಗಾರಿಕೆ. ಹೈನುಗಾರಿಕೆ ಅವರಿಗೆ ಹೊಸದಲ್ಲ. ಅವರ ತಂದೆ ಹೈನುಗಾರರಾಗಿದ್ದರು.

ಪ್ರವೀಣ್ ಸರಳಾಯ ಅವರು ಗೋವಿನ ಮಹತ್ವದ ಕುರಿತಾದ ವಾಟ್ಸಪ್ ಗ್ರೂಪ್ ಹೊಂದಿದ್ದರು. ಅದರಲ್ಲಿ ದೇಶೀಯ ಹಾಗೂ ವಿದೇಶೀಯ ತಳಿಗಳ ಮಾಹಿತಿಗಳಿರುತ್ತಿದ್ದವು. ದೇಶೀಯ ಅಂದರೆ ಕರಾವಳಿ ಹಾಗೂ ಮಲೆನಾಡಿನ ಗಿಡ್ಡ ತಳಿಗಳ ಮಹತ್ವ ಅರಿವಾದಾಗ ಗಿಡ್ಡ ತಳಿಯ ದನ ಸಾಕಾಣೆಗೆ ಮುಂದಾದರು. ಒಂದೆಡೆ ಆಸಕ್ತಿ ಮತ್ತೊಂದೆಡೆ ಕೊರೊನಾ ಕಾಲದ ಅನಿವಾರ್ಯತೆ ಪ್ರವೀಣ್ ಅವರನ್ನು ಗಿಡ್ಡ ತಳಿ ದನ ಸಾಕಾಣೆದಾರನನ್ನಾಗಿಸಿತು. 2 ದನಗಳಿಂದ ಆರಂಭವಾಗಿ ಈಗ 25 ದನಗಳಾಗಿವೆ. ಅದರಲ್ಲಿ ಕಪಿಲೆ ಹಸುಗಳೇ 12 ಇದ್ದರೆ ಉಳಿದವು ಕಪ್ಪು ಮತ್ತು ಇತರ ಬಣ್ಣದವು.

ಮಲೆನಾಡ ಗಿಡ್ಡ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಮಲೆನಾಡು ಭಾಗದ ಇತರೆಡೆಗಳಲ್ಲಿ ಕಂಡುಬರುವ ತಳಿಯಿದು. ಕಾಸರಗೋಡು ಗಿಡ್ಡವೂ ಇಂತಹದ್ದೇ ತಳಿ. ಈ ಗಿಡ್ಡ ತಳಿಗಳು ಪ್ರದೇಶದಿಂದ ಪ್ರದೇಶಕ್ಕೆ ಸ್ವಲ್ಪ ಭಿನ್ನತೆ ಹೊಂದಿದೆ. ಅಷ್ಟೇ. ತೀರಾ ವೈಪರಿತ್ಯದ ಹಾಗೂ ಎಲ್ಲಾ ಹವಾಮಾನಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಈ ತಳಿಗಿದೆ. ಕಾಡು, ಗುಡ್ಡ ಬೆಟ್ಟಗಳನ್ನು ಸುಲಭವಾಗಿ ಏರಿ ಇಳಿದು ಸುತ್ತಿ ಔಷಧಿಯ ಗಿಡ, ಸೊಪ್ಪು, ಹುಲ್ಲು ಮೇಯ್ದು ಬರುವ ಇವುಗಳಿಗೆ ರೋಗರುಜಿನಗಳು ಕಡಿಮೆ. ರೋಗನಿರೋಧಕ ಶಕ್ತಿ ಹೆಚ್ಚು. ಕಡಿಮೆ ಆಹಾರ ಸಾಕಾಗುತ್ತದೆ. ಗದ್ದೆ ತೋಟಗಳಿಂದ ತಂದಿರಿಸಿದ ಹಸಿರು ಹುಲ್ಲು, ಬೈಹುಲ್ಲು, ಉಳಿಕೆ ಆಹಾರ, ತೌಡು, ತೆಂಗು ಬೆಳೆಯಿದ್ದರೆ ತೆಂಗಿನ ಕಾಯಿ ಹಿಂಡಿ ಹೊರತುಪಡಿಸಿದರೆ ಮಾರುಕಟ್ಟೆಯಲ್ಲಿ ದೊರೆಯುವ ಸಿದ್ಧ ಆಹಾರಗಳು ಹೆಚ್ಚಾಗಿ ನೀಡುವುದಿಲ್ಲ. ಕಾರಣ ಇವು ಹಾಲು ಕೊಡುವ ತಳಿಗಳಲ್ಲ. ಕೃಷಿಕರ ಕೃಷಿಗೆ ಪೂರಕವಾದ ತಳಿಗಳಿವು. ಕಾಡು ಮೇಡುಗಳಲ್ಲಿ ಸುತ್ತಾಡಿ ಹೊಟ್ಟೆ ತುಂಬಿಸಿಕೊAಡು ಬರುವಂತಹವು. ಒಮ್ಮೊಮ್ಮೆ ಗುಡ್ಡದಲ್ಲಿಯೇ ಕರು ಹಾಕಿ ಮತ್ತೆ ಮನೆಗೆ ಬಂದುದೂ ಇದೆ.

ಹಾಲಿಗೆ ಬೇಡಿಕೆ

ಮಲೆನಾಡು ಗಿಡ್ಡ ಹೆಚ್ಚು ಹಾಲು ನೀಡುವುದಿಲ್ಲ. ಆದರೆ ನೀಡುವ ಹಾಲು ಔಷಧೀಯ ಗುಣವುಳ್ಳದ್ದು. ಇವರಲ್ಲಿಯೂ ಅಷ್ಟೇ. ಈ ಹಸುಗಳು ಹೆಚ್ಚು ಹಾಲು ನೀಡುವುದಿಲ್ಲ. 250 ಎಂ.ಎಲ್‌ನಿಂದ ನಾಲ್ಕೈದು ಲೀಟರ್ ವರೆಗೆ ನೀಡಬಹುದು. ಪ್ರವೀಣ್ ಅವರು ದಿನವೊಂದಕ್ಕೆ 5 ಲೀಟರ್ ಹಾಲು ಮಾರಾಟ ಮಾಡುತ್ತಾರೆ. ಬೇರೆ ತಳಿ ಒಂದು ಬಾರಿಗೆ ಅದಕ್ಕಿಂತಲೂ ಹೆಚ್ಚು ಹಾಲು ನೀಡಬಲ್ಲವು. ಆದರೆ ಅದಾವುದು ಅವರಿಗೆ ಆಸಕ್ತಿದಾಯಕವಾಗದೆ ಮಲೆನಾಡು ಗಿಡ್ಡ ತಳಿ ಅವರ ಮೊದಲ ಪ್ರಾಶಸ್ತ್ಯವಾಯಿತು. ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡುವುದಿಲ್ಲ. ಸುಳ್ಯದಲ್ಲಿ ಮಾರಾಟ ಮಾಡುತ್ತಾರೆ. ಆ ಹಾಲನ್ನೇ ಕೊಳ್ಳುವ ನಿರ್ದಿಷ್ಟ ಗ್ರಾಹಕರಿದ್ದಾರೆ. ಲೀಟರ್ ಒಂದಕ್ಕೆ ರೂ.1೦೦ ವರೆಗೂ ಮಾರಾಟವಾಗುತ್ತದೆ. ಗಿಡ್ಡ ತಳಿಯ ಹಾಲಿಗೆ ಬೇಡಿಕೆ ಇದೆ. ಆದರೆ ಬೇಡಿಕೆ ಇದ್ದಷ್ಟು ಪೂರೈಕೆ ಮಾಡಲು ಹಾಲಿನ ಉತ್ಪಾದನೆಯಿಲ್ಲ ಎನ್ನುತ್ತಾರೆ ಪ್ರವೀಣ್.

ಗೋಮೂತ್ರವನ್ನು ಜೀವಾಮೃತ ಮಾಡುವ ಆಸುಪಾಸಿನ ಕೃಷಿಕರು ಕೊಂಡೊಯ್ಯುತ್ತಾರೆ. ಲೀಟರ್ ಒಂದಕ್ಕೆ 20 ರೂಪಾಯಿ. ತಿಂಗಳಿಗೆ ಸುಮಾರು 3೦೦ ಲೀಟರ್ ಗೋ ಮೂತ್ರ ಆಸುಪಾಸಿನಲ್ಲಿಯೇ ಮಾರಾಟವಾಗುತ್ತದೆ. ಸಗಣಿ ಬುಟ್ಟಿಗೆ 1೦೦ ರೂಪಾಯಿ. ಸ್ಥಳೀಯರು ಅಂಗಳ ಸಾರಿಸಲು, ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಸಗಣಿ ಕೊಂಡೊಯ್ಯುತ್ತಾರೆ.

ಸಗಣಿಯಿಂದ ವಿಭೂತಿ

ಗೋವಿನ ಹಾಡು ಬಹುತೇಕ ಮಂದಿ ಬಲ್ಲರು. ಇಟ್ಟರೆ ಸಗಣಿಯಾದೆ. ತಟ್ಟಿದರೆ ಭರಣಿಯಾದೆ. ಸುಟ್ಟರೆ ವಿಭೂತಿಯಾದೆ. ಗೋವಿನ ಮಹತ್ವವನ್ನು ಸಾರುವ ಮಹತ್ವದ ಸಂದೇಶವಿದೆ. ಹೌದು! ಅವರು ಸಗಣಿಯನ್ನು ಸಂಸ್ಕರಿಸಿ ವಿಭೂತಿಯನ್ನು ತಯಾರಿಸುತ್ತಾರೆ. ವಿಭೂತಿ ಅವರಿಗೊಂದು ಆದಾಯದೊಂದು ದಾರಿ. ಅಯ್ಯಪ್ಪ ಮಂದಿರಗಳು, ಪೂಜಾ ಸಾಮಾಗ್ರಿಗಳ ಮಾರಾಟ ಕೇಂದ್ರಗಳಿಗೆ ಈ ವಿಭೂತಿಯನ್ನು ನೇರವಾಗಿ ಮಾರಾಟ ಮಾಡುತ್ತಾರೆ. ಉತ್ತಮ ಗುಣಮಟ್ಟದ ವಿಭೂತಿಗೆ ಬೇಡಿಕೆಯಿದೆ. ಇವರು ದನವನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಸಭೆ ಸಮಾರಂಭ ಅಂತ ಸುತ್ತಾಡುವುದಿಲ್ಲ. ದಿನದ ಬಹುತೇಕ ಸಮಯವನ್ನು ದನದ ಕೆಲಸಗಳಿಗೆ ಮೀಸಲಿಡುತ್ತಾರೆ. ಇತ್ತೀಚೆಗೆ ಅವರಿಗೆ ಪ್ರಶಸ್ತಿ ಬಂದಾಗ ಬೆಂಗಳೂರಿಗೆ ಹೋಗಿ ಅದನ್ನು ಸ್ವೀಕರಿಸುವುದಕ್ಕೆ ಆ ಕಾರಣಕ್ಕೆ ಹಿಂಜರಿದಿದ್ದರು.

ತಳಿ ಸಂವರ್ಧನೆ

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜಾ ಸ್ಥಾನವಿದೆ. ಅದರಲ್ಲೂ ಕಪಿಲೆ ದನಗಳಿಗೆ ಹೆಚ್ಚು ಮಹತ್ವ. ಅವರಲ್ಲಿ ಸುಮಾರು 12 ಕಪಿಲೆ ಹಸುಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಬಿನ್ನ. ಬೇರೆ ಬೇರೆ ಬಣ್ಣದ ಕಪಿಲೆಗೂ ಅದರದೇ ವೈಶಿಷ್ಟ್ಯವಿದೆ. ಮಲೆನಾಡು ಗಿಡ್ಡ ತಳಿಗಳ ಉಳಿಸುವ ನಿಟ್ಟಿನಲ್ಲಿಯೂ ಪ್ರವೀಣ್ ಅವರ ಪ್ರಯತ್ನ ಸಾಗಿದೆ. ಗಿಡ್ಡ ತಳಿಗಳನ್ನು ಸಂವರ್ಧನೆಗೊಳಿಸುವತ್ತ ಕಾರ್ಯ ಪ್ರವೃತ್ತರಾಗಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಗಂಡು ಕರು ಹುಟ್ಟಿತೆಂದರೆ ಸಾಕಾಣೆದಾರರಿಗೆ ತಲೆನೋವು ಶುರುವಾಗುತ್ತದೆ. ಮುಂದೇನು ಮಾಡುವುದು ಯೋಚನೆಯಾಗುತ್ತದೆ. ಆದರೆ ಪ್ರವೀಣ್‌ರಿಗೆ ಆ ಚಿಂತೆ ಇಲ್ಲ. ಅವುಗಳನ್ನು ತಳಿ ಸಂವರ್ಧನೆಗೆ ಹೋರಿಗಳನ್ನಾಗಿ ಬಳಸಿಕೊಳ್ಳುತ್ತಾರೆ. ಇತ್ತೀಚಿನ ಐದು ವರ್ಷಗಳಲ್ಲಿ ನೂರಾರು ಹೋರಿಗಳನ್ನು ಮಾರಾಟ ಮಾಡಿದ್ದಾರೆ. ಇದರಲ್ಲಿ ಕೆಲವೊಂದು ಹೊರ ರಾಜ್ಯಗಳಿಗೂ ನೀಡಿರುವುದಾಗಿ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ಮಲೆನಾಡು ಗಿಡ್ಡದಲ್ಲಿ ತೀರಾ ಅಪರೂಪವಾಗಿ ಹುಟ್ಟುವಂತಹ, ಹುಲಿಪಟ್ಟೆ ಹೋಲುವ ಕೆಂಪು, ಹಳದಿ, ಕಪ್ಪು ಮಿಶ್ರಿತ ಬಣ್ಣದ ಹೋರಿ ಆಕರ್ಷಕವಾಗಿದೆ. ಅಲ್ಲಿರುವ ದನದ ಕೊಂಬುಗಳು ಗಮನಿಸುವಂತಹದ್ದೆ. ಅಲ್ಲಾಡುವ ಹಾಲುಕೊಂಬು, ಬಿಲ್ಲಿನಂತೆ ಬಾಗಿದ ಕೊಂಬು, ಮುಂಡು ಕೊಂಬು, ಶುಂಠಿಕೊಂಬು ಹೀಗೆ ನಾಲ್ಕೈದು ಬಗೆಯ ಕೊಂಬಿನ ದನಗಳನ್ನು ಇವರಲ್ಲಿ ಕಾಣಬಹುದು. ಗಿಡ್ಡ ತಳಿ ದನಗಳು ಕೆಲವೊಂದು ಪ್ರತೀ ವರ್ಷ ಕರು ಹಾಕಿದರೆ ಮತ್ತೆ ಕೆಲವು ಒಂದೂವರೆ ವರ್ಷಕ್ಕೆ ಇನ್ನು ಕೆಲವು ಎರಡು ವರ್ಷಕ್ಕೊಮ್ಮೆ ಕರು ಹಾಕುತ್ತವೆ

ಸಾವಯುವ ಭತ್ತ

ದಕ್ಷಿಣ ಕನ್ನಡದಲ್ಲಿ ಭತ್ತದ ಗದ್ದೆಗಳು ಬಹುತೇಕವಾಗಿ ಅಡಿಕೆ ತೋಟಗಳಾಗಿ ಪರಿವರ್ತನೆಗೊಂಡಿದೆ. ಆದರೆ ಪ್ರವೀಣ್‌ರವರು ಭತ್ತದ ಗದ್ದೆಯನ್ನು ಉಳಿಸಿಕೊಂಡಿದ್ದಾರೆ. ಒಂದು ಬೆಳೆ ತೆಗೆಯುತ್ತಿದ್ದು ಈ ಬಾರಿ ಯಾಂತ್ರಿಕರಣದ ಮೂಲಕ ಉಳುಮೆ ಮತ್ತು ನಾಟಿ ಮಾಡಿದ್ದಾರೆ. ಗೋಮೂತ್ರ, ಸಗಣಿ ಗೊಬ್ಬರ ಬಿಟ್ಟರೆ ಬೇರೇನು ಬಳಸುವುದಿಲ್ಲ. ಸುಮಾರು ಎಂಟು ಕ್ವಿಂಟಾಲ್ ಭತ್ತ ಬೆಳೆಯುತ್ತಾರೆ. ಆನಂತರ ಆ ಜಾಗದಲ್ಲಿ ತರಕಾರಿ ಬೆಳೆಯುತ್ತಾರೆ. ಸಾವಯುವ ಅಕ್ಕಿಗೆ ಅವರದೇ ವಲಯದಲ್ಲಿ ಬೇಡಿಕೆ ಇದೆ. ಭತ್ತದ ಕೃಷಿಯ ನಂತರ ಗದ್ದೆಗಳಲ್ಲಿ ದನಗಳನ್ನು ಕಟ್ಟಿ ಮೇಯಲು ಬಿಡುತ್ತಾರೆ. ಉಳಿದಂತೆ ಹೈಬ್ರಿಡ್ ಹುಲ್ಲು ಬೆಳೆಸುತ್ತಾರೆ. ಗುಡ್ಡೆಗೆ ಬಿಡುವಷ್ಟು ಜಾಗವಾಗಲಿ, ಗೋಮಾಳವಾಗಲಿ ಈಗಿಲ್ಲ. ಹಿಂದೆ ಪಾಳು ಬಿದ್ದ ಜಾಗಗಳಲ್ಲಿ ದನಗಳನ್ನು ಕಟ್ಟಿ ಮೇಯಿಸುತ್ತಿದ್ದರು. ಈಗ ತನ್ನ ಜಾಗ ಬಿಟ್ಟರೆ ಬೇರೆಲ್ಲೂ ಮೇಯಿಸುವುದಿಲ್ಲ. ಹೊರಗೆ ಬಿಡುವುದಿಲ್ಲ. ಮುಖ್ಯ ಕಾರಣ ತನ್ನಲ್ಲಿರುವ ಗಿಡ್ಡ ತಳಿಗಳು ಮಿಶ್ರವಾಗಬಹುದೆಂಬ ಎಚ್ಚರಿಕೆ ವಹಿಸಿದ್ದಾರೆ. ಈ ತಳಿಗಳನ್ನು ಸಂರಕ್ಷಣೆ ಅವರ ಉದ್ದೇಶವಾಗಿದೆ.

ಮಲೆನಾಡ ಗಿಡ್ಡ ತಳಿಗಳು ಮೂಲೆಗುಂಪಾಗುತ್ತಿರುವ ಕಾಲಘಟ್ಟದಲ್ಲಿ ಅವುಗಳನ್ನು ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ. ಆಸಕ್ತಿಯಿದ್ದರೂ ದನಗಳನ್ನು ಸಾಕಲು ಅನಾನುಕೂಲತೆಯಿರುವವರು ಪ್ರತ್ಯಕ್ಷವಲ್ಲದಿದ್ದರೂ ಪರೋಕ್ಷವಾಗಿ ದೇಶೀ ಗೋವುಗಳನ್ನು ಸಾಕುತ್ತಿರುವವರಿಗೆ ಪ್ರೋತ್ಸಾಕವಾಗಿ ಮೇವುಗಳನ್ನು, ತಮ್ಮಿಂದಾಗುವ ನೆರವು ನೀಡಬಹುದು. ಶುಭ ಸಮಾರಂಭಗಳು, ಹಬ್ಬಹರಿದಿನಗಳು, ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಗೋಗ್ರಾಸ ನೀಡುವವರಿದ್ದಾರೆ. ದನಗಳ ಪಾಲನೆ ಪೋಷಣೆಗೆ ಗೋಗ್ರಾಸವೂ ಸಹಕಾರಿಯಾಗುತ್ತದೆ. ಗೋಪಾಲಕರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ತಳಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂಬುದು ಪ್ರವೀಣರ ಮನದ ಮಾತು. ಗಿಡ್ಡ ತಳಿಯ ಸಾಕಾಣೆ ಮಾಡುವುದಕ್ಕೆ ಕೃಷಿ ಕ್ಷೇತ್ರದಲ್ಲಿರುವ ಯುವಜನರು ಮುಂದೆ ಬರಬೇಕು. ಆದರೆ ತಾಳ್ಮೆ, ಶ್ರಮ, ಆಸಕ್ತಿ ಇದ್ದರೆ ಯಶಸ್ಸು ಸಾಧ್ಯವಿದೆ ಎನ್ನುತ್ತಾರೆ ಪ್ರವೀಣ್.

ಪ್ರವೀಣ್ ಬೆಳ್ಳಾರೆ ಅವರ ಗಿಡ್ಡ ತಳಿ ಸಂರಕ್ಷಣೆ ಹಾಗೂ ಸಂವರ್ಧನೆ ಕೆಲಸವನ್ನು ಗಮನಿಸಿ ಗೋಪಾಲ್ಸ್ ಸಂಸ್ಥೆಯವರು ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹೈನುಗಾರಿಕೆ ಲಾಭದಾಯಕವಲ್ಲ ಎಂಬ ಭಾವನೆ ಮನೆಮಾಡಿರುವಾಗ ಹಾಲು ಕಡಿಮೆ ಕೊಡುವ ಗಿಡ್ಡ ತಳಿಗಳನ್ನೇ ಆಯ್ದುಕೊಂಡು ಅದರಿಂದಲೇ ಬದುಕು ಕಟ್ಟಿಕೊಂಡು ಹೈನುಗಾರಿಕೆ ಮಾಡುವ ಆಸಕ್ತರಿಗೆ ಮಾದರಿಯಾಗಿದ್ದಾರೆ.

ಮಾಹಿತಿಗೆ ಮೊ.9480156360

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group